Tuesday, December 15, 2009

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.

ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಈ ರೀತಿಯ ಹಲವಾರು ವಿಷಯಗಳು ಬೆಳಕು ಕಂಡಿವೆ.

೧೬ನೇ ಶತಮಾನದ ಪೂರ್ವಾರ್ಧದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನ ಒಂದು ಕ್ಷಣದ ದುಡುಕಿನಿಂದ ಉಂಟಾದ ಪ್ರಮಾದ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ನೆಪೋಲಿಯನ್ ಮತ್ತು ಅಂದಿನ ಪಾಂಡಿಚೆರಿಯ ಗೌರ್ನರ್ ಆಗಿದ್ದ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಅವರಿಂದ ತೊಡೆದು ಹೋಗುತ್ತದೆ! ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲೂ ಆಗುತ್ತದೆ.

ಇದರ ಪೂರ್ಣ ಕಥೆ ಹೀಗಿದೆ.

ಕೃಷ್ಣದೇವರಾಯ ತನ್ನ ಅಮಾತ್ಯನಾದ ಅಪ್ಪಾಜಿ ಎಂಬುವವನೊಂದಿಗೆ ದೇಶ ಸಾಂಚಾರ ಕೈಗೊಳ್ಳುತ್ತಾನೆ. ರಾಯವೇಲೂರಿನಿಂದ ಹೊರಟು ಪಾಮಡಿಚೆರಿಯಲ್ಲಿರುವ ವಿಲ್ಲಿಯನಲ್ಲೂರು (ವಿಲ್ವನಲ್ಲೂರು) ಎಂಬಲ್ಲಿ ತನ್ನ ಪರಿವಾರದೊಂದಿಗೆ ಬಿಡಾರ ಹೂಡುತ್ತಾನೆ. ಒಳಗೆರೆ (ಉಳವರೈಕೆರೈ) ಎಂಬಲ್ಲಿ ಉಯ್ಯಗುಂಡ ವಿಶ್ವರಾಯ ಮೊದಲಿಯಾರ್ ಎಂಬುವವರ ಅಂಗಾಲಿನಲ್ಲಿ ಕೂದಲು ಬೆಳೆದಿದೆ ಎಂಬ ವಿಚಿತ್ರ ವಿಷಯ ಆತನ ಕಿವಿಗೆ ಬೀಳುತ್ತದೆ.


ಕೃಷ್ಣದೇವರಾಯ ಮಂತ್ರಿ ಅಪ್ಪಾಜಿಯೊಂದಿಗೆ ಹೋಗಿ ಅದನ್ನು ನೋಡಿ ಹೀಂದಿರುಗಿ ಬರುವಾಗ ಒಂದು ದೇವಸ್ಥಾನದಂತೆ ಶೋಭಿಸುತ್ತಿದ್ದ ಭವ್ಯವಾದ ಸೌಧವನ್ನು ನೋಡುತ್ತಾರೆ. ದೀಪ ಧೂಪ ಗಂಧದ ಪರಿಮಳವನ್ನು ಕಂಡು ಅದನ್ನು ದೇವಸ್ಥಾನವೆಂದೇ ಭ್ರಮಿಸಿ ಇಬ್ಬರೂ ಅದಕ್ಕೆ ಕೈಮುಗಿದು ನಮಸ್ಕರಿಸುತ್ತಾರೆ. ಆಗ ಜೊತೆಯಲ್ಲಿದ್ದವರು ‘ಅದು ದೇವಸ್ಥಾನವಲ್ಲ, ಆಯಿ ಎಂಬ ಗಣಿಕೆಯೊಬ್ಬಳ ಮನೆ’ ಎಂದು ತಿಳಿಸುತ್ತಾರೆ. ಇದರಿಂದ ಕೃಷ್ಣದೇವರಾಯನಿಗೆ ಅಸಾಧ್ಯವಾದ ಕೋಪ ಬಂದು ‘ಗಣಿಕೆಯೊಬ್ಬಳ ಮನೆ ಈ ರೀತಿ ಇರಬಹುದೆ?’ ಎಂದು ದುಡುಕಿ ‘ಅದನ್ನು ಕೆಡವಿ ಹಾಕಿ. ಅಲ್ಲಿ ಒಂದು ಕೊಳವನ್ನು, ಬಾವಿಯನ್ನು ನಿರ್ಮಿಸಿ’ ಎಂದು ಆಜ್ಞಾಪಿಸುತ್ತಾನೆ.

[ಅರಸರು ಪ್ರಜೆಗಳೊಂದಿಗೆ ನಡೆದುಕೊಳ್ಳುತ್ತಿದ್ದ ಕ್ರೂರ-ದರ್ಪದ ಪ್ರತೀಕದಂತೆ ಹೊರಟಿತು ಈ ಆಜ್ಞೆ! ಮಾಡದ ಅಪರಾಧಕ್ಕೆ ಆಯಿ ಗುರಿಯಾದಳು. - ಡಾ. ತಮಿಳು ಸೆಲ್ವಿ]


ಆಯಿಗೆ ದಿಕ್ಕು ತೋಚದಂತೆ ಆಯಿತು. ಸ್ವಭಾವತಃ ಒಳ್ಳೆಯವಳಾದ ಆಕೆ ನೇರವಾಗಿ ರಾಜನ ಬಳಿ ಹೋಗಿ ‘ತನ್ನ ಸಂಪತ್ತಿನಿಂದಲೇ ಕೊಳವನ್ನು, ಬಾವಿಯನ್ನು ತೋಡಿಸುತ್ತೇನೆ’ ಎಂದು ಬೇಡಿಕೊಂಡು ರಾಜನನ್ನು ಒಪ್ಪಿಸುತ್ತಾಳೆ. ನಂತರ ತನ್ನ ಮಾತಿನಂತೆ ಮುತ್ತುರೈಯರ್ ಪಾಳ್ಯ ಎಂಬಲ್ಲಿ ದೊಡ್ಡದಾದ ಕೊಳವನ್ನು, ಒಂದು ಬಾವಿಯನ್ನು ನಿರ್ಮಾಣ ಮಾಡಿಸುತ್ತಾಳೆ. ಆ ಕೊಳ ‘ಆಯಿಕೊಳ’ ಎಂದೇ ಪ್ರಖ್ಯಾತವಾಗುತ್ತದೆ.

ಮುಂದೊಂದು ದಿನ ಆಯಿ ಸತ್ತು ಹೋಗುತ್ತಾಳೆ. ಆದರೆ ಆಕೆ ನಿರ್ಮಾಣ ಮಾಡಿಸಿದ ಕೊಳ ಮತ್ತು ಬಾವಿ ಉಳಿದುಕೊಳ್ಳುತ್ತವೆ.

ಕಾಲಾನಂತರದಲ್ಲಿ ಪಾಂಡಿಚೆರಿ ಫ್ರೆಂಚರ ಆಡಳಿತಕ್ಕೆ ಸೇರಿಹೋಗುತ್ತದೆ. ಆಗ ನಗರ ನಿರ್ಮಾಣಕ್ಕೆ ಮುಂದಾರ ಪ್ರೆಂಚರಿಗೆ ಆಯಿಕೊಳ ಉಪಯೋಗಕ್ಕೆ ಬರುತ್ತದೆ. ಆಯಿಕೊಳದ ಕಥೆಯನ್ನು ಕೇಳಿದ ಗೌರ್ನರ್ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಮತ್ತು ಮೂರನೆಯ ನೆಪೋಲಿಯನ್ ಅವಳ ಹೆಸರಿನಲ್ಲೊಂದು ಸ್ಮಾರಕ ನಿರ್ಮಿಸಲು ತೀರ್ಮಾನಿಸಿ ಅದರ ನಿರ್ವಹಣೆಯನ್ನು ಲಮಾರಸ್ ಎಂಬುವವನಿಗೆ ವಹಿಸುತ್ತಾರೆ. ಆತ ಪಾಂಡಿಚೆರಿಯ ಕೋಟೆಯ ಭಾಗದಲ್ಲಿ ಅಂದರೆ ಕಡಲ ತಡಿಯ ಪೂರ್ವಭಾಗದಲ್ಲಿ (ಆಯಿಯ ಮನೆಯಿದ್ದ ಜಾಗ) ಅವಳ ನೆನಪಿನಾರ್ಥ ಜಲಮಾಳಿಗೆಯೊಂದನ್ನು ನಿರ್ಮಾಣ ಮಾಡುತ್ತಾನೆ. ಆಯಿಕೊಳದಿಂದ ನೀರನ್ನು ಕಾಲುವೆಯಲ್ಲಿ ಹರಿಸಿ, ಏತದ ಮೂಲಕ ಜಲಮಾಳಿಗೆಗೆ ಹರಿಸಲಾಗುತ್ತಿತ್ತು. ಪಾಂಡಿಚೆರಿ ನಗರಕ್ಕೆ ಪ್ರಮುಖ ನೀರು ಸರಬರಾಜು ವ್ಯವಸ್ಥೆ ಇದಾಗಿತ್ತು. ಆಯಿಯ (ಸ್ವತಃ ರಾಜನೇ ಕೈಯೆತ್ತಿ ಮುಗಿಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಕಲಾತ್ಮಕವಾಗಿ ತನ್ನ ಮನೆಯನ್ನು ಇಟ್ಟುಕೊಂಡಿದ್ದ) ಕಲಾ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚಿ ಜಲಮಾಳಿಗೆಯ ಬಳಿ ಗ್ರೀಕ್-ರೋಮನ್ ಶೈಲಿಯ ಒಂದು ಮಂಟಪವನ್ನೂ ನಿರ್ಮಿಸಿ, ಆಯಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಭಂಗಿಯಲ್ಲಿರುವ ಒಂದು ಶಿಲ್ಪವನ್ನೂ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲದೆ ತಮಿಳು ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಶಾಸನವನ್ನೂ ಕೆತ್ತಿಸಿ ಆಯಿಯ ವ್ಯಕ್ತಿತ್ವವನ್ನು ಉಲ್ಲೇಖಿಸಲಾಗುತ್ತದೆ. ಆ ಮಂಟಪ ಈಗ ‘ಆಯಿಮಂಟಪ’ಎಂದೇ ಖ್ಯಾತವಾಗಿದೆ. ಈಗ ಅಲ್ಲಿ ದೊಡ್ಡ ಉದ್ಯಾನವನ (ಭಾರತಿ ಉದ್ಯಾನವನ) ನಿರ್ಮಾಣವಾಗಿದೆ. ಆಯಿಮಂಟಪ ಈಗಲೂ ಭಾರತಿ ಉದ್ಯಾನವನದ ನಡುವೆ ವಿರಾಜಮಾನವಾಗಿದೆ.


ಕೊಸರು: ತನ್ನ ಮನೆಯನ್ನು ದೇವಸ್ಥಾನದಂತೆ ಶೋಭಾಯಮಾನವಾಗಿ ಇಟ್ಟುಕೊಂಡಿದ್ದ ಆಯಿಯ ಸೌಂದರ್ಯಪ್ರಜ್ಞೆಯನ್ನು ಕೃಷ್ಣದೇವರಾಯ ಗುರುತಿಸಬಹುದಾಗಿತ್ತು. ಆ ಹೆಣ್ಣಿಗೆ ಗೌರವ ತೋರಬಹುದಾಗಿತ್ತು. ಆದರೆ ಆತನ ಅಧಿಕಾರದ ಅಹಂ ಇದಕ್ಕೆ ಅವಕಾಶ ಕೊಡಲಿಲ್ಲ. ಹಿಂದೂ ಧರ್ಮ ಸಂರಕ್ಷಕರೆಂದು ಕರೆದುಕೊಂಡು, ಕಂಡ ಕಂಡ ದೇವಾಲಯಗಳಿಗೆಲ್ಲಾ ಕೊಳಗಗಟ್ಟಲೆ ಮುತ್ತು ರತ್ನ ಬಂಗಾರವನ್ನು ಅಳೆದುಕೊಟ್ಟ ವಿಜಯನಗರದ ಅರಸು ಕೃಷ್ಣದೇವರಾಯ ಒಂದು ಹೆಣ್ಣಿಗೆ ಗೌರವ ತೋರುವ ವಿಚಾರದಲ್ಲಿ ಕುರುಡಾಗಿಬಿಟ್ಟನಲ್ಲ! ಧರ್ಮವೆಂಬುದು ದೇವಾಲಯ ವ್ಯವಸ್ಥೆಯಲ್ಲಿ ಮಾತ್ರ ಇದೆಯೆ? ಮನುಷ್ಯ ಮನುಷ್ಯನನ್ನು, ರಾಜ ಪ್ರಜೆಯನ್ನು, ಗಂಡು ಹೆಣ್ಣನ್ನು ಗೌರವಿಸುವುದರಲ್ಲಿ ಇಲ್ಲವೆ? ಅಥವಾ ಇದನ್ನು ಕಾಲಧರ್ಮ ಎನ್ನಬೇಕೆ?

ಸ್ವತಃ ಸೈನ್ಯವನ್ನು ಮುನ್ನೆಡೆಸಿದಂತಹ ರಾಜ ಕೃಷ್ಣದೇವರಾಯನ ಬಗೆಗಿನ ಅಭಿಮಾನದ ಬಲೂನಿಗೆ ಸೂಜಿ ಚುಚ್ಚಿದಂತಹ ಅನುಭವ!
(ಚಿತ್ರಕೃಪೆ : ಅಂತರಜಾಲ)

8 comments:

Dr. B.R. Satynarayana said...

ಒಂದು ಈ ಮೇಲ್ ಪ್ರತಿಕ್ರಿಯೆ:

ಪ್ರೀತಿಯ ಡಾ. ಸತ್ಯ
ದಾಖಲಿತ ಚರಿತ್ರೆಯನ್ನು ಬದಲಿಸಲು ಸಾಧ್ಯವಿಲ್ಲ.

ಪಾಶ್ಚಿಮಾತ್ಯರು ಚರಿತ್ರೆಯನ್ನು ದಾಖಲಿಸುವಲ್ಲಿ " ಭಾರತೀಯರಿಗಿಂತ ನಿಖರವಾಗಿದ್ದರು " ಅಂತ ನನ್ನ ಭಾವನೆ.
ಭಾರತೀಯ ಐತಿಹಾಸಿಕ ದಫ್ತರುಗಳ ದಾಖಲಾತಿಗಳು ಹಿಂದೂ, ಯವನ,ಮುಸ್ಲಿಂ, ಮೊಘಲ್ ರಾಜ್ಯಗಳು ನಾಶವಗುವ ಸಮಯದಲ್ಲಿ ನಾಶವಾಗಿರಲೂ ಬಹುದು.

ಕೆಲವು ಲೇಖಕರು ಕಾದಂಬರಿ ಬರೆದಂತೆ ಚಾರಿತ್ರಿಕ ಘಟನೆಗಳ ದಾಖಲೆಗಳನ್ನು ಬೃಹತ್ ಕಾದಂಬರಿಗಳನ್ನು ಬರೆದಂತೆ ಬರೆದು ಕೆಲವು ಐತಿಹಾಸಿಕ ವ್ಯಕ್ತಿಗಳನ್ನು ವೈಭವೀಕರಿಸಿ ಚಿತ್ರಿಸಿದ್ದಾರೆ.
ಕೆಲವರನ್ನು ಕರಾಳ ವ್ಯಕ್ತಿಗಳಾಗಿ ಕೂಡಾ ಚಿತ್ರಿಸಿದ್ದಾರೆ.

ನಾ ಓದಿ ಕಂಡಂತೆ, ಪೌರಾಣಿಕ ಕಾಲದಿಂದಲೂ " ಏಕ ಚಕ್ರಾಧಿಪರ ಆಡಳಿತ ವ್ಯವಸ್ಥೆಯಲ್ಲಿ ನಿರಂಕುಶತೆ ಮತ್ತು ಮೌಡ್ಯಗಳು ತುಂಬಿದಂತೆ " ಭಾಸವಾಗುತ್ತದೆ.

ಸ್ವಾತಂತ್ರ್ಯ ಆಡಳಿತ ವ್ಯವಸ್ಥೆಯಲ್ಲಿ ಇಂಥಹಾ ನಿರಂಕುಶ ಆಡಳಿತಕ್ಕೆ ಅವಕಾಶ ಕಡಿಮೆ. ಆದರೂ, ಸದ್ರಿ ಅಭಿಪ್ರಾಯಕ್ಕೆ ಅಪವಾದಗಳನ್ನು ಇಪ್ಪತ್ತನೇ ಶತಮಾನದಲ್ಲಿ ಕಣ್ಣಾರೆ ಕಂಡಿದ್ದೇವೆ.

ಇಲ್ಲಿಗೆ ಮುಗಿಸುವೆ.

ಪ್ರೀತಿಯಿಂದ

ಪೆಜತ್ತಾಯ

ಸಾಗರದಾಚೆಯ ಇಂಚರ said...

ತುಂಬಾ ರಸವತ್ತಾಗಿದೆ,
ಇಂಥಹ ಎಷ್ಟೋ ಘಟನೆಗಳು ಇತಿಹಾಸದಲ್ಲಿ ಮುಚ್ಚಿ ಹೊಗಿವೆಯೇನೋ
ನನಗಂತೂ ಓದಿ ತುಂಬಾ ಸಂತಸವಾಯಿತು
ಉಪಯುಕ್ತ ಮಾಹಿತಿ

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಕೃಷ್ಣದೇವರಾಯ ದೊಡ್ಡ ಮಹರಾಜನಾದರೂ..
ಮನುಷ್ಯನು ಅಂದುಕೊಂಡಲ್ಲಿ ಎಲ್ಲವೂ ಸರಿಯಾಗಿಬಿಡುತ್ತದೆ...

ಶ್ರಿ. ಪಜತ್ತಾಯ ಹೆಳುವಂತೆ ಐತಿಹಾಸಿಕ ಘಟನೆಗಳ ದಾಖಲೆ ಸರಿಯಾಗಿದೆಯೇ..?
ರಾಜರುಗಳ ಹೊಗಳು ಭಟ್ಟರು ಬರೆದ ಕಾವ್ಯಗಳಾಗಿದ್ದರೆ ಹೇಗೆ ಮತ್ತು ಎಷ್ಟರ ಮಟ್ಟಿಗೆ ನಂಬಬಹುದು?

ಒಂದು ಐತಿಹಾಸಿಕ ದಾಖಲೆಯನ್ನು ಚಂದವಾಗಿ ವಿವರಿಸಿ..
ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿಸಿದ ನಿಮಗೆ ಧನ್ಯವಾದಗಳು...

Dr. B.R. Satynarayana said...

ಒಂದು ಈ ಮೇಲ್ ಪ್ರತಿಕ್ರಿಯೆ:

ಬಹಳದಿನಗಳ ನಂತರ ನನಗೆ ಬೇಕಾಗಿದ್ದ ಒಂದು ವಿಷಯದ
ಬಗೆಗೆ ಬರೆದಿರುವಿರಿ .ಧನ್ಯವಾದಗಳು.ಆದರೆ ನಮ್ಮ
ಲ್ಲಿ ದಾಖಲಿಸುವ ಪ್ರವೃತ್ತಿ ಇರಲಿಲ್ಲ ಎನ್ನುವುದನ್ನು ಒಪ್ಪಲು , ಅದೂ ಬ್ರಿಟಿಷರೆ ಅಥವಾ ಅಭಾರತೀಯರೇ ನಿಖರವಾಗಿ ರೂಪಿಸಿದ್ದರು ಎನ್ನುವುದನ್ನು ಇತ್ತೀಚಿನ ಮ್ಯಾ ಕ್ಷ್ಮುಲರಾದಿಗಳು ಮಾಡಿರುವ ಅನೇಕ ಅಪಚಾರಗಳಿಂದ ಮುಕ್ತ ವಾಗಿಲ್ಲ ಎನ್ನುವುದನ್ನು ಗಮನಿಸಬೇಕು. ಒಬ್ಬರನ್ನು ಹೊಗಳಿ/ ತೆಗಳಿ ಬರೆಯುವುದಕ್ಕೆ ಮೊದಲು ಅವರು ಮಾಡಿದ ಉಪಕಾರ ಗಳನ್ನು ಕಾಲವೇ ನಿರ್ಧರಿಸಿದೆ ಎನ್ನುವುದು, ಸಾಮಾನ್ಯರೇ ಇಂದಿಗೂ ಅಸಮಾನ್ಯರುಎನ್ನುವುದನ್ನು ಅರಿತು ನಿಮ್ಮ ಸಮಾರೋಪದಲ್ಲಿ ಹೇಳಿದ್ದರೆ ಸಾಕಿತ್ತು.

ಡಾ.ಹರಿಹರ ಶ್ರೀನಿವಾಸ ರಾವ್

ಬಿಸಿಲ ಹನಿ said...

ಇತಿಹಾಸದಲ್ಲಿ ಇಂಥ ಬಚ್ಚಿಟ್ಟ ಸತ್ಯಗಳು ಅದೆಷ್ಟೊ ಇವೆ. ಅವನ್ನು ಹುಡುಕಿ ತೆಗೆಯಬೇಕಷ್ಟೆ. ನಾನು ಮೊನ್ನೆ ಕೆ. ಗಣೇಶಯ್ಯನವರ “ಕನಕ-ಮುಸುಕು” ಕಾದಂಬರಿಯನ್ನು ಓದುತ್ತಿರಬೇಕಾದರೆ ಮುಸುಕಿನ ಜೋಳ ಯುರೋಪಿಯನ್ನರ ಆಗಮನದೊಂದಿಗೆ ಭಾರತಕ್ಕೆ ಬಂದದ್ದಲ್ಲ ಅದು ಚಂದ್ರಗುಪ್ತ ಮೌರ್ಯನ ಕಾಲದಿಂದಲೇ ಭಾರತದಲ್ಲಿತ್ತು ಎನ್ನುವ ಸತ್ಯ ಗೊತ್ತಾಯಿತು. ಇಂಥ ಅದೆಷ್ಟೋ ಸತ್ಯಗಳು ಅಡಗಿವೆ. ಪೇಜಾತ್ತಾಯವರು ಹೇಳಿದಂತೆ ಭಾರತದ ಇತಿಹಾಸವನ್ನು ಭಾರತಿಯರಿಗಿಂತ ವಿದೇಶಿಯರು ತುಂಬಾ ನಿಖರವಾಗಿ ಮತ್ತು ಯಾವುದೇ ಹೊಗಳಿಕೆ ತೆಗಳಿಕೆಯಿಲ್ಲದೆ ಬರೆದಿದ್ದಾರೆ. ಹಾಗಂತ ನಾನು ಇತಿಹಾಸವನ್ನು ಡಿಗ್ರಿಯಲ್ಲಿ ಓದುತ್ತಿರಬೇಕಾದರೆ ತಿಳಿದುಕೊಂಡಿದ್ದೇನೆ. ಏನೇ ಆಗಲಿ ನಿಮ್ಮ ಲೇಖನ ಓದಿದ ಮೇಲೆ ಇನ್ನೊಂದು ಸತ್ಯ ತಿಳಿದುಕೊಂಡಂತಾಯಿತು.

Dr. B.R. Satynarayana said...

ಉದಯ್ ಪ್ರತಿಕ್ರಿಯೆಗೆ ಧನ್ಯವಾದಗಳು
ಶ್ರೀ. ಕೆ.ಎನ್.ಗಣೇಶಯ್ಯ ಅವರ ಕನಕ-ಮುಸುಕು ಮತ್ತು ಇತರೆ ಕಾದಂಬರಿಗಳು ಧಾರಾವಾಹಿಯಾಗಿ ಬರುವಾಗಲೇ ನಾನು ಓದಿದ್ದೇನೆ. ಮುಸುಕಿನ ಜೋಳದ ಬಗ್ಗೆ ಅವರು ಬರೆದಿರುವುದು ಐತಿಹಾಸಿಕ ಸತ್ಯನಿಷ್ಟವಾಗಿಲ್ಲ ಎಂಬುದು ನನ್ನ ಮತ್ತು ದೇವಾಲಯ ವಾಸ್ತಶಿಲ್ಪವನ್ನು ಅಧ್ಯಯನ ಮಾಡಿರುವ ಹಲವಾರು ವಿದ್ವಾಂಸರ ಅಭಿಪ್ರಾಯವಾಗಿದೆ. ಕೆಲವು ಶಿಲ್ಪಗಳ ಕೈಯಲ್ಲಿ ಇರುವ ತ್ರಿಕೋನಾಕೃತಿ (ಅವರ ಪ್ರಕಾರ ಅದು ಮುಸುಕಿನ ಜೋಳ) ಏನು ಎಂಬುದರ ಬಗ್ಗೆಯೇ ಸಾಕಷ್ಟು ಚರ್ಚೆಗಳು ನಡೆದಿವೆ. ಅದನ್ನು ಫಲ ಎಂದು ಕೆಲವರು, ಮಾದಲ ಫಲ ಎಂದು ಕೆಲವರು ಕರೆದಿದ್ದಾರೆ ಆದರೆ ನನಗೆ ಗೊತ್ತಿರುವಂತೆ ಯಾವುದೇ ಇತಿಹಾಸತಜ್ಞರೂ ಕೂಡಾ ಅದನ್ನು ಮುಸುಕಿನ ಜೋಳದ ತೆನೆ ಎಂದು ಕರೆದಿಲ್ಲ. ಸಸ್ಯಶಾಸ್ತ್ರಜ್ಞರ ಪ್ರಕಾರ ಮುಸುಕಿನ ಜೋಳ ಯುರೋಪಿಯನ್ನರ ಆಗಮನದಿಂದ ಬಂದದ್ದು ಎಂಬುದು ನಿಜವಿರಬಹುದು. ನಾನು ಇದನ್ನು ಬರೆಯುವಾಗ ನಮ್ಮ ಕಾಲೇಜಿನ ಬಾಟನಿ ಪ್ರೊಫೆಸರರನ್ನು ಕೇಳಿದೆ. ಅವರೂ ಅದನ್ನೇ ಹೇಳಿದರು.
ಚಂದ್ರಗುಪ್ತ ಮೌರ್ಯನ ಕಾಲ ಕ್ರಿ.ಪೂ.350ಕ್ಕೂ ಹಿಂದೆ. ಆಗ ದೇವಾಲಯಗಳ ನಿರ್ಮಿಸುವ ಸಂಸ್ಕೃತಿಯೇ ಭಾರತದಲ್ಲಿ ಇರಲಿಲ್ಲ! ಬೌದ್ಧಧರ್ಮ ಮತ್ತು ಜೈನಧರ್ಮ ಪ್ರವರ್ಧಮಾನಕ್ಕೆ ಬಂದ ಮೇಲೆ ದೇವಾಲಯಗಳ ನಿರ್ಮಾಣ ಸಂಸ್ಕೃತಿ ಪ್ರಾರಂಭವಾಯಿತು ಎಂಬುದನ್ನು ಬಹುಶಃ ಒಪ್ಪಬಹುದು. ಶ್ರೀ ಬೈರಪ್ಪನವರ ಸಾರ್ಥ ಕಾದಂಬರಿಯಲ್ಲಿ ಇಂತಹ ಚಿತ್ರಣವಿದೆ.
ದೇವಾಲಯಗಳ ನಿರ್ಮಾಣವೇ ಇರದಿದ್ದ ಮೇಲೆ ಶಿಲ್ಪಗಳ ನಿರ್ಮಾಣವೂ ಇರಲಿಲ್ಲ. ಆದ್ದರಿಂದ ಶಿಲ್ಪಗಳ ಕೈಯಲ್ಲಿ ಆ ತ್ರಿಕೋನಾಕೃತಿ ಫಲ ಅಥವಾ ಮಾದಲ ಫಲ ಅಥವಾ ಗಣೇಶಯ್ಯನವರ ಪ್ರಕಾರ ಮುಸುಕಿನ ಜೋಳವನ್ನು ಬಿಂಬಿಸುವ ಸಾಧ್ಯತೆಯೇ ಇರುವುದಿಲ್ಲ.
ಗಣೇಶಯ್ಯನವರು ಇತಿಹಾಸದ ಘಟನೆಗಳನ್ನು, ಕುರುಹುಗಳನ್ನು ಹೆಕ್ಕಿ, ತಮ್ಮ ರಮ್ಯ ಅದ್ಭುತ ಕಲ್ಪನೆಯನ್ನು ಬಹಳ ಸೊಗಸಾಗಿ ಆರೋಪಿಸಿ ಸಾಹಿತ್ಯ ರಚನೆ ಮಾಡುತ್ತಾರೆ. ನಾನೂ ಮೊದಲು ಇವನ್ನೆಲ್ಳಾ ನಮ್ಮ ಗುರುಗಳ ಹತ್ತಿರ ಚರ್ಚೆ ಮಾಡಿ ಅವರ ಸಾಹಿತ್ಯವನ್ನು ಸಾಹಿತ್ಯ ಎಂದು ಮಾತ್ರ ತಿಳಿಯುವ ತೀರ್ಮಾನಕ್ಕೆ ಆಮೇಲೆ ಬಂದೆ.. ಆದ್ದರಿಂದ ಗಣೇಶಯ್ಯುನವರ ಕಾದಂಬರಿಗಳಲ್ಲಿ ಆರೋಪಿತವಾಗಿರುವ ಐತಿಹಾಸಿಕ ವಿಷಯಗಳನ್ನು ಐತಿಹಾಸಿಕ ಆಕರರಗಳನ್ನಾಗಿ ಸ್ವೀಕರಿಸುವಾಗ ಎಚ್ಚರವಿರಬೇಕಾಗುತ್ತದೆ ಎಂದು ಭಾವಿಸಿದ್ದೇನೆ.

Guru's world said...

ಇತಿಹಾಸ ಕೆದಕುತ್ತ ಹೋದಂತೆಲ್ಲ ಇಂತಹ ಹಲವರು ವಿಷಯಗಳು ಬೆಳಕಿಗೆ ಬರುತ್ತವೆ....ತುಂಬ ರೋಚಕವಾಗಿ ಇದೆ..ಎಲ್ಲರೂ ತಪ್ಪು ಮಾಡುತ್ತಾರೆ,, ಅದೇ ರೀತಿ ಶ್ರೀ ಕೃಷ್ಣದೇವರಾಯರು ಕೂಡ ತಪ್ಪು ಮಾಡಿದ್ದರೆ...ಕೆಲವೊಂದು ಸಂದರ್ಭ ಹಾಗೆ ಮಾಡುವಂತೆ ಪ್ರೇರೇಪಣೆ ನೀಡುತ್ತದೆ...
ಒಳ್ಳೆಯಾ ಇತಿಹಾಸ ಲೇಖನ....

AntharangadaMaathugalu said...

ಡಾ. ಸತ್ಯ ಸಾರ್....
ಇತಿಹಾಸದ ಇಂಥಹ ಎಷ್ಟೋ ವಿಷಯಗಳು ಎಲ್ಲರಿಗೂ ತಿಳಿದಿರುವುದಿಲ್ಲ. ಕೃಷ್ಣದೇವರಾಯರು ತಪ್ಪು ಮಾಡಿದರೋ ಇಲ್ಲವೋ ಎಂದು ನಾನು ಯೋಚಿಸಲಿಲ್ಲ. ಇತಿಹಾಸದ ಒಂದು ಘಟನೆ ತಿಳಿಯಿತು ಎಂದು ಮಾತ್ರ ಯೋಚಿಸಿದೆ...ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು.

ಶ್ಯಾಮಲ