Friday, December 04, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!


ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ. ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ. ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ ಕಾಣುತ್ತಿಲ್ಲ. ಮನಸಿಜನ ಮಾಯೆ ವಿಧಿವಿಳಸನದ ನರಂಬಡೆಯೆ, ಕೊಂದು ಕೂಗದೆ ನರರನ್ನು. ಓ ವಿಧಿಯೆ, ಈಕೆಯಷ್ಟು ಹಠಮಾರಿ. ಹೆಣ್ಣೊಬ್ಬಳು ನನ್ನ ವಿಷಯದಲ್ಲಿ ಇಷ್ಟೊಂದು ಕಠಿಣಳಾಗುತ್ತಿರುವುದು ಇದೇ ಮೊದಲು. ನಾನವಳನ್ನು ಪೌದನಪುರದರಮನೆಯಲ್ಲಿ ಕಂಡಾಗ ಅವಳು ಹೇಗಿದ್ದಳು. ಚಂದ್ರೋದಯವಾಗಿತ್ತು ನನ್ನ ಮನದಂಗಳಕ್ಕೆ. ಅವಳ ನಗೆ, ನಡೆ, ನುಡಿ ಸುರಸ್ತ್ರೀಯರನ್ನೂ ನಾಚಿಸಿದ್ದವು. ಕಣ್ಗಳನ್ನು ಹಿಡಿದು ನಿಲ್ಲಿಸುವ ಹೂವಿನ ಕಾಂತಿ, ಗಂಧ, ಸುಗಂಧ. ಓ ನಂದೆ, ನನ್ನ ಸುನಂದೆ ನೀನೆಷ್ಟು ಸುಂದರವಾಗಿದ್ದೆ, ಸರಸಳಾಗಿದ್ದೆ, ಸರಸಿಯಾಗಿದ್ದೆ.

ಆದರೆ ಯಾವ ಗಳಿಗೆಯಲ್ಲಿ ನನ್ನ ಮನದೊಳಗೆ ಆ ಸ್ಮರನೊಕ್ಕನೋ? ಅವಳನೆಗೆ ಕಾಮದರಗಿಣಿಯಾಗಿ ನನ್ನ ಹುಚ್ಚನನ್ನಾಗಿಸಿದ್ದಳಲ್ಲ. ಆ ಆನಂದ, ಆ ಭಾವ ಉತ್ಕರ್ಷಗಳನ್ನು ಏನೆಂದು ಹೇಳಲಿ? ಕಡುನಂಟನ ಸತಿಯ ರೂಪು ಸೋಲಿಸಿತೆನ್ನನು, ಬೇಟೆಗಾರನ ಬಿಲ್ಲಿನಿಂದ ಹೊರಟ ಬಾಣ ಹುಲ್ಲೆಯ ಕೊಂದಂತೆ.

ಯಾರಲ್ಲಿಯೂ ಹೇಳಬಾರದ, ಹೇಳಲಾಗದ ಸ್ಥಿತಿ. ಆದರೂ ಈ ಅಂತರಂಗದ ಮಿತ್ರರಿರುತ್ತಾರಲ್ಲ, ನರ್ಮಸಚಿವರು! ಇವರು ರಾಜರ ಪತನಕ್ಕೆ ಘೋರಿ ತೋಡುವ ಸ್ಮಶಾಣರುದ್ರರು! ಸುದರ್ಶನ, ಆಗ ನೀನು ಏನೆಂದು ಹೇಳಿದೆ? ‘ಸುನಂದೆಯೂ ನಿನ್ನನ್ನು ಕೂಡುವ ಭಾವದಿಂದ ನೋಡುತ್ತಾಳೆ’ ಎಂದು ನನ್ನ ಕಾಮಾಗ್ನಿಗೆ ತುಪ್ಪವನ್ನು ಸುರಿದುಬಿಟ್ಟೆಯಲ್ಲ. ನೀನು ಹೇಳಿದ್ದೇ ನಿಜವಾಗಿದ್ದರೆ ಇಲ್ಲಿ ಇವಳೇಕೆ ಇಷ್ಟು ಹಠ ಮಾಡುತ್ತಿದ್ದಾಳೆ? ನೀನು ಸುಳ್ಳಾಡಿದ್ದೆ. ಅವಳನ್ನು ಕದ್ದು ತಂದು ನಾನು ಮಿತ್ರದ್ರೋಹಿಯಾದೆ! ನನ್ನ ಪಥನಕ್ಕೆ ನಾಂದಿ ಹಾಡಿ ನೀನೂ ಮಿತ್ರ ದ್ರೋಹಿಯಾದೆ!

ಬೇಟೆಗೆಂದು ಹೋದಾಗ ಸಂದರ್ಭವೂ ನನಗೆ ಅನುಕೂಲವಾಗಿ ವಿಧಿಯೂ ತನ್ನ ಬೇಳೆ ಬೇಯಿಸಿಕೊಂಡಿತಲ್ಲ! ಇವಳಿಗಾಗಿ, ಈ ಸುನಂದೆಗಾಗಿ ಮಿತ್ರ ದ್ರೋಹ ಮಾಡಿದೆ. ಸ್ವಾಮಿನಿಷ್ಟ ಸಿಂಹಚೂಡನ ಕೊರಳ ಕೊಯ್ದೆ. ನನ್ನ ಕೀರ್ತಿಪತಾಕೆಯನ್ನು ಕೆಳಕ್ಕೆ ಕೆಡವಿದೆ. ನರಕದಲ್ಲಿ ಸ್ಥಳ ಕಾಯ್ದಿರಿಸಿಕೊಂಡೆ. ಯಾವ ಮಿತ್ರನನ್ನು ಆಲಂಗಿಸಿ ಮೈದಡವಬೇಕಾಗಿತ್ತೋ ಅದೇ ಕೈಯಲ್ಲಿ, ಅದೇ ಮಿತ್ರನ ಮೇಲೆ ಯುದ್ಧಮಾಡಬೇಕಾಗಿದೆ. ಇದರಿಂದಲೂ ನಿನಗೆ ತಿಳಿಯುತ್ತಿಲ್ಲವೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು!

ಸುನಂದೆ, ದೇವಿ ಸುನಂದೆ, ನಾನದೆಷ್ಟು ಪ್ರಲೋಭನೆಗಳನ್ನು ಒಡ್ಡಿದೆ? ನೀನು ಸೋಲಲಿಲ್ಲ. ನಿಜವಾಗಿಯೂ ನೀನು ವಸುವನ್ನು ಅಷ್ಟೊಂದು ಪ್ರೀತಿಸುತ್ತೀಯ? ನಾನು ಅವನಿಗಿಂತ ಯಾವುದರಲ್ಲಿ ಕಡಿಮೆ ಹೇಳು? ದೇವಿ, ನನಗೆ ನನ್ನ ಕೀರ್ತಿ ಕಪ್ಪಾದ ಭಯವಿಲ್ಲ. ವಸುವಿನ ಭಯವಿಲ್ಲ. ನನಗೆ ನಿನ್ನದೇ ಭಯ! ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಭಯವಾಗುತ್ತಿದೆ.

ವಸುವಿನ ಮೇಲಿನ ಪ್ರೀತಿಯೋ, ಇಲ್ಲ ಈ ವಯಸ್ಸಿಗೇ ವೈರಾಗ್ಯವೋ. ನಾನು ನಿನ್ನನ್ನು ಹೊತ್ತು ತರುವಾಗ ನೀನೇನು ಹೇಳಿದೆ?

‘ಹಾಳು ಮನೆಯಲ್ಲಿ ತುಪ್ಪದ ಮಡಕೆಯನ್ನು ಹುಡುಕುವ ನಾಯಿ’ ಎಂದೆ. ಬಯ್ದೆ. ಅಥವಾ ಸಂಪದ್ಭರಿತವಾಗಿದ್ದ ಮನೆ ಮನಸ್ಸು ನನ್ನ ಸ್ಪರ್ಶಮಾತ್ರದಿಂದಲೇ ಹಾಳಾಯಿತೆ? ಆದರೂ ನನ್ನನ್ನು ಕಂಡಾಗ, ತನ್ನತ್ತಲೇ ಬೀಳುತ್ತಿರುವ ತುಪ್ಪದ ಕಡೆಗೆ ನುಗ್ಗುವ ಬೆಂಕಿಯ ಜ್ವಾಲೆಗಳಂತೆ ಉರಿದು ಬೀಳುತ್ತೀಯ. ಅಂದರೆ, ಅಂದರೆ ನೀನಿನ್ನೂ ಖಾಲಿಯಾಗಿಲ್ಲ.

ನೀನು ನನ್ನನ್ನು ‘ದೋಷಕಾರ’ ಎಂದೆ. ಕೋಪವಿಲ್ಲ ದೇವಿ ನನಗೆ. ಕಮಲೆ ದಿನಕರನಿಗೆ ಮೊಗವೊಡ್ಡಬಹುದು. ಆದರೆ ದೋಷಕಾರನಿಗೆ ಆ ಅಗಾದ ಜಲರಾಶಿಯೇ ಮೊಗವೊಡ್ಡುವುದಿಲ್ಲವೆ? ‘ಮಾವಿನ ಮರದಲ್ಲಿ ರಮಿಸುತ್ತದೆಯಲ್ಲದೆ, ಕೋಗಿಲೆ ಬೇವಿನಮರದಲ್ಲಿ ರಮಿಸುವುದಿಲ್ಲ’ ಎಂದೆ. ಹೀಗೆ ಚುಚ್ಚು ಮಾತಿನಿಂದ ನೀನು ನನ್ನೇಕೆ ಕೊಲ್ಲುತ್ತಿದ್ದೀಯ? ನೀನು, ನಿನ್ನ ಚೆಲುವು ನನ್ನ ಹೃದಯವನ್ನಷ್ಟೇ ಅಪಹರಿಸಿದಿರಿ. ನಾನು ನಿನ್ನನ್ನೇ ಅಪಹರಿಸಿದೆ. ಇಬ್ಬರೂ ಅಪರಾದಿಗಳಲ್ಲವೇ?

* * *

ಬಾ, ಸೃಷ್ಟಿ ಬಾ. ವಿಷಯ ತಿಳಿಯಿತಷ್ಟೆ. ಬ್ರಾಹ್ಮೀ ಸಮೀಪಿಸುತ್ತಿದೆ. ಎರಡು ದಿನಗಳಿಂದ ನಡೆದ ಊಹಿಸಲಸಾದ್ಯವಾದ ಘಟನೆಗಳಿಂದ ಜರ್ಜಳಿತಳಾಗಿ, ದೇಹಾಯಾಸದಿಂದ ವಿಸ್ಮೃತಿ ಹೋಗಿದ್ದ ಸುನಂದೆಯು ಈಗ ಎಚ್ಚರವಾಗಿದ್ದಾಳೆ. ಅವಳ ಮನಸ್ಸಿನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿರಬೇಕು. ಅವಳ ಮನಸ್ಸಿನಲ್ಲಿರುವುದೇನೆಂದು ತಿಳಿದು ಬಾ. ಆಗ ನಿನಗೊಂದು ಪೂರ್ಣಚಿತ್ರಣ ದೊರೆಯಬಹುದು.

* * *

ಅಯ್ಯೋ ದೇವರೆ. ಏನೆಲ್ಲಾ ಆಗಿಹೋಯಿತು. ನನ್ನ ಸ್ವಾಮಿ ಎಷ್ಟೊಂದು ನೊಂದನೋ ಏನೋ. ವಿಷಯವೊಂದು ತಿಳಿಯುತ್ತಿಲ್ಲ. ನೆನ್ನೆ ಹೊರಗೆ ಯುದ್ಧದ ಕೋಲಾಹಲವಿತ್ತು. ನನ್ನ ದೇವರೇ ಬಂದಿರಬೇಕು. ಇಂದು ಖಂಡಿತ ನನ್ನ ಬಿಡುಗಡೆಯಾಗುತ್ತದೆಯಲ್ಲವೆ? ದೇವರೇ, ನಾನು ನನ್ನ ಸ್ವಾಮಿಯನ್ನು ಸೇರುವಂತಾದರೆ ಸಾಕು. ಮತ್ತೆ ನಾನೇನ್ನೂ ನಿನ್ನಲ್ಲಿ ಬೇಡುವುದಿಲ್ಲ.

ಈ ಪಾಪಿಯು ಎಂಥ ನೀಚ ಕೆಲಸಕ್ಕೆ ಕೈ ಹಚ್ಚಿದ್ದಾನೆ. ಅರಮನೆಗೆ ಬಂದ ಮೊದಲ ದಿನದಿಂದಲೇ ಈ ನಾಯಿಯ ನೋಟದಲ್ಲಿ ಅಸಹಜತೆಯನ್ನು ಕಂಡೆ. ಮನಸ್ಸು ಕೇಡನ್ನು ಶಂಕಿಸಿತ್ತಾದರೂ, ಸುರಮ್ಯಪತಿ ವಸುಷೇಣನ ಕಡುನಂಟನಾದ್ದರಿಂದ ಅಪಾಯವಿಲ್ಲವೆಂದುಕೊಂಡೆ. ಮೊನ್ನೆ ನನ್ನವರು ವನಭೋಜನದ ವ್ಯವಸ್ಥೆಗೆ, ಸ್ವತಃ ನನ್ನನ್ನೇ ಬರಲು ಹೇಳಿದಾಗ ಅನುಮಾನಿಸುತ್ತಲೇ ಹೋದೆ. ಆಗ ಆಗಿದ್ದೇನು? ಈ ಪಾಪಿ ತನ್ನ ನೀಚ ಕೈಗಳಿಂದ ನನ್ನ ತೋಳು ತೊಡೆಗಳನ್ನು ಹಿಡಿದು, ಎತ್ತಿ ರಥದಲ್ಲಿ ಹಾಕಿಕೊಂಡು ಹೊರಟನಲ್ಲ. ಆಗಲೇ ನನ್ನ ಸರ್ವಸ್ವವೆಲ್ಲಾ ಸೋರಿಹೋಯಿತು. ಆತನಿಗೆ ಬೇಡಿಕೊಂಡೆ, ಕಾಲಿಡಿದುಕೊಂಡು. ‘ನಾನು ಪರಸ್ತ್ರೀ. ನಿನ್ನ ಕಡುನಂಟನ ಸತಿ. ನಿನ್ನ ಸವಸಹೋದರಿಯೆಂದುಕೊಂಡು ಕನಿಕರಿಸು. ನಿನಗೆ ಇಹಪರದ ಭಯವಾದರೂ ಇಲ್ಲವೆ?’ ಹೀಗೆ ಇನ್ನು ಏನೇನೊ, ಪರಿಪರಿಯಾಗಿ ಬೇಡಿಕೊಂಡೆ. ಬಡಬಡಿಸಿದೆ. ಬಯ್ದೆ. ಉಗಿದೆ. ಆದರೂ ಪಾಪಿ ಕರಗಲಿಲ್ಲ.

ಜೊತೆಯಲ್ಲಿದ್ದ ಚಿತ್ರಲತೆ ಮತ್ತು ಮದನಪತಾಕೆಯರು ಏನೆಂದುಕೊಂಡರೊ. ಇಂಥ ವಿಷಯಗಳಲ್ಲಿ ಹೆಂಗಸಿನದೇ ತಪ್ಪಾಗಿ ಎಣಿಸಲ್ಪಡುತ್ತದೆ, ಈ ಕ್ರೂರ ಜಗತ್ತಿನಲಿ!

ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ, ಸುರಮ್ಯದ ಗಡಿಯಲ್ಲಿ, ಸಾಮಂತ ಸಿಂಹಚೂಡ ಈ ನಾಯಿಯನ್ನೆದುರಿಸಿದಾಗ ನಾನೆಷ್ಟು ದೇವರನ್ನು ಬೇಡಿದ್ದೆ. ಆತನ ಧೀರನಡೆ, ನುಡಿ ನನ್ನ ಮನದಲ್ಲೊಂದಿಷ್ಟು ಆಸೆ ಮೂಡಿತ್ತು. ಆದರೆ ಇಲ್ಲಿಯೂ ಕತ್ತಲೆಯ ಕೈ ಬಲವಾಯಿತು. ‘ಸಿಂಹಚೂಡನಿಗೆ ಸದ್ಗತಿ ದೊರೆಯಲಿ’ ಎಂದು ಪ್ರಾರ್ಥಿಸುವದನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಅಸಹಾಯಕ ಸ್ಥಿತಿ ನನ್ನದು.

ನಾನಿಷ್ಟು ಹಠ ಮಾಡುತ್ತಿದ್ದರೂ ಈ ಪಾಪಿಗೇಕೆ ಅರ್ಥವಾಗುತ್ತಿಲ್ಲ. ‘ಜನ್ಮಜನ್ಮಾಂತರದಲ್ಲಿಯೂ, ಇಹಪರದಲ್ಲಿಯೂ ಪತಿ ವಸುಷೇಣನೇ ನನ್ನ ಬದುಕು, ನನ್ನ ಸಾವು ಮತ್ತು ನನ್ನ ಚಿತೆಗೊಡೆಯ’ ಎಂದು.

* * *

ಸೃಷ್ಟಿ, ಈಗ ಅರ್ಥವಾಯಿತೆ? ನೀನೆಷ್ಟು ಘೋರಕತ್ತಲನ್ನು ಸೃಷ್ಟಿಸಿದ್ದೀಯ ಎಂದು. ಈ ತರದ ಘಟನೆಗಳು ಲೆಕ್ಕವಿಲ್ಲದಷ್ಟು ಪ್ರತಿದಿನ, ಪ್ರತಿದೇಶದಲ್ಲಿಯೂ ನಡೆಯುತ್ತಿವೆ. ಆದರೂ ಜನ ‘ಕಾಲ ಕೆಟ್ಟುಹೋಯಿತು’ ಎಂದು ಬೊಬ್ಬೆ ಹೊಡೆಯುತ್ತಾರೆ! ಇರಲಿ ಬಿಡು. ನಾವಿದಕ್ಕೆ ಉತ್ತರ ಹೇಳಬೇಕಾಗಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ‘ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ.’ ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡೋಣ. ಫಲಾಫಲಗಳನ್ನು ‘ಆತ’ನಿಗೆ ಬಿಟ್ಟುಬಿಡೋಣ.

ಹೊ, ಯುದ್ಧದ ಕಹಳೆಯ ಸದ್ದು. ಯುದ್ಧ ಮೊದಲಿಟ್ಟಿತೋ ಏನೊ. ಆದರೆ ಅಲ್ಲಿ ನೋಡಲ್ಲಿ, ಈ ಚಂಡಶಾಸನನು ಸುನಂದೆಯತ್ತ ಹೋಗುತ್ತಿದ್ದಾನೆ. ನಡೆ, ಏನು ನಡೆಯುತ್ತಿದೆ ಎಂದು ನೋಡೋಣ.

* * *

ದೇವಿ ಸುನಂದೆ, ಇಂದು ಕಡೆಯ ದಿನ. ನಿನಗಾಗಿ ನನ್ನ ಹೆಸರು, ಕೀರ್ತಿ, ರಾಜ್ಯ, ಸತಿಯರು, ಇಹಪರ ಸರ್ವಸ್ವವನ್ನೂ ತೊರೆಯಲು ನಾನು ಸಿದ್ಧನಾಗಿದ್ದೇನೆ. ನಿನ್ನ ಸಾವು ಕೂಡಾ ವಸುಷೇಣನದೆಂದೆ. ಆದರೆ ನಾನು ಬಿಡುವುದಿಲ್ಲ, ನಿನ್ನನ್ನು ಸಾಯಲು ಅವನೊಡನೆ. ನೀನು ಸತ್ತರೆ ನಾನೂ ಸಾಯುತ್ತೇನೆ. ಆದರೆ ನೀನು ಸಾಯಬಾರದು. ನೀನು ನನ್ನ ಮನೆಯಲ್ಲಿದ್ದೀಯ ಎಂಬುದಷ್ಟೇ ನನಗೆ ಸಾಕು. ಬೇರಾವ ಸತಿಯೂ, ಸುಖವೂ ನನಗೆ ಬೇಡ. ಇದೋ ಯುದ್ಧಕ್ಕೆ ಹೊರಟೆ. ನಾನೀಗ ಹಿಂದಕ್ಕೆ ಬರುವುದಿರಲಿ ತಿರುಗಿ ನೋಡದಷ್ಟು ದೂರ ಬಂದುಬಿಟ್ಟಿದ್ದೇನೆ. ಇಂದು ನಿರ್ಧಾರದ ದಿನ. ವಸು, ಇಲ್ಲ ಚಂಡ.

* * *

ನೋಡಿದೆಯಾ ಸೃಷ್ಟಿ. ಈ ಹುಂಬನನ್ನು. ಕಾಮದ ಹುಚ್ಚಿನಿಂದ ಏನೇನೋ ಬಡಬಡಿಸಿದ. ಸುನಂದೆಯನ್ನು ಆಗಲೇ ತನ್ನ ಹೆಂಡತಿಯೆಂದು ಬಗೆದಿದ್ದಾನೆ. ದೇವಿ ಎಂದು ಸಂಬೋದಿಸುತ್ತಿದ್ದಾನೆ. ಆದರೆ ಅವಳು ಮಣಿಯಲಾರಳು ಎಂಬ ಹತಾಶೆಯೂ ಅವನಲ್ಲಿದೆ ಅಲ್ಲವೆ? ಅಲ್ಲಿ ನೋಡಲ್ಲಿ. ಯುದ್ಧ ಪ್ರಖರವಾಗುತ್ತಿದೆ. ನಡೆ ನಾವಲ್ಲಿಯೇ ನಿಂತು ಗಮನಿಸುವ.

ಸಹೋದರಿ, ಅಲ್ಲೇನೊ ನಡೆಯುತ್ತಿದೆ. ಕೇಳಿಸುತ್ತಿದೆಯೆ? ಅರಮನೆಯ ಹೊರಬಾಗಿಲ ಬಳಿ ಗದ್ದಲ! ನೋಡು ಅದು ಸುರಮ್ಯ ದೇಶದ ಪತಾಕೆಯಲ್ಲವೆ? ನೋಡಿದೆಯಾ ವಸುಷೇಣನನ್ನು, ಬಾರ್ಯೆ, ಮಿತ್ರನಿಂದ ಅಪಹೃತಳಾದ ಸುದ್ದಿಯನ್ನು ತಿಳಿದು, ತುತ್ತನ್ನು ಎತ್ತದೆ ಬಂದು ಗುರಿಯನ್ನು ತಲಪುತ್ತಿದ್ದಾನೆ.

ಅರಮನೆಯ ಒಳಗೆಲ್ಲಾ ವಸುಷೇಣ ಸತ್ತನೆಂದು ಸುದ್ದಿ ಹರಡಿದೆ. ಅಲ್ಲಿ ಹೊರಗೆ ಆತ ಇನ್ನೂ ಯುದ್ಧ ಮಾಡುತ್ತಲೇ ಇದ್ದಾನೆ! ಇತ್ತ ನೋಡು, ಆ ಚಂಡಶಾಸನ ಸುನಂದೆಯತ್ತ ಹೋಗುತ್ತಿದ್ದಾನೆ. ಓ! ನಿಂತು ಅದೇನು ನಡೆಸಿದ್ದಾನೆ ಈ ಚಂಡಶಾಸನ? ಮಾಯೆಯಿಂದ ರಕ್ತಸಿಕ್ತವಾದ ತಲೆಯೊಂದನ್ನು ಸೃಷ್ಟಿಸಿದ್ದಾನೆ! ಅದೂ ವಸುಷೇಣನದು! ಮಾಯಾವಿ. ಈಗ ಅರ್ಥವಾಯಿತೆ ಸೃಷ್ಟಿ ಈ ಖಳನ ಉದ್ದೇಶ. ಗಾಬರಿಯಾಗಬೇಡ. ನಿನ್ನ ಗರ್ಭಸಂಜಾತನೊಬ್ಬನ ಕುಟಿಲಬುದ್ಧಿಯನ್ನು ಕಂಡು. ಸೋಲು ಖಚಿತವಾದಾಗ ಮನುಷ್ಯ ಈ ರೀತಿ ಅಡ್ಡದಾರಿಗಿಳಿಯುತ್ತಾನೆ. ಮೋಸದಿಂದಲಾದರೂ ಸರಿ ಸುನಂದೆಯನ್ನು ಕೂಡುವ ಹಂಬಲ ಈ ಮೂಢನಿಗೆ. ಎಲ್ಲ ಕಾಲಕ್ಕೂ ಈ ಗಂಡಸು ಹೆಂಗಸಿನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಅನಾಹುತಕ್ಕೆಡೆಮಾಡಿಕೊಟ್ಟಿದ್ದಾನೆ. ಮಾಯಾಶಿರಸ್ಸನ್ನು ತೋರಿಸಿ ವಸು ಸತ್ತನೆಂದು ಸುನಂದೆಯನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾನೆ, ನೋಡಲ್ಲಿ.

* * *

ಅಯ್ಯೋ, ದುರ್ವಿಧಿಯೆ. ಕೊನೆಗೂ ಪಾಪಿಯ ಕೈಯೇ ಬಲವಾಯಿತಲ್ಲ. ಅಳಿದುಳಿದಿದ್ದ ಬೆಳಕಿಗೂ ಕತ್ತಲು ತುಂಬಿಕೊಂಡಿತಲ್ಲ. ಪಾಪಿ, ನನ್ನ ದೇವರ ತಲೆ ಕಡಿದರೆ ನನ್ನನ್ನು ಒಲಿಸಿಕೊಳ್ಳಬಹುದೆಂದು ನೀನು ತಪಾಗಿ ತಿಳಿದಿದ್ದೀಯ. ಆದರೆ ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... .

ಅಯ್ಯೋ, ದೇವಿ ಸುನಂದೆ. ನಾನೊಂದು ಬಗೆದರೆ, ದೈವವೊಂದು ಬಗೆಯಿತು! ಕಾಮಾತುರನಾಗಿ ನಾನು ದಹಿಸುತ್ತಿದ್ದರೆ, ವಿಧಿ ಮಾಡಿದ್ದನ್ನುಣ್ಣುವವರು ಯಾರು? ನನ್ನ ಮುನ್ನಿನ ಸತಿಯರನ್ನು ತೊರೆದು, ನಿನ್ನನ್ನೇ ನನ್ನ ಸತಿಯೆಂದು ಭಾವಿಸಿದೆ! ಆದರೆ ನೀನದಕ್ಕೆ ಸ್ವಲ್ಪವೂ ಅವಕಾಶ ಕೊಡಲಿಲ್ಲ. ಈ ಮೈಯೊಳಗಿಲ್ಲವಾದರೇನಂತೆ? ಮರುಮೈಯೊಳಗಾದರೂ ನಿನ್ನನ್ನು ಕೂಡದೆ ಬಿಡುವುದಿಲ್ಲ. ನಾನೂ ನಿನ್ನ ಚಿತೆಯನ್ನೇರುತ್ತೇನೆ. ನಿನ್ನ ಚಿತೆಗೊಡೆಯ ವಸುಷೇಣನಲ್ಲ! ಚಂಡಶಾಸನ!

* * *

ನೊಡಿದಿರಾ, ಸಹೃದಯರೆ ಈ ವಿಚಿತ್ರವನ್ನು! ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... ಎಂದು ಮೊರೆಯಿಡುತ್ತಿದ್ದಳು. ಸುನಂದೆಯ ಕೊನೆಯ ಮಾತನ್ನು ಸುಳ್ಳಾಗಿಸಿಬಿಟ್ಟಿತಲ್ಲ ಈ ವಿಧಿ! ಶಾಸನ ಮಾಡುವಾತನೇ ಅದನ್ನು ಮುರಿದು ದುರಂತಕ್ಕೀಡು ಮಾಡಿದ್ದರೂ, ತನ್ನ ಕೊನೆಯ ಮಾತನ್ನೇ ನಡೆಸಿಕೊಂಡುಬಿಟ್ಟ, ಬಲವಂತವಾಗಿಯಾದರು. ಇದು ವೈಯಕ್ತಿಕ ದುರಂತ ಮಾತ್ರವಲ್ಲ, ಸಮೂಹಿಕ ದುರಂತ! ಅಂತಃಪುರದ ಸ್ತ್ರೀಯರು, ಲೆಂಕರು ಚಂಡಶಾಸನನ ಹಿಂದೆಯೇ ಸಾಲುಸಾಲಾಗಿ ಚಿತೆಯೇರಿದರು. ಸುನಂದೆಯನ್ನು ಹೊತ್ತು ತಂದಾಗ, ತಮ್ಮರಸನ ಅವಿವೇಕತನಕ್ಕೆ ದೂಷಿಸಿದ್ದ ಪುರಜನರೂ ದುಃಖಪಟ್ಟರು. ಹೆಣ್ಣಿನ ಜೊತೆ ಚಿತೆಯೇರಿದ ಮೊದಲ ಪುರುಷನೀತ!!!

ಸಹೃದಯರೆ, ಈ ಪ್ರಪಂಚದಲ್ಲಿ ಒಳಿತು ಕೆಡಕುಗಳೆರಡೂ ಸಮವಾಗಿರುತ್ತವೆ. ಸಮವಾಗಿರಲೇಬೇಕು. ಅವುಗಳಲ್ಲಿ ಕೆಡಕು ಒಂದಿಷ್ಟು ಹೆಚ್ಚಾದರೂ, ಸೃಷ್ಟಿಯ ಉತ್ಪಾದಕ ಸಾಮರ್ಥ್ಯ ಮತ್ತು ನನ್ನ ತಾಳುವಿಕೆಯ ಸಾಮರ್ಥ್ಯದಲ್ಲಿ ಹೆಚ್ಚುಕಡಿಮೆಯಾದಾಗ ಉಂಟಾಗುವ ಅನಾಹುತವೇ ಆಗುತ್ತದೆ. ಅದರ ಪರಿಣಾಮವನ್ನು ಮಾತ್ರ ಈ ವ್ಯವಸ್ಥೆ ತಾಳಲಾರದು.

ಸೃಷ್ಟಿ, ಈ ಮನುಷ್ಯ ಯಾವುದಾದರು ಒಂದು ವಿಷಯದಲ್ಲಿ ಉನ್ನತಿ ಸಾಧಿಸಿದರೆ ಸಾಕು, ಸಮಷ್ಟಿಯನ್ನು ಮರೆತುಬಿಡುತ್ತಾನೆ. ಸಮಷ್ಟಿಯುನ್ನತಿಯೊಂದಿಗೇ ತನ್ನುನ್ನತಿಯೆಂಬದನ್ನು ಮರೆತುಬಿಡುತ್ತಾನೆ. ಮನುಷ್ಯರು ನಮ್ಮನ್ನು ಮರೆತಾಗಲೆಲ್ಲಾ, ನಾವು ನಮ್ಮ ಇರುವನ್ನು ಅವರ ಅರಿವಿಗೆ ತರಲೇಬೇಕು. ಇದನ್ನು ನಾನು ನಿನಗೆ ಹೇಳಬೇಕೆ? ನೀನೆಷ್ಟು ಸುಂದರಳೊ, ಸೌಮ್ಯಳೊ, ಒಳ್ಳೆಯವಳೊ ಅಷ್ಟೇ ರೌದ್ರಭಯಂಕರಳೂ ಎಂಬುದಕ್ಕೆ ನೀನು ಇತ್ತೀಚಿಗೆ ಪ್ರಸವಿಸಿದ ಭೂಕಂಪವೇ ಸಾಕ್ಷಿ !!!
***

7 comments:

ಜಲನಯನ said...

ಡಾ. ಬಿ.ಆರ್. ಬಹಳ ಚನ್ನಾಗಿ ಮೂಡಿಬಂದಿವೆ ಕಂತುಗಳು...ನನಗೆ ವಿದ್ಯಾರ್ಥಿಜೀವನದಲ್ಲೂ ಈ ಪ್ರಕಾರದ ಕೃತಿಗಳು..ಒಂದು ರೀತಿಯ ಪದ್ಯಮಿಶ್ರಿತ ಗದ್ಯ ಓದಿದ ಅನುಭವಕೊಡುತ್ತಿದ್ದವು...ಕಥೆಯ ಸಾರವನ್ನು ಕೊನೆಯ ಸಾಲುಗಳ ಅರ್ಥವತ್ತಾಗಿ ಸಂದೇಶಿಸುತ್ತವೆ......
ಈ ಮನುಷ್ಯ ಯಾವುದಾದರು ಒಂದು ವಿಷಯದಲ್ಲಿ ಉನ್ನತಿ ಸಾಧಿಸಿದರೆ ಸಾಕು, ಸಮಷ್ಟಿಯನ್ನು ಮರೆತುಬಿಡುತ್ತಾನೆ. ಸಮಷ್ಟಿಯುನ್ನತಿಯೊಂದಿಗೇ ತನ್ನುನ್ನತಿಯೆಂಬದನ್ನು ಮರೆತುಬಿಡುತ್ತಾನೆ. ಮನುಷ್ಯರು ನಮ್ಮನ್ನು ಮರೆತಾಗಲೆಲ್ಲಾ, ನಾವು ನಮ್ಮ ಇರುವನ್ನು ಅವರ ಅರಿವಿಗೆ ತರಲೇಬೇಕು. ಇದನ್ನು ನಾನು ನಿನಗೆ ಹೇಳಬೇಕೆ? ನೀನೆಷ್ಟು ಸುಂದರಳೊ, ಸೌಮ್ಯಳೊ, ಒಳ್ಳೆಯವಳೊ ಅಷ್ಟೇ ರೌದ್ರಭಯಂಕರಳೂ ಎಂಬುದಕ್ಕೆ ನೀನು ಇತ್ತೀಚಿಗೆ ಪ್ರಸವಿಸಿದ ಭೂಕಂಪವೇ ಸಾಕ್ಷಿ !!!

sunaath said...

ಚಂಡಶಾಸನ ವೃತ್ತಾಂತ ಅದ್ಭುತವನಿಸಿತು. ತಿಳಿಗನ್ನಡದಲ್ಲಿ ಅದನ್ನು ತಿಳಿಸಿದ ನಿಮಗೆ ಧನ್ಯವಾದಗಳು.

ಸೀತಾರಾಮ. ಕೆ. said...

ತು೦ಬಾ ಒಳ್ಳೇಯ ಕಥೆಯೊ೦ದನ್ನು ಕಾಲನ ಗರ್ಭದಿ೦ ಹೆಕ್ಕಿ, ಸೃಷ್ಠಿಯ ಕಣ್ಣಲ್ಲಿ ವಿಹರಿಸಿ ಪರಿಚಯಿಸಿದ್ದಿರಾ.. ಧನ್ಯವಾದಗಳು. ಜನ್ನನ ಕಾವ್ಯದ ಬಗ್ಗೆ ಪರಿಚಯವೂ ಆಯಿತು. ಅಪರೂಪದ ಕಥಾವಸ್ತು.

shivu said...

ಸರ್,

ಚಂಡಶಾಸನದ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದನ್ನು ಸರಳವಾಗಿ ಬರೆದು ಕೊಟ್ಟಿದ್ದೀರಿ..ಕಥೆಯೂ ಇಷ್ಟವಾಯಿತು. ಹೊಸ ವಿಚಾರವನ್ನು ತಿಳಿದಂತೆ ಆಯಿತು..

ಧನ್ಯವಾದಗಳು.

AntharangadaMaathugalu said...

ಡಾ.ಸತ್ಯ ಸಾರ್...
ಚಂಡಶಾಸನನ ಕಥೆ ನನಗಂತೂ ಗೊತ್ತಿರಲಿಲ್ಲ. ನಿಮ್ಮ ಬರಹದ ಸರಳ ಶೈಲಿ, ಕ್ಲಿಷ್ಟವಾದ ಗದ್ಯವನ್ನು ಸುಲಭದಲ್ಲಿ ಅರ್ಥ ಮಾಡಿಸಿ ಬಿಡುತ್ತದೆ. ಇಡೀ ಕಥೆಯ ಸಾರವೇ ಕೊನೆಯ ಸಾಲುಗಳಲ್ಲಿ ಸುಂದರವಾಗಿ ಹಿಡಿದಿಟ್ಟಿದ್ದೀರಿ. ಧನ್ಯವಾದಗಳು........
ಶ್ಯಾಮಲ

Santhosh Kumar S said...

¤ªÀÄä DzsÀĤPÀ ¸ÀAzÀ¨sÀðzÀ°è PÀxÉAiÀiÁzÀ PÀxÉ DPÀ¸ÁävÁV F ¨ÁèUï£À°è N¢zÉ. vÀÄA¨Á ZÉ£ÁßV ªÀÄÆr§A¢zÉ. ¤d ºÉüÀ¨ÉÃPÉAzÀgÉ ªÉÆzÀ® PÀxÉUÉ ¤ªÀÄä C©üªÀiÁ¤AiÀiÁVzÉÝãÉ. ¤ªÀÄä §UÉÎ ºÉaÑ£À «µÀAiÀÄUÀ¼À£ÀÄß w½AiÀÄĪÁ¸É (ªÀÈwÛ, ¥ÀæPÀl£É, EvÁå¢).
MAzÀÄ ¸À®ºÉ: F PÀxÉAiÀÄ£ÀÄß AiÀiÁPÉ £ÁlPÀªÀ£ÁßV ¥ÀjªÀwð¸À¨ÁgÀzÀÄ?

Dr. B.R. Satynarayana said...

ಸಂತೋಷಕುಮಾರ್ ನಿಮ್ಮ ಪ್ರತಿಕ್ರಿಯೆ ನೋಡಿದೆ. ನೀವು ಅಕ್ಷರಗಳು ಯೂನಿಕ್ ಕೋಡಿನಲ್ಲಿ ಇಲ್ಲದೇ ಇರುವುದರಿಂದ ಓದಲಾಗುತ್ತಿರಲಿಲ್ಲ! ಅದನ್ನು ಯೂನಿಕ್ ಕೋಡಿಗೆ ಬದಲಾಯಿಸಿ ಇಲ್ಲಿ ಹಾಕಿದ್ದೇನೆ. ನನ್ನ ಪೂರ್ಣ ಮಾಹಿತಿಗೆ ಇದೇ ಬ್ಲಾಗಿನಲ್ಲಿ ಪ್ರೊಫೈಲ್ ನೋಡಿ. http://www.blogger.com/profile/14427629550874212514
ನಿಜ ಹೇಳಬೇಕೆಂದರೆ ಈ ಕಥೆ ಬರೆದಾಗ ನನಗೂ ನನ್ನ ಸ್ನೇಹಿತರಿಗೂ ಇದೊಂದು ಅದ್ಬುತ ನಾಟಕವಾಗುತ್ತದೆ ಎಂದು ಅನ್ನಿಸಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಿದು ನನ್ನ ಮುಡಿ ಕಥಾ ಸಂಕಲನದಲ್ಲಿ ಮೊದಲನೆಯ ಕಥೆಯಾಗಿ ಪ್ರಕಟವಾಗಿದೆ.

ನಿಮ್ಮ ಪ್ರತಿಕ್ರಿಯೆ (ಇತರ ಓದುಗರಿಗಾಗಿ)
ನಿಮ್ಮ ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ ಆಕಸ್ಮಾತಾಗಿ ಈ ಬ್ಲಾಗ್‌ನಲ್ಲಿ ಓದಿದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಜ ಹೇಳಬೇಕೆಂದರೆ ಮೊದಲ ಕಥೆಗೆ ನಿಮ್ಮ ಅಭಿಮಾನಿಯಾಗಿದ್ದೇನೆ. ನಿಮ್ಮ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯುವಾಸೆ (ವೃತ್ತಿ, ಪ್ರಕಟನೆ, ಇತ್ಯಾದಿ).
ಒಂದು ಸಲಹೆ: ಈ ಕಥೆಯನ್ನು ಯಾಕೆ ನಾಟಕವನ್ನಾಗಿ ಪರಿವರ್ತಿಸಬಾರದು?