ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ. ಕಾವ್ಯ, ನಾಟಕ ಮತ್ತು ಸಂಗೀತ ಮುಂತಾದವುಗಳನ್ನು ಓದಿ, ಕೇಳಿ ಮತ್ತು ನೋಡಿ ಅವುಗಳ ಸೌಂದರ್ಯವನ್ನು ಅನುಭವಿಸಿ ಆನಂದಪಡುವಾತನೇ ಈ ಸಹೃದಯ. ಸಹೃದಯನೆಂದರೆ ಕವಿ ಹೃದಯಕ್ಕೆ ಸಮನಾದ ಹೃದಯವುಳ್ಳವನು ಎಂದರ್ಥ.
ಕವಿ ಸ್ವತಂತ್ರ; ಕೃತಿ ಪರತಂತ್ರ ಎಂಬ ಮಾತಿದೆ. ನಿಜ. ಕವಿಯಿಂದ ಒಮ್ಮೆ ರಚಿತವಾಯಿತೆಂದರೆ ಕೃತಿ ಪರತಂತ್ರ. ಆದರೆ ಅದು ಕವಿಗೆ ಮಾತ್ರ. ಸಹೃದಯನಿಗಾದರೋ ಅದು ಸ್ವತಂತ್ರವಾಗಿಯೇ ಉಳಿದುಬಿಡುತ್ತದೆ. ಎಷ್ಟೋ ಜನ ಮಹಾಕವಿಗಳೂ ಕೂಡ ತಮ್ಮ ಕೃತಿಗೆ -ಅದರ ಸೌಂದರ್ಯಾತಿಶಯಗಳನ್ನು ಕಂಡು -ತಾವೇ ನಮಸ್ಕರಿಸಿದ್ದಾರೆ. ಕೃತಿ ಕವಿಯಿಂದ ಒಮ್ಮೆ ರಚಿತವಾಗುತ್ತದೆ. ಆದರೆ ಸಹೃದಯರ ಮಟ್ಟಿಗೆ ಮಾತ್ರ ಒಂದೊಂದು ಸಾರಿ ಓದಿದಾಗಲೂ, ಒಬ್ಬೊಬ್ಬ ಸಹೃದಯ ಓದಿದಾಗಲೂ ಮತ್ತೆ ಮತ್ತೆ ರಚಿತವಾಗುತ್ತಲೇ ಇರುತ್ತದೆ. ಸಹೃದಯರಿರುವವರೆಗೆ ತನ್ನದೇ ಕೃತಿಯಿಂದ ಕವಿ ನೂರಾರು, ಸಾವಿರಾರು ಬಾರಿ ಸೃಜನನಾಗುತ್ತಾನೆ. ಅದಕ್ಕೆಂದೇ ಕುವೆಂಪು ಅವರು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ “ಶ್ರೀ ಕುವೆಂಪುವ ಸೃಜಿಸಿದೀ ಕೃತಿ. . . “ ಎಂದು ವಿನೀತರಾಗಿ ಒಪ್ಪಿಕೊಳ್ಳುತ್ತಾರೆ.
ಕವಿಯ ಕೃತಿ ಸಹೃದಯನ ಮನಸ್ಸೆಂಬ ಕನ್ನಡಿಯ ಮೇಲೆ ಪ್ರತಿಭಾರಿಯೂ ಹೊಸದಾಗಿ ಪ್ರತಿಫಲಿಸುತ್ತದೆ. ಪ್ರತಿಯೊಬ್ಬ ಸಹೃದಯನೂ ಒಂದೇ ಕೃತಿಯನ್ನು ತನ್ನಿಚ್ಛೆಯಂತೆ ಮರುಸೃಷ್ಟಿಸಿಕೊಳ್ಳುತ್ತಾನೆ. ಅದರಿಂದ ಆನಂದ ಪಡುತ್ತಾನೆ. ಆನಂದವರ್ಧನನು ತನ್ನ ಲೋಚನದಲ್ಲಿ, “ಯೇಷಾಂ ಕಾವ್ಯಾನುಶೀಲನವಶಾತ್ ವಿಶದೀ ಭೂತೆ ಮನೋಮುಕುರೇ ವರ್ಣನೀಯ ತನ್ಮಯೀಭವ ಯೋಗ್ಯತಾ ತೇ ಹೃದಯ ಸಂವಾದ ಭಾಜಃ ಸಹೃದಯಾ” ಎಂದು ವಿಸ್ತರಿಸಿ ಸ್ಪಷ್ಟಪಡಿಸಿದ್ದಾನೆ. ಅಂದರೆ ಕಾವ್ಯಗಳನ್ನು ಪರಿಶೀಲಿಸಿ ಮನಸ್ಸೆಂಬ ಕನ್ನಡ ನಿರ್ಮಲವಾಗಿರುವುದರಿಂದ ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹೃದಯರು - ಕವಿಯೊಂದಿಗೆ ಹೃದಯ ಸಂವಾದ ನಡೆಸುವವರು.
ಇಲ್ಲಿ ಕವಿ ಸಹೃದಯರಿಬ್ಬರೂ ಸೃಷ್ಟಿಕರ್ತರೆ! ಕವಿಯದು ಸೃಷ್ಟಿಕಾರ್ಯವಾದರೆ, ಸಹೃದಯನದು ಅನುಸೃಷ್ಟಿಕಾರ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕವಿ ಪ್ರತಿಭೆ ಕಾರಯಿತ್ರಿ; ಸಹೃದಯ ಪ್ರತಿಭೆ ಭಾವಯಿತ್ರಿ. ಇವೆರಡು ಸೇರದೆ ಕಲಾಕೃತಿಗೆ ಪೂರ್ಣತೆಯೊದಗಲಾರದು. ಕವಿ ಸಹೃದಯರಿಬ್ಬರು ಸಮಶೃತಿಯನ್ನುಳ್ಳ ಎರಡು ವೀಣೆಗಳಿದ್ದಂತೆ. ಒಂದನ್ನು ಮೀಟಿದರೆ ಇನ್ನೊಂದು ಝೇಂಕರಿಸುತ್ತದೆ.
ಜನ್ನನು ತನ್ನ ಅನಂತನಾಥಪುರಾಣದಲ್ಲಿ “ಕಟ್ಟಿಯುಮೇನೋ ಮಾಲೆಗಾರನ ಪೊಸಬಾಸಿಗಂ. ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗುದೇ!” ಎಂದು ಸಹೃದಯನನ್ನು ಭೋಗಿಗೆ ಹೋಲಿಸುತ್ತಾನೆ. ಕಲಾವಿದನಿಗೆ ತನ್ನ ಸೃಷ್ಟಿಯು ಸಾರ್ಥಕವಾಗಬೇಕಾದರೆ ಅದನ್ನು ಸ್ವೀಕರಿಸುವ ಸಹೃದಯರೂ ಬೇಕು. ಇಲ್ಲದಿದ್ದರೆ ಮಾಲೆ ಬಾಡಿ ಹೋಗುತ್ತದೆ. ಕವಿಪ್ರತಿಭೆ “ಜೀರ್ಣಮಂಗೇ ಸುಭಾಷಿತಂ” ಎಂಬಂತೆ ಕಮರಿಹೋಗುತ್ತದೆ. ಅದಾಗಬಾರದು. ಕಲೆಯ ಸಾರ್ಥಕತೆ ಸಹೃದಯನ ಹೃದಯದಲ್ಲಿ ನೆಲೆಗೊಂಡ ಮೇಲಲ್ಲವೆ? ಏಕೆಂದರೆ ಕವಿ ಕಲೆಯನ್ನಲ್ಲದೆ ಶಿಲೆಯನ್ನು ಸೃಷ್ಟಿಸುವುದಿಲ್ಲ. ಆತ ಸೃಷ್ಟಿಕರ್ತ; ಆದರೆ ಬ್ರಹ್ಮನಲ್ಲ.
ಪ್ರಸ್ತು ಸೃಷ್ಟಿಕರ್ತರ ಬೆಳೆ ಹುಲುಸಾಗಿಯೇ ಇದೆ. ಆದರೆ ಸಹೃದಯರ ಕೊರತೆಯಿದೆ. ಕೈಯೊಂದರಿಂದ ಚಪ್ಪಾಳೆಯಾಗಲಾರದು. ಕೃತಿ ಸೃಷ್ಟಿಗೆ ಪ್ರತಿಭೆಯಷ್ಟು ಅಗತ್ಯವೋ ಅಷ್ಟೆ ಅಗತ್ಯ ಕವಿಗೆ, ಕೃತಿಗೆ ಸಹೃದಯ ಪ್ರತಿಭೆ. ಅವನ ಮಹತ್ವವನ್ನರಿತೇ ಅಭಿನವಗುಪ್ತನು, “ಕವಿ ಸಹೃದಯರಿಬ್ಬರೂ ಒಂದೇ ಸಾರಸ್ವತ ಲೋಕದ ಅಂಗಗಳು’ ಎಂದು ಸಾರಿದ್ದಾನೆ.
3 comments:
ಸತ್ಯನಾರಯಣರೆ...
"ಸೃಷ್ಟಿಕರ್ತರ ಬೆಳೆ ಹುಲುಸಾಗಿಯೇ ಇದೆ. ಆದರೆ ಸಹೃದಯರ ಕೊರತೆಯಿದೆ. ಕೈಯೊಂದರಿಂದ ಚಪ್ಪಾಳೆಯಾಗಲಾರದು.."
ಬಹಳ ಸತ್ಯವಾದ ಮಾತುಗಳು...!!
“ಕವಿ ಸಹೃದಯರಿಬ್ಬರೂ ಒಂದೇ ಸಾರಸ್ವತ ಲೋಕದ ಅಂಗಗಳು’...ಕವಿ ಸಹೃದಯರಿಬ್ಬರೂ ಸೃಷ್ಟಿಕರ್ತರೆ! ಕವಿಯದು ಸೃಷ್ಟಿಕಾರ್ಯವಾದರೆ, ಸಹೃದಯನದು ಅನುಸೃಷ್ಟಿಕಾರ್ಯ. ಉತ್ತಮ ವಿಚಾರಗಳನ್ನು ನಿರೂಪಿಸಿದ್ದೀರಿ.
ಶುಭಾಶಯಗಳು
ಅನ೦ತ್
ತುಂಬಾ ಅನುಭವಪೂರ್ಣ ಬರಹ
Post a Comment