Monday, August 16, 2010

೨೪೦ ನಿಮಿಷಗಳಲ್ಲಿ ೬೮ ಅಭ್ಯರ್ಥಿಗಳಿಗೆ ಸಂದರ್ಶನ; ತುಮಕೂರು ವಿವಿ ವಿಶ್ವದಾಖಲೆ!!!

ಮೊನ್ನೆ ಶುಕ್ರವಾರ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ (ಲೆಕ್ಚರರ್ ಎಂಬುದರ ಹೊಸ ಅವತಾರ!) ಹುದ್ದೆಗೆ ಸಂದರ್ಶನ ನಡೆಯಿತು. ಹಿಂದೊಮ್ಮೆ ಇದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು ಅದು ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೋರ್ಟ್ ಎಲ್ಲವನ್ನೂ ಹೊಸದಾಗಿ ನಡೆಸುವಂತೆ ತೀರ್ಪು ಇತ್ತುದರಿಂದ ನನಗೂ ಸಂದರ್ಶನದ ಅವಕಾಶ ಸಿಕ್ಕಿತ್ತು. ಎಸ್.ಎಂ.ಎಸ್., ಈ ಮೇಲ್ ಹಾಗೂ ಅಂಚೆ ಮುಖಾಂತರವೂ ಸಂದರ್ಶನದ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೆಲ್ಲವೂ ಕೋರ್ಟ್ ತೀರ್ಪಿನ ಪ್ರಭಾವವಿದ್ದಿರಬೇಕು.

ಇದೇ ಮೊದಲ ಬಾರಿಗೆ ಕನ್ನಡ ಉಪನ್ಯಾಸಕ ಹುದ್ದೆಯೊಂದಕ್ಕೆ, ವಿವಿಯ ಮಟ್ಟದಲ್ಲಿ ಸಂದರ್ಶನಕ್ಕೆ ಹೊರಟಿದ್ದ ನಾನು ನನ್ನ ಎಲ್ಲಾ ದಾಖಲೆಗಳನ್ನು, ಪ್ರಕಟಣೆಗಳನ್ನು ಹೊತ್ತು, ನನ್ನಂತೆಯೇ ಸಂದರ್ಶನಕ್ಕೆ ಹೊರಟಿದ್ದ ನನ್ನ ಮಿತ್ರರೊಬ್ಬರ ಜೊತೆಗೆ, ಬೆಳಿಗ್ಗೆ ೭.೪೦ ಗಂಟೆಗೆ ತುಮಕೂರು ತಲುಪಿದ್ದೆ. ಅಂದ ಹಾಗೆ ಸಂದರ್ಶನದ ಸಮಯ ನಿಗದಿಯಾಗಿದ್ದು ಬೆಳಿಗ್ಗೆ ೭.೩೦ ಗಂಟೆಗೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು ಎಪ್ಪತ್ತು ಎಂಬತ್ತು ಜನ ಅಲ್ಲಿ ಜಮಾಯಿಸಿದ್ದರು. ನಾಲ್ಕೈದು ಪರಿಚಿತ ಮುಖಗಳೂ ಇದ್ದವು. ನನ್ನ ಸಹದ್ಯೋಗಿಯೊಬ್ಬರೂ ಸಂದರ್ಶನಕ್ಕೆ ಬಂದಿದ್ದರು. ಒಂದೆರಡು ದಿನಗಳ ಮುಂಚೆಯಷ್ಟೇ ಸಂದರ್ಶನದ ಮಾಹಿತಿ ಸಿಕ್ಕಿದ್ದರಿಂದ ನಮಗೆ ಪರಸ್ಪರ ಗೊತ್ತೇ ಆಗಿರಲಿಲ್ಲ.

ಗದ್ದಲವೋ ಗದ್ದಲ. ಒಂದು ಮೂಲೆಯಲ್ಲಿ ಅಭ್ಯರ್ಥಿಗಳ ಕಾಗದ ಪತ್ರ ಅಂಕಪಟ್ಟಿ ಪುಸ್ತಕ ಲೇಖನ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತಿತ್ತು. ಒಬ್ಬೊಬ್ಬರದಕ್ಕೆ ಕನಿಷ್ಠ ೧೦ ನಿಮಿಷಗಳಾದರೂ ಬೇಕಾಗುತ್ತಿತ್ತು. ಅಷ್ಟರಲ್ಲೇ ನಾಲ್ಕೈದು ಜನರ ಸಂದರ್ಶನವೂ ಮುಗಿದು ಹೋಗಿತ್ತು!

ಸಂದರ್ಶನ ನಡೆಸುವವರ ವೇಗಕ್ಕೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಅದನ್ನು ತಿಳಿದ ವಿ.ಸಿ.ಯವರು ಸ್ವತಃ ಸಂದರ್ಶನದ ಕೊಠಡಿಯಿಂದ ಬಂದು, ಇನ್ನಿಬ್ಬರನ್ನು ಆ ಕೆಲಸಕ್ಕೆ ನೇಮಿಸಿ ಬೇಗ ಬೇಗ ಪರಿಶೀಲನೆ ನಡೆಸುವಂತೆ ಆಜ್ಞೆಯಿತ್ತು ಮತ್ತೆ ಒಳ ಹೋದರು. ಕೇವಲ ಎರಡು ನಿಮಿಷಗಳಲ್ಲಿ ಒಬ್ಬ ಅಭ್ಯರ್ಥಿಯ ಸಂದರ್ಶನ ಮುಗಿದು ಹೋಗುತ್ತಿತ್ತು!

ಎಂಟೂವರೆಯ ಹೊತ್ತಿಗೆ ನನ್ನ ಜೊತೆಯಲ್ಲಿ ಬಂದಿದ್ದ ಸ್ನೇಹಿತರ ಸಂದರ್ಶನ ಮುಗಿದು ಹೋಯಿತು. ’ಇದೇನು ಸದರ್ಶನವೋ? ನಾಟಕವೋ?’ ಎನ್ನುತ್ತಲೇ ಹೊರ ಬಂದರು. ನಾನು ಸಮಯ ನೋಡಿಕೊಂಡಿದ್ದೆ. ಸರಿಯಾಗಿ ಒಂದೂಮುಕ್ಕಾಲು ನಿಮಿಷದಲ್ಲಿ ಅವರು ಹೊರಗೆ ಬಂದಿದ್ದರು! ಒಳ ಹೋದ ತಕ್ಷಣ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಒಬ್ಬರು ಅಂಕಪಟ್ಟಿಗಳಿದ್ದ ಫೈಲನ್ನು ಕೈಯಿಂದ ಕಸಿದುಕೊಂಡರಂತೆ. ಆದರೆ ಅದನ್ನು ತೆಗೆದು ನೋಡುಲೇ ಇಲ್ಲವಂತೆ. ನಂತರ ಮೂರೇ ಪ್ರಶ್ನೆ. ನಿಮ್ಮ ಪಿಹೆಚ್.ಡಿ. ವಿಷಯ ಯಾವುದು? ಗೈಡ್ ಯಾರು? ಏನು ವಿಶೇಷ? ನಂತರ ನೀವಿನ್ನು ಹೋಗಬಹುದು ಎಂಬ ವಿದಾಯ ವಾಕ್ಯ. ಸಾಹಿತಿಯೊಬ್ಬರ ಕೃತಿಗಳ ಹಿನ್ನೆಲೆಯಲ್ಲಿ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು, ವೈರುದ್ಧ್ಯಗಳು, ಚಳುವಳಿಗಳ ಬಗ್ಗೆ ಒಳ್ಳೆಯ ಮಹಾಪ್ರಬಂಧ ಬರೆದು ಪಿಹೆಚ್.ಡಿ. ಪದವಿ ಗಳಿಸಿರುವ ನನ್ನ ಗೆಳೆಯರೊಬ್ಬರಿಗೆ ಸಂದರ್ಶನ ನಡೆಯುವಾಗ ಕೇವಲ ಎರಡೇ ನಿಮಿಷದಲ್ಲಿ ಬಿರುಸಿನ ಮಾತು ಕಥೆಗಳಾದವಂತೆ. ಆ ಅಭ್ಯರ್ಥಿ ಕೊಠಡಿಯಿಂದ ಹೊರ ಬರುವಾಗ ’ಎಷ್ಟೇ ಆಗಲಿ ಅವರ ಶಿಷ್ಯರಲ್ಲವೆ?’ ಎಂದು ಮೂದಲಿಕೆಯ ದನಿಯೂ ಹಿಂಬಾಲಿಸಿತಂತೆ!

ಒಂಬತ್ತು ಗಂಟೆಯ ಹೊತ್ತಿಗೆ ಒಳಗೆ ಕಳುಹಿಸಲು, ದಾಖಲೆಗಳ ಪರಿಶೀಲನೆ ಮುಗಿದಿರುವ ಅಭ್ಯರ್ಥಿಗಳೇ ಇರಲಿಲ್ಲ!

ಮತ್ತೆ ವಿ.ಸಿ.ಯವರು ಮತ್ತೆ ಹೊರಬಂದರು. ಮತ್ತೊಂದು ಟೇಬಲ್ ಹಾಕಿಸಿ ಬೇಗ ಬೇಗ ಪರಿಶಿಲನೆ ನಡೆಸುವಂತೆ ಸೂಚನೆ ಕೊಟ್ಟು ಒಳ ಹೋದರು. ಸುಮಾರು ಒಂಬತ್ತೂವರೆಗೆ ನಾನು ಸಂದರ್ಶಕರ ಮುಂದಿದ್ದೆ. ಮೇಲೆ ಹೇಳಿದ ಮೂರು ಪ್ರಶ್ನೆಗಳಲ್ಲಿ ಮೊದಲ ಎರಡೂ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೂರನೆಯ ಪ್ರಶ್ನೆ ಸಂಸ್ಕೃತ ಸಂಗೀತ ಕೃತಿಗಳಿಗೆ ಸಂಬಂಧಿಸಿದ್ದಾಗಿತ್ತು. ನಂತರ ಅದೇ ವಿದಾಯ ವಾಕ್ಯ. ಕೇವಲ ಎರಡು ನಿಮಿಷಗಳಲ್ಲಿ ನಾನು ಒಳಗೆ ತೆಗೆದುಕೊಂಡು ಹೋಗಿದ್ದ ನನ್ನ ಪುಸ್ತಕ ಲೇಖನಗಳ ಕಟ್ಟು ಅಂಕಪಟ್ಟಿಗಳನ್ನು ಹಿಡಿದು ಹೊರಬಿದ್ದಿದ್ದೆ.

ಸರಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಡಲು ಸಿದ್ದವಾಗುತ್ತಿದ್ದಾಗ, ನಮ್ಮ ಪರಿಚಿತರೊಬ್ಬರು, ’ನಾನು ಕಾರಿನಲ್ಲಿ ಬಂದಿದ್ದೇನೆ. ಒಟ್ಟಿಗೆ ಹೋಗೋಣ. ನನ್ನದೂ ಸಂದರ್ಶನ ಆಗುವವರೆಗೆ ಕಾಯಿರಿ’ ಎಂದರು.

ಸರಿ ನಾವೂ ಅದೂ ಇದೂ ಮಾತನಾಡುತ್ತಾ ಕುಳಿತೆವು. ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳ ಹೆಸರಿನ ಆಂಗ್ಲ ವರ್ಣಾನುಕ್ರಮಣಿಕೆಯಲ್ಲಿ ನಡೆಯುತ್ತಿತ್ತು. ಆದರೆ ಪರಿಶೀಲಕರ ಸಂಖ್ಯೆ ಒಂದರಿಂದ ಮೂರಾಗಿದ್ದದರಿಂದ, ಅವರು ಅಭ್ಯರ್ಥಿಗಳ ಪಟ್ಟಿಯ ಪುಟಗಳನ್ನು ಹಂಚಿಕೊಂಡಿದ್ದರಿಂದ ನಮಗೆ ಕಾಯಲು ಹೇಳಿದ ಮಿತ್ರರ ಹೆಸರು ಕೆಳಗಿನಿಂದ ಮೂರನೆಯವರದ್ದಾಗಿತ್ತು. ಅಲ್ಲಿಯವರೆಗೆ ಕಾಯಲೇ ಬೇಕಾಗಿತ್ತು. ಬೆಳಿಗ್ಗೆ ನಾಲ್ಕೂವರೆಗೆ ಮನೆ ಬಿಟ್ಟಿದ್ದ ನಾವು (ಅಲ್ಲಿದ್ದ ಬಹುತೇಕರು) ಕಾಫಿ ಬಿಟ್ಟು ಬೇರೇನನ್ನೂ ಕಂಡಿರಲಿಲ್ಲ. ನಮ್ಮ ಮಿತ್ರರ ಸಂದರ್ಶನ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಇನ್ನು ಇಬ್ಬರಿದ್ದು ಅವರದು ಹನ್ನೊಂದೂವರೆಯ ಹೊರೆಯ ಹೊತ್ತಿಗೆ ಮುಗಿಯಬಹುದು ಎಂದುಕೊಂಡು ನಾವು ಕಾರು ಹತ್ತಿದೆವು.

ಬೆಳಿಗ್ಗೆ ಏಳೂವರೆಯಿಂದ ಹನ್ನೊಂದೂವರೆಯವರೆಗೆ ನಡೆದ ಸಂದರ್ಶನದಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅದೂ ವಿಶ್ವವಿದ್ಯಾಲಯವೊಂದರ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ! (ಮಧ್ಯೆ ಸಂದರ್ಶಕರ ಉಪಾಹಾರ, ಎರಡು ಬಾರಿ ಕಾಫಿ/ಟೀ ಸೇವನೆಯೂ ನಡೆಯಿತು! ಆದರೆ ಅಭ್ಯರ್ಥಿಗಳಿಗೆ ತಿಂಡಿಯಿರಲಿ, ೫೦ ಮಿಲಿ ಕಾಫಿಯೂ ಇಲ್ಲ). ಸಂದರ್ಶನ ನಡೆಯುತ್ತಿದ್ದಾಗಲೇ ವಿ.ಸಿ.ಯವರು ಹೊರ ಬಂದು ಒಬ್ಬರ (ಹಿರಿಯರ?) ಜೊತೆಗೆ ಸುಮಾರು ಹತ್ತು ನಿಮಿಷಗಳ ಗಹನ ಚರ್ಚೆ ನಡೆಸಿ ಒಳಹೋಗಿದ್ದು ನಡೆಯಿತು.

ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿ ನಮ್ಮ ಗಮನಕ್ಕೆ ಬಂದ ಹಲವಾರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಇದೇ ಮೊದಲ ಬಾರಿ ವಿಶ್ವವಿದ್ಯಾಲಯ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದ ನಾನು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಅಲ್ಲಿದ್ದ ಎಲ್ಲಾ ಸಿಬ್ಬಂಧಿಗಳೂ ಯಾವುದೋ ಅವಸರದಲ್ಲಿದ್ದವರಂತೆ ಕಾಣುತ್ತಿದ್ದರು. ಅಲ್ಲಿದ್ದವರೆಲ್ಲ ಎಷ್ಟು ಅವಸರದಲ್ಲಿದ್ದಂದರೆ, ಅಭ್ಯರ್ಥಿಗಳ ಬ್ಯಾಗು ಸೂಟ್‌ಕೇಸುಗಳನ್ನು ವಿವಿಯ ಅಧಿಕಾರಿಗಳೇ ಎತ್ತಿಕೊಡುವುದು ಜೋಡಿಸಿಕೊಡುವುದು ನೋಡಿದರೆ, ’ಇವರೆಲ್ಲಾ ಬೇಗ ಇಲ್ಲಿಂದ ತೊಲಗಿದರೆ ಸಾಕು’ ಎನ್ನುವಂತಿತ್ತು!

ಸ್ವತಃ ವಿ.ಸಿ.ಯವರು ಬಾರೀ ಅವರಸರದಲ್ಲಿದ್ದರು. ಅದಕ್ಕೆ ಅಲ್ಲಿದ್ದ ಅಧಿಕಾರಿಯೊಬ್ಬರು ಕೊಟ್ಟ ಕಾರಣ ಏನು ಗೊತ್ತೆ? ಮಧ್ಯಾಹ್ನ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಸಂದರ್ಶನ ಮುಗಿಸಬೇಕು ಎಂಬುದು! ಆದರೆ ಇದೊಂದು ಕಾರಣವೇ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.

ನಾವು ಗಮನಿಸಿದಂತೆ ಗರಿಷ್ಠ ನಾಲ್ಕೈದು ನಿಮಿಷಗಳಿಗಿಂತ ಯಾರಿಗೂ ಹೆಚ್ಚು ಸಮಯ ಸಂದರ್ಶನ ನಡೆಯಲಿಲ್ಲ. ಒಬ್ಬ ಅಭ್ಯರ್ಥಿಯನ್ನು ಬಿಟ್ಟು! ಬಹುಶಃ ಸಂದರ್ಶಕರು ತಿಂಡಿ ತಿನ್ನುವ ಸಮಯದಲ್ಲಿ ಅವರು ಒಳಹೋಗಿದ್ದರಿಂದ ಇರಬಹುದು ಎಂದು ನಾನು ಭಾವಿಸಿದ್ದೆ. ಆಗ ಅವರಿಗೆ ಸುಮಾರು ಹತ್ತು ನಿಮಿಷ ಹಿಡಿದಿತ್ತು. ಆದರೆ ನಂತರ ಅಲ್ಲಿ ಹರಿದಾಡಿದ ಸುದ್ದಿಗಳು ಮಾತ್ರ ಗಾಬರಿ ಹುಟ್ಟಿಸುವಂತಿದ್ದವು. ಏಕೆಂದರೆ ಆ ಅಭ್ಯರ್ಥಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದ ಆವರಣದಲ್ಲೇ ವಾಸ್ತವ್ಯ ಹೂಡಿದ್ದವರು! ಸರ್ಕಾರದ ಆನ್‌ಲೈನ್ ವಿಶ್ವಕೋಶ ಖಜಾನೆಗೂ ಕೆಲಸ ಮಾಡುತ್ತಿರುವವರು. ಅವರಿಗೆ ಒಂದು ಪೋಸ್ಟ್ ಗ್ಯಾರಂಟಿ ಎಂಬಬುದು ಇನ್ನೂ ಗಾಬರಿ ಹುಟ್ಟಿಸುವಂತಿತ್ತು. ಅದರ ಜೊತೆಗೆ ಅವರ ನಡುವಳಿಕೆಯೂ ಅದಕ್ಕೆ ಪೂರಕವಾಗಿತ್ತು. ಸುಮಾರು ಎಂಟು ಗಂಟೆ ಇಪ್ಪತ್ತು ನಿಮಿಷಕ್ಕೆ ಅವರ ಸಂದರ್ಶನ ಮುಗಿದರೂ ಅವರು ಹನ್ನೊಂದುವರೆಯವರೆಗೂ ಅಲ್ಲಿಂದ ಅಲುಗಲಿಲ್ಲ. ಬೇರೆಯವರ ಜೊತೆ ಅಷ್ಟೊಂದು ಬೆರೆಯಲೂ ಇಲ್ಲ. ಅಲ್ಲಿದ್ದ ವಿವಿಯ ಬೇರೆ ಬೇರೆ ಅಧಿಕಾರಿಗಳ ಜೊತೆಯಲ್ಲಷ್ಟೇ ಮಾತು. ಹೆಚ್ಚು ಹೊತ್ತು ಕುರ್ಚಿಯಲ್ಲಿ ಒಬ್ಬರೇ ಕುಳಿತು ಕಾಲ ದೂಡುತ್ತಿದ್ದರು. ಜೊತೆಗೆ ’ತುಮಕೂರು ವಿವಿಯ ಅಫಿಲಿಯೇಟೆಡ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಯೊಬ್ಬರಿಗೆ ಒಂದು ಪೋಸ್ಟ್ ಈಗಾಗಲೇ ಬುಕ್ ಆಗಿದೆ’ ಎಂಬ ಸುದ್ದಿಯೂ ಅಲ್ಲಿ ಹಬ್ಬಿಬಿಟ್ಟಿತ್ತು! ಪಾಪ, ನಿಜವಾದ ಅರ್ಹತೆಯಿದ್ದರೂ ಅವರನ್ನು ಅನುಮಾನದಿಂದ ನೋಡುವದಂತೂ ತಪ್ಪುವುದಿಲ್ಲ.

ಯಾರೋ ಒಬ್ಬರು ಸ್ವಲ್ಪ ಜೋರಾಗಿಯೇ ’ಒಂದು ವಿವಿಯ ಉಪನ್ಯಾಸಕರಿಗೆ ನಡೆಸುವ ಸಂದರ್ಶನದಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲು ಒಂದು ನಿಮಿಷದ ಕಾಲಾವಕಾಶವೂ ಇಲ್ಲ! ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ! ಎಲ್ಲಾ ವ್ಯವಸ್ಥಿತ ನಾಟಕವಾಡುತ್ತಿದ್ದಾರೆ. ಇನ್ನು ಕೇವಲ ನಾಲ್ಕೇ ದಿನಗಳಲ್ಲಿ ಲಿಸ್ಟ್ ಅನೌನ್ಸ್ ಮಾಡಿ, ಐದನೇ ದಿನದಲ್ಲಿ ಅವರೆಲ್ಲಾ ಡ್ಯೂಟಿ ರಿಪೋರ‍್ಟ್ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಕೆಲವು ವಿಷಯಗಳಿಗೆ ನಡೆದ ಸಂದರ್ಶನದಲ್ಲಿ ಹೀಗೆಯೇ ಆಗಿದೆ. ಕೋರ್ಟಿನವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ’ ಎಂದು ಗೊಣಗಿದರು. ಅಷ್ಟರಲ್ಲಿ ಇನ್ನೊಬ್ಬರು ’ಆರ್.ಎಸ್.ಎಸ್. ಮಂತ್ರಿ; ಆರ್.ಎಸ್.ಎಸ್. ವಿ.ಸಿ.’ ಎಂದು ಏನೇನೋ ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ ಎಲ್ಲಿ ಏನೇ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಂದು ಬಿಡುತ್ತದೆ. ಅಷ್ಟರ ಮಟ್ಟಿಗೆ ರಾಜಕೀಯ ಎಲ್ಲವನ್ನೂ ಹೊಲಸೆಬ್ಬಿಸಿಬಿಟ್ಟಿದೆ. ವಿವಿಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ರಾಜಕೀಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ದುರದೃಷ್ಟವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ನಿಜವೂ ಆಗಿಬಿಡುವುದು.

ಕೇವಲ ಸುಮಾರು ೨೦೦ ರಿಂದ ೨೪೦ ನಿಮಿಷಗಳಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ - ವಿಶ್ವವಿದ್ಯಾಲಯವೊಂದರಲ್ಲಿ ಕಾರ್ಯ ನಿರ್ವಹಿಸಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ - (ಸರಾಸರಿ ಒಬ್ಬರಿಗೆ ೩ ರಿಂದ ೩.೫ ನಿಮಿಷ ಮಾತ್ರ; ಅವರು ಒಳ ಹೋಗುವ, ಹೊರ ಬರುವ ಸಮಯ, ಕಾಫಿ ತಿಂಡಿಯ ಸಮಯ ಕಳೆದರೆ ಸರಾಸರಿ ಎರಡೂವರೆ ನಿಮಿಷಕ್ಕೆ ಇಳಿಯುತ್ತದೆ!) ಸಂದರ್ಶನ ನಡೆಸಿ ತುಮಕೂರು ವಿವಿ ವಿಶ್ವದಾಖಲೆಗೆ ಅರ್ಹವಾಗಿದೆ. ಅದಕ್ಕೆ ನೀವೂ ಒಂದಷ್ಟು ಅಭಿನಂದನೆ ಸಲ್ಲಿಸಿಬಿಡಿ!

10 comments:

PARAANJAPE K.N. said...
This comment has been removed by the author.
PARAANJAPE K.N. said...

ನಿಮ್ಮ inteview ಬಗ್ಗೆ ಹೋಗಿ ಬ೦ದು ತಿಳಿಸಿ ಎ೦ದು ನಾನು ಹೇಳಿದ್ದೆ. ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಈ ರೀತಿ ಸ೦ದರ್ಶನ ನಾಟಕ ನಡೆಸುವ ವಿ.ವಿ. ಕ್ರಮ ಅಭಿನ೦ದನಾರ್ಹ. ಇ೦ಟರ್ ವ್ಯೂಹ ದ ಒಳ-ಹೊರಗನ್ನು ಚೆನ್ನಾಗಿ ಅನಾವರಣ ಮಾಡಿದ್ದೀರಿ.

Unknown said...

ಹಾ ಹಾ.. ನಿಮ್ಮ ಇಂಟರ್ವ್ಯೂ ಪುರಾಣ ಚೆನ್ನಾಗಿದೆ.. ೨ ನಿಮಿಷಕ್ಕೆ ಒಂದು ಇಂಟರ್ವ್ಯೂ.. ಹುಹ್ ಅಮೋಘ..

Prabhu Iynanda said...

ಇದ್ಯಾವ ರೀತಿಯ ದೂರಪ್ಪಾ! ನಿಧಾನವಾಗಿ ಕೆಲ್ಸ ಮಾಡಿದ್ರೆ ವಿಧಾನಸೌಧಾನ ನಿಧಾನಸೌಧಾ೦ತ ಲೇವಡಿಮಾಡ್ತೀರಿ. Record speedನಲ್ಲಿ ಮಾಡಿದ್ರೆ ಅದೂ ಕಷ್ಟಾನೇ! Result ಮೊದ್ಲೇ ನಿರ್ಧಾರವಾಗಿರುತ್ತೆ. ಹಾಗಂತ ಕರೆದು ಕೆಲ್ಸ ಕೊಟ್ಬಿಡೋಕೆ demoncracy ಇಲ್ವಾ? ಬಿಡ್ತೂ೦ತನ್ನಿ. ಕಾಪೀತಿ೦ಡೀ ಹೋಗ್ಲಿ, TA, DA ಕೊಟ್ರಾ? ಇಲ್ವಾ? ಬಿಡಿ. ಸರ್ಕಾರ ದುಡ್ಡುಳಿಸ್ತು. ನಾನಿದಕ್ಕೆಲ್ಲಾ ಒಂದ್ simple solution ಕೊಡ್ತೀನಿ: ಸೆಲ್ ಫೋನ್ ಸಂದರ್ಶನ! ಅದ್ರಲ್ಲಿ ನಿಮ್ಮ ಉಪನ್ಯಾಸ ಕೊಡೋ ಒ೦ದ್ ಪುಟ್ಟ ಸೀನ್ SMS ಮಾಡಬೇಕು! Technology Today, ಸಾರ್ ಇದೂ. Singers ಇಲ್ದೇನೇ film songs record ಮಾಡೋ ಈ ಕಾಲದಲ್ಲಿ candidates ಇಲ್ದೇನೇ interview ಮಾಡೋಕ್ಕಾಗಲ್ವಾ? ಸಮಯ, ಹಣ, ಶ್ರಮ, ಎಲ್ಲಾದ್ರ ಉಳಿತಾಯ! ವಿವಿಯವರು ಇದನ್ನ ಓದ್ತಿದ್ದಾರಾ?

Prabhu Iynanda said...
This comment has been removed by the author.
Prabhu Iynanda said...
This comment has been removed by the author.
balasubramanya said...

ಸರಸ್ವತಿ ದೇಗುಲಗಲ್ಲಿ ಇಂತಹ ಘನಂದಾರಿ ಕೆಲಸ ಮಾಡಿ ಪುಣ್ಯಾ ಕಟ್ಟಿ ಕೊಳ್ಳುತ್ತಿರುವ ಈ ಮಹಾತ್ಮರಿಗೆ .....................??????ವಿಧ್ಯಾ ದೆವಿಯೇ ಇವರನ್ನು ಕ್ಷಮಿಸು.ಸಾದ್ಯವಾದರೆ ನೀವೂ ...................////?????? ಹೋಗ್ಲಿಬಿಡಿ .ಪಾಪ ಇವರೂ ಭಾರತೀಯರೇ ತಾನೇ.

ವನಿತಾ / Vanitha said...

ಹೆಚ್ಚಿನ ಎಲ್ಲ ವಿಶ್ವ ವಿದ್ಯಾನಿಲಯಗಳೂ ಇದೆ ರೀತಿ ಸರ್..record speed interview, selecting candidate ಯಾರು ಎಂದು ಮೊದಲೇ ಗೊತ್ತಿರುತ್ತದೆ...:(

ಸಾಗರದಾಚೆಯ ಇಂಚರ said...

ಕೇವಲ ಬೂಟಾಟಿಕೆ ಅಷ್ಟೇ

ತೂಮಕೂರು ವಿ ವಿ ನಿಜಕ್ಕೂ ಸಾಧನೆ ಮಾಡಿದೆ

ಸುಂದರ ಬರಹ

Lahari said...

ಕಾಸಿದ್ದೋನು ಭಾಸು!! ಎಂಬ ಇತ್ತಿಚಿನ ನಾನ್ನುಡಿಗೆ ಇದು ಒಂದು ಚಿಕ್ಕ sample ಅಷ್ಟೆ ?. ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಯಾವ ರೀತಿಯಲ್ಲಿ ಮಲೀನಗೊಳ್ಳುತ್ತಿದೆ ಎನ್ನುವುದಕ್ಕೆ ನಿಮ್ಮ ಸಂದಶ೵ನವೇ ಸಾಕ್ಷಿ ಎಂದು ಅನಿಸುತ್ತಿದೆ.