ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.
ಪರಬ್ರಹ್ಮಹೃದಯಸರಸಿರುಹೋ
ದರದೊಳಗೊಗೆದಾತನ ಸಿರಿಮೊಗದೊಳು
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ
ಭರದಿಂ ಭವ್ಯಭುಜಂಗರನವಳೊಳ್
ನೆರಪುವ ಕೋವಿದೆ ನರಸುರವಂದಿತೆ
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು
ಯಾರ ಹೃದಯಕಮದಲ್ಲಿ ಜನಿಸಿದಳೋ, ಅಂತಹ ಪರಬ್ರಹ್ಮನ ಸಿರಿಮೊಗದಲ್ಲಿ ಚೆಲುವನ್ನು ತಾಳಿ ಸರಸ್ವತಿಯು ನೆಲಸಿದ್ದಾಳೆ. ಕೈವಲ್ಯಸತಿಗೆ ಸಹಚಾರಿಣಿಯಾಗಿ, ಸಡಗರದಿಂದ ಭವ್ಯಭುಜಂಗರೊಂದಿಗೆ ಸೇರಿಸುವ ನೈಪುಣ್ಯವತಿಯೂ, ನರ ಮತ್ತು ಸುರರಿಂದ ಪೂಜಿಸಲ್ಪಡುವವಳೂ ಆದ ತರುಣೀಮಣಿ ಭಾರತಿ ನೀನು ನಮ್ಮ ಮತಿಗೀವುದು ಮಂಗಳವನು ಎಂಬುದು ಕವಿಯ ಆಶಯ. ಆದರೆ ’ಭುಜಂಗ’ ಎಂಬ ಪದಕ್ಕೆ ವಿಟ, ಜಾರ, ಹಾವು ಮೊದಲಾದ ಅರ್ಥಗಳನ್ನು ಪದಕೋಶದಲ್ಲಿ ಹೇಳಲಾಗಿದೆ. ಆದ್ದರಿಂದ ’ಕೈವಲ್ಯಸತಿಗೆ ಸಹಚರಿಯಾಗಿ ಭರದಿಂ ಭವ್ಯಭುಜಂಗರನವಳೊಳ್’ ಎಂಬ ಮಾತು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ’ಸತಿಯೊಡನೆ ಚೆಲ್ಲಾಟ ವಿಟರಿಗೇನೋ ಸ್ವಾಭಾವಿಕ. ಆದರೆ ಕೈವಲ್ಯ ಸತಿಯೊಡನೆ ಭವ್ಯಭುಜಂಗರು ಚೆಲ್ಲಾಟವಾಡಬಹುದೆ? ಹಾಗಾದರೆ ಅವರು ಭವ್ಯರು ಅಂದರೆ ಜಿನಭಕ್ತರು ಹೇಗೆ? ಕೈವಲ್ಯಸತಿ ಹೇಗೆ? ಮತ್ತು ಇವರನ್ನು ನೆರಪುವುದಕ್ಕೆ ತರುಣೀಮಣಿ ಭಾರತಿ ಕೋವಿದೆಯಾಗಿ ಕೆಲಸ ಮಾಡಬೇಕೆ?’ ಎಂಬ ಪ್ರಶ್ನೆಗಳನ್ನು ರಂ.ಶ್ರೀ.ಮುಗಳಿಯವರು ಎತ್ತಿದ್ದಾರೆ. ಭುಜಂಗ ಪದಕ್ಕೆ ಪತಿ, ಒಡೆಯ ಎಂಬ ಅರ್ಥಗಳು ಇರುವುದನ್ನೂ ನಾವು ಗಮನಿಸಬೇಕಾಗಿದೆ. ಇಲ್ಲಿ ಬರುವವರು ಕೇವಲ ಭುಜಂಗರಲ್ಲ; ಭವ್ಯ ಭುಜಂಗರು. ಅಂದರೆ ಜಿನಭಕ್ತರಾದ ಪತಿಗಳು, ಒಡೆಯರು ಎಂದರ್ಥ. ಆದರೂ ’ಭವ್ಯರೆಂಬ ಪತಿಗಳು’ ಎಂಬ ಅರ್ಥ ಬರುವುದರಿಂದ, ’ಒಬ್ಬ ಸತಿಗೆ ಬಹುಪತಿಗಳು ಎಂಬ ವಿಪರೀತಾರ್ಥವಾಗುತ್ತದೆ’ ಎಂಬ ಮುಗಳಿಯವರ ಪ್ರಶ್ನೆ ಹಾಗೇ ಉಳಿಯುತ್ತದೆ. ನಾವು ಅದನ್ನು ಬೇರೊಂದು ರೀತಿಯಲ್ಲಿ ಪರಿಶೀಲಿಸಬಹುದಾಗಿದೆ. ನಾಗಚಂದ್ರನ ’ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’, ಪಾರ್ಶ್ವಕವಿಯ ’ಅತನುಜಿತಜಿನವದನದಿಂ ನಿರ್ವೃತಿಪಥವ ತೋರಲ್ಕೆತಾಸರಸತಿಯೆನಿಸಿ ಪೊರಮಟ್ಟು ನಿರ್ಮಳರೂಪನಾಂತೀಗ’ ಮತ್ತು ಬಾಹುಬಲಿ ಪಂಡಿತನ ’ಸರಸ್ವತೀ ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ’ ಎಂಬ ಪರಿಕಲ್ಪನೆಗಳನ್ನು ಗಮನಿಸಿದಾಗ, ಸರಸ್ವತಿಯನ್ನು ಮುಕ್ತಿಲಕ್ಷ್ಮಿಗಾಗಿ ಪ್ರಾರ್ಥಿಸುವುದು ಒಂದು ಸಂಪ್ರದಾಯವಾಗಿಯೇ ಬಂದಿರುವುದನ್ನು ಗಮನಿಸಬಹುದು. ಮುಕ್ತಿಸಂಪಾದನೆಗೆ ಸರಸ್ವತಿಯು ನೆರವಾಗುತ್ತಾಳೆ ಎಂಬುದು ಆಶಯ. ಆದ್ದರಿಂದ ಪ್ರಸ್ತುತ ಪದ್ಯದ ವಾಚ್ಯಾರ್ಥವನ್ನು ಮಾತ್ರ ಗಮನಿಸದೆ, ಜಿನಭಕ್ತ(ಭವ್ಯ)ರಾದ ಪತಿಗಳಿಗೆ, ಒಡೆಯರಿಗೆ (ಭುಜಂಗರಿಗೆ) ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ ಎಂದು ಅರ್ಥೈಸುವುದೇ ಸೂಕ್ತ. ಇವರು ಕೇವಲ ಪತಿಗಳು ಅಥವಾ ಒಡೆಯರು ಮಾತ್ರ ಆಗಿರದೆ ಜಿನಭಕ್ತ(ಭವ್ಯ)ರಾದವರು ಎಂಬುದನ್ನು, ಜಿನಭಕ್ತರಿಗೆ ಮೋಕ್ಷಪದವಿ ಸಿಗುತ್ತದೆ ಎಂಬ ಕಲ್ಪನೆಯನ್ನು ಗಮನಿಸಿ, ಪ್ರಸ್ತುತ ಪದ್ಯದಲ್ಲಿ ಮೇಲ್ನೋಟಕ್ಕೆ ಕಾಣುವ ವಿಪರೀತಾರ್ಥನ್ನು ತೊಡೆದು ಹಾಕಬಹುದಾಗಿದೆ. ಮಂಗರಸ ತನ್ನ ’ನೇಮಿಜಿನೇಶನ ಸಂಗತಿ’ಯಲ್ಲಿ ಸರಸ್ವತಿಯನ್ನು ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ’ ಎಂದು ಕರೆದಿದ್ದಾನೆ.
ವಾಣಿ ವೃಜಿನ ಘನತರಕಾಂತಾರ ಕೃ
ಪಾಣಿ ಸಂಸಾರವಾರಿಧಿಗೆ
ದ್ರೋಣಿ ನಿರ್ಮಮಲನಿಶ್ರೇಯೋಮಾರ್ಗ ನಿ
ಶ್ರೇಣಿಗೆ ನಾನೆರಗುವೆನು
ಕಡಿದಾದ ಕಾಡಿನಂತಿರುವ ಕ್ಲೇಶಗಳಿಗೆ ಕಠಾರಿಯಂತೆ ಇರುವವಳು, ಸಂಸಾರವೆಂಬ ಸಮುದ್ರಕ್ಕೆ ದೋಣಿಯಂತೆ ಇರುವವಳು, ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ. ಅವಳಿಗೆ ನಾನು ನಮಸ್ಕರಿಸುತ್ತೇನೆ. ಇಡೀ ಪದ್ಯ ಅಗ್ಗಳನ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ ವಿಸರದ್ದುರ್ಬೋಧರೋದಸ್ವಿನೀ ತರಣದ್ರೋಣಿ ಸಮುನ್ನತಾಕ್ಷಯಪದ ಪ್ರಾಸಾದ ನಿಶ್ರೇಣಿ’ ಎಂಬ ಪದ್ಯದಿಂದ ಪ್ರಭಾವಿತವಾಗಿದೆ. ’ಸಮ್ಯಕ್ತ್ವ ಕೌಮುದಿ’ಯಲ್ಲಿ ಬಂದಿರುವ ’ವಾಣಿವೀಣಾಪಾಣಿ... ಜಿನಮುಖಜನಿತವಾಣಿ ಶಾಸ್ತ್ರಕ್ಷೆಣಿ ಮಾಣದೆನ್ನೆದೆಯಲಿ ನೆಲಸಿ ಸನ್ಮತಿಯೀವುದು’ ಎಂಬ ಪದ್ಯದ ಮೇಲೂ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ....’ ಪದ್ಯದ ಪ್ರಭಾವವಿದೆ. ಜಯನೃಪಕಾವ್ಯದ ’ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ’ ಎಂಬುದಕ್ಕೆ ಪೂರಕವಾಗಿ ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ ಅಂದರೆ ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ’ ಎಂಬ ಮಾತು ಬಂದಿದೆ.
ಅಡಿಗೆಯನ್ನು ಕುರಿತ ಕನ್ನಡದ ಮೊದಲ ಸ್ವತಂತ್ರ ಕೃತಿ ’ಸೂಪಶಾಸ್ತ್ರ’ವನ್ನು ಮಂಗರಸನು ರಚಿಸಿದ್ದಾನೆ. ಕೃತಿಯ ಎರಡನೇ ಪದ್ಯದಲ್ಲಿಯೇ ಸೂಪಶಾಸ್ತ್ರಕ್ಕನುಗುಣವಾಗಿ ಸರಸ್ವತಿಯನ್ನು ನೆನೆಯುತ್ತಾನೆ.
ನವ ಕವೀಶ್ವರ ವಿಕಸಿತಾನನ ಘಟಂಗಳೊಳು
ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ
ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು
ತವೆ ಪಾಕಮಂ ಮಾಡಿ ರಸಿಕಜನಸಂತತಿಯ
ಕಿವಿಗೆ ತೀವುವ ಭಾರತೀದೇವಿಯಂ ನೆನೆದು
ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು
ಹೊಸ ಕವೀಶ್ವರರ ನಗುವಿನಿಂದ ಬಿರಿದ ಮುಖಗಳೆಂಬ ಪಾತ್ರೆಗಳಲ್ಲಿ ನವರಸಗಳನ್ನು ಹಾಕಿ, ಚಾತುರ್ಯ, ದರ್ಶನ (ಶೋಭೆ) ಮೊದಲಾದ (ಕಾವ್ಯ) ಪರಿಕರಗಳೊಂದಿಗೆ ಕಲೆಸಿ, ಬಳಿಕ ಅವರ (ಹೊಸ ಕವೀಶ್ವರರ) ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಒಳ್ಳೆಯ ಅಡುಗೆಯನ್ನು (ಕಾವ್ಯವನ್ನು) ಮಾಡಿ (ಹೇಳಿಸಿ), ರಸಿಕ ಜನರ ಬಾಯಿಗೆ (ಕಿವಿಗೆ) ತುಂಬುವ ಭಾರತಿ(ಸರಸ್ವತಿ)ಯನ್ನು ಸ್ತುತಿಸಿ, ರುಚಿಯಿಂದ, ಷಡ್ರಸಗಳಿಂದ ಕೂಡಿದ ಪಾಕ ವಿಶೇಷಗಳನ್ನು ತಿಳಿದ ಮಟ್ಟಿಗೆ ಹೇಳುತ್ತೇನೆ ಎಂಬುದು ಮಂಗರಸನ ನಿವೇದನೆ. ಸರಸ್ವತಿಯನ್ನು (ಕಾವ್ಯವೆಂಬ) ಪಾಕಶಾಸ್ತ್ರಪ್ರವೀಣೆಯಾಗಿಸಿರುವುದು ಕವಿಯ ಚಮತ್ಕಾರವನ್ನು ತೋರಿಸುತ್ತದೆ. ಜೊತೆಗೆ ಸರಸ್ವತಿಗೆ ಹೊಸತೆರನಾದ ಆದರೆ ವಿಶೇಷವಾದ ಪಾತ್ರವನ್ನೂ ಕಲ್ಪಿಸುತ್ತದೆ.
3 comments:
ಸುಂದರ ಬರಹ ಸರ್
ಹಳಗನ್ನಡದ ಕೃತಿಗಳ ಅಧ್ಯಯನ ನಿಜಕ್ಕೂ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತೆ. ನೀವು ಆಗಾಗ ಹೀಗೆ ಬರೆದದನ್ನು ಓದುವದಕ್ಕೆ ಖುಶಿಯಾಗುತ್ತದೆ.
ಸರ್ ಸೂಪಶಾಸ್ತ್ರ ಪುಸ್ತಕ ಎಲ್ಲಿ ಸಿಗುತ್ತದೆ?
Post a Comment