ರಸ್ತೆ ಬದಿಯ ಕನಸುಗಾರಇಂದು ಬೆಳಿಗ್ಗೆಯಿಂದಲೂ ನನ್ನೊಳಗೆ ಯುದ್ಧ ನಡೆಯುತ್ತಲೇ ಇತ್ತು. ಇದು ಕಥೆಯೊಂದು ಹುಟ್ಟುವ ಪರಿ ಎಂದು ನನ್ನಷ್ಟಕ್ಕೆ ನಾನು ಕಂಡುಕೊಂಡ ಒಂದು ವ್ಯಯಕ್ತಿಕ ಸತ್ಯ. ಸುಮಾರು ಮೂರು ವರ್ಷಗಳಿಂದ ನನಗೆ ಗೊತ್ತಿಲ್ಲದಂತೆಯೇ ಒಂದು ಹವ್ಯಾಸವಾಗಿ ಬೆಳೆದು ಬಂದಿದ್ದ ಒಂದು ಅಭ್ಯಾಸವನ್ನು ನೆನ್ನೆ ಮೊದಲ ಬಾರಿಗೆ ಸ್ವಪ್ರಯತ್ನದಿಂದ ತಪ್ಪಿಸಿದ್ದೆ.
ನೀವು ಎಂದಾದರು ಬೆಂಗಳೂರಿನ ಮುಖ್ಯ ರೈಲ್ವೆ ನಿಲ್ದಾಣದಿಂದ ಹೊರ ಬಂದು, ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್‌ನಿಲ್ದಾಣದ ಮೇಲು ಸೇತುವೆಯ ಮೇಲೆ ನಡೆದುಕೊಂಡು ಬಂದು ಕೊನೆಯಲ್ಲಿ ಕೆಳಕ್ಕೆ ಇಳಿಯಲು ಎಡಕ್ಕೆ ತಿರುಗಿ, ಹಾಗೆಯೇ ಮುಖನೇರವಾಗಿ, ಸಿಟಿ ಬಸ್‌ನಿಲ್ದಾಣದ ಕಾಂಪೋಂಡು ಗೋಡೆಗೇ ಅಂಟಿಕೊಂಡಂತೆ ನಡೆದು ಹೋಗಿರುವವರಾದರೆ, ಆಗ ಸಂಜೆಯಾಗಿದ್ದಲ್ಲಿ, ಅಲ್ಲಿ ಒಂದು ಕಡೆ ರಸ್ತೆಯಲ್ಲಿಯೇ ಗಾಜಿನ ಲೋಟದೊಳಗೆ ಇಟ್ಟ ನಾಲ್ಕೈದು ಮೇಣದಬತ್ತಿಗಳು ಉರಿಯುತ್ತಿರಿವುದನ್ನು ಕಂಡಿರುತ್ತೀರಿ. ಹತ್ತಿರ ಹೋಗಿ ನೋಡಿದಿರಾದರೆ, ಕೇವಲ ಎರಡು ಅಥವಾ ಮೂರು ಬಣ್ಣಗಳನ್ನಷ್ಟೇ ಬಳಸಿ, ನೆಲವನ್ನೇ ಕ್ಯಾನ್ವಾಸನ್ನಾಗಿಸಿ ಬೃಹತ್ ಚಿತ್ರವೊಂದನ್ನು ಬಿಡಿಸಿರುವುದನ್ನು ಕಾಣಬಹುದು. ನಾನು ಗಮನಿಸಿರುವಂತೆ ಇದ್ದಿಲು ಪುಡಿ, ಇಟ್ಟಿಗೆ ಚೂರು ಮತ್ತು ಮರಳು ಇವಿಷ್ಟೇ ಅಲ್ಲಿ ಬಳಕೆಯಾಗಿರಬಹುದಾದ ಸಾಮಗ್ರಿಗಳು. ಇಡೀ ಚಿತ್ರ ಕಾಣಲಿ ಎಂಬತೆಯೋ, ಅಥವಾ ಅಲಂಕಾರದ ಒಂದು ಭಾಗವಾಗಿಯೋ ಈ ಮೇಣದಬತ್ತಿಗಳನ್ನು ಉರಿಸಲಾಗುತ್ತದೆ.
ನಮ್ಮ ಫ್ಯಾಕ್ಟರಿಯ ಬಸ್ ಪ್ರತಿದಿನ ಸಂಜೆ ಆರೂವರೆ ಏಳು ಗಂಟೆಗೆಲ್ಲ ನನ್ನನ್ನು ರೈಲ್ವೆ ನಿಲ್ದಾಣದ ಮುಂಬಾಗಕ್ಕೆ ತೀರಾ ಎಡಬದಿಗೆ ಇರುವ ಸರ್ಕಲ್ಲಿನಿಂದ ಮುಂದಕ್ಕೆ ಇಳಿಸಿ ಹೋಗುತ್ತಿತ್ತು. ಅಲ್ಲಿಂದ ನಿಧಾನಕ್ಕೆ ಕಾಲೆಳೆದುಕೊಂಡು ಸಿಟಿ ಬಸ್ ಸ್ಟ್ಯಾಂಡಿಗೆ ಬರಬೇಕಾಗಿದ್ದ ನನಗೆ, ಆ ಮಾರ್ಗ ಮದ್ಯದಲ್ಲಿ ಹೀಗೆ ರಸ್ತೆಯಲ್ಲಿಯೇ ಅದ್ಭುತವಾಗಿ ಬೃಹತ್ ಚಿತ್ರಗಳನ್ನು ಬಿಡಿಸಿರುವದನ್ನು ಐದತ್ತು ನಿಮಿಷ ನಿಂತು ನೋಡುವ ಅಭ್ಯಾಸ ನನಗೇ ಗೊತ್ತಿಲ್ಲದಂತೆ ಬೆಳೆದುಬಿಟ್ಟಿತ್ತು. ಅಲ್ಲಿ ಸಾಮನ್ಯವಾಗಿ ಗಣಪತಿ ಅಥವಾ ಆಂಜನೇಯನ ಚಿತ್ರಗಳನ್ನು ಹೆಚ್ಚಾಗಿ ಬಿಡಿಸಲಾಗುತ್ತಿತ್ತು. ಒಮ್ಮೊಮ್ಮೆ ರಾಮ, ಕೃಷ್ಣ, ಸಿಂಹದ ಮೇಲಿನ ಚಾಮುಂಡಿ, ಕಾಗೆಯ ಮೇಲಿನ ಶನೈಶ್ಚರ ಚಿತ್ರಗಳೂ ಇರುತ್ತಿದ್ದವು. ದಾರಿಯಲ್ಲಿ ಬರುವವರಲ್ಲಿ, ಹೋಗುವವರಲ್ಲಿ ಆಸಕ್ತಿಯಿದ್ದವರು ಒಂದೆರಡು ಕ್ಷಣ ನಿಂತು ನೋಡಿ ಮುಂದುವರೆಯುತ್ತಿದ್ದರು. ನೋಡಿ ಸಂತೃಪ್ತರಾದ ಕೆಲವು ಉದಾರ ಸಹೃದಯರು ಐವತ್ತು ಪೈಸೆ, ಒಂದು ಅಥವಾ ಎರಡು ರುಪಾಯಿಗಳನ್ನು ಚಿತ್ರದ ಮೇಲೆ ಎಸೆದು ಹೋಗುತ್ತಿದ್ದರು. ಒಂದಷ್ಟು ದುಡ್ಡು ಕೂಡುತ್ತಿದ್ದಂತೆಯೆ, ಅಲ್ಲಿಯೇ ಕುಳಿತಿದ್ದ ಮುದುಕನಾಗಲಿ ಅಥವಾ ಅವನ ಜೊತೆಯಲ್ಲಿದ್ದ ಸುಮಾರು ಹದಿನೆಂಟು ವರ್ಷದ ಹುಡುಗನಾಗಲಿ ದುಡ್ಡನ್ನು ಒಟ್ಟಾಗಿಸಿ ಪ್ಲಾಸ್ಟಿಕ್ ಚೀಲವೊಂದಕ್ಕೆ ತುಂಬಿಕೊಳ್ಳುತ್ತಿದ್ದರು. ಪ್ರತಿದಿನ ನಾನು ಬರುವಷ್ಟರಲ್ಲಿ ಚಿತ್ರ ಪೂರ್ಣವಾಗಿರುತ್ತಿದ್ದರಿಂದ ಅವರಲ್ಲಿ ಯಾರು ಚಿತ್ರಕಾರರು ಎಂದು ನನಗೆ ಬಹುದಿನಗಳವರಗೆ ತಿಳಿದೇ ಇರಲಿಲ್ಲ.
ಚಿತ್ರ ಕೃಪೆ : ಎಲಿಷ್ಮಾ
ಹೀಗೆ ಸುಮಾರು ಐದಾರು ತಿಂಗಳು ಕಳೆದಿರಬಹುದು. ಆ ಮುದುಕನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆಗಳಿದ್ದವೋ ಏನೋ ಗೊತ್ತಿಲ್ಲ. ಒಂದು ದಿನವೂ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಹುಡುಗನೂ ಅಷ್ಟೆ. ಆದರೆ ಹುಡುಗ ಚಿತ್ರವಿಚಿತ್ರವಾದ ಬಟ್ಟೆಗಳನ್ನು ತೊಡುತ್ತಿದ್ದನು. ಅವೆಲ್ಲವೂ ಬೇರೊಬ್ಬರು ತೊಟ್ಟುಬಿಟ್ಟಿದ್ದ ಉಡುಪುಗಳೆಂದು ಸುಲಭವಾಗಿ ಗೊತ್ತಾಗುತ್ತಿತ್ತು. ಆದರೆ ಅವುಗಳನ್ನು ಮಡಿಯಾಗಿಸಿ, ಇಸ್ತ್ರಿ ಮಾಡಿಸಿ ಹಾಕಿಕೊಳ್ಳುತ್ತಿದ್ದನಾದ್ದರಿಂದ ಒಂದು ರೀತಿಯ ಅವ್ಯಕ್ತವಾದ ಆಕರ್ಷಣೆ ಆ ಎಣ್ಣೆಗೆಂಪು ಮುಖದಲ್ಲಿತ್ತು. ಹಗಲುಗನಸಿನ ಅಮಲಿನಲ್ಲಿರುತ್ತಿದ್ದ, ತೀಕ್ಷ್ಣವಾದ ಕಣ್ಣುಗಳುಳ್ಳ ಆ ಹುಡುಗನ ಹೆಸರೇನೆಂದು ನನಗೆ ಈಗಲೂ ಗೊತ್ತಿಲ್ಲ. ಆದರೆ ಆತನಿಗೆ ಸರಿಯಾದ ಅವಕಾಶವಿದ್ದಿದ್ದರೆ ಒಳ್ಳೆಯ ವಿದ್ಯಾವಂತನಾಗಿ ಮುಂದೆ ಬರುವವನಿದ್ದ ಎಂದು ನನಗೆ ಅನ್ನಿಸಿದ್ದಿದೆ. ಪ್ರಾರಂಭದ ವರ್ಷದಲ್ಲಿ ಅವರಿಬ್ಬರ ದಿವ್ಯ ನಿರ್ಲಕ್ಷವನ್ನು ಗಮನಿಸಿದ ನನಗೆ, ಇವರಿಬ್ಬರು ನನ್ನನ್ನು ಗಮನಿಸಿದ್ದಾರೆಯೆ? ನಿತ್ಯವೂ ಬಂದು, ನಿಂತು ನೋಡುವದಲ್ಲದೆ, ಒಂದು ರುಪಾಯಿಯನ್ನು ಹಾಕಿ ಹೋಗುತ್ತಿದ್ದೆ. ಆಗ ನನಗೆ ಗೊತ್ತಿಲ್ಲದಂತೆ ನನಗೆ ಅಂಟಿಕೊಂಡ ವಿಚಿತ್ರ ಚಟವೆಂದರೆ ಚಿತ್ರ ಚೆನ್ನಾಗಿದ್ದ ದಿನ ಐದು ರುಪಾಯಿಯವರೆಗೂ ಹಾಕುತ್ತಿದ್ದೆ. ಇನ್ನೊಂದು ಅಂಶವೆಂದರೆ, ಚಿತ್ರದ ಯಾವ ಭಾಗ ನನ್ನ ದೃಷ್ಟಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಅನ್ನಿಸುತ್ತದೆಯೋ ಆ ಭಾಗಕ್ಕೇ ಹಣವನ್ನು ಹಾಕುತ್ತಿದ್ದೆ. ಈ ವಿಚಿತ್ರವನ್ನು ಪ್ರತಿದಿನ ಗಮನಿಸುತ್ತಿದ್ದ ವೃದ್ದ ಮತ್ತು ಬಾಲಕರಿಬ್ಬರೂ ಮೊದಮೊದಲು ಅದೇ ದಿವ್ಯ ನಿರ್ಲಕ್ಷದಿಂದಿದ್ದರು. ನಂತರದ ದಿನಗಳಲ್ಲಿ ಅವರ ಮುಖದಲ್ಲಿ ಕಂಡೂ ಕಾಣದಂತೆ ಸುಳಿಯುತ್ತಿದ್ದ ಕಿರುನಗೆ ಅವರು ನನ್ನನ್ನು ಗಮನಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಮುದುಕ ಒಮ್ಮೊಮ್ಮೆ ಮುಂದುವರೆದು ಎದೆಯ ಮೇಲೆ ಬಲಗೈಯನ್ನಿಟ್ಟು ತುಸು ತಲೆ ಬಾಗಿಸಿ ನಮಸ್ಕರಿಸುವ ಕ್ರಿಯೆಯಲ್ಲಿ ತೊಡಗುತ್ತಿದ್ದುದುಂಟು. ಆತನಿಗೆ ತನ್ನ ಚಿತ್ರಕ್ಕೊಬ್ಬ ನಿತ್ಯಸಹೃದಯನೊಬ್ಬ ಸಿಕ್ಕನೆಂದು ಖುಷಿಯಾಗಿರಬಹುದೆಂದು ನನಗನ್ನಿಸುತ್ತಿತ್ತು. ನಿಜ ಹೇಳಬೇಕೆಂದರೆ ನನಗೆ ಚಿತ್ರಕಲೆಯ ಬಗ್ಗೆ ಯಾವ ಪ್ರಾಥಮಿಕ ಜ್ಞಾನವೂ ಇರಲಿಲ್ಲ. ಚಿತ್ರ ಚೆನ್ನಾಗಿದೆಯೇ ಇಲ್ಲವೇ ಎಂಬುದು ನನ್ನ ಅವತ್ತಿನ ಮನಸ್ಥಿತಿಯನ್ನು ಅವಲಂಬಿಸಿರುತಿತ್ತು ಎಂದು ಈಗ ನನಗನ್ನಿಸುತ್ತದೆ.
ಮೂರು ವರ್ಷಗಳಿಂದ ವಾರದಲ್ಲಿ ಐದು ದಿನ ನಡೆಯುತ್ತಿದ್ದಂತೆ ಮೊನ್ನೆಯೂ ನಮ್ಮ ಫ್ಯಾಕ್ಟರಿಯ ಬಸ್ ನನ್ನನ್ನು ಇಳಿಸಿ ಮುಂದೆ ಹೋದಾಗ ಅಭ್ಯಾಸ ಬಲದಿಂದ ನನ್ನ ಕಾಲುಗಳು ಆ ಚಿತ್ರಕಾರನ ತಾಣದ ಕಡೆಗೆ ನಡೆದವು. ಮನಸ್ಸು ಸಂತೋಷವಾಗಿಯೇ ಇತ್ತು. ಜೇಬಿನಲ್ಲಿ ಕೈಯಾಡಿಸಿದಾಗ ಐದು ರುಪಾಯಿಯ ನಾಣ್ಯವೊಂದು ಸಿಕ್ಕಿ ಅದನ್ನು ಹಾಗೆಯೇ ಮುಷ್ಟಿಯಲ್ಲಿ ಹಿಡಿದುಕೊಂಡು ನಡೆಯುತ್ತಲೇ ಚಿತ್ರವಿರುತ್ತಿದ್ದ ಕಡೆಗೆ ಕಣ್ಣಾಡಿಸಿದೆ. ಆಶ್ಚರ್ಯ! ಮೊದಲ ಬಾರಿಗೆ ಆ ಕನಸುಗಾರ ಹುಡುಗನಿಲ್ಲದೆ ಆ ಮುದುಕನೊಬ್ಬನೇ ಕುಳಿತಿದ್ದ. ಶುಕ್ರವಾರ ಸಂಜೆಯೂ ಆ ಹುಡುಗನಿದ್ದ. ಸೋಮುವಾರ ಸಂಜೆ ಇಲ್ಲ. ಆತ ಎರಡು ದಿನದಿಂದಲೂ ಇಲ್ಲವೋ? ಅಥವಾ ಈ ದಿನ ಮಾತ್ರ ಇಲ್ಲವೋ? ಎಂಬ ಕುತೂಹಲ ನನ್ನಲ್ಲಿ ಮೂಡಿ ಬಲವಾಗತೊಡಗಿತು. ಸಮೀಪ ಬಂದವನು ನಿತ್ಯದಂತೆ ಚಿತ್ರವನ್ನು ಗಮನಿಸದೆ ಆ ಮುದುಕನ ಕಡೆಗೆ ನೋಡುತ್ತಿದ್ದೆ. ನನ್ನ ಮುಖದಲ್ಲಿದ್ದ ಕುತೂಹಲವೇ ಅವನಿಗೆ ‘ಆ ಹುಡುಗನೆಲ್ಲಿ?’ ಎಂದು ಪ್ರಶ್ನೆ ಕೇಳುತ್ತಿತ್ತೋ ಏನೋ? ಯಾವತ್ತೂ ಇಲ್ಲದ ಒಣನಗೆಯನ್ನು ನಕ್ಕು ಬಲಗೈಯನ್ನು ಎದೆಯ ಮೇಲೆ ತಂದು ನಮಸ್ಕರಿಸುವ ಕ್ರಿಯೆಯನ್ನು ಮುಗಿಸಿದವನೇ ‘ಆ ಹುಡುಗನನ್ನು ಹುಡುಕುತ್ತಿದ್ದೀರ ಸ್ವಾಮಿ’ ಎಂದ. ನನಗೆ ಆಶ್ಚರ್ಯವೆನ್ನಿಸಿದ್ದು ಆತನ ಮಧುರವಾದ ದ್ವನಿ. ಬೀದಿ ಬದಿಯ ಜೀವವೊಂದಕ್ಕೆ ಇಷ್ಟೊಂದು ಸುಂದರವಾದ ದ್ವನಿ ಇರುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ‘ಹೌದು’ ಎಂಬತೆ ತಲೆಯಾಡಿಸಿದೆ. ಹತ್ತಿರ ಬರುವಂತೆ ಕೈಯಾಡಿಸಿದನೋ, ಮುಖದ ಹತ್ತಿರ ನೃತ್ಯ ಮಾಡುತ್ತಿದ್ದ ಸೊಳ್ಳೆಯನ್ನು ಓಡಿಸಿದನೋ ಗೊತ್ತಿಲ್ಲ. ನನಗೆ ಹತ್ತಿರ ಹೋಗಬೇಕೆನ್ನಿಸಿ, ಮುಂದೆ ಹೋಗಿ ಅವನಿಗೆ ತೀರಾ ಸಮೀಪದಲ್ಲಿ ರಸ್ತೆಯಿಂದ ಅರ್ಧ ಅಡಿ ಎತ್ತರವಿದ್ದ ಪುಟ್‌ಪಾತಿನ ಮೇಲೆ ಕಷ್ಟಪಟ್ಟು ಕುಳಿತುಕೊಂಡೆ.
‘ನೀವು ಪೇಪರ್ ಓದುವುದಿಲ್ಲವೆ?’ ಎಂದ ಮುದುಕನ ದ್ವನಿಯ ಮಾಧುರ್ಯವನ್ನು ಸವಿಯಬೇಕಾಗಿದ್ದವನಿಗೆ ಪ್ರಶ್ನೆ ಸ್ವಲ್ಪ ಇರುಸುಮುರುಸೆನಿಸಿತು. ಆದರೂ ತೋರಿಸಿಕೊಳ್ಳದೆ ‘ನಾನು ಪತ್ರಿಕೆ ಓದುವುದು ಕಡಿಮೆ. ಪತ್ರಿಕೆಗಳಲ್ಲಿ ಪುಟ ತಿರುವಿದರೆ ಸಾಕು ಕೊಲೆ, ಅತ್ಯಾಚಾರ ಅಪಘಾತಗಳದ್ದೇ ಸುದ್ದಿ ಇರುತ್ತದೆ. ಆದ್ದರಿಂದ ಪತ್ರಿಕೆಗೂ ನನಗೂ ಅಷ್ಟಕ್ಕಷ್ಟೆ’ ಎಂದ ನನಗೆ ಇಷ್ಟೊಂದು ದೀರ್ಘವಾದ ವಿವರಣೆ ಬೇಕಿತ್ತೆ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ.
‘ನೀವು ಕೊಲೆಯ ವಿಚಾರ ಎಂದಿರಲ್ಲ. ಅದೇ ವಿಷಯ. ನೀವು ಕೊಲೆಗಿಲೆ ಎಂದು ಬೇಸರ ಮಾಡಿಕೊಳ್ಳದೆ ಪತ್ರಿಕೆ ಓದುವವರಾಗಿದ್ದರೆ, ನಾನಿಂದು ನನ್ನ ಜೊತೆಯಲ್ಲಿರುತ್ತಿದ್ದ ಹುಡುಗ ಕೊಲೆಯಾದ ವಿಚಾರವನ್ನು ನಾನೇ ಹೇಳಬೇಕಾದ ಪ್ರಸಂಗ ಬರುತ್ತಿತ್ತೆ’ ಎಂದು ನಿಲ್ಲಿಸಿದ. ನನಗೆ ನಿಜವಾಗಿಯೂ ದೊಡ್ಡ ಆಘಾತವೇ ಆಯಿತು. ನಾನು ಕನಸು ಮನಸಿನಲ್ಲೂ ಊಹಿಸಿರದಿದ್ದ ಘಟನೆ ಇದಾಗಿತ್ತು. ನನಗೆ ಏನು ಮಾಡಬೇಕೆಂದಾಗಲಿ, ಮಾತನಾಡಬೇಕೆಂದಾಗಲಿ ತೋಚಲಿಲ್ಲ. ಸುಮ್ಮನ್ನೆ ಮುದುಕನ ಮುಖವನ್ನೇ ಮಿಳಮಿಳನೆ ನೋಡುತ್ತಿದ್ದೆ. ಮುದುಕನೇ ಮುಂದುವರೆದು ‘ಹುಡುಗ ಕೊಲೆಯಾದ. ಅವನ ಆಯಸ್ಸೇ ಅಷ್ಟಿತ್ತೊ ಏನೋ’ ಎಂದು ಒಂದು ನಿಡಿದಾದ ನಿಟ್ಟುಸಿರೊಂದನ್ನು ಹೊರಹಾಕಿದ. ‘ಆತ ನಿನ್ನ ಮಗನೇ?’ ಎಂಬ ನನ್ನ ಪ್ರಶ್ನೆ ಮುಗಿಯುವ ಮೊದಲೇ ‘ಇಲ್ಲಾ’ ಎಂಬಂತೆ ಕೈಯಾಡಿಸುತ್ತ, ‘ಮಗನೂ ಅಲ್ಲ, ಸಂಬಂಧಿಯೂ ಅಲ್ಲ. ಹ್ಞೂ. ನನ್ನದು ಅವನದು ಒಂದು ರೀತಿಯ ಕುಂಟ ಕುರುಡನ ಸಂಬಂಧ. ನನಗೆ ನಡೆಯಲಾಗದಿದ್ದರೆ, ಅವನಿಗೆ ದಾರಿ ಕಾಣುತ್ತಿರಲಿಲ್ಲ. ‘ನನ್ನ ಜೊತೆಯಲ್ಲಿ ಗುಡಿಸಲಲ್ಲಿಯೇ ಉಳಿದುಕೊಳ್ಳುತ್ತಿದ್ದ. ಎರಡು ಹೊತ್ತು ಊಟ ಹಾಕುತ್ತಿದ್ದೆ. ಸಮಯ ಕಳೆಯಲು ಚಿತ್ರಕಲೆಯನ್ನು ಹೇಳಿಕೊಡುತ್ತಿದ್ದೆ. ಚಿತ್ರಕಲೆ ಅಂದೆ. ನಮ್ಮದು ಹೊಟ್ಟೆ ಪಾಡಿನದು’ ಎಂದು ನಿಲ್ಲಿಸಿ, ಅಂದು ಬರೆದಿದ್ದ ಆಂಜನೇಯನ ಚಿತ್ರದ ಮೇಲೆಯೇ ನುಗ್ಗಿ ಬರುತ್ತಿದ್ದ ದನವನ್ನು ಕೂಗಿ ಓಡಿಸಿದ. ಮತ್ತೆ ಬಂದು ಕುಳಿತೊಕೊಂಡ ಮುದುಕ ಏನನ್ನೋ ಜ್ಞಾಪಿಸಿಕೊಳ್ಳುತ್ತಿರುವಂತೆ ತಲೆ ಬಗ್ಗಿಸಿ ಮೌನವಾಗಿಬಿಟ್ಟ. ರಸ್ತೆಯಲ್ಲಿ ಓಡಾಡುವ ಜನ ಹೆಚ್ಚಿಗೆ ಇರಲಿಲ್ಲ. ಆದರೆ ಹೋಗುತ್ತಿದ್ದ ಪ್ರತಿಯೊಬ್ಬರೂ ಚಿತ್ರ ನೋಡದಿದ್ದರೂ ನಮ್ಮಿಬ್ಬರನ್ನೇ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಯಾರೊ ಎಸೆದ ನಾಣ್ಯ ಸಿಡಿದು ಆತನ ಪಕ್ಕಕೆ ಬಂದು ಬಿದ್ದಾಗ, ಅದನ್ನು ಎತ್ತಿ ಚಿತ್ರದ ನಡುವಿಗೆಸೆದು ಅವರ ಕಡೆಗೆ ನೋಡಿ ಮುಗುಳನಕ್ಕು, ನನ್ನೆಡೆಗೆ ತಿರುಗಿ ಹೇಳತೊಡಗಿದ.
ನಿಮಗೆ ಗೊತ್ತೆ? ಹುಡುಗನಿಗೆ ಭಯಂಕರವಾದ ಆಸೆಗಳಿದ್ದವು. ಕನಸುಗಳಿದ್ದವು. ಆದರೆ ಅವು ಯಾವೂ ಈಡೇರುವಂತವುಗಳಲ್ಲ. ಆದರೆ ಹುಡುಗ ಅಷ್ಟೇ ಭಯಂಕರವಾದ ಆಶಾವಾದಿಯಾಗಿದ್ದ. ನೋಡುತ್ತಿದ್ದ ಸಿನಿಮಾಗಳ ಪ್ರಭಾವದಿಂದಲೊ ಏನೊ. ‘ನನ್ನ ಜೀವನದಲ್ಲೂ ಪವಾಡ ಸದೃಶ್ಯವಾದ ಘಟನೆ ನಡದೇ ತೀರುತ್ತದೆ’ ಎಂದು ಆಗಾಗ ಹೇಳುತ್ತಿದ್ದ. ದಾರಿಯಲ್ಲಿ ಕಂತೆಗಟ್ಟಲೆ ಹಣ ಸಿಗುವುದು, ಲಾಟರಿಯಲ್ಲಿ ಹಣ ಬರುವುದರಿಂದ ಹಿಡಿದು, ತಾನು ಬೆಂಗಳೂರಿನ ಮೇಯರ್ ಆಗುವವರೆಗೂ ಕನಸು ಕಾಣುತ್ತಿದ್ದ. ಅದರಲ್ಲಿ ಮುಖ್ಯವಾದದ್ದೆಂದರೆ ‘ಯಾರಾದರೊಬ್ಬ ಚೆಲುವೆ ತನ್ನನ್ನು ಇಷ್ಟಪಟ್ಟು ಮದುವೆಯಾಗುತ್ತಾಳೆ’ ಎಂಬುದು. ನಾನೊಮ್ಮೆ ಆತನಿಗೆ ಏಳು ಸಮುದ್ರದಾಚೆಯ ರಾಜಕುಮಾರಿಯ ಕಥೆಯನ್ನು ಹೇಳಿದಾಗ, ‘ನನ್ನ ಜೀವನದಲ್ಲೂ ಅಂಥ ರಾಜಕುಮಾರಿಯೊಬ್ಬಳು ಬರುತ್ತಾಳೆ’ ಎಂದು ಆತ್ಮವಿಶ್ವಾಸದಿಂದಲೇ ನುಡಿದಿದ್ದ. ಇನ್ನೊಮ್ಮೆ ರಾಜಕುಮಾರಿಯೊಬ್ಬಳು ಆನೆ ಆರಿಸಿದ ತಿರುಕನನ್ನು ಮದುವೆಯಾದ ತೆಲಗು ಸಿನಿಮಾವನ್ನು ನೋಡಿ, ಅದು ತನ್ನದೇ ಕಥೆಯೆಂಬಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದ. ನಮ್ಮ ಚಿತ್ರವನ್ನು ನೋಡಿಕೊಂಡು ಮುಂದೆ ಸಾಗುತ್ತಿದ್ದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ. ಪ್ರತಿದಿನ ರಾತ್ರಿ ಮಲಗುವಾಗ, ‘ಈ ದಿನ ಇಷ್ಟು ರಾಜಕುಮಾರಿಯರನ್ನು ನೋಡಿದೆ. ಅದರಲ್ಲಿ ನನ್ನವಳು ಇರಲಿಲ್ಲ’ ಎಂದು ಹೇಳುತ್ತಿದ್ದ. ‘ಈ ರೀತಿಯ ಹುಚ್ಚು ಒಳ್ಳೆಯದಲ್ಲವೊ’ ಎಂದು ನಾನೇನಾದರೂ ಹೇಳಿದರೆ, ‘ನೋಡಿದೆಯಾ, ದೇವರಿಗೂ ನನ್ನ ಹಾಗೆ ಹುಚ್ಚಿದೆ. ಅದಕ್ಕೇ ಆತ ಇಷ್ಟೊಂದು ಸುಂದರಿಯರನ್ನು ಸೃಷ್ಟಿಸಿದ್ದಾನೆ. ಆ ಹೆಣ್ಣುಗಳನ್ನು ನೋಡು. ಎಷ್ಟೊಂದು ಸುಂದರವಾಗಿ, ಮೃದುವಾಗಿ ಇರುತ್ತಾರೆ. ಅವರು ಗಂಡಸರಂತಲ್ಲ. ದೇವರೂ ಹೆಂಗಸರ ಪಕ್ಷಪಾತಿ’ ಎಂದು ಏನೇನೊ ಹೇಳುತ್ತಿದ್ದ. ಹುಡುಗತನ ಎಂದು ನಾನೂ ಸುಮ್ಮನಾಗಿಬಿಡುತ್ತದೆ.
ಆದರೆ ಆತನ ಕನಸು ನನಸಾಗುವ ಹಾಗಿದೆ ಎಂದು ನನಗನ್ನಿಸಿದ್ದು ಕಳೆದ ಸೋಮುವಾರ. ಸುಮಾರು ಒಂದೆರೆಡು ತಿಂಗಳಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದ, ಇವನು ಗಮನಿಸುತ್ತಿದ್ದ ರಾಜಕುಮಾರಿಯೊಬ್ಬಳು ಸೋಮವಾರ ಕರೆದು ಮಾತನಾಡಿಸಿದಳು. ಅಗೊ ಅಲ್ಲಿದೆಯಲ್ಲ, ಆ ದೀಪದ ಕಂಬದ ಕೆಳಗೆ ಒಂದರ್ಧ ಗಂಟೆ ಮಾತನಾಡಿರಬಹುದು. ತಿರುಗಿ ಬಂದವನ ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಖುಷಿಯಿಂದ ತೂರಾಡುತ್ತಿದ್ದ. ಹತ್ತಿರಕ್ಕೆ ಕರೆದು ‘ಏನೊ’ ಎಂದು ಕೇಳಿದಾಗ ‘ನೋಡಿದೆಯಾ, ನನ್ನ ಜೀವನದ ರಾಜಕುಮಾರಿ ಸಿಕ್ಕಿಬಿಟ್ಟಳು. ನಾನು ಹೇಳುತ್ತಿದ್ದ ನನ್ನ ಜೀವನದಲ್ಲಿ ನಡೆಯಬಹುದಾದ ಪವಾಡಗಳಲ್ಲಿ ಇದು ಮೊದಲನೆಯದು’ ಎಂದು ಅವಳೊಂದಿಗೆ ಮಾತನಾಡಿದ್ದೆಲ್ಲವನ್ನೂ ಹೇಳಿದ. ಆ ಹುಡುಗಿಯೊಬ್ಬಳು ಅರ್ಚಕರ ಮಗಳಂತೆ. ಟ್ರಾವೆಲ್ಸೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ. ಐದಾರು ಸಾವಿರ ಸಂಬಳ. ಅವಳು ಅಂದುಕೊಳ್ಳುತ್ತಿದ್ದ ‘ನನ್ನ ಗಂಡ ಇಂಥವನಿರಬೇಕು’ ಎಂಬಂತೆ ನಮ್ಮ ಹುಡುಗನೂ ಇದ್ದಾನಂತೆ, ಆತ ಚಿತ್ರಕಲಾವಿದನಾಗಿರುವುದು ಇನ್ನೂ ಇಷ್ಟವಂತೆ, ಎಂದು ಹೊಗಳಿ ನಾಳೆ ಮತ್ತೆ ಬರುವುದಾಗಿ ಹೇಳಿ ಹೋದಳಂತೆ.
ನಾಳೆ ಮತ್ತೆ ಬಂದಳು. ಮತ್ತದೇ ಕಂಬದ ಕೆಳಗೆ ಮತ್ತಷ್ಟು ಹೊತ್ತು ಮಾತುಕತೆ. ಬಂದವನೆ ‘ನೋಡು ಅವಳು ನನ್ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ ಒಂದು ಸಮಸ್ಯೆಯಂತೆ. ಅವಳು ಕೆಲಸ ಮಾಡುತ್ತಿರುವ ಟ್ರಾವೆಲ್ಸಿನಲ್ಲಿರುವ ಡ್ರೈವರ್ ಒಬ್ಬ ತನ್ನನ್ನೇ ಮದುವೆಯಾಗೆಂದು ಪೀಡಿಸುತ್ತಿದ್ದಾನಂತೆ. ಅದಕ್ಕೆ ಅವಳು ತನಗೀಗಲೇ ಮದುವೆ ಗೊತ್ತಾಗಿದೆ ಎಂದು ಸುಳ್ಳು ಹೇಳಿ ಅವನಿಂದ ಮೊದಲು ದೂರವಾಗುತ್ತಾಳಂತೆ. ಅದಕ್ಕೆ ನನ್ನ ಸಹಾಯ ಬೇಕಂತೆ. ಅದಕ್ಕು ಮೊದಲು ಶನಿವಾರ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಅವಳ ತಂದೆ ತಾಯಿಯರಿಗೆ ತೋರಿಸುತ್ತಾಳಂತೆ’ ಇನ್ನು ಏನೇನೋ ಹೇಳಿದ. ನನಗೂ ಈ ಹುಡುಗನ ಅದೃಷ್ಟವನ್ನು ಕಂಡು ಆಶ್ಚರ್ಯ. ಅದರ ಜೊತೆಗೆ ಆತಂಕವೂ ಇತ್ತು ಎನ್ನಿ. ನಾನೇನನ್ನೇ ಹೇಳಿದರೂ ಅವನು ಕೇಳುವ ಸ್ಥಿತಿಯಲ್ಲಿಲ್ಲವೆಂದು ಸುಮ್ಮನಾಗಿಬಿಟ್ಟೆ.
ನಡುವೆ ಆ ಹುಡುಗಿ ಬುಧವಾರವೂ ಬಂದಳು. ಮಾತುಕತೆ ಏನೆಂದು ಹುಡುಗ ನನಗೆ ಹೇಳಲಿಲ್ಲ. ನಾನೂ ಕೇಳಲಿಲ್ಲ. ಮತ್ತೆ ಶುಕ್ರವಾರ ಬಂದು ಏನು ಹೇಳಿ ಹೋದಳೋ ಗೊತ್ತಿಲ್ಲ. ಬಂದವನೆ ‘ನೋಡು ಇಷ್ಟು ದಿನ ನನಗಾಗಿ ನಾನು ಏನನ್ನೂ ಕೇಳಿಲ್ಲ. ನಾಳೆ ಅವಳ ಮನೆಗೆ ಹೋಗಬೇಕು. ಒಂದು ಜೊತೆ ಒಳ್ಳೆಯ ಬಟ್ಟೆಯನ್ನು ತಗೆದುಕೊಳ್ಳಬೇಕು. ಸ್ವಲ್ಪದುಡ್ಡು ಕೊಟ್ಟುಬಿಡು’ ಎಂದು ಗೋಗರೆದ. ನಾನೂ ಹೋಗಲಿ ಎಂದು ಕೊಟ್ಟುಬಿಟ್ಟೆ. ನಾವು ಮನೆಗೆ ಹೊರಡುವ ಸಮಯ ಯಾರೋ ಇಬ್ಬರು ಬಂದು ಅವನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಒಂದಷ್ಟು ಹೊತ್ತು ಮಾತನಾಡಿದರು. ಅಲ್ಲಿಂದ ಬಂದವನೆ ಬಹಳ ಉದ್ವೇಗದಿಂದ ಕೂಡಿದ್ದ. ಸ್ವಲ್ಪ ಭಯವೂ ಇತ್ತೆನ್ನಿ. ‘ನೋಡು, ಮೊನ್ನೆ ನೋಡಿದ್ದ ಸಿನಿಮಾದಲ್ಲಿ ಹೀರೋಗೆ ಇಬ್ಬರು ರೌಡಿಗಳು ಬಂದು, ಆತ ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡುವಂತೆ ಬೆದರಿಸಿತ್ತಾರಲ್ಲ, ಹಾಗೆ. ಈಗ ಬಂದವರು ನನಗೂ ಅದನ್ನೇ ಹೇಳಿದರು. ಇಂಥ ಘಟನೆಗಳೆಲ್ಲ ನಾಯಕರ ಬದುಕಿನಲ್ಲಿ ನಡೆಯುವಂತವುಗಳು. ಅದಕ್ಕೆ ನಾನೂ ಸಿದ್ದನಾಗಿಯೇ ಇದ್ದೇನೆ. ನಾನು ಅವಳನ್ನು ಮದುವೆಯಾಗುವುದು ಖಂಡಿತ. ಇವರು ಅದೇನು ಕಿತ್ತುಕೊಳ್ಳುತ್ತಾರೊ ಕಿತ್ತುಕೊಳ್ಳಲಿ. ಇದು ನನ್ನ ಜೀವನದ ಎರಡನೆಯ ಪವಾಡ’ ಎಂದು ಏನೇನೋ ಬಡಬಡಿಸಿದ. ನನಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ.
ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಿತ್ಯದಂತೆ ನಾವು ಇಲ್ಲಿಗೆ ಬಂದೆವು. ಹುಡುಗ ಹೊಸಬಟ್ಟೆ ತೊಟ್ಟು ಬಹಳ ಉದ್ವಿಗ್ನನಾಗಿರುವಂತೆ ಕಾಣುತ್ತಿದ್ದ. ಗಳಿಗೆಗೊಮ್ಮೆ ಹೋಗಿಬರುವವರನ್ನು ಟೈಮ್ ಕೇಳುತ್ತ ಅವಳು ಬರುವ ಕಡೆಗೆ ನೋಡುತ್ತ, ನಾನು ಕೇಳುತ್ತಿದ್ದ ಬಣ್ಣಗಳನ್ನು ಯಾಂತ್ರಿಕವಾಗಿ ಎತ್ತಿಕೊಡುತ್ತಿದ್ದ. ನನ್ನ ಪಾಡಿಗೆ ನಾನು ಅಂದು ಶನಿವಾರವಾದ್ದರಿಂದ ಕಾಕವಾಹನ ಶನೈಶ್ಚರ ದೇವರ ಚಿತ್ರವನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದೆ. ಒಂದೂವರೆಯ ಹೊತ್ತಿಗೆ ‘ನೋಡು, ಅವಳು ಬಂದಳು. ನಾನು ಹೋಗುತ್ತೇನೆ’ ಅಂದು ಹೊರಟೇ ಬಿಟ್ಟ. ಕತ್ತೆತ್ತಿ ನೋಡಿದ ನನಗೆ, ಕೈ ಕೈ ಜೋಡಿಸಿ ನಡೆದು ಹೋಗುತ್ತಿದ್ದ ಅವರನ್ನು ಕಂಡು, ಒಳ್ಳೆಯ ಜೋಡಿಯೆ ಎನ್ನಿಸಿತ್ತು. ಆದರೆ ‘ಹೋಗುತ್ತೇನೆ’ ಎಂದು ಹೋದವನು ತಿರುಗಿ ಬರಲಿಲ್ಲ.
ಅವರು ಹೋಗಿ ಸುಮಾರು ಒಂದು ಗಂಟೆಯಾಗಿರಬಹುದು. ರೈಲ್ವೆ ಸ್ಟೇಶನ್ ಕಡೆಯಿಂದ ಬಂದವರಿಬ್ಬರು ಅಲ್ಲೊಂದು ಕೊಲೆಯಾಗಿರುವ ವಿಚಾರವನ್ನು ಮಾತನಾಡಿಕೊಂಡು ಹೋಗುತ್ತಿದ್ದರು. ನನ್ನೊಳಗೆ ಏನೋ ಬರಿದಾಗುತ್ತಿದೆ ಎನ್ನಿಸಿ, ಚಿತ್ರ ನೋಡಲು ನಿಂತರೂ ಕೊಲೆಯ ವಿಷಯವನ್ನೇ ಮಾತನಾಡುತ್ತಿದ್ದ ಅವರ ಮಾತುಗಳಿಗೆ ಕಿವಿಗೊಟ್ಟೆ. ಕೊಲೆಯಾದ ಐದೇ ನಿಮಿಷದಲ್ಲಿ ಅಲ್ಲಿ ಪೋಲೀಸ್ ಬಂದಿದ್ದು ಕೊಲೆಗಾರನನ್ನು ಸ್ಥಳದಲ್ಲಿ ಬಂಧಿಸಿದ್ದು, ಬೆಂಗಳೂರು ಪೋಲೀಸರ ಧಕ್ಷತೆಯ ವಿಚಾರ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಕೊನೆಗೆ ತಡೆಯಲಾರದೆ ‘ಎಲ್ಲಿ ಸ್ವಾಮಿ ಕೊಲೆಯಾಗಿರೋದು’ ಎಂದು ಕೇಳಿಬಿಟ್ಟೆ. ಅದಕ್ಕವರು ‘ರೈಲ್ವೆ ಸ್ಟೆಶನ್ ಪಕ್ಕದಲ್ಲೆ, ಒಂದು ಹುಡುಗಿಗಾಗಿ ಜಗಳವಾಡಿ ಕೊಲೆಯಾಗಿದೆ’ ಅಂದು ಚಿಲ್ಲರೆಯನ್ನು ಚಿತ್ರದ ಮೇಲೆ ಎಸೆದು ನಡೆದುಬಿಟ್ಟರು. ನನಗೆ ಕಣ್ಣಿಗೆ ಕತ್ತಲಿಟ್ಟಂತಾಗಿ, ಎದೆಯಲ್ಲಿ ಸಣ್ಣಗೆ ನೋವು ಕಾಣಿಸಿಕೊಂಡಿತು. ‘ದೇವರೆ ಹಾಗಗದಿರಲಿ’ ಎಂದುಕೊಂಡು ಎದ್ದು ರೈಲ್ವೆ ಸ್ಟೇಶನ್ ಕಡೆ ನಡೆದೆ. ಅಲ್ಲಿ, ಮೈಸೂರು ಕಡೆಯ ಲೈನಿದೆಯಲ್ಲ, ಅಲ್ಲಿ. ಜನಗಳ ದೊಡ್ಡ ಗುಂಪು ಇದ್ದದ್ದನ್ನು ಕಂಡು ಅಲ್ಲಿಗೆ ಓಡಿದೆ. ಇನ್ನು ಮಹಜರು ನಡದೇ ಇತ್ತು. ಯಾವುದು ಆಗದಿರಲಿ ಎಂದು ನಾನು ಅಂದುಕೊಂಡಿದ್ದೆನೋ ಅದೇ ಆಗಿತ್ತು. ರಕ್ತದ ಮಡುವಿನಲ್ಲಿ ನಮ್ಮ ಹುಡುಗ ಬಿದ್ದಿದ್ದ. ಆ ಹುಡುಗಿಯೂ ಅಲ್ಲಿಯೇ ಇದ್ದಳು. ನಾನಂದು ಕೊಂಡಂತೆ ಅವಳು ಬೆದರಿದಂತೆ ಕಾಣಲಿಲ್ಲ. ಯುದ್ಧವೊಂದನ್ನು ಗೆದ್ದ ಯೋಧನ ಮುಖಭಾವವನ್ನು ನಾನು ಅವಳಲ್ಲಿ ಗುರುತಿಸಿದೆ. ಅಲ್ಲೆ ಒಂದು ಕಡೆ ಒಬ್ಬನಿಗೆ ಕೈಕೋಳ ತೊಡಿಸಿ ಕೂರಿಸಿದ್ದರು. ನನಗೆ ಅವನನ್ನು ಎಲ್ಲಿಯೋ ನೋಡಿದ್ದೇನೆ ಅನ್ನಿಸಿ ಸ್ವಲ್ಪ ಹತ್ತಿರ ಹೋಗಿ ಗಮನಿಸಿದೆ. ಹುಡುಗಿ ನಮ್ಮ ಹುಡುಗನಿಗೆ ಹೇಳಿದಂತೆ ಆತ ಡ್ರೈವರ್ ಆಗಿರಲಿಲ್ಲ. ಸಣ್ಣಪುಟ್ಟ ಕಳ್ಳತನ ಮಾಡಿ ಜೈಲು ಕಂಡು ರೌಡಿಯನ್ನಿಸಿಕೊಂಡಿದ್ದ ವೆಂಕಟೇಶನೇ ಆತ. ಅಷ್ಟರಲ್ಲಿ ಹುಡುಗಿಯ ತಂದೆ ಬಂದರೆಂದು ಕಾಣುತ್ತದೆ. ಹುಡುಗಿಯ ಹೇಳಿಕೆ ತಗೆದುಕೊಳ್ಳತೊಡಗಿದರು. ನಾನು ಹೋಗುವಷ್ಟರಲ್ಲಿ ವೆಂಕಟೇಶನ ಹೇಳಿಕೆ ತಗೆದುಕೊಂಡಾಗಿತ್ತಾದ್ದರಿಂದ ಆತ ಏನು ಹೇಳಿದ್ದನೆಂದು ನನಗೆ ಗೊತ್ತಿಲ್ಲ. ಆದರೆ ಹುಡುಗಿ ಮಾತ್ರ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದು ಬಿಟ್ಟಿದ್ದಳು. ಅವಳು ತನ್ನ ಹೇಳಿಕೆಯಲ್ಲಿ ‘ಇವರಾರೊ ನನಗೆ ಗೊತ್ತಿಲ್ಲ. ಯಾವುದೋ ಹುಡುಗಿಯ ವಿಚಾರವಾಗಿ ಪರಸ್ಪರ ವಾದ ಮಾಡಿಕೊಂಡು ನನ್ನ ಹಿಂದೆ ಬರುತ್ತಿದ್ದವರು, ಇದ್ದಕಿದ್ದಂತೆ ಜಗಳಕ್ಕೆ ಬಿದ್ದರು. ಈತ ಅವನನ್ನು ಚಾಕುವಿನಿಂದ ಹಿರಿದು ಕೊಂದುಬಿಟ್ಟ. ಭಯವಾಗಿ ನಾನು ಕಿರುಚಿಕೊಂಡೆ. ದೇವರ ದಯದಿಂದ ಅಷ್ಟರಲ್ಲಿ ಪೋಲೀಸರು ಬಂದು ಈತನನ್ನು ಬಂಧಿಸಿದರು’ ಎಂದು ಪತ್ರಿಕೆಯರ ಮುಂದೆ ನಿರ್ಭೀತಿಯಿಂದ ಹೇಳಿಬಿಟ್ಟಳು.
ಹೆಚ್ಚಿನ ರಿಸ್ಕ್ ತಗೆದುಕೊಳ್ಳಲು ನಾನು ಸಿದ್ದನಿರಲಿಲ್ಲ. ಅದರಿಂದ ನಮ್ಮ ಹುಡುಗ ಸತ್ತವನು ಬದುಕಿ ಬರುತ್ತಲೂ ಇರಲಿಲ್ಲ. ವೆಂಕಟೇಶನನ್ನು ಪೋಲೀಸರು ಸ್ಟೇಶನ್ನಿಗೆ ಕರೆದುಕೊಂಡು ಹೋದರು. ಇತ್ತ ತಂದೆ ಮಗಳು ಮನೆಗೆ ನಡೆದರು. ನಾನು ಆ ದಿನ ಪೂರ್ತಿ ಹೋರಾಟ ಮಾಡಿ, ಕೆಲವರ ಕೈ ಬಿಸಿ ಮಾಡಿ ಹುಡುಗ ನನಗೆ ಸಂಬಂಧಪಟ್ಟವನೆಂದು ನಂಬಿಸಿ, ಹೆಣವನ್ನು ಪಡೆದುಕೊಂಡು ಅಂದು ರಾತ್ರಿಯೆ ಸಂಸ್ಕಾರ ಮಾಡಿಬಿಟ್ಟೆ. ಮರುದಿನ ಪತ್ರಿಕೆಯಲ್ಲಿ ಮಮೂಲು ಸುದ್ದಿಯಾಯಿತು. ‘ಹುಡುಗಿಗಾಗಿ ಕೊಲೆ’ ಎಂದು.
ನಾನು ನಿಟ್ಟುಸಿರು ಬಿಟ್ಟೆ. ‘ನೀನು ನಿಜ ಹೇಳಿಬಿಡಬೇಕಿತ್ತು. ಇದರಿಂದ ಅಪರಾಧಿಗೆ ಶಿಕ್ಷೆ ಆಗುತಿತ್ತು. ನಿಜವಾದ ಅಪರಾಧಿ ಆ ಹುಡುಗಿ. ಕೊನೆಯ ಪಕ್ಷ ಆ ಹುಡುಗಿ ಏಕೆ ಹಾಗೆ ಮಾಡಿದಳು ಎಂದಾದರು ತಿಳಿಯುತಿತ್ತು’ ಎಂದು ನನ್ನ ಸಮಾಧಾನಕ್ಕೊ, ಆತನ ಸಮಾಧಾನ ಮಾಡಲಿಕ್ಕೊ ಎಂಬಂತೆ ಹೇಳತೊಡಗಿದೆ. ನಡುವೆ ಬಾಯಿ ಹಾಕಿದ ಮುದುಕ ‘ಅದು ನನಗೆ ಗೊತ್ತು. ನೆನ್ನೆಯೆಲ್ಲ ಅದೇ ಕೆಲಸವನ್ನು ಮಾಡಿದ್ದೇನೆ. ಆ ಹುಡುಗಿಯ ಅಪ್ಪ ಇದ್ದಾನಲ್ಲ, ಅವನು ಯಾವ ಅರ್ಚಕನೂ ಅಲ್ಲ. ಆಳುವ ಸರ್ಕಾರಕ್ಕೆ ಹತ್ತಿರದವನಾದ ಒಬ್ಬ ಶ್ರೀಮಂತ. ಮರಿ ಪುಡಾರಿ. ಆತ ಮುಂದಿನ ಎಲೆಕ್ಷನ್ನಿನಲ್ಲಿ ಎಂಎಲ್‌ಎ ಆಗುವುದು ಗ್ಯಾರಂಟಿ. ಆತನ ಹೆಸರು ಬೇಡ. ಅದು ನನ್ನಲ್ಲಿಯೇ ಇರಲಿ’ ಎಂದು ಸುಮ್ಮನಾದ. ಆದರೆ ನನಗೆ ಸುಮ್ಮನಿರಲಾಗಲಿಲ್ಲ. ‘ಆತನ ಹೆಸರಾಗಲಿ, ಆತನಾರೆಂದಾಗಲಿ ನನಗೆ ಬೇಡ. ಆದರೆ ಆ ಹುಡುಗಿ ಏಕೆ ಸುಳ್ಳು ಹೇಳಿದಳು. ಅದನ್ನಾದರು ಹೇಳು’ ಎಂದು ಕೇಳಿದೆ. ಸ್ವಲ್ಪ ಹೊತ್ತು ನನ್ನ ಮುಖವನ್ನು ದಿಟ್ಟಿಸಿದ ಮುದುಕನಿಗೆ, ಇದು ನಂಬಬಹುದಾದ ಪ್ರಾಣಿ ಎನ್ನಿಸಿತೇನೊ, ಹೇಳತೊಡಗಿದ. ‘ನೋಡಿ, ಬೆಂಗಳೂರಿನಲ್ಲಿ ನಮಗೇ ಗೊತ್ತಿಲ್ಲದಂತೆ ಈ ಅಂಡರ್‌ವರ್ಡ್ ಹೇಗೆ ಬೆಳಿತಾಯಿದೆ ಅಂತ. ಕೊಲೆಗಾರನಿದ್ದಾನಲ್ಲ, ಅವನು ಮೊದಲೇ ರೌಡಿ. ಈ ಹುಡುಗಿ ಚೆಲ್ಲು. ಇನ್ನು ಕಾಲೇಜಿನಲ್ಲಿ ಓದುತ್ತಿರುವುದು. ಈ ಸೆಕ್ಸ್ ಚಿತ್ರ ಇರುತ್ತಂತಲ್ಲ, ಆ ತರದ ಪೆನ್ನುಗಳನ್ನು ಮಾರೊ ನೆಪದಲ್ಲಿ ಆ ಹುಡುಗಿನ ಪಟಾಯಿಸಿ ಬೆತ್ತಲೆ ಫೋಟೊ ತಗೆದಿದ್ದನಂತೆ. ಮಜ ಮಾಡಲು ಅಪ್ಪ ಕೊಡುತ್ತಿದ್ದ ಕಂತೆ ಕಂತೆ ದುಡ್ಡು ಸಾಲದೆಯೋ ಅಥವಾ ಕೇವಲ ಖುಷಿಗಾಗಿಯೋ ಕಾಣೆ. ಈ ಹುಡುಗಿಯೂ ಒಪ್ಪಿಕೊಂಡಿತ್ತಂತೆ. ಆದರೆ ಆ ಪೋಟೊಗಳನ್ನು ಇಟ್ಟುಕೊಂಡು ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸತೊಡಗಿದ. ಇದರಿಂದ ಎದರಿದ ಹುಡುಗಿ ಮನೆಯಲ್ಲಿ ನೋಡಿದ್ದ ಹುಡುಗನನ್ನು ಮದುವೆಯಾಗಲು ಒಪ್ಪಲಿಲ್ಲ. ಆದರೆ ಅವಳ ಅಪ್ಪ ಇದ್ದಾನಲ್ಲ, ಕ್ರಿಮಿನಲ್ ನನ್ಮಗ ಅವನು. ಕೇವಲ ಎರಡೇ ದಿನದಲ್ಲಿ ಮಗಳು ಮದುವೆ ಬೇಡ ಅನ್ನುತ್ತಿರುವುದಕ್ಕೆ ಕಾರಣ ಹುಡುಕಿದ. ಆದರೆ ದುಡುಕಲಿಲ್ಲ. ಮುಂದಿನ ಎಲೆಕ್ಷನ್ನಿಗೆ ನಿಲ್ಲುವ ಯೋಚನೆಯಲ್ಲಿದ್ದವನಿಗೆ, ಅದು ಬೇಕೂ ಇರಲಿಲ್ಲ. ಮನೆಯ ಮಾತು ಹೊರಬಾರದಂತೆ ಎಚ್ಚರಿಕೆ ವಹಿಸಿದ. ಆದರೆ ಮಗಳನ್ನು ಒಪ್ಪಿಸಿ ವೆಂಕಟೇಶನನ್ನು ನಿವಾರಿಸಲು ಒಂದು ಪ್ಲಾನ್ ಮಾಡಿದ. ಅದಕ್ಕಾಗಿ ಒಂದು ಬಲಿ ಕೊಡಲು ನಿರ್ಧರಿಸಿದ. ಆ ಬಲಿಯೇ ನಮ್ಮ ಹುಡುಗ’ ಎಂದು ಮಾತು ಮುಗಿಸಿದ ಮುದುಕ ಎದ್ದು ಚಿತ್ರದ ಮೇಲೆ ಬಿದ್ದಿದ್ದ ಚಿಲ್ಲರೆ ಕಾಸನ್ನು ಗುಡ್ಡೆ ಹಾಕತೊಡಗಿದ. ಇನ್ನು ಮಾತನಾಡಲು ಏನೂ ಉಳಿದಿಲ್ಲವೆನಿಸಿ ‘ನಾನು ಬರುತ್ತೇನೆ’ ಎಂದು ಹೊರಟೆ. ‘ಒಂದು ನಿಮಿಷ’ ಎಂದ ಮುದುಕನ ಕರೆಗೆ ತಿರುಗಿ ‘ಏನು’ ಎಂಬಂತೆ ನೋಡಿದೆ. ‘ಈ ವಿಷಯ ಗುಟ್ಟಾಗಿರಲಿ. ನಂಗ್ಯಾಕೆ ಬೇಕು ಹೇಳಿ. ಬಡವರ ಕೋಪ ದವಡೆಗೆ ಮೂಲ ಅಂತ. ಅಂದ ಹಾಗೆ ಬರೊ ಭಾನುವಾರಕ್ಕೆ ಎಂಟುದಿನಕ್ಕೆ ಆ ಹುಡುಗಿ ಮದುವೆ. ಬೇಕಾದ್ರೆ ಆ ಹುಡುಗಿ ಹೇಗಿದಾಳೆ ಅಂತ ಹೋಗಿ ನೋಡ್ಕಂಡು ಬನ್ನಿ. ನೀವು ಆಶ್ಚರ್ಯ ಪಡ್ತಿರಾ. ದೇಹಕ್ಕೂ ಮನಸ್ಸಿಗೂ ಎಷ್ಟೊಂದು ಅಂತರ ಅಂತ’ ಎಂದು ಬಗ್ಗಿ ತನ್ನ ಸಾಮಾನುಗಳನ್ನು ಜೋಡಿಸಿಕೊಳ್ಳತೊಡಗಿದ. ಸ್ಟ್ಯಾಂಡಿನ ಕಡೆಗೆ ಕಾಲೆಳೆದುಕೊಂಡು ಹೊರಟವನಿಗೆ ಹಗಲುಗನಸಿನ ಅಮಲುಗಣ್ಣುಳ ಆ ಹುಡುಗನ ಮುಖ ಹೆಜ್ಜೆ ಹೆಜ್ಜೆಗೂ ಮೂಡಿ ಮರೆಯಾಗತೊಡಗಿತು. ಹುಡುಗನಿಗೆ ಅಗಾಧವಾದ ನಂಬಿಕೆಯಿದ್ದ ಪವಾಡಗಳಲ್ಲಿ ಮೂರನೆಯದೂ ನಡೆದು ಹೋಗಿತ್ತು. ಆದರೆ ‘ಇದು ನನ್ನ ಜೀವನದ ಮೂರನೆ ಪವಾಡ’ ಎಂದು ಎದೆ ತಟ್ಟಿ ಹೇಳಿಕೊಳ್ಳಲು ಆತ ಮಾತ್ರ ಇರಲಿಲ್ಲ.
1 comment:
Superbbbbbbbbbbb...Kathe tumbaa chennagide sir....Ishta aitu..
Post a Comment