ನಮ್ಮಲ್ಲಿ ಸಾಹಿತ್ಯ ಮತ್ತು ಸಂಶೋಧನೆಗಳು ಸಮ ಸಮಾನಂತರವಾಗಿ ಮತ್ತು ಸಮೃದ್ಧವಾಗಿ ಪ್ರವಹಿಸುತ್ತಿದ್ದ ಕಾಲವೊಂದಿತ್ತು. ಈಗೀಗ ಸಾಹಿತ್ಯದ ಹೊನಲು ಸಮೃದ್ಧವಾಗಿಯೇ ಇರುವುದಾದರೂ ಸಂಶೋಧನೆಯ ಹೊನಲು ಮೊದಲ ಉಕ್ಕು ಕಳೆದುಕೊಂಡ ಹಾಗಿದೆ. ಅದಕ್ಕೆ ಬಹುಮುಖ್ಯ ಕಾರಣ ಸಂಶೋಧಕ ಗಳಿಸಬೇಕಾದ ಪರಿಣಿತಿ, ನಡೆಸಬೇಕಾದ ನಿರಂತರ ವ್ಯಾಸಂಗ ಮತ್ತು ತ್ವರಿತವಾಗಿ ಸಿಕ್ಕಬಹುದಾದ ಯಶಸ್ಸಿನತ್ತ ಗಮನಹರಿಸದ ನಿತಾಂತ ಶ್ರದ್ಧೆ ಹೊಸಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದು. ಇದು ಕನ್ನಡ ಸಾಹಿತ್ಯ ಸಂಸ್ಕೃತಿಯ ಒಟ್ಟಂದದ ಮುನ್ನಡೆಗೆ ತಕ್ಕಮಟ್ಟಿನ ತೊಡಕೆಂದೇ ನಮ್ಮ ಹಿರಿಯ ವಿದ್ವಾಂಸರು ಭಾವಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೊಸ ಪೀಳಿಗೆಯ ಕೆಲವರಾದರೂ ಸಂಶೋಧನೆಯತ್ತ ಮನಸ್ಸು ಹರಿಬಿಡುತ್ತಿರುವುದು ಸಮಾಧಾನ ಪಡಬಹುದಾದ ಸಂಗತಿಯಾಗಿದೆ. ಶ್ರೀ ಬಿ.ಆರ್. ಸತ್ಯನಾರಾಯಣ ತಮ್ಮ ಸರಸ್ವತಿ ಕುರಿತ ಸರ್ವಾಂಗಕೋಶದ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ತೊಡಗಿಕೊಂಡಿರುವುದು ನಿಜಕ್ಕೂ ಸಾಹಿತ್ಯಾಸಕ್ತರಿಗೆ ಸಂತೋಷ ನೀಡುವ ಸಂಗತಿಯಾಗಿದೆ.
ಸರಸ್ವತಿ, ಜ್ಞಾನಕೋಶ ಮಾದರಿಯ ಕೃತಿಯಾಗಿದೆ. ಇಂಥ ಕೃತಿಯನ್ನು ರಚಿಸುವುದಕ್ಕೆ ಒದಗಿಬಂದ ಪ್ರೇರಣೆ ಮತ್ತು ಕಾರಣವನ್ನು ಕುರಿತು ಲೇಖಕರೇ ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸರಸ್ವತಿಯ ಬಗೆಗೆ ಇದುವರೆಗೆ ನಡೆದಿರುವ ಮಹತ್ವವೆನ್ನಬಹುದಾದ ಅಧ್ಯಯನಗಳು ಕೂಡಾ ತಮ್ಮಷ್ಟಕ್ಕೆ ತಾವು ಸೀಮಿತಾರ್ಥದಲ್ಲಿ ಪರಿಪೂರ್ಣವಾದರೂ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿಷಯಕ್ಕೆ ಬಂದಾಗ ಅಪೂರ್ಣವಾಗಿರುವುದನ್ನು ಗಮನಿಸಿದ್ದೇವೆ. ಕನ್ನಡದಲ್ಲಿಯಂತೂ ಸರಸ್ವತಿಯನ್ನು ಕುರಿತು ಒಂದು ಸಮಗ್ರವೆನ್ನಬಹುದಾದ ಅಧ್ಯಯನವಾಗಿಯೇ ಇಲ್ಲ. ಸುಮಾರು ಎರಡು ಸಾವಿರ ವರ್ಷಗಳಿಂದ ಜೀವಂತವಿರುವ, ಒಂದು ಜೀವಂತ ಸಂಸ್ಕೃತಿ-ಕನ್ನಡ ಸಂಸ್ಕೃತಿ-ಯ ಹಿನ್ನೆಲೆಯಲ್ಲಿ ಅಂಥ ಸಂಶೋಧನೆಯನ್ನು ನಡೆಸುವುದೇ ಪ್ರಸ್ತುತ ಅಧ್ಯಯನದ ಮೂಲ ಉದ್ದೇಶ. ಲೇಖಕರ ಈ ಮೂಲ ಉದ್ದೇಶವು ಈ ಕೃತಿಯಲ್ಲಿ ಸಮರ್ಥವಾಗಿ ಸಾಧಿತವಾಗಿದೆ ಎಂಬುದು ಅಭಿಮಾನಪಡಬಹುದಾದ ಸಂಗತಿಯಾಗಿದೆ. ಲೇಖಕರೇ ಸೂಚಿಸಿರುವಂತೆ, ಕನ್ನಡ ಸಂಸ್ಕೃತಿಯ ಅವಿಭಾಜ್ಯ ಆಕರಗಳಾದ ಸಾಹಿತ್ಯ, ಜಾನಪದ, ಶಾಸನ, ಶಿಲ್ಪ, ಚಿತ್ರಕಲೆ ಮೊದಲಾದವುಗಳ ಹಿನ್ನೆಲೆಯಲ್ಲಿ ಅಧ್ಯಯಯನವನ್ನು ನಡೆಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಸರಸ್ವತಿಯ ಮೂಲ ಸ್ವರೂಪವನ್ನು ಅರಿಯಲು ವೈದಿಕ, ಜೈನ, ಮತ್ತು ಬೌದ್ಧ ಮತಗಳ ಸರಸ್ವತಿ ಮತ್ತು ವಿಶ್ವಸಂಸ್ಕೃತಿಯಲ್ಲಿ (ಅದನ್ನು ಅನ್ಯದೇಶೀಯ ಸಂಸ್ಕೃತಿಗಳಲ್ಲಿ ಎನ್ನುವುದು ಹೆಚ್ಚು ಸೂಕ್ತ) ಸರಸ್ವತಿಗೆ ಸಮಾನವಾದ ಸ್ವರೂಪವುಳ್ಳ ದೇವತೆಗಳ ಸ್ವರೂಪವನ್ನೂ ಕುರಿತು ಅಧ್ಯಯನ ನಡೆಸಲಾಗಿದೆ. ಇವುಗಳಲ್ಲದೆ ಕನ್ನಡ ಸಂಸ್ಕೃತಿಯನ್ನು ಪ್ರಭಾವಿಸಿರುವ ವೈದಿಕ ಪುರಾಣಗಳು, ಮಹಾಕಾವ್ಯಗಳಲ್ಲಿ ಅಂತರ್ಗತವಾಗಿರುವ ಸರಸ್ವತಿಯ ಬಗೆಗಿನ ವಿಚಾರಗಳನ್ನು ಗಮನಿಸಲಾಗಿದೆ. ಕನ್ನಡ ಸಾಹಿತ್ಯದ ವಸ್ತು, ವಿಷಯ, ರೂಪ, ಛಂದಸ್ಸು, ಕಾವ್ಯಮೀಮಾಂಸೆ ಇವುಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಸಂಸ್ಕೃತ ಸಾಹಿತ್ಯದ ಕೆಲವು ಪ್ರಮುಖ ಕವಿಗಳ ಸರಸ್ವತೀ ಸಂಬಂಧೀ ವಿಷಯಗಳನ್ನು ಕನ್ನಡ ಸಾಹಿತ್ಯ ಸರಸ್ವತಿಯ ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಸಿಗುವ ನೂರಾರು ಸರಸ್ವತಿಯ ಶಿಲ್ಪಗಳ ಅಧ್ಯಯನಕ್ಕೆ ಪೂರ್ವಭಾವಿಯಾಗಿ ವೈದಿಕ, ಜೈನ, ಬೌದ್ಧ ಮತಗಳ ಶಿಲ್ಪಶಾಸ್ತ್ರೀಯ ಆಧಾರ ಗ್ರಂಥಗಳನ್ನಲ್ಲದೆ, ತಾಂತ್ರಿಕ ಪಠ್ಯಗಳನ್ನೂ ಗಮನಿಸಲಾಗಿದೆ.
ಶ್ರೀ ಬಿ.ಆರ್. ಸರ‍್ತನಾರಾಯಣರ ಮನೋಧರ್ಮ ಸಂಶೋಧನೆಗೆ ಹೇಳಿ ಮಾಡಿಸಿದಂತಿದೆ. ಭಾಷೆಯಲ್ಲಿ ನೇರ ಮತ್ತು ನಿಖರವಾದ ಅಭಿವ್ಯಕ್ತಿ ಕ್ರಮವಿದೆ. ಅನಗತ್ಯ ಊತಗಳು ಕಾಣುವುದಿಲ್ಲ. ಶೈಲಿಯು ಯಾವ ಕಾರಣಕ್ಕೂ ಆಲಂಕಾರಿಕವಾಗುವುದಿಲ್ಲ. ಹೀಗಾಗಿ ಉದ್ದಕ್ಕೂ ಪುಸ್ತಕದಲ್ಲಿ ವಿಷಯದ ನಿರ್ದುಷ್ಟತೆ ಕಂಡುಬರುತ್ತದೆ. ಸರಸ್ವತಿ ಎಂಬ ಎಂಬ ಒಂದು ಪರಿಕಲ್ಪನೆಯ ಸುತ್ತಾ ಸಮಗ್ರವಾಗಿ ಹೇಳಬಬಹುದಾದುದ್ದನ್ನೆಲ್ಲಾ ಇಲ್ಲಿ ಹೇಳಲಾಗಿದೆ ಎಂಬ ತೃಪ್ತಿ ಓದುಗರಿಗೆ ಉಂಟಾಗುವಂತೆ ಕೃತಿಯ ರಚನಾ ವಿನ್ಯಾಸ ರೂಪದಾಳಿದೆ. ಕನ್ನಡದಲ್ಲಿ ಇಷ್ಟು ಸೊಗಸಾಗಿ ಸರಸ್ವತಿ ಎಂಬ ಪರಿಕಲ್ಪನೆಯನ್ನು ಕುರಿತು ಒಂದು ಜ್ಞಾನಕೋಶವನ್ನೇ ನಿರ್ಮಿಸಿರುವ ಸಂಶೋಧಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಬೇಕಾಗಿದೆ. ಮುಂದಿನ ಅಧ್ಯಯನಗಳು ಈ ಜ್ಞಾನಕೋಶವನ್ನು ಇನ್ನಷ್ಟು ಮತ್ತಷ್ಟು ಸಮೃದ್ಧಗೊಳಿಸುವಲ್ಲಿ ಈ ಕೃತಿ ಮೂಲ ಆಕರವಾಗಿ ನಿಲ್ಲುತ್ತದೆ. ಸಂಶೋಧನೆ ಎನ್ನುವುದು ಒಂದು ಸಾಮೂಹಿಕ ಕ್ರಿಯಾಶೀಲತೆಯಾಗಿರುವುದರಿಂದ ಸರಸ್ವತೀ ಚಿಂತನೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಗರಿಕಟ್ಟಿಕೊಳ್ಳುವುದರಲ್ಲಿ ನನಗೆ ಸಂದೇಹವಿಲ್ಲ.
ಇಂಥ ಒಂದು ಕೃತಿಯನ್ನು ಸಮರ್ಥವಾಗಿ ನಿರ್ವಹಿಸಿರುವ ಸಂಶೋಧಕರನ್ನೂ, ಇಂಥ ಒಂದು ಕೃತಿಯನ್ನು ಪ್ರಕಟಿಸಲು ಮುಂದಾಗಿರುವ ಪ್ರಕಾಶಕರನ್ನೂ ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಶ್ರೀ ಬಿ.ಆರ್.ಸತ್ಯನಾರಾಯಣ ಸಂಶೋಧನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಸ ಪೀಳಿಗೆಯ ಒಬ್ಬ ಗಂಭೀರ ಲೇಖಕ ಎಂಬ ಮಾತನ್ನಂತೂ ಇಲ್ಲಿ ಹೇಳಲೇಬೇಕಾಗಿದೆ.
ಎಚ್.ಎಸ್.ವೆಂಕಟೇಶಮೂರ್ತಿ
ಸ್ನೇಹಿತರೆ ಸರಸ್ವತಿ : ವಿಸ್ಮಯ ಸಂಸ್ಕೃತಿ ಕೃತಿಯನ್ನು, ಇದೇ 27.3.11 ಭಾನುವಾರ ಬೆಳಿಗ್ಗೆ 9.30ಕ್ಕೆ ಸ್ವತಃ ಹೆಚ್.ಎಸ್.ವಿ.ಯವರೇ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ. - ಸತ್ಯನಾರಾಯಣ
No comments:
Post a Comment