Monday, April 04, 2011

ಯುಗಾದಿಯ ಹಾದಿ ಕುಪ್ಪಳ್ಳಿಯತ್ತ!


ಎಲ್ಲರಿಗೂ ಯುಗಾದಿಯ ಶುಭಾಶಯಗಳು
ಈ ಪೋಸ್ಟ್ ನನ್ನ ಬ್ಲಾಗಿನಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ನಾನು ಕುಪ್ಪಳ್ಳಿಯ ಹಾದಿಯಲ್ಲಿರುತ್ತೇನೆ. ಮೊನ್ನೆ ಪೋನ್ ಮಾಡಿದ್ದಾಗ ಶ್ರೀಮತಿ ರಾಜೇಶ್ವರಿಯವರು ಏಪ್ರಿಲ್ ೫ನೆಯ ತಾರೀಖಿನಂದು ಅವರ ’ನಾನು ಕಂಡ ತೇಜಸ್ವಿ’ ಪುಸ್ತಕ ಕುಪ್ಪಳ್ಳಿಯಲ್ಲಿ ಬಿಡುಗಡೆಯಾಗುತ್ತಿದೆಯೆಂದು ತಿಳಿಸಿ ಆಹ್ವಾನಿಸಿದರು. ರಜೆಯಲ್ಲಿ ಒಂದು ದಿನ ಮಗಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗುತ್ತೇನೆ ಎಂದು ಹೇಳದ್ದರಿಂದ, ಕುಪ್ಪಳ್ಳಿಗೇ ಹೋಗಲು ತಕ್ಷಣ ತೀರ್ಮಾನಿಸಿಬಿಟ್ಟೆ. ಯುಗಾದಿಯ ದಿನ ಊರಿನಲ್ಲಿ ಇರಲೇಬೇಕಿತ್ತು. ಅಲ್ಲಿಂದ ಹಾಗೇ ಕುಪ್ಪಳ್ಳಿಗೆ ಪ್ರಯಾಣ ಮಾಡಲು ನಿರ್ಧರಿಸಿಯೇಬಿಟ್ಟೆ.
ಈ ಹಿಂದೆ ನಾನು ಎರಡು ಬಾರಿ ಕುಪ್ಪಳ್ಳಿಗೆ ಹೋಗಿದ್ದೆ. ಮೊದಲ ಸಲ, ಅಂದರೆ ೨೦೦೩ರಲ್ಲಿ ಹೋಗಿದ್ದೆ. ಆಗ ಕವಿಶೈಲದಲ್ಲಿ ಸೂರ್ಯಾಸ್ತವನ್ನೂ ನೋಡಿದ್ದೆ. ನನ್ನ ಬಳಿ ಕ್ಯಾಮೆರಾ ಕೂಡ ಇರಲಿಲ್ಲ. ಕವಿಮನೆಯ ಮುಂದೆ ಕಾಲುವೆಯಲ್ಲಿ ಜುಳು ಜುಳು ನೀರು ಹರಿಯುತ್ತಿತ್ತು. ನಾನು ನನ್ನ ಹೆಂಡತಿ ಕಾಲುವೆಯ ಪಕ್ಕದಲ್ಲೇ ಕುಳಿತು ಊಟ ಮಾಡಿದ್ದು ಇನ್ನೂ ಅಚ್ಚಹಸುರಾಗಿದೆ.

ಎರಡನೆಯ ಬಾರಿ, ೨೦೦೮ರಲ್ಲಿ, ನಾನು, ನನ್ನ ಹೆಂಡತಿ, ಮಗಳು ಮತ್ತು ಇಬ್ಬರು ಸ್ನೇಹಿತರು ನವಿಲುಕಲ್ಲಿನ ಸೂರ್ಯೋದಯ ನೋಡುವುದಕ್ಕೆಂದೇ ಯೋಜನೆ ರೂಪಿಸಿಕೊಂಡು ಹೋಗಿದ್ದೆವು. ನವಿಲುಕಲ್ಲಿನ ಸೂರ್ಯೋದಯದ ವರ್ಣದೋಕುಳಿಯನ್ನು ನೋಡಿ ಖುಷಿಪಟ್ಟಿದ್ದೆವು ಕೂಡಾ. ಆದರೆ ಆಗ ಕವಿಶೈಲದಲ್ಲಿ ಸೂರ್ಯಾಸ್ತವನ್ನು ನೋಡಲಾಗಿರಲಿಲ್ಲ. ಈ ಬಾರಿ ಸೂರ್ಯಾಸ್ತವನ್ನು ನೋಡಿಕೊಂಡು ಬರುವಂತೆ ಪ್ಲಾನ್ ಮಾಡಿದ್ದೇನೆ.

ಏಪ್ರಿಲ್ ೫ ತೇಜಸ್ವಿಯವರ ದೇಹ ನಮ್ಮಿಂದ ದೂರವಾದ ದಿನ. ಇಂದು ಅಲ್ಲಿ ರಾಜೇಶ್ವರಿಯವರ ’ನಾನು ಕಂಡ ತೇಜಸ್ವಿ’ ಪುಸ್ತಕದ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ’ತೇಜಸ್ವಿ ಬದುಕು - ಬರಹ’ ಪುಸ್ತಕವೂ ಬಿಡುಗಡೆಯಾಗುತ್ತಿದೆ. ವಿಚಾರಗೋಷ್ಠಿಯೂ ಇದೆ.

ಅಲ್ಲಿಂದ ಬಂದ ಮೇಲೆ ಮತ್ತೆ ಸಿಗೋಣ.

ಕುವೆಂಪು ಅವರ 'ಯುಗಾದಿ' ಕವಿತೆಯೊಂದಿಗೆ ಮತ್ತೊಮ್ಮೆ ಯುಗಾದಿಯ ಶುಭಾಶಯಗಳು.

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

1 comment:

shivu.k said...

ಸರ್,

ಹೋಗಿಬನ್ನಿ..ನಂತರ ಅಲ್ಲಿನ ಅನುಭವ ಹಂಚಿಕೊಳ್ಳಿ..ನಮಗೂ ಪುಸ್ತಕಗಳ ಬಗ್ಗೆ ಕುತೂಹಲವಿದೆ..