ತಂಗಿಮನೆ ! ಏನು ತಂಪು !ಅಣ್ಣನೊಬ್ಬ ತಂಗಿಯ ಮನೆಗೆ ಹೋದಾಗ, ಸುಖ, ಸಂತೋಷ, ನೆಮ್ಮದಿಯಿಂದ ಇರುವ ತಂಗಿಯ ಮನೆಯನ್ನು ಕಂಡು ಎಷ್ಟೊಂದು ಸಂತೋಷಪಡುತ್ತಾನೆ! ತಂಗಿಯ ಮನೆ - ತಂಪು ಎನ್ನುವುದರಲ್ಲೇ, ತಂಗಿ ನೆಮ್ಮದಿಯಾಗಿರುವುದು, ಅದನ್ನು ನೋಡಿ ತಾನು ಸಂತೋಷ ಪಟ್ಟಿರುವುದು ಎಲ್ಲಾ ವೇದ್ಯವಾಗುತ್ತದೆ. ಮಟಮಟ ಮಧ್ಯಾಹ್ನ, ಸುಡುಬಿಸಿಲಲ್ಲಿ ನಡೆದು ಸುಸ್ತಾಗಿ ಬಂದವನಿಗೆ, ಹೊಂಗೆಯ ತಂಪು ಎಂತಹ ಚೈತನ್ಯವನ್ನು ನೀಡುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತಾಗುವಂತದ್ದು. ತಂಗಿಯ ಒಲುಮೆಯ ತಂಪು ಅಂತಹದ್ದು. ಆದರೆ ತಂಗಿಯ ಮನೆಯಿದ್ದ ಜಾಗದ ಹೆಸರು ಮಾತ್ರ ಕೊಳ್ಳಿಬೈಲು! ಬಯಲು ಎಂಬುದೇ ಬಿಸಿ ಮತ್ತು ಸೆಖೆಯ ಸಂವೇದನೆಯನ್ನು ಮನಸ್ಸಿನಲ್ಲಿ ಸ್ಫುರಿಸುವಾಗ, ಕೊಳ್ಳಿಬೈಲು ಇನ್ನು ಹೇಗಿರಬೇಡ? ಆ ಕೊಳ್ಳಿಬೈಲಿನೊಳಗಿರುವ ತಂಗಿಯ ಮನೆ - ತಂಪು! ಎರಡನೆಯ ಸಾಲಿನಲ್ಲಿ ಕೊಳ್ಳಿಬೈಲು ಎನ್ನುವಲ್ಲಿ ಕಾಣಿಸಿಕೊಳ್ಳುವ ಸಣ್ಣ ಕಸಿವಿಸಿ ಕವಿತೆ ಮುಗಿದಾಗ ಮರತೇ ಹೋಗಿರುತ್ತದೆ. ಅಣ್ಣತಂಗಿಯರ ಬಾಂಧವ್ಯಕ್ಕೆ ಮೇರೆಯುಂಟೆ!?
ಹೆಸರು ಏನೋ: ಕೊಳ್ಳಿಬೈಲು!
ಆದರೂ
ಮನಕೆ ಮೈಗೆ ಜೀವಕೆಲ್ಲ,
ನಡುಹಗಲಲಿ ಸುಡುಬಿಸಿಲಲಿ
ಹೊಂಗೆಯ ನೆರಳೆಂತೋ ಅಂತೆ,
ತಂಗಿಯ ಮನೆ - ತಂಪು!
ಸರ್ವೋದಯ ಸೂರ್ಯ ಶ್ರೀ ವಿನೋಬಾಜಿಯವರನ್ನು ನೋಡಿದರೆ ಯಾರಿಗೆ ತಾನೆ ಗೌರವ ಮೂಡುವುದಿಲ್ಲ. ಕುವೆಂಪು ಅವರು ವಿನೋಬಾಜಿಯವರನ್ನು ಗೌರವಿಸುತ್ತಿದ್ದರು. ಅವರನ್ನು ’ಸರ್ವೋದಯ ರವಿ’, ’ಸರ್ವೋದಯ ವಿಭೂತಿ’ ಎಂದೂ, ಅವರ ಪಾದಯಾತ್ರೆ ನಡೆಸಿದ ಮಾರ್ಗವನ್ನು ’ಅಮೃತರೇಖೆ’ ಎಂದು ಕುವೆಂಪು ಕರೆದಿದ್ದಾರೆ. ಭೂದಾನ ಚಳುವಳಿಯ ಅಂಗವಾಗಿ ಶ್ರೀ ವಿನೋಬಾಜಿಯವರು ಕೈಗೊಂಡಿದ್ದ ಪಾದಯಾತ್ರೆ ಐತಿಹಾಸಿಕ ಮಹತ್ವವುಳ್ಳದ್ದು. ಅವರ ಪಾದಯಾತ್ರೆ ಪಿರಿಯಾಪಟ್ಟಣದಿಂದ ಮೈಸೂರು ಮಾರ್ಗವಾಗಿ ಶ್ರೀರಂಗಪಟ್ಟಣದ ಮುಖಾಂತರ ಹೋಗುವ ಕಾರ್ಯಕ್ರಮವಿತ್ತು. ಪಿರಿಯಾಪಟ್ಟಣದ ಬಳಿ ಆನೆಚಾಕೂರಿನಲ್ಲಿ ಒಂದು ದಿವಸ (೧೩-೯-೧೯೫೭) ವಿನೋಬಾಜಿ ತಂಗಿದ್ದರು. ಆಗ ಅವರನ್ನು ಬೇಟಿಯಾಗಲು ಕುವೆಂಪು ಪೂರ್ವಾನುಮತಿಯೊಂದಿಗೆ ಹೋಗಿರುತ್ತಾರೆ. ಮನೆಯವರು ಸ್ನೇಹಿತರು ಜೊತೆಗೂಡಿರುತ್ತಾರೆ. ಆನೆಚಾಕೂರಿನಲ್ಲಿ ನಡೆದ ಭೇಟಿಯ ಸಮಯದಲ್ಲಿ ಕುವೆಂಪು ಅವರೊಂದಿಗೆ ನಡೆದ ಮಾತುಕತೆಯಿಂದ ವಿನೋಬಾಜಿ ಉಲ್ಲಸಿತರಾಗಿದ್ದರು. ಉದಯರವಿಗೆ ಕುವೆಂಪು ಆಹ್ವಾನವಿತ್ತಾಗ ವಿನೋಬಾಜಿ ಒಪ್ಪಿಕೊಂಡು, ೨೫-೯-೧೯೫೭ರಂದು ಉದಯರವಿಗೆ ಬಂದು ಹೋಗುತ್ತಾರೆ. ಆ ಎರಡು ದಿನಗಳ ಬಗ್ಗೆ ಕುವೆಂಪು ಅವರೇ ದಾಖಲಿಸಿದ್ದಾರೆ. ೧೩ನೇ ತಾರೀಖಿನಂದು ವಿನೋಬಾಜಿಯವರೊಂದಿಗಿನ ಪ್ರಥಮ ಭೇಟಿಯಲ್ಲಿ ವಿನೋಬಾಜಿಯವರಿಗೆ ನೀಡಿದ ’ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಪ್ರತಿಯಲ್ಲಿ ’ಅಗ್ನಿಶೀತ ಚರಣಕೆ’ ಎಂಬ ಕವಿತೆಯನ್ನು ಬರೆದಿದ್ದರಂತೆ. ಕವಿತೆಗೆ ಅಡಿ ಟಿಪ್ಪಣಿ ನೀಡಿ ಕುವೆಂಪು ಅವರೇ ಈ ವಿಷಯವನ್ನು ದಾಖಲಿಸಿದ್ದಾರೆ.
ಮನುಜ ರೂಪವ ಧರಿಸಿ ಧರೆಗಿಳಿದು ಬಂದಿರುವಮನುಷ್ಯರೂಪ ಧರಿಸಿ ಬಂದಿರುವ ಸೂರ್ಯನ ಕರುಣೆಯೇ ವಿನೋಬಾಜಿಯಾಗಿ ಕವಿಗೆ ಕಂಡಿದ್ದಾರೆ. ಜಗತ್ತಿನೆಲ್ಲಡೆ ಕತ್ತಲೆ ಕವಿದಿರುವಾಗ, ವಿನೋಬಾಜಿಯವರ ಪಾದಯಾತ್ರೆ ಅಮೃತಚಂದ್ರಕಿರಣದಂತೆ ಕಂಡಿದೆ. ಅಮರ ಅಗ್ನಿಶೀತಚರಣ ಎಂಬ ಮಾತು ಅಪಾರ ಧ್ವನಿಸಂಪತ್ತನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ವಿನೋಬಾಜಿಯವರ ಉದ್ದೇಶ ಶಾಶ್ವತ ಎಂಬುದನ್ನು ಅಮರ ಎಂಬುದು ಸೂಚಿಸುತ್ತಿದ್ದರೆ, ಅಗ್ನಿ-ಶೀತ ಎಂಬ ಎರಡು ವಿರುದ್ಧಾರ್ಥಕವಾದ ಪದಗಳು, ಆ ವಾಮನ ಮೂರ್ತಿಯ ಕೃಶವಾದ ಪಾದಗಳನ್ನು, ಅದೇ ಪಾದಗಳಿಂದ ನಡೆಯುತ್ತಿರುವ ಪಾದಯಾತ್ರೆಯ ಪರಿಣಾಮವನ್ನು ಸೂಚಿಸುತ್ತಿವೆ. ಹಾಗೆ ವಾಮನನಂತೆ ಬಂದಿರುವ ತ್ರಿವಿಕ್ರಮನಿಗೆ ಕವಿ ನಮಸ್ಕರಿಸುತ್ತಾರೆ. (ಈ ಸಂದರ್ಭದಲ್ಲಿ ರಾಮಾಯಣದರ್ಶನಂ ಕಾವ್ಯದ ಕೆಲವು ಭಾಗಗಳನ್ನು ಕನ್ನಡದಲ್ಲಿಯೇ ಓದಿಸಿ ಕೇಳುತ್ತಾರೆ. ಜೊತೆಗೆ ತಾವೂ ಕನ್ನಡದಲ್ಲಿ ಕೆಲವು ಸಾಲುಗಳನ್ನು ಓದುತ್ತಾರೆ. ಸ್ವತಃ ಕುವೆಂಪು ’ಇದಕ್ಕಿಂತ ನಾನೇನು ಓದಬಲ್ಲೆ?’ ಎಂದು ಉದ್ಘರಿಸುತ್ತಾರೆ. ಅದನ್ನು ಕೇಳಿ ವಿನೋಬಾಜಿ ಚೆನ್ನಾಗಿ ನಕ್ಕರಂತೆ)
ದೇವಸೂರ್ಯಕರುಣ;
ಕವಿದಿರುವ ಕತ್ತಲೆಯೊಳೊಂದೆ ಸಂಚರಿಸುತಿದೆ
ಅಮೃತ ಚಂದ್ರಕಿರಣ:
ಪಾದಯಾತ್ರೆಯೊಳಿರುವ ಶ್ರೀ ವಿನೋಬನ ಅಮರ
ಅಗ್ನಿಶೀತಚರಣ! -
ಇಂದು ವಾಮನನಂತೆ ಬಂದೀ ತ್ರಿವಿಕ್ರಮಗೆ
ಕವಿಯ ನಮನ ಅನೃಣ!
೨೫.೯.೧೯೫೭ ಬುಧವಾರ ಅವರ ಪಾದಯಾತ್ರೆ ಮೈಸೂರು ತಲಪುತ್ತದೆ. ಅವರನ್ನು ಸ್ವಾಗತಿಸಲು, ಗೋಕುಲರಸ್ತೆಯಲ್ಲಿ ಕುವೆಂಪು ಮತ್ತು ಸ್ನೇಹಿತರೆಲ್ಲ ಕಾದು ನಿಂತಿರುತ್ತಾರೆ. ವಿನೋಬಾಜಿ ಬಂದವರೆ, ’ನೀವೆಲ್ಲಾ ನೆಟ್ಟಗೆ ಹೋಗಿ. ನಾನು ಪುಟ್ಟಪ್ಪನವರ ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಕುವೆಂಪು ಅವರ ಕೈ ಹಿಡಿದು ಉದಯರವಿಗೆ ಬರುತ್ತಾರೆ. ಒರಿಸ್ಸಾದ ಮಾಜಿಮುಖ್ಯಮಂತ್ರಿ ಕಮಲನಯನ ಬಜಾಜ್, ದಾಸಪ್ಪ ಜೊತೆಗಿರುತ್ತಾರೆ. ಇಂದುಕಲಾ ಹಾಕಿದ್ದ 'ಸ್ವಾಗತಂ ಶ್ರೀ ವಿನೋಬಾಜಿಗೆ' ಎಂಬ ರಂಗವಲ್ಲಿ ಸ್ವಾಗತಿಸುತ್ತದೆ. ಉದಯರವಿಯೊಳಗೆ ಬಂದು, 'ತುಂಬಾ ಶಾಂತವಾಗಿದೆ' ಎಂದು ಮೂರು ಬಾರಿ ಹೇಳುತ್ತಾರೆ. 'ನೀವು ಈ ಮನೆಯಲ್ಲಿ ಯಾವಾಗಿನಿಂದ ಇದ್ದೀರಿ? ರಾಮಾಯಣದರ್ಶನಂ ಬರೆದದ್ದು ಇಲ್ಲಿಯೇ? ಎಂಬ ವಿಚಾರಗಳನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತಾರೆ. ರಾಮಾಯಣದ ಹಸ್ತಪ್ರತಿಯ ಒಂದು ಫ್ಯಾಕ್ಸಿಮಿಲಿಯನ್ನು ಅದರೊಟ್ಟಿಗೆ ಅಚ್ಚು ಹಾಕಿಸುವಂತೆ ಸಲಹೆ ನೀಡುತ್ತಾರೆ. ಜೇನು ಮೊಸರು ಮೊದಲಾದುವುಗಳನ್ನು ನೀಡಿದಾಗ, ರಾಮಾಯಣದರ್ಶನಂ ಪುಸ್ತಕವನ್ನು ತೋರಿಸಿ 'ಈ ಪ್ರಸಾದ ಸಾಕು, ಅದು ಏಕೆ' ಎನ್ನುತ್ತಾರೆ. ಕಲಾ ಮತ್ತು ತಾರಿಣಿಯವರು ದಾಸರ 'ನರಕಭಯಗಳುಂಟೆ' ಕೀರ್ತನೆಯನ್ನೂ, ಕುವೆಂಪು ಅವರ ನಿನ್ನಡಿದಾವರೆಗಯಲಿ ಗೀತೆಯನ್ನೂ ಹಾಡುತ್ತಾರೆ. ಆಮೇಲೆ 'ನಿಮ್ಮ ದೇವರಮನೆಯನ್ನು ನೋಡಬೇಕು' ಎಂದು ಕೇಳಿ, ಹೋಗಿ ನೋಡಿ, 'ಇಲ್ಲಿ ಎಲ್ಲಾ ಇದ್ದಾರೆ' ಎಂಬರ್ಥದ ಮಾತುಗಳನ್ನಾಡಿ, ೧೫-೨೦ ನಿಮಿಷಗಳು ಅಲ್ಲಿದ್ದು ಹೊರಡುತ್ತಾರೆ. 28ನೆಯ ತಾರೀಕು ನಿಷಾದ್ ಬಾಗಿನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಉದಯರವಿಯ 'ದೇವರಮನೆ'ಯನ್ನು ವಿನೋಬಾಜಿಯವರು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ.
೨೯ನೆಯ ತಾರೀಖು ಅರಸು ಗರ್ಲ್ಸ್ ಸ್ಕೂಲಿನಲ್ಲಿ ಮತ್ತೆ ಬೇಟಿಯಾಗಿ ಅವರನ್ನು ಮೈಸೂರಿನಿಂದ ಬೀಳ್ಕೊಡುತ್ತಾರೆ. ಆ ಭೇಟಿಯಲ್ಲಿ ’ಅಗ್ನಿಹಂಸ’, ’ಸ್ವಾಮಿವಿವೇಕಾನಂದ’, ’ಶ್ರೀರಾಮಕೃಷ್ಣ ಪರಮಹಂಸ’ ಎಂಬ ಮೂರು ಪುಸ್ತಕಗಳನ್ನು ಕುವೆಂಪು ನೀಡುತ್ತಾರೆ. ’ಅಗ್ನಿಹಂಸ’ ಪುಸ್ತಕದಲ್ಲಿ ೨೫ರಂದು ವಿನೋಬಾಜಿ ಉದಯರವಿಗೆ ಬಂದ ದಿನ ಬರೆದಿದ್ದ ಕವಿತೆಯನ್ನು ಬರೆದು ಕೊಟ್ಟಿರುತ್ತಾರೆ. ’ಉದಯರವಿ’ಯಲ್ಲಿ ಸರ್ವೋದಯ ರವಿ! ಎಂಬ ಶೀರ್ಷಿಕೆಯ ಕವಿತೆ ಅದು ಹೀಗಿದೆ.
ಹೇ ಜಗದ್ ದೀನಬಂಧು,ವಿನೋಬಾಜಿಯವರ ಪಾದಯಾತ್ರೆ ಅಮೃತಕಿರಣ! ಅದು ಉದಯರವಿಯ ಮೇಲೆ ಹಾಯ್ದು ಹೋಗಿದ್ದಕ್ಕೆ ಕವಿ ಸರ್ವೋದಯ ರವಿಗೆ ವಂದನೆಯನ್ನು ಸಲ್ಲಿಸುತ್ತಿದ್ದಾರೆ.
ಮನೆಯೆ ಕ್ಷೇತ್ರವಾಯಿತಿಂದು
’ಉದಯರವಿ’ಗೆ ನೀನು ಬಂದು:
ಕೆರೆಯೆ ಆಯ್ತು ಮಹಾಸಿಂಧು,
ಪೂಜ್ಯ ಓ ತಪೋಧನ!
ಪಾದಯಾತ್ರೆಯಮೃತರೇಖೆ
ಮನೆಯ ಮೇಲೆ ಹಾಯ್ದುದಕ್ಕೆ
ನಿನಗನಂತ ವಂದನಾ,
ಮುಹುರನಂತ ವಂದನಾ!
ಮುಂದೆ 1960ರ ಸುಮಾರಿನಲ್ಲಿ ಮಧ್ಯಪ್ರದೇಶದ ಕೊರಕು ದುರ್ಮಗ ಕಾಡಿನಲ್ಲಿ, ಚೆಂಬಲ್ ಕಣಿವೆಯಲ್ಲಿ ಪಾದಯಾತ್ರೆ ಸಾಗುವಾಗ, ಮನಪರಿವರ್ತನೆಗೊಂಡ ಡಕಾಯಿತರು ಗುಂಪುಗುಂಪಾಗಿ, ಸಕಲಾಯುಧ ಸಮೇತರಾಗಿ, ಸಕುಟುಂಬ ಸಮೇತರಾಗಿ ವಿನೋಬಾಜಿಯವರಿಗೆ ಶರಣಾಗುತ್ತಿರುವ ಸುದ್ದಿ ಪತ್ರಿಕೆಯಲ್ಲಿ ಬರುತ್ತದೆ. ಆ ಪತ್ರಿಕಾ ವಾರ್ತೆಯನ್ನು ಗಮನಿಸಿ, 23.5.1960ರಂದು ಬರೆದಿರುವ ಕವಿತೆ 'ಇದು ಕಲಿಯ ಯುಗವೆ?' ಎಂಬುದು.
"ಅದೇನದಾ ಗಲಭೆ?"
"ಮುರಿದು ಬಿತ್ತಂತೆ ಶೃಂಗಸಭೆ!"
"ಹಾಳಾಯ್ತೆ ಶೃಂಗಸಭೆ?"
ಆದರಾಯಿತು; ಇತ್ತ ನೋಡು:
ಹೊಳೆಯುತ್ಇದೆ ಶ್ರೀಶಿಲುಬೆ, ನಮನಮಾಡು!"
"ಇದೇನಿದೀ ಬರಿ ಶಿಲುಬೆ? ಕ್ರಿಸ್ತನೆಲ್ಲಿ?"
"ಕಾಣಲ್ಲಿ:
ಸಂಚರಿಸುತಿಹನಾ ಡಕಾಯಿತರ ನಾಡಿನಲ್ಲಿ,
ಮಧ್ಯಪ್ರದೇಶದಾ ಕೊರಕು ದುರ್ಗಮದ ಕಾಡಿನಲ್ಲಿ;
ಒಳ್ಳಿತನೆ ಕಡೆದೆಬ್ಬಿಸುತ ಕೇಡಿನಲ್ಲಿ!
ಧರ್ಮಘಂಟಾನಾದ ಬಾಜಿಸಿದೆ, ಅದೊ ಕೇಳಿ,
ಲೋಕ ಲೋಕಕೆ ಮಿಂಚೆ ಮೋದರೋಮಾಂಚನ!
ಶ್ರೀವಿನೋಬರ ಪಾದಯಾತ್ರೆಯ ಧವಳಧೂಳಿ
ದೇವಚಕ್ಷುಗಳನುನ್ಮೀಲಿಸಿದೆ-ಜ್ಞಾನಾಂಜನ!
ಅಂದು ದುಷ್ಟವ್ಯಾಧ ವಾಲ್ಮೀಕಿಯಾಗಿ
ಮತ್ತೆ ಅಂಗುಲಿಮಾಲ ಭಿಕ್ಷುವಾಗಿ
ದಾರಿತೋರಿದರು ಸತ್ಯಯುಗಕೆ,
ಹೆಗಲನಿತ್ತರು ಧರ್ಮನೊಗಕೆ,
ಕಣ್ಣಾದರಯ್ ಕುರುಡು ಜಗಕ!
ಆ ಪವಾಡವನಿಂದು ಮತ್ತೆ
ಕಂಡ ಹಿಗ್ಗಿಗೆ... ಅತ್ತೆ!
ಹೇಳು, ಮಗುವೆ,
ಇದು ಕಲಿಯ ಯುಗವೆ?"
ವಾಲ್ಮೀಕಿ ಅಂಗುಲಿಮಾಲ ಮೊದಲಾದ ದುಷ್ಟರು, ತಪಃಪ್ರಭಾವದಿಂದ ಸತ್ಯ ಧರ್ಮದ ತೇರನೆಳೆಯಲು ಹೆಗಲು ಕೊಟ್ಟರು, ಪವಾಡವನ್ನೇ ಮೆರೆದರು. ಅಂತಹ ಪವಾಡ ಇಂದು ನಮ್ಮ ಕಣ್ಣೆದುರೇ ವಿನೋಬಾಜಿಯವರಿಂದ ನೆಡೆಯುತ್ತಿದೆ. ಅದನ್ನು ಕಂಡ ಕವಿ ರೋಮಾಂಚಿತರಾಗಿದ್ದಾರೆ;ಕಣ್ಣೀರುಗರೆದಿದ್ದಾರೆ! ದೇವರಿಲ್ಲದ ವಿಗ್ರಹಗಳನ್ನು (ಬರಿ ಶಿಲುಬೆ ಕ್ರಿಸ್ತನೆಲ್ಲಿ?) ಪೂಜಿಸುತ್ತಾ, ನೋಡುತ್ತಾ, ಪ್ರಾರ್ಥಿಸುತ್ತಾ ಕುಳಿತಿರುವ ಮಂದಮತಿಗಳು ದೇವರನ್ನು ಕಾಣಬೇಕಾಗಿರುವುದು ಇಲ್ಲಿಒ, ವಿನೋಬಾರಲ್ಲಿ ಎಂಬುದು ಕವಿಯ ಆಶಯ. ಕೃಶಕಾಯರಾಗಿದ್ದ ವಿನೋಬಾಜಿಯವರ ಚಿತ್ರಣ ಕ್ರಿಸ್ತನನ್ನು ನೆನಪಿಸುತ್ತದೆ. ದಯೆ ಪ್ರೇಮ ತ್ಯಾಗ ಮೊದಲಾದವುಗಳಲ್ಲಿ ವಿನೋಬಾ ಅವರು ನಿಜವಾದ ದೇವಮಾನವ!
ಈ ಕವಿತೆ ಬರೆಯುವ ನಾಲ್ಕು ದಿನಗಳ ಮೊದಲೇ ಈ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು ಎಂಬುದು 'ಮಹತ್ತರ ಸುದ್ದಿ' ಎಂಬ ಕವಿತೆಯಿಂದ ಸ್ಪಷ್ಟವಾಗುತ್ತದೆ. ಈ ಕವಿತೆಯ ವಸ್ತುವೂ ಮೂರು ಮಂದಿ ಡಕಾಯಿತರು ವಿನೋಬಾಜಿಯವರಿಗೆ ಶರಣಾದುದೇ ಆಗಿದೆ! 19.5.1960ರಂದು ರಚಿತವಾಗಿರುವ ಈ ಕವಿತೆಯಲ್ಲಿ ಪತ್ರಿಕೆಗಳ ಹೆಡ್ ಲೈನ್ ರಾಜಕಾರಣವನ್ನು ಕಂಡು ಕವಿ ಕಕ್ಕಾವಿಕ್ಕಿಯಾಗುತ್ತಾರೆ. (ಹೆಡ್ ಲೈನ್ ರಾಜಕಾರಣ ಇಂದಿಗೂ ಬದಲಾಗಿಲ್ಲ ಎಂಬುದು ಮಾತ್ರ ಕುಚೋದ್ಯವಲ್ಲ!) ಕವಿತೆ ಹೀಗಿದೆ:
ಇತ್ತ
ಡಕಾಯಿತರು ಮೂರು ಮಂದಿ
ಬಂದು ವಿನೋಬರ ಪ್ರಾರ್ಥನಾ ಸಭೆಗೆ
ಅವರ ಕಾಲುಮುಟ್ಟಿ ನಮಿಸಿ
ಶರಣಾದರಂತೆ!
ಪತ್ರಿಕೆಗಳು ಚಿಕ್ಕಕ್ಕರದಲಿ ಹ್ರಸ್ವವಾಗಿ ಮುದ್ರಿಸಿವೆ,
ಒಂದು ಮೂಲೆಯಲ್ಲಿ!
ಅತ್ತ
ಕ್ರುಶ್ಚೇವ್, ಐಕ್, ಮ್ಯಾಕ್ಮಿಲನ್, ಡಿಗಾಲ್
ಭಿನ್ನಾಭಿಪ್ರಾಯದಾ ಇಕ್ಕುಳಕೆ ಸಿಕ್ಕಿ
ಪ್ಯಾರಿಸ್ಸಿನ ಶೃಂಗಸಭೆ ವಿಫಲವಾಯಿತಂತೆ!
ಪತ್ರಿಕೆಗಳೆಲ್ಲ ದಪ್ಪಕ್ಕರದಲಿ ದೀರ್ಘವಾಗಿ
ವರದಿ ಮಾಡಿರುವ ಪ್ರಮುಖ ಸುದ್ದಿ!
ಕವಿಗೆ ಕಕ್ಕಾವಿಕ್ಕಿ:
ಯಾವುದು ಮಹತ್ತರ?...
ಅರ್ಥವಿಲ್ಲದ ಪ್ರಶ್ನೆಗೆ
ಸುಮ್ಮನಿರುವುದೆ ಉತ್ತರ!
1 comment:
ಡಾ. ಸತ್ಯ..ಇಬ್ಬರು ಮಹಾಮಹಿಮರ ಉಲ್ಲೇಖದೊಂದಿಗೆ ರಾಷ್ಟ್ರಕವಿ ಕುವೆಂಪು ಕವನಗಳ ಮನನ ಇಷ್ಟವಾಯ್ತು..ಕೊಳ್ಳಿಬೈಲು..ತಂಗಿಮನೆ ವಿವರಗಳು ವಿನೋಬಾರವರ ಭೂದಾನ ಅಭಿಯಾನದ ಬಗ್ಗೆಯೂ ಒಳ್ಳೆಯ ಮಾಹಿತಿ ನೀಡಿದ್ದೀರಿ.
Post a Comment