ಇದನ್ನು ಏಕೆ ಹೇಳಿದೆನೆಂದರೆ, ಒಂದು ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ ಗೊತ್ತಿದ್ದಾಗ ಆ ಕವಿತೆ ನಮ್ಮ ಮೇಲೆ ಬೀರುವ ಪ್ರಭಾವವೇ ಬೇರೆ. ಏನೂ ಗೊತ್ತಿಲ್ಲದೆ ಒಂದು ಕವಿತೆಯನ್ನು ಓದಿದಾಗ ಆಗುವ ಪರಿಣಾಮವೇ ಬೇರೆ. ಅದು ಹುಟ್ಟಿದ ಸಂದರ್ಭವು ಗೊತ್ತಿರದ ಓದುಗನ ಮೇಲೆ ತೀವ್ರತರವಾದ ಬೇರೆ ಬೇರೆಯದೇ ಆದ ಪರಿಣಾಮವನ್ನು ಕವಿತೆ ಉಂಟು ಮಾಡುತ್ತದೆ, ನಿಜ. ಆದರೆ ಕವಿತೆ ಹುಟ್ಟಿದ ಸಂದರ್ಭ ಗೊತ್ತಿದ್ದಾಗ ಅದಕ್ಕೊಂದು ಹೆಚ್ಚುವರಿ ಸೊಬಗು ಇರುತ್ತದೆ ಎಂಬುದು ನಿಜ. ಅದಕ್ಕಿಂತ ಹೆಚ್ಚಾಗಿ ಆ ಕವಿತೆ ನಮ್ಮನ್ನು ತಡೆಹಿಡಿದು, ನಿಲ್ಲಿಸಿ, ಓದಿಸಿಕೊಳ್ಳುತ್ತದೆ. ಜೊತೆಗೆ ಚಾರಿತ್ರಿಕವಾಗಿ ಕವಿತೆಗೆ ಹೆಚ್ಚಿನ ಮಹತ್ವ ದೊರೆಯುತ್ತದೆ.
ಒಂದು ಕಲಾಕೃತಿ ಹೆಚ್ಚು ಪರಿಣಾಮಕಾರಿಯಾಗಲು ಚಾರಿತ್ರಿಕ ಅಂಶಗಳು ಕೆಲಸ ಮಾಡುತ್ತವೆ. ತೇಜಸ್ವಿ ತಮ್ಮ ’ವಿಮರ್ಶೆಯ ವಿಮರ್ಶೆ’ ಪುಸ್ತಕದಲ್ಲಿ ಒಂದು ಕಡೆ ಇದರ ಮಹತ್ವವನ್ನು ದಾಖಲಿಸಿದ್ದಾರೆ. ಅಬಚೂರಿನ ಪೋಸ್ಟಾಫೀಸು ಕಥಾಸಂಕನದಲ್ಲಿರುವ ’ಅವನತಿ’ ಮತ್ತು ’ತಬರನ ಕಥೆ’ ಎರಡು ಕಥೆಗಳಲ್ಲಿ ’ಅವನತಿ’ ಕಲಾತ್ಮಕವಾಗಿ ಶ್ರೇಷ್ಟಕೃತಿ. ಆದರೆ, ಚಾರಿತ್ರಿಕ ಸಂದರ್ಭಗಳಿಂದ ’ತಬರನ ಕಥೆ’ಗೆ ಹೆಚ್ಚು ಪ್ರಚಾರ, ಯಶಸ್ಸು ದೊರೆಯಿತು.
ನಾನು ಬಿ.ಎಸ್ಸಿ.ಯಲ್ಲಿದ್ದಾಗ, ನಮಗೆ ಕನ್ನಡ ಪಾಠ ಮಾಡುತ್ತಿದ್ದ ಟಿ.ಕೆ.ಶಿವಣ್ಣ ಎಂಬುವವರು, ಕೆ.ಎಸ್.ನರಸಿಂಹಸ್ವಾಮಿಯವರ ’ತುಂಗಭದ್ರೆ ಹೊಳೆಯಲ್ಲ, ಇವಳು ವರ್ಷದ ಮಗಳು’ ಕವಿತೆ ಪಾಠ ಮಾಡುವಾಗ ಸಾಂದರ್ಭಿಕವಾಗಿ, ಹೆಚ್ಚಿನ ಕವಿಗಳು ಹೆಣ್ಣುಮಗುವಿನ ಬಗ್ಗೆಯೇ ಕವಿತೆ ಬರೆಯುತ್ತಾರೆ. ಗಂಡು ಮಗುವಿನ ಬಗ್ಗೆ ಕವಿತೆ ಬರೆದಿರುವುದು ಕಡಿಮೆ. ಗಂಡುಮಗುವಿನ ವಿಷಯ ಬಂದಾಗ ಒಂದು ಸಾಲಿನಲ್ಲಿ ಮುಗಿಸಿಬಿಡುತ್ತಾರೆ. ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ’ಏಕಳುವೆ, ತೇಜಸ್ವಿ?’ ಎಂದು ಗಂಡುಮಗುವಿನ ಬಗ್ಗೆ ಒಂದೇ ಸಾಲು ಬರೆದಿದ್ದಾರೆ. ರಾಮಾಯಣದರ್ಶನಂ ಕಾವ್ಯದ ಹೊಸ ಸಂಚಿಕೆ ಬರವಣಿಗೆಯನ್ನು ಪ್ರಾರಂಭಿಸಲು ಕುಳಿತಿದ್ದ ಕವಿಗೆ ಹೇಗೆ ಪ್ರಾರಂಭ ಮಾಡಬೇಕೆಂದು ಎಷ್ಟು ಹೊತ್ತಾದರೂ ತೋಚಲೇ ಇಲ್ಲ. ತೊಟ್ಟಿಲಲ್ಲಿದ್ದ ಮಗು ತೇಜಸ್ವಿಯ ಅಳು ಜೋರಾಗಿ ಕೇಳಿಸಿತು. ಅತ್ತ ಅವರ ಹೆಂಡತಿ ಮಗುವಿನ ಅಳು ನಿಲ್ಲಿಸಲು ಯತ್ನಿಸುತ್ತಿದ್ದರೆ, ಇತ್ತ ಕವಿ ’ಏಕಳುವೆ, ತೇಜಸ್ವಿ? ಕಲ್ಪನೆಯೆರಂಕೆಯಂ ಏರಿ ಬಾ ನನ್ನೊಡನೆ’ ಎಂದು ಸಂಚಿಕೆಯ ಬರವಣಿಗೆಯನ್ನು ಪ್ರಾರಂಭಿಸಿಬಿಡುತ್ತಾರೆ. ಹೀಗೆ ಹಲವಾರು ಘಟನೆಗಳನ್ನು ಸ್ವಾರಸ್ಯಕರವಾಗಿ ಹೇಳಿದ್ದರು. ಅದುವರೆಗೆ ರಾಮಾಯಣದರ್ಶನಂ ಹೆಸರು ಮಾತ್ರ ಕೇಳಿದ್ದ ನನಗೆ ಮೇಲಿನ ಘಟನೆಯನ್ನು ಕೇಳಿದ ಮೇಲೆ ಆ ಕಾವ್ಯವನ್ನು ಓದಬೇಕು, ಅದರಲ್ಲಿ ಈ ಸಂದರ್ಭ ಬರುವ ಭಾಗವನ್ನು ಓದಬೇಕು ಎಂಬ ಒತ್ತಡ ಹೆಚ್ಚಾಯಿತು. ಹೇಗೋ ಕಾವ್ಯವನ್ನು ಸಂಪಾದಿಸಿ ಹುಡುಕಿ ಆ ಭಾಗದ ಜೊತೆಗೆ ಬೇರೆ ಬೇರೆ ಭಾಗಗಳನ್ನು ಓದಿದೆ. ಅಂದರೆ ಕಾವ್ಯದ ಸಂದರ್ಭ ನಮ್ಮ ಓದಿಗೂ ಪ್ರೇರಣೆ ಒದಗಿಸಬಲ್ಲದು ಎಂಬುದು ಇದರಿಂದ ವೇದ್ಯವಾಗುತ್ತದೆ.
ಅದಕ್ಕಿಂತ ಹೆಚ್ಚಾಗಿ ಕುವೆಂಪು ಅವರು ನಿತ್ಯದ ಬದುಕಿನಲ್ಲಿ ನಡೆವ ಸಣ್ಣಪುಟ್ಟ ಸಂಗತಿಗಳಿಗೂ ಕೆಲವೊಮ್ಮೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದರು. ’ಮಗಳು ಕಂಡ ಕುವೆಂಪು’ ಕೃತಿಯಲ್ಲಿ ಅಂತಹ ಘಟನೆಗಳು ಹಲವು ದಾಖಲಾಗಿವೆ. ಅಮೆರಿಕಾದಲ್ಲಿ ಕೆನಡಿ ಕೊಲೆಯಾದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದ ಕುವೆಂಪು, ’ಅಮೆರಿಕಾ ಅಮೆರಿಕಾ ಇಂದಾಗಿರುವೆ ನೀ ಲೋಕ ಕಂಟಕ’ ಎಂದು ಪ್ರತಿಕ್ರಿಯಿಸುತ್ತಾರೆ!
ಇನ್ನೊಂದು ಸಂದರ್ಭ ಹೀಗಿದೆ. ಮೈಸೂರಿನ ಸಿ.ಎಫ್.ಟಿ.ಆರ್.ಐ.ನವರು ಮ್ಯಾಕರೋನಿಯನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಅದರಿಂದ ತಯಾರಿಸಿದ ಉಪ್ಪಿಟ್ಟು ತಿಂದ ಕುವೆಂಪು ಅವರು, ’ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ತಿಂದೀ? ಜಾಮೂನು, ಜಿಲೇಬಿ, ಮ್ಯಾಕರೋನಿ ಬಾಸುಂದಿ ತಿಂದೀ’ ಎಂದು ಹಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಹುಟ್ಟಿದ ಚುಟುಕಗಳು ಯಾವುದೇ ಸಂಕಲನದಲ್ಲಿ ದಾಖಲಾಗಿಲ್ಲ.
ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕುವೆಂಪು ಅವರ ಹಲವಾರು ಪ್ರಕಟಿತ ಕವಿತೆಗಳ ಸಂದರ್ಭಗಳು ನನಗೆ ಸಿಕ್ಕಿದ್ದು. ಕುವೆಂಪು ಅವರ ’ನೆನಪಿನದೋಣಿಯಲ್ಲಿ’ ಮತ್ತು ಅವರ ಮಗಳು ತಾರಿಣಿಯವರ ’ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿ ಅವರ ಹಲವಾರು ಕವಿತೆಗಳು ಹುಟ್ಟಿದ ಸಂದರ್ಭಗಳು ದಾಖಲಾಗಿವೆ. ಆ ಸಂದರ್ಭಗಳನ್ನು ಓದಿದಾಗ, ಮತ್ತೊಮ್ಮೆ ಮೂಲ ಕವಿತೆಯನ್ನು ಓದಬೇಕು ಎನ್ನಿಸುತ್ತದೆ. ಆಗ ಮೂಲಕವಿತೆಯ ಸೊಗಸು ಬೇರೆಯದೇ ಆಗಿ ಕಂಡಿದೆ.
ಕುಸಕಾ/2 (ಕುವೆಂಪು ಸಮಗ್ರ ಕಾವ್ಯ ಸಂಪುಟ 2) ಪುಟ 774ರಲ್ಲಿ ನಾಲ್ಕು ಸಾಲಿನ ಶಿಶುಪ್ರಾಸವೊಂದಿದೆ. 'ಇಂದುಕಲೆಗೆ' ಎಂಬುದು ಅದರ ಹೆಸರು. ಕುವೆಂಪು ಅವರ ಮಗಳು ಇಂದುಕಲಾ ತುಂಬಾ ಸಂಕೋಚದವರು. ಮಗುವಾಗಿದ್ದಾಗಲಿಂದಲೂ ಈ ಸಂಕೋಚ ಅವರನ್ನು ಬಿಟ್ಟಿದ್ದಿಲ್ಲವಂತೆ. ಅಮ್ಮ ಏನಾದರೂ ಗದರಿದರೆ, ಮಗು ತಂದೆಯ ರೂಮಿನ ಬಳಿ ಬಂದು, ಬಾಗಿಲ ಪರದೆಯ ಸಂದಿಯಿಂದ ಇಣುಕುತ್ತಾ ನಿಂತುಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ ಕುವೆಂಪು ಅವರು ಹಾಡಿದ್ದು,
ತಿಪ್ಪತಿಪ್ಪ ಹೆಜ್ಜೆ ಇಟ್ಟು!ಎಂದು. ಕವನದ ಕೊನೆಯ ಸಾಲು, ಟೆಂಟಿನಿಂದ ಕತ್ತನ್ನು ಮಾತ್ರ ಹೊರ ಚಾಚಿರುವ ಒಂಟೆಯ ಚಿತ್ರ, ಪರದೆಯ ಹಿಂದೆ ನಿಂತು ಕತ್ತನ್ನು ಮಾತ್ರ ಹೊರಹಾಕಿ ನಿಂತಿರುವ ಮಗುವಿನ ಚಿತ್ರವನ್ನು ಸೊಗಸಾಗಿ ಸೂಚಿಸಿದೆ. ಯಾವುದೇ ಪುಟ್ಟ ಮಗು ನಡೆಯುವುದನ್ನು ಕಲಿತು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುವೆಂಪು ಅವರ ಹತ್ತಿರ ಹೋದರೆ, ಅವರು ಇದೇ ಶಿಶುಪ್ರಾಸವನ್ನು ಹಾಡುತ್ತಿದ್ದರಂತೆ!
ಬಂತು ಪುಟ್ಟ ತಂಟೆ!
ತಲೆಯನಿಂತೆ ಇಡುವುದಂತೆ
ಟೆಂಟೊಳರಬನೊಂಟೆ.
1-7-1975ರ ದಿನಾಂಕವಿರುವ 'ಆಪತ್ಕಾಲ' ಕವಿತೆ (ಕುಸಕಾ/2 ಪುಟ 312) ಹೀಗಿದೆ.
ಬಾಯ್ಗೆ ಬಟ್ಟೆ ತುರುಕಿಈ ಕವಿತೆಯನ್ನು ಮೊದಲು ಓದಿದಾಗ ನನಗೇನನ್ನಿಸಿತ್ತು ಎಂಬುದು ಈಗ ನೆನಪಿಲ್ಲ. ಆದರೆ ಇಷ್ಟು ಪುಟ್ಟ ಕವಿತೆ ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿರುವ ರಹಸ್ಯ ಮಾತ್ರ ವಿಸ್ಮಯವಾದುದು. ತುರ್ತು ಪರಿಸ್ಥಿತಿ ದಿನಗಳಲ್ಲಿ ಪತ್ರಿಕಾ, ವಾಕ್ ಸ್ವಾತಂತ್ರದ ಮೇಲೂ ನಿಷೇಧ ಹೇರಲಾಗಿತ್ತು. ತುರ್ತು ಪರಿಸ್ಥಿತಿ ಹೇರಿರುವುದರ ಬಗ್ಗೆ ಕುವೆಂಪು ಅವರಿಗೆ ಅಸಮಾಧಾನವಿತ್ತು. ಅದನ್ನೇ ಈ ಐದು ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ.
ಬಿಗಿದು ಕೈಯ ಕಟ್ಟಿದ್ದಾರೆ!
ಗಂಟಲೊತ್ತಿ ಹಿಸುಕಿದ್ದಾರೆ!
ಸತ್ತೆ ಸತ್ತೆ ಅಯ್ಯೋ ಸತ್ತೆ:
ನಾ....ನು....ಪ್ರ....ಜಾ....ಸ....ತ್ತೆ!
ಈ ತರದ ಇನ್ನಷ್ಟು ಉದಾಹರಣೆಗಳು ಇವೆ, ಮುಂದಿನ ಭಾಗದಲ್ಲಿ.
1 comment:
ನಿಜ ಕವಿತೆ ಹುಟ್ಟಿದ ಸಮಯ ಕವಿತ ಆಳವನ್ನು ಪರಿಚಯಿಸುತ್ತದೆ ,,
ನಿಮ್ಮ ಪ್ರಯತ್ನ ಮುಂದುವರೆಯಲಿ .. ಇನ್ನಷ್ಟು ಉದಾಹರಣೆಗಳು ಶೀಘ್ರವೇ ಬರಲಿ
Post a Comment