Monday, June 06, 2011

ಸಾವಿರ ವರುಷದ ಪಂಪನ ಬಣ್ಣನೆ ಇಂದೂ ಸಾರ್ಥಕವಾಗಿತ್ತು!

ಕುವೆಂಪು ಅವರ ಮನೆ ಉದಯರವಿಯ ಮುಂದಿನ ಕೈತೋಟದಲ್ಲಿ ಹಲವಾರು ತರಹದ ಹೂಗಿಡಗಳನ್ನು ಬೆಳಸಲಾಗಿರುತ್ತದೆ. ಹಸಿರು, ಹೂವು, ಮರ, ಗಿಡ, ಹಕ್ಕಿಗಳ ಬಗ್ಗೆ ವಿಶೇಷ ಪ್ರೀತಿಯಿದ್ದ ಕವಿಗೆ ಈ ಉದ್ಯಾನವನ ಮಲೆನಾಡಿಗೆ ಇಟ್ಟ ಒಂದು ಪುಟ್ಟ ಕಿಟಕಿಯಾಗಿತ್ತೇನೋ! ಈ ಹೂದೋಟದಲ್ಲಿದ್ದ ಗಿಡಗಳ ಮತ್ತು ಅವುಗಳ ಹೂವುಗಳ ಬಗ್ಗೆಯೇ ಹಲವಾರು ಕವಿತೆಗಳನ್ನು ಕುವೆಂಪು ಬರೆದಿದ್ದಾರೆ. ಉದಯರವಿ ನಿರ್ಮಾಣವಾಗುತ್ತಿರುವಾಗಲೇ ಹಾಕಿದ ಸುರಹೊನ್ನೆಯ ಮರದ ಹೂವಿನ ಬಗ್ಗೆ ತಾರಿಣಿಯವರು, ’ಹೂವುಗಳನ್ನೆಲ್ಲಾ ಕೊಯ್ದು ದೇವರಿಗೆ ಹಾರಮಾಡಿ ಹಾಕುವುದು ಅಮ್ಮನ ಕೆಲಸ. ಹೂ ಪರಿಮಳ ತಿಳಿಯಾಗಿ ದೇವರ ಮನೆಯನ್ನೆಲ್ಲಾ ಆವರಿಸುತ್ತಿತ್ತು. ಗಿಡದಲ್ಲಿನ ಹೂಗಳಿಗೆ ಜೇನುಗಳು ಮತ್ತುತ್ತಿದ್ದವು. ಅವುಗಳ ಝೇಂಕಾರದಿಂದ ಶುಭ್ರ ಬಿಳೀ ಹೂ ಮಧ್ಯೆ ಕೆಂಪು ಶಲಾಖೆ ನೋಡಲು ಎರಡು ಕಣ್ಣೂ ಸಾಲದು’ ಎಂದು ಬರೆದಿದ್ದಾರೆ. ಕುವೆಂಪು ಬಿಡುವಿನ ವೇಳೆಯಲ್ಲಿ ಹೂದೋಟದಲ್ಲಿ ಕುಳಿತು ಹೂವು, ಹಕ್ಕಿ ಮೊದಲಾದವುಗಳನ್ನು ನೋಡುತ್ತಾ ರಸಸಮಾಧಿಯನ್ನೇರುತ್ತಿದ್ದರಂತೆ! ಅಂತಹ ಒಂದು ದಿನ, (೧೮-೯-೧೯೫೫) ಸುರಹೊನ್ನೆಯ ಮರ ಅದರ ಹೂವು ಕವಿಗೆ ಅಧಿದೇವತೆಯ ಸಾಕ್ಷಾತ್ಕಾರದಂತೆ ಕಂಡುಬಿಡುತ್ತದೆ. ಆಗ ಉಂಟಾದ ರಸಾನುಭವದ ಫಲವೇ ’ಅಧಿದೇವತಾ ಆವಿರ್ಭೂತಿ’ ಎಂಬ ಕವನ.

ಸುರಹೊನ್ನೆಯ ಮರ ದಿಟಕೂ ಸುರವಾಗಿತ್ತು;
ಹೊನ್ನಾಗಿತ್ತು.
ಶ್ರಾವಣಮಾಸದ ಸಿರಿಹೊತ್ತಾರೆಯ ವಾಯು ಮಂಡಲಕೆ
ಕಂಪಿನ ಹೊಳೆ ಹರಿದಿತ್ತು;
ಮರವೇ ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆಯಾಗಿತ್ತು.
ಸಾವಿರ ವರುಷದ ಪಂಪನ ಬಣ್ಣನೆ ಇಂದೂ ಸಾರ್ಥಕವಾಗಿತ್ತು!
’ಮರವೇ ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆಯಾಗಿತ್ತು.’ ಎಂಬ ಸಾಲು ಅದ್ಭುತವಾಗಿದೆ. ಕುವೆಂಪು ಅವರ ’ಭಗವಂತನಾನಂದ ರೂಪಗೊಂಡಿಹುದಿಲ್ಲಿ’ ಮತ್ತು ಬೇಂದ್ರೆಯವರ ’ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಯಾ ಹಾಡು’ ಸಾಲುಗಳಂತಹ ಒಂದು ಅದ್ಭುತ ರೂಪಕ ’ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆ!’ ಕವಿತೆ ಹೂವಿನ ಪರಿಮಳ, ಕಾಣ್ಕೆ ಹಾಗೂ ಕವಿಗಾದ ಅನುಭವವನ್ನು ಕಟ್ಟಿಕೊಡುತ್ತದೆ. ಸುರಹೊನ್ನೆಯ ಕಾವ್ಯ ಸೊಬಗು ಕನ್ನಡದ ಮಟ್ಟಿಗೆ ಸಾವಿರ ವರ್ಷಗಳನ್ನು ಪೂರೈಸಿದೆ! ಸುರಹೊನ್ನೆಯ ಹೂವಿನ ಬಗ್ಗೆ ಪಂಪನೂ ವರ್ಣಿಸಿದ್ದಾನೆ. (ಅದನ್ನು ಕೊನೆಯಲ್ಲಿ ಗಮನಿಸಲಾಗುವುದು)
ಚಿನ್ನದ ನೇಸರು ಕೋಲ್ಗದಿರಿಂ ಚೆಂಬಿಸಿಲಿನ ರಂಗೋಲಿಯನೆಸೆದಿತ್ತು;
ಗರುಕೆಯ ಹಸುರುಕ್ಕುವ ನೆಲ ಪಚ್ಚೆಯ ವೇದಿಕೆಯಾಗಿತ್ತು.

ಜೇನ್ದುಂಬಿಯ ಮೊರೆ, ಹಕ್ಕಿಯ ಇಂಚರ, ಕೈದೋಂಟದ ಹೂಗಳ ಪರಿವಾರ
ಕವಿಹೃದಯಕೆ ತಾನಾದುದು ರಸಲೋಕದ ಅಮೃತಾಹಾರ:
ತೆಕ್ಕನೆ ಮೋಕ್ಷಕೆ ತವರಾದುದೊ ತಾನ್ ಈ ಸಂಸಾರ!

ಸಾಮಾನ್ಯದ ಸೀಮೆಯಲ್ಲಿದ್ದಾ ಸುರಹೊನ್ನೆಯ ಮರದಡಿಗೆ
ಸೌಂದರ್ಯಾವೇಶದಿ ನಡೆದೈತರೆ ಕವಿ,
ಅದ್ಭುತವಾಯಿತ್ತು:

ಸಂಯೋಗದಿ ಅವಿರ್ಭವಿಸಿತು, ಅವತರಿಸಿತು ರಸದೈವಂ ಮುಡಿಗೆ:
ಬಿಚ್ಚಿದ ಸುರಳಿಯ ಸರ್ಪದ ಹೆಡೆ ತಾಗಿತು ಅಧಿದೇವತೆಯಡಿಗೆ!

ಸ್ಪಂದಿಸಿತಾಕಾಶ!
ಪಿಲಕಿಸಿದವನಿ!
ತರುತನು ರೋಮಾಂಚಿಸಿತು!
ಮೃತ್‌ತನು ತಾಂ ಚಿತ್‌ತನುವಾಯ್ತೀ ಪೃಥಿವಿ!

ಅತಿಶೈತ್ಯಕೆ ಕಡಲಿನ ನೀರ್
ಘನವಾಗುವ ಐಕಿಲ್ಬಂಡೆಯ ತೆರದಿ,
ಭಕ್ತಿಯ ಭರಕೆ
ಆಕಾರಕೆ ಅವತರಿಸುವ ಭಗವಂತನ ತೆರದಿ,
ಕರುವೈತರೆ ಅಕ್ಕರೆಗುಕ್ಕಿ
ಹಾಳ್ ಸೊರಸುವ ಸುರಭಿಯ ತೆರದಿ,
ಸಂಭವಿಸಿತು ರಸತತ್ವಂ ಆ ಮರದಿ!
ಅತಿಶೈತ್ಯಕೆ ಕಡಲಿನ ನೀರ್ ಘನವಾಗುವ ಐಕಿಲ್ಬಂಡೆಯ ತೆರದಿ, ಎನ್ನುವಲ್ಲಿ 'ಐಕಿಲ್ಬಂಡೆ' (ಐಕಿಲ್ = ಮಂಜು; ನೀರ್ಗಲ್ಲು - Iceburg) ಎಂಬ ಪ್ರಯೋಗ ಗಮನಸೆಳೆಯುತ್ತದೆ.


ಶರಧಿ ಶರೀರೆ; ಗಿರಿವನ ವದನೆ;
ಗಗನಾಂಬರೆ; ಅಧಿಮಾನಸ ಸದನೆ;
ನಯನ ಸರೋವರೆ;
ಭ್ರೂ ಸುಂದರ ಅದ್ರಿ!

ಹಣೆ ಆಕಾಶವ ಕೀಸಿತು. ಪುಲಕಾವೇಶಂ
ವ್ಯೋಮವನಾಚ್ಛಾದಿಸಿತಾತ್ಮದ ಧೂರ್ಜಟಿಕೇಶಂ
ಕೆದರಿದ ಕೂದಲ ಮೇಘಾಂತರದಲಿ ಸೆರೆಸಿಕ್ಕಿದ ರವಿ ಚಂದ್ರ
ತಾವಾದರು ರುದ್ರಾಭರಣಂಗಳವೊಲು ಸುಂದರ ರುಂದ್ರ!
ಈ ಭಾಗದಲ್ಲಿ ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ, ಆರಾಧಿಸುವ ನವೋದಯ ಕವಿಗಳ ಮನೋಭಾವವೇ ವ್ಯಕ್ತವಾಗಿದೆ. ಇಡೀ ವಿಶ್ವವನ್ನೇ ದೇವರ ಆಕಾರವೆಂದು ಭಾವಿಸಲಾಗಿದೆ. ಹಲವು ತಲೆ, ಹಲವು ಕೈ, ವಿಚಿತ್ರ ವೇಷಭೂಷಣದ ದೇವರುಗಳಿಗಿಂತ ಇಡೀ ಸೃಷ್ಟಿಯನ್ನು ದೇವರೆಂದು ಪರಿಭಾವಿಸುವುದು ಆ ಯುಗದ ಧರ್ಮವೇ ಆಗಿದೆ.
ರಸದದ್ರಿಗೆ ದುಮುಕಿದ ನಾನಿಲ್ಲಾಗಿ
ತುಂಬಿದೆನೆಲ್ಲವನಂಬರವಪುವಾಗಿ!
ಹಾಲಾದಳು ತಾಯಾಗಿ;
ಮಧುವಾದಳು ವಧುವಾಗಿ;
ಬೆಳಕಾದಳು ಗುರುವಾಗಿ:

ಸುರಹೊನ್ನೆಯ ರೂಪದಲ್ಲಿ ಅದಿದೇವತೆಯ ಆವಿರ್ಭಾವವಾದ ಮೇಲೆ, ಆ ಅದಿದೇವತೆ ತಾಯಾಗಿ, ವಧುವಾಗಿ, ಗುರುವಾಗಿ ಕವಿಗೆ ಗೋಚರಿಸುತ್ತಾಳೆ. ಅದಿದೇವತೆಯ ಸ್ತುತಿ ಸಂಸ್ಕೃತದಲ್ಲಿದೆ; ನಾರಣಪ್ಪನಲ್ಲಿ ದ್ರೌಪದಿಯ ಮುಡಿ - ಶ್ರೀಮುಡಿಯಾದಂತೆ.
"ಮಧು ವಾತಾ ಋತಾಯತೇ!
ಮಧು ಕ್ಷರಂತಿ ಸಿಂಧವಃ|
ಮಾಧ್ವೀರ್ನಃ ಸ್ತನ್ವೋಷಧಿಃ||"
"ಮಧು ನಕ್ತಮುತೋಷಸೋ|
ಮಧುಮತ್ಪಾರ್ಥಿವಂ ರಜಃ|
ಮಧು ದ್ಯೌರಸ್ತು ನಃ ಪಿತಾ||"
"ಮಧುಮಾನ್ನೋ ವನಸ್ಪತಿಃ|
ಮಧುಮಾನಸ್ತು ಸೂರ್ಯಃ|
ಮಾಧ್ವೀರ್ಗಾವೋ ಭವನ್ತು ನಃ||"

ಸುರಹೊನ್ನೆಯ ಹೂವಿನ ಸೌಂದರ್ಯಾಸ್ವಾದನೆಯಲ್ಲಿ ಮುಳುಗಿದ ಕವಿಯ ಮನಸ್ಸು ಕಾಲ-ಲೋಕಗಳನ್ನು ಮೀರಿ, ಅಧಿದೇವತೆಯ ಸಾಕ್ಷಾತ್ಕಾರವನ್ನು ಕಂಡ ಕಾಣ್ಕೆ, ವೇದ ಉಪನಿಷತ್ ವಿಚಾರಶ್ರೀಯ ವಿಹಾರ, ಭೂಮ್ಯಾಕಾಶಗಳನ್ನು ಆವರಿಸಿದ ಚೈತನ್ಯ, ಮರ್ತ್ಯಪ್ರಕೃತಿಯ ಅಲೌಕಿಕಾವತಾರ ಮೊದಲಾದವು ಕವಿತೆಯ ರಸೋತ್ಕರ್ಷವನ್ನು ಮನಗಾಣಿಸುತ್ತವೆ.
ಜೈನಪರಂಪರೆಯಲ್ಲಿ, ಪುರಾಣಗಳಲ್ಲಿ ವಿಶೇಷವಾಗಿ ವರ್ಣಿತವಾಗಿರುವ ನಮೇರುವ ಎಂಬ ಮರದ ಪುಷ್ಪ ಸುರಹೊನ್ನೆಯ ಹೂವೇ ಆಗಿದೆ. ಅದಕ್ಕೆ ಸುರಪುನ್ನಾಗ ಎಂಬ ಹೆಸರೂ ಇದೆ. ಇದು ಜಿನರಿಗೆ ಅತ್ಯಂತ ಪ್ರಿಯವಾದ ಪುಷ್ಪ. ಶ್ರವಣಬೆಳಗೊಳದ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕವನ್ನು ವಿಶೇಷವಾಗಿ ವರ್ಣಿಸಿರುವ 'ಬೊಪ್ಪಣ್ಣ'ನ 'ಗೊಮ್ಮಟಸ್ತುತಿ'ಯಲ್ಲಿಯೂ ಸುರಹೊನ್ನೆಯ ಪ್ರಸ್ತಾಪವಿದೆ. 'ಹೂವುಗಳಲ್ಲಿ ಸುರಹೊನ್ನೆಯೇ ಚೆನ್ನ' ಎನ್ನುವ ಪಂಪ ಸುರಹೊನ್ನೆಯನ್ನುವರ್ಣಿಸಿರುವ ರೀತಿ ಹೀಗಿದೆ:

ಎಸಳ್ಗಳನೆಂ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ
ಪಸರಿಸಿ ಕೇಸರಾಕೃತಿಂಳಲ್ಲಿಗೆ ಕರ್ಣಿಕೆಯಂದಮಗೆ ಕೀ
ಲಿಸಿ ಪೊಸತಪ್ಪ ಮಣಿಕದ ನುಣ್ಬರಲಂ ಮಧು ಮನ್ಮಥಂಗೆ ಬ
ಣ್ಣಿಸಿ ಸಮೆದಂತೆ ತೋಱುವುದು ಪೂಗಳೊಳೇಂ ಸುರಹೊನ್ನೆ ಚೆನ್ನನೋ
(ಮುತ್ತುಗಳಿಂದ ಎಸಳುಗಳನ್ನು ಸರಿಯಗಿ ನಿರ್ಮಿಸಿ, ಅದರಲ್ಲಿ ಕೇಸರಾಕಾರದಲ್ಲಿ ಚಿನ್ನದಪುಡಿಗಳನ್ನು ಉದುರಿಸಿ, ಮಣಿಕ್ಯದಿಂದಾದ ತನ್ನ ನುಣ್ಬೆರಳನ್ನು ಅದರ ನಡುವೆ ಕರ್ಣಿಕೆಯಂತೆ ಇಟ್ಟು, ವಸಂತನು ಮನ್ಮಥನಿಗೆ
ಈ ಹೂವನ್ನು ಬಣ್ಣಿಸಿ ಹೇಳುತ್ತಿರುವನೋ ಎಂಬಂತೆ ತೋರುವ ಈ ಸುರಹೊನ್ನೆ ಹೂಗಳಲ್ಲಿ ಅದೆಷ್ಟು ಸುಂದರವೊ!)

No comments: