ಹಸುರು ಹಾಸಿದ ನೆಲದಕವಿಗೆ ಹಸುರೆಂದರೆ ಪ್ರೀತಿ. ಆಕರ್ಷಣೆ. ಭಾದ್ರಪದ ಮಾಸ ಕವಿಯ ಮನಸ್ಸಿಗಿಳಿಯುವುದು ಹಸುರಿನಿಂದಲೇ! ಕವಿಯ ಹಸುರಿನ ಪ್ರೀತಿಗೆ ’ಹೆಸರಿಲ್ಲದ ತಂಪು’ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ.
ಶಾದ್ವಲದ ಹಾಸ;
ತಿಲಕ ವೃಕ್ಷದ ಸಾಲು;
ಬುಡವೆಲ್ಲ ಹೂ ಹಾಲು:
ಭಾದ್ರಪದ ಮಾಸ!
ಹಸುರು, ಹಸುರು, ಸೊಂಪು;ಹೀಗೆ 'ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್' ಎಂದು ಸದಾ ಹಸುರಿಗಾಗಿ ತುಡಿಯುವ ಕವಿಗೆ ತನ್ನ ಮನೆಯ ಉದ್ಯಾನವನದ ಹಸುರು ನಿತ್ಯೋತ್ಸವ ಸರ್ವದಾ ಅಪೇಕ್ಷಣೀಯ. ಉದಯರವಿಯ ಉದ್ಯಾನವನದಲ್ಲಿ ನಾನಾ ಜಾತಿಯ ಗಿಡ, ಮರ, ಹೂಗಿಡಗಳು ಇದ್ದುವು. ಅವೆಲ್ಲದರ ಜೊತೆಗೆ ಉದ್ಯಾನದ ಎರಡೂ ಕಡೆ ವಿಶಾಲವಾದ ಹುಲ್ಲುಹಾಸನ್ನು ಬೆಳಸಲಾಗಿತ್ತು. ಅದರ ನಿರ್ವಹಣೆಗೆ ಸ್ವತಃ ಕುವೆಂಪು ಅವರೇ ಶ್ರಮವಹಿಸುತ್ತಿದ್ದರು. ಬೇಸಗೆಯ ದಿನಗಳಲ್ಲಿ ಅದಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೆಕಾಗಿತ್ತು. ನಲ್ಲಿಯಲ್ಲಿ ನೀರು ಬರುತ್ತಿದ್ದುದೇ ದಿನ ಬಿಟ್ಟು ದಿನ. ಅದಕ್ಕಿಂತ ಹೆಚ್ಚಾಗಿ ಅಪರಾತ್ರಿಯ ವೇಳೆಯಲ್ಲೇ ನಲ್ಲಿಗಳಿಗೆ ಜೀವ ಬರುತ್ತಿತ್ತಂತೆ! ರಾತ್ರಿ ನೀರು ಬರುವ ಸದ್ದು ಕೇಳಿದರೆ ಕುವೆಂಪು ಅವರೇ ಎದ್ದುಹೋಗಿ ಹುಲ್ಲು ಹಾಸಿನ ಎಲ್ಲಾ ಕಡೆಗೆ ನೀರು ಹಾಕಿ ಹಾರೈಕೆ ಮಾಡುತ್ತಿದ್ದರಂತೆ. ಪ್ರಸಿದ್ಧ ನೇತ್ರ ತಜ್ಞರಾದ ಡಾ. ಮೋದಿಯವರು ಉದಯರವಿಗೆ ಬಂದಾಗಲೆಲ್ಲಾ ಸೊಂಪಾಗಿ ಬೆಳೆದ ಆ ಹುಲ್ಲುಹಾಸನ್ನು ತುಂಬಾ ಹೊತ್ತು ನೋಡಿ ನಂತರವೇ ಮನೆಯ ಒಳಗೆ ಬರುತ್ತಿದ್ದರಂತೆ! ಬಿರುಬಿಸಿಲಿನಲ್ಲಿಯೂ ಕಣ್ಣಿಗೆ ತಂಪು ಈ ನಿಮ್ಮ ಲಾನ್. ದಿನವೂ ನೋಡುತ್ತಿದ್ದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಕುವೆಂಪು ಅವರಿಗೆ ಹೇಳುತ್ತಿದ್ದರಂತೆ. ಒಮ್ಮೆ ಕುವೆಂಪು ಅವರು ಆ ಶಾದ್ವಲ ವೇದಿಕೆಯನ್ನೇ ನೋಡುತ್ತಾ ತಾರಿಣಿಯವರಿಗೆ ’ಏನು ಹಸಿರು ಉಕ್ಕುತಿದೆ ನೋಡಕ್ಕಾ, ಕಣ್ಗೆ ಸೊಂಪು, ಮನಕೆ ತಂಪು, ಹೃದಯ ಪೆಂಪು, ಹಸಿರು ಹೆಪ್ಪು ಬಿಸಿಲೊಳೆಸೆಯುವ ತೋಟವೇ ಕುವೆಂಪು, ಆಗಿ ತಿರುಗಾಡುತ್ತಿರುವೆ ಈ ಹೂದೋಟದಲ್ಲಿ’ ಎಂದು ಹೇಳಿದ್ದರಂತೆ.
ಹೆಸರಿಲ್ಲದ ತಂಪು;
ತನಗೆ ತಾನೆ ಇಂಪು:
ಇಲ್ಲ ಬೇರೆ ಪೆಂಪು;
ಅಲ್ಲಿ ಬರಿ ಕುವೆಂಪು!. . . . ದೂರ . . . .
ಅಂತಹ ಹುಲ್ಲು ಹಾಸು ಕವಿಗೆ ಹೇಗೆ ಕಂಡಿರಬಹುದು? ಉದ್ಯಾನ ಶಾದ್ವಲ ಕವಿತೆಯಲ್ಲಿ ಮೂಡಿದೆ ಕವಿಯ ಅಂತರಂಗ.
ಈ ಶಾದ್ವಲ . . .!ಹಸುರು ಹತ್ತಿದ ನೆಲ, ಈ ಶಾದ್ವಲದ ವೇದಿಕೆ ಕವಿಗೆ ಇಂದ್ರನ ಉದ್ಯಾನ ನಂದನದ ತುಣುಕಿನಂತೆ ಕಾಣುತ್ತದೆ. ಶಾಪದಿಂದ ಊರ್ವಶಿ ಭೂಮಿಗೆ ಬಂದಳಂತೆ! ಆದರೆ ಆಕೆ ಬಂದಿದ್ದು ಹಸುರಾಗಿ, ಹಸುರಿನ ಹುಲ್ಲುಹಾಸಾಗಿ! ಬಂದು ನೆಲೆಯಾಗಿದ್ದು ಉದಯರವಿಯ ಉದ್ಯಾನವನದಲ್ಲಿ. ಊರ್ವಶಿ ಭುಮಿಗೆ ಬಂದದ್ದು ಶಾಪದಿಂದ. ಆದರೆ ಅವಳಿಗೆ ಶಾಪವಾಗಿದ್ದು ಕವಿಗೆ ವರವಾಗಿಬಿಟ್ಟಿದೆ!
ಇದೇನು ಬರಿಯ ಹಸುರು ಹತ್ತಿದ ನೆಲ?
ನಂದನದ ಚೂರೊಂದು ನಮ್ಮಿಳೆಗೆ ಬಿದ್ದುದಲಾ!
ವರವೋ? ಶಾಪವೋ?
ಊರ್ವಶಿಯೆ ಹಸುರಾಗಿ ಇಳಿಯುತಿಲ್ಲಿ
ನಮ್ಮ ಮನೆ ’ಉದಯರವಿ’ಯುದ್ಯಾನದಲ್ಲಿ
ತಾನಾದಳೈಸೆ ಉರ್ವರಾ-ಶಾದ್ವಲಾ!
ಭಾವಗೀತೆಯ ಪ್ರಾಣಕೇಂದ್ರದಲಿ ಕುಳಿತು, ಕವಿಭಾವಗೀತೆಗೆ ಜೀವತುಂಬಿದವನು ಕವಿ. ಆತನೇ ಅದರ ಪ್ರಾಣಕೇಂದ್ರದಲ್ಲಿ ಕುಳಿತು ತನ್ನ ಸೃಷ್ಟಿಗೆ ತಾನೇ ಮಾರುಹೋಗಿಬಿಡುತ್ತಾನೆ, ’ತನ್ನ ಕೃತಿಗೆ ಕವಿ ತಾನೆ ಮಣಿವಂತೆ’. ಉದ್ಯಾನವನದಲ್ಲಿದ್ದ ಶಿಲಾಪೀಠದ ಮೇಲೆ ಕುಳಿತು ಕವಿ ಭಾವಸಮಾಧಿಸ್ತನಾಗಿಬಿಡುತ್ತಾನೆ ಎಂಬುದನ್ನು ದೇವನಾಗುತ್ತಿಹೆನು ಎಂದು ಹೇಳಿ ಆ ಬ್ರಹ್ಮಾನಂದಕ್ಕೆ ವಾಗ್ರೂಪವನ್ನು ಹೇಳಿದ್ದಾರೆ.
ತನ್ನ ಸೃಷ್ಟಿಗೆ ತಾನೆ ಮಾರುಹೋಗುವವೋಲೆ
ಮನೆಯ ಉದ್ಯಾನದೀ ಶಿಲೆಯ ಪೀಠದ ಮೇಲೆ
ದೇವನಾಗುತ್ತಿಹೆನು, ಮೆಯ್ಯೆಲ್ಲ ಮಿಂಚಿ! ರವಿ
ಪಚ್ಚೆಯೀ ಶಾದ್ವಲದಿ ಮೃಣಾಳಮರಕತಚ್ಛವಿ!. . .
ಅಗ್ನಿಗಂಗೆಯ ಧರಿಸೆ ಧೂರ್ಜಟಿಯ ವ್ಯೋಮಕೇಶ,ಹಸುರಿನ ದ್ಯಾನಮಗ್ನನಾದ ಕವಿಗೆ ಶಿವಸಾಕ್ಷಾತ್ಕಾರವಾಗಿಬಿಡುತ್ತದೆ. ಅಗ್ನಿಯಷ್ಟೇ ಪವಿತ್ರಳಾದ ಗಂಗೆಯನ್ನು ಧೂರ್ಜಟಿಯು ಧರಿಸಿದಂತೆ ಕವಿಯ ಪ್ರಾಣಕೋಶ ಹಸುರನ್ನು ಮೇಯುತ್ತದೆ, ಉಸಿರೆಳೆದೆ!
ಉಸಿರೆಳೆದೆ ಹಸುರ ಮೇದುದು ಕವಿ ಪ್ರಾಣಕೋಶ!
ಹೂವಾದರೆ ಹೋಗಲಿ; ಎಸಳು ಹಸುರು ಹುಲ್ಲಿಗೂ ಇಷ್ಟೊಂದು ಪ್ರಾಮುಖ್ಯೆತೆ ಏಕೆ ಎಂದೆನಿಸಬಹುದು ಸಾಮಾನ್ಯನ ಪ್ರಜ್ಞೆಗೆ. ಆದರೆ ಕವಿ ಪ್ರಜ್ಞೆಗೆ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಒಂದು ಎಸಳು ಹುಲ್ಲು, ಒಂದು ಹನಿ ಇಬ್ಬನಿ ಹೀಗೆ... ಸರ್ವದಲ್ಲೂ ಸೃಷ್ಟಿಯ ಬೆರಗನ್ನು ಆಸ್ವಾದಿಸಬಲ್ಲದಾಗಿರುತ್ತದೆ, ಸೃಷ್ಟಿಶೀಲ ಪ್ರತಿಭೆ. ರಾಮಾಯಣ ದರ್ಶನಂ ಕಾವ್ಯದಲ್ಲಿ ರಾಮನಿಗೆ 'ಗಿರಿವನಪ್ರಿಯ' ಎಂಬ ವಿಶೇಷಣವನ್ನು ಟಂಕಿಸಿ ಬಳಸಿದ್ದಾರೆ. ಪಂಚವಟಿಯಲ್ಲೊಮ್ಮೆ ರಾಮನು ಸೀತೆಗೆ ಹೇಳುವ ಮಾತುಗಳಲ್ಲಿ 'ಕಿರಿದರಲ್ಲಿ ಹಿರಯರ್ಥವನ್ನು' ಕಾಣುವ ಕವಿಯ ಮನೋಭಾವವನ್ನು ನೋಡಬಹುದು.
"ನೋಡು, ಮೈಥಿಲಿ, ಅಲ್ಲಿ!
ಪನಿ ತಳ್ತ ಶಾದ್ವಲ ಶ್ಯಾಮವೇದಿಕೆಯಲ್ಲಿ
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವಾ ಹಿಮದ ಬಿಂದು! ಜ್ವಲಿಸುತಿದೆ
ನೋಡೆಂತು ಬಣ್ಣದೆಣ್ಣೆಯ ಹಣತೆ ಸೊಡರಂತೆ
ಸಪ್ತರಾಗೋಜ್ವಲಂ! ಸರ್ವಸೃಷ್ಟಿಯ ದೃಷ್ಟಿ ತಾಂ
ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದಾ
ಪುಟ್ಟ ಜೋತಿಯಲಿ! ದೇವರ ಮುಖದ ದರ್ಶನಕೆ
ಸಾಲದೇನಾ ಹನಿಯ ಕಿರುದರ್ಪಣಂ? ನಿಲ್ಲಿಮ್: ಆ
ಇರ್ಬನಿಯ ಕಿಡಿಗುಡಿಯೊಳಾರಾಧನೆಯನೆಸಗಿ
ಮುಂಬರಿಯುವಂ!"
ಅಮ್ಮ ಮಾಡಿದ ಹೋದೋಟವೇ ತಂದೆಯವರ ಅನೇಕ ಕವನಗಳಿಗೆ ಸ್ಫೂರ್ತಿಯಾಗಿದೆ ಎಂದು ತಾರಿಣಿಯವರು ’ಕಣ್ಣು’ ಎಂಬ ಕವಿತೆಯನ್ನು ಉಲ್ಲೇಖಿಸಿದ್ದಾರೆ. ’ಮನೆಯ ಉದ್ಯಾನದಲ್ಲಿ ಆಶ್ವೀಜಮಾಸದ ಪ್ರಾತಃಸಮಯದ ಹೊಂಬಿಸಿಲಿನಲ್ಲಿ ಹಸುರು ಹೂವುಗಳ ವೈಭವವನ್ನು ಸವಿಯುತ್ತಿರುವಾಗ ಉಂಟಾದ ಅನುಭವ’ ಎಂಬ ಟಿಪ್ಪಣಿಯನ್ನು ಕವಿ ನೀಡಿದ್ದಾರೆ. ಆ ಕವನದ ಪೂರ್ಣಪಾಠ ಇಲ್ಲಿದೆ.
ಎಂತಹ ಕೃಪೆ ಈ ಕಣ್ಣು,
ಹೋದೋಟದ ಶ್ರೀನೋಟವ ಸವಿಯುತ್ತಿಹ ಈ ಕಣ್ಣು!
ಭಗವಂತನ ದಯೆ ಘನಿಸಿಹುದಿಲ್ಲಿ;
ಧನ್ಯತೆ ಕ್ಷಣಕ್ಷಣಕೂ ಅವತರಿಸಿದೆ ಇಲ್ಲಿ
ಹೂ ಹೂ ಹೂವಿನ ಸುಂದರ ರೂಪದಲಿ:
ಭಾವಿಸಿದನಿತೂ, ಕಯ್ ಮುಗಿಯುತ್ತಿದೆ;
ಚಿಂತಿಸಿದನಿತೂ, ಚೇತನ ರೋಮಾಂಚನವಾಗುತಿದೆ!
ಕಣ್ಣಿನ ಈ ಸೌಭಾಗ್ಯಕೆ
ಜೀವದ ಭಕ್ತಿ ಕೃತಜ್ಞತೆ
ಜಗದಂಬೆಯ ಪಾದಕೆ ಹೂವಾರತಿಯೆತ್ತುತಿದೆ!
ಸಾಕ್ಷಾತ್ಕಾರದ ಅಗ್ನಿಯ ಅಂಚಿಗೆ ತಾಗುತ್ತಿದೆ
ಶರಣೆನುವೀ ನನ್ನಾತ್ಮದ ರತಿ,
ಶರಣಾಗತಿ
ನಮಸ್‌ಕೃತಿ!
ಸೃಷ್ಟಿಯ ಸಾರ್ಥಕತೆಗೆ ಈ ಅಕ್ಷಿಯೆ ಸಾಕ್ಷಿ:
ಅಕ್ಷಿಯ ಪುರುಷಾರ್ಥಕೆ ಈ ಸೃಷ್ಟಿಯೆ ಸಾಕ್ಷಿ;
ಅಕ್ಷಿಯ ಸೃಷ್ಟಿಯ ಸಂಗಮಸೌಭಾಗ್ಯವೆ
ಕೃಪೆಯೆ ಸ್ವಯಂ ತಾನಾಗಿಹ ಈ ದೃಷ್ಟಿ!
ಎಂತಹ ಕೃಪೆ ಓ ಈ ಕಣ್ಣು!
ಎಂತಹ ಭಾಗ್ಯವೋ ಈ ಮಣ್ಣು!
ಕಣ್ಣು ಬರಿ ಇಂದ್ರಿಯವಲ್ಲೊ:
ಸಾಕ್ಷಾತ್ಕಾರದ ಅಪರೋಕ್ಷದ ಅನುಭೂತಿಯ ಒಂದಂಗ!
3 comments:
Very nice.!!
-Raghu
really nice........
Very pleasant. A rare subject, not read any where so far by me.Thank You.
Post a Comment