Thursday, June 23, 2011

ಗುಣಮಧುರ : ಡಾ ದೇವರಕೊಂಡಾರೆಡ್ಡಿಯವರ ಅಭಿನಂದನ ಗ್ರಂಥ

[ನನ್ನ ಪಿಹೆಚ್.ಡಿ. ಅಧ್ಯಯನದ ಮಾರ್ಗದರ್ಶಕರಾದ ಡಾ.ದೇವರಕೊಂಡಾರೆಡ್ಡಿಯವರಿಗೆ ಅವರ ಅಭಿಮಾನಿ ಹಾಗೂ ಶಿಷ್ಯರ ಬಳಗ 'ಗುಣಮಧುರ' ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿತ್ತು. ನೂರಾರು ಸಂಶೋಧನಾ ಲೇಖನಗಳನ್ನು ಒಳಗೊಂಡಿರುವ ಆ ಬೃಹತ್ ಕೃತಿಯನ್ನು ಹಿರಿಯರಾದ ಶ್ರೀ ಜಿ.ಎಸ್.ಎಸ್. ರಾವ್ ಅವರು ಪರಿಚಯಿಸಿದ್ದಾರೆ.]
ಕರ್ನಾಟಕದಲ್ಲಿ ಶಾಸನ ಮತ್ತು ಲಿಪಿ ತಜ್ಞರಲ್ಲಿ ಪ್ರಮುಖರೆಂದು ಡಾ|| ದೇವರಕೊಂಡಾರೆಡ್ಡಿಯವರು ಗುರುತಿಸಲ್ಪಡುತ್ತಾರೆ. ಅವರಿಗೆ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಈ ’ಗುಣಮಧುರ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗಿದೆ. ಬರೆದಿರುವ ಲೇಖಕರೆಲ್ಲರೂ ಡಾ|| ದೇವರಕೊಂಡಾರೆಡ್ಡಿಯವರ ಆತ್ಮೀಯರು ಹಾಗೂ ತಮ್ಮ ತಮ್ಮ ಅಧ್ಯಯನಾಸಕ್ತಿಯ ಕ್ಷೇತ್ರದಲ್ಲಿ ವಿದ್ವಾಂಸರು. 
ಡಾ||ದೇವರಕೊಂಡಾರೆಡ್ಡಿಯವರು ನಿರಂತರ ಅಧ್ಯಯನ ಶೀಲರಷ್ಟೆ ಅಲ್ಲದೆ ಬೇರೆ ಬೇರೆ ವಿದ್ವತ್ ವಿಭಾಗಗಳಲ್ಲಿ ತಮ್ಮ ವಿದ್ಯಾರ್ಥಿಗಳು ಕೂಡ ಸಂಶೋಧನೆ, ಅಧ್ಯಯನ ಕೈಗೊಳ್ಳಲು ಬೇಕಾದ ತರಬೇತಿಯನ್ನು ನೀಡಿ, ಶಾಸನ ಶಾಸ್ತ್ರ, ಲಿಪಿಶಾಸ್ತ್ರ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಸತ್ಯಶೋಧನೆಯು ನಿರಂತರವಾಗಿರುವಂತೆ ಮಾಡಿದ್ದಾರೆ. ಔದಾರ್ಯ ಪೂರ್ಣ ಮುಕ್ತ ಮನಸ್ಸು, ಎಲ್ಲರೊಂದಿಗೆ ಶುದ್ಧ ಸ್ನೇಹ, ನಿರ್ಮಲವಾದ ವ್ಯಕ್ತಿತ್ವ, ಬೇಡುವ ಮುಂಚೆಯೇ ತಾವಾಗಿಯೇ ನೀಡುವ ಸಹಾಯಹಸ್ತ, ಸಾಮಾನ್ಯರಲ್ಲಿ ಕಾಣದ ನಿರ್ಲಿಪ್ತತೆ ಮತ್ತು ಡಾ||ಶೇಷಶಾಸ್ತ್ರಿಗಳು ಹೇಳಿರುವಂತೆ ’ರೀಟೈರ್’ ಅಗಿ ’ಖೇಡ, ಖರ್ವಡ, ಮಡಂಬ, ಪಟ್ಟಣ’ಗಳನ್ನು ಅಧ್ಯಯನಕ್ಕಾಗಿ ಸುತ್ತುವುದು. . . ಇವು ಡಾ||ದೇವರಕೊಂಡಾರೆಡ್ಡಿಯವರ ಸಹಜ ಗುಣಗಳು. ಅವರ ಮಧುರವಾದ ಈ ಗುಣಗಳು ಸಂಪುಟಕ್ಕಿಟ್ಟಿರುವ ’ಗುಣಮಧುರ’ ಎಂಬ ಹೆಸರನ್ನು ಸಾರ್ಥಕ ಗೊಳಿಸಿವೆ.
ಲೇಖನದ ವಿಷಯಕ್ಕೆ ಅನುಗುಣವಾಗಿ ಪುಸ್ತಕದಲ್ಲಿ ಆರು ವಿಭಾಗಗಳಿವೆ. ಮೊದಲನೆಯ ವಿಭಾಗದಲ್ಲಿ ಡಾ|| ದೇವರಕೊಂಡಾರೆಡ್ಡಿಯವರೇ ಬರೆದಿರುವ ಆತ್ಮ ಕಥನ ಇದೆ. ಅವರು ಬಾಲ್ಯದಿಂದ ಪ್ರಾರಂಭಿಸಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿ ನಿವೃತ್ತರಾಗುವವರೆಗೂ ನಡೆದು ಬಂದ ದಾರಿಯ ಸಿಂಹಾವಲೋಕನ ಇದೆ. ಅವರು ಬಾಲ್ಯದಲ್ಲಿ ಕಂಡ ತಮ್ಮ ಹಳ್ಳಿಯ ಚಿತ್ರವನ್ನು ಅಲ್ಲಿಯ ಸಮಾಜವನ್ನು ಹಬ್ಬ-ಹರಿದಿನಗಳ ಆಚರಣೆಯನ್ನು ಸಮಾಜದ ವಿವಿಧ ಸ್ತರಗಳ ಪರಸ್ಪರ ಹೊಂದಾಣಿಕೆಯನ್ನೂ ತಮ್ಮ ಮನೆಯ ಸಂಕೀರ್ಣ ವಾತಾವರಣವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಓದುಗರಿಗೆ, ಡಾ||ದೇವರಕೊಂಡಾರೆಡ್ಡಿಯವರು ತಮ್ಮ ಯೌವನದ ದಿನಗಳಲ್ಲಿ ಬಂದ ಎಲ್ಲ ಅಡೆತಡೆಗಳನ್ನು ಎದುರಿಸಲು ಬಾಲ್ಯದ ಅನುಭವಗಳು ಯಾವ ರೀತಿಯ ಸಹಾಯ ಮಾಡಿದುವೆಂಬುದರ ಹೊಳಹು ದೊರೆಯುತ್ತದೆ.
ಎರಡನೆಯ ವಿಭಾಗವಾದ ’ಗುಣಗಾನ’ದಲ್ಲಿ ಡಾ|| ದೇವರಕೊಂಡಾರೆಡ್ಡಿಯವರನ್ನು ವೈಯಕ್ತಿಕವಾಗಿ ಬಲ್ಲ ಬಹಳ ಆತ್ಮೀಯರಾದ ಸಂಬಂಧಿಗಳು, ಸ್ನೇಹಿತರು, ಸಹೋದ್ಯೋಗಿಗಳು, ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಲೇಖನಗಳಲ್ಲಿ ದೇವರಕೊಂಡಾರೆಡ್ಡಿಯವರ ತಾಯಿ, ಪತ್ನಿ ಹಾಗೂ ಮಗಳ ಲೇಖನಗಳು ಮನ ಮುಟ್ಟುವಂತಿದ್ದು, ಹೃದಯವನ್ನು ಆರ್ದಗೊಳಿಸುತ್ತವೆ. ಒಡನಾಡಿದ್ದು ಕಲ್ಲಿನಲ್ಲಿ ಕೊರೆದ ಶಾಸನಗಳೊಂದಿಗಾದರೂ ರೆಡ್ಡಿಯವರ ಹೃದಯ ಬೆಣ್ಣೆಯಷ್ಟು ಮೃದು ಎಂಬುದನ್ನು ನಿರೂಪಿಸುವುದರಲ್ಲಿ ಸಾರ್ಥಕವಾಗಿವೆ. ರೆಡ್ಡಿಯವರ ಬುದ್ದಿಮತ್ತೆ ನಿಷ್ಪಕ್ಷಪಾತ ನಿಲುವು, ಪಾಂಡಿತ್ಯ ಹಾಗೂ ಜೀವನೋತ್ಸಾಹಗಳನ್ನು ತಿಳಿಯಲು ನಾಡಿನ ಪ್ರಸಿದ್ಧ ವಿದ್ವಾಂಸರುಗಳು ಬರೆದಿರುವ ಲೇಖನಗಳು ಸಹಾಯಮಾಡುತ್ತವೆ. ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಮೂರು ಜನ ಶಿಷ್ಯರ ಲೇಖನಗಳಲ್ಲಿ ಅವರ ಶಿಷ್ಯ ವಾತ್ಸಲ್ಯ, ಅಧ್ಯಯನದ ಬಗ್ಗೆ ಇರಬೇಕಾದ ಶಿಸ್ತು ಮುಂತಾದವುಗಳ ಬಗ್ಗೆ ಮಾಹಿತಿಯಿದೆ. 
ಗ್ರಂಥಾವಲೋಕನ ಎಂದು ತಲೆಬರಹವಿರುವ ಮೂರನೆಯ ವಿಭಾಗದಲ್ಲಿ ಬಹುತೇಕ ಲೇಖನಗಳು ರೆಡ್ಡಿಯವರಿಂದ ರಚಿತವಾದ ಕೃತಿಗಳ ಪರಿಚಯ ಸಮೀಕ್ಷೆ ಗೆ ಮೀಸಲಾಗಿವೆ. ಪ್ರಾತಿನಿಧಿಕವಾಗಿ ಕೆಳಕಂಡ ಲೇಖನಗಳನ್ನು ಗಮನಿಸಬಹುದು. ಲೇಖಕರಾಗಿ ಅವರು ಪಾಲಿಸುತ್ತಿದ್ದ ಶಿಸ್ತು ಕೃತಿಗಳನ್ನು ಸಂಪಾದಿಸುವಾಗ ಗಮನಿಸುತ್ತಿದ್ದ ಸೂಕ್ಷ್ಮವಾದ ವಿಷಯಗಳು ಇತರ ಲೇಖಕರನ್ನು ವಿಮರ್ಶಿಸುವಾಗ ತೋರಿರುವ ಸಂಯಮ ಮುಂತಾದ ಗುಣಗಳು ಓದುಗರನ್ನು ಥಟ್ಟನೆ ಆಕರ್ಷಿಸುತ್ತವೆ. ಒಬ್ಬ ಒಳ್ಳೆಯ ಸಂಪಾದಕನಿಗೆ ಇರಲೇಬೇಕಾದ ಎಲ್ಲಾ ಗುಣಗಳನ್ನು ಇಲ್ಲಿರುವ ಲೇಖನಗಳ ಸಂಪಾದನೆಯಲ್ಲಿರುವುದನ್ನು ಕಾಣಬಹುದಾಗಿದೆ. ರೆಡ್ಡಿಯವರ ’ಲಿಪಿಯ ಹುಟ್ಟು ಮತ್ತು ಬೆಳವಣಿಗೆ’ ಎನ್ನುವ ಪುಟ್ಟ ಪುಸ್ತಕವನ್ನು ಅವಲೋಕಿಸಿರುವ ಡಾ| ಎಂ. ಶ್ರೀನಿವಾಸರು ಕೃತಿಯು ಹೇಗೆ ಲಿಪಿ ಪ್ರಪಂಚವನ್ನು ಪರಿಚಯಿಸುತ್ತದೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಶ್ರೀ ಎಸ್. ನಂಜುಂಡಸ್ವಾಮಿಯವರ ’ದೇವರಕೊಂಡಾರೆಡ್ಡಿಯವರ ಕೆಲವು ಕೃತಿಗಳು ಒಂದು ಪರಿಚಯ’ ಎನ್ನುವ ಲೇಖನ ದೇವರಕೊಂಡಾರೆಡ್ಡಿಯವರ ಆಸಕ್ತಿಯ ವಿಸ್ತಾರವನ್ನು ಸೂಚ್ಯವಾಗಿ ಹೇಳುತ್ತದೆ. ಡಾ.ಶಾಂತಿನಾಥ ದಿಬ್ಬದ ಅವರು ’ಕರ್ನಾಟಕ ಶಾಸನಗಳಲ್ಲಿ ಶಾಪಾಶಯ ಎಂಬ ರೆಡ್ಡಿಯವರ ಕುತೂಹಲಕಾರಿ ಕೃತಿಯನ್ನು ಪರಿಚಯಿಸಿದ್ದಾರೆ. ಶಾಸನಗಳು ಅವಿಭಾಜ್ಯ ಭಾಗವಾಗಿಯೂ ಅವಜ್ಞೆಗೆ ಒಳಗಾಗಿದ್ದ ಶಾಪಾಶಯಗಳ ಬಗ್ಗೆ ಉತ್ತಮ ಆಕರಗ್ರಂಥವೊಂದನ್ನು ದೊರಕಿಸಿಕೊಟ್ಟಿದ್ದಾರೆ. ಡಾ|| ಕೆ.ಆರ್.ಗಣೇಶ್ ಅವರು ರೆಡ್ಡಿಯವರು ಸಂಪಾದಿಸಿ ಹಂಪಿವಿಶ್ವವಿದ್ಯಾನಿಲಯದಿಂದ ಪ್ರಕಟಿಸಲ್ಪಟ್ಟಿರುವ ಒಂಭತ್ತು ಶಾಸನ ಸಂಪುಟಗಳ ವಿಶೇಷತೆಗಳನ್ನು ಗುರುತಿಸಿದ್ದಾರೆ. ಅವರು ರೆಡ್ಡಿ ಹಾಕಿಕೊಟ್ಟ ಈ ದಾರಿಯಲ್ಲಿ ಹಂಪಿಯ ವಿಶ್ವವಿದ್ಯಾಲಯ ಮಾತ್ರವಲ್ಲ, ಉಳಿದ ಎಲ್ಲ ವಿಶ್ವವಿದ್ಯಾಲಯಗಳು ನಡೆದು ನಾಡಿನ ಸಾಂಸ್ಕೃತಿಕ ಮುಖವೊಂದರ ಬೆಳಕಿಗೆ ಕಾರಣವಾಗಬೇಕಾಗಿದೆ ಎಂದಿರುವುದು ಸಕಾಲಿಕವಾಗಿದೆ.
ನಾಲ್ಕನೆಯ ವಿಭಾಗದಲ್ಲಿ ಲಿಪಿಗಳನ್ನು ಕುರಿತಂತೆ ಮೌಲಿಕವಾದ ಹನ್ನೊಂದು ಲೇಖನಗಳಿವೆ. ಪ್ರತಿ ಲೇಖನವೂ ಲಿಪಿಯೊಂದರ ಸಮಗ್ರ ಚರಿತ್ರೆಯನ್ನು ತೆರೆದಿಡುವುದಲ್ಲದೆ, ಲಿಪಿಯ ವಿಶೇಷತೆಯನ್ನು ಲಿಪಿ ಶಾಸ್ತ್ರದಲ್ಲಿ ಅದರ ಸ್ಥಾನ ಹಾಗೂ ಮಹತ್ವವನ್ನು ತಿಳಿಸಿಕೊಡುತ್ತದೆ. ಲಿಪಿಗಳ ವಿಚಾರವಾಗಿ ಆಕರಗಳೆಂದು ಪರಿಗಣಿಸಬಹುದಾದ ಈ ಲೇಖನಗಳು ವಿದ್ವತ್ ಪೂರ್ಣವಾಗಿವೆ. ಡಾ||ಅ.ಲ.ನರಸಿಂಹನ್ ಅವರ ’ಚಿತ್ರಲಿಪಿ’ ತಲೆಬರಹದ ಲೇಖನ ಇಂದಿನ ಲಿಪಿಗಳ ಉಗಮಕ್ಕೆ ’ಚಿತ್ರಲಿಪಿ’ ಗಳ ಕೊಡುಗೆಯನ್ನು ಸಮರ್ಥವಾಗಿ ನಿರೂಪಿಸುತ್ತದೆ. ಲೇಖನದ ಉದ್ದಕ್ಕೂ ಇರುವ ವಿವರಣಾತ್ಮಕ ಚಿತ್ರಗಳು ಓದುಗರಿಗೆ ವಿಷಯದ ಬಗ್ಗೆ ಆಸಕ್ತಿಯನ್ನು ಉಂಟುಮಾಡುತ್ತದೆ.
ಶ್ರೀ ಜಿ.ಕೆ.ದೇವರಾಜ ಸ್ವಾಮಿಯವರ ’ಲಿಪಿಯ ಉಗಮ ಮತ್ತು ವಿಕಾಸದ ಬಗೆಗಿನ ಸಿದ್ಧಾಂತಗಳು’ ಎಂಬ ಲೇಖನ ವಿಷಯದ ಬಗೆಗೆ ಇದುವರೆಗೆ ಬಂದಿರುವ ಎಲ್ಲ ಸಿದ್ಧಾಂತಗಳನ್ನೂ ಸಂಕ್ಷಿಪ್ತವಾಗಿ ವಿವೇಚಿಸಿ, ಸಿಂಧೂ ಲಿಪಿ, ಬ್ರಾಹ್ಮೀ ಲಿಪಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.
’ವಿಶ್ವಲಿಪಿಗಳ ಮಹಾತಾಯಿ ಸೆಮೆಟಿಕ್ ಲಿಪಿ’ ಲೇಖನದಲ್ಲಿ ಡಿ.ಸ್ಮಿತಾರೆಡ್ಡಿಯವರು ಸೆಮೆಟಿಕ್ ಲಿಪಿಯು ನೂರಕ್ಕೂ ಹೆಚ್ಚು ಲಿಪಿಗಳ ಸಮೂಹಕ್ಕೆ ಲಿಪಿ ವ್ಯವಸ್ಥೆಯಾಗಿರುವುದನ್ನು ಸಾಧಾರವಾಗಿ ನಿರೂಪಿಸಿದ್ದಾರೆ. ಡಾ||ಎನ್.ಆರ್.ಲಲಿತಾಂಬ ಅವರು ಬರೆದಿರುವ ’ರೊಸೆಟ್ಟಾ ಶಿಲೆ ತೆರೆದ ರಹಸ್ಯ’ ಎಂಬ ಪ್ರಬಂಧ ’ಹೈರೋಗ್ಲೈಫ್’ ಗಳನ್ನು ಸಮರ್ಥವಾಗಿ ಅರ್ಥೈಸಿದುದರ ಕಥೆಯನ್ನು ರೋಚಕವಾಗಿ ತಿಳಿಸುತ್ತದೆ. ಸುಂಕಂ ಗೋವರ್ಧನರ ಪ್ರಬಂಧ ’ಅರಾಬಿಕ್, ಪರ್ಶಿಯನ್ ಹಾಗೂ ಉರ್ದು ಲಿಪಿಗಳ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದೆ. ಈ ಲಿಪಿಗಳು ತಮ್ಮ ಉಪಯುಕ್ತತೆಗೆ ಮಾತ್ರವಲ್ಲದೆ, ಸುಂದರವಾದ ಕೈಬರಹ (ಕ್ಯಾಲಿಗ್ರಫಿ)ಗಳಿಗಾಗಿ ಪ್ರಪಂಚದಲ್ಲೇ ಪ್ರಸಿದ್ಧವಾಗಿವೆ. ಅಪರೂಪವೆನಿಸುವ ಶಂಖಲಿಪಿಯ ಶಾಸನಗಳ ಅವಲೋಕನವನ್ನು ಡಾ|| ಶ್ರೀನಿವಾಸ ವಿ. ಪಾಡಿಗಾರರು ಮಾಡಿರುತ್ತಾರೆ. ಒಟ್ಟು ೬೭ ನೆಲೆಗಳಲ್ಲಿ ಶಂಖಲಿಪಿಯ ೬೪೦ ಶಾಸನಗಳನ್ನು ಗುರುತಿಸಲಾಗಿದೆಯೆಂಬ ಕುತೂಹಲಕರ ಸಂಗತಿ ತಿಳಿದುಬರುತ್ತದೆ. ಸಂಶೋಧನೆಗೆ ವಿಪುಲ ಅವಕಾಶವಿರುವ ಈ ವಿಷಯದ ಬಗೆಗಿನ ಲೇಖನ ಸ್ವಾಗತಾರ್ಹವಾದುದಾಗಿದೆ.
ತಮಿಳು ಬ್ರಾಹ್ಮೀ ಗ್ರಂಥ ಹಾಗೂ ವಟ್ಟೆಳುತ್ತು ಲಿಪಿಗಳು ಬಗ್ಗೆ ಡಾ||ತಮಿಳ್ ಸೆಲ್ವಿಯವರು ತಲಸ್ಪರ್ಶಿಯಾದ ಲೇಖನ ಬರೆದಿದ್ದಾರೆ. ಗ್ರಂಥ ಹಾಗೂ ವಟ್ಟೆಳುತ್ತು ಲಿಪಿಗಳ ಉಗಮ, ಅವುಗಳು ಪ್ರಸಾರದಲ್ಲಿದ್ದ ಪ್ರದೇಶಗಳು ಮತ್ತು ಅವುಗಳ ವಿಶೇಷತೆಯನ್ನು ಸ್ಫುಟವಾಗಿ ತಿಳಿಸಿಕೊಟ್ಟಿದ್ದಾರೆ. ಶ್ರೀ ಎಂ.ವಿಶ್ವೇಶ್ವರ ಅವರು ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಲ್ಲದ ಆದರೆ ಕುತೂಹಲಕಾರಿಯಾದ ’ಆದಿಲ್ ಶಾಹಿಕಾಲದ ಅಲಂಕಾರಿಕ ಲಿಪಿ ಶೈಲಿಗಳನ್ನು’ ಪರಿಚಯಿಸಿದ್ದಾರೆ. ಅಲಂಕಾರಿಕ ಲಿಪಿ ಶೈಲಿಗಳಲ್ಲಿರುವ ವೈವಿಧ್ಯಗಳನ್ನು ವಿವರಿಸಿ, ಅವುಗಳನ್ನು ಕಟ್ಟಡಗಳ ವಾಸ್ತುವಿನಲ್ಲಿ ಅಳವಡಿಸಿರುವ ಬಗೆ ವರ್ಣ ಚಿತ್ರಗಳಲ್ಲಿ ಅವುಗಳ ಉಪಯೋಗ, ಹಸ್ತಪ್ರತಿಗಳಲ್ಲಿ ಅಲಂಕಾರಲಿಪಿಯ ಪ್ರಯೋಗ, ಇವೆಲ್ಲದರ ಪರಿಚಯ ಮಾಡಿಕೊಡುವ ಚಿತ್ರಗಳೂ ಲೇಖನದಲ್ಲಿವೆ. ಡಾ||ಎಂ.ವೈ. ಸಾವಂತ ಧಾರವಾಡರು ’ಮರಾಠಿ ಮೋಡಿ ಲಿಪಿಯ ಸ್ಥೂಲ ಪರಿಚಯ’ ಮಾಡಿಕೊಟ್ಟಿದ್ದಾರೆ. ’ಸ್ಥೂಲ ಪರಿಚಯ’ವೆಂದಿದ್ದರೂ ಮೋಡಿ ಲಿಪಿಯ ಎಲ್ಲ ವೈಶಿಷ್ಟ್ಯಗಳನ್ನು ಲೇಖನದಲ್ಲಿ ವಿವರಿಸಲಾಗಿದೆ. ಈ ವಿಭಾಗದಲ್ಲಿರುವ ಎಲ್ಲ ಲೇಖನಗಳೂ ತಮ್ಮ ವಿನೂತನ ವಸ್ತು, ಶೈಲಿ ಹಾಗೂ ಉಪಯುಕ್ತತೆಯಿಂದ ಗಮನಾರ್ಹವಾಗಿವೆ.
ಶಾಸನ ಅಧ್ಯಯನ ಮತ್ತು ಇತರ ಲೇಖನಗಳು ಎಂಬ ವಿಭಾಗದಲ್ಲಿ ೪೮ ಲೇಖನಗಳಿದ್ದು, ಅತ್ಯಂತ ದೊಡ್ಡ ವಿಭಾಗವಾಗಿದೆ. ಲೇಖಕರು ತಮಗೆ ಆಸಕ್ತಿಯಿರುವ ಕ್ಷೇತ್ರಗಳ ಮಾಡಿರುವ ಅಧ್ಯಯನವನ್ನು ದಾಖಲಿಸಿದ್ದಾರೆ. ಅನೇಕ ಹೊಸ ವಿಚಾರಗಳನ್ನು ಬೆಳಕಿಗೆ ತರಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ನಡೆಯಬೇಕಾಗಿರುವ ಸಂಶೋಧನೆಯ ಬಗೆಗೂ ಸೂಚಿಸಲಾಗಿದೆ. ಮಾಹಿತಿಯ ಮಹಾಪೂರವೇ ಇದೆ.
ಕೊನೆಯ ವಿಭಾಗದಲ್ಲಿ ’ವಾಸ್ತು ಮತ್ತು ಶಿಲ್ಪಕಲೆ’ ಎಂಬ ತಲೆಬರಹದ ಅಡಿಯಲ್ಲಿ ಹದಿನಾರು ಲೇಖನಗಳಿವೆ. ವಿವಿಧ ವಿದ್ವಾಂಸರು ತಮಗೆ ಆಸಕ್ತಿಯಿರುವ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿ ಬರೆದಿರುವ ಲೇಖನಗಳಿವು. ವಿಷಯದ ಬಗೆಗಾಗಲೀ ಲೇಖನದ ವಿಸ್ತಾರಕ್ಕಾಗಲೀ ಯಾವುದೇ ರೀತಿಯ ನಿರ್ಬಂಧಗಳು ಇಲ್ಲದಿರುವುದರಿಂದ, ಲೇಖನಗಳು ಬಹುತೇಕ ಸಮಗ್ರವಾಗಿವೆ. 
ಸಣ್ಣ ಪುಟ್ಟ ಸ್ಖಾಲಿತ್ಯಗಳು ಸಂಪುಟದಲ್ಲಿದ್ದರೂ ಅವು ಗ್ರಂಥದ ಒಟ್ಟಾರೆ ಗುಣಗ್ರಹಣಕ್ಕೆ ತೊಂದರೆಯನ್ನುಂಟುಮಾಡುವುದಿಲ್ಲ. ವಿದ್ವತ್ ಪೂರ್ಣವಾದ ಗ್ರಂಥಗಳು ಅಪರೂಪವಾಗುತ್ತಿರುವ ಈ ಕಾಳಘಟ್ಟದಲ್ಲಿ ’ಗುಣಮಧುರ’ ಒಂದು ಸಂಗ್ರಹ ಯೋಗ್ಯ ಕೃತಿಯಾಗಿದ್ದು, ಅದರ ಇಲ್ಲ ಲೇಖಕರು ಸಂಪಾದಕರು ಹಾಗೂ ಪ್ರಕಾಶಕರು ಅಭಿನಂದನಾರ್ಹರಾಗಿದ್ದಾರೆ.

ಶ್ರೀ ಜಿ.ಎಸ್.ಎಸ್. ರಾವ್
ನಂ ೩೦ ’ವಾತ್ಸಲ್ಯ’ ಒಂದನೆಯ ಅಡ್ಡರಸ್ತೆ
ಓಬಳಪ್ಪ ಗಾರ್ಡನ್, ಟಾಟಾ ಸಿಲ್ಕ್ ಫಾರ್ಮ್
ಬೆಂಗಳೂರು
ದೂ: ೦೮೦-೨೬೭೬೨೯೭೯, ಮೊ: ೯೬೧೧೭೦೩೧೦೫

2 comments:

RAGHU said...

nice..

visit my blog @ http://ragat-paradise.blogspot.com

RAGHU

RAGHU said...

nice..

visit my blog @ http://ragat-paradise.blogspot.com

RAGHU