Monday, August 29, 2011

ಯಾರು ಹುಚ್ಚೆಂದರೂ ನನಗೆ ಮರ್ಯಾದೆ!

ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳಾಟದ ಸೊಬಗೇ ಕೇಂದ್ರಬಿಂದು. ಅವರು ಗಲಾಟೆ ಮಾಡಿದರೆ ಗದರಿಸುತ್ತೇವೆ. ಗದರುವಿಕೆಯ ಹಿಂದೆ ಕೋಪವಿರುವುದಿಲ್ಲ; ಮುದ್ದಿರುತ್ತದೆ. ಮಗನಿಂದ ದೂರವಾಗಿ ಒಂಟಿ ಪಿಶಾಚಿಯಂತಾಗಿವ ಕವಿಗೆ ಅದೆಲ್ಲಾ ನೆನಪಾಗುವುದು ಹೀಗೆ.
ಓ ನನ್ನ ಕಂದಯ್ಯ,
ನೀನು ಕೂಗಾಡಿದರೆ
ಸದ್ದು ಮಾಡದಿರೆಂದು
(ಮುದ್ದಾಗಿಯಾದರೂ)
ಗದರಿಸುತ್ತಿದ್ದೆ.
ಈಗ ಕಂದಯ್ಯನ ಗಲಾಟೆಯೂ ಇಲ್ಲ ಗದರುವಿಕೆಯೂ ಇಲ್ಲ. ಅದಕ್ಕೆ ಕಾರಣ ಹಾಗೂ ಅದರಿಂದ ಉಂಟಾಗಿರುವ ನಿಶ್ಯಬ್ದತೆಯು ಪದಗಳಲ್ಲಿ ಮೂಡಿದ್ದು ಹೀಗೆ.
ನೀನಮ್ಮನೊಡಗೂಡಿ
ಹೋದೆ ಅಜ್ಜಿ ಮನೆಗೆ;
ಈಗ ಸದ್ದಿನಿತಿಲ್ಲ!
ಹಾಳು ನಿಶ್ಯಬ್ದತೆಯೆ,
ಗಾಳೆನ್ನುವಾ ವೆತೆಯೆ,
ಎದೆಯ ಮೇಲೇರಿ
ಮಾಡುತಿಹುದಯ್ಯೋ ಹಾ
ದೆವ್ವದ ಸವಾರಿ!
ಸರಣಿಯ ಮುಂದಿನ ಕವಿತೆ ಬಾಲ ತೇಜಸ್ವಿ ತನ್ನ ತಾಯಿಯೊಡಗೂಡಿ ಅಜ್ಜಿಯ ಮನೆಗೆ ಹೋದ ಐದು ದಿನಗಳ ನಂತರ ಮೂಡಿದ್ದು. ಕವಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ತನ್ನ ಅಚ್ಚುಮೆಚ್ಚಿನ ಕಾವ್ಯರಚನೆಯಲ್ಲೂ ಮನಸ್ಸಿಲ್ಲ. ಶ್ರೀರಾಮಾಯಣ ದರ್ಶನಂ ರಚನೆ ನಡೆಯುತ್ತಿದ್ದ ಕಾಲವದು. ಕಂದನ ಅಗಲಿಕೆ ರಾಮಾಯಣ ದರ್ಶನಂ ಕಾವ್ಯದ ರಚನೆಯ ಮೇಲೂ ಪರಿಣಾಮ ಬೀರಿದೆ. ಅಂದರೆ ಬರವಣಿಗೆ ನಿಂತುಬಿಟ್ಟಿದೆ. ಅದನ್ನೆ ಕವಿ ಹೀಗಿ ಹಾಡಿದ್ದಾರೆ.
ನೀನಜ್ಜಿ ಮನೆಗೆಯ್ದು
ಆಗಿತ್ತು ದಿನವೈದು.
ಏಕಾಂತಕವಚತ್ತು
ಏಕಾಂಗಿ ಬೇಸತ್ತು,
ಹನುಮನನು ಬೀಳ್ಕೊಟ್ಟು
ರಾಮಾಯಣವನಿಟ್ಟು
ವಾಲ್ಮೀಕಿಯನು ಬಿಟ್ಟು
ಹೊರ ಅಂಗಳಕೆ ಬಂದೆ;
ತೆಂಗು ಮರದಡಿ ನಿಂದೆ:
ತೇಜಸ್ವಿ ತೊಟ್ಟಿಲ ಕಂದನಾಗಿದ್ದಾಗ ’ಕಿಷ್ಕಿಂಧಾ ಸಂಪುಟಂ’ನ ನಾಲ್ಕನೆಯ ಸಂಚಿಕೆ ’ಅತ್ತಲಾ ಕಿಷ್ಕಿಂದೆಯೊಳ್’ ಪ್ರಾರಂಭವಾಗಿತ್ತೆಂಬುದಕ್ಕೆ ’ರಾಮಾಯಣ ದರ್ಶನಂ’ದಲ್ಲಿಯೇ ಸೂಚನೆಗಳಿವೆ. ಆ ಸಂಚಿಕೆ ಪ್ರಾರಂಭವಾಗುವುದೇ ’ಏಕಳುವೆ, ತೇಜಸ್ವಿ? ಕಲ್ಪನೆಯೆರಂಕೆಯಂ ಏರಿ ಬಾ ನನ್ನೊಡನೆ’ ಎಂದು. ಅಂದರೆ ಬಹುಶಃ ಈ ವಿರಹಗೀತೆ ರಚನೆಯಾಗುತ್ತಿರುವವ ಹೊತ್ತಿಗೆ ಹನುಮಂತ ಸೀತಾನ್ವೇಷಣೆಗೋ, ಲಂಕೆಗೂ ಹೊರಟಿರಬೇಕು. ಅದನ್ನೇ ’ಹನುಮನನು ಬೀಳ್ಕೊಟ್ಟು’ ಎಂದಿರುವಂತಿದೆ. ’ರಾಮಾಯಣವನಿಟ್ಟು’ ಎಂಬ ಸಾಲು ಬರವಣಿಗೆಯನ್ನು ನಿಲ್ಲಿಸಿದ ಸೂಚನೆಯಾಗಿ ಬಂದಿದೆ. ಹೀಗೆ ತನ್ನ ಸೃಷ್ಟಿಕಾರ್ಯವನ್ನೇ ನಿಲ್ಲಿಸಿದ ಕವಿ ಹೊರ ಅಂಗಳದ ತೆಂಗಿನ ಮರದಡಿಯಲ್ಲಿ ಬಂದು ನಿಲ್ಲುತ್ತಾರೆ.
ಎರಡು ವರುಷದ ಹಿಂದೆ
ನಿನ್ನುಸಿರ ತಂದ
ನಿನ್ನ ಮೋಹದ ತಂದೆ,
ಓ ನನ್ನ ಕಂದ!
ಸುಳ್ಳಲ್ಲ, ತೇಜಸ್ವಿ,
ಎರಡೆ ವರುಷದ ತಂದೆ:
ನಾವಿಬ್ಬರೊಂದೆ!
ಎಂತಹ ಅದ್ಭುತವಾದ ಕಲ್ಪನೆ! ತೇಜಸ್ವಿ ಎರಡು ವರ್ಷದ ಮಗು. ಮಗುವಾಗಿ ತೇಜಸ್ವಿಗೆ ಎರಡು ವರ್ಷ ತುಂಬಿದೆ. ಆದರ ಜೊತೆಗೆ ತಂದೆಯಾಗಿಯೂ ಕವಿಗೆ ಎರಡೇ ವರ್ಷ! ಸುಮಾರು ಮೂವತ್ತಾರು ವರ್ಷದ ಕವಿ ತನ್ನನ್ನು ತಾನು ಎರಡು ವರ್ಷದ ತಂದೆ ಎಂದು ಭಾವಿಸಿಕೊಳ್ಳುವುದರಲ್ಲಿಯೇ ಒಂದು ರೀತಿಯ ಅರ್ಪಣಾ ಮನೋಭಾವ, ಸಂತೋಷ, ಸಂಭ್ರಮ ಮತ್ತು ಚೆಲುವು ಅಡಗಿದೆ. ಮಗುವಾಗಿ ತೇಜಸ್ವಿಗೆ ಎಷ್ಟು ಅನುಭವವಿದೆಯೋ ಅಷ್ಟೇ ಅನುಭವ ತಂದೆಯಾಗಿ ಕವಿರುವುದು! ಮಗನ ನೆನಪಲ್ಲಿ ನಿಂತ ಕವಿ ಅಂಗಳದಲ್ಲೆಲ್ಲಾ ಕಣ್ಣಾಡಿಸುತ್ತಾರೆ. ಮನೆಯಲ್ಲಿ ಮಡದಿಯಿದ್ದಾಗ ನಿತ್ಯವೂ ಮನೆಯ ಮುಂದೆ ರಂಗೋಲಿಯಿರುತ್ತಿತ್ತು. ಆದರೆ ಈಗಿಲ್ಲ. ಆದರೇನಂತೆ ಕವಿಯ ಕಣ್ಣಿಗೆ ಉದುರಿದ್ದ ತೆಂಗಿನ ಹೂವುಗಳು ರಂಗೋಲಿಯಂತೆ ಕಾಣುತ್ತಿವೆ. ಅದಕ್ಕಿಂತ ಹೆಚ್ಚಾಗಿ ಆ ಜಾಗ ಮಗನು ಆಟವಾಡುವ ಸ್ಥಳ ಎಂಬ ನೆನಪೇ ಕವಿಗೆ ಮುಖ್ಯವಾಗುತ್ತದೆ.
ಗಂಟೆ ಎಂಟರ ಹೊತ್ತು;
ಬೆಚ್ಚನೆಳಬಿಸಿಲಿತ್ತು.
ತೆಂಗು ಹೂವಲ್ಲಲ್ಲಿ
ದೋಳೆದ್ದ ನೆಲದಲ್ಲಿ
ನಿನ್ನಾಡುವೊಲದಲ್ಲಿ
ಮುದ್ದು ಚೆಲ್ಲಿ
ಮುತ್ತಿನೋಲೆರಚಿತ್ತು
ರಂಗವಲ್ಲಿ.
ಗೆರೆಗೆರೆಯ ಕರಿನೆಳಲು
ನಡುಗುತಿರೆ ನೆಲದಲ್ಲಿ
ಗಾಳಿ ಮರ್ಮರಿಸಿತ್ತು
ಗರಿಗಳಲ್ಲಿ.
ಗೋಡೆಯೆಡೆ ಗಿಡದಲ್ಲಿ
ಎಲೆ ಹೆಣೆದು ಮರೆಸಿದ್ದ
ಹತ್ತಿಯಾ ಮೆತ್ತನೆಯ
ಗೂಡಿನಲ್ಲಿ
ನಿನ್ನ ಟುವ್ವಿಯ ಹಕ್ಕಿ? . . . .
ಇಲ್ಲ! ಎಲ್ಲಿ?
ಮುದ್ದು ಬೀಡನು ಬಿಟ್ಟು
ಹೋಯಿತೆಲ್ಲಿ?
ತೆಂಗಿನ ಹೂವಿನ ರಂಗವಲ್ಲಿಯನ್ನೀಕ್ಷಿಸುತ್ತಿದ್ದ ಕವಿಯ ಮನಸ್ಸು ತೆಂಗಿನ ಮರೆದ ನೆರಳು, ಗಾಳಿಯೊಡನೆ ಆ ಗರಿಗಳ ಮರ‍್ಮರ, ನೆಳಲಿನ ನೃತ್ಯ ಎಲ್ಲವನ್ನೂ ಗಮನಿಸಿ ಗಿಡದ ಎಲೆಗಳನ್ನೆ ಹೆಣೆದು ಮಾಡಿದ ಟುವ್ವಿ ಹಕ್ಕಿಯ ಗೂಡಿನ ಬಳಿ ಹೋಗುತ್ತದೆ. ಅದು ತೇಜಸ್ವಿಯ ಟುವ್ವಿಯ ಹಕ್ಕಿ! ಆದರೆ ಅಲ್ಲಿ ಹಕ್ಕಿಯಿಲ್ಲ. ಮುದ್ದು ಬೀಡಾದ ಹತ್ತಿಯಾ ಮೆತ್ತನೆಯಾ ಗೂಡನ್ನು ಬಿಟ್ಟು ಕಂದನ ಟುವ್ವಿ ಹಕ್ಕಿ ಎಲ್ಲಿ ಹೋಯಿತು? ಕವಿ ಹುಡುಕಾಡುತ್ತಾರೆ. ಆಗ ಅವರಿಗೆ ಕಂಡಿದ್ದು-
ಹುಡುಕುತಿರೆ ಕಣ್‌ಸುಳಿಸಿ,
ಓ, ಅಲ್ಲಿ ನೋಡಲ್ಲಿ:
ಗೂಡನೂ ಹಾಡನೂ
ಎರಡನೂ ತೊರೆದು,
ಮೂಕ ಶೋಕದ ಚಿಂತೆ
ಸ್ವಪ್ನದಲಿ ಸುಳಿವಂತೆ,
ಗರಿಹೊರಗೆ ದಣಿದುದೆನೆ,
ನೋಡು, ಕುಪ್ಪಳಿಸುತಿದೆ
ಹರೆಹರೆಗೆ ಹರಿದು.
ದೂರದಲ್ಲಿರುವ ಮಗನನ್ನುದ್ದೇಶಿಸಿ ಕವಿ ಹೇಳುತ್ತಿರುವಂತೆ ಈ ರಚನೆಯಿದೆ. ತೇಜಸ್ವಿಯಿಲ್ಲದ ನೋವು ಕವಿಗೆ ಮಾತ್ರವಲ್ಲ. ಟುವ್ವಿ ಹಕ್ಕಿಗೂ ಇದೆ. ಅದಕ್ಕೆ ಅದು ಗೂಡನ್ನೂ ಜೊತೆಗೆ ತನ್ನ ಹಾಡನ್ನೂ ಬಿಟ್ಟು ಬಿಟ್ಟಿದೆ. ಮೂಕ ಶೋಕವನ್ನನುಭವಿಸುತ್ತಿದೆ. ಸ್ವಚ್ಛಂದವಾಗಿ ಹಾರಾಡುವ ಬದಲು ಕುಪ್ಪಳಿಸುತ್ತಿದೆ! ಮುಂದೆ ಕವಿಯ ಕಾಲಿಗೆ ಏನೋ ಮೆತ್ತನೆಯ ಸ್ಪರ್ಶವಾಗುತ್ತದೆ. ಆ ಸ್ಪರ್ಶ ಅವರಿಗೆ ತೇಜಸ್ವಿಯ ಮೈ ಸ್ಪರ್ಶದ ನೆನಪನ್ನು ತಂದುಬಿಡುತ್ತದೆ! ನೋಡಿದಾಕ್ಷಣ ಅವರ ಮನಸ್ಸು ಕಾಲದೇಶಗಳನ್ನು ಮೀರಿ ಏಕಕಾಲಕ್ಕೆ ಭೂತ ವರ್ತಮಾನ ಭವಿಷತ್ತುಗಳಲ್ಲಿ ಸಂಚರಿಸಲಾರಂಭಿಸುತ್ತದೆ. ಹೆಚ್ಚು ಮಾತೇಕೆ? ಐದು ದಿನಗಳ ಹಿಂದೆ, ಮಣ್ಣಿನ ಗುಡ್ಡೆ ಮಾಡಿಕೊಂಡು ಆಡುತ್ತಿದ್ದ ತೇಜಸ್ವಿಯನ್ನು ಸ್ವತಃ ತಂದೆಯೇ ಬಯ್ದಿರುತ್ತಾರೆ. ಆದರೆ ಇಂದು ಆ ಮಣ್ಣಿನ ರಾಶಿಯೇ ಅವರ ಅಲೌಖಿಕ ಆನಂದಕ್ಕೆ ಎಡೆಯಾಗಿದೆ. ತೇಜಸ್ವಿಯ ಹಸ್ತದ ಗುರುತು ಇನ್ನೂ ಮಾಸಲು ಮಾಸಲಾಗಿ ಆ ಮಣ್ಣಗುಡ್ಡೆಯ ಮೇಲೆ ಇದ್ದುದನ್ನೂ ಕವಿ ಗುರುತಿಸುತ್ತಾರೆ. ಮಣ್ಣಗುಡ್ಡೆ ತನ್ನ ಕಂದನ ಅಕ್ಕರೆಯ ಬುತ್ತಿಯಾಗಿ ಕವಿಗೆ ಕಾಣುತ್ತದೆ. ಆ ಭಾಗವನ್ನು ಇಡಿಯಾಗಿ ಇಲ್ಲಿ ಉಲ್ಲೇಖಿಸುತ್ತೇನೆ.
ಫಕ್ಕನೇನಿದು ಕಾಲ್ಗೆ
ನಿನ್ನ ಮೆಯ್ ಕೋಮಲತೆ
ಸೋಂಕಿದಂತೆ?
ದೇಶ ಮಾಯೆಯ ಮೀರಿ
ಶಿವಮೊಗ್ಗೆಯನೆ ಸೇರಿ
ಅಪ್ಪಿದಂತೆ!
ರೋಮಾಂಚನಂ ಬೆತ್ತು
ನೆಲವ ನೋಡಿದರೆತ್ತು
ದೂಳುರಾಸಿ!
ಎದುರುಗೊಂಡಿತು ಕಣ್ಣ
ಕೈಯ ಮುದ್ರಿಕೆ ಸಣ್ಣ,
ಕೊಂಚ ಮಾಸಿ!-
ನೀ ಮಾಡಿದಾ ರಾಸಿ!
ನಿನ್ನ ಕೈಯಚ್ಚು!
ನಿನ್ನ ಮೈಯ್ಯನು ಮಾಸಿ
ಬಯ್ಸಿಕೊಂಡಾ ರಾಸಿ
ಇಂದಾಯ್ತು ಮೆಚ್ಚು:
ಕಂದನಕ್ಕರೆ ಬುತ್ತಿ
ಮತ್ತೆ ಮತ್ತದನೊತ್ತಿ
ಸ್ಪರ್ಶಸುಖಿಯಾದೆ!-
ಇಷ್ಟೆಲ್ಲಾ ಕಲ್ಪನೆಗಳ ಅಂತ್ಯದಲ್ಲಿ ತನ್ನದು ಹುಚ್ಚಾಟವೆನ್ನಿಸಿರಬೇಕು. ಕಂದನಾಡಿದ ಚಿಪ್ಪನ್ನು ಕೊಂಡೊಯ್ದು ದೇವರ ಗುಡಿಯಲ್ಲಿಟ್ಟ, ಕಂದನಾಡಿದ ಮಣ್ಣ ದೂಳರಾಸಿಯನ್ನು ಮುಟ್ಟಿ ಸ್ಪರ್ಶ ಸುಖವನ್ನನುಭವಿಸುತ್ತಿರುವ ತನ್ನದು ಅತಿರೇಕವೆನ್ನಿಸಿರಬಹುದೇನೋ!? ಆದರೂ ಕವಿಗೆ ಹೆಮ್ಮೆ ಎನ್ನಿಸುತ್ತಿದೆ. ಅದಕ್ಕೆ ಕವಿತೆಯ ಕೊನೆಯ ಎರಡು ಸಾಲಿನಲ್ಲಿ ಮಗುಮ್ಮಾಗಿ-
ಯಾರು ಹುಚ್ಚೆಂದರೂ
ನನಗೆ ಮರ್ಯಾದೆ!
ಎಂದು ಬಿಡುತ್ತಾರೆ.

1 comment:

KALADAKANNADI said...

ನಿಮ್ಮ ಬ್ಲಾಗ್ ನಲ್ಲೀಗ “ಕುವೆ೦ಪು ಹಬ್ಬ“ ನಡೀತಿದೆ! ಆಸ್ವಾದಿಸಿ,ಸ೦ತಸ ಅನುಭವಿಸಿ ಹಾಗೂ ಮತ್ತೆ-ಮತ್ತೆ ಬೇಕೆ೦ದು ಕೇಳುವ ಉತ್ಸಾಹದಲ್ಲಿ ನಾವಿದ್ದೇವೆ. ಸ೦ಪೂರ್ಣ ಗೋರಿ ಕೊಡುವ ಹೊಣೆ ನಿಮ್ಮದು.. ನಮ್ಮದೇನಿದ್ದರೂ ಅನುಭವಿಸುವುದು ಮಾತ್ರ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.