Monday, September 05, 2011

ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ


ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;
ಏಕೆಂದರಿಂದು ನೀ ಜೊತೆಯೊಳಿಲ್ಲ.
ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:
ನಿನ್ನ ನೆನಪನೆ ತಹವು ಮುಖಗಳೆಲ್ಲ!
ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ ನೆನೆಯುತ್ತಿರುವ ಕವಿಯ ಮನಸ್ಥಿತಿಯನ್ನು ಈ ನಾಲ್ಕು ಸಾಳುಗಳು ಮನದಟ್ಟು ಮಾಡಿಕೊಡುತ್ತವೆ. ಸತಿಯ ನೆನಹಿನಿಂದ ಸುತನೆಡೆಗೆ ತಿರುಗುವ ಕವಿಯ ಮನಸ್ಸು ಮತ್ತೆ ಕುಮಾರ ವಿರಹವನ್ನು ಅನುಭವಿಸಿದ್ದನ್ನು ಮತ್ತೊಂದು ಕವಿತೆಯಲ್ಲಿ ಕಟ್ಟಿಕೊಡುತ್ತದೆ.
ಹೂ ಹಿಡಿದು ಮುಡಿ ಮಣಿದು
ನಿಂತಿರುವ, ಓ ಗಿಡವೆ,
ನಿಚ್ಚ ದೂಳಾಡಿದಾ
ಕಂದನಿಲ್ಲದೆ ’ಬೆಕೋ’
ಪಾಳು ಬಿದ್ದಿದೆ ನಿನ್ನ
ಬೂಳು ಬುಡವೆ!
ಜಡೆ ಮಾತ್ರ ಮುತ್ತೈದೆ,
ಅಡಗಿಲ್ಲ ಒಡವೆ!
ತಲೆಯೆಲ್ಲ ಶ್ರೀಮಂತೆ,
ಕಾಲು ಕೈ ಬಡವೆ!
ಬೇರು ಕಾಂಡ ಬಡಕಲಾಗಿದ್ದರೂ ಹೂವರಳಿಸಿಕೊಂಡು ನಿಂತಿರುವ ಹೂಗಿಡವೊಂದನ್ನು ಕಂಡ ಕವಿ ತನ್ನ ಸ್ಥಿತಿಯೂ ಅದೇ ರೀತಿಯದೆಂದು ಭಾವಿಸುತ್ತಾನೆ. ಹೂವಿನ ಬೋಳು ಬುಡ ಬಡಕಲಾಗಿರುವುದಕ್ಕೂ ’ಕಂದ’ನಿಲ್ಲದಿರುವುದೇ ಕಾರಣ ಎಂದೆಣಿಸುತ್ತದೆ! ತಲೆಯೆಲ್ಲ ಶ್ರೀಮಂತೆ, ಕಾಲು ಕೈ ಬಡವೆ ಎಂಬ ಮಾತು ಕವಿಕಲ್ಪನೆ ಶ್ರೀಮಂತವಾಗಿದ್ದರೂ ಅದು ಸಾಕಾರಗೊಳ್ಳುತ್ತಿಲ್ಲ; ಕಾರಣ ಕಂದನ ಅಗಲಿಕೆ!
ಒಲಿದ ಕಂದನ ಸಂಗ
ಮರಳಿ ನಿನಗೊದವೆ
ಐದೆತನದೊಡನೊಡನೆ
ಮರಳುವುದು ಮದುವೆ
ಅದುವರೆಗೆ ನೀನೆಷ್ಟೆ
ಹೂಮುಡಿದರೂ, - ಅಷ್ಟೆ:
ವಿಚಿತ್ರ ವಿಧವೆ!
ನನ್ನ ಕಂದ ಮರಳಿ ಬರುವವರೆಗೂ, ಆತನ ಸಂಗ ನಿನಗೆ ದೊರಕುವವರೆಗೂ ನೀನು ಹೂ ಮುಡಿದಿದ್ದರೂ ಮುತ್ತೈದೆಯಲ್ಲ; ವಿಧವೆ ಎಂದು ಕವಿ ಹೂವರಳಿಸಿಕೊಂಡಿರುವ ಗಿಡಕ್ಕೆ ಹೇಳುತ್ತಿದ್ದಾರೆ. ಮನುಷ್ಯನ ಈ ರೀತಿಯ ಭಾವಶೂನ್ಯತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ಎಷ್ಟು ಕಷ್ಟ! ಅದು ಅನುಭವವೇದ್ಯ ಮಾತ್ರ. ಇಲ್ಲಿ ವಿಚಿತ್ರ ವಿಧವೆ ಹೂ ಅರಳಿಸಿರುವ ಹೂಗಿಡವೂ ಹೌದು, ಕವಿಯ ಸೃಷ್ಟಿಕಾರ್ಯವೂ ಹೌದು!
ಈ ಸರಣಿಯ ಕೊನೆಯ ಕವಿತೆ ಉಳಿದವುಗಳಿಗಿಂತ ಅತ್ಯಂತ ಭಿನ್ನವಾದುದು. ’ಒಂದು ಕಟು ನಿಮಿಷದಲ್ಲಿ’ ಎಂಬ ಉಪಶೀರ್ಷಿಕೆಯೂ ಈ ಕವಿತೆಗಿದೆ. ಅದು ವಿವರಣೆಯೂ ಆಘಿದ್ದಿರಬಹುದು ಅಥವಾ ಸಮಾಧಾನವೂ ಆಗಿರಬಹುದು! ಒಂಟಿತನ ಮನುಷ್ಯನನ್ನು ಎಷ್ಟು ಕಂಗೆಡಿಸುತ್ತದೆ ಎಂಬುದಕ್ಕೆ ಈ ಕವಿತೆ ಸಾಕ್ಷಿಯಾಗಿದೆ. ಕುವೆಂಪು ಅವರಂತಹ ದಾರ್ಶನಿಕ ಕವಿಯನ್ನು ಈ ಒಂಟಿತನ ಬಿಟ್ಟಿಲ್ಲ! ಒಂದೇ ಸಮಾಧಾನವೆಂದರೆ ಸ್ಥಿತಪ್ರಜ್ಞನಾದ ಕವಿಗೆ ಶಿವನು ತನ್ನ ಜೊತೆಗಿದ್ದಾನೆ ಎಂಬ ಕ್ಷೀಣಭಾವವೊಂದು ಹೊಳೆದುಬಿಡುತ್ತದೆ. ಒಂಟಿತನದ ಖಿನ್ನತೆಯಿಂದ ಹೊರಬರಲು ಅದು ಸಂಜೀವಿನಿಯಾಗುತ್ತದೆ.
ಏಕಾಂಗಿ, ಏಕಾಂಗಿ, ಏಕಾಂಗಿ,
ಅಯ್ಯೋ ನಾನೇಕಾಂಗಿ!
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!
ಹೆತ್ತವರು ಸತ್ತರೆಂದೋ;
ಸತ್ತವರೊಡವುಟ್ಟಿದವರೂ.
ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ.-
ಅರ್ಧಾಂಗಿ ಮಗುವಿನೊಡನೆ ತವರು ಸೇರಿ ಹಲವು ದಿನಗಳಾಗಿವೆ. ಎರಡು ವರ್ಷಗಳ ಕಾಲ ಸುಖದ ಬೀಡಾಗಿದ್ದ ಮನೆ ಇಂದು ಬಿಕೋ ಎನ್ನುತ್ತಿದೆ. ಮುದ್ದುತನಯನ ನೆನಪು ಹಿಂಡುತ್ತಿದೆ. ಅಂತಹ ಕ್ಲಿಷ್ಟಕರ ಸಮಯದಲ್ಲಿ ಏಕಾಂಗಿಯಾಗಿದ್ದ ಕವಿಗೆ ತನ್ನ ತಂದೆ ತಾಯಿ ಒಡಹುಟ್ಟಿದವರು ಎಲ್ಲಾ ನೆನಪಾಗುತ್ತಾರೆ. ಅವರೆಲ್ಲಾ ಎಂದೋ ಇಹಲೋಕವನ್ನು ತ್ಯಜಿಸಿದ್ದಾರೆ. ಜೊತೆಗೆ ಸಮಾನ ಮನಸ್ಕ ಗೆಳೆಯರೂ ಇಲ್ಲ. ಅದೆಲ್ಲಾ ನೆನಪಾದುದ್ದೇ ತಡ ಕವಿಗೆ ನಾನು ಏಕಾಂಗಿ ಎಂಬ ಅನಿಸಿಕೆ ಬಲವಾಗಿ ಹಿಡಿದುಬಿಡುತ್ತದೆ. ಈ ಎಲ್ಲಾ ಅನಿಸಿಕೆ ತಮ್ಮ ಅರ್ಧಾಂಗಿಯ ನೆನಪಿನೊಂದಿಗೆ, ಅವರಿಗೆ ತಂದೆ ತಾಯಿ ಒಡಹುಟ್ಟಿದವರೂ, ಜೊತೆಗೆ ತನ್ನ ಕಂದ, ಆ ಕಂದನಿಗೆ ಮುದ್ದಾಡುವ ತಾಯಿ ಎಲ್ಲಾ ಇರುವುದು ನೆನಪಾಗುತ್ತದೆ; ಜೊತೆಗೆ ತುಸು ಹೊಟ್ಟೆಕಿಚ್ಚು ಸಹ!
ಕೈಹಿಡಿದ ಸತಿಗೋ
ತಾಯಿ ತಂದೆಯರಿಹರು; ತವರಿಹುದು;
ನಾನೆ ಸರ್ವ್ವಸ್ವವಲ್ಲ.
ಮುದ್ದು ಕಂದಂಗಿಹಳು ಮುದ್ದಾಡುವಾ ತಾಯಿ.
ಕಡೆಗೆ ನಾನೊಬ್ಬನೇ ಬೀದಿನಾಯಿ!
ಆದರೂ, ಆದರೂ ಕವಿಗೊಂದು ಸಮಾಧಾನವಿದೆ. ಏಕಾಂಗಿಯಾಗಿದ್ದರೂ ನನಗೊಬ್ಬ ಸದಾ ಜೊತೆಗಾರನಿದ್ದಾನೆ ಎಂಬ ಕಿರು ಸಮಾಧಾನ ಕವಿಗೆ ತೋರುತ್ತದೆ.
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!
ಇಂತಹ ವಿರಹ; ಒಲಿದ ಸತಿ, ಪಡೆದ ಮಗು ಇವರಿಂದ ದೂರವಿರುವ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲ ಒಂದು ಬಾರಿ ಬಂದೇ ಇರುತ್ತದೆ. ಆದರೆ ಮನಸ್ಸು ಸ್ಥಿಮಿತದಲ್ಲಿದ್ದದ್ದೇ ಆದರೆ ಸಂಯಮವೆಂಬುದು ವ್ಯಕ್ತಿತ್ವದ ಒಂದು ಭಾಗವಾಗಿ ಪಡೆದಿರುವ ವ್ಯಕ್ತಿಗಳಾಗಿದ್ದರೆ ಹೀಗೆ ಕ್ರಿಯಾಶೀಲರಾಗಿ, ಉದ್ಯೋಗ ಉದ್ಯುಕ್ತರಾಗಿ ಕಷ್ಟದ ಕಾಲಾವಧಿಯನ್ನು ಕಳೆದುಬಿಡುತ್ತಾರೆ. ಮಹಾಕವಿಯೊಬ್ಬನ ಬದುಕೂ ಇಂತಹ ಒಂದು ಕಷ್ಟದ ಕಾಲವನ್ನು ದಾಟಿ ಬಂದಿದೆ. ಆದರೆ ಸ್ವಭಾವತಃ ಸೃಷ್ಟಿಶೀಲವಾದ ಮನಸ್ಸು ಅದನ್ನು ಹೇಗೆ ಜಯಿಸಿದೆ ಎಂಬುದಕ್ಕೆ ಈ ವಾತ್ಸಲ್ಯ ವಿರಹಿ ಸರಣಿಗವಿತೆಗಳು ಉತ್ತಮ ಉದಾಹರಣೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಮನಸ್ಸು ಸಡಿಲವಿದ್ದವರು ಅವಿವೇಕಿಗಳಾಗಿ ಅಡ್ಡದಾರಿಗಿಳಿಯುತ್ತಾರೆ. ಧೂಮಪಾನ ಕುಡಿತ ಗೆಳೆಯರೊಡನೆ ಮೋಜು ಮಾಡುವುದು ಹೀಗೆ ಹೊಸ ಹೊಸ ಅಭ್ಯಾಸಗಳಿಗೆ ಈಡಾಗುತ್ತಾರೆ. ಕಷ್ಟದ ಕಾಲ ಕಳೆದು ಸುಖದ ದಿನಗಳು ಮರಳಿದರೂ ಹಿಂತಿರುಗಿ ನೋಡಲಾದರಷ್ಟು ಮುಂದೆ ಹೋಗಿ ಬದುಕನ್ನು ಅಸಹನೀಯ ಮಾಡಿಕೊಂಡವರು ಬಹಳ ಮಂದಿಯಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸರಣಿಯ ಕವಿತೆಗಳು ದಾರಿದೀಪಗಳಾಗಿ ನಿಲ್ಲುತ್ತವೆ ಎನ್ನಬಹುದು.

2 comments:

ಮನದಾಳದಿಂದ............ said...

ಸತನಾರಾಯಣ ಸರ್,
ರಾಷ್ಟ್ರಕವಿಯ ಕೆವಿತೆಗಳ ಸಾರವನ್ನು ಉಣಬಡಿಸುತ್ತಿರುವ ನಿಮಗೆ ಧನ್ಯವಾದಗಳು.

ದೇವಿಸುತೆ said...

ಮುದ್ದಿನ ಕರುಳಕುಡಿಯನ್ನು ಕಳೆದುಕೊಂಡು ವಾತ್ಸಲ್ಯ ವಿರಹಿಯಾಗಿ ದಿನವೂ ದು:ಖದಲ್ಲಿ ದಹಿಸಿಹೋಗುತ್ತಿರುವ ನನ್ನಂತಹವರ ಬದುಕು, ಕಲ್ಪನೆ ಮತ್ತು ಕುವೆಂಪುರವರ ಬದುಕು,ಭಾವನೆ ಒಂದೇ ರೀತಿಯದಾಗಿದೆ. ಮಹಾಕವಿ ಕುವೆಂಪುರವರ ಈ ಗೀತೆಗಳ ಪ್ರತಿ ಸಾಲುಗಳು ನನ್ನಂತಹವರ ಹೃದಯದ ನೋವಿನ ಧಾರೆಗಳು .ಓದಿದವರ ಕಂಗಳಲ್ಲಿ ನೀರಿಳಿಸುವ ನಿಮ್ಮ ಈ ಅಮೂಲ್ಯ ಬರಹದೌತಣಕೆ
ನನ್ನ ನಮನಗಳು