Monday, November 07, 2011

’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!

ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯೆ ಒಂದು ದಿನ, ಊರಿಗೆ ಹೋಗಿ ಬರಲು ಸೂಚಿಸುತ್ತಾರೆ. ಹಾಗೆ ಹೇಳಲು ಸ್ವಾಮಿಜಿಗೆ ಇದ್ದ ಕಾರಣಗಳನ್ನು ಅರಿತಾಗ ಅವರ ದೂರದರ್ಶಿತ್ವ, ಸಮಾಧಾನಶೀಲತೆ, ತರುಣ ಕವಿ ಕುವೆಂಪು ಅವರ ಬಗೆಗಿದ್ದ ಪ್ರೀತಿ, ಅಚಲ ವಿಶ್ವಾಸ ಎದ್ದು ಕಾಣುತ್ತವೆ. ಕವಿಯ ಮಾತುಗಳಲ್ಲೇ ಹೇಳುವುದಾದರೆ: "ಆಶ್ರಮದ ಮೇಲೆ ಬಂದಿದ್ದ ಆಪಾದನೆಯ ನಿವಾರಣಕ್ಕಾಗಿ: ನಾನು ಊರಿಗೆ ಹೋಗಿ ನೆಂಟರಿಷ್ಟರಿಗೆ ಮುಖ ತೋರಿಸಿ, ಸ್ವಾಮಿಜಿಗಳು ನನ್ನನ್ನು ಆಶ್ರಮಕ್ಕೆ ಕರೆದೊಯ್ದುದು ಸಂನ್ಯಾಸಿಯನ್ನಾಗಿ ಮಾಡಲಿಕ್ಕಲ್ಲ ಎಂದು ಅವರಿಗೆಲ್ಲ ಮಂದಟ್ಟು ಮಾಡಿಕೊಡಲಿಕ್ಕೆ; ಆಶ್ರಮದ ಮತ್ತು ಸ್ವಾಮಿಗಳ ವಿಷಯದಲ್ಲಿ ಅವರ ದುರ್ಭಾವನೆ ತೊಲಗಿ, ವಿಶ್ವಾಸ ಗೌರವಗಳನ್ನು ಮಂಡಿಸಲಿಕ್ಕೆ."
ಸ್ವಾಮೀಜಿಯ ಮಾತಿನಂತೆ ಮಲೆನಾಡಿಗೆ ಹೊರಟ ಕವಿ ಅ ಇಡೀ ಪ್ರವಾಸದಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಾರೆ. ಹೆಚ್ಚಿನವು ಪ್ರಕೃತಿಗೀತೆಗಳು. ಹೆಚ್ಚಿನವು ಪ್ರಕಟಿತವಾದವುಗಳಾಗಿದ್ದರೆ, ’ಹೊಳೆಯರೆಯ ಮೇಲೆ’, ’ಚೈತನ್ಯದಲಿ ವಸಂತಾಗಮ’, ಮಲೆನಾಡು’ ಮೊದಲಾದ ಅಪ್ರಕಟಿತ ಕವನಗಳೂ ಇವೆ. ಇವುಗಳಲ್ಲದೆ, ೧೬.೧೧.೧೯೨೬ರಂದು ಬರೆದ ಶೀರ್ಷಿಕೆಯಿಲ್ಲದ, ಅಪ್ರಕಟಿತ ಕವನವೊಂದು, ಆ ದಿನಗಳಲ್ಲಿ ಕವಿಯ ಮನಸ್ಸಿನಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೆ, ಕವಿಯ ಚೇತನದಲ್ಲಿ ಜರಗುತ್ತಿದ್ದ ದಾರ್ಶನಿಕ ಚಿಂತನಗಳಿಗೆ ಪುಟ್ಟ ಗವಾಕ್ಷದಂತಿದೆ. ಆ ಕವಿತೆಯನ್ನು ಕುರಿತು ಕವಿ ’ತಾಯಿಯ ಒಲುಮೆ ಒಂದೆಯೆ ಸರ್ವಸಿದ್ಧಿಗಳನ್ನೂ ಮೀರುವ ಪರಮೋಚ್ಛಸಿದ್ಧಿ!’ ಎನ್ನುತ್ತಾರೆ.
ನಿನ್ನ ಸಿರಿ ಬೇಡೆನಗೆ;
ನಿನ್ನ ಬಲ ಬೇಡೆನಗೆ,
ನಿನ್ನೊಲುಮೆ ಸಾಕು!
ನಿನ್ನ ಕರುಣೆಯು ಬೇಡ,
ನಿನ್ನ ವರಗಳು ಬೇಡ,
ನಿನ್ನೊಲುಮೆ ಬೇಕು!
ಮುಕ್ತಿ ಬಂದರು ಬರಲಿ,
ಮುಕ್ತಿ ಬಾರದೆ ಇರಲಿ,
ಭಕ್ತಿಯೊಂದಿರಲಿ!
ದುಃಖಗಳ ನೀನ ನೀಡೆ
ಸುಖಗಳನು ನಾ ಬೇಡೆ;
ನಿನ್ನಿಷ್ಟವಿರಲಿ!
ಸ್ವರ್ಗಸುಖವೆನಗೇಕೆ?
ವೈಕುಂಠವೆನಗೇಕೆ?
ಇರಲು ನಿನ್ನನುರಾಗ
ಅದೆ ಪರಮತರ ಭೋಗ!
ಅದೆ ಚಾಗ, ಯೋಗ!
ದೀರ್ಘಕಾಲದ ಕಾಯಿಲೆಯ ತರುವಾಯ ಹುಟ್ಟೂರಿನ ಮಲೆ ಬಾನು ಬಯಲು ಕಾಡುಗಳಲ್ಲಿ ವಿಹರಿಸಿ ಮನಃಸಂತೋಷವನ್ನೂ ದೇಹಾರೋಗ್ಯವನ್ನೂ ಸಂಪಾದಿಸಿದ ಕವಿಗೆ ನಂಟರಿಷ್ಟರು ಗೆಳೆಯರು ತೋರಿದ ಅಕ್ಕರೆಯನ್ನು ಸವಿದ ಪ್ರಾಣ ಹಿಗ್ಗನ್ನು ಹೀರಿ ಮತ್ತಷ್ಟು ಬಲಿಷ್ಠವಾಯಿತು ಎನ್ನುತ್ತಾರೆ! ಆ ಸಂದರ್ಭದಲ್ಲಿಯೇ ಕನ್ನಡ ಸಾಹಿತ್ಯಕ್ಕೂ, ವಿಶೇಷವಾಗಿ ಕನ್ನಡ ನಾಡಿನ ಮಕ್ಕಳಿಗೂ ಲಭಿಸಿದೊಂದು ಸಿರಿಯ ಹೊಂಗಾಣಿಕೆ: ’ಬೊಮ್ಮನಹಳ್ಳಿಯ ಕಿಂದರಿಜೋಗಿ’.
ಮೈಸೂರಿನಿಂದ ಊರಿಗೆ ಹೊರಟ ಕವಿ ವಾಡಿಕೆಯಂತೆ ಶಿವಮೊಗ್ಗದಲ್ಲಿ ಕೆಲವು ದಿನಗಳನ್ನು ಕಳೆಯುತ್ತಾರೆ. ಯಥಾಪ್ರಕಾರ ದೇವಂಗಿ ರಾಮಣ್ಣಗೌಡರ ಅಡಕೆ ಮಂಡಿಯ ಉಪ್ಪರಿಗೆಯೇ ಅವರ ಆಗಿನ ವಸತಿ. ಭೂಪಾಳಂ ಚಂದ್ರಶೇಖರಯ್ಯ ಮೊದಲಾದ ಗೆಳೆಯರ ಸಹವಾಸ. ದೇವಂಗಿ ಮಾನಪ್ಪನ ಆತಿಥ್ಯ. ಜೊತೆಗೆ ಕವಿಯ ರಚನೆಗಳನ್ನೆಲ್ಲಾ ಪ್ರತಿಯೆತ್ತುವ ಕೆಲಸವನ್ನೂ ಮಾನಪ್ಪ ನಿರ್ವಹಿಸುತ್ತಿರುತ್ತಾರೆ. ಹಿಂದೆ ಆಶ್ರಮದಲ್ಲಿ ರಚನೆಯಾಗಿದ್ದ ’ಹಾಳೂರು’ ದೀರ್ಘ ಕವಿತೆಯನ್ನೂ ಮಾನಪ್ಪ ೧೮.೧೧.೧೯೨೬ರಂದು ಪ್ರತಿಯೆತ್ತಿರುತ್ತಾರೆ. ಅದರ ಮಾರನೆಯ ದಿನವೇ ೧೯.೧೧.೧೯೨೬ರಂದು ಬೊಮ್ಮನಹಳ್ಳಿಯ ಕಿಂದರಿಜೋಗಿ ರಚನೆಯಾಗುತ್ತದೆ. ಆಗ ಕವಿಗೆ ಕೇವಲ ಇಪ್ಪತ್ತೆರಡು ವರ್ಷ ವಯಸ್ಸು! ವಿಶೇಷವೆಂದರೆ ರಚನೆಯ ಜೊತೆಜೊತೆಗೇ ಪ್ರತಿಯೆತ್ತುವ ಕೆಲಸವನ್ನು ಮಾನಪ್ಪ ಮಾಡುತ್ತಾರೆ! ಅಂದರೆ ಇಡೀ ರಚನೆ ಮತ್ತೆ ಕವಿಯಿಂದ ಮರುಓದಿಗೆ ತಿದ್ದುಪಡಿಗೆ ಒಳಪಡುವುದೇ ಇಲ್ಲ!
ಅಷ್ಟಕ್ಕೂ ಬೊಮ್ಮನಹಳ್ಳಿಯ ಕಿಂದರಿಜೋಗಿ ಎಂಬ ದೀರ್ಘಕವಿತೆಯ (೧೪ ಭಾಗಗಳು; ೪೨೮ ಸಾಲುಗಳು) ರಚನೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದುಹೋಗುತ್ತದೆ! ಬೊಮ್ಮನಹಳ್ಳಿಯ ಕಿಂದರಿಜೋಗಿ ನೀಳ್ಗವಿತೆಯ ರಚನೆಯ ಬಗೆಗೆ ಕವಿಯ ಮಾತುಗಳು ಹೀಗಿವೆ: "ನನಗಿನ್ನೂ ವಿಶದವಾದ ನೆನಪಿದೆ. ಬೆಳಿಗ್ಗೆ ಸ್ನಾನ ಕಾಫಿ ತಿಂಡಿ ಪೂರೈಸಿ ಉಪ್ಪರಿಗೆಗೆ ಹೋಗಿ, ಒಂದು ಮೇಜಿನ ಮುಂದಿದ್ದ ಕುರ್ಚಿಯ ಮೇಲೆ ಕುಳಿತು, ಬಿಡಿ ಹಾಳೆಗಳಲ್ಲಿ ಬರೆಯತೊಡಗಿದೆ. ಒಂದೊಂದೆ ಹಾಳೆ ತುಂಬಿದಂತೆಲ್ಲ ಅದನ್ನು ಕೆಳಗೆ ಹಾಕುತ್ತಿದ್ದೆ. ಮಾನಪ್ಪ ಈಗ ನನ್ನ ಬಳಿ ಇರುವ ನೋಟುಬುಕ್ಕಿನ ಹಸ್ತಪ್ರತಿಗೆ ಅದನ್ನು ಕಾಪಿ ಮಾಡುತ್ತಾ ಹೋಗುತ್ತಿದ್ದ. ಮಧ್ಯಾಹ್ನದ ಊಟದ ಹೊತ್ತಿಗೆ ಬರೆಯುವುದೂ ಪೂರೈಸಿತ್ತು! ಅಂದರೆ ಅದರ ರಚನೆಗೆ ಸುಮಾರು ನಾಲ್ಕು-ಐದು ಗಂಟೆ ಹಿಡಿದಿತ್ತು."
ಬೊಮ್ಮನಹಳ್ಳಿಯ ಕಿಂದರಿಜೋಗಿಯ ಕಂಪು ಕರ್ಣಾಟಕದಾದ್ಯಂತ ಪಸರಿಸಿತು. ಕನ್ನಡ ಮಕ್ಕಳ ನಾಲಿಗೆಯಲ್ಲಿ ನಲಿಯುತ್ತಿತ್ತು. ೧೯೨೮ರಲ್ಲಿ ಮೊದಲ ಬಾರಿಗೆ ಪ್ರಕಟವಾದಾಗ ಅದನ್ನು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವನದ ಭಾಷಾಂತರವೆಂದು ಕೆಲವರು, ಅನುವಾದವೆದು ಕೆಲವರು ವಾದಿಸತೊಡಗಿದರು. ಆದರೆ ಅದು ಅವೆರಡೂ ಆಗಿರಲಿಲ್ಲ ಎಂಬುದು ಕವಿಯ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಅನೇಕರು ಅದನ್ನು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವಿತೆಯ ಭಾಷಾಂತರವೆಂದು ಭಾವಿಸಿದ್ದಾರೆ. ಅದು ಮೊದಲು ’ಕಿರಿಯ ಕಾಣಿಕೆ’ಯಲ್ಲಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದಿಂದ ೧೯೨೮ರಲ್ಲಿ ಪ್ರಕಟವಾದಾಗ ಅದು ಬ್ರೌನಿಂಗ್ ಕವಿಯ ಕವಿತೆಯ ಆಧಾರದ ಮೇಲೆ ರಚಿತವಾದದ್ದು ಎಂಬ ಉಲ್ಲೇಖವಿದೆ. ಅದು ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ಭಾಷಾಂತರವಾಗುವುದಿಲ್ಲ; ಕಡೆಗೆ, ಸಮೀಪದ ಅನುವಾದ ಕೂಡ ಆಗುವುದಿಲ್ಲ. ಅದನ್ನು ಬರೆಯುವಾಗ ಶಿವಮೊಗ್ಗದಲ್ಲಿ ನನ್ನ ಬಳಿ ಬ್ರೌನಿಂಗ್ ಕೃತಿ ಇರಲಿಲ್ಲ. ಅಷ್ಟೆ ಅಲ್ಲ. ಇಂಗ್ಲಿಷಿನಲ್ಲಿ ಅದನ್ನು ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ನಾನು ಐದನೆ ಫಾರಂನಲ್ಲಿ ಓದುತ್ತಿದ್ದಾಗ ಪಠ್ಯಪುಸ್ತಕದಲ್ಲಿ ಓದಿದ್ದೆನೆ ಹೊರತು ಆಮೇಲೆ ಅದನ್ನು ಓದಿರಲೂ ಇಲ್ಲ. ಆದ್ದರಿಂದ ಅದು ಭಾಷಾಂತರವೂ ಅಲ್ಲ, ಅನುವಾದವೂ ಅಲ್ಲ. ಆ ಕಥೆಯ ನೆನಪಿನ ಆಧಾರದ ಮೇಲೆ ರಚಿತವಾದದ್ದು ಎಂದು ಹೇಳಬಹುದು.
ಬೊಮ್ಮಹಳ್ಳಿಯ ಕಿಂದರಿಜೋಗಿಯ ವಸ್ತು, ವಿಷಯ, ಚೌಕಟ್ಟು, ಛಂದಸ್ಸು, ರೂಪಾಂಶ ಎಲ್ಲವುಗಳ ದೃಷ್ಟಿಯಿಂದಲೂ ಅದು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವಿತೆಯ ಭಾಷಾಂತರವಾಗಲೀ ಅನುವಾದವಾಗಲೀ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಕವಿಯೇ ಹೇಳಿದಂತೆ ಅದರಿಂದ ಪ್ರೇರಣೆ ಪಡೆದ ರಚನೆಯಾಗಿದೆ, ಅಷ್ಟೆ. ಮುಂದೆ ಅದು ಪ್ರತ್ಯೇಕವಾಗಿ ಪ್ರಕಟವಾದಾಗ, ಅದಕ್ಕೆ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ರೇಖಾಚಿತ್ರಗಳನ್ನು ಬರೆದಿರುತ್ತಾರೆ. ಹಾಡುಗಬ್ಬವಾಗಿ, ಸಹಸ್ರಾರು ಮಂದಿಯ ನಾಲಗೆಯ ತುದಿಯಲ್ಲಿ ನರ್ತಿಸಿದ್ದರೆ, ಪ್ರದರ್ಶನ ರೂಪಕವಾಗಿಯೂ ನೂರಾರು ವೇದಿಕೆಗಳಲ್ಲಿ ಪ್ರದರ್ಶಿಸಲ್ಪಟ್ಟಿರುತ್ತದೆ.
ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ಮೃತ ನಾಕದಲಿ:
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು;
ಹಾಡಲಿ ಕುಣಿಯಲಿ; ಹಾರಲಿ, ಏರಲಿ
ದಿವಿಜತ್ವಕೆ ಈ ಮನುಜಪಶು!
ಎಂಬ ಮುಂಬರಹ ಬೊಮ್ಮನಹಳ್ಳಿಯ ಕಿಂದರಿಜೋಗಿಗಿದೆ. ಪ್ರತಿಯೊಬ್ಬರಲ್ಲೂ ಯಾವಾಗಲೂ (ನಿತ್ಯ ಕಿಶೋರತೆ) ಇರುವ ’ಮಗು’ತ್ವ ಮಕ್ಕಳ ಸಂಗದಲ್ಲಿ ಪ್ರಕಟವಾಗುತ್ತದೆ. ಅದು ಆನಂದದ ದಿವ್ಯ ಶಿಶು ಎಂಬುದು ಕವಿಯ ಅಭಿಪ್ರಾಯ.
ತುಂಗಾತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ.
ಅಲ್ಲೇನಿಲಿಗಳ ಕಾಟವೆ ಕಾಟ,
ಅಲ್ಲಿಯ ಜನಗಳಿಗತಿಗೋಳಾಟ:
೪ ೪ ೪ ೩ ಮಾತ್ರಾಗಣಗಳ ಓಟ ಕವಿತೆಗಿದೆ. ನೀಳ್ಗವಿತೆಯಾದ್ದರಿಂದ ಛಂದೋವೈವಿಧ್ಯತೆಯೂ ಓದುಗನ ಮನಸೂರೆಗೊಳ್ಳುತ್ತದೆ.
ಇಲಿಗಳು!
ಬಡಿದುವು ನಾಯಿಗಳ!
ಇಲಿಗಳು!
ಕಡಿದುವು ಬೆಕ್ಕುಗಳ!
ಇಂತಹ ಬಿಡಿಸಿಟ್ಟಿರುವ ಸಾಲುಗಳಲ್ಲಿಯೂ ೪ ೪ ೪ ೧ ಮಾತ್ರಾಗಣಗಳ ಸೊಗಸನ್ನು ಸವಿಯಬಹುದು. ಮತ್ತೆ ತಕ್ಷಣ ಧುತ್ತೆಂದು ತಲೆದೋರುವ ೪ ೪ ೪ ೪; ೪ ೪ ೪ ೩; ೪ ೪ ೪ ೪ ಹೀಗೆ ವೈವಿಧ್ಯಮಯವಾಗಿರುವ ಮಾತ್ರಗಳಣಗಳ ಸೊಬಗನ್ನು ನೋಡಿ:
ಕೆಲವನು ಕೊಂದುವು, ಕೆಲವು ತಿಂದುವು,
ಕೆಲವನು ಬೆದರಿಸಿ ಹಿಂಬಾಲಿಸಿದುವು.
ಅಲ್ಲಿಯ ಮೂಷಿಕನಿಕರವು ಸೊಕ್ಕಿ
ಎಲ್ಲರ ಮೇಲೆಯೆ ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ
ಕುಣಿದುವು ಯಾರನು ಲೆಕ್ಕಿಸದೆ!
ಈ ಛಂದೋವೈವಿಧ್ಯೆತೆ ನೀಳ್ಗವಿತೆಗಳಲ್ಲಿ ಸಾಮಾನ್ಯವಾಗಿರುವ ಏಕತಾನತೆಯ ದೋಷವನ್ನು ಹೋಗಲಾಡಿಸಿ ಒಂದು ಹೊಸ ರೀತಿಯೆ ಹುರುಪನ್ನೂ ಓಟವನ್ನೂ ಕವಿತೆಗೆ ಒದಗಿಸುತ್ತದೆ. ಇಡೀ ಕವಿತೆಯ ಲಯಕ್ಕೆ, ಹಾಡುವಿಕೆಗೆ, ಈ ಛಂದೋ ಏರಿಳಿಕೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬೊಮ್ಮನಹಳ್ಳಿಯ ಕಿಂದರಿಜೋಗಿಯ ಸಾರ್ವಕಾಲಿಕ ಯಶಸ್ಸು, ಜನಪ್ರಿಯತೆ ಸಾಕ್ಷಿಯಾಗಿವೆ. ಹೆಚ್ಚಿನ ಕ್ರಿಯಾಪದಗಳು ’ಉವು’ ಸಮೂಹ ವಾಚಕದೊಂದಿಗೆ ಕೊನೆಗೊಂಡಿರುವುದು ಗಮನಾರ್ಹ. ಹರಿದುವು; ಮೆದ್ದುವು; ಬಂದುವು; ಓಡಿದುವು; ನಿಂತುವು; ಬಿಕ್ಕಿದುವು ಮೊದಲಾದವು. ಕವಿತೆಗೆ ಒಂದು ರೀತಿಯ ಉತ್ಸಾಹ ಹಾಗೂ ಉಲ್ಲಸಿತೆಯನ್ನೂ ಇದು ದಯಪಾಲಿಸಿದೆ ಎನ್ನಬಹುದು.
ಕೆಲವು ಬಿಡಿ ಚಿತ್ರಗಳು:
ಟೋಪಿಯ ಒಳಗಡೆ ಗೂಡನು ಮಾಡಿ
ಹೆತ್ತುವು ಮರಿಗಳನು;
ಪೇಟದ ಒಳಗಡೆ ಆಟವನಾಡಿ
ಕಿತ್ತುವು ಸರಿಗೆಯನು!
ಗೋಡೆಗೆ ತಗುಲಿಸಿದಂಗಿಯ ಜೇಬನು
ದಿನವೂ ಜಪ್ತಿಯ ಮಾಡಿದುವು;
ಮಲಗಿರೆ ಹಾಸಿಗೆಯನ್ನೇ ಹರಿದುವು,
ಕೇಶಚ್ಛೇದವ ಮಾಡಿದುವು;
ಬೆಣ್ಣೆಯ ಕದ್ದುವು, ಬೆಲ್ಲವ ಮೆದ್ದುವು
ಎಣ್ಣೆಗೆ ಬಿದ್ದುವು ದಿನದಿನವು;
ಭೃಂಗಾಮಲಕದ ತೈಲವ ಹಚ್ಚಿದ
ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ
ಇಲಿಗಳಿಗಾಗಿತ್ತೂಟದ ಫೇಣಿ!
ಸಿದ್ದೋಜೈಗಳು ಶಾಲೆಗೆ ಹೋಗಿ
ಪಾಠವ ಬೋಧಿಸುತ್ತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು
ಚಂಗನೆ ನೆಗೆಯಿತು ತೂತನು ಮಾಡಿ.
ಲೇವಡಿ ಎಬ್ಬಿಸೆ ಬಾಲಕರೆಲ್ಲ
ಗುರುಗಳಿಗಾಯಿತು ಬಲು ಗೇಲಿ!
ಬಂದನು ಬಂದನು ಕಿಂದರಿ ಜೋಗಿ!
ಕೆದರಿದ ಕೂದಲ ಗಡ್ಡದ ಜೋಗಿ!
ನಾನಾ ಬಣ್ಣದ ಬಟ್ಟೆಯ ಜೋಗಿ!
ಕೈಯಲಿ ಕಿಂದರಿ ಹಿಡಿದಾ ಜೋಗಿ!
ಮರುಮಾತನಾಡದೆ ಕಿಂದರಿ ಜೋಗಿ
ಕಟ್ಟೆಯನಿಳಿದನು ಬೀದಿಗೆ ಹೋಗಿ.
ಗಡ್ಡವ ನೀವುತ ಸುತ್ತಲು ನೋಡಿ,
ಮಂತ್ರವ ಬಾಯಲಿ ಮಣಮಣ ಹಾಡಿ,
ಕಿಂದರಿ ಬಾರಿಸತೊಡಗಿದನು;
ಜಗವನೆ ಮೋಹಿಸಿತಾ ನಾದ!
ಏನಿದು? ಏನಿದು? ಗಜಿಬಿಜಿ ಎಲ್ಲಿ?
ಊರನೆ ಮುಳುಗಿಪ ನಾದವಿದೆಲ್ಲಿ?
ಇಲಿಗಳು! ಇಲಿಗಳು! ಇಲಿಗಳ ಹಿಂಡು!
ಬಳ ಬಳ ಬಂದುವು ಇಲಿಗಳ ದಂಡು!
ಅನ್ನದ ಮಡಕೆಯನಗಲಿದುವು!
ಟೋಪಿಯ ಗೂಡನು ತ್ಯಜಿಸಿದುವು!
ಬಂದುವು ಅಂಗಿಯ ಜೇಬನು ಬಿಟ್ಟು,
ಮಕ್ಕಳ ಕಾಲಿನ ಚೀಲವ ಬಿಟ್ಟು.
ಹಾರುತ ಬಂದುವು, ಓಡುತ ಬಂದುವು,
ನೆಗೆಯುತ ಬಂದುವು, ಕುಣಿಯುತ ಬಂದುವು,
ಜೋಗಿಯು ಬಾರಿಸೆ ಕಿಂದರಿಯ!
ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ,
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ,
ಎಲ್ಲಾ ಬಂದುವು ಓಡೋಡಿ,
ಜೋಗಿಯು ಬಾರಿಸೆ ಕಿಂದರಿಯ!
ಬಂದುವು ನಾನಾ ಬಣ್ಣದ ಇಲಿಗಳು,
ಕೆಂಪಿನ ಇಲಿಗಳು, ಹಳದಿಯ ಇಲಿಗಳು,
ಬೆಳ್ಳಿಲಿ, ಕರಿಯಲಿ, ಗಿರಯಿಲಿ, ಹೊಲದಿಲಿ
ಕುಂಕುಮರಾಗದ, ಚಂದನರಾಗದ,
ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ,
ನಾನಾವರ್ಣದ ಇಲಿಗಳು ಬಂದುವು
ಕುಣಿಯುತ ನಲಿಯುತ ಸಂತಸದಿ
ಜೋಗಿಯು ಬಾರಿಸೆ ಕಿಂದರಿಯ!
ನೋಡಿರಿ! ಕಾಣಿರಿ! ಬರುತಿಹವಿನ್ನೂ!
ಅಟ್ಟದ ಮೇಲಿಂ ಬರುವುವು ಕೆಲವು!
ಕಣಜದ ಮೇಲಿಂ ಬರುವುವು ಕೆಲವು!
ಓಹೋ! ಬಂದುವು ಹಿಂಡ್ಹಿಂಡಾಗಿ!
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ,
ಚೀ! ಪೀ! ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನಲಿನಲಿದಾಡಿ
ಬಂದಿತು ಮೂಷಿಕಸಂಕುಲವು
ಜೋಗಿಯು ಬಾರಿಸೆ ಕಿಂದರಿಯ!
ಕಿಂದರಿಜೋಗಿಯೆ ಹೇಳುವೆ ಕೇಳು,
ಸಾವಿರ ಆರನು ನಾ ಕೊಡಲಾರೆನು;
ನೀ ಮಾಡಿದ ಕೆಲಸವು ಹೆಚ್ಚಲ್ಲ.
ಸುಮ್ಮನೆ ಕಿಂದರಿ ಬಾರಿಸಿದೆ.
ಇಲಿಗಳ ಹೊತ್ತೆಯ ನೀನೇನು?
ಅವುಗಳು ತಮ್ಮಷ್ಟಕೆ ತಾವೇ
ಬಿದ್ದುವು ಹೊಳೆಯಲಿ ಮುಳುಗಿದುವು!
ಕೊಡುವೆನು ನೀ ಪಟ್ಟಿಹ ಶ್ರಮಕಾಗಿ
ಕಾಸೈದಾರನು ತೆಗೆದುಕೊ, ಜೋಗಿ;
ಪುರಿಗಡಲೆಯ ಕೊಂಡುಕೊ ಹೋಗಿ!
’ಟಿಂಗ್ ಟಿಂಗ್! ಟಿಂಗ್ ಟಿಂಗ್!’ ನಾದವ ಕೇಳಿ
ಚಂಗ್ ಚಂಗ್ ನೆಗೆದರು ಬಾಲಕರೋಡಿ.
ಕಿಂದರಿ ಜೋಗಿಯು ಹೊರಟನು ಮುಂದೆ,
ಬಾಲಕರೆಲ್ಲರು ಹರಿದರು ಹಿಂದೆ!
ಕುಂಟರು ಭರದಿಂದೋಡಿದರು!
ಕುರುಡರು ನೋಟವ ನೋಡಿದರು!
ಮೂಗರು ಸವಿಮಾತನಾಡಿದರು!
ಕಿವುಡರು ನಾದವ ಕೇಳಿದರು!
ಬಾಳರು ಭರದಿಂದೋಡಿದರು:
ಜನರೆಲ್ಲಾ ಗೋಳಾಡಿದರು!
ಅಯ್ಯೋ ಎನಗಿಲ್ಲವರನಾಂದ!
ಜೋಗಿಯು ಕಿಂದರಿ ಬಾರಿಸೆ ಕಂಡೆವು
ಬಣ್ಣದ ಮನೆಗಳ ಪಟ್ಟಣವ,
ಹಣ್ಣುಗಳುದುರಿದ ತೋಟಗಳ!
ನಾನಾ ಆಟದ ಸಾಮಾನುಗಳ,
ತರತರ ರಾಗದ ಗೊಂಬೆಗಳ;
ಮಾತಿಗೆ ಮೀರಿದ ಆನಂದಗಳ,
ಕೈಗೇ ಸಿಕ್ಕುವ ಹಕ್ಕಿಗಳ!
ಜಿಂಕೆಗಳೆಮ್ಮಡನಾಡಿದುವಲ್ಲಿ,
ಮೊಲಗಳು ಕುಳಿತುವು ಮೈಮೇಲಲ್ಲಿ!
ಅಯ್ಯೋ ಹೋಯಿತೆ ಆ ನಾಕ!
ಅಯ್ಯೋ ಬಂದಿತೆ ಈ ಲೋಕ!
ಬಂದರು ಎಲ್ಲರು ಬೊಮ್ಮನಹಳ್ಳಿಗೆ
ದುಃಖಾಂಬುಧಿಯೊಳಗೀಜಾಡಿ;
ಕಂಬನಿಗರೆದರು ಗೋಳಾಡಿ!
ಈಗಾ ಹಳ್ಳಿಯ ಬೀದಿಯಲಾರೂ
ಕಿಂದರಿನಾದವನಾಲಿಸರು
ಕಿಂದರಿ ಜೋಗಿಗಳಲ್ಲಿಗೆ ಬಂದರೆ
ಬೇಕಾದ್ದೆಲ್ಲವನೀಯುವರು!
ಭಾಷೆಯ ಕೊಟ್ಟರೆ, ಮೂರ್ತೀ, ನಾವು
ಮೋಸವ ಮಾಡದೆ ಸಲ್ಲಿಸಬೇಕು.
ಆದುದರಿಂದ, ಮೂರ್ತೀ, ಕೇಳು:
ಸತ್ಯವನೆಂದೂ ತ್ಯಜಿಸದೆ ಬಾಳು!

3 comments:

ಜಲನಯನ said...

ಡಾ. ಸತ್ಯ ೨೦೦೯ ರಲ್ಲಿ ನಮ್ಮಲ್ಲಿ ಕುವೈತ್ ಕನ್ನಡ ಕೂಟದ ರಾಜ್ಯೋತ್ಸವಕ್ಕೆ ಆಗಮಿಸಿದ್ದ ಪ್ರಭಾತ್ ಕಲಾವಿದರು ನಡೆಸಿಕೊಟ್ಟ ಇದೇ ಶೀರ್ಷಿಕೆಯ ರೂಪಕ ಈ ನೀಳ್ಗವಿತೆಯ ವಿವಿಧ ಆಯಾಮಗಳನ್ನು ಬಿಚ್ಚಿಟ್ಟಿತ್ತು... ನನಗೆ ಇಂಗ್ಲೀಷ್ ಕವಿತೆ,ವಿಷಯ ತಿಳಿಸಿದ್ದರೆ ಈ ಕವನ ಚಿತ್ರಣವನ್ನೇ ಕೊಡುತ್ತೆ...ಎಷ್ಟಾದರೂ ನಮ್ಮ ಮಾತೃ ಭಾಷೆಯ ಪ್ರಭಾವವೇ ಬೇರೆ, ಅದರಲ್ಲೂ ಕುವೆಂಪು ಬರೆದದ್ದು ಎಂದರೆ...ಇದಕ್ಕೆ ನಿಮ್ಮ ಲೇಖನ ಇನ್ನಷ್ಟು ಮೆರಗು ಕೊಟ್ಟಿದೆ.

ಚಾರ್ವಾಕ ವೆಂಕಟರಮಣ ಭಾಗವತ said...

ಬೊಮ್ಮನಹಳ್ಳಿಯ ಕಿಂದರಜೋಗಿಯ ಸೊಗಸಾದ ಪರಿಚಯ ಮಾಡಿಕೊಟ್ಟಿದ್ದೀರಿ.

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ಮೃತ ನಾಕದಲಿ:
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು;
ಹಾಡಲಿ ಕುಣಿಯಲಿ; ಹಾರಲಿ, ಏರಲಿ
ದಿವಿಜತ್ವಕೆ ಈ ಮನುಜಪಶು!

ಇದಂತೂ ಕುವೆಂಪು ಮಾತ್ರವೇ ಬರೆಯಬಹುದಾದ ಸಾಲುಗಳು. ಸೊಗಸಾದ ಲೇಖನ ನಿಮ್ಮದು.

Pejathaya said...

ಕಿಂದರಿ ಜೋಗಿಯ ಪದ್ಯವನ್ನು ಪೂರ್ತಿಯಾಗಿ ಓದಲು ಕೊಟ್ಟಿದ್ದಕ್ಕೆ ನನ್ನ ಆಭಾರಿತನವನ್ನು ಹೇಗೆ ಹೇಳಲಿ?
ನಾನು ನಾಲ್ಕನೇ ತರಗತಿಯಲ್ಲಿ ಓದಿದ ಪದ್ಯವು ಬಹು ಚುಟುಕಾಗಿತ್ತು.
ಅದರ ಪೂರ್ಣ ರೂಪ ಇಂದು ಸಿಕ್ಕಿತು.
ಕಿಂದರಿ ಜೋಗಿಯ ಟೋಪಿ ಮನಮೋಹಕ!
ಐವತ್ತೈದು ವರುಷಗಳ ನಂತರ ಪುನಹಾ ಶಾಲಾ ಬಾಲಕನಂತೆ ಪದ್ಯವನ್ನು ಪಠಿಸಿದೆ. ಪುನಹಾ ಅನುಭವಿಸಿದೆ.
ಪ್ರೀತಿಯಿಂದ
ಪೆಜತ್ತಾಯ