Monday, December 05, 2011

ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!

೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ಕವಿಚೇತನಕ್ಕೆ ಹೆಚ್ಚು ಅಪೇಕ್ಷಣೀಯವೂ ಪ್ರಯೋಜಕರವೂ ಆಗುತ್ತದೆಂಬ ಕಾರಣಕ್ಕಾಗಿ ಆರ್ಟ್ಸ್ ವಿಭಾಗವನ್ನು ಆಯ್ದುಕೊಂಡು ಮಹಾರಾಜಾ ಕಾಲೇಜನ್ನು ಸೇರುತ್ತಾರೆ. ಅಲ್ಲಿಂದ ಆರು ದಿನಗಳ ನಂತರದ, ಜೂನ್ ೨೯ರ ದಿನಚರಿ ಹೀಗಿದೆ. "ನನ್ನ ತಾಯಿಗೆ ತುಂಬ ಖಾಯಿಲೆಯಾಗಿದೆ ಎಂದು ಡಿ.ಎನ್.ಹಿರಿಯಣ್ಣ ಕಾಗದ ಬರೆದಿದ್ದಾನೆ. ನನಗೇನೊ ಅಳುಕುಹುಟ್ಟಿ, ಮನಸ್ಸಿನಲ್ಲಿ ಭಯ ಸಂಚಾರವಾಯಿತು. (I felt it and my heart gave way to formless fears.) ಆದರೆ ಮತ್ತೆ ಮನಸ್ಸಿಗೆ ಸಮಾಧಾನ ತಂದುಕೊಂಡು, ನನ್ನ ತಾಯಿಯ ಕ್ಷೇಮವನ್ನು ನನ್ನ ಮಹಾಮಾತೆ ಜಗಜ್ಜನನಿಯ ಕೈಗೆ ಅರ್ಪಿಸಿದೆ. ಮತ್ತೆ ನನಗೆ ನಾನೆ ಅಂದುಕೊಂಡೆ: ನನ್ನ ತಾಯಿ ಸತ್ತರೂ ಅವರು ಬೇರೆಯ ಲೋಕದಲ್ಲಿ ಬದುಕಿಯೆ ಇರುತ್ತಾರೆ. ಓ ಸ್ವಾಮೀ, ನೀನು ನನಗೆ ತಂದೊಡ್ಡುವ ಕಷ್ಟಗಳನ್ನೆಲ್ಲ ಎದೆಗೆಡದೆ ಸಹಿಸುವಂತೆ ಧೈರ್ಯವನ್ನು ದಯಪಾಳಿಸು. ಸಮಸ್ತ ಜಗತ್ತನ್ನೂ ನೀನು ತಂದೆಯಂತೆ ಕಾಯುತ್ತಿರುವಲ್ಲಿ ನನ್ನ ಚೇತನ ಭಯಗಳಿಗೆ ತುತ್ತಾಗದಿರಲಿ. ಎಲೈ ಭಾರವೆ, ತೊಲಗಾಚೆ!" ಮಾರನೆಯ ದಿನದ ದಿನಚರಿಯಲ್ಲಿ "ಓ ತಾಯೀ, ನನ್ನ ಅವ್ವನ ಸಂರಕ್ಷಣೆ ನಿನಗೆ ಸೇರಿದ್ದು? ನಾನೇಕೆ ದುಃಖಿಸಲಿ?' ಎಂದು ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ಎಲ್ಲಾ ಆತಂಕಗಳ ನಡುವೆಯೇ, 2.7.1924ರಂದು ಐರಿಸ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಬೇಟಿ ಮಾಡುವುದು!

ಅಲ್ಲಿಗೆ ಸರಿಸುಮಾರು ಒಂದು ತಿಂಗಳಿಗೆ ಅವರ ತಾಯಿ ನಿಧನರಾಗುತ್ತಾರೆ. ಅದಕ್ಕೂ ಮೊದಲು, ಸುಮಾರು ೨೦ ವರ್ಷದ ಯುವಕ ಪುಟ್ಟಪ್ಪನಿಗೆ, ಸಾವಿನ ವಿಷಯದಲ್ಲಿ ಇದ್ದ ಮನೊಭಾವ, ಸ್ವಲ್ಪಮಟ್ಟಿನ ಆತಂಕ, ಬಹುಮಟ್ಟಿನ ನಿರ್ಲಿಪ್ತತೆ, ಉದಾಸೀನತೆ, ಆಧ್ಯಾತ್ಮಿಕ ಸಮರ್ಥನೆ ಇವೆಲ್ಲವೂ ಗಮನಾರ್ಹ. ಆ ಬೇಸಗೆ ರಜಕ್ಕೆ ಊರಿಗೆ ಹೋಗಿದ್ದರೂ, ಅಲ್ಲಿಯೂ ಸಾಹಿತ್ಯ, ಆಧ್ಯಾತ್ಮ, ಪ್ರಕೃತಿ, ಗೆಳೆಯರು ಇವುಗಳಲ್ಲಿ ಮುಳುಗಿಹೋಗುವ ಕವಿ ತನ್ನ ತಾಯಿ ಮತ್ತು ತಂಗಿಯರನ್ನು ಭೇಟಿಯಾಗುವುದೇ ಇಲ್ಲ. ಅವರು ಆಗ ಹಿರೆಕೂಡಿಗೆಯಲ್ಲಿ ಇದ್ದರು. ಅಲ್ಲಿಗೆ ಹೋಗಿ ಅವರನ್ನು ಕಂಡು ಮಾತನಾಡಿಸುವ ಕುಪ್ಪಳಿಗೆ ಕರೆತರುವ ಯಾವ ಕೆಲಸವನ್ನೂ 'ಕಿಶೋರಚಂದ್ರವಾಣಿ'ಯಾಗಿದ್ದ ಕವಿ ಪುಟ್ಟಪ್ಪ ಮಾಡುವುದೇ ಇಲ್ಲ. 'ಕುಪ್ಪಳಿ ರಾಮಣ್ಣಗೌಡರೊಂದಿಗಿನ ಮನಸ್ತಾಪವೇ ಕಾರಣವಾಗಿ ಅವರು ತವರು ಮನೆಗೆ ಮಕ್ಕಳೊಂದಿಗೆ ಹೋಗಿದ್ದಾರೆ' ಎಂಬ ಕಾರಣವೂ ಕವಿಗೆ ಗೊತ್ತಿತ್ತು! ಈ ಹಿಂದೆಯೇ ಸ್ವತಃ ರಾಮಣ್ಣಗೌಡರು, ಮೈಸೂರಿನಲ್ಲಿದ್ದ ಕವಿಗೆ ಕಾಗದ ಬರೆದು ಈ ವಿಷಯವನ್ನು ತಿಳಿಸಿದ್ದರು. ಆ ದಿನಗಳಲ್ಲಿ ಕವಿಯ ಸಮಸ್ತಚೇತನವನ್ನು ಒಂದು ಅಲೌಕಿಕತೆ ಆಕ್ರಮಿಸಿಕೊಂಡಿದ್ದರಿಂದ, ಹೋಗಿ ಅವರನ್ನು ಕಂಡು ವಿಚಾರಿಸಿ ವಿಷಯ ಏನೆಂದು ತಿಳಿಯುವ ಯಾವುದೇ ಗೋಜಿಗೆ ಹೋಗುವುದಿಲ್ಲ. ಮುಂದೆ ಅಲಿಗೆ ಪುಟ್ಟನಾಯ್ಕರು ಬರೆದಂತೆ, 'ಕುಪ್ಪಳಿಗೆ ಬಂದ ಮಗ, ಹಿರೆಕೂಡಿಗೆಗೆ ತಮ್ಮನ್ನು ನೋಡಲು ಬರಲಿಲ್ಲ' ಎಂಬುದನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರಂತೆ. ಆಗಿನ ತಮ್ಮ ಆಧ್ಯಾತ್ಮಿಕ ಅಲೌಕಿಕ ಮನಸ್ಥಿತಿಯ ಬಗ್ಗೆ ಕವಿ 'ಅರ್ಧ ವಿವೇಕ ಅರ್ಧ ಅವಿವೇಕಗಳಲ್ಲಿ ನನ್ನ ಪ್ರಜ್ಞೆ ಅರ್ಧಮೂರ್ಛಿತ ಸ್ಥಿತಿಯಲ್ಲಿ ಮುಂದುವರಿಯುತ್ತಿತ್ತೆಂದು ಭಾಸವಾಗುತ್ತದೆ' ಎನ್ನುತ್ತಾರೆ.

ತಾಯಿಯ ಕಾಯಿಲೆ ವಿಷಯ ತಿಳಿದಾಗ, ಊರಿಗೆ ಹೋಗಬೇಕೆನ್ನುವ ಯಾವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. ಮಲೆನಾಡಿನಲ್ಲಿ ಆಗ ಕಾಯಿಲೆ ಬೀಳುವುದು ಸಮಾನ್ಯ ವಿಷಯವಾಗಿದ್ದರಿಂದ, ಹಾಗೂ 'ಕಾಯಿಲೆ ಬಿದ್ದ ಮಾತ್ರಕ್ಕೆ ಅವ್ವ ಸತ್ತೇ ಹೋಗುತ್ತದೆ' ಎಂದು ಎಣಿಸದಿದ್ದುರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತೆ ಸ್ಥಾವರಪ್ರಕೃತಿಯೇ ಹುಟ್ಟುಗುಣವಾಗಿದ್ದ ಅವರಿಗೆ, ಊರಿನಿಂದ ಬಂದ ಒಂದು ವಾರದೊಳಗಾಗಿಯೇ ಮತ್ತೆ ಊರಿಗೆ ಹೋಗುವ ಮನಸ್ಸು ಹೇಗೆ ಬಂದೀತು? ಅಲ್ಲಿಂದ ಮುಂದೆ ಹದಿನೈದು ದಿನಗಳಲ್ಲಿ ಅವರ ಅಜ್ಜ ಬಸಪ್ಪಗೌಡರು ತೀರಿಕೊಂಡರು. ಆಗಲೂ ಊರಿಗೆ ಹೋಗಲಿಲ್ಲ. ಆಗ ಹೋಗಿದ್ದರೆ, ತನ್ನ ತಾಯಿ ಸಾಯುವ ಮೊದಲೊಮ್ಮೆ ಅವರನ್ನು ನೋಡುವ ಅವಕಾಶ ಕವಿಗಿರುತ್ತಿತ್ತು. ಏಕೆಂದರೆ, ಅಜ್ಜಯ್ಯ ತೀರಿಕೊಂಡ ಹದಿನೈದೇ ದಿನದಲ್ಲಿ ತಾಯಿಯೂ ತೀರಿಕೊಂಡಿದ್ದರು!

ತಾಯಿಯ ನಿಧನದ ವಾರ್ತೆಯನ್ನು ಹೊತ್ತ ಟೆಲಿಗ್ರಾಂ ಬಂದಾಗ ಸಂತೇಪೇಟೆಯ ಆನಂದಮಂದಿರ ಹೋಟೆಲಿನ ಉಪ್ಪರಿಗೆಯ ಕೊಠಡಿಯಲ್ಲಿ ಸಹವಾಸಿಗಳೊಡನೆ ಇಸ್ಪೀಟು ಆಡುತ್ತಾ ಕುಳಿತಿದ್ದರು. ಆಗಿನ ಅವರ ವರ್ತನೆಯನ್ನು ಅವರ ಮಾತುಗಳಲ್ಲಿಯೇ ನೋಡಬಹುದು. "ಯಾವುದು ಆದರೇನು ಗತಿ ಎಂದು ಭೀತನಾಗಿದ್ದೆನೋ ಅದು ನಡೆದುಹೋಗಿತ್ತು. ಯಾರ ಸ್ತನ್ಯಪಾನ ಲಾಲನೆ ಪಾಲನೆಗಳಿಂದ ನಾನೂ ಒಬ್ಬ ಮಾನವ ವ್ಯಕ್ತಿಯಾಗಿ ಬೆಳೆದುಬಂದಿದ್ದೆನೋ ಆ ಬ್ರಹ್ಮಮಯೀ ಮಾತೆ ದೇಹತ್ಯಾಗ ಮಾಡಿದ್ದರು! ಶೋಕಾಘಾತದಿಂದ ಚೇತನ ತತ್ತರಿಸಿತು, ಒಂದು ಕ್ಷಣ! ಒಡನೆಯೆ ನನ್ನ ಅದ್ವೈತಬುದ್ಧಿಯ ಅನೆಸ್ತೀಶಿಯಾ ಕೆಲಸ ಮಾಡಿತು. ಟೆಲಿಗ್ರಾಂ ಅನ್ನು ಜೇಬಿನಲ್ಲಿಟ್ಟುಕೊಂಡು, ಏನು ಎಂತು ಎಂದು ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ, ಮತ್ತೆ ಆಟದಲ್ಲಿ ತೊಡಗಿದೆ. ಏನೂ ನಡೆದಿಲ್ಲ ಎಂಬಂತೆ ಆಟ ಮುಂದುವರಿದು ಬಹಳ ಹೊತ್ತಿನ ಮೇಲೆ ಮುಗಿಯಿತು."

ಆಟ ಮುಗಿದ ಮೇಲೆ, ವಿಷಯ ತಿಳಿದ ಗೆಳೆಯರು ದಿಗ್ಭ್ರಾಂತರಾದರು. ತಾಯಿಯ ಸಾವನ್ನು ಕೇಳಿ ದುಃಖಿಸಲಿಲ್ಲ! ಅಳಲಿಲ್ಲ, ಮುಖಭಾವದಲ್ಲಿ ವ್ಯಸನ ಸೂಚಿಸಲೂ ಇಲ್ಲ. 'ಇವನೇನು ಮನುಷ್ಯನೋ ಕಲ್ಲೋ' ಎನ್ನಿಸಿರಬೇಕು ಅವರಿಗೆ. ಬೆಳಿಗ್ಗೆ, ಇವರು ಊರಿಗೆ ಹೊರಡಬಹುದು ಎಂದು ನೋಡುತ್ತಿದ್ದ ಅವರಿಗೆ, ಕಾಲೇಜಿಗೆ ಹೊರಡಲು ಸಿದ್ಧರಾಗುತ್ತಿದ್ದ ಇವರನ್ನು ಕಂಡು ಗಾಬರಿಯೂ ಆಯಿತು. ಎಲ್ಲರೂ ಸರ್ವಸಮ್ಮತಿಯಿಂದ ಇವರ ನಿರ್ಧಾರವನ್ನು ವಿರೋಧಿಸಿದರು. 'ಆಗುವುದೆಲ್ಲ ಆಗಿಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ?' ಎಂದರು. ಆಗ ಗೆಳೆಯರು ಸತ್ತವರಿಗಾಗಿ ಬೇಡ, ನಿಮ್ಮ ತಂಗಿಯರನ್ನಾದರೂ ಸಂತೈಸಲು ಹೋಗಿ ಬನ್ನಿ' ಎಂದರು. 'ಕೂಡುಕುಟುಂಬದ ನಡುವೆ ಬೆಳೆಯುತ್ತಿರುವ ಅವರಿಗೆ ಅದರ ಅಗತ್ಯವಿಲ್ಲ' ಅನ್ನಿಸಿಬಿಡುತ್ತದೆ ಈ ಅದ್ವೈತಿಗೆ! ಒಟ್ಟು ಘಟನೆಯ ಬಗ್ಗೆ ನೆನಪಿನ ದೋಣಿಯಲ್ಲಿ ಹೀಗೆ ಬರೆಯುತ್ತಾರೆ. "ನನ್ನ ತಾಯಿ ಸತ್ತಿಲ್ಲವೆಂದೇ ನನ್ನ ದೃಢ ನಂಬುಗೆಯಾಗಿತ್ತು, ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದುದನ್ನು ಮಾಡುತ್ತಿರುತ್ತದೆ ಎಂದು."

ಒಂದು ವಿಷಯದಲ್ಲಿ ಅವರ ಸ್ನೇಹಿತರು ಯಶಸ್ವಿಯಾಗುತ್ತಾರೆ. ಊರಿನಿಂದ, 'ಹನ್ನೊಂದನೇ ದಿನದ ಕಟ್ಟಳೆಗಾದರೂ, ಹಿರಿಯ, ಒಬ್ಬನೆ ಗಂಡುಮಗನಾದ ನೀನು ಬರಲೇಬೇಕು' ಎಂದು ಕಾಗದ ಬಂದಿರುತ್ತದೆ. ಆದರೆ ತಿಥಿ ಮುಂತಾದ ಅಪರಕರ್ಮಗಳಲ್ಲಿ ಒಂದಿನಿತೂ ನಂಬಿಕೆಯಿಲ್ಲದ ಇವರು ಅದನ್ನೂ ವಿರೋಧಿಸುತ್ತಾರೆ. ಗೆಳೆಯರ ಒತ್ತಾಯದ ನಡುವೆ ಒಂದೆರಡು ದಿನಗಳು ಒದ್ದಾಡಿ, ಕೊನೆಗೂ ಊರಿಗೆ ಹೋಗಿಬರಲು ಸಮ್ಮತಿಸುತ್ತಾರೆ.

ದಹನ ಸಂಸ್ಕಾರಾದಿಗಳೆಲ್ಲಾ ಮುಗಿದು, ಹನ್ನೊಂದನೇ ದಿನದ ಕ್ರಿಯೆಗೆ ಸಿದ್ಧವಾಗುತ್ತಿದ್ದ ಮನೆಯಲ್ಲಿ ಇವರ ಪ್ರಕಾರ ಇವರು ಮಾಡಬೇಕಾಗಿದ್ದ ಕೆಲಸಗಳಾವು ಇರಲಿಲ್ಲ. ಆದರೆ, ತಾಯಿಯ ಸಾವಿನಿಂದ ತತ್ತರಿಸಿ, ಅಣ್ಣನ ಬರುವಿಕೆಗಾಗಿ ಕಾದು ಕುಳಿತಿದ್ದ ತಂಗಿಯರಿಬ್ಬರು ಎದುರಿಗೆ ಬಂದಾಗ ಇವರು ನಡೆದುಕೊಂಡ ರೀತಿ ಮಾತ್ರ ಅವರು ನಿರೀಕ್ಷಿಸಿದಂತೆ ಇರಲಿಲ್ಲ. ಒಟ್ಟು ಕುಟುಂಬದಲ್ಲಿ ಹುಟ್ಟಿ ಬೆಳೆದು, ಎಂದೂ ಏಕಾಂತದಲ್ಲಿ ಕಾಲಕಳೆಯದ, ಅಣ್ಣನೊಂದಿಗೆ ಮಾತನಾಡದ ತಂಗಿಯರು, ತಾಯಿಯ ಸಾವಿನ ಸಮಯದಲ್ಲೂ ಅಣ್ಣ ಎದುರಾದಾಗ ಮಾತನಾಡುವುದಿಲ್ಲ; ಆದರೆ ದುಃಖಿಸುತ್ತಾರೆ. ಆಗ ಇವರು ಅವರನ್ನು ಗದರಿಸಿ ಸುಮ್ಮನಾಗಿಸುತ್ತಾರೆ! ಆ ಘಟನೆಯನ್ನು ಕುರಿತು ಹೀಗೆ ಹೇಳುತ್ತಾರೆ. "ಅದನ್ನು ನೆನೆದರೆ ನನಗೆ ಈಗಲೂ ನಾಚಿಕೆಯಾಗುತ್ತದೆ; ನನ್ನ ಮೇಲೆ ತುಂಬ ಸಿಟ್ಟು ಬರುತ್ತದೆ; ಎಂತಹ ವ್ಯವಹಾರಜ್ಞಾನ ಲವಲೇಶವೂ ಇಲ್ಲದ ಅವಿವೇಖಿಯಾಗಿದ್ದೆ ಎನ್ನಿಸುತ್ತದೆ; ಎಷ್ಟು ನೊಂದುಕೊಂಡುವೊ ಆ ತಂಗಿಯರಿಬ್ಬರ ಕೋಮಲ ಹೃದಯಗಳು - ತಾಯಿಯ ಸಾವಿನ ದುಃಖದಲ್ಲಿ ಬೆಂದು, ಅಣ್ಣನ ಸಹಾನುಭೂತಿಗೂ ಅನುಕಂಪಕ್ಕೂ ಅಕ್ಕರೆಗೂ ಹಾತೊರೆಯುತ್ತಿದ್ದ ಆ ಸುಮಕೋಮಲ ಹೃದಯಗಳು -  ಎಂದು ಹೃದಯ ಮಮ್ಮಲ ಮರುಗುವಂತಾಗುತ್ತದೆ." ಅತ್ತ ಮನೆಯೊಳಗೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಇವರು ಆಸಕ್ತರೊಂದಿಗೆ, ಭಗವದ್ಗೀತೆ, ಉಪನಿಷತ್ತು, ಅಂದಿನ ರಾಜಕೀಯ ಸ್ಥಿತಿಗತಿ, ಗಾಂಧಿ ವಿಷಯ, ಕಾವ್ಯಗಳ ಸ್ವಾರಸ್ಯ ಕುರಿತು ಮಾತನಾಡುತ್ತಾ ಕಾಲಕಳೆಯುತ್ತಿದ್ದರಂತೆ, ಉಪ್ಪರಿಗೆಯಲ್ಲಿ!

ಸಾಮಾನ್ಯವಾಗಿ ತಾಯಿಯ ತಿಥಿಕರ್ಮದಲ್ಲಿ ಮಗ ಮಾಡಬಹುದಾದ ಕಾರ್ಯಗಳನ್ನು ಮಾಡಲೂ ಮನಸ್ಸು ಮಾಡಲಿಲ್ಲ. ಆದರೆ ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದು, ದಹನ ನಡೆದ ಸ್ಥಳಕ್ಕೆ ಹೋಗಿ ಹಾಲು ಎರೆಯುತ್ತಾರೆ. ಆದರೆ ಪುರೋಹಿತ ಹೇಳಿಕೊಡುತ್ತಿದ್ದ ಮಾತುಗಳನ್ನು ಹೇಳದೆ, ಬಾಯಿಗೆ ಬರುತ್ತಿದ್ದ ಉಪನಿಷತ್ತಿನ ಮಂತ್ರಗಳನ್ನು, ಭಗವದ್ಗೀತೆಯ ಅಮೃತತ್ವ ಪ್ರತಿಪಾದನೆಯ ಮಹಾಶ್ಲೋಕಗಳನ್ನು ಹೇಳಿ ತಾಯಿಗೆ ನಮಿಸುತ್ತಾರೆ. ಅಂದು ರಾತ್ರಿ, ಈ ಹಿಂದೆಯೇ ಸತ್ತವರ ಆತ್ಮಗಳ ಪಂಕ್ತಿಗೆ, ಈಗ ಸತ್ತಿರುವವರ ಆತ್ಮವನ್ನು ಸೇರಿಸುವ 'ಕೊಲೆಗಿಡುವುದು' ಎಂಬ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಮಲೆನಾಡಿನವರ ಪದ್ಧತಿಯಂತೆ, ಎಡೆಯಲ್ಲಿ ಹೆಂಡ ಮಾಂಸ ಮೊದಲಾದ ವಸ್ತುಗಳನ್ನೆಲ್ಲಾ ಇಟ್ಟು, ಹಿರಿಯ ಮಗನೆ ಮೊದಲ್ಗೊಂಡು ಎಲ್ಲರೂ ಪೂಜಿಸಿ ಅಡ್ಡ ಬೀಳುವುದೇ ಆ ಕಾರ್ಯಕ್ರಮ. ಅದರ ನಂತರವೇ ಬಂದವರಿಗೆ ಊಟ. ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದ ಕವಿ, ಎಡೆಯಲ್ಲಿಟ್ಟಿದ್ದ ವಸ್ತುಗಳನ್ನೆಲ್ಲ ತೆಗೆಸಿ ಭಗವದ್ಗೀತೆ ಮತ್ತು ವಿವೇಕಾನಂದರದ್ದೋ ಅಥವಾ ರಾಮಕೃಷ್ಣರದ್ದೋ ಚಿತ್ರಪಟವನ್ನಿಟ್ಟು ಹೂವು ಮಡಿಸಿ, ಮಾತೆಗೆ ಶಾಂತಿ ಕೋರಿ ನಮಿಸುತ್ತಾರೆ! 'ತನ್ನ ತಾಯಿ ಪ್ರೇತವಾಗಿ ಬರುತ್ತಾರೆ' ಎಂಬ ಭಾವನೆಯೇ ಅವಗರಿಗೆ ಅಸಹ್ಯಕರವಾಗಿತ್ತು. 'ಉತ್ತಮ ಲೋಕಗಳಲ್ಲಿ ಅವರ ಪಯಣ ಮಂಗಳಕರವಾಗಿ, ಅವರು ಜಗನ್ಮಾತೆಯ ಮಡಿಲನ್ನು ಸೇರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದೊಂದೇ ತಾನು ಮಾಡಬಹುದಾದ್ದುದು' ಎಂಬ ನಂಬುಗೆ ಅವರದ್ದಾಗಿತ್ತು. ಮೇಲಿನ ಕ್ರಿಯೆಗಳಲ್ಲಿ ಒಂದು ವಿಷಯ ಮಾತ್ರ ಕವಿಯ ಭಾವಕೋಶವನ್ನು ಭಾವಮಯವನ್ನಾಗಿ ಮಾಡಿಬಿಡುತ್ತದೆ. ಸುಡುಗಾಡಿನಲ್ಲಿ, ಏಳೆಂಟು ವರ್ಷಗಳ ಹಿಂದೆ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆದ ಜಾಗದಲ್ಲಿಯೇ ತಾಯಿಯ ಅಂತ್ಯಸಂಸ್ಕಾರ ನಡೆದಿದ್ದ ಸಂಗತಿ ತಿಳಿದ ಕವಿ ಅಂತರ್ಮುಖಿಯಾಗುತ್ತಾರೆ.

ತಾಯಿಯ ಮರಣದಿಂದ ತೊಳಲಾಡಿದ ಕವಿಯ ಮೇಲಿನ ಮನಸ್ಥಿತಿಯೆಲ್ಲಾ, ಆಮೇಲೆ, ಅಂದರೆ ಸುಮಾರು ನಲವತ್ತು ವರ್ಷಗಳ ನಂತರದಲ್ಲಿ ದಾಖಲಾಗಿರುವುದು. ಆದರೆ ಆಗಿನ ಅವರ ಮನಸ್ಥಿತಿಯನ್ನು ಅರಿಯಲು ಸಹಾಯಕವಾಗುವಂತಹ ಒಂದು ಅಪ್ರಕಟಿತ ಕವಿತೆಯಿದೆ. ೨೧.೮.೧೯೨೪ರಂದು, ಅಂದರೆ ತಾಯಿಯ ಮರಣದ ಸುಮಾರು ಇಪ್ಪತ್ತು ದಿನಗಳ ನಂತರದಲ್ಲಿ ರಚಿತವಾಗಿರುವ 'ಅನಾಥ ಬಾಲ' ಶಿರ್ಷಿಕೆಯ ಈ ಕವಿತೆಗೆ, 'ನನ್ನ ಜನನಿಯ ಮರಣವಾರ‍್ತೆಯನ್ನು ಕೇಳಿ ಬರೆದುದು' ಎಂಬ ಟಿಪ್ಪಣಿಯೂ ಹಸ್ತಪ್ರತಿಯಲ್ಲಿದೆ. ೧ ೨ ೪ ೫ನೇ ಸಾಲುಗಳಲ್ಲಿ ಐದೈದು ಮಾತ್ರೆಯ ಎರಡೆರಡು ಗಣಗಳು ಹಾಗೂ ೩ ಮತ್ತು ೬ನೆಯ ಸಾಲುಗಳಲ್ಲಿ ಐದೈದು ಮಾತ್ರೆಯ ಮೂರು ಗಣಗಳು ಮತ್ತು ಕೊನೆಯಲ್ಲಿ ಒಂದು ಗುರು ಬರುವ, ಆದಿಪ್ರಾಸದಿಂದ ಕೂಡಿರುವ 'ಕುಸುಮ ಷಟ್ಪದಿ'ಯ ಲಯದಲ್ಲಿರುವ ಕವನ ಇದಾಗಿದೆ. ಹತ್ತು ಪದ್ಯಗಳಿವೆ. ತನ್ನ ತಾಯಿ ಸತ್ತಿಲ್ಲ; ಬೀಸುವ ಗಾಳಿಯಾಗಿ ಗಗನದಲ್ಲಿ, ಗಿರಿಗಳಲ್ಲಿ, ಕಾಡಿನಲ್ಲಿ, ಜೇನ್ದನಿಯಲ್ಲಿ, ಸಂಪಗೆಯ ಮರದಲ್ಲಿ... ಹೀಗೆ ಎಲ್ಲೆಲ್ಲಿಯೂ ಇದ್ದುಕೊಂಡು, ಹೆದರಬೇಡ ನಾನಿದ್ದೇನೆ ಎಂಬ ಅಭಯವನ್ನು ಮಗನಿಗೆ ಕೊಡುತ್ತಾ ಮುದ್ದಾಡುತ್ತಿದ್ದಾಳೆ ಎಂಬ ಭಾವವಿದೆ, ಕವಿತೆಯಲ್ಲಿ. ಕೆಲವು ಪದ್ಯಗಳನ್ನಿಲ್ಲಿ ಗಮನಿಸಬಹುದಾಗಿದೆ.
ಎಲೆ ಜನನಿ, ಎಲ್ಲಿರುವೆ?
ಬಿಳಿದಾದ ಮಲ್ಲಿಗೆಯು
ಪೊಳೆಯುತಿಹ ಮರದಲ್ಲಿ ನಗೆ ಬೀರುತ
ಅಲರ ರೂಪವ ತಾಳಿ
ತಳಿರ ಸೊಬಗನು ಹೊಂದಿ
ಇಳೆಯ ನಾಕದೊಳು ನೀಂ ನೆಲೆಸಿರ್ಪೆಯಾ?
ಗಗನದೊಳು ತೇಲುತಿಹ
ಮುಗಿಲಾಗಿ ನೀ ಬಂದು
ಮಗುವಾದ ನನ್ನ ನೀಂ ಮುದ್ದಿಸುವೆಯಾ?
ಹಗರಣವ ಮಾಡದಾಂ
ಹಗಲೆಲ್ಲ ಅಳುತಿರಲು
ಮಗುವೆ ಬಾ ಎಂದು ನೀ ಚುಂಬಿಸುವೆಯಾ?
ಸೊಂಪಾಗಿ ಬೆಳೆದಿರುವ
ಸಂಪಗೆಯ ಮರದಲ್ಲಿ
ಇಂಪಾಗಿ ಗಾನವಂ ನೀ ಹಾಡುವೆ
ತಂಪಾದ ಸಂಜೆಯೊಳು
ಸೊಂಪಾದ ತೋಟದೊಳು
ಇಂಪಾದ ಗಾನದಿಂ ನೀ ಕರೆಯುವೆ!
ಉನ್ನತಾದ್ರಿಯನೇರಿ
ಮುನ್ನಿನಾ ದಿನಗಳನು
ಚಿನ್ತಿಸುತ, ಜನನಿಯೇ, ಕುಳಿತಿರಲು ನಾ
'ಇನ್ನೇಕೆ ಅಳುತಿರುವೆ
ನಿನ್ನಲ್ಲಿ ನಾನಿಹೆನು!'
ಎನ್ನುತೈತಂದು ನೀಂ ಸಂತೈಸುವೆ!
ಮುಗಿಲ ಛೇದಿಸಿ ಬರುವ
ಗಗನ ಕಿರಣದಿ ಬಂದು
'ಮಗುವೆ, ನಾನಿಹೆನು ನೀ ಬೆದರಬೇಡೈ!
ನಗುತ ನೀ ನಲಿದಾಡು
ಖಗಪತಿ ಗಮನನಿಹನು,
ಮಗುವೆ.' ಎಂದೆನುತ ನೀ ಮುದ್ದಾಡುವೆ!
ಮೇಲಿನ ಕವಿತೆ ರಚನೆಯಾಗಿರುವ ಮಾರನೆಯ ದಿನವೇ (೨೨.೮.೧೯೨೪) ರಚಿತವಾಗಿರುವ ಇನ್ನೊಂದು ಕವಿತೆಗೆ ಶೀರ್ಷಿಕೆಯಿಲ್ಲ; ಪ್ರಕಟವೂ ಆಗಿಲ್ಲ. ಅಲ್ಲಿರುವ ಎರಡು ಪದ್ಯಗಳೂ ತಾಯಿಯನ್ನು ಸಂಬೋಧಿಸಿಯೆ ಪ್ರಾರಂಭವಾಗುತ್ತವೆ. ಆ ಸಂಬೋಧನೆ ಹೆತ್ತ ತಾಯಿಗೋ ಅಥವಾ ಜಗಜ್ಜನನಿಗೋ ಎಂಬುದು ಸ್ಪಷ್ಟವಾಗುವುದಿಲ್ಲ. ಹೆತ್ತಮ್ಮ ಮತ್ತು ಜಗದಮ್ಮರಿಗೆ ಅಭೇದ ಕಲ್ಪಿಸಿದ ಅದ್ವೈತ ಪರಿಣಾಮದ್ದು ಎಂದು ಭಾವಿಸಿದರೆ ಕವಿತೆಯ ಮಹತ್ವ ಹೆಚ್ಚಾಗುತ್ತದೆ.

ತಾಯಿ ನಿಧನರಾಗಿ ಏಳು ವರ್ಷಗಳಾದ ಮೇಲೆ, ಆಶ್ರಮದಲ್ಲಿ ನೆಲೆನಿಂತು ಐದುವರ್ಷಗಳಾದ ಮೇಲೆ, ಕೆಲಸಕ್ಕೆ ಸೇರಿ ಎರಡು ವರ್ಷಗಳಾದ ಮೇಲೆ... ಅಂದರೆ ೧೯೩೧ರಲ್ಲಿ ಒಂದು ದಿನ (೩೦.೧೦.೧೯೩೧) ಸಂಜೆ ಕುಕ್ಕರಹಳ್ಳಿ ಕೆರೆಯ ಅಂಚಿನ ಹಸುರಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದಾಗ, ತಂದೆ ತಾಯಿ ತಂಗಿಯರ ನೆನಪು ಒತ್ತರಿಸಿ ಬರುತ್ತದೆ. ಹಿಂದಿನದನ್ನೆಲ್ಲ ನೆನೆದು ಕಣ್ಣೀರು ಕರೆಯುತ್ತಾರೆ. ಕಣ್ಣೀರಿನ ಜೊತೆ ಅವರೆಲ್ಲರಿಗೂ ಕಾವ್ಯಾಂಜಲಿಯನ್ನೂ ಸಲ್ಲಿಸಿಬಿಡುತ್ತಾರೆ. ಆಗ ರಚಿತವಾದ ಕವಿತೆಯೇ ಜನನಿಗೆ ಎಂಬುದು.
ಜನನಿಗೆ
ಜನನಿಯೇ, ವರುಷವೇಳರ ಹಿಂದೆ ನೀನಗಲಿ
ಹೋದೆ; ಕಣ್ಮರೆಯಾದೆ. ನಾನಂದು ಸುರಿಯದಾ
ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು
ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.
ನೀನು ಮಡಿದಂದು ನಾನದ್ವೈತ ದರ್ಶನದ
ಮದಿರೆಯಲಿ ಮುಳುಗಿದ್ದೆ: ನನ್ನ ಕಿರುಬಾಳಿನಲಿ
ನನ್ನದಲ್ಲದ ಹಿರಿಯ ಶಕ್ತಿಯೊಂದಿರುತ್ತಿತ್ತು.
ವಿಶ್ವವೆಲ್ಲವು ಮಾಯೆ; ಜೀವರೆಂಬುವರೆಲ್ಲ
ಸುಳ್ಳಿನಲಿ ಕೆತ್ತಿರುವ ಗುಳ್ಳೆಗಳು; ಶಿವ ನಾನು;
ಎಂಬ ತತ್ತ್ವದ ಮತ್ತಿನಲಿ ನೀನು, ಯಾರೆದೆಯ
ಹಾಲುಂಡು ಬದುಕಿದೆನೊ ಆ ನೀನು, ಮಡಿದುದನು
ಸುಳ್ಳೆಂದು ಬಗೆದೆ. ನನ್ನ ತಂಗಿಯರು ಬಂದು
ನನ್ನೆದುರು ನಿಂತು ಕಂಬನಿಗರೆದು ಗೋಳಿಡಲು
ಅವರನಾಲಿಂಗಿಸುತೆ ಸಂತಸವಿಡುವುದನುಳಿದು
ಗದರಿದೆನು, ಕರುಣೆಯಿಲ್ಲದ ಕಠಿಣವಾಣಿಯಲಿ.
ಶಿವ ಶಿವಾ, ಅವರಿರ್ವರೂ ನನ್ನ ಬೆನ್ನುಗಡೆ
ಬಂದು ನನ್ನಯ ಕಣ್ಣ ಮುಂಗಡೆಯೆ ತೆರಳಿದರು!
ನಿಡುಸುಯ್ದು ಪ್ರಾರ್ಥಿಸಿದೆ; ಕಂಬನಿಗೆರೆಯಲಿಲ್ಲ.
ಆದರಿಂದೆ ನಾಂ ಜಗದ ರಂಗದಲಿ ಏಕಾಂಗಿ:
ತಂದೆ ತಾಯಿಗಳಿಲ್ಲ; ಅಣ್ಣನಿರಲೇ ಇಲ್ಲ;
ಇದ್ದ ತಂಗಿಯರಿಲ್ಲ: ಸಾಧು ಸಂಗದೊಳಿಂದು
ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!
ಇಂದು ಈ ಬೈಗಿನಲಿ, ಈ ಬಯಲು ಹಸುರಿನಲಿ,
ಹುಟ್ಟಿದೂರಿಗೆ ದೂರದೀ ರಾಜಧಾನಿಯಲಿ,
ನೀರವದ ನಿರ್ಜನದ ಗಂಭೀರ ಶಾಂತಿಯಲಿ,
ಚಿತ್ತದಲಿ ಮರಳಿ ಮೂಡಿದ ಕಳೆದ ಕಾಲದಾ
ಚಿತ್ರಭಿತ್ತಿಯಲಿ ಹೊಳೆಹೊಳೆದು ಮೈದೋರುತಿದೆ
ಮತ್ತೆ ನಿನ್ನಾ ಮೂರ್ತಿ! ಮೊಗದಲ್ಲಿ ಮುಗುಳುನಗೆ;
ಕಣ್ಗಳಲಿ ಚಿರಶಾಂತಿ; ಕೈಯೆತ್ತಿ ಹರಸುತಿಹೆ
ನಿನ್ನ ಮುದ್ದಿನ ಶಿಶುವ; ಹರಸು ಓ ಹರಸಮ್ಮಾ,
ನೀನೆನಗೆ ಶೂಭದ ಆಶೀರ್ವಾದ ಮೂರ್ತಿಯೌ:
ನಿನ್ನಡಿಗೆ ಇದೊ ಮಣಿದು ಬೀಳುವೆನು! ನನ್ನೊಳಿಹ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿ ಬಿಂದುಗಳಾಗಿ ಸಂಗಮಿಸಲಿ!

1 comment:

Pejathaya said...

ನಿನ್ನಡಿಗೆ ಇದೊ ಮಣಿದು ಬೀಳುವೆನು! ನನ್ನೊಳಿಹ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿ ಬಿಂದುಗಳಾಗಿ ಸಂಗಮಿಸಲಿ!

ಇದು ಪಶ್ಚಾತ್ತಾಪದ ಅಳಲನ್ನು ವ್ಯಕ್ತ ಪಡಿಸುವ ಕವನ ಅಲ್ಲವೇ?

ಹುಟ್ಟು ಸಾವು ನಿಘೂಡ.