Showing posts with label ಕವಿಶೈಲ. Show all posts
Showing posts with label ಕವಿಶೈಲ. Show all posts

Monday, January 23, 2012

ವಿಶ್ವಕಾವ್ಯದಷ್ಪಷ್ಟ ಪೂರ್ಣತೆಯಲ್ಲಿ, ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆ

ಭೂತದ ಸಿಲೇಟು ಎಂದು ಕರೆಯಲ್ಪಡುತ್ತಿದ್ದ ದೊಡ್ಡ ಚಪ್ಪಟೆಯಾಕಾರದ ವಿಶಾಲ ಕಲ್ಲು, ಗುಡ್ಡದ ಓರೆಯಲ್ಲಿ ನೆಲಕ್ಕೆ ಹಾಸಿದಂತೆ ಸಣ್ಣ ಸಣ್ಣ ಚಪ್ಪಡಿಗಳು ಇದ್ದು ಕಲ್ಲುಗಳೇ ದಿಬ್ಬಣವಾಗಿ ಸಾಗುತ್ತಿರುವಂತೆ ಕಾಣುವ ದಿಬ್ಬಣದಕಲ್ಲು, ಹಾಗೂ ಆಳೆತ್ತರದ ಮನುಷ್ಯಾಕೃತಿ ಕಲ್ಲು, ಇವೆಲ್ಲಾ ಕವಿಶೈಲದ ಮೇಲೆ ನಿಮಗೆ ಕಾಣುವ ನೈಸರ್ಗಿಕ ದೃಶ್ಯಗಳು. ಈಗ ಇಲ್ಲದ ಬೂರುಗದ ಮರ ಕುವೆಂಪು ಸಾಹಿತ್ಯದಲ್ಲಿ ಹೊಸಹುಟ್ಟು ಪಡೆದುಕೊಂಡಿದೆ! ಇವುಗಳಲ್ಲಿ ಭೂತದ ಸಿಲೇಟು ಮತ್ತು ದಿಬ್ಬಣದ ಕಲ್ಲು ಎಂಬುವು ಹಳ್ಳಿಯ ಪ್ರತಿಭೆ ಗುರುತಿಸಿದ ಹೆಸರುಗಳಾಗಿದ್ದರೆ, ಕವಿಶೈಲ ಮತ್ತು ಶಿಲಾತಪಸ್ವಿ (ಆಳೆತ್ತರದ ಮನುಷ್ಯಾಕೃತಿ ಕಲ್ಲು) ಎಂಬುವು ಕವಿ ಕುವೆಂಪು ಆರೋಪಿಸಿದ ಹೆಸರುಗಳು. ಇಂದಿಗೂ ಅಲ್ಲಿಗೆ ಬರುವ ಪ್ರವಾಸಿಗರು, ಮಲೆನಾಡಿನ ಚಿತ್ರಗಳೂ ಕೃತಿಯನ್ನು ಓದಿದವರಾಗಿದ್ದರೆ, ಮೇಲಿನ ಎಲ್ಲಾ ಸ್ಥಳಗನ್ನು ಗುರುತಿಸಿ ಮಾತನಾಡುವುದನ್ನು ನಾನು ನೋಡಿದ್ದೇನೆ. ಕವಿಶೈಲದ ಮೇಲೆ ಗದ್ಯ ಪದ್ಯಗಳೆರಡರಲ್ಲೂ ಕುವೆಂಪು ಪ್ರತಿಭೆ ಲಾಸ್ಯವಾಡಿಬಿಟ್ಟಿದೆ. ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಕವಿಗೆ 'ಶಿಲಾತಪಸ್ವಿ'ಯಾಗಿ ಕಂಡಿದೆ. ಶಿಲಾತಪಸ್ವಿ ಎಂಬ ಕವಿತೆ ೩-೩-೧೯೩೧ರ ರಚನೆಯಾಗಿದೆ. 28-2-1931 ರಿಂದ 7-3-1931ರವರೆಗೆ ಕವಿಯ ದಿನಚರಿ ದಾಖಲಾಗಿಲ್ಲ. ೨೮-೨-೧೯೩೧ರ ದಿನಚರಿಯ ಪ್ರಕಾರ ಕುಪ್ಪಳಿ ಮನೆ ಜಮೀನು ವಿಷಯದಲ್ಲಿ ಕಾನೂನು ಪ್ರಕಾರ ವ್ಯವಹರಿಸುವುದಕ್ಕೆ ಸಹೋದರ ವೆಂಕಟಯ್ಯನಿಗೆ ಪವರ್ ಆಫ್ ಅಟಾರ್ನಿ ಕಳುಹಿಸಿದ್ದನ್ನು ದಾಖಲಾಗಿದೆ. ೮-೩-೧೯೩೧ರ ದಿನಚರಿಯ ಪ್ರಕಾರ ಮೈಸೂರಿನಲ್ಲಿಯೇ ಕವಿ ಇದ್ದರು. ಬಹುಶಃ ಶಿಲಾತಪಸ್ವಿ ಕವಿತೆ ರಚನೆಯಾದಾಗ ಕವಿಶೈಲದ ಆಳೆತ್ತರದ ಮನುಷ್ಯಾಕೃತಿಯ ಕಲ್ಲು - ಶಿಲಾತಪಸ್ವಿ - ಕವಿಯ ಎದುರಿಗೆ ಇರಲಿಲ್ಲ ಅನ್ನಿಸುತ್ತದೆ. ಕುಪ್ಪಳಿಯಲ್ಲಿದ್ದ ದಿನಗಳಲ್ಲಿ ಬೆಳೆಗು ಬೈಗು ಕವಿಶೈಲದಲ್ಲಿ ಕಾಣುತ್ತಿದ್ದ ಆ ಕಲ್ಲು ಕವಿಯ ಮನೋಭಿತ್ತಿಯ ಮೇಲೆ ಏನೇನು ಪ್ರಭಾವ ಬೀರಿತ್ತೋ ಏನೋ? ಒಂದೇ ಬೀಸಿನಲ್ಲಿ ಸುಮಾರು ೧೫೫ ಸಾಲುಗಳ ದೀರ್ಘ ಕವಿತೆ ರಚಿತವಾಗಿದೆ. ಈ ಸೃಷ್ಟಿಯ ಉಗಮ ಮತ್ತು ವಿಕಾಸವನ್ನು ವಿಜ್ಞಾನ ಮತ್ತು ಉಪನಿಷತ್ತುಗಳ ಹಿನ್ನೆಲೆಯಿಂದ ವ್ಯಾಖ್ಯಾನಿಸುತ್ತದೆ–ಒಂದು ಕಥನ ರೂಪದಲ್ಲಿ.
ವ್ಯೋಮ ಮಂಡಿತ ಸಹ್ಯಶೈಲಾಗ್ರದಡವಿಯಲಿ
ಸಂಚರಿಸುತಿರೆ, ಸಂಜೆ ಪಶ್ಚಿಮ ದಿಗಂತದಲಿ
ಕೆನ್ನಗೆಯ ಬೀರಿತ್ತು. ರವಿ ಮುಳುಗುತಿರ‍್ದಂ;
ಎಂದು ಪ್ರಾರಂಭವಾಗುವ ಕವಿತೆಯ ಮೊದಲ ಭಾಗದಲ್ಲಿ ಸೂರ್ಯಾಸ್ತದ ವರ್ಣವೈಭವವನ್ನು ಕಾಣಬಹುದು. ಆಗ, ಧನ್ಯಂ ನಾನೆಂದು ತೇಲುತಿರೆ ಸೌಂದರ್ಯಪೂರದಲಿ ಕವಿಗೆ ಒಂದು ದನಿ ಕೇಳಿಸಿತ್ತದೆ. ಹಾಗೆಯೆ ಮೊರಡಾದ ಮನುಜನಾಕಾರದಲ್ಲಿ ಶಿಲೆಯೊಂದು ಕಾಣಿಸುತ್ತದೆ. ಆ ಶಿಲೆ ’ಓ ಕಬ್ಬಿಗನೆ’ ಎಂದು ಕವಿಯನ್ನು ಕರೆದು ಹೀಗೆ ಹೇಳುತ್ತದೆ.
ತನ್ನಂ
ಕಲ್ಲು ಕರೆಯಿತು ಎಂದು ಬೆಚ್ಚದಿರು. ಮುನ್ನಂ,
ನಾವಿರ‍್ವರೊಂದೆ ಬಸಿರಿಂ ಬಂದು ಲೀಲೆಯಲಿ
ಮುಳುಗಿದೆವು ಸಂಸಾರ ಮಾಯಾಗ್ನಿ ಜ್ವಾಲೆಯಲಿ.
ನೀನು ಮರೆತಿರಬಹುದು, ಚೇತನದ ಸುಖದೊಳಿಹೆ;
ನಾನು ಮರೆತಿಲ್ಲದನು, ಜಡತನದ ಸೆರೆಯೊಳೊಹೆ!
ಆ ಕಲ್ಲು ಹಾಗೂ ಕವಿ ಇಬ್ಬರೂ ಸಹ್ಯಾದ್ರಿಯ ಬಸಿರಿಂದುದಯಿಸಿದವರೆ! ಆ ಕಲ್ಲು ಕಿತ್ತಡಿಯ (ಸನ್ಯಾಸಿ, ತಪಸ್ವಿ) ನುಡಿಯನ್ನು ಕೇಳಿ ಕವಿ ಆಶ್ಚರ್ಯದಲ್ಲಿ ನಿಲ್ಲುತ್ತಾರೆ. ಹರಳುಗಂಬನಿಯುರುಳಿಸುತ್ತ ಜಗತ್ತಿನ ಸೃಷ್ಟಿಪೂರ್ವ ಸ್ಥಿತಿಯ ಬಗ್ಗೆ, ಮಹಾಸ್ಫೋಟದ ನಂತರದ ಸೃಷ್ಟಿಯ ಬಗ್ಗೆ ಬಂಡೆ ಮಾತನಾಡುತ್ತದೆ. ಹೊನಲು ಹರಿವಂದದಲಿ ಆಕಾಶವನ್ನು ತುಂಬಿದ ಆ ವಾಣಿಗೆ ಗಿರಿವನಶ್ರೇಣಿ, ಮರಗಿಡಗಳು ಎಲ್ಲವೂ ಅನುಕಂಪವನ್ನು ತೋರಿ ನಿಂತು ಆಲಿಸುತ್ತಿರುವಂತೆ ಕವಿಗೆ ಭಾಸವಾಗುತ್ತದೆ.
ಕಾಲವಲ್ಲಿರಲಿಲ್ಲ; ದೇಶವಲ್ಲಿರಲಿಲ್ಲ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ.
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ.
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರಹೊಮ್ಮಿದುದು. ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯನೇ ತಬ್ಬಿ.
ಅಂದು ಮೊತ್ತಮೊದಲಬಾರಿಗೆ ಉಂಟಾದ ಮಹಾಸ್ಫೋಟದಿಂದ ಚಿಮ್ಮಿದ ಲಯಾಗ್ನಿಯ ಘನೀಕೃತ ರೂಪವೇ ಕಲ್ಲು! ಹಾಗೆ ಸೃಷ್ಟಿಯಾದ ಕಲ್ಲು
ಆ ವಿಶ್ವಕಾವ್ಯದಷ್ಪಷ್ಟ ಪೂರ್ಣತೆಯಲ್ಲಿ,
ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆಯಿಂ, ನಿಂದಲ್ಲಿ
ನಿಲದೆ ಸಂಚರಿಸಿದೆವು ಆ ಅಗ್ನಿಜದಲ್ಲಿ:
ನೋಡಿನ್ನುಮಿಹುದಾ ಕಲೆ ನನ್ನ ಎದೆಯಲ್ಲಿ!
......................................................
ಆ ಸನಾತನ ಶೈಲತಪಸಿಯೆದೆಯಾಳದಲಿ
ಯುಗಯುಗಗಳಿನ್ನುಮವಿತಿಹವಲ್ಲಿ.
ಕವಿಗೆ ದಿಗ್ಭ್ರಾಂತಿಯಾಗುತ್ತದೆ. ಮುಂದೆ ನಡೆದುದ್ದು ಒಂದು ರೀತಿಯಲ್ಲಿ ಉಳಿವಿಗಾಗಿ ಹೋರಾಟ!
ಹರಿದು ಭೋರಿಡುವ ಆ ಅಗ್ನಿಪ್ರವಾಹಂ
ದಿಕ್ಕುದಿಕ್ಕಿಗೆ ಸಿಡಿದೊಡೆದು, ದೇಶದೇಹಂ
ಗ್ರಹಭೂಮಿ ಶಶಿಸೂರ್ಯ ತಾರಾಖಚಿತಮಾಯ್ತು!
ನನಗೆ ಈ ಭೂಗರ್ಭವೇ ಸೆರೆಯ ಮನೆಯಾಯ್ತು!
ಕಲ್ಪಕಲ್ಪಗಳಿಂದ ನಾನಿಲ್ಲಿ ಸೆರೆಯಾಗಿ
ನರಳಿದೆನು ಕತ್ತಲಲಿ. ಜ್ಯೋತಿದರ್ಶನಕಾಗಿ
ಮೊರೆಯಿಟ್ಟುಕೂಗುತಿರೆ, ಕಲ್ಲೆನಗೆ ಮೈಯಾಗಿ
ಕಡೆಗಿಲ್ಲಿ ನೆಲೆಸಿದೆನು.
ಮಹಾಸ್ಪೋಟದ ನಂತರ ಅಗಣಿತ ಆಕಾಶಕಾಯಗಳು ನಿರಂತರ ಸುತ್ತುತ್ತಲ್ಲೇ, ಕೆಲವು ಶಕ್ತಿಕೇಂದ್ರಗಳಾಗಿ, ಹಲವು ಶಕ್ತಿಕೇಂದ್ರಗಳ ಸುತ್ತ ಸುತ್ತುತ್ತಲೇ ತಮ್ಮ ತಮ್ಮ ಅಸ್ತಿತ್ವವನ್ನು ಸ್ಥಾಪಿಸತೊಡಗಿದ್ದನ್ನು ಹೇಳುತ್ತದೆ. ಮಹಾಸ್ಫೋಟದ ನಂತರ ಉಳಿವಿಗಾಗಿ ನಡೆದ ಹೋರಾಟದಲ್ಲಿ ಕಲ್ಲನಗೆ ಮೈಯಾಗಿ ಕಡೆಗಿಲ್ಲಿ ನೆಲೆಸಿದನು ಎಂದ ಈ ಶಿಲೆಗೆ ದೊರೆತ ಜಾಗ ಈ ಭೂಗರ್ಭ! ಕವಿತೆಯ ಈ ಭಾಗ ಕುವೆಂಪು ಅವರ ವಿಜ್ಞಾನನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಹೀಗಿರುವಾಗಲೇ ವಿಕಾಸವಾದ ಶುರುವಾಗಿಬಿಡುತ್ತದೆ! ಆ ಶಿಲೆಯ ಸೋದರರೆಲ್ಲ ಮರಗಿಡಗಳ ರೂಪದಲ್ಲಿ, ಪ್ರಾಣಿರೂಪದಲ್ಲಿ, ನರರಾಕೃತಿಯಲ್ಲಿ ಮೂಡುತ್ತಾರೆ. ಶಿಲೆಗೆ ಜೊತೆಯಾಗುತ್ತಾರೆ.
ನನ್ನ ಸೋದರರೆಲ್ಲ ಮರಗಿಡಗಳಂದದಲಿ
ಮೂಡಿದರು; ಉಸಿರೆಳೆದು ಬೆಳೆಬೆಳೆದು ಚಂದಲಿ
ನಲಿದಾಡಿದರು; ಕೆಲರು ಸ್ವಪ್ನವನು ಸೀಳಿ
ತಿರುಗಾಡಿದರು ಪ್ರಾಣಿರೂಪವನು ತಾಳಿ;
ಮೆಲ್ಲಮೆಲ್ಲನೆ ಕೆಲರು ನರರಾಕೃತಿಯ ತಳೆದು
ತಪ್ಪು ಹಾದಿಯೊಳೆನಿತೊ ಶತಮಾನಗಳ ಕಳೆದು
ನಾಗರಿಕರಾದರೈ ಬುದ್ಧಿ ಶಕ್ತಿಯ ತೋರಿ!
ಮನುಷ್ಯಾಕೃತಿಯ ಕಲ್ಲನ್ನು ನೋಡುತ್ತಲೇ ಕವಿಗೆ ಜಗತ್ಸೃಷ್ಟಿಯ ರಹಸ್ಯದ ಒಂದೆಳೆ, ನಾಗರಿಕತೆಯ ಉಗಮದ ಇನ್ನಂದೆಳೆ ಗೋಚರಿಸಿಬಿಡುತ್ತದೆ! ಆ ಆದಿಶಿಲೆಗೆ ಈ ಜೀವಚೈತನ್ಯದ ಭೂಮಿಯ ಬದುಕಿನ ಮುಂದೆ ವಿಶ್ವದ ಸರ್ವಸ್ವವೂ ಕೀಳಾಗಿ, ದಾಸ್ಯವೆಂಬಂತೆ ಕಾಣುತ್ತದೆ. ಕ್ರಿಮಿಯೊಂದರಲ್ಲಿರುವ ಚೇತನದ ಕಣವಿಲ್ಲದ ಗ್ರಹ ತಾರೆಗಳು. ನೇಸರ್ಗೆ ಕ್ರಿಮಿಗಿರದ ದಾಸ್ಯಂ! ಸೂರ್ಯನದ್ದೂ ದಾಸ್ಯವೇ? ಆದ್ದರಿಂದ ಯುಗಜೀವಿಯಾದರೂ ತನ್ನಿಚ್ಛೆ ಏನೆಂಬುದರಿಹದಿಹ ದಾಸ್ಯ ಸಾವಿಗಿಂತ ಮಿಗಿಲು. ಎಲ್ಲ ಜಡತೆಯ ಬಯಕೆ ಚೈತನ್ಯದ ಸಿದ್ಧಿಯೇ ಆಗಿರುತ್ತದೆ. ಅದನ್ನು ಮೊದಲು ಅರಿತವನೇ ಮಾನವ! ಜಡತನಕೆ ಬೇಸತ್ತು ಜೀವಚೈತನ್ಯವನ್ನು ಆಶಿಸಿಸುತ್ತಿದ್ದ ಶಿಲೆ ಕವಿಯನ್ನು ಸಹೋದರ ಎಂದು ಸಂಬೋಧಿಸಿ ಮುಂದುವರೆಯುತ್ತದೆ.
ಶಿಲ್ಪಿಯೊರ್ವನು ಇಲ್ಲಿ ತಿರುಗುತ್ತೆ
ಬಂದು, ಮರುಗುತ್ತೆ ನನಗೆ, ಬಂಡೆಯನು ಕಡೆದು
ಬಿಡಿಸಿದನು. ನಾನು ಈ ರೂಪವನು ಪಡೆದು
ಕಲೆಯ ಸಾನ್ನಿಧ್ಯದಲಿ ಒಂದಿನಿತು ಕಣ್ದೆರೆದು,
ಪೂರ್ವಬಂಧದ ಶಿಲಾಕ್ಲೇಶವನು ನಸುತೊರೆದು
ಚೇತನದ ಛಾಯೆಯನು ಸವಿಯತೊಡಗಿದೆನಂದು.
(ಕಲ್ಗೆ ಕಣ್ಣಿತ್ತ ಆ ಕಲೆಯೆನಗತುಲ ಬಂಧು!)
ಕಲೆಯ ಕಣ್ಣಿರದ ನರರಿಗೆ ನಾನು ಬರಿ ಕಲ್ಲು;
ಕವಿಯನುಳಿದಾರಿಗೂ ಕೇಳದೆನ್ನೀ ಸೊಲ್ಲು!
ಕಲೆಗಾರನಿಂದ ಸ್ವಲ್ಪಮಟ್ಟಿನ ಕಲಾರೂಪವನ್ನು ಪಡೆದು ಕಲ್ಲಿಗೆ ಸಂತಸ. ಬಹುಶಃ ಆ ಕಲೆಗಾರ ಪ್ರಕೃತಿಯೇ ಇರಬೇಕು! (ಶಿಲಾತಪಸ್ವಿ ಬಂಡೆಯ ಹತ್ತಿರ ತಿಮ್ಮಪ್ಪ ಅನ್ನುವ ಹೆಸರು ಮಸುಕು ಮಸುಕಾಗಿ ಕಾಣುತ್ತದೆ. ಕುವೆಂಪು ಅವರ ಎಳೆವೆಯ ಗೆಳೆಯ. ಮಲೆನಾಡಿನ ಚಿತ್ರಗಳು ಓದಿದವರಿಗೆ ಗೊತ್ತಲ್ಲ. - ಓ.ಎಲ್.ಎನ್.)ಕಲ್ಲು ಈಗ ಚಂದ್ರ-ಸೂರ್ಯೋದಯ ಚಂದ್ರ-ಸೂರ್ಯಾಸ್ತ ಹಕ್ಕಿಯ ದನಿ, ದುಂಬಿಯ ಝೇಂಕಾರ ಬೀಸುವ ತಂಗಾಳಿ ಎಲ್ಲವನ್ನು ಅನುಭವಿಸಬಲ್ಲದು, ಕಲೆಯ ಕಾರಣದಿಂದ! ಅಷ್ಟಕ್ಕೂ ತೃಪ್ತವಾಗದ ಆ ಶಿಲಾತಪಸ್ವಿಗೂ ಒಂದು ಕನಸಿದೆ. ಆ ಕನಸಿನೀಡೇರಿಕೆಗೆ ಕವಿಯ ನರವನ್ನು ಅದು ಯಾಚಿಸುತ್ತದೆ, ಹೀಗೆ:
ಒಂದಿಲ್ಲ
ಒಂದು ದಿನ ಮುಂದೆ ನಿನ್ನಂತೆ ತಿರುಗಾಡುವೆನು;
ಕವಿಯಾಗಿ ಕನ್ನಡದ ಕವನಗಳ ಮಾಡುವೆನು;
ಮಾಡಿ, ನಿನ್ನಂತೆಯೇ ಜನಗಳಿಗೆ ಹಾಡುವೆನು!
ಅದಕಾಗಿ, ಓ ಕವಿಯೆ, ನಿನ್ನ ನೆರವನು ಬೇಡಿ
ಕರೆದಿನಿಂದೀಯೆಡೆಗೆ; ನೀನಿಲ್ಲಿಗೈತಂದು
ನಿತ್ಯವೂ ನನಗಾಗಿ ನಿನ್ನ ರಚನೆಯಾ ಹಾಡಿ
ಕಲೆಯ ಸಾನ್ನಿಧ್ಯದಿಂದೆನಗೆ ನರತನ ಬಂದು,
ನಿನ್ನಂತೆಯೇ ನಾನು ಚೇತನದ ಮುಕ್ತಿಯಂ!
ಪಡೆದು ನಲಿವಂದದಲಿ ನೀಡೆನಗೆ ಶಕ್ತಿಯಂ!
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ,
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ.
ಮನುಜರಿಗೆ ಸೊಗಮೀವ ಕರ‍್ತವ್ಯವೊಂದೆ
ನಿನ್ನೆದೆಂದರಿಯದಿರು; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವವು; ಏಕೆನೆ ಕವನದಿಂದೆ
ಕಲ್ಗಳೂ ವಾಲ್ಮೀಕಿಯಾಗಿಹವು ಹಿಂದೆ!
ಕವಿ ಮಾತಳಿಯಾಗುತ್ತಾನೆ! ಕೇವಲ ಕಲ್ಲನ್ನು ಕೈಯಿಂದ ಸ್ಪರ್ಶಿಸುತ್ತಾನೆ, ಸಾಂತ್ವಾನಗೈವುವನಂತೆ. ನಾಳೆಯಿಂದ ಕವಿಗೆ ನಿತ್ಯವೂ ಆ ಶಿಲಾತಪಸ್ವಿಯನ್ನು ಕಂಡು ಮಾತನಾಡುವ ಸಂಕಲ್ಪ ಮೂಡುತ್ತದೆ.
ಕಲ್ಲುಗೆಳೆಯ ಬಿಡದೆ
ಕಂಡು ಮಾತಾಡುವೆನು; ಕವನಗಳ ಹಾಡುವೆನು!
ಶಿಲೆಯು ಕಲೆಯಪ್ಪನ್ನೆವರಮಾನು ಹಾಡುವೆನು!
ಎಂದು ಕವಿತೆ ಮುಗಿಯುತ್ತದೆ. ಕಲೆಯ ಅಂತಿಮ ಗುರಿ ಜಡದಲ್ಲೂ ಚೇತನವನ್ನರಳುಸುವುದೇ ಅಲ್ಲವೇ? ಶ್ರೀ ಎಸ್.ವಿ.ಪಿ.ಯವರು ಈ ಕವಿತೆಯ ಬಗ್ಗೆ ಬರೆಯುತ್ತಾ ಹೀಗೆ ಹೇಳಿದ್ದಾರೆ: ಭೌತಶಾಸ್ತ್ರ, ಶಿಲಾಶಾಸ್ತ್ರ, ಜೀವಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ಸಂಪನ್ನನಾದ ವಿಜ್ಞಾನಿ ಅಗ್ನಿಶಿಲೆ, ವರುಣಶಿಲೆ, ರೂಪಾಂತರಶಿಲೆಯ ವಿಷಯವಾಗಿ ಗ್ರಹಿಸುವ ಭಾವಗಳನ್ನೆಲ್ಲಾ ಕವಿ ಕುವೆಂಪು ಇಲ್ಲಿ ಹೃದ್ಯವಾಗಿ ಅನುಭವಸತ್ಯದ ರಸದರ್ಶನ ವಿಧಾನದಿಂದ ಕಂಡು ತಿಳಿಸಿದ್ದಾರೆ. ಈಗ ಸುಮಾರು ಇನ್ನೂರು ಕೋಟಿ ವರುಷಗಳ ಹಿಂದೆ ಇದ್ದ ನಮ್ಮ ಭೂಮಂಡಲದ ಸ್ಥಿತಿಯಿಂದ ಮೊನ್ನೆ ನಿನ್ನೆ ಇವತ್ತಿನ ಭೂಮಂಡಲದ ಸ್ಥಿತಿಯವರೆಗಿನ ಒಂದು ಚರಿತ್ರೆ ಇಲ್ಲಿ ಕಾಣಬರುತ್ತದೆ. ನಿರ್ಜೀವಕಲ್ಪದಿಂದ ಮಾನವಜೀವಕಲ್ಪದವರೆಗೆ ಬರುವ ಶಿಲೆಯ ಚರಿತ್ರೆ ಇಲ್ಲಿದೆ. ಇದೊಂದು ’ಋಷಿಕವಿಯ ರಸತಪಸ್ಸಿನ ಬಲದಿಂದ ಅನುಭವವೇದ್ಯವಾದ ವಿಜ್ಞಾನಸತ್ಯದ ಬೃಹತ್ಕಥೆ.’ ‘ಎಲ್ಲ ಜಡತೆಯ ಬಯಕೆಯೂ ಚೈತನ್ಯ ಸಿದ್ಧಿಯೇ’ ಎನ್ನುವ ಈ ಚಿಂತನಸ್ಫುರಣೆ ಕ್ರಮೇಣ, ಇರುವುದೆಲ್ಲವೂ ಚೈತನ್ಯವೇ–ಎನ್ನುವ ‘ದರ್ಶನ’ವಾಗಿ ಅವರ ಸಾಹಿತ್ಯದಲ್ಲಿ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು.
ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಅಹಲ್ಯೆಯನ್ನು ಶಿಲಾತಪಸ್ವಿನಿ ಎಂದು ಕವಿ ಕರೆದಿದ್ದಾರೆ. ರಾಮನಾಗಮನದಿಂದ ಆಕೆಯ ಶಿಲಾತಮ ಕಠೋರ ತಪಸ್ಸು ಕೊನೆಗೊಳ್ಳುತ್ತದೆ.
ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್ ಬಿಳಿಯ ನಾರುಡೆಯ, ರ್ಪಿರುಳ ಸೋರ‍್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮ ಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!
ಕವಿಶೈಲದಲ್ಲಿ ಈಗ ಇಲ್ಲದ, ಆದರೆ ಹಿಂದೆ ಇದ್ದ ಬೂರುಗದ ಮರವೊಂದರ ಬಗ್ಗೆ ಕವಿಯ ಮಾತುಗಳನ್ನು ಶ್ರೀಮತಿ ತಾರಿಣಿಯವರು ದಾಖಲಿಸಿದ್ದಾರೆ. ತಂದೆಯೊಂದಿಗೆ ಕುಪ್ಪಳಿ ಪರಿಸರವನ್ನು ಸುತ್ತುವುದಕ್ಕೆ ಹೋದಾಗ ಕವಿ, ಶಿಲಾತಪಸ್ವಿ ಕವಿತೆಗೆ ಪ್ರಭಾವ ಬೀರಿದ ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಮತ್ತು ಬೂರುಗದ ಮರವಿದ್ದ ಜಾಗವನ್ನು ತೋರಿಸುತ್ತಾರೆ. ಒಂದು ದಿನ ಬೂರುಗದ ಮರದ ಬಳಿ ತಾನು ಕಂಡ ದೃಶ್ಯವನ್ನು ಈ ರೀತಿ ವಿವರಿಸಿದ್ದಾರೆ: ಒಮ್ಮೆ ಬೇಸಗೆ ರಜಕ್ಕೆ ಬಂದಾಗ ಇಲ್ಲಿ ಕಾಳ್ಗಿಚ್ಚಿನಿಂದ ಸುಟ್ಟ ನೆಲ ಕರಿಯಾಗಿತ್ತು. ಬೂರುಗದ ಮರದಿಂದ ಕಾಯೊಡೆದು ಹತ್ತಿ ರಾಶಿ ರಾಶಿ ಕರಿಯ ನೆಲದ ಮೇಲೆ ಬಿಳಿಯಾಗಿ ಅರಳೆ ಚಲ್ಲಿತ್ತು. ಅದನ್ನೇ ನೋಡುತ್ತಾ ಅಲ್ಲಿಯೇ ಕಲ್ಲಿನ ಮೇಲೆ ಕುಳಿತಿದ್ದೆ. ಸ್ವಲ್ಪ ಹಒತ್ತಿಗೆ ಒಂದು ಸಣ್ಣ ಹಕ್ಕಿ ಬಂದು ಆ ಅರಳೆಯನ್ನು ಬಾಯಲ್ಲಿ ಕಚ್ಚಿಕೊಂಡು ಗೂಡುಕಟ್ಟಲು ಹಾರಿಹೋಯಿತು. ಈ ಎಲ್ಲ ಅನುಭವಗಳೇ ಶ್ರೀರಾಮಾಯಣದರ್ಶನಂನಲ್ಲಿ ಬಂದಿರುವುದು.
ಹೀಗೆ ಹೇಳುತ್ತಲೇ ಕವಿಶೈಲದ ನೆತ್ತಿಯ ಹತ್ತಿರ ಬಂದಾಗ ಒಂದು ಕಡೆ ಕೈ ತೋರಿ ’ಇಲ್ಲಿಯೇ ಇದ್ದುದ್ದು ಒಂದು ದೊಡ್ಡ ಬೂರುಗದ ಮರ’ ಎಂದು, ರಾಮಾಯಣದರ್ಶನಂನಲ್ಲಿ ಬರು ಆ ಭಾಗವನ್ನು ಹೇಳುತ್ತಾರೆ. ಕಿಷ್ಕಿಂದಾ ಸಂಪುಟದ ಸಂಚಿಕೆ ೯ ಸುಗ್ರೀವಾಜ್ಞೆಯಲ್ಲಿ ಬಂದಿರುವ ಆ ಸಾಲುಗಳು ಹೀಗಿವೆ.
ಎಲೆಯುದುರಿ ಬರಲಾದ ಬೂರುಗದ ಮರದಲ್ಲಿ
ಬಲಿತ ಕಾಯ್ ಓಡೊಡೆದು, ಬಿಸಿಲ ಕಾಯ್ಪಿಗೆ ಸಿಡಿದು,
ಹೊಮ್ಮಿತ್ತು ಸೂಸಿತ್ತು ಚಿಮ್ಮಿತ್ತು ಚೆದುರಿತ್ತು
ಚೆಲ್ಲಿತ್ತರಳೆಬೆಳ್ಪು, ಮಸಿಯ ಚೆಲ್ಲಿರ್ದವೊಲ್
ಕಾಳ್ಗಿಚ್ಚು ಕರಿಕುವರಿಸಿದ ನೆಲದ ಕರ್ಪಿನೊಳ್
ಚಿತ್ರಿಸಿ ಶರನ್ನೀರದೋಲ್ಮೆಯಂ. ದಾಂಪತ್ಯ
ಸುಖದಿ ತೃಪ್ತಿಯನಾಂತು ಬಸಿರ ನೋಂಪಿಯ ಸಿರಿಗೆ
ಗೂಡುಕಟ್ಟುವ ಚಿಟ್ಟೆಹಕ್ಕಿ ತಾನಾ ಹತ್ತಿಯಂ
ಮೊಟ್ಟೆಮರಿಗಳೀಗೆ ಮೆತ್ತೆಯನೆಸಗೆ ಕೊಕ್ಕಿನೊಳ್
ಕೊಂಡೊಯ್ದುದಾಯ್ತು. ಮುಳ್ ಪೊದೆಯ ಬೆಳ್ಮಾರಲಂ
ಕಾಯ್ ತುಂಬಿ ಹಣ್ತನಕೆ ಹಾರೈಸುತಿರ್ದುದಾ
ಹೊಸಮಳೆ ಹರಕೆಗಾಗಿ. ಬೆನ್ನು ಹೊಟ್ಟೆಗೆ ಹತ್ತಿ,
ಬಿಸಿಲ ಬೇಗೆಗೆ ಬತ್ತಿ, ಬರದ ಗರ ಬಡಿದಿರ್ದ ಕಲ್
ಕೊರಕು ಕಂಕಾಲತೆಯ ಮಲೆಯ ತೊರೆ ತಾನಲ್ಲಲ್ಲಿ
ತುಂಡು ತುಂಡಾಗಿ ತಂಗಿದುದುಡುಗಿ ಚಲನೆಯಯಂ:
ಬೇಸಗೆಯ ಧಗೆಗೆ ಚಾದಗೆಯಾದುದಯ್ ವಿಪಿನಗಿರಿ
ಭೂಮಿ!

Sunday, January 15, 2012

ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!

ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು.

ಕವಿಶೈಲದ ಬಗೆಗಿನ ಕವಿಯ ಪ್ರೇಮ ಬೆರಗು, ಅಲ್ಲಿ ಧ್ಯಾನಸ್ಥರಾಗಿ ಕಾಲ ದೇಶಗಳನ್ನು ಮೀರಿ ವಿಹರಿಸುವ ಮನಸ್ಸು ಎಲ್ಲವನ್ನೂ ಕವಿಶೈಲದ ಸಾನೆಟ್ಟುಗಳಲ್ಲಿ ನೋಡಿದೆವು. ಆದರೆ ಈ ಸಾನೆಟ್ಟುಗಳ ರಚನೆಯಾಗುವ ಸರಿಸುಮಾರು ಒಂದು ವರ್ಷಕ್ಕೆ ಮೊದಲೇ (೧೭-೫-೧೯೩೩) ರಚಿತವಾಗಿರುವ ’ಕವಿಶೈಲದಲ್ಲಿ ಸಂಧ್ಯೆ’ ಎಂಬ ಕವಿತೆಯನ್ನು ಓದದೆ, ಕವಿಶೈಲದ ಬಗೆಗಿನ ಕುತೂಹಲ ತಣಿಯುವುದಿಲ್ಲ.
ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!
ಎಂದು ಕವಿತೆ ಆರಂಭವಾಗುತ್ತದೆ. ಕವಿಶೈಲದ ಶಿಖರವೇದಿಕೆಯಲ್ಲಿ ಕುಳಿತಾಗ ಕಣ್ಣೆದುರಿಗೆ ಬಿಚ್ಚಿಕೊಳ್ಳುವ ಗಗನಚುಂಬಿ ಸಹ್ಯಾದ್ರಿ ಶಿಖರತರಂಗಗಳ ವಿಸ್ತಾರದ ಅನಂತತೆಯ ಅಕ್ಷರೂಪ! ಮುಂದುವರೆದು ಕವಿಶೈಲದಿಂದ ಕಾಣುವ ಸಂಜೆಯ ರವಿ, ರವಿಯ ರಶ್ಮಿಯಿಂದ ದಿಗಂತದಲ್ಲಿ ಮೂಡುವ ವಿವಿಧ ವಿನ್ಯಾಸಗಳು, ಕವಿಶೈಲದಲ್ಲಿ ಒಬ್ಬನೇ ಇರುವ ಕವಿಗೆ ದೊರೆತ ಅನುಭವವನ್ನು ಕವನ ಕಟ್ಟಿಕೊಡುತ್ತದೆ.
ಪಶ್ಚಿಮ ಗಿರಿಶಿರದಲಿ ಸಂದ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ!
ಕವನ ರಚಿತವಾದ ಸುಮಾರು ಎರಡು ವರ್ಷಗಳ ನಂತರ, ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಒಂದು ವಾರಗಳ ಕಾಲ ಕವಿ ಕುವೆಂಪುವನ್ನು ರೂಪಿಸಿದ ಮಲೆಯನಾಡನ್ನು ಪ್ರೀತಿಯಿಂದ ಸುತ್ತಿದ ಬಿ.ಎಂ.ಶ್ರೀ.ಯವರಿಗೆ ಕವಿಶೈಲದಲ್ಲಿ, ಕವಿ ಕೊಟ್ಟಿರುವ ಸಂಜೆಯ ವರ್ಣವಿಹಾರದ ಪ್ರತ್ಯಕ್ಷದರ್ಶನವಾಗುತ್ತದೆ. ಕಣ್ಣಮುಂದೆ ಕಾಣುತ್ತಿರುವುದನ್ನು ಅರಿಯಲು ಕವಿವರ್ಣನೆಯ ಅಗತ್ಯವೇ ಇರಲಿಲ್ಲ ಅನ್ನಿಸುವಷ್ಟು ಸಾದೃಶವಾಗಿತ್ತಂತೆ!
ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!
’ಕುಪ್ಪಳಿ ಮನೆಯ ಇದಿರಿಗೇ ಗೋಡೆಯಂತೆ ಎದ್ದಂತಿದ್ದ ಗುಡ್ಡವನ್ನು ಮುತ್ತಿದ್ದ, ಮುದ್ದೆ ಮುದ್ದೆ ಹಸುರನ್ನೆ ಮೆತ್ತಿದಂತಿದ್ದ, ಸಾರ್ವಕಾಲಿಕ ಶ್ಯಾಮಲ ಅರಣ್ಯಶ್ರೇಣಿ’ ಅಂದೂ ಕಾಣುತ್ತದೆ.
ತೆರೆತೆರೆ ತೆರೆಯೆದ್ದರಣ್ಯ ಶ್ರೇಣಿ
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ
ಅಸಂಖ್ಯ ವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ
ವೀಚಿ ವೀಚಿ!
ಸೃಷ್ಟಿಯ ಅನಂತತೆಯಲ್ಲಿ ಮನುಷ್ಯ ಒಂದು ಅಣು ಮಾತ್ರ. ಇನ್ನು ಆ ಮಹತ್ತಿನಡಿಯಲ್ಲಿ ಸರ್ವವೂ ಮಹತ್ತಾಗಿರಬೇಕಾದ್ದೇ!
ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು - ಶರೀರ ಸೀಮಾ
ವಿಹೀನಧಾಮ!
ಮಿತ್ರರಿಗೆ ಇಲ್ಲಿ ಮಾತೇ ಬೇಡ ಎಂದು ಹೇಳಿದ, ಇಡೀ ಸಹ್ಯಾದ್ರಿ ಗಿರಿಶ್ರೇಣಿಯನ್ನು ಧ್ಯಾನಸ್ಥಯೋಗಿಯಂತೆ ಪರಿಭಾವಿಸಿದ ಕವಿಪ್ರತಿಭೆ, ಅನಂತತೆಯ ಮೌನದ ನಡುವಿನ ಝೇಂಕಾರವನ್ನು ಆಲಿಸುತ್ತದೆ. ಅದಕ್ಕಾಗಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳುವುದು ಹೀಗೆ.
ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಳಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ನಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ!
ಕವಿಶೈಲಕ್ಕೆ ಅಂಟಿಕೊಂಡಂತೆಯೇ, ಅದರ ಪೂರ್ವಕ್ಕೆ ಆಕಾಶಗಾಮಿಯಾಗಿ ನಿಂತಿರುವ ಶಿಖರವೇ ಸಂಜೆಗಿರಿ. ಅಲ್ಲಿಂದಲೂ ಸಹ್ಯಾದ್ರಿಯ ಶಿಖರತರಂಗಗಳಲ್ಲಿ ಕಳೆದು ಹೋಗುವ ಸೂರ್ಯಾಸ್ತವನ್ನು ಸವಿಯಬಹುದಾಗಿದೆ. ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಹುಟ್ಟಿದ ಒಂದು ಸಾನೆಟ್ಟು ’ಸಂಜೆಗಿರಯಲಿ ಸಂಜೆ’ ಎಂಬುದು ೧೨-೫-೧೯೩೫ರಂದು ರಚಿತವಾಗಿದೆ.
ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ?
ಸ್ವರ್ಗದಲಿ ಕರುಬುತಿಹನಿಂದ್ರನೆನ್ನಂ ನೋಡಿ,
ಧೇನು ಸುರತರು ಸುರಾಂಗನೆಯರಂ ರೋಡಾಡಿ!
ಈ ನಿಸರ್ಗಶ್ರೀಗೆ ಮೇಣಾವ ಸಗ್ಗಸಿರಿ
ವೆಗ್ಗಳಂ? ಪಂಕ್ತಿ ಪಂಕ್ತಿಗಳಾಗಿ ಕಣ್ದಿಟ್ಟಿ
ಸೋಲ್ವಂತೆ ಪರ್ಣಾರ್ಣವ ಮಹಾ ತರಂಗತತಿ
ಪ್ರಸರಿಸಿವೆ. ಗಿರಿಶಿವನೆದೆಯ ಮೇಲೆ ಶ್ಯಾಮಸತಿ
ಕಾನನ ಮಹಾಕಾಳಿ ತಾನಿಲ್ಲಿ ನಿತ್ಯನಟಿ!
ಸುಯ್ದಪಂ ಶಿಶಿರ ಶೀತಲ ಸುಖ ಸಮೀರಣಂ
ಮರ‍್ಮರ ಧ್ವನಿಗೈದು. ಸಾಂದ್ರ ಕಾಂತಾರದಲಿ
ಲಕ್ಷಮಧುಕರ ಪಕ್ಷಿರವದಿ ನಾದದ ಸಿಂಧು
ಮಸಗುತಿದೆ. ಸಂಜೆರವಿ, ಅದೊ, ವರುಣ ದಿಗ್ವಾರಣಂ
ತಾನೆನಲೆಸೆವ ಶೈಲ ಮಸ್ತಕ ಸುದೂರದಲಿ
ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!
ಇಲ್ಲಿಂದ ಕಾಣುವ ಸಹ್ಯಾದ್ರಿಗಿರಿಯೇ ಶಿವ; ಆತನ ಎದೆಯ ಮೇಲೆ ನರ್ತಿಸುವ ನೆರಳುಬೆಳಕೆಂಬ ಮಹಾಕಾಳಿ ಇಲ್ಲಿ ’ನಿತ್ಯನಟಿ’ಯಾಗಿದ್ದಾಳೆ. ತಾನು ದರ್ಶಿಸುತ್ತಿರುವ ಇಂತಹ ಮಹೋನ್ನತ ಸನ್ನಿವೇಶಗಳಿಂದ ಪ್ರಕೃತಿಯನ್ನು ಪೀರ‍್ವ ಕವಿಯ ಮನಸ್ಸು ತೃಪ್ತಗೊಳ್ಳುತ್ತದೆ. ಅದು ಅಂತಿಂತ ತೃಪ್ತಿಯಲ್ಲ. ಅಮರಾವತಿಯ ಇಂದ್ರನೇ ಈ ಕವಿಯ ಸೌಭಾಗ್ಯವನ್ನು ಕಂಡು ಕರುಬಬೇಕು. ಇಂತಹ ಮನೋಭಾವ ಕವಿಗೆ ಆಗ ಬಂದು ಈಗ ಹೋಗುವಂತಹುದಲ್ಲ; ಕವಿಯ ಸ್ಥಾಯೀ ಭಾವ. ಹಲವಾರು ಕವಿತೆಗಳಲ್ಲಿ ಅದನ್ನು ಕಾಣಬಹುದು. ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ದಶರಥನ ಪಾತ್ರ ಸನ್ನಿವೇಶವೊಂದರಲ್ಲಿ ಅನುಭವಿಸುವ ಮನಸ್ಥಿತಿಯನ್ನು ಗಮನಿಸಬಹುದು.

ಮೂವರು ಹೆಂಡತಿಯರಿದ್ದರೂ ದಶರಥನಿಗೆ ಮಕ್ಕಳಾಗಿಲ್ಲ. ’ಸಿರಿಯನಿತುಮಿರ್ದೊಡಂ’ ಅವರ ತಲೆಗಳಲ್ಲಿ ಬೆಳ್ಳಿಕೂದಲು ಮೂಡಿದ್ದರೂ ದಶರಥನಿಗೆ ಸಂತಾನದ ಪ್ರತೀಕ್ಷೆ ಕಾಡುತ್ತಿರುತ್ತದೆ. ಆದರೆ ಅದು ಕ್ರಿಯಾಶೀಲವಾಗಿ ಮುಂದಡಿಯಿಡಲು ಪ್ರಕೃತಿಯ ಲೀಲಾನಾಟಕವೊಂದು ಕಾರಣವಾಗಬೇಕಿರುತ್ತದೆ. ಆ ಸಂದರ್ಭ ಹೀಗಿದೆ.
ತಿರುಗುತಿರಲರಮನೆಯ ಸಿರಿದೋಂಟದೋಳ್:
ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು
ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್ ನಟ್ಟು,
ಕಾಲ್‌ನಟ್ಟು ನಿಂದನು ಮರಂಬಟ್ಟು.
ಈ ದೃಶ್ಯ ಸೃಷ್ಟಿಯ ಮಹದ್‌ವ್ಯೂಹದಲ್ಲಿ ನಿತ್ಯ ನಡೆಯುವ ಸಾಮಾನ್ಯ ಸಂಗತಿ. ಆದರೆ ಅಂದು ಅದನ್ನು ನೋಡಿದ ದಶರಥನಿಗೆ ಅದೊಂದು ಋತದಿಚ್ಛೆ!
ಮಕ್ಕಳಂ ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ
ಬಡತನವನಾಡಿ ಮೂದಲಿಸಿತೆನೆ, ಕರುಬಿ ಕುದಿದನ್
ಕೋಸಲೇಶ್ವರನಾ ವಿಹಂಗಮ ಸುಖಕೆ ಕಾತರಿಸಿ.
ದೇವತೆಗಳಾಶಿತಮೊ? ಋತದಿಚ್ಛೆಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ!
ಹಕ್ಕಿಗಳ ಸಿರಿತನ ಚಕ್ರವರ್ತಿಯ ಸಿರಿತನವನ್ನು ಮೂದಲಿಸಿದ್ದರಿಂದಲೇ ದೇವ ಶಕ್ತಿಗಳು ಸಂಚು ಹೂಡಿದ್ದರೋ ಎಂಬಂತೆ ಆ ಮುದುಕನ ಎದೆಯಲ್ಲಿ ಮಕ್ಕಳ ಆಸೆ ಮಿಂಚುತ್ತದೆ. ದಶರಥ ಪುತ್ರಕಾಮೇಷ್ಠಿಯನ್ನು ಮಾಡಲು ಉದ್ದೇಶಿಸುತ್ತಾನೆ. ಆಗ ಬರುವ ಜಾಬಾಲಿ ಋಷಿ ಆಡುವ ಮಾತುಗಳು, ಕವಿ ಎಷ್ಟೇ ಆದ್ಯಾತ್ಮಿಯಾದರೂ ಜನಮುಖಿಯೂ ಸಮಾಜಮುಖಿಯೂ ಆಗಿರಲು ಸಾಧ್ಯ ಎಂಬುದನ್ನು ತೋರಿಸುತ್ತದೆ.

ಸಂಪ್ರದಾಯ ಎಂದು ದಿಗ್ವಿಜಯ ಹಯಮೇಧ ಮೊದಲಾದುವಗಳಿಂದ ಒದಗುವ ಹಿಂಸೆ ಕ್ರೌರ್ಯವನ್ನು ತಪ್ಪಿಸಿ, ಅವುಗಳಿಲ್ಲದ ಪ್ರೇಮವನ್ನೇ ವ್ರತವಾಗಿ ಸ್ವೀಕರಿಸಿ ಪೂಜಿಸಿದರೆ ಮಾತ್ರ ಜಗತ್ತನ್ನಾಳುತ್ತಿರುವ ಋತ (ಸತ್ಯ) ಮೆಚ್ಚುತ್ತದೆ.
ನೆಲದಲ್ಲಿ, ಭಾನಲ್ಲಿ,
ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರಾಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.
ಶ್ರೀರಾಮಚಂದ್ರನಂತಹ ಪ್ರೇಮಮೂರ್ತಿಯುದಯಿಸಬೇಕಾದರೆ ಸೃಷ್ಟಿಗಿರಬೇಕಾದ ಉದಾತ್ತೆಯೂ ಅನನ್ಯವಾಗಿರಬೇಕಾಗುತ್ತದೆ. ಮಾನವಕೇಂದ್ರಿತ ಆಲೋಚನಾಕ್ರಮದಿಂದ ಹೊರಬಿದ್ದು ಎಲ್ಲರೊಳಗೊಂದಾಗಿ, ಎಲ್ಲವುದರೊಳಗೊಂದಾಗಿ ಯೋಚಿಸಿದಾಗ ಮೇಲಿನ ಮಾತುಗಳಲ್ಲಿ ಅಡಗಿರುವ ಸತ್ಯದ ದರ್ಶನವಾಗುತ್ತದೆ. ಆ ದರ್ಶನ ಸ್ವಯಂವೇದ್ಯವೇ ಹೊರತು ಬಾಹ್ಯಪ್ರದರ್ಶನಕ್ಕಲ್ಲ ಎಂಬುದೂ ಮನುಷ್ಯನ ಅಲೋಚನಾ ಮತ್ತು ಅಭಿವ್ಯಕ್ತಿ ಕ್ರಮದ ಇತಿ ಮಿತಿಗಳನ್ನು ತೆರೆದಿಡುತ್ತದೆ.

ಈ ಸೃಷ್ಟಿಯ ಜಡಚೇತನಗಳಲ್ಲಿ ತುಂಬಿರುವ ಚೇತನವೇ ಪ್ರೇಮ. ಆದ್ದರಿಂದ ಹಿಂಸೆಯಿಂದ ಪ್ರೇಮಮೂರ್ತಿಗಾಳದ ಸಂತಾನ ಉದಯಿಸುವುದಿಲ್ಲ ಎಂದು ಹೇಳುತ್ತಾ-
ವಿಶ್ವಶಕ್ತಿಸ್ವರೂಪಿಯನಗ್ನಿಯಂ ಭಜಿಸು ನೀಂ
ಸಾತ್ವಿಕ ವಿಧಾನದಿಂ. ಪ್ರಜೆಗಳಂ ಬಡವರಂ
ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ
’ದೊರೆಗೊಳ್ಳಿತಕ್ಕೆ!’ ಎಂದಾ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ
ಕೃಪಣ ವೀಧಿಯಂ ಪಿಂಡಿ ತಂದೀವುದೈ ನಿನಗೆ
ನೆಲದರಿಕೆಯೊಳ್ಮಕ್ಕಳಂ.
ಎನ್ನುತ್ತಾರೆ. ಪ್ರಕೃತಿಯೊಳಗೊಂದಾಗಿ ಸಾಗಿದ ಸಾಧಕನ ಸಾಧನೆಗೆ ಕೊನೆಯೆಂಬುದೇ ಇಲ್ಲ. ಅದು ನಿತ್ಯಚಲನಶೀಲವಾದುದು ಮತ್ತು 'ನಿತ್ಯಋತ'ಮುಖಿಯಾದುದು.

Monday, January 09, 2012

ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!

"ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!"

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಈ ಸಾನೆಟ್ ರಚನೆಯಾಗುವುದಕ್ಕೆ ಎರಡು ದಿನಗಳ ಮುಂಚಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ: ನಾನು ಚಂದ್ರು (ದೇವಂಗಿ ಚಂದ್ರಶೇಖರ) ಕವಿಶೈಲಕ್ಕೆ ಏರಿದೆವು. ಹಿಂದಿನ ದಿನದ ಮಳೆಯಿಂದ ಕಾಡು ಮಲೆ ನೆಲಗಳು ಮಿಂದು ಮಡಿಯಾಗಿದ್ದುವು. ಇಂದು ಬೆಳಿಗ್ಗೆ ದೊರಕಿದ ದೃಶ್ಯವು ನಮ್ಮ ಪುಣ್ಯಕ್ಕೆ ಎಣೆಯಿಲ್ಲದಂಥದ್ದು. ಕಣಿವೆಗಳನ್ನು ತುಂಬಿದ್ದ ಮಂಜಿನ ಪರದೆಯ ಮೇಲೇಳತೊಡಗಿ, ಸಲಸಲಕ್ಕೂ ಎದೆ ಹಾರಿಸುವಂತಹ ದೃಶ್ಯಗಳು ಗೋಚರಿಸಿದುವು. ಅದನ್ನು ಎಂದಾದರೂ ಕಲಾಸುಂದರಿಯ ಕೃಪೆಯಿಂದ ಸಾಹಿತ್ಯರೀತ್ಯಾ ಹೊರಹೊಮ್ಮಿಸುತ್ತೇನೆ. - ಆ ದಿನ ಕವಿಗೆ ದೊರಕಿದ ದರ್ಶನ ಎರಡು ದಿನಗಳ ನಂತರ ಸಾನೆಟ್ ರೂಪತಾಳಿದ್ದು ಕೆಳಕಂಡಂತೆ.

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ
ಸಹ್ಯಾದ್ರಿ ಕಾನನಗಳುತ್ತಮಾಂಗದಿ ಸೃಷ್ಟಿ
ದೃಶ್ಯ ವೈಕುಂಠವನೆ ನೆಯ್ದಿದೆ! ಕಲಾದೃಷ್ಟಿ
ದರ್ಶನವನುದ್ದೀಪನಂಗೈಯೆ ಹೃದಯದಲಿ,
ಪ್ರಾಣಪಕ್ಷಿ ಸುವರ್ಣಪರ್ಣಂಗಳನು ಬಿಚ್ಚಿ
ಹಾರಿಹುದಸೀಮತೆಗೆ!..............
ಕವಿ ತನಗಾದ ಅನುಭವವನ್ನು ಸಹೃದಯನಿಗೆ ಹೇಳುತ್ತಿರುವಂತೆ ಆರಂಭವಾಗುವ ಸಾನೆಟ್ಟು ಮುಂದುವರೆದು ತಾನು ಕಂಡಿದ್ದೇನು ಎಂಬುದನ್ನು ಕಣ್ಣಿಗೆ ಕಟ್ಟಿಸಿಬಿಡುತ್ತದೆ.
.................. ಕಣಿವೆ ಕಣಿವೆಗಳಲ್ಲಿ
ಮಂಜಿನ ಮಹಾಮಾಯೆ ನೊರೆಯ ರಾಸಿಯ ಚೆಲ್ಲಿ
ವಾರಿಧಿಯ ವಿರಚಿಸಿದೆ, ಕಟುನಿಮ್ನತೆಯ ಮುಚ್ಚಿ.
ನೋಡು, ಆ ಶೀಖರವೆದ್ದಿದೆ ದ್ವೀಪವೆಂಬಂತೆ
ಕ್ಷೀರಫೇನಧಿ ಮಧ್ಯೆ ಶ್ಯಾಮಲ ಶಿರವನೆತ್ತಿ;
ಸ್ವರ್ಗಪ್ರದೇಶದೊಂದಂಶವೆಂಬಂದದಿಂ!
ವಾರಿಧಿಯ ವಿರಚಿಸಿರುವ ಮಂಜಿನ ಮಾಯೆ ನೊರೆ ಹಾಲಿನ ನೊರೆಯಂತೆ ಶೋಭಿಸಿದೆ. ಹಾಲ್ನೊರೆಯ ನಡುವೆ ತಲೆಯೆತ್ತಿರುವ ಹಸಿರು ಗಿರಿ ಕಡಲಿನ ನಡುವಿನ ದ್ವೀಪದಂತಾಗಿಬಿಟ್ಟಿದೆ. ಗದ್ಯದಲ್ಲಿ ಬಂದಿದ್ದ ಬಲ್ಗಡಲು, ಶ್ವೇತಫೇನಾವೃತ ಎಂಬ ಕಲ್ಪನೆಗಳು ಇಲ್ಲಿ ಬೇರೊಂದು ರೂಪದಲ್ಲಿ - ಕಟುನಿಮ್ನತೆ, ಕ್ಷೀರಫೇನ - ಬಂದಿವೆ.
ಪ್ರಿಯಬಂಧು, ಇದು ನಮ್ಮ ದೈನಂದಿನಿಳೆಯಂತೆ
ಕಾಣದೈ: ಸೌಂದರ್ಯ ದೇವತೆಗಳಿದೊ ಸುತ್ತಿ
ಬಿಗಿವರೆಮ್ಮನು ಬಾಹುಬಂಧನಾನಂದದಿಂ!
ಮೇಲಿನ ಸಾನೆಟ್ಟು ರಚನೆಯಾದ ಒಂದು ವಾರಕ್ಕೆ ಸರಿಯಾಗಿ (೨೩.೪.೧೯೩೪) ಕವಿಗೆ ಮತ್ತೆ ಕವಿಶೈಲ ಕಾಡತೊಡುಗುತ್ತದೆ. ಕವಿಗೆ ಆನಂದವನ್ನುಂಟುಮಾಡುವ ಕವಿತಾ ಮನೋಹರಿಯ ಪ್ರಥಮ ಪ್ರಣಯಿಯಾಗಿ ಕವಿಶೈಲ ಕವಿಗೆ ಕಾಣುತ್ತದೆ.

ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ
ಜೀವನಾನಂದ ನಿಧಿ ಕವಿತಾ ಮನೋಹರಿಯ
ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ
ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಕವಿಗೆ ದಿವ್ಯಾನಂದವನ್ನುಂಟು ಮಾಡಿದ ಕವಿಶೈಲವನ್ನು ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಇಡೀ ನಾಡನ್ನು, ನಾಡಿನ ಸುಂದರ ತಾಣಗಳನ್ನು ಕಂಡು ದಿವ್ಯತೆಯನ್ನನುಭವಿಸಿದ್ದರೂ ಈ ಶಿಖರಸುಂದರ ಕವಿಗೆ ಮಾಡಿರುವ ಮೋಡಿ ವರ್ಣಿಸಲಸದಳ. ಅದು ಕವಿಯನ್ನು ಚಳಿ ಮಳೆ ಬಿಸಿಲು ರಾತ್ರಿ ಹಗಲು ಎನ್ನದೆ ಕಾಡುವುದು ಹೀಗೆ.

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ! ನೀಲಗಿರಿ, ಬ್ರಹ್ಮಗಿರಿ,
ಗೇರುಸೊಪ್ಪೆಯ ಭೀಷ್ಮ ಜಲಪಾತ, ಆಗುಂಬೆ,
ಶೃಂಗೇರಿ, ಚಂದ್ರಾದ್ರಿಗಳನೆಲ್ಲಮಂ ಕಂಡೆ;
ವನರಾಜಿ ಜಲರಾಶಿ ಸೂರ್ಯಾಸ್ತಗಳನುಂಡೆ!
ಆದರೇಂ? ಮೀರಿರುವುದವುಗಳಂ ನಿನ್ನ ಸಿರಿ:
ಹೆತ್ತಮ್ಮಗಿಂ ಮತ್ತೊಳರೆ? ತಾಯಹಳೆ ರಂಭೆ?
ಒಂದೇ ದಿನದ ನಂತರ (೨೫.೪.೧೯೩೪) ಮೂಡಿರುವ ಸಾನೆಟ್ಟು, ಕವಿಶೈಲದಿಂದ ಕವಿ ಕಂಡ ಸೂರ್ಯಾಸ್ತವನ್ನು, ಅದರಿಂದ ಭಾವಮುಖನಾದ ಕವಿಯನ್ನು ಕಂಡರಿಸುತ್ತದೆ. ಸೂರ್ಯಾಸ್ತ ಕಾರಣದಿಂದ ಉಂಟಾಗುವ ವರ್ಣವೈವಿಧ್ಯವನ್ನೂ ಕವಿತೆ ಕಟ್ಟಿಕೊಡುತ್ತದೆ. ಹೆಚ್ಚಿನ ಮಾತೇ ಬೇಕಾಗಿಲ್ಲ; ಅಷ್ಟು ಸರಳವಾಗಿದೆ ಕವಿತೆ!
ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ. ಮುಳುಗುತಿದೆ ಸಂಜೆರವಿ
ಕುಂಕುಮದ ಚೆಂಡಿನೊಲು ದೂರದೂರದಲಿ. ಕವಿ
’ಭಾವಮುಖ’ನಾಗುತಿಹನಾವೇಶದಲಿ ತೇಲಿ!
ಬಳಿ ಕುಳಿತು ಭವ್ಯ ದೃಶ್ಯವ ನೋಡುತಿರುವೆನ್ನ
ಸೋದರನೆ, ಹೃದಯದಲಿ ಯಾವ ಭಾವಜ್ವಾಲೆ
ಪ್ರಜ್ವಲಿಸುತಿದೆ? ಮನದೊಳಾವ ಚಿಂತಾಗಾನ
ರೆಕ್ಕೆಗರಿಗೆದುರುತಿದೆ? ಅಥವ ನೋಟವೆ ನಿನ್ನ
ಸರ್ವಸ್ವವಾಗಿದೆಯೆ? ಇರಲಿ : ನಿನ್ನೆದೆ ಸೋಲೆ
ಸೃಷ್ಟಿಸೌಂದರ್ಯಕದೆ ಅಮೃತಗಂಗಾಸ್ನಾನ!
ಸೃಷ್ಟಿಯ ಚೆಲುವನ್ನು ನೋಡಿ ಒಂದರೆಕ್ಷಣ ನಾವು ಮನಸೋತರೂ ಸರಿಯೆ; ಅದು ಅಮೃತಗಂಗಾಸ್ನಾನಕ್ಕೆ ಸಮ. ಆ ’ಒಂದರೆಕ್ಷಣ’ ಎಲ್ಲರಿಗೂ ಲಭಿಸುವುದು ಮಾತ್ರ ದುರ್ಲಭ! ಸೂರ್ಯೋದಯ, ಸೂರ್ಯಾಸ್ತವನ್ನು ಕವಿಶೈಲದಲ್ಲಿ ಕಂಡ ಕವಿಗೆ ಮಳೆಗಾಲದ ದಿನದ ಸಂಜೆಯಲ್ಲಿ ಕವಿಶೈಲವನ್ನು ಕಾಣುವ ಭಾಗ್ಯವೂ ಬರುತ್ತದೆ. ಮಳೆಗಾಲದ ಸಂಜೆಯ ಕವಿಶೈಲದ ಬಗ್ಗೆ
ಮೇಘಗವಾಕ್ಷದೆಡೆಯ ಸಂಧ್ಯಾಗಗನವೇದಿಕೆಯಲ್ಲಿ ಲೋಕಮೋಹಕವಾದ ಅಸಂಖ್ಯ ವರ್ಣೋಪವರ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹಾಗೆಯೇ ನಮ್ಮ ಹೃದಯ ಮಂದಿರಗಳಲ್ಲಿ ಅಸಂಖ್ಯ ಭಾವೋಪಭಾವಗಳ ಮಹೋತ್ಸವವೂ ಪ್ರಾರಂಭವಾಯಿತು. ಆ ಸೌಂದರ್ಯ ಸಮುದ್ರದಲ್ಲಿ ನಾವೆಲ್ಲರೂ ತೆರೆತೆರೆಗಳಾಗಿ ಅಶರೀರಗಳಾಗಿ ವಿಶ್ವವಿಲೀನವಾದೆವು. ನನ್ನ ಕಣ್ಣಿವೆಗಳು ಅನೈಚ್ಛಿಕವಾಗಿಯೆ ಮುಗುಳಿದುವು.........ಕಣ್ದೆರೆದಾಗ ಕತ್ತಲೆಯಾಗಿತ್ತು ಎಂದು ಮಲೆನಾಡಿನ ಚಿತ್ರಗಳು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದರೆ, ಮಳೆ ಹೊಯ್ದ ಮಾರನೆಯ ಬೆಳಗಿನ ಚಿತ್ರಣವನ್ನು ೨೬.೪.೧೯೩೪ರ ಸಾನೆಟ್ಟಿನಲ್ಲಿ ಕಡೆದಿಟ್ಟಿದ್ದಾರೆ.

ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೋಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣುತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!
ಮನೆಯೇ ಬೇಡ; ಕವಿಶೈಲ ಸಾಕು ಎಂಬುದು ಸೋಜಿಗವಲ್ಲ ಎನ್ನುವ ಕವಿ, ಮತ್ತೆ ಮಾರನೆಯ ದಿನ (೨೭-೪-೧೯೩೪) ರಚಿತವಾದ ಸಾನೆಟ್ಟಿನಲ್ಲಿ ಹಿಂದಿನ ರಾತ್ರಿ ಕತ್ತಲಲ್ಲಿ, ನಕ್ಷತ್ರದ ಬೆಳಕಲ್ಲಿ ಕವಿಶೈಲದ ಮೇಲೆ ನಿಂತು ಅನುಭವಿಸಿದ್ದನ್ನು ಅಕ್ಷರಕ್ಕಿಳಿಸಿದ್ದಾರೆ. ಕತ್ತಲೂ ಕೂಡ ಕವಿಗೆ ಕಾವ್ಯವನ್ನು ತೋರಿಸಬಲ್ಲುದು ಎಂಬುದು ಈ ಸಾನೆಟ್ಟಿನ ಮಹಿಮೆ. ಕಾಣುವ ಕಣ್ಣು ಇದ್ದವನಿಗೆ ಕತ್ತಲೆಯೂ ಕಾಣಿಸುತ್ತದೆ; ಕಿವಿಯಿದ್ದವನಿಗೆ ಕತ್ತಲೆಯೂ ಕೇಳಿಸುತ್ತದೆ!
ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ
ತಲ್ಲೀನ. ಕೋಟಿಯುಡುಮಂಜರಿಗಳುಪಕಾಂತಿ
ಬೆಳಕಲ್ಲ: ಕಗ್ಗತ್ತಲೆಯ ಛಾಯೆ, ಬೆಳಕಿನ ಭ್ರಾಂತಿ!-
ಏಂ ಶಾಂತಿ, ವಿಶ್ರಾಂತಿ!- ಕವಿಶೈಲದಲಿ ರಾತ್ರಿ:
ತಿಮಿರಪಾನದಿ ಮೂರ್ಛೆಗೊಂಡಂತಿಹ ಜಗತ್ತು
ಮರಳಿ ಕಣ್ದೆರೆದು ಎಚ್ಚರುಹ ಚಿಹ್ನೆಯೆ ಇಲ್ಲ;
ಭೀಷಣ ಗಭೀರತೆಯೊಳದ್ದಿದೆ ಭುವನವೆಲ್ಲ;
ರಂಜಿಸಿದೆ ಲಯ ವಿಪ್ಲವದ ಭವ್ಯಸಂಪತ್ತು!
ದೇಹಭಾವವೆ ಹೋಗಿ ನನ್ನಹಂಕಾರಕ್ಕೆ
ಕತ್ತಲೆಯೆ ಕವಚವಾಗಿದೆ; ಇಂದ್ರಿಯಂಗಳಿಗೆ
ಕತ್ತಲೆಯೆ ವಿಷಯವಾಗಿದೆ; ನೋಡೆ ಕಂಗಳಿಗೆ
ಕತ್ತಲೆಯ ಕಾಣ್ಕೆ; ಕೇಳಲು ಕಿವಿಗಳೆರಡಕ್ಕೆ
ಕತ್ತಲೆಯೆ ಸದ್ದು!- ನನ್ನೆದೆಯೊಳನುಭವವಿದೇನು?
ಭಯವೋ? ಆವೇಶವೋ? ಅಹಂಕಾರಲಯವೋ ಏನು?
ಪ್ರಕೃತಿಯ ಅದಮ್ಯತೆ, ನಿಗೂಢತೆ, ಭವ್ಯತೆ, ರುದ್ರರಮಣೀಯತೆಯ ಎದುರಿಗೆ ಮಾತಿಲ್ಲವಾಗುವುದೆಂದರೆ ಇದೆ ಇರಬೇಕು. ದೇಹಭಾವವೇ ಹೋಗುವುದೆಂದರೆ ಸಮಾಧಿ ಸ್ಥಿತಿಯನ್ನು ತಲುಪಿದಂತೆಯೇ ಸರಿ. ರಾತ್ರಿಯ ನಿಗೂಢತೆ ಮನುಷ್ಯನಲ್ಲಿ ಹುಟ್ಟಿಸುವ ಕಲ್ಪನೆಗಳಿಗೆ ಎಂದಿಗೂ ಯಾವತ್ತಿಗೂ ಕೊನೆಯಿಲ್ಲ!

ಮೇಲಿನ ಐದು ಸಾನೆಟ್ಟುಗಳಿಗೆ ಕಲಶವಿಟ್ಟಂತೆ ಮಾರನೆಯ ದಿನವೇ (೨೮-೪-೧೯೩೪) ಆರನೆಯ ಸಾನೆಟ್ಟು ರಚನೆಯಾಗಿದೆ. ಕವಿಯಲ್ಲಿ ತಾನು ಕಂಡ ದರ್ಶನವೆಲ್ಲವನ್ನೂ ಸರ್ವರೂ ಕಾಣಬೇಕು ಎಂಬ ಭಾವ ಯಾವಾಗಲೂ ಸ್ಥಾಯಿ. ಸಹೃದಯನನ್ನೂ ತನ್ನೊಂದಿಗೆ ಕರೆದೊಯ್ಯಬೇಕೆಂಬ ಅಚಲ ತುಡಿತ. ಸಹೃದಯನಿಗೆ ಹೇಳುತ್ತಿರುವಂತೆ ಕವನ ಆರಂಭವಾಗುತ್ತದೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುಲತ ಧರಾತಲದಿ!-
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? - ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಸಹ್ಯಾದ್ರಿಯ ಗಿರಿಶ್ರೇಣಿ ಧ್ಯಾನಸ್ಥ ಯೋಗಿಯಂತೆ ಕವಿಗೆ ಕಂಡಿದೆ. ಪರಿಭಾವಿಸಿದಷ್ಟೂ ಅರ್ಥಗಳು ಈ ಹೋಲಿಕೆಗಿದೆ. ಪುಟ್ಟದಾದರೂ ಮಹತ್ತಾಗಿರುವ ಮತ್ತೊಂದು ಹೋಲಿಕೆ ’ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ ಸರಸವಾಡುತಿವೆ ಅದೊ ತರುಲತ ಧರಾತಲದಿ!’ ಎಂಬುದು. ಓಡುವ ಮೋಡಗಳ ನೆರಳು ದಟ್ಟಕಾಡು, ಗಿರಿಗಳನ್ನು ಹಾಯ್ದು ಹೋಗುವ ದೃಶ್ಯ ಶಿವ-ಪಾರ್ವತಿಯರ ಸರಸದಂತೆ! ಅಂತಹ ಭವ್ಯತೆಯನ್ನು ದರ್ಶಿಸಿ ದಿವ್ಯತೆಯನ್ನು ಅನುಭವಿಸಬೇಕಾದರೆ ಅಲ್ಲಿ ಮೌನವೇ ಮಹಾಮಂತ್ರವಾಗಬೇಕು. ಅದೇ ಕವಿಯ ಬಯಕೆ ಕೂಡ. ಪ್ರಕೃತಿ ದೇವಿಯ ದೇವಾಲಯದಲ್ಲಿ ಆನಂದವೇ ಪೂಜೆ. ಅಲ್ಲಿ ಗಂಟೆ, ಮಂಗಳಾರತಿ, ಜಾಗಟೆ, ಮಂತ್ರ ಬೇಕಾಗಿಲ್ಲ! ಮೌನವೊಂದಿದ್ದರೆ ಸಾಕು. ಕವಿಶೈಲವೊಂದೇ ಅಲ್ಲ; ಯಾವುದೇ ಪ್ರಕೃತಿತಾಣಗಳಿಗೆ ಹೋಗುವ ಆಸಕ್ತರಿಗೆ ಈ ಸರಳ ಸತ್ಯ ಅರಿವಾದರೆ ನಿಸರ್ಗ ಮತ್ತಷ್ಟು ಸುಂದರತರವಾಗಿರುತ್ತದೆ.
ಕರನಿರಾಕರಣೆಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭೂಗತರಾಗಿ ಚಳುವಳಿಯನ್ನು ನಿರ್ದೇಶಿಸುತ್ತಿದ್ದ ಡಾ. ಹರ್ಡೀಕರ ಕಾನಕಾನಹಳ್ಳಿ ಸರ್ದಾರ್ ವೆಂಕಟರಾಮಯ್ಯ ಅವರಿಗೆ ಕುಪ್ಪಳಿ ಮನೆಯ ಉಪ್ಪರಿಗೆ ಅಡಗುತಾಣವಾಗಿತ್ತು. ದೇಶಭಕ್ತರಿಂದ ಅವರು ಸರ್ದಾರ್ ಎಂದು ಕರೆಸಿಕೊಂಡಿದ್ದರು. ಅವರು ಆಗಾಗ ಕವಿಶೈಲಕ್ಕೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ದೇವನಾಗರಿ ಲಿಪಿಯಲ್ಲಿ ಕವಿತೆಯೊಂದನ್ನು ಕೆತ್ತಿದ್ದಾರೆ. ಅದರ ಸಾಲುಗಳೆರಡು ಹೀಗಿದೆ.
ನಾಮೀ ಒತ್ಥರ್ ಪರ್
ನಾಮ್ ಕವಿಯೋಂಕೆ ಅಮರ್
ಹೆಸರಯ ಪಡೆದ ಅರೆಯ ಮೇಲೆ
ಕವಿಯ ಹೆಸರು ಅಮರವಾಯ್ತು!

Thursday, April 07, 2011

ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ...

ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.
ಕಾರ್ಯಕ್ರಮಕ್ಕೂ ಮೊದಲು ತೇಜಸ್ವಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಒಂದು ನಿಮಿಷದ ಮೌನಾಚರಣೆಯಲ್ಲಿ ಅಲ್ಲಿದ್ದವರೆಲ್ಲಾ ಮುಳುಗಿದ್ದಾಗ, ಕಾಡಿನೊಳಗಿದ್ದ ಹಕ್ಕಿಗಳು ಮಾತ್ರ ಹಾಡುತ್ತಲೇ ಇದ್ದವು! ಜೀರುಂಡೆಗಳೂ ಸಹ!
ನಂತರ ನಡೆದ ಸಮಾರಂಭದಲ್ಲಿ ಜಯಂತ ಕಾಯ್ಕಿಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮಾತನಾಡುವಾಗ ನನ್ನ ತೇಜಸ್ವಿ ಎಂಬ ಶಿರ್ಷಿಕೆಯಲ್ಲಿ ಅಡಗಿರುವ ಆಪ್ತಭಾವವನ್ನು ಆತ್ಮೀಯವಾಗಿ ವ್ಯಾಖ್ಯಾನಿಸಿದರು. ರಾಜೇಶ್ವರಿಯವರೂ ಪ್ರತಿಕ್ರಿಯಿಸಿದರು.
ತೇಜಸ್ವಿ ಹುಡಕಾಟದಲ್ಲಿದ್ದಾಗ, ರಾಜೇಶ್ವರಿಯವರೂ ಹಡುಕಾಟದಲ್ಲಿರುತ್ತಿದ್ದರು. ತೇಜಸ್ವಿ ಕಂಡಿದ್ದನ್ನು ತಾವೂ ಕಾಣುತ್ತಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಆ ಕ್ಷಣದ ತೇಜಸ್ವಿಯವರನ್ನು ಕಾಣುತ್ತಿದ್ದರು. ತೇಜಸ್ವಿ ಹಕ್ಕಿಗಳ ಭಾವನೆಗಳನ್ನು ಗ್ರಹಿಸುತ್ತಿದ್ದರೆ, ರಾಜೇಶ್ವರಿಯವರು ಅದರ ಜೊತೆಗೆ ತೇಜಸ್ವಿಯವರ ಭಾವನೆಗಳನ್ನೂ ಗ್ರಹಿಸುತ್ತಿದ್ದರು. ಅವೆಲ್ಲವುಗಳನ್ನು ಪುಸ್ತಕದಲ್ಲಿ ತುಂಬಾ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರಗಳನ್ನೂ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಅವು ಆ ಕಾಲದ ಸಾಮಾಜಿಕ ಸಾಹಿತ್ಯಕ ವಿಚಾರಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಗಳು!

ತಾರಿಣಿಯವರ ಮಗಳು ಕಂಡ ಕುವೆಂಪು ಕೃತಿ ಕುವೆಂಪು ಅವರನ್ನು ನಮ್ಮ ಸಮೀಪಕ್ಕೇ ತಂದು ನಿಲ್ಲಿಸಿತ್ತು. ಈಗ ರಾಜೇಶ್ವರಿಯವರ ನನ್ನ ತೇಜಸ್ವಿ ತೇಜಸ್ವಿಯವರನ್ನು ಇನ್ನಷ್ಟು ಮತ್ತಷ್ಟು ಸಮೀಪಕ್ಕೆ ತಂದು ನಿಲ್ಲಿಸುತ್ತಿದೆ!
ಇಡೀ ಸಮಾರಂಭ ಆಪ್ತವಾಗಿ ನಡೆಯಿತು. ನಡುವೆ ಕುವೆಂಪು ಗೀತೆಗಳ ಗಾಯನ ಸುಮಧುರವಾಗಿತ್ತು. ಪ್ರೊ. ಚಿದಾನಂದಗೌಡ, ಶ್ರೀಮತಿ ತಾರಿಣಿ, ಕಡಿದಾಳು ಶಾಮಣ್ಣ, ಅವರ ಶ್ರೀಮತಿ ಶ್ರೀದೇವಿ, ಕಡಿದಾಳು ಪ್ರಕಾಶ್, ಶ್ರೀಕಂಠ ಕೂಡಿಗೆ, ರಾಜೇಂದ್ರ ಚೆನ್ನಿ, ಹಿ.ಚಿ.ಬೋರಲಿಂಗಯ್ಯ, ಕರೀಗೌಡ ಬೀಚನಹಳ್ಳಿ, ನರೇಂದ್ರ ದೇರ್ಲ, ಅಮರೇಶ ನುಗುಡೋಣಿ, ದಿವಾಕರ ಹೆಗಡೆ, ಜವಳಿ, ಈಶ್ವರಪ್ರಸಾದ್, ಜಾದವ್, ದೀಪಕ್, ಮಲ್ಲಕ್, ಕೃಷ್ಣಮೂರ್ತಿ ಹನೂರು, ನಾಗೇಶ, ಗಣಪತಿ, ರಮೇಶ್ ಇನ್ನೂ ಅನೇಕರಿಂದ (ಹೆಚ್ಚಿನವರ ಹೆಸರು ಗೊತ್ತಿಲ್ಲ) ಕೂಡಿದ್ದ ಸಭೆಯಲ್ಲಿ ತೇಜಸ್ವಿಯವರ ನೆನಪಿನೊಂದಿಗೆ ಹರಟೆ ನಗೆ ಸಂವಾದ ಎಲ್ಲವೂ ಸೇರಿಕೊಂಡಿತ್ತು. ಯುಗಾದಿ ಹಬ್ಬದ ಮಾರನೆಯ ದಿನವಾದರೂ ಸ್ಥಳೀಯರು ಸಾಕಷ್ಟು ಜನ ಭಾಗವಹಿಸಿದ್ದರು. ಕುಪ್ಪಳಿಯಲ್ಲಿದ್ದಷ್ಟೂ ಹೊತ್ತು, ಬೇರೊಂದು ಲೋಕದಲ್ಲಿದ್ದ ಅನುಭವ!
ಬೆಂಗಳೂರಿನಲ್ಲಿ ಅವಸರದಿಂದ, ವಾಹನಗಳ ಶಬ್ದ, ಹೊಗೆಗಳ ನಡುವೆ ನಡೆಯುತ್ತಿದ್ದ ಪುಸ್ತಕ ಬಿಡುಗಡೆ ಸಮಾರಂಭಗಳನ್ನು ಕಂಡಿದ್ದ ನನಗೆ, ಕಾಡಿನ ನಡುವಿನಲ್ಲಿ, ಹತ್ತಾರು ಹಕ್ಕಿಗಳ, ಜೀರುಂಡೆಗಳ, ಆಗಾಗ ಬೀಸುವ ತಂಗಾಳಿಗೆ ಅಲುಗಾಡುವ ಸಸ್ಯಸಂಕುಲ-ಚೈತ್ರಕಾಲದ ಚಿಗುರಿನ ಕಲರವ-ದ ನಡುವೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ಹೊಸತೊಂದು ಲೋಕವನ್ನು ತೆರೆದಿಟ್ಟಿತ್ತು. ಅತ್ಯಂತ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಶ್ರೀ ಕಡಿದಾಳು ಪ್ರಕಾಶ್ ನಿಜಕ್ಕೂ ಅಭಿನಂದಾರ್ಹರು.

ಸಂಜೆ ಕವಿಶೈಲದಲ್ಲಿ ಕಂಡ ಸೂರ್ಯಾಸ್ತ ಅತ್ಯದ್ಭುತವಾಗಿತ್ತು. ಕವಿಶೈಲದಲ್ಲಿ ಬಿ.ಎಂ.ಶ್ರೀ., ಟಿ.ಎಸ್.ವೆಂ., ಕುವೆಂಪು, ಪೂಚಂತೇ ಎಂದು ಕವಿಗಳ ಸ್ವಹಸ್ತಾಕ್ಷರವಿದೆ. ಕವಿಶೈಲವನ್ನು ಕುರಿತಂತೆ ಕುವೆಂಪು ಅವರ ಸಾಹಿತ್ಯದಲ್ಲಿ ನೂರಾರು ಪುಟಗಳ ದಾಖಲೆಯಿದೆ. ಕವಿಶೈಲ ಎಂಬ ಶಿರ್ಷಿಕೆಯ ಆರು ಕವಿತೆಗಳಲ್ಲದೆ, ಅಲ್ಲಿನ ಸೂರ್ಯಾಸ್ತವನ್ನು, ಕವಿಶೈಲದಿಂದ ಕಾಣುವ ಕುಂದಾದ್ರಿಯನ್ನು ಕುರಿತು ಹಲವಾರು ಕವಿತೆಗಳನ್ನು ನೋಡಬಹುದಾಗಿದೆ.
ಓ ನನ್ನ ಪ್ರಿಯತಮ ಶೀಖರ ಸುಂದರನೆ, ನನ್ನ ಜೀವನಾನಂದ ನಿಧಿ ಕವಿತಾ ಮನೋಹರಿಯ ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ ಪೀಠ ಚೂಡಾಮಣಿಯೆ, ಓ ಕವಿಶೈಲ ಎಂದು ಕವಿಶೈಲವನ್ನು ಕುವೆಂಪು ಸಂಬೋಧಿಸಿದ್ದಾರೆ!
ಅಲ್ಲಿಂದ ಕಾಣುವ ದೃಶ್ಯವನ್ನು ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ ಕಡಹಸುರು ತಿಳಿಹಸುರುಬಣ್ಣದ ಸಂತೆ ಎಂದು ಹಾಡಿದ್ದಾರೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ: ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ! ಸಹ್ಯಾದ್ರಿ ಗಿರಿಪಂಕ್ತಿಯೇ ಧ್ಯಾನಕ್ಕೆ ಕುಳಿತಿರುವಂತೆ ಕಂಡಿರುವ ಕಲ್ಪನೆ ಅದ್ಭುತ!
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ!