Monday, February 27, 2012

ಶ್ರೀಗುರುದೇವಗೆ ನೀನೆ ನಿವೇದಿಸು ಕಬ್ಬಿಗನಿಂಚರಗಾಣ್ಕೆಯಿದು!

ಮಲೆನಾಡಿನ ಚಿತ್ರಗಳು ಕೃತಿಯನ್ನೋದಿದವರಿಗೆ ತಿಮ್ಮು ಎಂಬ ಪಾತ್ರದ ಪರಿಚಯವಿದ್ದೇ ಇರುತ್ತದೆ. ಇರುಳು ಬೇಟೆಗೆ ಹೋಗಿ ಕವಿಗಳಾಗಿ ಹಿಂತಿರುಗಿದ ಕಥನವುಳ್ಳ ’ಕಾಡಿನಲ್ಲಿ ಕಳೆದ ಒಂದಿರುಳು’ ಲೇಖನದಲ್ಲಿ ಬರುವ ಮೂವರು ವ್ಯಕ್ತಿಗಳಲ್ಲಿ ಈ ತಿಮ್ಮುವೂ ಒಬ್ಬರು. ’ರಾಮರಾವಣರ ಯುದ್ಧ’ದಲ್ಲಿ ಆಂಜನೇಯ ಎತ್ತುತ್ತಿದ್ದ ಕೈಲಾಸಪರ್ವತವನ್ನು ಮೆಟ್ಟಿದ ಶಿವನ ಪಾತ್ರದಾರಿಯೂ ಈ ತಿಮ್ಮುವೆ! ಶಿಲಾತಪಸ್ವಿ ಬಂಡೆಯ ಮೇಲೆ ಅಕ್ಷರರೂಪದಲ್ಲಿ ಅಮರನಾಗಿರುವ ತಿಮ್ಮು, ಕುವೆಂಪು ಅವರ ದೊಡ್ಡ ಚಿಕ್ಕಪ್ಪಯ್ಯ ರಾಮಯ್ಯಗೌಡರ ಮಗ. ಕುವೆಂಪು ಅವರು ಮೈಸೂರಿನಲ್ಲಿ ಓದುತ್ತಿದ್ದಾಗ, ರಾಮಯ್ಯಗೌಡರ ನಿಧನಾನಂತರ ಕುವೆಂಪು ಅವರಿಗೆ ಸಂಬಂಧಿಸಿದ ಆಸ್ತಿಯನ್ನು ನೋಡಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಕುವೆಂಪು ಅವರ ಬಾಲ್ಯದ ಒಡನಾಡಿ, ಬಾಲ್ಯದ ನಾನಾ ಚೇಷ್ಟೆಗಳ ಜೊತೆಗಾರ, ಬೇಟೆಯ ಸಹಪಾಠಿ, ಕವಿಯ ಮೊದಲ ಸಹೃದಯ ಕೇಳುಗ!

ಆಶಾವಾದಿಯಾಗಿದ್ದ ಆಧ್ಯಾತ್ಮಿಕನ ಶ್ರದ್ಧೆಯಿಂದ ಊರ್ಧ್ವಮುಖಿಯಾಗಿ ಪ್ರಶಾಂತವಾಗಿದ್ದ ಕವಿಚೇತನ ಮನೆಯ ವಿಚಾರದಲ್ಲಿ ಉದಾಸೀನವಾಗಿತ್ತು. ಆದರೆ ಆ ಸರವೋರದ ಪ್ರಶಾಂತಿಗೆ ಆಗಾಗ ಭಂಗಬರುತ್ತಿತ್ತು ಎಂಬುದು ಕವಿಯ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ದೊಡ್ಡಚಿಕ್ಕಪ್ಪಯ್ಯನ ಮರಣಾನಂತರ ಇಷ್ಟಮಿತ್ರರ-ನೆಂಟರ ಸಹಾಯದಿಂದ ಕುಪ್ಪಳಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದ ತಿಮ್ಮುವಿಗೆ ಅನಾರೋಗ್ಯವೆಂದು ೧.೧.೧೯೨೯ ಒಂದು ಕಾಗದ ಬರುತ್ತದೆ. ಅದು ಬಂದ ದಿನವೇ, ತಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ದುಃಖ ಮಲಗಿಹುದೆಮ್ಮ ಸುಖದ ಎದೆಯಲ್ಲಿ!
ಪಾಪವಡಗಿಹುದೆಮ್ಮ ಪುಣ್ಯದೆದೆಯಲ್ಲಿ!
ಎಂದು ಎರಡು ಸಾಲಿನ ಮಂತ್ರಾಕ್ಷತೆಯನ್ನು ದಿನಚರಿಯಲ್ಲಿ ಬರೆಯುತ್ತಾರೆ. ಆ ದಿನಕ್ಕೆ ಕೇವಲ ಎಂಟು ದಿನಗಳ ಮುಂಚೆ ಬರೆದಿದ್ದ, ’ಕೈಬಿಟ್ಟರೆ ನೀ ಗತಿಯಾರೈ? ಕಿರುದೋಣಿಯಿದು ಮುಳುಗದೇನೈ?’ ಎಂದು ಆರಂಭವಾಗುವ ’ನಾವಿಕ’ ಪದ್ಯದಲ್ಲಿ ನೊರೆನೊರೆಯಾಗಿಹ ತೆರೆತೆರೆಯಲ್ಲಿ ಮೃತ್ಯುವು ನೃತ್ಯವ ಮಾಡುತಿದೆ! ಎಂಬ ಸಾಲನ್ನು ಬರೆದಿರುತ್ತಾರೆ! ಅದರಿಂದ ಮನಸ್ಸು ಒಂದು ರೀತಿಯ ಅವ್ಯಕ್ತ ಆತಂಕಕ್ಕೆ ಈಡಾಗುತ್ತದೆ. ಪತ್ರ ಬಂದ ನಂತರ ೩.೧.೧೯೨೯ರಲ್ಲಿ ರಚಿಸಿರುವ ’ದಾರಿ ತೋರೆನೆಗೆ’ ಕವಿತೆಯಲ್ಲಿ,
ಕವಲೊಡೆದ ಹಾದಿಗಳು;
ಕವಿದಿಹುದು ಕತ್ತಲೆಯು;
ಕಿವಿಗೊಟ್ಟು ಕೇಳಿದರೆ
ಕರೆವ ದನಿಯಿಲ್ಲ;
ಕಣ್ಣಿಟ್ಟು ನೋಡಿದರೆ
ಹೊಳೆವ ಸೊಡರಿಲ್ಲ!
ಹೆಪ್ಪಗಟ್ಟಿಹುದಿರುಳು!
ಮರಳಿನಲಿ ಕೆಸರಿನಲಿ
ಮುಂದೆ ತೆರಳಿದ ಜನರ
ಹೆಜ್ಜೆಗಳ ಕಾಣೆ;
ಕತ್ತಲಲಿ ಕೈಹಿಡಿದು
ಕಾಯುವರ ಕಾಣೆ!
ಎಂದ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ಹಿಂದೆ ತಾಯಿಗೆ ಹುಷಾರಿಲ್ಲ ಎಂಬ ಪತ್ರ ಬಂದಾಗ ಉದಾಸೀನ ಮಾಡಿದಂತೆ ಮಾಡಲು ಈಗ ಸ್ವಾಮೀಜಿ ಬಿಡುವುದಿಲ್ಲ. ಹಿತವಚನ ಹೇಳಿ ಊರಿಗೆ ಹೊರಡಿಸುತ್ತಾರೆ. ಆದರೆ, ಇವರು ಅಲ್ಲಿಗೆ ತಲುಪುವಷ್ಟರಲ್ಲಿ ಆಗಬಾರದ್ದು ಆಗಿ ಹೋಗಿರುತ್ತದೆ. ತಿಮ್ಮು ತೀರಿಕೊಂಡಾಗಿತ್ತು. ದಹನಸಂಸ್ಕಾರವೂ ಪೂರೈಸಿತ್ತು. (ಆಗ ತಿಮ್ಮುವಿನ ಚಿಕ್ಕವಯಸ್ಸಿನ ಹೆಂಡತಿ ಗರ್ಭಿಣಿಯಾಗಿದ್ದಳು. ಮುಂದೆ ಶೊಕಾಗ್ನಿಯಲ್ಲಿ ಬೆಂದ ಅವಳು ಹೆತ್ತ ಕೂಸೂ ಬದುಕಲಿಲ್ಲ - ಕುವೆಂಪು). ತಮ್ಮ ತಾಯಿ ಸತ್ತಾಗ ಯಾವ ಸ್ಥಿತಿಪ್ರಜ್ಞೆಯನ್ನು ತೋರಿಸಿದ್ದರೋ ಈಗಲೂ ಅದೇ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ. ಆತ್ಮದ ಅಮೃತತ್ವದ ಶ್ರದ್ಧೆ ನನಗೆ ಅನುಭವದ ದಿಟದ ವಸ್ತುವಾಗಿತ್ತು ಎನ್ನುತ್ತಾರೆ. ದುಃಖದ ಕಡಲಿನಲ್ಲಿ ಮುಳುಗಿದ ಮನೆಯವರನ್ನು ಜಗಲಿಯಲ್ಲಿ ಸೇರಿಸಿ, ಭಗವದ್ಗೀತೆಯನ್ನೋದುತ್ತಾರೆ.

ಆಗ ಅವರ ಮೊದಲ ಕವನ ಸಂಕಲನದ ಪ್ರಕಟಣೆಯ ಸಿದ್ಧತೆಗಳು ನಡೆಯುತ್ತಿರುತ್ತವೆ. ಅದಕ್ಕೆ ಮುನ್ನುಡಿಯ ರೂಪದಲ್ಲಿ ಗೊಲ್ಲನ ಬಿನ್ನಹ ಎಂಬ ಕವನ ೨೫.೩.೧೯೨೯ರಲ್ಲಿ ರಚನೆಯಾಗುತ್ತದೆ. ಅದರಲ್ಲಿ ತಿಮ್ಮುವಿನ ಮರಣದ ದುಃಕದ ತೀವ್ರತೆಯನ್ನು, ಕವಿಯೇ ಹೇಳಿದ ಆತ್ಮದ ಅಮೃತತ್ವ ಶ್ರದ್ಧೆಯನ್ನು ಕಾಣಬಹುದು.
ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು
ಬೃಂದೆಯ ನಂದನ ಕಂದನೆ ಬಂದು
ಗೊಲ್ಲನ ಕೊಳಲಿ ನಿಂದಿಹನೆಂದು
ಭಾವಿಸಿ ಮನ್ನಿಸಿ ಲಾಲಿಪುದು.
ಎಂದು ಕವಿತೆ ಆರಂಭವಾಗುತ್ತದೆ. ಕವಿತೆಯ ನಾಲ್ಕನೆಯ ವಿಭಾಗದಲ್ಲಿ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.
ಬನಗಳ ಹೂಗಳ ಸೊಬಗನು ಮೀರುವ
ಚೆಲುವಿನ ಹೊಲಬಿಗ ಬಾಲೆಯರೆ;
ಬನದಲಿ ಬಯಲಲಿ ಹೊಳೆಯಲಿ ಮಳೆಯಲಿ
ನನ್ನೊಡನಾಡಿದ ಬಾಲಕರೆ;
ನಡೆಯಲಿ ಮೆಲ್ಲೆದೆ, ನುಡಿಯಲಿ ಮೆಲುದನಿ,
ನಿಮ್ಮದು ಮಲೆಗಳ ಸೋದರರೆ;
ರಂಗು, ತಿಮ್ಮು, ಗೌರಿ, ಗಿರಿಜೆ,
ಚಂದದ ಹೆಸರಿನ ಸೋದರರೆ;
ನಿಮ್ಮೊಡನಾಡಿದ ಗುಟ್ಟಿನ ನುಡಿಗಳ
ಬಯಲಿಗೆ ಬೀರುವೆ, ಮನ್ನಿಸಿರಿ!
ನಿಮ್ಮಂತೆಯೆ ನಾ ಹಾಡಲು ಬರದಿರೆ
ಪಾಮರ ಗೋಪನ ಮನ್ನಿಸಿರಿ!
ನಿಮ್ಮೆಲ್ಲರ ಶಿಷ್ಯನು ನಾ, ನಮಿಸುವೆ;
ಆಶೀರ್ವಾದವ ಬೇಡುವೆನು.
ತಮ್ಮ ಬಾಲ್ಯದ ಅನುಭವ ಶ್ರೀಮಂತಿಕೆಯನ್ನು ಹೆಚ್ಚಿಸಿದ ಬಾಲ್ಯದ ಕೆಳೆಯರನ್ನು ಸ್ಮರಿಸುವುದು, ಅವರನ್ನು ಗುರುವೆಂದು ಭಾವಿಸುವುದು ಕನ್ನಡ ನವೋದಯ ಸಂದರ್ಭದಲ್ಲಿ ಮೂಡುತ್ತಿದ್ದ ಹೊಸಬೆಳಕಿಗೆ ಸಾಕ್ಷಿಯಾಗಿವೆ. ಇಲ್ಲಿಂದ ಮುಂದಕ್ಕೆ ಕವಿತೆ ಪೂರ್ಣವಾಗಿ ತಿಮ್ಮುವಿಗೆ ಸಂಬಂಧಿಸಿದ್ದುದಾಗಿದೆ. ಈ ಗೊಲ್ಲನ ಕೊಳಲು ನುಡಿಯುವಾಗ, ಆ ಕೊಳಲನ್ನು ಸಿದ್ಧಮಾಡಿಕೊಟ್ಟ, ಅದಕ್ಕೆ ಕಣ್ಣನ್ನು ಕೊರೆದುಕೊಟ್ಟ ಸಹೋದರನು ಇಲ್ಲದಿರುವ ದುಃಖ ಐದನೆಯ ಭಾಗದಲ್ಲಿ ಬಿಂಬಿತವಾಗಿದೆ.
ಬನದೊಳು ಮೊದಲೀ ವೇಣುವನಕಟಾ
ಕೇಳಿದ ಕಿವಿಗಳನೊಡೆದೆಯ, ದೇವ?
ಗೊಲ್ಲನ ಕೊಳಲಿಗೆ ಉಸಿರನು ಕೊಟ್ಟಾ
ಎದೆಯಲರೊಂದನು ಕೊಯ್ದೆಯ, ಶಿವನೆ!
ಗೊಲ್ಲನ ಹಾಡನು ಹುರಿದುಂಬಿಸಿದಾ
ತಮ್ಮನ ತಿಮ್ಮುವನೊಯ್ದೆಯ, ಹರಿಯೆ!
ಕೊಳಲನು ಮೆಳೆಯಿಂ ಕೊಯ್ದವ ನೀನೆ,
ಕೊಳಲಿಗೆ ಕಣ್ಗಳ ಸಮೆದವ ನೀನೆ,
ನಚ್ಚಿನ ಮೆಚ್ಚಿನ ಸೋದರನೆ!
ಗೊಲ್ಲನ, ಅಣ್ಣನ ಗಾನವ ಕೇಳಿ
ಹೆಮ್ಮೆಯೊಳುಬ್ಬುತ ಮುದವನು ತಾಳಿ
ನಲಿದೈ ಮುದ್ದಿನ ಸೋದರನೆ!
ಆ ಕಣ್ಣಿನ ಬೆಳಕಳಿದುದೆ ಅಕಟಾ!
ಆ ಬಾಯ್ಬೆಂದುದೆ ಅಕಟಕಟಾ!
ಆ ಎದೆಯೊರತೆಯು ಬತ್ತಿತೆ ಹಾ! ಹಾ!
ಬಾಳಿ ಜಾತ್ರೆಯು ಮುಗಿದುದೆ ಹಾ!
ಗೊಲ್ಲನ ಕೊಳಲನು ಕೇಳುತ ನಲಿವರು
ಏನನು ಬಲ್ಲರು ಸೋದರನೆ?
ಗೊಲ್ಲನ ಜಸದಲಿ ಅರೆಪಾಲೆಲ್ಲಾ
ನಿನ್ನದೆ, ನಿನ್ನದೆ, ಸೋದರನೆ!
ಕವಿಪ್ರತಿಭೆಗೆ ಬಾಲ್ಯದಲ್ಲಿ ದೊರೆತ ವ್ಯುತ್ಪತ್ತಿಯಲ್ಲಿ ಅರೆಪಾಲು ಆ ಸಹೋದರನದೇ ಆಗಿದೆ. ಆತನೊಡನೆ ಕಳೆದ ದಿನಗಳು, ಮಾಡಿದ ಸಾಹಸಗಳು, ಬೇಟೆಯ ಮೋಜು, ಅದರಲ್ಲಿ ತಿಮ್ಮು ಸಾಧಿಸಿದ್ದ ಪರಿಣಿತಿ ಎಲ್ಲವೂ ಅಡಕವಾಗಿವೆ.
ಕಾಡಿನೊಳಿಬ್ಬರೆ ತಿರುಗಿದೆವಂದು,
ಹೂಗಳ ಕೊಯ್ದೆವು ಹಣ್ಗಳ ತಂದು.
ಬಣ್ಣದ ಚಿಟ್ಟೆಗಳನು ಹಿಡಿವಾಗ
ಮುದ್ದಿನ ತಿಮ್ಮುವೆ ಮುಂದಾಳು;
ಕೋಗಿಲೆಗಳ ನಾವಣಕಿಸುವಾಗ
ಅಲ್ಲಿಯು ನಾನೇ ಹಿಂದಾಳು;
ಕಡಿದಾದರೆಗಳನೇರುವ ಸಮಯದಿ,
ಹುತ್ತದ ಜೇನನು ಕೀಳುವ ಸಮಯದಿ,
ಬಿರುಸಿನ ಬೇಟೆಯನಾಡುವ ಸಮಯದಿ,
ಎಲ್ಲಿಯು ತಿಮ್ಮುವೆ ಕೆಚ್ಚಾಳು!
ನನಗಾತನೆ ನಮ್ಮೂರಿನ ಕಣ್ಣು;
ಈಗವನಾದನೆ ಬೇಳಿದ ಮಣ್ಣು!
ನನ್ನೆದೆಗಾತನೆ ಕನ್ನಡಿಯಂತೆ.
ಸೋದರನೆನ್ನಯ ಪಡಿನೆಳಲಂತೆ.
ಕನ್ನಡಿಯೊಡೆದುದು ಬರುಗನ ಸಂತೆ.
ಮೂಡಿತು ಮನದಲಿ ಮುರಿಯದ ಚಿಂತೆ.
ಒಂದೇ ವೀಣೆಯ ತಂತಿಗಳಂತೆ,
ಕಾಮನಬಿಲ್ಲಿನ ಬಣ್ಣಗಳಂತೆ,
ಹಾಡುವ ಕೊಳಲಿನ ಕಣ್ಣುಗಳಂತೆ
ಕೂಡಿದೆವಾಡಿದೆವೆಲೆ ತಮ್ಮಾ!
ಪರುಷವು ಹರಿದೀ ವೀಣೆಯ ವಾಣಿ.
ಬಡ ಮಳೆಬಿಲ್ಬಗೆಗೊಳಿಸದು ಇಂದು!
ಕಣ್ಣೊಂದಿಲ್ಲದ ಕೊಳಲಿದು ಇಂದು
ಕೊಡದಂದಿನ ಗಾನವ ತಮ್ಮಾ!
ಮೆಳೆಯಿಂದ ಬಿದಿರು ಕಡಿದು, ಕೊಳಲನ್ನು
ಮಾಡಿಕೊಟ್ಟ ತಮ್ಮನೇ ಆ ಕೊಳಲಿನ ಒಂದು ಕಣ್ಣಾಗಿದ್ದನು. ಅದರಿಂದ ಹೊಮ್ಮತ್ತಿದ್ದ ನಾದ ಮಾಧುರ್ಯವಾಗಿದ್ದು ಆತನಿಂದಲೆ! ಆದರೆ ಕೊಳಲಿನ ಒಂದು ಕಣ್ಣು ಈಗ ಹೋಗಿಬಿಟ್ಟಿದೆಯೇನೋ ಅನ್ನಿಸುತ್ತದೆ ಕವಿಗೆ. ಮುಂದಿನ ಭಾಗದಲ್ಲಿ ಆತ್ಮದ ಅಮೃತತ್ವನ್ನು ನೆನೆದು ಕೃತಿಯನ್ನು ತಿಮ್ಮುವಿಗೆ ಅರ್ಪಿಸುತ್ತಾರೆ.
ಹೋದವರೆಲ್ಲರ ಊರನು ಸೇರಿದೆ,
ತಮ್ಮಾ, ಗೊಲ್ಲನ ದುಃಖಕೆ ಮಾರಿದೆ!
ನಾ ಸಾವಿಗೆ ಅಂಜುವೆನೆಂದಲ್ಲ,
ಅದರರ್ಥವ ತಿಳಿಯದನೆಂದಲ್ಲ;
ನಿನ್ನಾ ಸಂಗಕೆ ಕೊರಗುವೆನು;
ನಿನ್ನಾ ಪ್ರೇಮಕೆ ಮರುಗುವೆನು!
ಶ್ರೀಗುರುದೇವನ ಪಾದವ ಸೇರಿದೆ;
ಬಲ್ಲೆನು ನಾನೂ ಸೇರುವೆನು.
ಮಾಡುವ ಕೆಲಸವ ಮುಗಿಯಿಸಿ ಬೇಗನೆ
ಬಲ್ಲೆನು ನಾನೂ ಸೇರುವೆನು.
ನಿನ್ನಯ ನೆನಪಿಗೆ ಗೊಲ್ಲನು ನೀಡುವ
ಪ್ರೇಮದ ಗಾನದ ಕಾಣ್ಕೆಯಿದು!
ಶ್ರೀಗುರುದೇವಗೆ ನೀನೆ ನಿವೇದಿಸು
ಕಬ್ಬಿಗನಿಂಚರಗಾಣ್ಕೆಯಿದು!
ಕವಿಯು ತನ್ನ ಮೊದಲ ಕೃತಿಪುಷ್ಪವನ್ನು ತನ್ನ ಗುರುದೇವನಿಗೆ ನಿವೇದಿಸಬೇಕಾಗಿದೆ. ಆದರೆ ಹಾಗೆ ನಿವೇದಿಸುವ ತನ್ನನ್ನು, ತನ್ನ ಕೊಳಲನ್ನು ರೂಪಿಸಿದ ತನ್ನ ಸಹೋದರನೇ ಹೆಚ್ಚು ಅರ್ಹ ಎಂದು ಕವಿ ಭಾವಿಸುತ್ತಾರೆ.

2 comments:

prathap.brahmavar said...

lEkhana chennaagide.. Vivaranegalige vandanegalu..sir

Ashok.V.Shetty, Kodlady said...

Upayukta Lekhana sir...Chennagide..Dhanyavadagalu...