ಶಿಕ್ಷಣ ಮಾದ್ಯಮಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.
ಈ ತೀರ್ಪು ಅನಿರೀಕ್ಷಿತವೇನಲ್ಲ. ರಾಜ್ಯ ಸರ್ಕಾರಕ್ಕೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ
ಸ್ಥಿತಿ ಎದುರಾಗಿದೆ. ’ಸಾಮಾನ್ಯ ಸಂದರ್ಭಗಳಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ
ಆಗಿರಬೇಕು’ ಎಂಬ ೨೨.೬.೧೯೮೯ರ ಸರ್ಕಾರದ ನಿರ್ಧಾರದಿಂದ ಹಿಂದೆ ಸರಿದದ್ದು, ಹಾಗೂ ’ರಾಜ್ಯ
ಸರ್ಕಾರದಿಂದ ಮಾನ್ಯತೆ ಪಡೆದಿರುವ ಎಲ್ಲ ಶಾಲೆಗಳು ಒಂದರಿಂದ ನಾಲ್ಕನೆ ತರಗತಿಯವರೆಗೆ
ಕಡ್ಡಾಯವಾಗಿ ಕನ್ನಡ ಅಥವಾ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎಂದು ೨೯.೪.೧೯೯೪ರಂದು
ರಾಜ್ಯ ಸರ್ಕಾರ ನೀಡಿದ ಆದೇಶವೇ ಈಗ ಹಗ್ಗವಾಗಿರುವುದು!
ಹೀಗೇಕೆ ಆಯಿತು?
ಭಾರತ ಸ್ವತಂತ್ರ್ಯಾನಂತರ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ನಿರ್ಮಾಣವಾದವು. ಭಾಷೆಯೇ
ಆಯಾಯ ರಾಜ್ಯದ ಗುರುತೂ, ಅಸ್ಮಿತೆಯೂ ಆಗಿದ್ದು ಐತಿಹಾಸಿಕ ಸತ್ಯ. ಆಯಾಯ ಭಾಷೆಯೇ ಆಯಾಯ
ರಾಜ್ಯಗಳ ರಾಜ್ಯಭಾಷೆ ಅರ್ಥಾತ್ ಆಡಳಿತಭಾಷೆಯೂ ಆಗಬೇಕಾದದ್ದು ಸಹಜವೂ ಹೌದು. ಆದ್ದರಿಂದ,
ಸಾರ್ವತ್ರಿಕ ನೆಲೆಯಲ್ಲಿ ರಾಜ್ಯಭಾಷೆಯೇ ಆಯಾಯ ರಾಜ್ಯದ ಮಾತೃಭಾಷೆಯಾಗುತ್ತದೆ. ಆದರೆ,
ವೈಯಕ್ತಿಕ ನೆಲೆಯಲ್ಲಿ ಅಲ್ಲ ಎಂಬುದು ಸ್ಪಷ್ಟ. ಆದರೆ ರಾಜ್ಯ ಸರ್ಕಾರಗಳು ತಮ್ಮ
ರಾಜ್ಯಭಾಷೆಯ ಅಭಿವೃದ್ಧಿಗೆ, ಉಳಿವಿಗೆ ಕೈಗೊಂಡ ಕ್ರಮಗಳು ಮಾತ್ರ ಪ್ರಶ್ನಾರ್ಹ.
ಮಾತೃಭಾಷೆ ಮತ್ತು ರಾಜ್ಯಭಾಷೆ ಇವುಗಳ ನಡುವೆ ಗೊಂದಲ ಸೃಷ್ಟಿಸಿದ್ದು ರಾಜ್ಯಸರ್ಕಾರದ
ಇನ್ನೊಂದು ತಪ್ಪು ನಡೆ. ’ಮಾತೃಭಾಷೆ ಇಂಗ್ಲಿಷ್ ಆಗಿರುವ ವಿದ್ಯಾರ್ಥಿಗಳು ಒಂದನೆಯ
ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬಹುದು’ ಎಂಬ ಸರ್ಕಾರದ ಅಭಿಪ್ರಾಯ
ಕೂಡಾ ತಪ್ಪು. ಚಾಮರಾಜನಗರದ ಒಂದು ಹಳ್ಳಿಯ ಶಾಲೆಯಲ್ಲಿ ಹತ್ತು ಕನ್ನಡದ ಮಕ್ಕಳು ಹಾಗೂ
ಹತ್ತು ತಮಿಳು ಮಕ್ಕಳು ಇದ್ದರೆ ಕನ್ನಡ ಹಾಗೂ ತಮಿಳು ಎರಡೂ ಮಾಧ್ಯಮಗಳಲ್ಲಿ ಪಾಠ ಮಾಡಲು
ಸಾಧ್ಯವೆ? ಕೆಲಸಕ್ಕಾಗಿ ಬಂದು ಕರ್ನಾಟಕದಲ್ಲಿ ನೆಲೆಸಿರುವ ಬಿಹಾರಿಗಳ ಮಕ್ಕಳಿಗೆ ಬಿಹಾರಿ
ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸಾಧ್ಯವೆ? ಮಾಧ್ಯಮ ಯಾವುದೇ ಇರಲಿ, ಕಡ್ಡಾಯವಾಗಿ
ಕನ್ನಡ ಕಲಿಯಿರಿ, ಕರ್ನಾಟಕದಲ್ಲಿರುವವರು ಪ್ರಥಮ ಭಾಷೆಯಾಗಿ ಓದಲೇಬೇಕು ಎಂದಿದ್ದರೆ,
ಶಿಕ್ಷಣ ಮಾಧ್ಯಮದ ತೊಡಕೂ ಇರುತ್ತಿರಲಿಲ್ಲ; ರಾಜ್ಯಭಾಷೆಯ ಬಳೆವಣಿಗೆ ಕುಂಟಿತವೂ
ಆಗುತ್ತಿರಲಿಲ್ಲ ಅಲ್ಲವೆ?
ಮಾತೃಭಾಷೆ ಎಂಬುದು ವೈಯಕ್ತಿಕ ನೆಲೆಯಲ್ಲಿ ತೀರ್ಮಾನವಾಗಬೇಕಾದ ವಿಷಯ. ಯಾರು ಬೇಕಾದರೂ
ಯಾವ ಭಾಷೆಯನ್ನಾದರೂ ಮಾತೃಭಾಷೆಯನ್ನಾಗಿ ಸ್ವೀಕರಿಸಬಹುದು. ಒಬ್ಬ ಕನ್ನಡ ದಂಪತಿಗಳೇ
ತಮ್ಮ ಮಾತೃಭಾಷೆ ಇಂಗ್ಲಿಷ್ ಎಂದು ಘೊಷಿಸಿಕೊಂಡರೆ ಅದನ್ನು ಯಾರೂ
ಪ್ರಶ್ನಿಸಲಾಗುವುದಿಲ್ಲ. ಅದು ಅವರವರ ಆಯ್ಕೆಯ ಸ್ವಾತಂತ್ರ್ಯ. ಆದರೆ ರಾಜ್ಯಭಾಷೆ ಎಂಬುದು
ಸಾರ್ವತ್ರಿಕವಾದದ್ದು, ಸಾಮಾಜಿಕವಾದದ್ದು ಹಾಗೂ ಒಂದು ರಾಜ್ಯಕ್ಕೇ ಸಂಬಂಧಪಟ್ಟದ್ದು.
ಕನ್ನಡ ಭಾಷೆಯನ್ನು ರಾಜ್ಯಭಾಷೆ ಎಂಬ ಸಾರ್ವತ್ರಿಕ ನೆಲೆಯಲ್ಲಿ ನೋಡದೆ ವೈಯಕ್ತಿಕವಾದ
ಮಾತೃಭಾಷೆಯ ನೆಲೆಯಲ್ಲಿ ನೋಡಿದ್ದು ಹಾಗೂ ಅದನ್ನು ಶಿಕ್ಷಣ ಮಾಧ್ಯಮಕ್ಕೆ ತಳುಕು
ಹಾಕಿದ್ದು ಈ ಎಲ್ಲಾ ಗೊಂದಲಗಳಿಗೆ ಕಾರಣವೆನ್ನಬಹುದು.
ನ್ಯಾಯಾಲಯದ ತೀರ್ಪು ಹೊರಬಂದ ಮೇಲೆ ಅಧಿಕಾರಸ್ಥರ ಪ್ರತಿಕ್ರಿಯೆಗಳನ್ನು ಗನಿಸಿದರೆ
ಅವರ ಇಚ್ಛಾಶಕ್ತಿಯ ಮೇಲೆ ಅನುಮಾನ ಮೂಡುತ್ತದೆ. ಸಾಹಿತಿ-ಚಿಂತಕರ ಸಭೆ ಕರೆಯುವ
ಮುಖ್ಯಮಂತ್ರಿಗಳ ನಿರ್ಧಾರ ಒಂದು ರಾಜಕೀಯ ನಡೆಯೆ ಹೊರತು, ಖಂಡಿತಾ ಕಾನೂನು ರೂಪಿಸುವವರ
ನಡೆಯಲ್ಲ! ಸಾಹಿತ್ಯಕ ವಲಯದಿಂದ ಎದುರಾಗಬಹುದಾದ ಸ್ವಲ್ಪಮಟ್ಟಿನ ಪ್ರತಿರೋಧ, ಅದಕ್ಕೆ
ಸಿಗುವ ಅಗ್ಗದ ಪ್ರಚಾರ, ಅದರಿಂದ ತನಗುಂಟಾಗುವ ಮುಜುಗರವನ್ನು ತಪ್ಪಿಸಲು ಸಾಹಿತಿಗಳ ಸಭೆ
ಕರೆಯಲಾಗಿದೆ, ಅಷ್ಟೆ. ನಾಲ್ಕೈದು ಪುಸ್ತಕ ಬರೆದಾಕ್ಷಣ ಯಾವ ವಿಷಯದ ಬಗ್ಗೆಯಾದರೂ ಸಲಹೆ
ಕೊಡುವುದು ಸಾಹಿತಿಗಳಿಗೆ ಹೇಗೆ ಸಾಧ್ಯ? ರಾಜ್ಯಸಭೆ, ವಿಧಾನಸಭೆ, ಅಕಾಡೆಮಿಗಳ
ಅಧ್ಯಕ್ಷತೆ, ಸದಸ್ಯತ್ವ ಇವುಗಳ ಮೇಲೆ ಕಣ್ಣಿಟ್ಟು ತುದಿಗಾಲ ಮೇಲೆ ನಿಂತಿರುವ, ಕೇವಲ
ಹೃದಯದಿಂದ ಯೋಚಿಸುವ ಕೆಲವು ಸಾಹಿತಿ-ಚಿಂತಕರಿಂದ ಏನನ್ನು ನೀರೀಕ್ಷಿಸಲು ಸಾಧ್ಯ.
ಇಂತಹ ವಿಷಯಗಳಲ್ಲಿ ಕರೆಯಬೇಕಾದ್ದು ಸಾಹಿತಿಗಳ ಸಭೆಯನ್ನಲ್ಲ; ಸಂವಿಧಾನ ತಜ್ಞರ,
ಕಾನೂನು ತಜ್ಞರ, ಶಿಕ್ಷಣ ತಜ್ಞರ ಸಭೆ ಎಂಬ ಸಾಮಾನ್ಯ ಜ್ಞಾನ ಕೂಡಾ ನಮ್ಮನ್ನು ಆಳುವವರಿಗೆ
ಇಲ್ಲದಿರುವುದು ದೌರ್ಭಾಗ್ಯವೇ ಸರಿ! ಒಂದು ಭಾಷೆಯನ್ನಾಗಿ, ತನ್ನ ರಾಜ್ಯಭಾಷೆಯಾದ
ಕನ್ನಡವನ್ನು ಸಮರ್ಥವಾಗಿ ಕಲಿಸುವ ಪ್ರಾಥಮಿಕ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸದವರು,
ಜಾಗತೀಕರಣದ ಈ ಹೊತ್ತಿನಲ್ಲಿ ಕನ್ನಡವನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ
ಮಾತುಗಳನ್ನಾಡುವುದು ಶತಮಾನದ ವ್ಯಂಗ್ಯವಲ್ಲವೆ?
ಸರ್ವೋಚ್ಚ ನ್ಯಾಯಾಲಯದ ಇಂದಿನ ತೀರ್ಪಿನ ಹಿನ್ನೆಲೆಯಲ್ಲಿ, ಒಂದು ರಾಜ್ಯವಾಗಿ
ಕರ್ನಾಟಕ ತನ್ನ ರಾಜ್ಯಭಾಷೆಯ ಅಭಿವೃದ್ಧಿಗಾಗಿ, ತನ್ಮೂಲಕ ಕನ್ನಡ ಭಾಷೆಯ ಉಳಿವಿಗಾಗಿ
ಮಾಡಬೇಕದ್ದೇನು? ಮಾತೃಭಾಷೆ ಹೇಗೆ ವೈಯಕ್ತಿಕ ಆಯ್ಕೆಯಾಗುತ್ತದೊ ಹಾಗೇ ಶಿಕ್ಷಣ ಮಾದ್ಯಮವೂ
ಕೂಡಾ. ಆದ್ದರಿಂದ, ಸರ್ಕಾರ ಶಿಕ್ಷಣ ಮಾದ್ಯಮದ ವಿಷಯವನ್ನು ಪಕ್ಕಕ್ಕಿಟ್ಟು,
ವಸ್ತುನಿಷ್ಟವಾಗಿ ತನ್ನ ರಾಜ್ಯಭಾಷೆಯನ್ನು ಸಮರ್ಥವಾಗಿ ಬಳಸಬೇಕಾಗಿದೆ. ಶಿಕ್ಷಣ ಮಾದ್ಯಮ,
ಮಾತೃಭಾಷೆ ಯಾವುದೇ ಇರಲಿ, ತನ್ನ ರಾಜ್ಯದಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಂದು ಮಗುವೂ
ಕನ್ನಡವನ್ನು ಪ್ರಥಮ ಭಾಷೆಯಾಗಿ, ಕನಿಷ್ಠ ಹತ್ತನೆ ತರಗತಿಯವರೆಗೆ ಅಧ್ಯಯನ ಮಾಡಲೇಬೇಕೆಂಬ
ಕಟ್ಟುನಿಟ್ಟಾದ ಕಾನೂನನ್ನು ರೂಪಿಸಲು ಸಾಧ್ಯವಿದೆ. ಈ ಪತ್ರಿಕೆಯಲ್ಲಿ ಪಡೆಯುವ
ಅಂಕಗಳನ್ನು, ಗ್ರೇಡ್/ವರ್ಗ/ಶೇಕಡವಾರು ಲೆಕ್ಕಾಚಾರಕ್ಕೆ ಕಡ್ಡಾಯವಾಗಿ ಸೇರಿಸಲೇಬೇಕು.
ಇದರಿಂದ ರಾಜ್ಯದಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ರಾಜ್ಯಭಾಷೆಯ ಅರಿವು ಉಂಟಾಗುತ್ತದೆ.
ಜೊತೆಗೆ, ಜನರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸಿದಂತೆಯೂ ರಾಜ್ಯಭಾಷೆಯ ಸಮರ್ಥ
ಬಳಕೆಗೆ ಅವಕಾಶವನ್ನು ಸೃಷ್ಟಿಸಿಕೊಂಡಂತೆಯೂ ಆಗುತ್ತದೆ.
ಅಷ್ಟಕ್ಕೂ ಮಾತೃಭಾಷೆಯ ಅಭಿವೃದ್ಧಿ ರಾಜ್ಯಸರ್ಕಾರದ ಕರ್ತವ್ಯ ಅಲ್ಲವೇ ಅಲ್ಲ!
ಮಾತೃಭಾಷೆಯ ಅಳಿವು ಉಳಿವು ಆಯಾಯ ಭಾಷೆಗಳನ್ನಾಡುವವರ ಕೈಯಲ್ಲಿದೆ. ಸರ್ಕಾರಗಳು ಅದಕ್ಕೆ
ಬೇಕಾದರ ಪೂರಕ ವಾತಾವರಣವನ್ನು ಕಲ್ಪಿಸಬಹುದೇ ಹೊರತು, ಜನಗಳ ಮಾತೃಭಾಷೆಯ ರಕ್ಷಕ ನಾನೇ
ಎಂದು ಫೋಸು ಕೊಡುವುದು ಎಷ್ಟು ಸರಿ. ಮನುಷ್ಯನಿಗೆ ಒಂದು ಮಾತೃಭಾಷೆ ಇದ್ದಂತೆ, ಒಮದು
ರಾಜ್ಯಕ್ಕೂ ಒಂದು ಮಾತೃಭಾಷೆ ಇರುತ್ತದೆ; ಅದು ಅದರ ರಾಜ್ಯಭಾಷೆಯೇ ಆಗಿರುತ್ತದೆ. ರಾಜ್ಯ
ಸರ್ಕಾರ ಉಳಿಸಿ ಬೆಳೆಸಬೇಕಾಗಿರುವುದು, ಅಭಿವೃದ್ಧಿ ಪಡಿಸಬೇಕಾಗಿರುವುದು ತನ್ನ
ಮಾತೃಭಾಷೆಯನ್ನು ಅಂದರೆ ಅದರ ರಾಜ್ಯಭಾಷೆಯನ್ನು ಮಾತ್ರ!
ರಾಜ್ಯ ಸರ್ಕಾರದ ಮುಂದಿರುವ ಇನ್ನೊಂದು ಆಯ್ಕೆಯೆಂದರೆ, ಪ್ರಾದೇಶಿಕ ಭಾಷೆಗಳನ್ನಾಡುವ
ಜನರನ್ನು ಪ್ರತಿನಿಧಿಸುವ ಎಲ್ಲಾ ರಾಜ್ಯಗಳ ಸಂಸತ್ ಸದಸ್ಯರಲ್ಲಿ ಒಮ್ಮತಾಭಿಪ್ರಾಯವನ್ನು
ಮೂಡಿಸಿ, ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಸಂಬಂದಿಸಿದಂತೆ ಪ್ರಬಲವಾದ
ಕಾನೂನನ್ನು ರೂಪಿಸಲು ಒತ್ತಡ ಹೇರುವುದು. ಪಕ್ಷ ರಾಜಕಾರಣದಲ್ಲಿ ಮುಳುಗಿ
ಕೊಳೆಯುತ್ತಿರುವವರಿಂದ ಇದನ್ನು ನಿರೀಕ್ಷಿಸಬಹುದೆ?
ಪ್ರಾದೇಶಿಕ ಭಾಷೆಗಳ ಉಳಿವಿಗೆ ಬೆಳವಣಿಗೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ
ಸೂತ್ರಗಳನ್ನು ನೀಡುವಂತೆ ಸರ್ವೋಚ್ಚ ನಾಯಾಲಯಕ್ಕೆ ಮೊರೆ ಹೋಗುವುದು ಇನ್ನೊಂದು ಮಾರ್ಗ. ಈ
ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವ ಅಂತರಾಷ್ಟ್ರೀಯ
ಸಂಘಸಂಸ್ಥೆಗಳ ನೆರವನ್ನೂ ಪಡೆಯಬಹುದು. ಇದಕ್ಕೆ ಭಾರೀ ಇಚ್ಛಾಶಕ್ತಿ ಬೇಕು. ಕುರ್ಚಿಗಾಗಿ
ಹೋರಾಟ ನಡೆಸುತ್ತಿರುವ ರಾಜಕಾರಣಿಗಳಿಂದ ಇಂತಹ ಅಗಾಧ ಇಚ್ಛಾಶಕ್ತಿಯನ್ನು ಅಪೇಕ್ಷಿಸುವುದು
ಮೂರ್ಖತನವೇನೊ ಅನ್ನಿಸುತ್ತಿದೆ.
ಇನ್ನು ಮುಂದಾದರೂ ಸರ್ಕಾರಗಳು ಮಾತೃಭಾಷೆ, ಶಿಕ್ಷಣ ಮಾದ್ಯಮ ಇಂತಹ ವೈಯಕ್ತಿಕ ಆಯ್ಕೆಯ
ವಿಚಾರಗಳ ಹಕ್ಕನ್ನು ತಂದೆತಾಯಿ ಪೋಷಕರಿಗೆ ಬಿಟ್ಟುಬಿಡಲಿ ರಾಜ್ಯಭಾಷೆಯ ಸಮರ್ಥ ಬಳಕೆಯ
ಹಕ್ಕನ್ನು ರಾಜ್ಯಸರ್ಕಾರ ಪರಿಣಾಮಕಾರಿಯಾಗಿ ಬಳಸುವಂತಹ ಯೋಜನೆ ರೂಪಿಸಲಿ. ಹೀಗೆಂದು
ಆಶಿಸುವುದು ಸಧ್ಯದ ಮಟ್ಟಿಗೆ ಹೆಚ್ಚು ಅರ್ಥಪೂರ್ಣ ಎನ್ನಿಸುತ್ತದೆ.
No comments:
Post a Comment