ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು
ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ'
ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ'
ಮೊದಲನೆಯದಕ್ಕೆ ರಾಮಾಯಣ, ಮಹಾಭಾರತ, ಗಿಲ್ಗಮೆಷ್, ಈಲಿಯಡ್, ಒಡಿಸ್ಸಿ ಮೊದಲಾದವುಗಳನ್ನು
ಹೆಸರಿಸಬಹುದು. ಎರಡನೆಯದಕ್ಕೆ, ಕುಮಾರಸಂಭವಂ, ಪಂಪಭಾರತ, ಕುಮಾರವ್ಯಾಸ ಭಾರತ,
ಜೈಮಿನಿಭಾರತ, ತುಳಸಿರಾಮಾಯಣ, ಕಂಭರಾಮಾಯಣ, ಶ್ರೀರಾಮಾಯಣದರ್ಶನಂ, ಡಿವೈನ್ ಕಾಮಿಡಿ,
ಪ್ಯಾರಡೈಸ್ ಲಾಸ್ಟ್ ಮೊದಲಾದ ಕೃತಿಗಳನ್ನು ಹೆಸರಿಸಬಹುದು. ಮಹಾಕಾವ್ಯವೊಂದರ
ಪ್ರಸ್ತುತಿಯೆಂದರೆ ಅದು ಒಂದು ಸಣ್ಣ ಕವಿತೆ ಅಥವಾ ಕಥೆಯಂತೆ ಆ ಕ್ಷಣದ
ಅಭಿವ್ಯಕ್ತಿಯಾಗಿರುವುದಿಲ್ಲ. ಭೂತ ಭವಿಷ್ಯತ್ ವರ್ತಮಾನಗಳಲ್ಲೆವನ್ನೂ ಒಳಗೊಂಡು ದೇಶ
ಭಾಷೆ ಕಾಲಾತೀತವಾದ ಅಭಿವ್ಯಕ್ತಿ ಮಹಾಕಾವ್ಯದ ಲಕ್ಷಣ. ಮಹಾಕಾವ್ಯ
ವರ್ತಮಾನದಲ್ಲಿರುತ್ತದೆ; ಭೂತದತ್ತ ಕೈಚಾಚಿರುತ್ತದೆ; ಭವಿಷ್ಯದತ್ತ
ದೃಷ್ಟಿಯಿಟ್ಟಿರುತ್ತದೆ! ವಸ್ತುಕಗಳಾದ ರಾಮಾಯಣ ಮಹಾಭಾರತಗಳಲ್ಲೇ ವಾಲ್ಮಿಕಿ ವ್ಯಾಸರು
ಕಾವ್ಯದೊಳಗೆ ಪಾತ್ರಗಳಾಗಿಯೇ ಇದ್ದಾರೆ ಎಂಬುದು ಗಮನಾರ್ಹ. ಇನ್ನು ವರ್ಣಕಗಳಾದ
ಮಹಾಕಾವ್ಯಗಳು ಯುಗಧರ್ಮದ ಒತ್ತಡದಿಂದ ಮಹಾಕವಿಯೊಬ್ಬನಿಂದ ಸೃಜಿಸಲ್ಪಡುತ್ತವೆ. ಅವುಗಳಿಗೆ
ಆ ಯುಗಧರ್ಮದ ಒಂದು ಸ್ಪಷ್ಟ ಉದ್ದೇಶವೂ ಇರುತ್ತದೆ. ಇನ್ನುಳಿದಂತೆ ವಸ್ತು, ವಿಷಯ,
ಪ್ರಸ್ತುತಿಯಲ್ಲಿ ವಸ್ತುಕಗಳಿಗೂ ವರ್ಣಕಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ವರ್ಣಕ
ಮಹಾಕಾವ್ಯಗಳಲ್ಲಿ ಕವಿ ತನ್ನ ಆಶಯವನ್ನು ಹೆಚ್ಚಾಗಿ ತಾನು ಕಂಡುಕೊಂಡ ದರ್ಶನವನ್ನು
ಪ್ರತಿಪಾದಿಸಬೇಕಾಗುತ್ತದೆ. ವರ್ಣಕ ಮಹಾಕಾವ್ಯಗಳಿಗೆ ಮೂಲಕಥೆ ಸಿದ್ಧವಾಗಿರುತ್ತದೆ.
ಕಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬಹುದಾದರೂ ಅಮೂಲಾಗ್ರ ಬದಲಾವಣೆ
ಸಾಧ್ಯವಿಲ್ಲ. ಉದಾಹರಣೆಗೆ ಕೌರವ ಮತ್ತು ಪಾಂಡವರ ನಡುವಿನ ಯುದ್ಧವನ್ನೇ ಇಲ್ಲದಂತೆ
ಮಹಾಭಾರತದ ರಚನೆ ಸಾಧ್ಯವಿದೆಯೇ? ಇಂತಹ ಸಂದರ್ಭದಲ್ಲಿ ಮಹಾಕವಿಗಳು ಕಾವ್ಯದ ನಡುವೆ ಆಗಾಗ
ಅವಶ್ಯಬಿದ್ದಲ್ಲಿ ಮದ್ಯಪ್ರವೇಶ ಮಾಡುತ್ತಾರೆ. ಆದರೆ ಔಚಿತ್ಯವನ್ನು ಮೀರುವುದಿಲ್ಲ. ಇರುವ
ಪಾತ್ರಗಳ ಮುಖಾಂತರವೇ ತಮ್ಮ ದರ್ಶನವನ್ನು ಪ್ರತಿಪಾದಿಸುತ್ತಾರೆ. ಅಗತ್ಯ ಬಿದ್ದಲ್ಲಿ
ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಗಮನಿಸಬೇಕು, ಇದೆಲ್ಲವೂ ಕಥೆಯ ಅಂದಗೆಡದಂತೆ
ಕಥಾಚೌಕಟ್ಟಿನಲ್ಲೇ ನೆಡೆಯುತ್ತವೆ.
ವಾಲ್ಮೀಕಿ ವಿರಚಿತ ರಾಮಾಯಣದ ಕಥೆ ಭಾರತೀಯರಿಗೆಲ್ಲಾ ಚಿರಪರಿಚಿತ. ಆದರೆ
ಸಾವಿರಾರು ಬಾರಿ ಮರು ಸೃಷ್ಟಿಗೊಂಡಿದೆ. ಇಪ್ಪತ್ತನೆಯ ಶತಮಾನದಲ್ಲಿ ಅದು ಕುವೆಂಪು
ಅವರಿಂದ ಶ್ರೀರಾಮಾಯಣ ದರ್ಶನಂ ಆಗಿ ಸೃಜಿಸಲ್ಪಟ್ಟಿದೆ. "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ
ಸೃಷ್ಟಿಪನೆ? ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ, ಕಥೆ ನಿನ್ನದಾದೊಡಂ, ನೀನೆ
ಮೇಣಾಶೀರ್ವದಿಸಿ ಮತಿಗೆ ಬೋಧವನಿತ್ತಡಂ, ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ
ಕಾವ್ಯದಾಕೃತಿಯಲ್ತೆ?" ಎಂದು ಕುವೆಂಪು ಕಾವ್ಯಾರಂಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಕಥೆ
ವಾಲ್ಮೀಕಿಯದೆ. ವಾಲ್ಮೀಕಿಯ ಆಶೀರ್ವಾದದಿಂದಲೇ ಈ ಕವಿ ತನ್ನ ದರ್ಶನ ಪ್ರತಿಪಾದನೆಗೆ
ಅದನ್ನು ಬಳಸುತ್ತಿದ್ದಾರೆ. ಅದಕ್ಕಾಗಿ ಹಲವಾರು ಸಂದರ್ಭಗಳನ್ನು ಹಲವಾರು ಪಾತ್ರಗಳನ್ನು
ಬಳಸಿದ್ದಾರೆ. ಜೊತೆಗೆ ಅವಕ್ಕೆಲ್ಲಾ ತಿಲಕವಿಟ್ಟಂತೆ "ಅನಲೆ" ಎಂಬ ಪಾತ್ರವನ್ನು ಹೊಸದಾಗಿ
ಸೃಷ್ಟಿಸಿದ್ದಾರೆ. ಇಲ್ಲಿ ಅನಲೆಯ ಪಾತ್ರದ ನಡೆ, ನುಡಿ, ಅವಳ ವೈಚಾರಿಕ ಚಿಂತನೆ,
ಕೌಟುಂಬಿಕ ವಾತ್ಸಲ್ಯ, ಸಮಷ್ಟಿಯ ಬಗೆಗಿನ ಕಾಳಜಿ ಎಲ್ಲವೂ ಕುವೆಂಪು ತಮ್ಮ ಜೀವಿತದ
ಉದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ಮೌಲ್ಯಗಳೇ ಆಗಿವೆ. ಅವುಗಳನ್ನು ಕವಿಯೇ ಕಾವ್ಯದ
ನಡುವೆ ಮಧ್ಯಪ್ರವೇಶಿಸಿ ಪ್ರತಿಪಾದಿಸುತ್ತಾ ಬಂದಿದ್ದರೆ ಔಚಿತ್ಯ ಮೀರಿ ಹೋಗುವ
ಅಪಾಯವಿದ್ದೇ ಇತ್ತು. ಅನಲೆಯ ಪಾತ್ರದ ಮುಖಾಂತಯರವೇ ಕವಿ ಪ್ರತಿಪಾದಿಸಿದ
'ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‍ವ್ಯೂಹರಚನೆಯಳ್' ಎಂಬ ಮೌಲ್ಯಕ್ಕೆ ಅನುಗುಣವಾಗಿ
ರಾಮಾಯಣದ ರಾವಣ, ವಿಭೀಷಣ, ಕುಂಭಕರ್ಣ ಅಷ್ಟೇ ಏಕೆ? ಸ್ವತಃ ರಾಮನೂ ಹೊಸದೊಂದು ರೂಪದಲ್ಲಿ
ಸಹೃದಯರಿಗೆ ದರ್ಶನವನ್ನೀಯುತ್ತಾನೆ. ಇಪ್ಪತ್ತನೆಯ ಶತಮಾನ ಗಾಂಧೀಜಿಯವರ ಯುಗ ಎಂಬುದನ್ನು
ಯಾರೂ ಅಲ್ಲಗಳೆಯಲಾರರು. ಅವರು ಪ್ರತಿಪಾದಿಸಿದ ಅಹಿಂಸೆ, ಕ್ಷಮಾಗುಣ ಇಂತಹ ಮೌಲ್ಯಗಳ
ಕಾವ್ಯಾತ್ಮಕ ಪ್ರತಿಪಾದನೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಆಗಿದೆ ಎಂಬುದಕ್ಕೆ
ನೂರಾರು ಉದಾಹರಣೆಗಳಿವೆ. ದಶರಥನು ನಡೆಸಬೇಕೆಂದು ಉದ್ದೇಶಿಸಿದ ಪುತ್ರಕಾಮೇಷ್ಠಿ ಯಾಗದ
ಸಿದ್ಧತೆಯ ಸಂದರ್ಭದಲ್ಲಿ ಪ್ರವೇಶ ಮಾಡುವ ಜಾಬಾಲಿ "ಪೂರ್ವಪದ್ಧತಿವಿಡಿದು ಮಾಳ್ಪ
ದಿಗ್ವಿಜಯ ಹಯಮೇಧ ಮೊದಲಾದುವಂ ತೊರೆದು, ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು,
ದೇವರ್ಕಳಂ ಪೂಜಿಸಲ್ ಮೆಚ್ಚುವುದು ಜಗವನಾಳುವ ಋತಂ........ ವಿಶ್ವಮಂ ಸರ್ವತ್ರ
ತುಂಬಿದಂತರ್ಯಾಮಿ ಚೇತನಂ ತಾಂ ಪ್ರೇಮಾತ್ಮವಾಗಿಇರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್............. ದೊರೆಗೊಳ್ಳಿತಕ್ಕೆ! ಎಂದು ಆ ಮಂದಿ
ಪರಸಲ್ಕೆ, ಪರಕೆಯದೆ ದೇವರಾಶೀರ್ವಾದಕೆಣೆ..." ಎಂದು ಮುಂತಾಗಿ ಹೇಳಿ ಅಹಿಂಸೆಯನ್ನು
ಪ್ರತಿಪಾದಿಸುತ್ತಾನೆ. ಇಲ್ಲಿ ಕವಿ ತಾನು ಹೇಳಬೇಕಾದ ಮೌಲ್ಯಗಳನ್ನು ಜಾಬಾಲಿಯ ಮುಖಾಂತರ
ಹೇಳಿಸುತ್ತಾರೆ.ಶತಶತಮಾನಗಳಿಂದಲೂ ರಾಮಾಯಣದ ಸಹೃದಯ ಓದುಗ (ವಿಮರ್ಶಕರ ವಿಷಯ ಬಿಟ್ಟುಬಿಡೋಣ) ಕೊನೆಗೆ ಸೀತೆ ಅಗ್ನಿಪ್ರವೇಶ ಮಾಡುವ ಸಂದರ್ಭಕ್ಕೆ ಬಂದಾಗ ಕಳವಳಗೊಳ್ಳುತ್ತಾನೆ. ರಾಮಭಕ್ತನಾದವನೂ ಒಂದುಕ್ಷಣ ರಾಮನನ್ನು ಅನುಮಾನಿಸುತ್ತಾನೆ. ರಾಮನ ನಡೆಯನ್ನು ಆ ಕ್ಷಣಕ್ಕಾದರೂ ಪ್ರಶ್ನಿಸುತ್ತಾನೆ. ರಾಮಾಯಣವನ್ನು ಶ್ರೀರಾಮಾಯಣ ದರ್ಶನವನ್ನಾಗಿಸ ಹೊರಟ ಕುವೆಂಪು ಅವರಿಗೆ ಈ ಪ್ರಶ್ನೆ ಸಹಜವಾಗಿ ಕಾಡುತ್ತದೆಯಲ್ಲವೆ? ಆದರೆ ಕಾವ್ಯದ ನಡುವೆ ಕವಿಯೇ ಈ ಪ್ರಶ್ನೆಯನ್ನು ಎತ್ತುವುದು ಔಚಿತ್ಯದ ಎಲ್ಲೆ ಮೀರಿದಂತೆ. ಅದಕ್ಕೆ ಪ್ರಶ್ನೆ ಎತ್ತಲು ಸಶಕ್ತ ಪಾತ್ರತವೊಂದರ ಅಗತ್ಯವಿರುತ್ತದೆ. ಏಕೆಂದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಪಾತ್ರ ಬಂದು ಅಂತಹ ಒಂದು ಪ್ರಶ್ನೆಯನ್ನು ಎತ್ತುವುದು ಅಸಂಗತ. ಅಂತಹ ಸಶಕ್ತ ಪಾತ್ರವನ್ನೇ ಕವಿ ಸೃಷ್ಟಿಸುತ್ತಾರೆ. ಆ ಪಾತ್ರವೇ ಅನಲೆ. ರಾವಣನ ಮಹಾಕುಟುಂಬದ ಮುದ್ದಿನ ಕೂಸು. ವಿಭೀಷಣನ ಶುದ್ಧಾಂತಕರಣದ ಪುತ್ಥಳಿ. ಕುಂಭಕರ್ಣನ ಹೂವಿನ ಚೆಂಡು! ಅನಲೆ ಎಂದು ಆ ಪಾತ್ರಕ್ಕೆ ಹೆಸರನ್ನಿಡುವುದರಲ್ಲೇ ಕವಿಯ ಮಹೋದ್ದೇಶ ಅರ್ಥವಾಗುತ್ತದೆ. ಅನಲ ಎಂದರೆ ಬೆಂಕಿ, ಅಗ್ನಿ ಎಂದರ್ಥ. ಭಾರತೀಯ ದರ್ಶನದ ಪ್ರಕಾರ ಅಗ್ನಿ ಪರಿಶುದ್ಧಕಾರಕ. (ಬದುಕಿನಲ್ಲಿ ಬೆಂದವನು ಬೇಂದ್ರೆಯಾಗುತ್ತಾನೆ!) ಇಲ್ಲಿ ಅನಲೆ ಪರಿಶುದ್ಧಕಾರಕಳಾಗಿದ್ದಾಳೆ. ಅವಳಿಂದ ರಾವಣತ್ವವನ್ನು ಆವಾಹಿಸಿಕೊಂಡಿದ್ದ ಪಾತ್ರಗಳು ರಾಮತ್ವವನ್ನು ಆವಾಹಿಸಿಕೊಳ್ಳುತ್ತವೆ. ಅನಲೆ ತನ್ನ ಸುತ್ತಲಿನವರನ್ನೆಲ್ಲಾ ಉದ್ಧಾರಪಥದತ್ತ ಕೊಂಡೊಯ್ಯುತ್ತಾಳೆ. ಇಲ್ಲಿನ ರಾವಣ, ಶೂರ್ಪನಖಿ, ಇಂದ್ರಜಿತು ಅವರಲ್ಲದೆ ರಾಮನ ಪಾತ್ರವೂ ಕೂಡಾ ಅನಲೆ ಎಂಬ ಒರೆಗಲ್ಲಿಗೆ ಉಜ್ಜಲ್ಪಡುತ್ತದೆ! ಹಾಗೆ ಸೃಷ್ಟಿಸಿದ ಪಾತ್ರವನ್ನು ಸಶಕ್ತವಾಗಿ ಬೆಳೆಸುತ್ತಾ ಹೋಗುವ ಕವಿ ಆಕೆಯ ಮುಖಾಂತರವೇ ರಾಮನ 'ಅಕಾರ್ಯ'ವನ್ನು ಪ್ರಶ್ನಿಸುತ್ತಾರೆ. ಆದ್ದರಿಂದ ಇಲ್ಲಿ ಅನಲೆ ಕವಿಯ ಪ್ರತಿನಿಧಿಯೂ ಹೌದು, ಸಹೃದಯ ಓದುಗರ ಪ್ರತಿನಿಧಿಯೂ ಹೌದು! ಅನಲೆಯ ಮನಸ್ಸಿನ ಮಾತು ಹೊರಬೀಳುವ ಮೊದಲೆ, ರಾಮನೂ ಅಗ್ನಿಪ್ರವೇಶ ಮಾಡಿಬಿಡುತ್ತಾನೆ, ಸೀತೆಯೊಂದಿಗೆ! (ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀ ಕೆ. ಸಚ್ಚಿದಾನಂದನ್ ಹೇಳುವಂತೆ, "ಇಲ್ಲಿ ಬರುವ ರಾಮ, ಸೀತೆಯೊಂದಿಗೆ ಅಗ್ನಿಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ.)
ಮುಂದಿನ ಐದು ಕಂತುಗಳಲ್ಲಿ 'ಅನಲೆ' ನಂದೊಂದ್ಮಾತಿನಲ್ಲಿ ವಿಹರಿಸಲಿದ್ದಾಳೆ!
ಈಗಾಗಲೇ ಅನಲೆಯ ಬಗ್ಗೆ ಗೊತ್ತಿರುವವರು, ಇದುವರೆಗೂ ಗೊತ್ತಿಲ್ಲದೇ ಇರುವವರು ಈ ಕಾವ್ಯಪಯಣದಲ್ಲಿ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ.
1 comment:
ತುಂಬಾ interesting ಆಗಿದೆ, ಮುಂದುವರೆಸಿರಿ ಸಾರ್.
Post a Comment