ನಮಗೆ ಅನಲೆಯೆ ದಿಟಂ!
ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ, ಸೀತೆಯನ್ನು ಭೇಟಿಯಾದಾಗ. ಆದರೆ ಅದು ನಮಗೆ ತಿಳಿಯುವುದು ಮಂಡೋದರಿ-ರಾವಣರ ನಡುವೆ ನಡೆಯುವ ಸಂಭಾಷಣೆಯ ಮೂಲಕ. ಅವರಿಬ್ಬರ ಸಂಭಾಷಣೆಯ ನಡುವೆಯೂ ’ಅನಲೆ’ ಎಂಬ ಹೆಸರು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ. ರಾವಣನ ಮನಸ್ಸನ್ನು ಆರ್ದ್ರವಗೊಳಿಸುತ್ತದೆ. ’ಸೀತೆಯನ್ನು ಒಬ್ಬನೇ ಹೋಗಿ ಕಂಡಿದ್ದೇಕೆ?’ ಎಂದು ಮಂಡೋದರಿ ಕಳವಳಗೊಳ್ಳುತ್ತಾಳೆ. ಸೀತೆಯ ರಕ್ಷಣೆಗೆ ಆಕೆಯೂ ತಪೋರಕ್ಷೆಯನ್ನು ಕಟ್ಟಿದ್ದಾಳೆ. ಆಕೆಯ ಕಳವಳವನ್ನು ನಿವಾರಿಸುತ್ತ ರಾವಣ, ’ಇಂದ್ರಜಿತುವಿನ ಮಾಯೆಗೆ ಸಿಲುಕಿ ರಾಮಲಕ್ಷ್ಮಣ ಸಹಿತ ಕಪಿಸೇನೆಗೆ ಆದ, ಹಿಂದಿನ ದಿನದ ಸೋಲನ್ನು ಹೇಳಲು ಹೋಗಿದ್ದೆ. ಅಲ್ಲಿ ತ್ರಿಜಟೆಯಿದ್ದಳು, ಅನಲೆಯಿದ್ದಳು’ ಎನ್ನುತ್ತಾನೆ. "ಪೇಳ್ದಳ್ ಎನಗೆ ಅನಲೆ ಬೇರೊಂದು ಕಥೆಯಂ" ಎಂದು ಮಂಡೋದರಿ ಅನಲೆಯ ಮಾತೆತ್ತಿದಾಗ, ರಾವಣ ಸಿಡಿಮಿಡಿಗೊಳ್ಳುವುದಿಲ್ಲ; ಬದಲಾಗಿ ತನ್ನ ಹೃದಯವನ್ನೇ, ಮನದಕುದಿತವನ್ನೇ ಮಂಡೋದರಿಯ ಮುಂದೆ ತೆರೆದಿಡುತ್ತಾನೆ. ಹಿಂದಿನ ರಾತ್ರಿ ತನಗೆ ಬಿದ್ದಿದ್ದ ಕನಸು, ಅದರಲ್ಲಿ ’ವೇದವತಿ’ ಚಿತೆಗೆ ಬಿದ್ದದ್ದು, ನೋಡುತ್ತಾ ನೋಡುತ್ತಾ ಆ ವೇದವತಿಯೇ ಸೀತೆಯಂತೆ ಕಂಡಿದ್ದು ಅದರಿಂದ ತನಗಾದ ನಡುಕ ಎಲ್ಲವನ್ನೂ ಹೇಳುತ್ತಾನೆ. ಆ (ಸೀತೆಯೂ ಸತ್ತುಹೋದಳೆ ಎಂಬ) ಭಯದಿಂದಲೇ ಬೆಳಿಗ್ಗೆ ಆತ ಅಶೊಕವನಕ್ಕೆ ಹೋಗಿ ಮನಸ್ಸಿನ ಕಳವಳವನ್ನು ದೂರಮಾಡಿಕೊಂಡಿರುತ್ತಾನೆ, ರಾವಣ. ಆಗ, ಮಂಡೋದರಿ ’ಅದು ನಿನ್ನಂತರಾತ್ಮದ ಶುದ್ಧ ಸಂದೇಶ, ಅದನ್ನು ದಿಕ್ಕರಿಸದಿರು’ ಎಂದು ಹೇಳುತ್ತ, ಅನಲೆ ತನಗೆ ಹೇಳಿದ್ದ ಘಟನೆಯನ್ನು ’ಅದು ನಿಮ್ಮ ಕನಸಿಗಿಂತ ಮಿಗಿಲು’ ಎಂದು ಕೆಳಗಿನಂತೆ ಹೇಳುತ್ತಾಳೆ.
ತ್ರಿಜಟೆ ತನ್ನ ಕೈಂಕರ್ಯಮಂ ಮುಗಿಸಿ ಮಲಗಿದಳಂತೆ.ಪತಿಯ, ಮೈದುನನ, ಮತ್ತವರ ಸೈನ್ಯಕ್ಕೆ ತಪೋರಕ್ಷೆ ಕಟ್ಟುವುದನ್ನು ಬಿಟ್ಟು ಸೀತೆ ಬೇರೆನನ್ನೂ ಮಾಡಲಾರಳು. ಅವಳೇ ಹೇಳಿದಂತೆ, ಅವಳು ಅಸ್ವತಂತ್ರಳು. ಆದರೆ ತಪಕೆ ಬಂಧನದ ಭೀತಿಯಿಲ್ಲ! (ತಪಸ್ಸು ಎಂಬುದನ್ನು ’ಸತ್ಯ-ಅಹಿಂಸೆ’ಗೆ ಅನ್ವಯಿಸಿಕೊಂಡರೆ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿಯ ಮಾರ್ಗವೂ ಇದೇ ಆಗಿತ್ತು ಅನ್ನಿಸುತ್ತದೆ). ಆ ಕ್ಷಣ, ಸೀತೆ ಅಲೌಕಿಕ ಸ್ಥಿತಿಯಲ್ಲಿದ್ದ ಹೊತ್ತು, ಅತ್ತ ರಾಮಸೈನ್ಯಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ರಾಮನ ಜೀವಕ್ಕೆ ಬಂದ ಆಪತ್ತು ದೂರವಾಗಿತ್ತು. ಅದಕ್ಕೆ ಅನಲೆಯ ತಂದೆ ವಿಭೀಷಣನ ಸಹಾಯ ಹಸ್ತವಿತ್ತು. ಅದನ್ನೇ ಸೀತೆ ಅನಲೆಗೆ ಹೇಳಿದ್ದಾಳೆ. ಅನಲೆ ತಾನು ಕಂಡದ್ದನ್ನು ಮಂಡೋದರಿಗೆ ಹೇಳುವಲ್ಲಿಯೂ, ಮಂಡೋದರಿ ರಾವಣನಿಗೆ ಹೇಳುವಲ್ಲಿಯೂ, ಅನಲೆ-ಮಂಡೋದರಿಯರ ರಾವಣೋದ್ಧಾರದ ತುಡಿತವನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನೆ ತಿರುಚಿ, ರಾವಣನನ್ನು ಕೆರಳಿಸುವಂತೆ ಹೇಳಿ ಆತನ ಮೆಚ್ಚುಗೆ ಪಡೆಯುವವರಾಗಿದ್ದರೆ ಹಾಗೆ ಮಾಡಬಹುದಿತ್ತೇನೊ? ಆದರೆ ಅವರಿಬ್ಬರೂ ರಾವಣನ ಆತ್ಮೋದ್ಧಾರವೇ ತಮ್ಮ ಉದ್ಧಾರವೆಂದು ಭಾವಿಸಿದವರಾಗಿದ್ದಾರೆ. ಈ ವಿಷಯವನ್ನು ಅನಲೆಯಲ್ಲದೆ ಬೇರೆಯವರು ಹೇಳಿದ್ದು ಎಂದಿದ್ದರೆ ರಾವಣನ ಪ್ರತಿಕ್ರಿಯೆ ಹೇಗಿರುತ್ತಿತ್ತೊ? ಏನೊ? ಆದರೆ ಅನಲೆಯ ಹೆಸರೇ ಆತನನ್ನು, ಆತನ ಚಿಂತನಾಶಕ್ತಿಯನ್ನು ಮತ್ತೆ ಮತ್ತೆ ಊರ್ಧ್ವಮುಖಿಯನ್ನಾಗಿಸುತ್ತದೆ. ತಾನು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸದೆಯೂ, ಅನಲೆಯ ಮೇಲಿನ ತನ್ನ ಪ್ರೇಮವನ್ನು ಕಡಿಮೆ ಮಾಡಿಕೊಳ್ಳದೆಯೂ, ಆಕೆಯ ವರದಿಗೆ ರಾವಣ ಕೆಳಗಿನಂತೆ ಪ್ರತಿಕ್ರಿಯಿಸುತ್ತಾನೆ.
ದೇವಿ ಕಣ್ಮುಚ್ಚದೆಯೆ ಭೀಷ್ಮ ಮೌನವನಾಂತು
ತನ್ನೊಳಗೆ ತಾಂ ಪೊಕ್ಕ ಯೋಗಿನಿವೋಲಿರಲ್
ಕಂಡುದು ಅನಲೆಯ ಕಣ್ಗೆ ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳ್
ಆರೊ ನುಡಿಸಿದವೊಲಾಗಿ ಸಂವಾದಮಂ.
ಆ ಪೂಜ್ಯೆ ಅಲ್ಲಿರ್ದುಂ ಎಲ್ಲೆಲ್ಲಿಯುಂ ಚರಿಸುತಿರ್ದಂತೆ,
ಅಲ್ಲಿರ್ದುಂ ಎಲ್ಲಮಂ ಕಾಣುತಿರ್ದಂತೆ,
ಮೇಣ್ ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ ದೂರಮಿರ್ದು
ಇತರರ ಜಗತ್ ಕ್ರಿಯಾಚಕ್ರಮಂ ನಡೆಪವೋಲ್ ಆಚರಿಸುತಿರ್ದಳಂ
ಕಂಡು ಅನಲೆ ಮೆಯ್ಮರೆತಳಂತೆ ಭಯರಸವಶೆ!
ಅನಂತರಂ ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ’ಅಭೀತಯಾಗಲೆ ವತ್ಸೆ, ನೀಂ ಕಂಡ ದೈವಿಕಕೆ.
ನಿನ್ನಯ್ಯನುಪಕೃತಿಗೆ ಬರ್ದುಕಿತೌ ನನ್ನಯ್ದೆದಾಳಿ.
ಕಂಟಕಮೊಂದು ಕಳೆದುದೌ ಪ್ರಭು ರಾಮಚಂದ್ರಂಗೆ!’
ಎನುತೆ ಸಂತೈಕೆಯಂ ಪೇಳ್ದ
ಪಾವನೆಯ ಪದತಲಕೆ ನಮಿಸಿದಳಂತೆ ನಮ್ಮ ಅನಲೆ!
ಅನಲೆ!ರಾವಣನ ಈ ಮಾತುಗಳಲ್ಲಿ ಅನಲೆಯ ಬಗ್ಗೆ ಆತನಿಗಿದ್ದ ಪ್ರೀತಿ ಅತ್ಯಂತ ಸ್ಫುಟವಾಗಿ ವ್ಯಕ್ತವಾಗಿದೆ. ಅಂತಹ ಸುದ್ದಿಯನ್ನು ತಂದು ಮಂಡೋದರಿಗೆ ಹೇಳಿದ್ದಕ್ಕೆ ಅನಲೆಯ ಮೇಲೆ ಆತನಿಗೆ ಕೋಪ ಬರುವುದಿಲ್ಲ. ಅದೊಂದು ಹುಡುಗಾಟಿಕೆ ಅನ್ನಿಸಿದೆ ಎನ್ನುವಂತೆ ಆಕೆಯ ಬಗ್ಗೆ ಮಾತನಾಡುತ್ತಾನೆ. ’ದ್ರೋಹಿಗಳ್’ ಎನ್ನುವಲ್ಲಿಯೂ ಕಾಠಿಣ್ಯದೊರತೆಯಿಲ್ಲ! ಅನಲೆ ಹೇಳಿದ್ದಕ್ಕಿಂತ, ಅದನ್ನು ನಂಬಿರುವ ಮಂಡೋದರಿಯ ಬಗ್ಗೆಯೇ ಆತನಿಗೆ ಹೆಚ್ಚು ಆಕ್ಷೇಪಣೆ ಇದ್ದಂತೆ ಕಾಣುತ್ತದೆ! ಆಕೆಯನ್ನು ’ಅಣುಗಿ’ ಎಂದು ಕರೆದಿರುವುದರಲ್ಲೂ ರಾವಣನ ಮನಸ್ಸನ್ನು ಓದಿಕೊಳ್ಳಬಹುದು. ಆದರೆ, ರಾವಣ ರಾಜನೂ ಹೌದು; ಚತುರನೂ ಹೌದು. ಅದಕ್ಕೆ ಆತನ ಅಂತರಂಗ, ಕೇವಲ ಆಕೆಯ ಮಾತುಗಳನ್ನು ಕಟ್ಟುಕತೆಯೆಂದು ನಿರಾಕರಿಸುವುದಿಲ್ಲ, ಅದರ ಪರಿಣಾಮಗಳನ್ನು ಚಿಂತಿಸುತ್ತಾನೆ. ’ನಮಗೆ ಅನಲೆಯೆ ದಿಟಂ’ ಎಂಬ ಮಾತಿನಲ್ಲಿ ಅದು ವ್ಯಕ್ತವಾಗಿದೆ. ಅನಲ ಎಂದರೆ ಅಗ್ನಿ, ಬೆಂಕಿ ಎಂದರ್ಥ. ಅಗ್ನಿ ಸೃಷ್ಟಿ-ನಾಶ ಎರಡಕ್ಕೂ ಸಂಬಂಧಿಸಿದ್ದಲ್ಲವೆ? ಇಲ್ಲಿ ರಾವಣನ ಮಾತನ್ನು ಎರಡೂ ಅರ್ಥದಲ್ಲಿಯೂ ಗಮನಿಸಬಹುದು. ತಮ್ಮೊಳಗಿನ ದುಷ್ಟತೆಯನ್ನು, ಅಳುಕನ್ನು, ಕೊಳಕನ್ನು ನಾಶಪಡಿಸುವುದರಿಂದಲೂ ಆಕೆ ಅಗ್ನಿ; ನಮ್ಮ ಆತ್ಮೋದ್ಧಾರಕ್ಕಾಗಿಯೇ ಆಕೆಯ ಪ್ರಯತ್ನವಿರುವುದರಿಂದಲೂ ಆಕೆ ಅಗ್ನಿ! ’ಎನ್ನ ಮಗಳ್ ಇವಳ್’ ಎಂದು ಅಭಿಮಾನದಿಂದ ರಾವಣ ಹೇಳಿದ ಮಾತಿಗೆ ಸಾಕ್ಷಿಯೊದಗಿಸುವಂತೆ ಬಂದಿವೆ ಮೇಲಿನ ಮಾತುಗಳು. ಮುಂದೆ ಚಾರನೊಬ್ಬ ಬಂದು, ಅಂದಿನ ಯುದ್ಧದ ವಾರ್ತೆಯನ್ನು, ತಮಗೊದಗಿರುವ ಯಶಸ್ಸನ್ನು ತಿಳಿಸುತ್ತಾನೆ. ರಾವಣ, ಮಂಡೋದರಿಯನ್ನು ನೋಡಿ ವಿಜಯದ ನಗೆ ಬೀರುತ್ತಾನೆ. ತಾನು ಅಲ್ಲಿಂದ ಹೊರಡುವ ಮುಂಚೆ ಮಂಡೋದರಿಗೆ ಆತ ಹೇಳುವ ಮಾತುಗಳಿವು.
ನಮಗೆ ಅನಲೆಯೆ ದಿಟಂ!
ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!
ಇರ್ವರುಂ ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್
ನೋಡಿಬರುವಾಸೆಗೆ ಆಣತಿಯಿತ್ತೆನ್ ಒಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್!
ಕಟ್ಟು ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ, ಮತಿಗೆಟ್ಟು ನಂಬುವಳ್;
ನಂಬಿಸುವಳ್ ಇತರರಂ; ಪೆಣ್ಗಳೊಳ್ ಪ್ರಕಟಿಸುವಳ್ ಅಪಧೈರ್ಯಮಂ!
ಆ ಅಣುಗಿ ಬೆಪ್ಪಾಡಿದುದನೆಲ್ಲಮಂ ನೀನುಂ ಒಪ್ಪಿದೆಯಲಾ, ಅದೆ ಸೋಜಿಗಂ!
ನಿನ್ನೆ ಬದುಕಿದನಲಾ ಶತ್ರು; ಇಂದಿನ ರಣದಿ ಕಾಣ್ಬೆ
ನಿನ್ನ ತಲೆಗೆಟ್ಟ ಅನಲೆಯಾ ಕಟ್ಟಿರ್ಪ ಕತೆಯ ಪೊಳ್ಳಂ.
ಸೀತೆಯಂ ಸಾಯದವೊಲ್ರಾಮನ ಪಡೆಗೆ, ತನ್ಮೂಲಕ ರಾಮನಿಗೆ ಸೋಲಾದರೆ ಸೀತೆ ಬದುಕುವುದಿಲ್ಲ ಎಂಬ ಭಯ ಆತನಿಗಿದೆ. ಸೀತೆ ಸಾಯುವುದು ಆತನಿಗೆ ಬೇಕಿಲ್ಲ. ಏಕೆಂದರೆ, ಆತನ ಮುಂದಿನ ಬಟ್ಟೆ ಈಗಾಗಲೇ ನಿರ್ಧಾರವಾಗಿಬಿಟ್ಟಿದೆ. ರಾವಣ ಬದಲಾಗಿದ್ದಾನೆ ಎಂಬುದಕ್ಕೆ, ಹಾಗೂ ತನ್ನ ಕಾರ್ಯಸಿದ್ಧಿಗೆ ಅನಲೆಯನ್ನೇ ಆಶ್ರಯಿಸಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿವೆ, ಈ ಮಾತುಗಳು.
ಎಂತಾದಡಂ ಪೊರೆಯವೇಳ್ಕುಂ
ಆ ಅನಲೆಗೆ ಎನ್ನಾಜ್ಞೆಯಂ ಪೇಳ್, ದೇವಿ.
ಇನ್ನೆನಗೆ ರಣದ ಮೋಹವೆ ಮೋಹಂ
ಆ ಜಾನಕಿಯ ಮೇಲೆ ಮುನ್ನಿರ್ದ ಮೋಹಮೆಲ್ಲಂ
ತಿರುಗಿಹುದು ರಣದ ಮಧುರತರ ಸಾಹಸಕೆ!
[ನಾಳೆ : ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!]
1 comment:
ಅನಲೆಯ ಮುಂದುವರೆದ ಭಾಗವು ಎಂದಿನ ನಿಮ್ಮ ಸರಳ ಶೈಲಿಯಿಂದ ನಮ್ಮ ಮನಸ್ಸನ್ನು ಗೆದ್ದಿತು.
ಮುಂದುವರೆಸಿರಿ...
Post a Comment