೧೯೨೦ರ ಸುಮಾರು. ಮಹಾತ್ಮ ಗಾಂಧಿಜಿಯವರು ಕರೆಕೊಟ್ಟಿದ್ದ ಅಸಹಕಾರ ಚಳುವಳಿ ದೇಶದ
ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿತ್ತು. ಅದರ ಬಿಸಿ ಮೈಸೂರಿಗೂ ತಗುಲಿ, ಅದರ
ಪ್ರಚಾರಕ್ಕಾಗಿ ಗೌರೀಶಂಕರ ಮಿಶ್ರ ಎಂಬುವವರು ಮೈಸೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ
ನಡೆದ ವಿದೇಶಿ ವಸ್ತ್ರದಹನ ಘಟನೆಗೆ, ಮೈಸೂರು ರೂಪಿಸಿದ ಇಬ್ಬರು ಮಹಾನ್ ಬರಹಗಾರರು, ತಮ್ಮ
ಬಾಲ್ಯದಲ್ಲಿ ಸಾಕ್ಷಿಯಾಗಿದ್ದರೆ!? ಒಬ್ಬರು ತಮ್ಮ ಆತ್ಮಚರಿತ್ರೆಯಲ್ಲೇ ಅದನ್ನು
ದಾಖಲಿಸಿದ್ದರೆ, ಇನ್ನೊಬ್ಬರು ತಮ್ಮ ಸೃಜನಶೀಲ ಕೃತಿಯೊಂದರಲ್ಲಿ ಅದನ್ನು ಒಂದು ಘಟನೆಯಾಗಿ
ಚಿತ್ರಿಸಿದ್ದಾರೆ. ಒಬ್ಬರು ಇಂಗ್ಲಿಷಿನಲ್ಲಿ ಆರಂಭಿಸಿ ಕನ್ನಡದಲ್ಲಿ ಬರೆದವರಾದರೆ,
ಇನ್ನೊಬ್ಬರು ಇಂಗ್ಲೀಷಿನಲ್ಲಿಯೇ ಬರೆದವರು! ಹೌದು, ಕೆಲವರಾದರೂ ಊಹಿಸಿರುವಂತೆ ಅವರು
ಕುವೆಂಪು ಮತ್ತು ಆರ್.ಕೆ.ನಾರಾಯಣ್. ಆ ಘಟನೆ ನಡೆದ ಸಂದರ್ಭದಲ್ಲಿ ಕುವೆಂಪು ಅವರು
ಸುಮಾರು ಹದಿನಾರು ವರ್ಷದವರಾಗಿದ್ದರೆ, ಆರ್.ಕೆ. ನಾರಾಯಣ ಅವರಿಗೆ ಹದಿನಾಲ್ಕು
ವರ್ಷದವರಾಗಿದ್ದರು.
ಕುವೆಂಪು ಅವರು ತಮ್ಮ ನೆನಪಿನ ದೋಣಿಯಲ್ಲಿ ಬರೆದುಕೊಂಡಿರುವಂತೆ, ಘಟನೆ ನಡೆದಾಗ ಅವರು
ನಾಲ್ಕನೆಯ ಫಾರಂ (ಹೈಸ್ಕೂಲಿನ ಮೊದಲನೆಯ ವರ್ಷದ) ವಿದ್ಯಾರ್ಥಿಯಾಗಿದ್ದರು. ಅಂದು
ಶಾಲಾಮಕ್ಕಳು ಸಮೂಹ ಸನ್ನಿಗೊಳಗಾದವರಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ
ತುದಿಯಲ್ಲಿ ಶ್ರೀ ಗೌರೀಶಂಕರ ಮಿಶ್ರ ಅವರ ಭಾಷಣ. ಇಂಗ್ಲೀಷಿನಲ್ಲಿದ್ದ ಅವರ ಉಗ್ರವಾದ
ಭಾಷಣ ಕೇಳಿದವರೆಲ್ಲರೂ ನಿಬ್ಬೆರಗಾದರು. ಕೇವಲ ಕಾಟಾಚಾರಕ್ಕೊ, ಹುಡುಗಾಟಿಕೆಗೊ
ಮೆರವಣಿಗೆಯಲ್ಲಿ ಸಾಗಿಬಂದಿದ್ದ ಹುಡುಗರಿಗೆಲ್ಲರಿಗೂ ರೋಮಾಂಚನ. ’ಗಂಡು ಕಣೊ ಅವನು!
ಇಷ್ಟೊಂದು ಪೋಲೀಸರು ಸುತ್ತಮುತ್ತ ಇರುವಾಗ ಮಹಾರಾಜತರನ್ನು ಬಿಡದೆ ತರಾಟೆಗೆ
ತಗೊಳ್ತಿದಾನಲ್ಲ’ ಎಂದು ಕೆಲವರೆಂದರೆ ’ಭಾಷಣಕಾರರನ್ನು ದಸ್ತಗಿರಿ ಮಾಡದೆ ಬಿಡುವುದಿಲ್ಲ’
ಎಂದು ಕೆಲವರು ವಾದಿಸುತ್ತಿದ್ದರು. ಅಷ್ಟರಲ್ಲಿ ಭಾಷಣ ಸಭೆ ಎರಡೂ ಒಮ್ಮೆಲೆ
ಬರಕಸ್ತಾಗಿಬಿಟ್ಟವು. ಕೊನೆಗೆ ತಿಳಿದ ಕಾರಣವೆಂದರೆ, ಸಾರ್ವಜನಿಕ ಸ್ಥಳದಲ್ಲಿ
ರಾಜದ್ರೋಹಕವಾದ ಭಾಷಣ ಮಾಡಬಾರದು ಎಂಬುದು!
ಹುಡುಗರೊಳಗೆ ಅದೆಂತದೊ ಒಂದು ರೀತಿಯ ಕಿಚ್ಚು ಹಚ್ಚಿದಂತಾಗಿತ್ತು. ಭಾಷಣ ಇನ್ನೂ
ಬೇಕಾಗಿತ್ತು ಅಂದುಕೊಳ್ಳುತ್ತಿರುವಾಗಲೇ, ಮಿಶ್ರ ಅವರು ತಮ್ಮ ಭಾಷಣವನ್ನು ತಾವು
ಇಳಿದುಕೊಂಡಿರುವ ಖಾಸಗಿ ಸ್ಥಳದಲ್ಲಿಯೇ ರಾತ್ರಿ ಒಂಭತ್ತು ಗಂಟೆಗೆ ಮುಂದುವರೆಸುತ್ತಾರೆ
ಎಂಬ ಸುದ್ದಿ ಹಬ್ಬಿತು. ರಾತ್ರಿ ೯ಕ್ಕೆ ಸರಿಯಾಗಿ ಭಾಷಣ ಆರಂಭವಾಯಿತು. ಮಹಾರಾಜ ಕಾಲೇಜಿನ
ಹುಡುಗರೆಲ್ಲಾ ಅಲ್ಲಿ ತುಂಬಿದ್ದರು. ಗೌರೀಶಂಕರ ಮಿಶ್ರರ ಉಗ್ರಭಾಷಣ ನಿರರ್ಗಳವಾಗಿ
ಸಾಗಿತ್ತು. ಕುವೆಂಪು ವಾರಗೆಯ ಕೆಲವರು ಏನೊ ಒಂದು ಮಹತ್ ಘಟನೆ ನಡೆಯಲಿದೆಯೆಂದು ಕಾದು
ನಿಂತಿದ್ದರು.
ಭಾಷಣದ ಕೊನೆಯಲ್ಲಿ, ವೇದಿಕೆಯ ಮುಂದೆ ’ಬಾನ್ ಪೈರ್’ ಹೆಸರಿನಲ್ಲಿ ಅಗ್ನಿ
ಪ್ರಜ್ವಲಿಸಿತು. ಅಲ್ಲಿಸೇರಿದ್ದವರೆಲ್ಲಿ ಹಲವಾರು ಜನರು ತಮ್ಮ ತಮ್ಮ ಕೋಟು
ಟೋಪಿಗಳನ್ನೆಲ್ಲಾ ಬಿಚ್ಚಿ ಬೆಂಕಿಗೆ ಎಸೆಯಲಾರಂಭಿಸಿದರು. ಒಳಗೆ ಚೆಡ್ಡಿ ಹಾಕಿದ್ದ
ಕೆಲವರು ತಮ್ಮ ಪ್ಯಾಂಟುಗಳನ್ನೂ ಬಿಚ್ಚಿ ಎಸೆದು ತಮ್ಮ ದೇಶಭಕ್ತಿಯನ್ನು
ಪ್ರದರ್ಶಿಸಿಬಿಟ್ಟರು. ಕೆಲವರು ಬೇರೆಯವರ ತಲೆಯ ಮೇಲಿದ್ದ ಟೋಪಿಗಳನ್ನೂ ಕಿತ್ತು ಕಿತ್ತು
ಬೆಂಕಿಗೆ ಹಾಕಲಾರಂಭಿಸಿದರು. ಕೆಲವರು ಮುಂಜಾಗ್ರತೆಯಾಗಿ ಟೋಪಿಗಳನ್ನು
ಬಚ್ಚಿಟ್ಟುಕೊಂಡರು. ಅಂತವರಿಗೆ ದೇಶದ್ರೋಹಿ ಎಂಬ ಬಿರುದನ್ನೂ ಕೆಲವರು ದಯಪಾಲಿಸಿದರು.
ಬಗೆ ಬಗೆಯ ಟೋಪಿ, ಕೋಟು, ಪ್ಯಾಂಟು, ಬೂಟುಗಳನ್ನು ಬೆಂಕಿಗೆ ಎಸೆಯುತ್ತಿರುವವರ ನಡುವೆ,
ಗಾಂಧಿಯವರು ಕರೆಕೊಟ್ಟಂತೆ ವಿದೇಶೀ ವಸ್ತ್ರದಹನವೂ ದೇಶಭಕ್ತಿಯ ಒಂದು ಪ್ರಧಾನ
ಲಕ್ಷಣವೆಂದು ಭಾವಿಸಿದವರ ಎದುರಿಗೆ ನಾನು ’ಕರಿಕುರಿ’ ಎನ್ನಿಸಿಕೊಳ್ಳಲಾದೀತೆ ಎನ್ನಿಸಿ,
ಬಾಲಕಪುಟ್ಟಪ್ಪನೂ ತನ್ನ ಟೋಪಿಗೆ ಬೆಂಕಿಯ ದಾರಿ ತೋರಿಸಿದರು. ಇದ್ದ ಒಂದು ಟೋಪಿಯೂ
ಬೆಂಕಿಯಲ್ಲಿ ಕರಗಿ ಹೋಗುತ್ತಿರುವುದನ್ನು ಆತಂಕದಿಂದ ನೋಡುತ್ತಿದ್ದ ಅವರಿಗೆ ಕೋಟನ್ನೂ
ಎಸೆಯುವಂತೆ ಬಂದ ’ಆಜ್ಞೆ’ಯನ್ನು ತಪ್ಪಿಸಲೂ ಆಗದೆ ಹಿಂದು ಮುಂದು ನೋಡುತ್ತಿದ್ದಾಗ,
ಹುಡಗರೇ ಕೋಟಿಗೂ ಟೋಪಿಯ ಹಾದಿಯ್ನನೇ ತೋರಿದರು. ದುರಂತವೆಂದರೆ ಅವರ ಬಳಿಯಿದ್ದುದ್ದು
ಅದೊಂದೇ ಕೋಟು ಮತ್ತು ಟೋಪಿ!
ಮಾರನೆಯ ದಿನ ಕೋಟು ಟೋಪಿಯಿಲ್ಲದೆ ಶಾಲೆಗೆ ಬಂದಾಗ ಪುಟ್ಟಪ್ಪನಿಗೆ ಕಂಡಿದ್ದು,
ನೆನ್ನೆ ಬೆಂಕಿಗೆ ಕೋಟು ಟೋಪಿ ಎಸೆದಿದ್ದ ಸಹಪಾಠಿಗಳೆಲ್ಲಾ, ಎಸೆದವುಗಳಿಗಿಂತ ಬಹಳ
ಚೆನ್ನಾದ, ವಿದೇಶಿ ವಸ್ತ್ರಗಳಿಂದ ಮಾಡಿದ ಕೋಟು ಟೋಪಿಗಳನ್ನು ತೊಟ್ಟು ಬಂದಿದ್ದರು!
ಆದರೆ, ಅದಕ್ಕೆ ಅನುಕೂಲ ಇರದಿದ್ದ ಇವರು ಮತ್ತು ಕೆಲವರು ಮಾತ್ರ ಅಂದಿನಿಂದ ಗಾಂಧಿ ಟೋಪಿ
ಮತ್ತು ಖಾದಿ ಬಟ್ಟೆಗಳನ್ನೆ ತೊಡುವ ವ್ರತ ಕೈಗೊಂಡು ಸಮಾಧಾನ ಮಾಡಿಕೊಂಡರು.
ಈಗ, ಆರ್.ಕೆ.ನಾರಾಯಣರ ’ಸ್ವಾಮಿ ಮತ್ತು ಅವನ ಸ್ನೇಹಿತರು’ (ಅನು:
ಎಚ್.ವೈ.ಶಾರದಾಪ್ರಸಾದ್) ಕೃತಿಗೆ ಬರೋಣ. ಇದೊಂದು ಭಾರತೀಯ ಇಂಗ್ಲಿಷ್ ಲೇಖಕರ
ಕೃತಿಗಳಲ್ಲಿ ಅತ್ಯಂತ ವಿಭಿನ್ನವೂ ಉನ್ನತವೂ ಆದ ಕೃತಿ. ೧೯೩೦ ಆಗಸ್ಟ್ ೧೫ನೆಯ ತಾರೀಖಿನ
ದಿನ ಮಾಲ್ಗುಡಿಯ ಸರಯೂ ನದಿಯ ದಡದಲ್ಲಿ ಗೌರೀಶಂಕರರ ಸಲುವಾಗಿ ತಮ್ಮ ಪ್ರತಿಭಟನೆಯನ್ನು
ವ್ಯಕ್ತಪಡಿಸುವ ಉದ್ದೇಶದಿಂದ ಸಭೆ ಸೇರಿರುತ್ತಾರೆ. ಇದೊಂದು ಸೃಜನಶೀಲ
ಕೃತಿಯಾಗಿರುವುದರಿಂದ ಕಾಲಸೂಚಕವನ್ನು ಪಕ್ಕಕ್ಕಿಟ್ಟುಬಿಡೋಣ. ಸಭೆಯಲ್ಲಿ ಗೌರೀಶಂಕರರಿಗೆ
ಬೆಂಬಲ ಸೂಚಿಸಿ ಭಾಷಣ ಮಾಡುತ್ತಿದ್ದವ ತನ್ನ ವಾಕ್ ಪ್ರೌಢಿಮೆಯಿಂದ ಎಲ್ಲರ ಮೇಲೂ ಪ್ರಭಾವ
ಬೀರಿದ್ದನು. ’ಪ್ರತಿಯೊಬ್ಬ ಭಾರತೀಯನೂ ಬಾಯಿತುಂಬ ಎಂಜಲು ತುಂಬಿಕೊಂಡು ಇಂಗ್ಲೆಂಡಿನ
ಮೇಲೆ ಉಗಳಲಿ. ಆ ಜೊಲ್ಲಿನ ಸಮುದ್ರದಲ್ಲಿ ಇಂಗ್ಲೆಂಡ್ ಮುಳುಗಿ ಹೋಗುತ್ತದೆ’ ಎಂಬ
ಮಾತುಗಳಿಂದ ಮತ್ತೇರಿದವನಂತೆ ಸ್ವಾಮಿನಾಥ ಎಂಬ ಬಾಲಕ (ಕೃತಿಯ ನಾಯಕ ಪಾತ್ರಧಾರಿಯೂ ಹೌದು)
’ಗಾಂಧೀಕಿ ಜೈ’ ಎಂದು ಕೂಗು ಹಾಕುತ್ತಾನೆ. ಸುಮ್ಮನಿರುವಂತೆ ತಿವಿದ ಸ್ನೇಹಿತ ಮಣಿಗೆ
’ಎಂಜಲುಗಿದು ಪರಂಗಿಯವರನ್ನು ಮುಳುಗಿಸೋದು ನಿಜವಾ?’ ಎಂದು ಕೇಳಿ ಫುಲಕಿತನಾಗುತ್ತಾನೆ.
ಭಾಷಣದ ಕೊನೆಯಲ್ಲಿ ವಿದೇಶಿ ವಸ್ತುಗಳ ಬಹಿಷ್ಕಾರದ ಪ್ರತಿಜ್ಞೆ ನೆಡೆಯುತ್ತದೆ.
ಸ್ವಾಮಿನಾಥ ಮ್ಯಾಂಚೆಸ್ಟರ್ ಮತ್ತು ಲ್ಯಾಂಕಷೈರಿನ ಬಟ್ಟೆಗಳನ್ನು ಕೈಯಿಂದ ಮುಟ್ಟುವುದೇ
ಇಲ್ಲವೆಂದು ಶಪಥ ಮಾಡುತ್ತಾನೆ.
ಅಷ್ಟಕ್ಕೂ ಅವರನ ಚೇತನ ಸಮಾಧಾನ ಹೊಂದುವುದಿಲ್ಲ. ತಾನು ಹಾಕಿಕೊಂಡಿರುವ ಬಟ್ಟೆ
ಯಾವುದೊ ಎಂದು ಮಣಿಯಲ್ಲಿ ಕೇಳು ತ್ತಾನೆ. ಅವನು ಪಕ್ಕ ಲ್ಯಾಂಕಾಷೈರಿನದು ಎನ್ನುತ್ತಾನೆ.
’ಈ ಲ್ಯಾಮಕಾಷೈರಿನ ಬಟ್ಟೆಗಳಲ್ಲಿ ಮೆರೆಯೋದಕ್ಕಿಂತ ಬೆತ್ತಲೆ ಬಂದಿದ್ದರೇನೇ ಗೌರವವಾಗಿ
ಇರುತ್ತಿತ್ತು’ ಅನ್ನಿಸುತ್ತದೆ. ಆದರೆ, ಸ್ವಾಮಿನಾಥನಿಗೆ ಆ ವಿಷಯದಲ್ಲಿ
ಶಂಕೆಯಿದ್ದುದರಿಂದ ಸುಮ್ಮನಿರುವುದೇ ವಾಸಿಯೆಂದುಕೊಳ್ಳುತ್ತಾನೆ. ಅಷ್ಟರಲ್ಲಿ ಬಟ್ಟೆ
ಸುಡುವುದಕ್ಕಾಗಿ ಹಚ್ಚಿದ್ದ ಕಿಚ್ಚು ಧಗಧಗಿಸಲಾರಂಭಿಸುತ್ತದೆ. ಕೋಟು ಟೋಪಿ ಷರ್ಟು,
ಪ್ಯಾಂಟು, ಕರವಸ್ತ್ರ ಮುಂತಾದವು ಗಾಳಿಯಲ್ಲಿ ತೂರಿಬಂದು ಬೆಂಕಿಯಲ್ಲಿ
ಬೀಳಲಾರಂಬಿಸುತ್ತವೆ. ಆಗ ಅವನ ಹತ್ತಿರ ಬಂದವನೊಬ್ಬ ’ಪರದೇಶಿ ಟೋಪಿ ಹಾಕಿಕೊಂಡಿದ್ದೀಯಾ?’
ಎಂದು ಆಕ್ಷೇಪವೆತ್ತುತ್ತಾನೆ. ಅವಮಾನಕ್ಕೊಳಗಾದ ಸ್ವಾಮಿನಾಥ ತಕ್ಷಣ ’ಅಯ್ಯೊ ನೋಡಲಿಲ್ಲ’
ಎಂದು ಟೋಪಿಯನ್ನು ಬೆಂಕಿಗೆ ಎಸೆದು ’ಸದ್ಯ, ದೇಶವನ್ನು ಉಳಿಸಿದೆನಲ್ಲ!’
ಎಂದುಕೊಳ್ಳುತ್ತಾನೆ.
ಮಾರನೆಯ ದಿನ, ಅಲ್ಲಿ ಪುಟ್ಟಪ್ಪನಿಗೆ ಎದುರಾದ ಸಮಸ್ಯೆಯೇ ಇಲ್ಲಿ ಸ್ವಾಮಿನಾಥನಿಗೆ
ಎದುರಾಗುತ್ತದೆ. ಸ್ಕೂಲಿಗೆ ಹಾಕಿಕೊಂಡು ಹೋಗಲು ಇನ್ನೊಂದು ಟೋಪಿಯಿಲ್ಲ! ಬೆಳಿಗ್ಗೆಯಿಂದ
ಅಪ್ಪನ ಕಣ್ಣು ತಪ್ಪಿಸಿ ಮನೆಯಲ್ಲಿ ತಿರುಗಾಡಲಾರಂಭಿಸುತ್ತಾನೆ. ಇಲ್ಲಿ, ’ಭಾರತಮಾತೆಯ
ಮಹಾಪುತ್ರರಲ್ಲೊಬ್ಬರು ದಸ್ತಗಿರಿಯಾಗಿದ್ದಾರೆ’ ಎಂಬ ಕಾರಣದಿಂದ ಶಾಲೆಗೆ ರಜೆ ಘೋಷಣೆ ಆತನ
ಸಮಸ್ಯೆಯನ್ನು ಬಗೆಹರಿಸುತ್ತದೆ. ’ಭಾರತಮಾತೆ’ ’ಗಾಂಧೀಜಿ’ ಜೊತೆಯಲ್ಲಿ ’ಗೌರೀಶಂಕರ’
ಅವರಿಗೂ ಜಯಕಾರ ಬೀಳುವುದನ್ನು ನೋಡಿದರೆ, ದಸ್ತಗಿರಿಯಾಗಿದ್ದವರು ಅವರೇ ಇರಬೇಕು
ಅನ್ನಿಸುತ್ತದೆ. ಆದರೆ ಇಲ್ಲಿ, ಗೌರೀಶಂಕರರಿಗೆ ಬಂಬಲ ಸೂಚಿಸುವುದಕ್ಕಾಗಿ ಸಭೆ,
ವಸ್ತ್ರದಹನಗಳು ನಡೆದು, ಮಾರನೆಯ ದಿನ ಮೆರವಣಿಗೆ ನಡೆಯುತ್ತದೆ. ಆ ಮೆರವಣಿಗೆಯಲ್ಲಿ
ಸೇರಿದ ಸ್ವಾಮಿನಾಥ ತನ್ನ ಟೋಪಿ ಬೆಂಕಿಗೆ ಆಹುತಿಯಾದ ದುಃಖವನ್ನು ಮರೆತೇಬಿಡುತ್ತಾನೆ!
ಆದರೆ, ಪ್ರಾಥಮಿಕ ಶಾಲೆಯ ಹುಡುಗನೊಬ್ಬನ ಟೋಪಿಯನ್ನು ಕಂಡಾಕ್ಷಣ ಅದು ಮತ್ತೆ
ನೆನಪಾಗುತ್ತದೆ. ಅದನ್ನು ಕಿತ್ತು ಮಣ್ಣಲ್ಲಿ ಎಸೆದು ತುಳಿದು ತನ್ನ ಟೋಪಿ ಹೋದ ದುಃಖದಿಂದ
ಸಮಾಧಾನ ಪಡೆದುಕೊಳ್ಳುತ್ತಾನೆ. ತಂದಗೆ ವಿಷಯವೆಲ್ಲಾ ತುಳಿದ ಮೇಲೆ, ಗೊತ್ತಾದ
ನಿಜವೇನೆಂದರೆ, ಆತ ತೊಟ್ಟಿದ್ದು ಕರೀ ಖಾಧಿ ಟೋಪಿ, ವಿದೇಶಿ ಬಟ್ಟೆಯದ್ದಲ್ಲ ಎಂಬುದು!
ಒಂದು ವಾಸ್ತವದ ಚಿತ್ರಣ. ಇನ್ನೊಂದು ಅದರಿಂದ ಪ್ರೇರೇಪಿತವಾದ ಕಥನ. ಇಬ್ಬರೂ ಋಷಿ
ಸದೃಶವಾದ ವ್ಯಕ್ತಿಗಳೇ ಆದ್ದರಿಂದ, ಅವರ ಜೀವನ ಚರಿತ್ರೆಯನ್ನು ಅರಿಯಲೇನು ಕಷ್ಟ
ಸಾಧ್ಯವಿಲ್ಲ. ನೆನಪಿನ ದೋಣಿಯಲ್ಲಿ ನಮಗೆ ಕುವೆಂಪು ಅವರ ಅಧಿಕೃತ ಜೀವನ ಚರಿತ್ರೆಯಾಗಿ
ಸಿದ್ಧ ಅಕರವಾಗಿದೆ. ಈ ಚಳುವಳಿ ಮೈಸೂರಿನಲ್ಲಿ ನಡೆದ ಸಮಯದಲ್ಲಿ ಆರ್.ಕೆ.ಎನ್.
ಅಲ್ಲಿದ್ದರು ಎಂಬುದಕ್ಕೆ ಅವರ ಜೀವನದ ವಿವರಗಳು ಸಾಕ್ಷಿಯನ್ನೊದಗಿಸುತ್ತವೆ. ನಾರಾಯಣರ
ತಂದೆ ಮದ್ರಾಸಿನಿಂದ ವರ್ಗವಾಗಿ ಮೈಸೂರಿನಲ್ಲಿ ಮಹಾರಾಜಾ ಹೈಸ್ಕೂಲಿಗೆ ಬಂದಿರುತ್ತಾರೆ.
ಆಗ ನಾರಾಯಣ ಮತ್ತು ಲಕ್ಷ್ಮಣ್ ಅವರೂ ಮೈಸೂರಿಗೆ ಬಂದು ತಮ್ಮ ಹೈಸ್ಕೂಲು ಶಿಕ್ಷಣವನ್ನು
ಮುಂದುವರೆಸುತ್ತಾರೆ. ನಾರಾಯಣ್ ಅವರು ಯೂನಿವರ್ಸಿಟಿ ಎಂಟ್ರೇನ್ಸ್ ಎಕ್ಸಾಮಿನಲ್ಲಿ
ಅನುತ್ತೀರ್ಣರಾಗಿ, ಒಂದು ವರ್ಷ ಮನೆಯಲ್ಲಿದ್ದು, ನಂತರ ಪಾಸಾಗಿದ್ದು ೧೯೨೬ರಲ್ಲಿ
ಎಂಬುದನ್ನು ಗಮನಿಸಿದಾಗ, ೧೯೨೦ರ ಘಟನೆಗೆ ಬಾಲಕ ನಾರಾಯಣ್ ಅವರೂ ಸಾಕ್ಷಿಯಾಗಿದ್ದರು
ಅನ್ನಿಸುತ್ತದೆ.
ಕೊನೆಯಲ್ಲಿ: ಸ್ವಾಮಿ ಮತ್ತು ಅವನ ಸ್ನೇಹಿತರು ಪುಸ್ತಕದಲ್ಲಿ ಮೇಲಿನ ಘಟನೆಯನ್ನು
ಓದುವಾಗ, ಎಂಜಲನ್ನು ಉಗುಳಿ ಇಂಗ್ಲೆಂಡನ್ನು ಮುಳುಗಿಸುವ ಮಾತು ಬಂದಾಗ ನನಗೆ ಇನ್ನೊಂದು
ಘಟನೆ ನೆನಪಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಪತ್ರಿಕಯೆಲ್ಲಿ ಓದಿದ್ದೊ ಅಥವಾ
ಟೀವಿಯಲ್ಲಿ ನೋಡಿದ್ದೊ ಇರಬೇಕು. ಕನ್ನಡ ಚಿತ್ರರಂಗದವರು ಕಾರ್ಗಿಲ್ ನಿಧಿ ಸಂಗ್ರಹಕ್ಕಾಗಿ
ಜಾಥಾ ಮೆರವಣಿಗೆ ರಸಮಂಜಿರಿ ಕಾರ್ಯಕ್ರಗಳನ್ನು ನಡೆಸುತ್ತಿದ್ದರು. ಈಗ ಹಿರಿಯ ನಟನ
ಸ್ಥಾನಕ್ಕೇರಿರುವ, ಅಂದಿನ ಪೋಷಕ, ಖಳ, ನಾಯಕ, ಹಾಸ್ಯನಟ ಆದವರೊಬ್ಬರು ಹೀಗೆ ಹೇಳಿದ್ದರು.
ಭಾರತೀಯರೆಲ್ಲ ಒಟ್ಟಾಗಿ ನಿಂತು ’ಸೂಸು’ ಮಾಡಿದರೆ ಪಾಕಿಸ್ಥಾನ ಕೊಚ್ಚಿಕೊಂಡು
ಹೋಗುತ್ತದೆ!
ನಾಲಗೆಯ ಮಾತು ಸೊಂಟದ ಕೆಳಗೆ ಬಂದಿದೆ. ಕಾಲದ ಮಹಿಮೆ ಅನ್ನೋಣವೆ?
1 comment:
ಮಾರ್ಮಿಕ ತೌಲನಾತ್ಮಕ ನೋಟ...
Post a Comment