Thursday, March 12, 2015

ಕುವೆಂಪು ಅವರ ಸರಸ್ವತೀ ದರ್ಶನ

'ನೀ ಹೇಳೆ, ನಾನು ಬರದೆ, ನೀ ಹಾಡೆ ನಾನೊರೆದೆ!’ ಎಂದು ಪ್ರಾರಂಭಿಸಿ, ರಾಮಾಯಣದರ್ಶನದ ಕೊನೆಯಲ್ಲಿ ಸರಸ್ವತೀ ತತ್ವವನ್ನು ಅನಾದಿಕವಿಯ ಸ್ಥಾನದ ಉತ್ತುಂಗಕ್ಕೆ ಏರಿಸಿದ ಕವಿ ಕುವೆಂಪು. ’ನಿನ್ನ ವಾಣಿ’ ಎಂಬ ಕವಿತೆಯ ’ಕವಿಯ ಗಾನದೊಳಗೆಲ್ಲ ವಾಣಿಗಳು ಹೊಮ್ಮುತಿವೆ’ ಎಂದು ಚಿಕ್ಕ ತೊರೆಯಾಗಿ ಆರಂಭವಾದ ಸರಸ್ವತೀ ದರ್ಶನ ಕಡಲಾಗುವುದು,
ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ
ವಚನಮೇಂ ನರರೂಪ ಮಾತ್ರಕ್ಕೆ ಮುಡಿಪೆ, ಪೇಳ್?
.............................................................
..........ಕೃತಿರೂಪಮಾ ಭಗವದಾವಿರ್ಭಾವ
ಬಹುರೂಪ ಸೂತ್ರತೆಗೆ?
ಎಂಬ ಸಾಲುಗಳಲ್ಲಿ. ಕುವೆಂಪು ಕಾವ್ಯದಲ್ಲಿ, ಸರಸ್ವತಿಯ ಸ್ತುತಿ ಎಂಬುದು ಕಾವ್ಯಕ್ಕೆ ಅನಿವಾರ್ಯವಾದ ಕರ್ಮವಾಗಿರದೆ, ಒಂದು ಕಾವ್ಯ ತಂತ್ರವಾಗಿ, ಹಂತ ಹಂತವಾಗಿ ಬೆಳೆದು ಬಂದಿದೆ. ಕವಿಯ ಪ್ರಾರಂಭ ಕವನಗಳಿಂದ ಆರಂಭವಾಗಿ ಹನಿಗವನ, ಕವನ, ಖಂಡಕಾವ್ಯ, ಮಹಾಕಾವ್ಯಗಳಲ್ಲಿ ಬೆಳೆದು ಹೊಸ ದರ್ಶನವಾಗಿ ಸರಸ್ವತೀ ತತ್ವ ವಿಕಾಸವಾಗಿರುವುದನ್ನು ಕಾಣಬಹುದು. ’ಗೊಲ್ಲನ ಬಿನ್ನಹ’ ಕವಿತೆಯಲ್ಲಿ, ’ಒಂದೇ ವೀಣೆಯ ತಂತಿಗಳಂತೆ.॒..... ಪರುಷವು ಹರಿದೀ ವೀಣೆಯ ವಾಣಿ’ ಎಂದು ಹಾಡುವ ಮೂಲಕ ಬಿಡಿ ಬಿಡಿ ಕವಿತೆಗಳಾದರೂ ಅಲ್ಲಿ ಎಲ್ಲವೂ (ಸರ್ವಭಾಷಾ ಸಾಹಿತ್ಯವೂ) ಸರಸ್ವತಿಯ ವೀಣೆಯ ವಾಣಿಯೆ ಎಂದು ಪ್ರತಿಪಾದಿಸಿದ್ದಾರೆ.
’ಕಬ್ಬದಂಗನೆ’ ಎಂದು ಕಾವ್ಯಸರಸ್ವತಿಯನ್ನು ಸಂಬೋಧಿಸಿರುವ ’ಕವಿತೆಗೆ’ ಎಂಬ ಕವನ ಪೂರ್ತಿಯಾಗಿ ಕಾವ್ಯಸರಸ್ವತಿಯ ವೈಶಿಷ್ಟ್ಯವನ್ನು ಮನಗಾಣಿಸುತ್ತದೆ.
.....ರಮಣೆಯೆ!
ನಿನ್ನ ಸಂಗದಿಂದ ತಿರುಕ ರಾಜನಾದನು!
ಮತ್ತು
ನಿನ್ನ ಪುಣ್ಯಸಂಗ ಲಭಿಸೆ ಧನ್ಯನಾದೆನು!
ನಿನ್ನ ಕೂಡೆ ಜನರಿಗೆಲ್ಲ ಗಣ್ಯನಾದೆನು!
ಅಲ್ಲಗಳೆಯುತ್ತಿದ್ದ ಜನಕೆ ಮಾನ್ಯನಾದೆನು!
ಎಂಬ ಮಾತುಗಳಿಂದ ’ಕಾವ್ಯಸರಸ್ವತಿ’ ಎಂಬ ಪರುಷಮಣಿಗಿರುವ ಸಾಮರ್ಥ್ಯದ ಪರಿಚಯವಾಗುತ್ತದೆ.
ನೀನೆ ಎನ್ನ ಬಾಳ ಮುಕ್ತಿ, ನೀನೆ ಎನ್ನ ಆತ್ಮಶಕ್ತಿ,
ನೀನೆ ಸೊಗವು, ನೀನೆ ಹರುಷ
ಕಬ್ಬದಂಗನೆ.
ಸಗ್ಗಬೇಡ, ಮುಕ್ತಿಬೇಡ, ಸಿರಿಯನೊಲ್ಲೆ, ನೆವನೊಲ್ಲೆ
ನೀನೆ ಎನಗೆ ಸಾಕು ಸಾಕು
ಮುದ್ದು ಮೋಹಿನಿ!
ಕಾವ್ಯ ಸರಸ್ವತಿಯ ಸಂಗವಿದ್ದರೆ ಬೇರೇನೂ ಬೇಡ ಎನ್ನುವ ಕವಿಯ ಮಾತು ಸರಸ್ವತಿಯ ಪ್ರಭಾವವನ್ನು ಮನಗಾಣಿಸುತ್ತದೆ. ಕಬ್ಬದಂಗನೆ ಎಂಬ ದೇಸಿಪ್ರಯೋಗ ಸರಸ್ವತಿಯನ್ನು ಕನ್ನಡತಿಯನ್ನಾಗಿಸಿದೆ.
’ಕಲಾ ಸುಂದರಿ’ ಕವಿತೆಯ ಹನ್ನೆರಡು ಚರಣಗಳಲ್ಲಿ ಸೃಷ್ಟಿದೇವತೆಯ ಶಕ್ತಿ, ಚೆಲುವು, ಒಲವು ಮೊದಲಾದವುಗಳು ವರ್ಣಿತವಾಗಿವೆ. ಕಾವ್ಯಕಾಮಿನಿ, ರಸಮೂರ್ತಿ, ಸರ್‍ವರಸಪ್ರದಾಯಕಿ, ಅಸೀಮ ಸ್ಫೂರ್ತಿದೇವತೆ, ನಿತ್ಯನೂತನ ಪ್ರಸೂತೆ ಮೊದಲಾದ ವಿಶೇಷಣಗಳು ಗಮನಸೆಳೆಯುತ್ತವೆ.
ನಿನ್ನ ಎದೆಯ ಮರೆಯಲಿ ನನಗೆ ಮುಕುತಿ ದೊರೆಯಲಿ
ನಿತ್ಯ ಹೇ ನಿಃಶ್ರೇಯಸಿ!
ನಿಖಿಲ ಹೃದಯಪದ್ಮಪಾಣಿ, ಮರಣ ಹರಣ ಅಮೃತವಾಣಿ,
ವಿಶ್ವದೇಕಮಾತ್ರ ರಾಣಿ,
ಹೇ ಮಾನಸ ಮಂದಿರೆ!
ಸೃಷ್ಟಿಮಾತೆಯೂ, ಮುಕ್ತಿದಾತೆಯೂ ಆದ ಸರಸ್ವತಿಗೆ ಕವಿ ಶರಣು ಹೋಗುತ್ತಾನೆ. ವಿಶ್ವದೇಕಮಾತ್ರ ರಾಣಿ ಎಂಬುದು  ಮಾತು ಜಗತ್ತಿನ ಪ್ರಮುಖ ಸಂಪತ್ತು ಎಂಬುದನ್ನು ಧ್ವನಿಸುತ್ತದೆ.
’ನರ್‍ತಿಸಿದಳು ಸ್ವರಸುರನಾರಿ’ ಕವಿತೆಯಲ್ಲಿ ಬಳಸಿರುವ ’ರಸಸಂಚಾರಿ’ ವಿಶೇಷಣವೂ ಗಮನಸೆಳೆಯುತ್ತದೆ. ಸ್ವರದೇವತೆಯಾದ ಸರಸ್ವತಿಯು ಇಲ್ಲಿ ರಸವನ್ನು ಹಂಚುವ ಸಂಚಾರಿ! ’ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ’ ಎಂಬ ಕವನ ಮಹಾರಾಜ ಕಾಲೇಜಿನ ಶತಮಾನೋತ್ಸವದ ಸಂದರ್ಭದಲ್ಲಿ ಬರೆದದ್ದು. ಹರಿಹರನಿಗೆ ತನ್ನ ಕೃತಿ ’ವಾಗ್ದೇವಿಯ ವಾಸಸ್ಥಾನ’ವಾಗಿ ಕಂಡಿದ್ದರೆ, ಇಲ್ಲಿ ವಿದ್ಯಾಲಯವೇ ಸರಸ್ವತಿಯಾಗಿ ಕವಿಗೆ ಕಂಡಿದೆ. ಉಪನಿಷತ್ ಮಂತ್ರದಿಂದ ಪ್ರೇರಿತವಾದ,
ಅಸತ್ತಿನಿಂದ ಸತ್ತಿನೆಡೆಗೆ
ತಮಸ್ಸಿನಿಂದ ಜ್ಯೋತಿಯೆಡೆಗೆ
ಮೃತ್ಯುವಿನಿಂದ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ
ವಿದ್ಯೆಯಾಗಿ ಮುಕ್ತಿಯೀವ
ಅವಿದ್ಯಾಪರಿಹಾರಿಣಿ, ಬಂಧಭವತಾರಿಣಿ
ಎಂದು ವಿದ್ಯಾಲಯೆ ಸರಸ್ವತಿಗೆ ವಂದಿಸುತ್ತಾರೆ. ಈ ಕವಿತೆಯ ಪ್ರತಿ ಚರಣವೂ ಸರಸ್ವತಿಗೇ ಸಂಬಂಧಿಸಿದ್ದಾಗಿದೆ. ಭೌತಿಕವಾಗಿ ಕಾಣುವ ವಿದ್ಯಾಲಯವನ್ನು, ಇಂದಿನ ಜಗತ್ತಿನಲ್ಲಿ ವ್ಯಾಪಾರಿ ತಾಣವಾಗಿರುವ ವಿಶ್ವವಿದ್ಯಾಲಯವನ್ನು ಸರಸ್ವತಿಯಾಗಿ ಕಂಡು ಸ್ತುತಿಸಿದ ಕವಿ, ಕವಿತೆಯುದ್ದಕ್ಕೂ, ಕವಿಪ್ರಾಣಪದ್ಮೆ, ಜಗಜ್ಜೀವವೀಣೆ, ಭವ್ಯಸೃಷ್ಟಿರೂಪಿಣಿ, ಕರ್ನಾಟಕ ಸರಸ್ವತಿ, ಕವಿಯಾತ್ಮ ತೃಷೆಯ ತರು ಮೊದಲಾದ ವಿಶೇಷಣಗಳನ್ನು ಬಳಸಿ ಸ್ತುತಿಸಿದ್ದಾರೆ. ’ವಿಶ್ವಪ್ರಜ್ಞೆಗೆ ವೇದಿಕೆಯಾದುದು ಶ್ರೀ ವಿದ್ಯಾಲಯ!’ ಎಂಬ ಮಾತು ಏಕಕಾಲಕ್ಕೆ ಶಾಲಾಕಾಲೇಜುಗಳ ಮಹತ್ವವನ್ನೂ ಸರಸ್ವತಿಯ ಮಹತ್ವವನ್ನೂ ಸ್ಫುರಿಸುತ್ತದೆ.
’ಪೂರ್ಣದೃಷ್ಟಿಯ ಮಹಾಕಾದಂಬರಿ’ ಎನ್ನುವ ಹನಿಗವನದಲ್ಲಿ ಕಾದಂಬರಿಯನ್ನು,
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಎಂದು ಕೊಂಡಾಡಿದ್ದಾರೆ. ಕೃತಿಯೊಂದು ’ವಾಗ್ದೇವಿಯವಾಸಸ್ಥಾನ’ವೆಂಬ ಹರಿಹರನ, ’ವಿದ್ಯಾನಟಿಯ ನಾಟ್ಯವೇದಿಕೆ’ ಎಂಬ ನಾಗಚಂದ್ರನ ಕಲ್ಪನೆಯ ಮುಂದುವರೆದ ಭಾಗವಾಗಿ ಈ ಹನಿಗವನ ಮೂಡಿ ಬಂದಿದೆ. ವಾಗ್ದೇವಿಯ ವಾಸಸ್ಥಾನ ಕಾದಂಬರಿ ಎಂಬ ಮಹಾಸದನವಾಗಿದೆ. ವಿದ್ಯಾನಟಿಗೆ ಸಹಸ್ರಬಾಹು, ಸಹಸ್ರಪಾದ, ಸಹಸ್ರವದನಗಳು ಮೂಡಿ ಸರಸ್ವತಿಯ ನೃತ್ಯವನ್ನು ಭವ್ಯವನ್ನಾಗಿಸಿದೆ.
ಕವಿಗಳು ಸರಸ್ವತಿಯನ್ನು ’ಹೃತ್ಕಮಲದಲ್ಲಿ, ವದನಾರವಿಂದದಲ್ಲಿ, ನಾಲಗೆಯಲ್ಲಿ ನೆಲಸು’ ಎಂದು ಪ್ರಾರ್ಥಿಸುತ್ತಾರೆ. ಆದ್ದರಿಂದ ನಿಜಕವಿಯಾದವನೂ ಸರಸ್ವತಿಗೆ ಸದನಸ್ವರೂಪನಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ’ಕುವೆಂಪು’ ಎಂಬ ಕವಿತೆಯ ’ನುಡಿರಾಣಿಯ ಗುಡಿ- ಕುವೆಂಪು’ ಎಂಬ ಮಾತು ಗಮನ ಸೆಳೆಯುತ್ತದೆ.
’ಆಸೆ!’ ಎಂಬ ಕವಿತೆಯಲ್ಲಿ ಕವಿಯು ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾರೆ.
ಸೊಬಗಿನ ಸೆರೆಮನೆಯಾಗಿಹೆ ನೀನು;
ಚೆಲುವೇ, ಸರಸತಿಯೆ!
ಅದರಲಿ ಸಿಲುಕಿದ ಸೆರೆಯಾಳಾನು,
ನನ್ನೆದೆಯಾರತಿಯೆ!
ಎಂದು ಪ್ರಾರಂಭವಾಗುವ ಕವಿತೆಯಲ್ಲಿ ಸರಸ್ವತಿಯ ಸೌಂದರ್ಯವನ್ನು ಕುರಿತಾದ ವಿಶೇಷಣಗಳಿವೆ. ಕವಿಯು ಅಂತಹ ಕೆಲವು ವಿಶೇಷಣಗಳೊಂದಿಗೆ ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾನೆ. ಎಳೆಮೊಗದಲ್ಲಿ ನಸುನಗೆಯಾಗುವ ಆಸೆ, ತಾವರೆ ಬಣ್ಣದ ಹಣೆಯಲ್ಲಿ ಕುಂಕುಮವಾಗಿರುವ ಆಸೆ, ಬಳ್ಳಿಯಂತಿರುವ ಕೈಗೆ ಹೊಂಬಳೆಯಾಗಿರುವ ಆಸೆ, ನಿಂತಿರುವ ಪದ್ಮವನ್ನು ಮುಚ್ಚಿ ಶೈವಲದಂತೆ ಕಾಣುತ್ತಿರುವ ಸೀರೆಯ ನಿರಿಗೆಯಾಗಿರುವ ಆಸೆ, ಬಡನಡುವಿಗೆ ಕಟಿಬಂಧವಾಗಿರುವ ಆಸೆ, ಹಿಡಿದಿರುವ ವೀಣೆಯಾಗುವ ಆಸೆ ಮೊದಲಾದವುಗಳನ್ನು ಕವಿ ಹೇಳುತ್ತಾರೆ. ಕೊನೆಯಲ್ಲಿ ಬರುವ ಚೆಲುವೆ, ತರಳೇ, ಮುದ್ದಿನ ಹೆಣ್ಣೆ ಎಂಬ ಮಾತುಗಳು ’ಗಾಡಿಗೆ ತವರ್ಮನೆ’ ಎಂಬ ಆಂಡಯ್ಯನ ಮಾತುಗಳನ್ನು ನೆನಪಿಸುತ್ತವೆ. ’ಕಾಮನ ಕಣ್ಣೆ’ ಎಂದು ಸರಸ್ವತಿಯನ್ನು ಕರೆದಿರುವುದು, ನೇಮಿಚಂದ್ರನು ಸರಸ್ವತಿಗೆ ಹೇಳಿರುವ ’ಕಾಮಸಂಜನನಿ’ ಎಂಬ ವಿಶೇಷಣವನ್ನು ಧ್ವನಿಸುತ್ತದೆ.
ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ, ’ನಾಟ್ಯಸರಸ್ವತಿಗೆ’.
ನರ್‍ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
ಎಂದು ಪ್ರಾರಂಭವಾಗುವ ಕವಿತೆ,
ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
...........
ಮಮ ಮಸ್ತಕ ನೀರೇಜದಲಿ!
ಎಂದು ಮುಕ್ತಾಯವಾಗುತ್ತದೆ. ನಮ್ಮ ಬುದ್ಧಿಯಲ್ಲಿ ’ವಿಜ್ಞಾನದ ಕಾಂತಿ ಅವತರಿಸಿ ಶಾಂತಿ ಬರುವಂತೆ ನರ್‍ತಿಸು ನಮ್ಮ ಮಸ್ತಕದಲ್ಲಿ’ ಎನ್ನುವ ನುಡಿ ಸೊಗಸಾಗಿ ಮೂಡಿ ಬಂದಿದೆ. ನಾಗಚಂದ್ರನಲ್ಲಿ ಆತನ ಕಾವ್ಯವು ’ವಿದ್ಯಾನಟಿಯ ನಾಟ್ಯವೇದಿಕೆ’ಯಾಗಿದ್ದರೆ, ಇಲ್ಲಿ ಸ್ವತಃ ಕವಿಯ ಮಸ್ತಕವೇ ನೃತ್ಯವೇದಿಕೆಯಾಗಿದೆ. ಸರ್ವರ ಮಸ್ತಕವೂ ಸರಸ್ವತಿಯ ನೃತ್ಯವೇದಿಕೆಯಾಗಬೇಕೆಂಬುದು ಪ್ರಸ್ತುತ ಕವಿತೆಯ ಆಶಯ.
’ಅಖಂಡ ಕರ್ಣಾಟಕ!’ ಕವಿತೆಯಲ್ಲಿ ಬರುವ ’ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ ತನಗೆ ರುಚಿರಕುಂಡಲ’, ’ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ’ ಎಂಬ ಸಾಲುಗಳು ’ಕರ್ನಾಟಕಸರಸ್ವತಿ’ ಎಂಬ ಪರಿಕಲ್ಪನೆಯ ವಿಸ್ತೃತ ರೂಪಗಳು.
ರಾಮಾಯಣವನ್ನು ಸರಸ್ವತಿಯ ವೀಣೆಯೆಂದೇ ಕುವೆಂಪು ಭಾವಿಸಿದ್ದಾರೆ. ಸಾವಿರಾರು ವರ್ಷಗಳಿಂದ ಸಾವಿರಾರು ಕವಿಗಳಿಗೆ ಪ್ರತ್ಯಕ್ಷ ಪರೋಕ್ಷ ಪ್ರಭಾವ ಬೀರುತ್ತಾ ಬಂದಿರುವ ಕೃತಿಗೆ ಸಿಕ್ಕ ಮನ್ನಣೆ ಅದು. ಕವಿಗೆ ಸರಸ್ವತಿಯು ಎಂದೂ ದೂರದವಳಲ್ಲ. ಸರಸ್ವತಿಯನ್ನು ಯಾವಾಗ ಬೇಕಾದರೂ ಸಂಧಿಸಿ ಮಾತನಾಡುವ ರೀತಿಯಲ್ಲಿರುವ ’ಅದ್ಭುತ ರಾಮಾಯಣ ಅಥವಾ ವಾಲ್ಮೀಕಿಗೊಂದು ಎಚ್ಚರಿಕೆ’ ಕವನದ ಮೊದಲ ಸಾಲಿನಲ್ಲಿಯೆ, ’ಓ ತಾಯಿ ಸರಸ್ವತಿಯೆ, ನಿನ್ನ ಬೀಣೆಯ ಮೇಲೆ ಕುಳಿತೇನ ಮಾಡುತಿವೆ ಈ ಗೂಬೆಗಳ ಮಾಲೆ’ ಎಂದು ಪ್ರಶ್ನಿಸುತ್ತಾರೆ. ಉತ್ತರರಾಮಾಯಣದಲ್ಲಿ ಮೂಲರಾಮಾಯಣದ ಆಶಯಕ್ಕೆ ವಿರುದ್ಧವಾದ ಅಸಂಗತವಾದ ಪ್ರಕ್ಷಿಪ್ತಗಳು ಸೇರಿರುವುದನ್ನು ಮೇಲಿನ ಸಾಲು ಧ್ವನಿಸುತ್ತದೆ.
’ಪಂಪ’ ಕವಿತೆಯ ಮೊದಲ ಕಂದಪದ್ಯ ಹೀಗಿದೆ.
ಶ್ರೀ ವಾಗ್ದೇವಿಯ ವೀಣೆಯಿ
ನಾವಗುಮುಗುವಿಂಚರವೊನಲೆಮ್ಮೀ ಕರ್ನಾ
ಟಾವನಿಯಂ ಪುಗಲಾಯ್ತು ಸ
ರೋವರಮದರೊಳ್ ಸರೋಜವಾದೈ, ಪಂಪಾ!
ವಾಗ್ದೇವಿಯ ವೀಣೆಯ ಇಂಚರವು ಹೊಮ್ಮಿದ್ದರಿಂದಲೇ ಕವಿಗಳ ಸರೋವರದ ಮಧ್ಯದ ಸರೋಜವಾದನು ಪಂಪ ಎಂಬ ಮಾತು ’ಸರಸ್ವತಿಯ ವೀಣೆ ನುಡಿಯುತ್ತಿದ್ದರೇ ಕವಿಗಳು ಬರೆಯಲು ಸಾಧ್ಯ’ ಎಂಬ ಕಲ್ಪನೆಯನ್ನು ಮೂಡಿಸುತ್ತದೆ. ಈ ಕಲ್ಪನೆಯ ವಿಸ್ತರಣೆಯ ರೂಪವನ್ನು ’ಮಹಾದರ್ಶನ’, ’ಚಿತ್ರಾಂಗದಾ’ ಮತ್ತು ’ರಾಮಾಯಣ ದರ್ಶನಂ’ ಕಾವ್ಯಗಳಲ್ಲಿ ಕಾಣಬಹುದು.
’ಮಹಾದರ್ಶನ’ ಸುಮಾರು ೮೦೫ ಸಾಲುಗಳ ಖಂಡಕಾವ್ಯದ ವಿಸ್ತಾರವನ್ನುಳ್ಳ ನೀಳ್ಗವಿತೆ. ಕಾವ್ಯದ ಆರಂಭದಲ್ಲಿ ಮಹಾಕವಿಗಳ ಮತ್ತು ನಿರಾಕಾರನಾದ ಪರಮಾತ್ಮನ ಸ್ತುತಿಯಾದ ಮೇಲೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. 
ಏಳು, ವಾಣಿಯೆ ಏಳು! ಬಿಜ್ಜೆಯರಸಿಯೆ ಏಳು; ವೀಣೆಯನು ತಾಳು
ನವಯುಗದ ಪರಮಾವತಾರನಂ, ಭಕುತ ಜನರಿಗೆ ಮುದದಿ ಪೇಳು|
ಬಿಜ್ಜೆಯರಸಿ ಎಂಬ ದೇಸಿ ವಿಶೇಷಣ ಗಮನ ಸೆಳೆಯುತ್ತದೆ. ಸರ್ವಸಾಹಿತ್ಯವೂ ಸರಸ್ವತಿಯೆ ಬರೆಸಿದ್ದು. ಸರಸ್ವತಿಯ ವೀಣೆ ನುಡಿದರಷ್ಟೇ ಕವಿಗಳಿಗೆ ಬರೆವುದು ಸಾಧ್ಯ ಎಂಬ ಭಾವ ಪ್ರಕಟವಾಗಿದೆ. ಮಧ್ಯೆ, ಎಲ್ಲೆಲ್ಲಿ ಯಾವುದರ ಮೂಲಕ ದರ್ಶನವನ್ನು ಸರಸ್ವತಿಯು ನೀಡಬಹುದೆಂಬುದರ ದೊಡ್ಡ ಪಟ್ಟಿಯೇ ಇದೆ. ಆದರೆ, ಕೊನೆಯಲ್ಲಿ,
ಹಿಂದೆ ರಾಮನ ಕತೆಯ ವಾಲ್ಮೀಕಿ ವೀಣೆಯಲಿ.......,
ಬಾದರಾಯಣನೆಂಬ ತಂತಿಯಲಿ ಭಾರತವ ಹಾಡಿರುವೆ.....
ನವಿಲು ವಾಹನೆ ಏಳು..... ಪಾಣಿಯಲಿ ವೀಣೆಯನು ಪಿಡಿದೇಳು,
ಮಧುರತಮ ವಾಣಿಯಲಿ ಪೇಳು
ಎಂಬ ಸಾಲುಗಳು, ವೀಣೆಯನ್ನು ತಾಳಿ ಕತೆಯನ್ನು ಹೇಳು ಎಂಬುದರ ವಿಸ್ತರಣೆಯಾಗಿವೆ. ’ನವಿಲು ವಾಹನೆ ಏಳು.....’ ಎಂಬುದರಿಂದ ಸರಸ್ವತಿಯ ವಾಹನ ನವಿಲು ಎಂದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಸರಸ್ವತಿಯು ಹಂಸವಾಹನೆ. ಇಲ್ಲಿ ಸರಸ್ವತಿಯು ಹಂಸವಾಹನೆಯ ಬದಲು ನವಿಲುವಾಹನೆ ಆಗಿದ್ದೇಕೆ ಎಂಬುದನ್ನು,
ನವಿಲುವಾಹನೆ ಏಳು, ವಾಹನದ ಮಳೆಬಿಲ್ಲ ರಾಗಗಳ ಕೀಳು
ಕಣ್ಣುಗಳ ಬಣ್ಣಗಳ ಪದಗಳನು ಸಿಂಗರಿಸುವಂದದಲಿ ಹೂಳು
ಎಂಬ ಸಾಲುಗಳು ಸಮರ್ಥಿಸುತ್ತವೆ. ಕಾವ್ಯಕ್ಕೆ ಅಲಂಕಾರಗಳು ಮುಖ್ಯ. ಅವುಗಳಲ್ಲಿ ವೈವಿಧ್ಯವಿದ್ದರೆ ಇನ್ನೂ ಚೆನ್ನ. ನವಿಲಿನ ಕಣ್ಣು ಮತ್ತು ಬಣ್ಣಗಳಂತಹ ಪದಗಳನ್ನು ಅಂದರೆ ಅಲಂಕಾರಗಳನ್ನು ’ಹೂಳು’ ಎಂದರೆ, ನೀನು ನುಡಿಸುವ ವಾಣಿಯಲ್ಲಿ ಬಿತ್ತು, ಸೇರಿಸು ಎಂದರ್ಥ. ಪ್ರಸ್ತುತ ಕವಿತೆಗೆ ’ನವಿಲುವಾಹನೆ’ ಎಂಬುದು ಸಾರ್ಥಕ ವಿಶೇಷಣವಾಗಿದೆ.
’ಚಿತ್ರಂಗದಾ’ ಕಾವ್ಯದ ಮೊದಲ ಪರ್ವದ ಮೊದಲ ನಲವತ್ತೆರಡು ಸಾಲುಗಳಲ್ಲಿ ಸರಸ್ವತಿಯ ವಿಸ್ತೃತವಾದ ಸ್ತುತಿಯಿದೆ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ, ವಿರಾಟ್
ಪ್ರಭವೆ, ಭವ್ಯಾನಂದ ವಿಭವೆ, ಶಾರದೆ, ವರದೆ,
ಭಾವಚಿಂತಾಖನಿಯೆ, ಶಿಖಿವಾಹಿನಿಯೆ, ವಾಣಿ
ಭುವನಮೋಹನ ಮಧುರ ದಿವ್ಯ ವೀಣಾಪಾಣಿ
ವಾಗ್ದೇವಿ, ಸರಸ ಕವಿತಾ ಕಲಾ ಕಲ್ಯಾಣಿ,
ತುಂಬುವೆನು ನಿನ್ನಮಲ ಪಾದ ಪಂಕೇಜದಲಿ
ಮುಂಗುರುಳ್ದುಂಬಿಗಳನೆಲೆ ತಾಯೆ, ಕೃಪೆಗೈದು
ಕಂದನಂ ಕಾರುಣ್ಯದಿಂ ಕಂಡು, ಜಡಮತಿಗೆ
ದಿವ್ಯ ವೈದ್ಯುತ್ವ ಚೇತನವನಿತ್ತು ನಲಿದೊಲಿದು
ನರ್‍ತನಂಗೈಯೆನ್ನ ಜಿಹ್ವೆಯಲಿ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ ಎಂಬುದು ಸರಸ್ವತಿಯನ್ನು ಬ್ರಹ್ಮನ ಮಾನಸಪುತ್ರಿಯನ್ನಾಗಿಸಿದೆ. ಇಲ್ಲಿ ಸರಸ್ವತಿಯ ವಾಹನ ನವಿಲು (ಶಿಖಿವಾಹಿನಿ). ಶಾರದೆ ಎಂಬುದು ಸರಸ್ವತಿಯ ಹೆಸರಾಗಿ ಬಳಕೆಯಾಗಿದೆ. ಸ್ತುತಿಯ ಎರಡನೇ ಹಂತದಲ್ಲಿ, ಕಾವ್ಯಕಾಮಿನಿಯಾದ ವಾಣಿಯು ’ನಾನುಲಿವ ಗಾನದಲಿ ಕನ್ನಡನಾಡಿನೆರ್ದೆವೂವರಳ್ವವೋಲ್’ ಮಾಧುರ್ಯವನ್ನು, ಸ್ಫೂರ್ತಿಯನ್ನು ದಯಪಾಲಿಸಲಿ ಎಂಬ ಪ್ರಾರ್ಥನೆಯಿದೆ.
ಓ ಕಲ್ಪನಾ ಸುಂದರಿಯೆ, ನಿನ್ನ ಮಹಿಮೆಯೊಳೆ
ವ್ಯಾಧನಾದಂ ಪ್ರಥಮಕವಿ! ಪಸುಳೆ ನಾಂ, ತಾಯೆ,
ನೀನೊರ್ಮೆ ಚುಂಬಿಸಲ್ಕೆನ್ನೀ ತೊದಲ್ವ ತುಟಿ
ಗಾನಗೈಯದೆ ಪೇಳ್ ಬೃಹತ್ ಕಾವ್ಯ ಸಂಗೀತೆಯಂ?
ಸರಸ್ವತಿಯ ಕೃಪೆಯಿಂದ ವ್ಯಾಧ ವಾಲ್ಮೀಕಿ ಪ್ರಥಮಕವಿಯಾಗಿದ್ದಾನೆ. ಇನ್ನೂ ಮಗು ನಾನು; ತಾಯಿ ನೀನು. ನನ್ನ ತೊದಲುವ ತುಟಿಯನ್ನೊಮ್ಮೆ ಚುಂಬಿಸಿದರೆ ಸಾಕು, ಮಹಾಕಾವ್ಯವೇ ಹೊಮ್ಮುತ್ತದೆ ಎಂಬ ಭಾವ ಚೆನ್ನಾಗಿ ಮೂಡಿಬಂದಿದೆ. ವಾಲ್ಮೀಕಿ, ವ್ಯಾಸ, ಪಂಪ, ರನ್ನರ ದಿವ್ಯ ಕಾವ್ಯಗಳೆಂಬ,
ಕೀರ್ತಿಕಾಮಿನಿಯಡಿಗಳಮಲತರ ಧೂಳಿಯಂ
ಶಿರದೊಳಾನುವ ಪುಣ್ಯಮಂ ಬಯಸಿ, ಹೇ ದೇವಿ,
ನಿನ್ನನೆದೆತುಂಬ ಪ್ರಾರ್ಥಿಸುವೆ: ಕೃಪೆದೋರೆನಗೆ
ನಿನ್ನ ವೀಣಾವಾಣಿಯಂ ನೀಡು, ಓ ತಾಯೆ!
ಎಂದು, ಇಷ್ಟಕ್ಕೂ ಸುಮ್ಮನಾಗದ ಕವಿಮನಸ್ಸು, ಸರಸ್ವತಿಯಿಂದ, ಸರಸ್ವತಿಯ ವೀಣೆಯ ಕಡೆಗೆ ಹೊರಳುತ್ತದೆ.
ಏಳು, ವೀಣೆಯೆ ಏಳು! ಹೇಳು ಮುಂದಿನ ಕಥೆಯ
ಹೇ ಅಮೃತಭಾಷಿಣಿಯೆ!
ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾರೆ. ’ಮಹಾದರ್ಶನ’ ಕವಿತೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ’ವೀಣೆಯ ತಾಳಿ ಕಥೆಯ ಹೇಳು’ ಎಂಬ ಕಲ್ಪನೆ ಇಲ್ಲಿ ವಿಸ್ತಾರಗೊಂಡಿದೆ. ತಾನು ಬರೆಯಲು ಉದ್ದೇಶಿಸಿರುವ ಕವಿತೆಯನ್ನು ಸರಸ್ವತಿಯ ವೀಣೆಯು ಹಾಡಲಿ ಎಂಬುದು ಕವಿಯ ಆಶಯ. ’ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’, ಎಂದು ಕಾವ್ಯ ಮತ್ತು ಕರ್ತೃತ್ವವೆರಡನ್ನೂ ಭಗವಂತನಿಗೇ ಅರ್ಪಿಸುವ ನುಡಿಯ ಮುಂದುವರೆದ ರೂಪ ಈ ಪ್ರಾರ್ಥನೆ. ಅಲ್ಲಿ ಸ್ವತಃ ವೀರನಾರಾಯಣನೇ ಕವಿ. ಇಲ್ಲಿ ಸರಸ್ವತಿಯೇ ಕವಿಯಾದರೂ, ಕತೆಯ ನುಡಿಯುವುದು ಸರಸ್ವತಿಯ ವೀಣೆ!
ಕಾವ್ಯದ ಯಾವುದೋ ಒಂದು ಘಟ್ಟದಲ್ಲಿ, ಸನ್ನಿವೇಶ ಬದಲಾವಣೆಯಾಗುವಾಗ ನಿರಂತರವಾಗಿ ಹರಿಯುತ್ತಿದ್ದ ಕವಿಪ್ರತಿಭೆಗೆ ತತ್ಕಾಲೀನ ಅಡ್ಡಿ ಬಂದಂತಾಗಬಹುದೇನೋ!? ಅಂತಹ ಸಂದರ್ಭದಲ್ಲಿ ಕುವೆಂಪು ’ಮುಂದಿನ ಸನ್ನಿವೇಶವೇನು?’ ಎಂಬಂತೆ ಸರಸ್ವತಿಯನ್ನು ಕೇಳುತ್ತಾರೆ. ಇದು ಒಂದು ರೀತಿಯಲ್ಲಿ ಕಾವ್ಯತಂತ್ರವಾಗಿಯೇ ಬಂದಿರುವುದು ’ಚಿತ್ರಾಂಗದಾ’ ಕಾವ್ಯದಲ್ಲಿ ಆರಂಭವಾಗಿ ’ರಾಮಾಯಣದರ್ಶನಂ’ನಲ್ಲಿ ವಿಕಸಿತವಾಗಿದೆ ಎನ್ನುವುದನ್ನು ಮುಂದೆ ಗಮನಿಸಲಾಗುವುದು. ಪ್ರಸ್ತುತ ’ಚಿತ್ರಂಗದಾ’ದಲ್ಲಿ ಆ ರೀತಿಯ ಎರಡು ಪ್ರಸಂಗಗಳನ್ನು ಗುರುತಿಸಬಹುದು.
ಮತ್ತಾವ
ಮಾಯೆಯಂ ಮಥಸಿದೌ ನಿದ್ರಾಸಮುದ್ರದಲಿ,
ಓ ಸ್ವಪ್ನ ಸುಂದರಿಯೇ? ಸೃಷ್ಟಿಸಲ್ ತೊಡಗಿದರೆ
ನಿನ್ನ ಮಾಯಾಕುಂಚಕಿದಿರೆಲ್ಲಿ? ಎಣೆಯೆಲ್ಲಿ?
ದೇಗುಲದ ಕಲ್ನೆಲದಿ ಮಲಗಿಹ ತಳೋದರಿ
ಅದೇಕಿಂತು ಕಂಪಿಪಳ್? ಕಾಣುತಿಹಳೇನಾಕೆ? ತೋರ್
ಎಂದು ಕಲೆಗಾರ್ತಿ ಸರಸ್ವತಿಯನ್ನು ಕೇಳುತ್ತಾರೆ. ಮೂರನೆಯ ಪರ್ವಾರಂಭದಲ್ಲಿ
ಏಳು,ವೀಣೆಯೆ! ಏಳು, ಶೃಂಗಾರ ಸುಂದರಿಯೆ!
ಏಳು, ಅಂತರ್‍ಯಾಮಿ ಚಿಂತಾ ಪ್ರಭಾಮಯೀ
ಪ್ರತಿಭಾ ಮನೋಹರಿಯೆ! ಹೇಳು ಮುಂದಣ ಕಥಾ
ಭೋಗಮಂ!..............................
॒॒॒॒.॒..............................................................
..........ಜಡಮತಿಗೆ ರಸಮಂತ್ರಮಂ ನೀಡಿ,
ಮಿಡಿದು ನುಡಿಸೆನ್ನೆದೆಯ ನಾದಮಯದಿಂದ್ರಧನು
ತಂತ್ರಿಯಿಂ ಮಾಡಿದ ಮಹಾಕಾಶವೀಣೆಯಿಂ!
ಎಂದು ಸರಸ್ವತಿಯ ಮಹಾವೀಣೆಯನ್ನು ಪ್ರಾರ್ಥಿಸುತ್ತಾರೆ. ಆಕಾಶವೇ ವೀಣೆ; ಕಾಮನಬಿಲ್ಲೇ ತಂತಿಯಾದ್ದರಿಂದ ಸರಸ್ವತಿಯದ್ದು ಮಹಾವೀಣೆ. ಹೀಗೆ ಸರಸ್ವತಿಯ ವೀಣೆಯನ್ನು ಸ್ತುತಿಸುವಾಗ ಮುಂದಣ ಕತೆಯ ಆಶಯಕ್ಕೆ ಅನುಗುಣವಾಗಿಯೇ ಸರಸ್ವತಿಗೆ ವಿಶೇಷಣಗಳನ್ನು ಬಳಸಿರುವುದು ಉಚಿತವಾಗಿದೆ. ಉದಾಹರಣೆಗೆ ಚಿತ್ರಾಂಗದಾ ಕಾವ್ಯದ ಮೂರನೆಯ ಪರ್ವದಲ್ಲಿ ಶೃಂಗಾರಪ್ರಧಾನವಾದ ದೃಶ್ಯಗಳು ಹೆಚ್ಚಾಗಿ ಬರುತ್ತವೆ. ಪ್ರಾರ್ಥನೆಯಲ್ಲಿ ’ಶೃಂಗಾರ ಸುಂದರಿಯೇ’ ಎಂದು ಸ್ತುತಿಸಿರುವುದನ್ನು ಗಮನಿಸಬಹುದಾಗಿದೆ. ಹಳಗನ್ನಡ ಕಾವ್ಯಗಳಲ್ಲಿ, ಷಟ್ಪದಿ ಕಾವ್ಯಗಳಲ್ಲಿ ಆಯಾಯ ಆಶ್ವಾಸದ ಆಶಯವನ್ನು ವ್ಯಕ್ತಪಡಿಸುವ ಪದ್ಯಗಳನ್ನು ಆಶ್ವಾಸದ ವ್ರೆದಲಲ್ಲೇ ತಂದಿರುವುದನ್ನು ನೋಡಬಹುದಾಗಿದೆ. ಆದಿಪುರಾಣದಲ್ಲಿ ಪಂಪನು ಪ್ರಪ್ರಥಮವಾಗಿ ಈ ತಂತ್ರವನ್ನು ಬಳಸಿದ್ದಾನೆ. ಈ ಉದ್ದೇಶಕ್ಕಾಗಿ ಬಳಸಿರುವ ಕಂದಪದ್ಯಗಳೆಲ್ಲವೂ ’ಸರಸ್ವತೀ ಮಣಿಹಾರಂ’ ಎಂದು ಕೊನೆಗೊಂಡಿರುವುದನ್ನು, ಪಂಪನ ಸರಸ್ವತೀ ದರ್ಶನವನ್ನು ವಿವೇಚಿಸುವ ಸಂದರ್ಭದಲ್ಲಿ ಗಮನಿಸಿದ್ದೇವೆ.
’ಶ್ರೀರಾಮಾಯಣದರ್ಶನಂ’ ಬೃಹತ್ತು ಮತ್ತು ಮಹತ್ತುಗಳೆರಡರಲ್ಲೂ ’ಚಿತ್ರಾಂಗದಾ’ ಕಾವ್ಯದ ಮುಂದುವರೆದ ಆವೃತ್ತಿ. ಸರಸ್ವತಿಯ ಪ್ರಾರ್ಥನೆ, ವರ್ಣನೆ ಮತ್ತು ಕಾವ್ಯತಂತ್ರವಾಗಿ ವಾಗ್ದೇವಿಯ ಸ್ತುತಿಯನ್ನು ಬಳಸಿಕೊಂಡಿರುವ ವಿಚಾರದಲ್ಲೂ ಮುಂದುವರೆದ ಆವೃತ್ತಿಯೆ! ’ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗದಲ್ಲಿಯೇ ಸರ್ವಭಾಷಾಮಯಿಯಾದ ಸರಸ್ವತಿಯನ್ನು ವಿಶ್ವಭಾಷಾಮಯೀಯಾಗಿಸಿರುವ ’ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್’ ಮತ್ತು ’ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ’ ಎಂಬ ಸಾಲುಗಳು ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿವೆ.
‘ಏರುವೆನ್ ವಾಗ್ದೇವಿಯಮೃತ ರಸನೆಯ ಲಸನ್ ನಾವೆಯಂ’ ಎನ್ನುತ್ತಾ ಆದಿಕವಿಗೆ ವಂದಿಸಿ, ‘ದೇವಕವಿ, ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್ ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಇದುವರೆಗಿನ ಕವಿಗಳು -‘ಚಿತ್ರಾಂಗದಾ’ದಲ್ಲಿ ಕುವೆಂಪೂ ಸಹ- ಸರಸ್ವತಿಯು ನಮ್ಮ ನಾಲಗೆಯಲ್ಲಿ ನೆಲಸಲಿ, ನರ್ತಿಸಲಿ’ ಎಂದು ಪ್ರಾರ್ಥಿಸಿರುವುದನ್ನು ನೋಡಿದ್ದೇವೆ. ಇಲ್ಲಿ ನೇರವಾಗಿ ಸರಸ್ವತಿಯನ್ನು ನಾಲಗೆಗೆ ಆಹ್ವಾನಿಸದೆ, ಆದಿಕವಿಯನ್ನು ‘ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ‘ಆತ್ಮಜಿಹ್ವೆಗೆ’ ಎಂಬ ಮಾತು ಹೊಸದಾಗಿ ಬಂದಿದೆ. ಆದಿಕವಿಯೇ ಸರಸ್ವತಿಯನ್ನು ಕವಿಯಾತ್ಮಜಿಹ್ವೆಗೆ ಇರಿಸಿದ ಮೇಲೆ ಸರಸ್ವತಿಯ ಪ್ರಾರ್ಥನೆ ಕೆಳಗಿನಂತೆ ಬಂದಿದೆ.

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;
ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.
ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್
ಕರ್ಣಾಟಕದ ಜನದ ಕರ್ಣವೀಣಾ ತುಂಬಿ
ನಿನ್ನ ವಾಣಿಗೆ ವಿಕಂಪಿಸಿ, ಜೀಂಕೃತಿಯ ಬೀರಿ,
ರಸದ ನವನೀತಮಂ ಹೃದಯದಿ ಮಥಿಸುವಂತೆ
ಗಾನಗೆಯ್, ಹೇಳು, ಓ ಭಾವಗಂಗಾವೇಣಿ. (ಕವಿಕ್ರತು ದರ್ಶನ, ಸಾಲುಗಳು: ೮೭-೮೮)

ಈ ಭಾಗದಲ್ಲಿ ಭಾವಗಂಗಾವೇಣಿ ಎಂಬ ವಿಶೇಷಣ ಗಮನ ಸೆಳೆಯುತ್ತದೆ. ಭಾರತೀಯರಿಗೆ ಗಂಗಾನದಿಯೇ ದೊಡ್ಡನದಿ. ಗಂಗಾವೇಣಿ ಎಂದರೂ ಸಮಾಧಾನವಾಗದ ಕವಿಗೆ, ಸರಸ್ವತಿಯನ್ನು ಭಾವಗಂಗಾವೇಣಿಯನ್ನಾಗಿ ನೋಡುವ ಬಯಕೆ. ಈ ವಿಶೇಷಣ ಸರಸ್ವತಿಯ ಅಲೌಕಿಕ ಪ್ರತಿಮೆಗೆ ಭವ್ಯಭೂಮತೆಯನ್ನು ತಂದುಕೊಟ್ಟಿದೆ. ಮುಂದಿನ ಭಾಗದಲ್ಲಿ ಸರಸ್ವತಿಯ ಸಾಮರ್ಥ್ಯದ ಅರಿವು ಮೂಡುತ್ತದೆ.

ತೀಡಿದರೆ ನಿನ್ನುಸಿರು, ಮದ್ದಿಗೆ ಕಿಡಿ ತಗುಳ್ದು
ಹೊಮ್ಮುವಂದದಿ ಜ್ಯೋತಿ, ಜಡವೆ ಚಿನ್ಮಯವಾಗಿ
ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ
ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ
ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ
ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ
ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ
ಪೊರಸೋಸಿದಪುದು ಕಬ್ಬಿನ ರಸಂ. ಮಂತ್ರಮಯಿ
ನೀಂ ಬಡಿಯೆ, ಬಂಡೆಯಿಂ ನೀರಿನೊಳ್ಬುಗ್ಗೆಯಂ
ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್
ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ
ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,
ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. (ಕವಿಕ್ರತು ದರ್ಶನ, ಸಾಲುಗಳು: ೧೨೮-೧೪೦)

ಕಬ್ಬಿಣದಿಂದಲೂ ಕಬ್ಬಿನ ರಸವುಕ್ಕಿಸುವ ವಾಣಿ ಇಲ್ಲಿ ರಸಸರಸ್ವತಿ. ಮಂತ್ರಮಯೀ ನೀನು ಬಡಿದರೆ ಬಂಡೆಯಿಂದಲೂ ನೀರುಕ್ಕುವುದು ಎಂಬ ಮಾತು ಋಗ್ವೇದದ, ರಭಸವಾಗಿ ಹರಿಯುವ ಸರಸ್ವತಿನದಿಯನ್ನು ಸೂಚಿಸುತ್ತದೆ. ‘ಕನ್ನಡದ ಪೊಸಸುಗ್ಗಿ ಬನ’ ಎಂಬ ಮಾತು ನವೋದಯ ಕಾವ್ಯಸಂದರ್ಭವನ್ನು ಧ್ವನಿಸುತ್ತದೆ. ನವೋದಯದ ಕೋಗಿಲೆಯಾದ ನೀನು ನನಗೆ ಕೃಪೆ ಮಾಡು ಎಂಬುದು ಕವಿಯ ಪ್ರಾರ್ಥನೆ.

‘ಶ್ರೀರಾಮಾಯಣದರ್ಶನಂ’ನ ಕೆಲವು ಸಂಚಿಕೆಗಳು (ಉದಾ: ಅಗ್ನಿಯಾತ್ರೆ ಮತ್ತು ಅತ್ತಲಾ ದೈತ್ಯ ಸಭೆಯೊಳ್) ಆರಂಭದಲ್ಲಿ ಸರಸ್ವತಿಯ ಬದಲು ಆದಿಕವಿ ವಾಲ್ಮೀಕಿಯನ್ನು ಕಾವ್ಯಾವೇಶಕ್ಕಾಗಿ ಸರಸ್ವತಿಯನ್ನು ಸ್ತುತಿಸುವಂತೆಯೇ ಸ್ತುತಿಸಿರುವುದುಂಟು. ಕೆಲವು ಸಂಚಿಕೆಯ ಪ್ರಾರಂಭದಲ್ಲಿ, ಒಮ್ಮೊಮ್ಮೆ ಸಂಚಿಕೆಯ ನಡುವೆಯೂ ಸರಸ್ವತಿಯ ಸ್ತುತಿಯಿದೆ. ಎಂಟನೆಯ ಸಂಚಿಕೆಯ ಆರಂಭದಲ್ಲಿ ಬಂದಿರುವ ಸರಸ್ವತಿಯ ಸ್ತುತಿ ಹೀಗಿದೆ.

ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡೆಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ. (ಕುಣಿದಳುರಿಯ ಉರ್ವಶಿ!, ಸಾಲುಗಳು: ೧-೪)

ಆತ್ಮವೆಂಬ ವೀಣೆಯ ತಂತಿಯನ್ನು ನುಡಿಸುವಂತೆ ರಸರಾಣಿಯನ್ನು ಕವಿ ಕೋರುತ್ತಾರೆ. ಮೊದಲೇ ‘ಪಸುಳೆ ನಾನ್; ತಾಯಿ ನೀನು’ ಎಂದಿರುವುದರಿಂದ ‘ತಾಯಿ ಕಂದನ ಕಯ್ಯನಾನುತೆ ನಡೆಯಿಪಂತೆ’ ಎಂಬ ಉಪಮೆ ಅರ್ಥಪೂರ್ಣವಾಗಿದೆ; ಕವಿಗಳೆಲ್ಲರೂ ಸರಸ್ವತಿಯ ಸುತರು ಎಂಬರ್ಥವನ್ನು ಧ್ವನಿಸುತ್ತದೆ. ಮುಂದುವರೆದು, ತನ್ನ ಮುಂದಿರುವ ಕಾವ್ಯದ ದೂರವನ್ನು, ಕಾವ್ಯದ ಉದ್ದೇಶವನ್ನು ಹೇಳಿ, ಅದಕ್ಕೆ ಸಹಕರಿಸುವಂತೆ ಸರಸ್ವತಿಯನ್ನು ಸ್ತುತಿಸುತ್ತಾರೆ.

........ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ!
ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ
ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ! (ಕುಣಿದಳುರಿಯ ಉರ್ವಶಿ!, ಸಾಲುಗಳು: ೧೪-೨೦)

ಕಾವ್ಯರಚನೆಯಲ್ಲಿ ತೊಡಗಿರುವ ಕವಿಗೆ ಕಾವ್ಯಾವೇಶವನ್ನು ಕೊಡುವಂತೆ, ಕಾವ್ಯವನ್ನು ಓದುವ ಸಹೃದಯರಿಗೂ ಸರಸ್ವತಿಯೆ ಕೃಪೆ ಮಾಡು ಎಂಬುದು ನವೀನವಾಗಿದೆ. ಸಹೃದಯರಿಗೆ ಒಲಿಯುವಳಾದ್ದರಿಂದ ಸರಸ್ವತಿಗೆ ‘ಸಹೃದಯ ಸರಸಲಕ್ಷ್ಮಿ’ ಎಂಬ ವಿಶೇಷಣ ಚೆನ್ನಾಗಿ ಒಪ್ಪುತ್ತದೆ. ‘ಕಿಷ್ಕಿಂಧಾ ಸಂಪುಟ’ದ ಪ್ರಾರಂಭದ ಸಂಚಿಕೆಯಲ್ಲಿ, ಸರಸ್ವತಿಯ ಕಯ್ಯ ವೀಣೆಯನ್ನು ಪ್ರಾರ್ಥಿಸುತ್ತಾರೆ.

ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್. (ಲಂಕೇಶನೊಲಿಸಿದನು ಮಾರೀಚನಂ, ಸಾಲುಗಳು: ೧-೬)

ಕವಿಗೆ ಸರಸ್ವತಿ ಮತ್ತು ಸರಸ್ವತಿಯ ವೀಣೆಯ ಬಗೆಗೆ ಯಾವ ಭೇದಭಾವವೂ ಇಲ್ಲ. ಆದರೆ, ಎರಡನ್ನೂ ಬೇರೆ ಬೇರೆ ಎಂಬಂತೆ ಸ್ತುತಿಸುವುದರಿಂದ ವೈವಿಧ್ಯ ಉಂಟಾಗಿದೆ; ಏಕತಾನತೆಯ ಭಯವಿರುವುದಿಲ್ಲ. ಸರಸ್ವತಿಗೆ ‘ಈ’ ‘ಈಕ್ಷತಿ’ ‘ಈಕ್ಷಿತಾ’ ಎಂಬ ಹೆಸರುಗಳೂ ಇವೆ. ಇವುಗಳಿಗೆ ಈಕ್ಷಿಸು, ಅವಲೋಕಿಸು, ಗ್ರಹಿಸು ಮುಂತಾದ ಅರ್ಥಗಳಿವೆ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಶತತಂತ್ರಿಯಾ ಶ್ರೀಕಂಠದಿಂ ಗಾನಗೆಯ್’ ಎಂಬ ಪ್ರಯೋಗಗಳಲ್ಲಿ, ಸರಸ್ವತಿಗಿರುವ ಈ ಹೆಸರುಗಳ ಅರ್ಥಪ್ರಸ್ತುತತೆಯನ್ನು ಕಂಡುಕೊಳ್ಳಬಹುದು. ಕಣ್ಣೆದುರಿಗೆ ತಾನು ಕಂಡದ್ದನ್ನು ಕವಿಮನಸ್ಸು ಗ್ರಹಿಸಿ, ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಅದಕ್ಕೆ ‘ಪ್ರತಿಭೆ’ ಎಂಬ ಸಾಮರ್ಥ್ಯ ಬೇಕು. ಆ ಪ್ರತಿಭೆಯೇ ಸರಸ್ವತಿ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಗಾನಗೆಯ್’ ‘ಸರ್ವಪಾರದರ್ಶಿಕೆ’ ಮೊದಲಾದ ಪ್ರಯೋಗಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿ ಹಾಡುತ್ತಿರುವವಳು ವೀಣಾಸರಸ್ವತಿ; ಬರೆಯುತ್ತಿರುವವನು ಕವಿ. ಆದ್ದರಿಂದ ಸರಸ್ವತಿಯ ದರ್ಶನವೇ ಕವಿಯ ದರ್ಶನವೂ ಆಗಿರುತ್ತದೆ. ಇಂತಹುದೇ ಮತ್ತೊಂದು ಪ್ರಸಂಗ ‘ರಯ್‌ಗೆ ಕರೆದೊಯ್, ಓ ಅಗ್ನಿ!’ ಸಂಚಿಕೆಯ ಪ್ರಾರಂಭದಲ್ಲಿ ಬಂದಿದೆ.

ಕ್ರಾಂತದರ್ಶಿನಿ, ಈ ಜಗತ್‌ಕಾಂತಿಕರೆ, ಶಾಂತೆ,
ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,
ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;
ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ (ರಯ್‌ಗೆ ಕರೆದೊಯ್, ಓ ಅಗ್ನಿ!, ಸಾಲುಗಳು: ೧-೫)

ಕಾವ್ಯದ, ಸಾಹಿತ್ಯದ ಅರಿವಿನಿಂದ ನಮ್ಮ ಭ್ರಮೆಗಳು ಕಳೆದು, ಶಾಂತಿ ಲಬಿಸುತ್ತದೆ; ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ‘ಭ್ರಾಂತಿಹರೆ’ ‘ಶಾಂತೆ’ ‘ಜಗತ್‌ಕಾಂತಿಕರೆ’ ಎಂಬ ವಿಶೇಷಣಗಳು ಗಮನಸೆಳೆಯುತ್ತವೆ.

‘ಇರ್ದುದು ಮಹೇಂದ್ರಾಚಲಂ’ ‘ರಾಮಾಯಣದರ್ಶನಂ’ನಲ್ಲಿ ಒಂದು ಪ್ರಮುಖ ಘಟ್ಟ. ಸೀತಾನ್ವೇಷಣೆಗಾಗಿ ದಿಕ್ಕು ದಿಕ್ಕಿಗೆ ಸುಗ್ರೀವನಾಜ್ಞೆ ಹೊತ್ತು ಹೋಗಿದ್ದ ಕಪಿಸೈನ್ಯದ ಕಾರ್ಯಫಲವನ್ನು ಅರಿತು ಮುಂದಿನ ಸಿದ್ಧತೆಗೆ ತೊಡಗುವ ಸಮಯ. ಕಪಿಸೈನ್ಯದ ಹಲವು ಗುಂಪುಗಳ ಕಾರ್ಯಸಾಹಸವನ್ನು ಅರಿಯಲು ಕವಿ ಆಶ್ರಯಿಸುವುದು ಮತ್ತೆ ವಿಪಂಚಿ ಅಂದರೆ ವೀಣೆಯನ್ನೆ!

ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್
ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ?
ಪ್ರಳಯ ಭೈರವ ಡಮರು ರೌರವಾವೇಶಮಂ
ಆಹ್ವಾನಗೆಯ್............................................. (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೧-೪)

ಕಲಾಲತಾಂಗಿಯ ಬೆರಳೆಂಬ ತಳಿರಿನಿಂದ ವೀಣೆಯನ್ನು ಮೀಟಿ ಹೊಮ್ಮಿಸಿದ ನಾದ, ಮುಂದಿನ ಸಾಹಸದ ಕಥೆಯನ್ನು ಹೇಳಲಾರದು. ಸಾಹಸದ ಕಥೆಯಾದ್ದರಿಂದ ಡಮರು ರೌರವಾವೇಶವನ್ನು ಆಹ್ವಾನಗೆಯ್ಯುವಂತೆ ಪ್ರಾರ್ಥಿಸುತ್ತಾರೆ. ಮುಂದುವರೆದು,

ತಾಂಡವ ಶಿವನ ಕಯ್ಯ ಡಮರು ಆವೇಶಮಂ
ಆಹ್ವಾನಗೆಯ್! ಸಾಗರೋಪಮಂ ಗಾನಗೆಯ್
ಆಂಜನೇಯನ ಸಾಗರೋಲ್ಲಂಘನದ ಮಹಾ
ಸಾಹಸ ಕಥಾಸರಿತ್ಸಾಗರದ ಸಂಮಥನಮಂ! (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೨೬-೨೮)

ಆಂಜನೇಯನ ಸಾಗರೋಲ್ಲಂಘನದ ಸಾಹಸದ ಕಥೆಯಾದ್ದರಿಂದ ಶಿವನ ಡಮರಿನ ಆವೇಶ ಬೇಕೆಂಬುದು ಕವಿಯ ಆಶಯ. ನಿರಂತರವಾಗಿ ಹರಿದ ಕವಿಪ್ರತಿಭೆ ನಿಲುಗಡೆಯ ಬಯಸಿ, ನಿಂತು, ಮುಂದುವರೆಯುವುದಕ್ಕೆ ಮೊದಲು ಮತ್ತೆ ಮತ್ತೆ ಸರಸ್ವತಿಗೆ ಕಾವ್ಯಾವೇಶಕ್ಕಾಗಿ,

.........ದರ್ಶನದೋರೆಮಗೆ,
ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್
ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ! (ಕನಕಲಂಕಾನ್ವೇಷಣಂ, ಸಾಲುಗಳು: ೧೦-೧೨)

ಎಂದು ಬೇಡುತ್ತದೆ. ಸರಸ್ವತಿಯ ಸತ್ಯವಾಣಿ ನಿತ್ಯವಾದುದು. ವಾಣಿಯ ವೀಣೆಯೊರೆದುದನೇ ಹಾಡುವ ಕವಿಯ ಹೃದಯ ವೀಣೆಯೂ ಅದನ್ನೇ ದನಿಗೈಯಬೇಕು. ಆ ದರ್ಶನವನ್ನೇ ಕವಿ ಬೇಡುತ್ತಾನೆ. ಹೀಗೆ ಘಟನೆಯಿಂದ ಘಟನೆಗೆ ಹೊರಳುವ ಮೊದಲು, ಸರಸ್ವತಿಯ ಸ್ತುತಿಯನ್ನು ಪರಿಣಾಮಕಾರಿಯಾಗಿ ‘ತಪಸ್ಸಿದ್ಧಿ’ ಎಂಬ ಸಂಚಿಕೆಯ ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿದೆ. ಲಂಕೆಯಲ್ಲಿನ ಯುದ್ಧ, ಯುದ್ಧಾನಂತರದ ಕಾರ್ಯಭರಗಳ ವರ್ಣನೆಯಲ್ಲಿ ಮುಳುಗಿಹೋಗಿದ್ದ ಕವಿಗೆ, ಒಮ್ಮೆಲೆ ಅಯೋಧ್ಯೆಯ ನೆನಪಾಗುತ್ತದೆ. ಆಗ ವಾಗ್ದೇವಿಯನ್ನೇ ಪ್ರಾಥಿಸುತ್ತಾರೆ.

ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,
ವಾಗ್ದೇವಿ? ಯಾಚಿಸುವೆ ಕೈಮುಗಿದು. ಪಿಂತಿರುಗು;
ಬಾ, ತಾಯಿ; ಸಾಲ್ಗುಮಾ ಲಂಕೆ, .?.....................
....................................................................
ತೋರೆಮಗೆಂತು ಸುವ್ರತನ್ ಭರತದೇವಂ?
...........................................................
ಹಾಡಿ ತೋರೆಮಗೆ, ಓ ತಾಯೆ, ಹೇ ವಾಗ್ದೇವಿ! (ತಪಸ್ಸಿದ್ಧಿ, ಸಾಲುಗಳು: ೧೫-೨೫)

ಈ ರೀತಿಯ ಕಾವ್ಯತಂತ್ರದ ಭಾಗವಾಗಿ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಸರಸ್ವತಿಯ ಸ್ತುತಿ ಮತ್ತೆ ಮತ್ತೆ ಬಳಕೆಯಾಗಿದೆ.

ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ
ಕಾಮಿಸಿದನಿನಿಯನೆಂದನ್ಯ ವಿಷಯ ವಧೂ
ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,
ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ
ಪ್ರೇಮಮುಂ ರಾಮ ಮಹಿಮಾ ಕೀರ್‍ತಿ ಕಥೆಯಲ್ತೆ?
ಕವಿಯೊಲ್ಮೆ ಕಡಲಲ್ತೆ? ಬಡಬ ಕುಂಭೋದ್ಭವರ್
ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್
ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್
ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ
ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ
ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ! (ಸೈನ್ಯಗುಪ್ತಿ, ಸಾಲುಗಳು: ೧-೧೨)

ಸರಸ್ವತಿಯ ಸ್ತುತಿ ಕಾವ್ಯತಂತ್ರವಾಗಿ ಬಳಕೆಯಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆ ಮೇಲಿನ ಭಾಗ. ಕವಿಪ್ರತಿಭೆ ಅಲೌಕಿಕವಾದರೂ, ಕವಿ ಲೌಕಿಕನೇ! ಕಾವ್ಯ ರಚನೆ ನಿಂತು, ಮತ್ತೆ ಪ್ರಾರಂಭವಾಗಬೇಕಾದಾಗ, ಸರಸ್ವತಿಯನ್ನು ರಮಿಸಿ, ನಮಿಸಿ ಮುಂದುವರೆಯುವ ಸುಂದರ ಚಿತ್ರಣ ಇದಾಗಿದೆ. ಇನಿಯನಾದ ಬ್ರಹ್ಮನೇನಾದರೂ ಅನ್ಯ ವಿಷಯ ವಧೂ ಸರೋಜೆಗೆ ಒಲಿದನೆಂದು ಕೋಪವೆ? ಅದೂ ಒಂದು ಮಹಿಮೆಯಲ್ಲವೆ. ಉದಾತ್ತೆಯಾದ ನೀನು ತಂಗೆಗೆ ಕರುಬುವುದೆ? ಸೃಷ್ಟಿಕರ್ತನೊಲ್ಮೆ ಕಡಂತೆ. ಅದನ್ನು ಕೃಶಾಂಗಿಯಾದ ನಿನ್ನ ತಂಗೆಯೊಬ್ಬಳು ಎಷ್ಟೆಂದು ಕುಡಿಯಬಲ್ಲಳು? ಕೋಪವನ್ನು ಬಿಡು ಎಂದು ಸಂತೈಸಿ, ರಮಿಸಿ, ವೀಣೆಯನ್ನು ಹಿಡಿದು ಮುಂದಿನ ಕಥೆಯನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯ ಸಾಹಿತ್ಯದಲ್ಲಿ, ಪಾತ್ರಕ್ಕೆ ಒಂದು ಹೆಸರನ್ನಿಟ್ಟರೆ ಕವಿಯ ಕೆಲಸ ಮುಗಿದಂತೆ; ಆ ಪಾತ್ರಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ಕವಿ ನಿರ್ಲಿಪ್ತನಾಗಿರಬೇಕು. ಹಾಗೇ, ತನ್ನದೇ ಕಾವ್ಯದ ಪಾತ್ರವೊಂದು ಏನೋ ಗಹನವಾದ, ರಹಸ್ಯವಾದ (ಬೇರೆ ಪಾತ್ರಗಳಿಗೆ ತಿಳಿಯದಂತೆ) ಕಾರ್ಯವೊಂದನ್ನು ಎಸಗುತ್ತಿರುತ್ತದೆ. ಆಗ ಸ್ವತಃ ಕವಿಯೇ ಅಚ್ಚರಿಪಡುತ್ತಾನೆ. ಅದೇನೆಂದು ತನ್ನ ಸ್ಫೂರ್ತಿಯ ಸೆಲೆಯಾದ, ತನಗೆ ಕಾವ್ಯವನ್ನು ಹೇಳಿ ಬರೆಸುತ್ತಿರುವ ವಾಗ್ದೇವಿಯ ಮೊರೆಹೋಗುತ್ತಾನೆ. ಸಂದರ್ಭಕ್ಕನುಗುಣವಾದ ವಿಶೇಷಣಗಳೊಂದಿಗೆ, ಅಂತಹದೊಂದು ಸನ್ನಿವೇಶ ‘ದಶಾನನ ಸ್ವಪ್ನಸಿದ್ಧಿ’ ಸಂಚಿಕೆಯ ಆರಂಭದಲ್ಲಿ ಬಂದಿದೆ.

ಪೇಳ್ ತಾಯೆ
ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ
ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?
ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:
ಹೊರನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ
ಲೌಕಿಕಾತೀತಮಹ ನಿತ್ಯಸತ್ಯಂಗಳಂ
ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ
ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ
ದೇಶಮಂ, ಕಾರಣವನಂತೆ ಕಾರಣದಾಚೆ
ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ
ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ! (ದಶಾನನ ಸ್ವಪ್ನಸಿದ್ಧಿ, ಸಾಲುಗಳು: ೫-೧೫)

ಸರಸ್ವತಿಯು ಜ್ಞಾನದೇವಿ, ವಿಜ್ಞಾನ ನೇತ್ರಿ, ವಿಶ್ವಾಂತರಾತ್ಮೆಯಾದ್ದರಿಂದ ಕಾಲ, ದೇಶ, ಕಾರಣ, ಕಾರಣದಾಚೆಗಿನ ಲೀಲಾ, ಉದ್ದೇಶ ಇವೆಲ್ಲವನ್ನೂ ತೋರಿಸಬಲ್ಲಳು. ‘ಅವಿದ್ಯೆ, ವಿದ್ಯೆ ವಿದ್ಯಾತೀತೆ’ ಎಂಬ ಮಾತಂತೂ ಸರಸ್ವತಿಯ ಅಲೌಕಿಕ ಪ್ರತಿಮೆಗೆ ತೊಡಿಸಿದ ನುಡಿಯಾಭರಣವಾಗಿದೆ.

ಕುವೆಂಪು ಅವರ ಸರಸ್ವತಿಯ ವಿರಾಡ್‌ದರ್ಶನವಾಗುವುದು, ಋತಚಿತ್ ಸ್ವರೂಪಿಣಿಯರಾದ ಶಿವೆ, ಸರಸ್ವತಿ ಮತ್ತು ಲಕ್ಷ್ಮಿಯರನ್ನು ವಂದಿಸಿ ಪ್ರಾರಂಭಿಸುವ ‘ಅಭಿಷೇಕ ವಿರಾಡ್‌ದರ್ಶನ’ವೆಂಬ ಕೊನೆಯ ಸಂಚಿಕೆಯಲ್ಲಿ. ಶ್ರೀರಾಮ ಪಟ್ಟಾಭಿಷೇಕದ ವಿಶ್ವರೂಪವನ್ನು ತೋರಿಸಲ್ ಸ್ವತಃ ‘ಅನಾದಿಕವಿ’ಯೇ ಬರುತ್ತಾನೆ. ಇದುವರೆಗೂ ‘ನೀನೊರೆದುದನು ನಾನು ಬರೆವೆನು’ ಎನ್ನುತ್ತಿದ್ದ ಕವಿ, ಆ ಸೃಷ್ಟಿಪ್ರಜ್ಞೆಗೆ ‘ಅನಾದಿಕವಿ’ ಎಂಬ ವಿಶೇಷಣವನ್ನು ಇಲ್ಲಿ ತಂದಿದ್ದಾರೆ. ಪುಲ್ಲಿಂಗವಾಚಿಯಾದರೂ, ‘ಅನಾದಿಕವಿ’ ಕಲ್ಪನೆ ಸರಸ್ವತೀ ತತ್ವದ ವಿಸ್ತೃತ ರೂಪವೇ ಆಗಿದೆ. ‘ನೀನಾರು?’ ಎಂದ ಕವಿಗೆ,

ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು! (ಅಭಿಷೇಕ ವಿರಾಡ್‌ದರ್ಶನಂ, ಸಾಲುಗಳು: ೩೪-೩೮)

ಇಲ್ಲಿ ವ್ಯಕ್ತವಾಗುವ ಸರಸ್ವತಿ ಸ್ವರೂಪ ಕಾಲದೇಶಗಳನ್ನು ಮೀರಿದ್ದು. ಕಾವ್ಯದುದ್ದಕ್ಕೂ, ಸರಸ್ವತಿ ಮತ್ತು ಸರಸ್ವತಿಯ ವೀಣೆಯನ್ನು ಕಾವ್ಯಾವೇಶಕ್ಕಾಗಿ ಬೇಡಿದ ಕವಿಪ್ರತಿಭೆ, ಎಲ್ಲ ಕವಿಗಳಿಗೂ ಮಾತೃರೂಪವಾದ ಪ್ರತಿಭಾಸ್ವರೂಪವನ್ನು ಸರಸ್ವತಿಗೆ ನಿರ್ಮಿಸಿದೆ. ಈ ಸರಸ್ವತಿಯು ಸರ್ವಭಾಷಾಮಯೀ ಮಾತ್ರವಲ್ಲ. ವಿಶ್ವಮಾತೆಯೂ ಹೌದು. ಕಾವ್ಯಾರಂಭದಲ್ಲಿ ಬಂದ ‘ವಿಶ್ವವಾಣ’ ಎಂಬ ಒಂದು ಮಾತು, ವೇದವಾಗುವುದು ಈ ಕೊನೆಯ ಸಂಚಿಕೆಯಲ್ಲಿ. ಸರಸ್ವತಿಯು ನುಡಿಸಿದ್ದನ್ನಷ್ಟೇ ಸರಸ್ವತಿಯ ಬಾಹುರೂಪರಾದ ಕವಿಗಳು ಬರೆಯುವುದು. ಆದ್ದರಿಂದ ಕಾವ್ಯವೆಂಬುದು ಸರಸ್ವತಿಯ ಕೃತಿ, ಭಗವಂತನ ಅವತಾರವಾಗುತ್ತದೆ. ‘ಕೃತಿರೂಪದಿಂದಲೂ ಭಗವಂತನ ಅವತಾರವಾಗುತ್ತದೆ’ ಎಂಬ ಮಾತಿಗೆ ಅನುಗುಣವಾಗಿಯೇ, ಕವಿ ತಾನು ಬರೆದ ‘ಕೃತಿಸರಸ್ವತಿ’ಗೆ ತಾನೇ ಮಣಿಯುತ್ತಾನೆ.

ಅಂದ ಹಾಗೆ ‘ನುಡಿರಾಣಿಯ ಗುಡಿ ಕುವೆಂಪು’ ಎಂಬ ಸಾಲು ಕುವೆಂಪು ಅವರ ‘ಕುವೆಂಪು’ ಎಂಬ ಕವಿತೆಯದ್ದು!

1 comment:

Badarinath Palavalli said...

'ಬಹುನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು!'
ಇದಕಿಂತಲೂ ಬೇಗ ಸರಸ್ವತಿಯ ಪೂಜೆ!