Monday, March 09, 2015

ಸರಸ್ವತಿ ನದಿ ಮತ್ತು ನದೀದೇವತೆ

ಸರಸ್ವತಿ ನದಿ ಮತ್ತು ನದೀದೇವತೆ
ಗಂಗಾ-ಯುಮುನ-ಸರಸ್ವತೀ ಈ ಮೂರು ನದಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಅಲಹಾಬಾದಿನಲ್ಲಿರುವ, ಭೌತಿಕವಾಗಿ ಕಣ್ಣಿಗೆ ಕಾಣುವ ಎರಡು ನದಿಗಳ ಸಂಗಮವನ್ನು ಸ್ಪಷ್ಟವಾಗಿ ನಿರಾಕರಿಸಿ, ಅಂತರ್ಗಾಮಿನಿಯಾದ ಸರಸ್ವತೀ ನದಿಯನ್ನು ಸೇರಿಸಿ ’ತ್ರಿವೇಣಿಸಂಗಮ’ ಎಂಬ ಕಲ್ಪನೆಯನ್ನು ಸುಮಾರು ಮೂರೂವರೆ ಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರುವಷ್ಟರ ಮಟ್ಟಿಗೆ, ಈ ಮೂರೂ ನದಿಗಳಿಗೆ ವಿಶೇಷ ಸ್ಥಾನವಿದೆ. ವೈಜ್ಞಾನಿಕವಾಗಿ ಸರಸ್ವತೀ ನದಿಯ ಪಾತ್ರ ಅದಲ್ಲವೆಂದು ದೃಢಪಟ್ಟಿದ್ದರೂ, ಜನಮಾನಸದಲ್ಲಿರುವ ನಂಬಿಕೆಗೆ ಚ್ಯುತಿ ಬಂದಿಲ್ಲ. ಇದರಿಂದ ಗಂಗಾ ಯಮುನಾ ನದಿಗಳಿಗೆ ಸಿಕ್ಕಿರುವ ಮಹತ್ವಕ್ಕಿಂತ ’ಅಂತರ್ಗಾಮಿಯಾಗಿದೆ’ ಎಂದು ನಂಬಿರುವ ಸರಸ್ವತೀ ನದಿ ಮಾತ್ರ ಭಾರತೀಯರ ನಂಬಿಕೆಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದೆ. ನದಿ ಇದ್ದ ಬಗ್ಗೆಯೂ, ನದಿ ಪಾತ್ರದ ಬಗ್ಗೆಯೂ ಇರುವ ವಿಚಾರಗಳು ನಮಗಿಲ್ಲಿ ಅಪ್ರಸ್ತುತ. ಆದರೆ ಋಗ್ವೇದದಲ್ಲಿ ಅಂತರ್ಗತವಾಗಿರುವ ಸರಸ್ವತೀ ನದಿ ವಿಚಾರವನ್ನು ಮಾತ್ರ ಇಲ್ಲಿ ಗಮನಿಸಿದೆ.
ಸುಮಾರು ೩೦ಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತೀ ನದಿಯ ವಿಚಾರಗಳಿವೆ. ನದಿ ಮತ್ತು ನದೀದೇವತೆಗಳ ನಡುವೆ ಅಭೇದ ಕಲ್ಪನೆಯಿದೆ. ’ನದೀ’ ಎಂಬ ಪದವೇ ಸ್ತ್ರೀಲಿಂಗವಾಚಿಯಾಗಿರುವುದು ಇದಕ್ಕೆ ಕಾರಣವಿರಬಹುದು. ಅಂಬಿತಮೇ, ನದೀತಮೇ ಮತ್ತು ದೇವೀತಮೇ ಈ ಪದಗಳೆಲ್ಲವೂ ಸ್ತ್ರೀಲಿಂಗವಾಚಿಗಳಾಗಿವೆ. ವಾಕ್‌ದೇವತೆಯೂ ಕೂಡಾ ’ವಾಗ್ದೇವಿ’ ಎಂದು ಸ್ತ್ರೀಲಿಂಗವಾಚಿಯಾಗಿದೆ. ಆದ್ದರಿಂದ ಇಲ್ಲಿ ನದಿ ಮತ್ತು ನದೀದೇವತೆ ಎರಡನ್ನೂ ಒಟ್ಟಾಗಿಯೇ ಚರ್ಚಿಸಲಾಗಿದೆ.
ಗಂಗಾ, ಯಮುನ, ಸರಸ್ವತಿ, ಶುತದ್ರಿ, ಪರುಷ್ಣಿ, ಅಸಿಕ್ನಿ ನದಿಯೊಡಗೂಡಿದ ಮರುದ್ವೃಧೆ, ವಿತಸ್ತೆ ಮತ್ತು ಸುಷೋಮಾ ನದಿಯೊಡಗೂಡಿದ ಆರ್ಜಿಕಾ ನದಿಗಳನ್ನು ಒಂದೇ ಋಕ್ಕಿನಲ್ಲಿ ಹೇಳಿದೆ. ಏಳು ಪ್ರಮುಖ ನದಿಗಳ ಮತ್ತು ಮೂರು ಉಪನದಿಗಳ ಹೆಸರುಗಳನ್ನು ಹೇಳಿದೆ. ಆದರೆ ಯಾವುದು ಪ್ರಮುಖ? ಯಾವುದು ಉಪನದಿ? ಎಂಬುದು ಸ್ಪಷ್ಟವಾಗಿಲ್ಲ. ಗಂಗಾ, ಯಮುನಾ, ಸರಸ್ವತಿ, ಶುತದ್ರಿ, ಪರುಷ್ಣಿ -ಈ ಐದು ಮುಖ್ಯನದಿಗಳು ಎಂಬುದು ಸ್ಪಷ್ಟ. ’ಅಸಿಕ್ನ್ಯಾ ಮರುದ್ವದೇ’ ಮತ್ತು ’ವಿತಸ್ತಯಾ ಸುಷೋಮಯಾ ಆರ್ಜಿಕೀಯೇ’ ಎಂಬಲ್ಲಿ ಮರುದ್ವದೇ ಮತ್ತು ಆರ್ಜಿಕಾ ಪ್ರಮುಖ ನದಿಗಳಾಗಿಯೂ, ಅಸಿಕ್ನೀ, ವಿತಸ್ತೆ ಮತ್ತು ಸುಷೋಮಾ ಈ ಮೂರು ನದಿಗಳು ಉಪನದಿಗಳಾಗಿಯೂ ಇರುವಂತೆ ಕಾಣುತ್ತದೆ. ಆದರೆ ಸುಷೋಮಾ ನದಿಯನ್ನು ಸಿಂಧೂ ನದಿಗೆ ಸಮೀಕರಿಸಿರುವುದರಿಂದ, ಅದನ್ನು ಉಪನದಿಯೆಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಸರಸ್ವತಿ-ಸಿಂಧೂ ನದಿಗಳು ಅತ್ಯಂತ ಹೆಚ್ಚು ಜಲಸಂಪತ್ತಿನಿಂದ ಕೂಡಿದವುಗಳೆಂದು ಋಗ್ವೇದದಲ್ಲಿಯೇ ಹೇಳಿದೆ.
ಗಂಗಾದಿ ಸಪ್ತಸಹೋದರೀ ನದಿಗಳೆಂದು ಎರಡು ಋಕ್ಕುಗಳಲ್ಲಿ ಹೇಳಿದೆ. ಸಪ್ತನದಿಗಳಲ್ಲಿ ಏಳನೆಯದೂ ಮಾತೃಭೂತವಾದದ್ದೂ ಸರಸ್ವತೀ ನದಿ. ಆದರೆ ಪ್ರೀತಿಪಾತ್ರರ ನಡುವೆ ಪ್ರಿಯವಾಗಿರುವ (ಸಪ್ತಸ್ವಸಾ) ಗಂಗಾದಿ ಸಪ್ತಸಹೋದರಿಯರನ್ನುಳ್ಳವಳೂ ಎಂದಿರುವಲ್ಲಿ ಸರಸ್ವತಿನದಿಯು ಸೇರುವುದಿಲ್ಲವೆಂದು ಹೇಳಬಹುದು. ’ಸರಸ್ವತೀ ಸಪ್ತಸಿಂಧವಃ ಮೇ ಹವನಂ ಅವಂತು’ ಅಂದರೆ ಸರಸ್ವತೀ ದೇವಿಯೂ, ಗಂಗಾದಿ ಸಪ್ತನದಿಗಳೂ ನನ್ನ ಆಹ್ವಾನವನ್ನು ಕೇಳಲಿ ಎಂಬುದನ್ನು ಮತ್ತು ಸಪ್ತಧಾತುಃ ಅಂದರೆ ಗಂಗಾದಿ ಸಪ್ತಾವಯವಗಳುಳ್ಳವಳೂ ಎಂಬುದನ್ನು ಗಮನಿಸಿದರೆ, ಸರಸ್ವತಿಯೇ ಬೇರೆ; ಗಂಗಾದಿ ಸಪ್ತಾ ನದಿಗಳೇ ಬೇರೆ ಎಂಬ ಅರ್ಥ ಬರುತ್ತದೆ. ೬.೬೧.೧೦ನೇ ಋಕ್‌ನ ಸಾಯಣಭಾಷ್ಯದಲ್ಲಿ ’ಸಪ್ತಸ್ವಸಾ ಎಂಬ ಶಬ್ದಕ್ಕೆ ಎರಡು ವಿಧವಾಗಿ ಅರ್ಥ ಮಾಡಬೇಕು. ಸರಸ್ವತಿಯನ್ನು ವಾಗ್ದೇವತೆ ಎಂಬರ್ಥದಲ್ಲಿ ಸ್ತುತಿಸುವಾಗ ಸಪ್ತಸ್ವಸಾ ಎಂದರೆ ಗಾಯತ್ರ್ಯಾದಿ ಸಪ್ತಛಂದಸ್ಸುಗಳೆಂದೂ, ನದಿಯೆಂಬರ್ಥದಲ್ಲಿ ಸ್ತುತಿಸುವಾಗ ಗಂಗಾದಿ ಸಪ್ತನದಿಗಳೆಂದೂ ಅರ್ಥವನ್ನು ಹೇಳಬೇಕು’ ಎಂಬ ವಿವರವಿದೆ. ಆ ಋಕ್ಕಿನ (ನಃ ಪ್ರಿಯಾಸು ಪ್ರಿಯಾ ಸಪ್ತಸ್ವಸಾ ಸುಜಷ್ವಾ ಸರಸ್ವತೀ ಸ್ತೋಮ್ಯಾ ಭೂತ್) ಭಾವಾರ್ಥವೂ ’ನಮ್ಮ ಪ್ರೀತಿಪಾತ್ರರ ನಡುವೆ ಅತ್ಯಂತ ಪ್ರಿಯತಮಳೂ, ಗಂಗಾದಿ ಸಪ್ತಸಹೋದರಿಯುಳ್ಳವಳೂ, ಋಷಿಮುನಿಗಳಿಂದ ಸೇವಿತಳೂ ಆದ ಸರಸ್ವತೀ (ನದಿ ಅಥವಾ ವಾಕ್‌ದೇವತೆ) ನಮಗೆ ಸ್ತುತಿಪಾತ್ರಳಾಗಿರಲಿ’ ಎಂದೇ ಇದೆ. ಗಾಯತ್ರಿ ಮೊದಲಾದ ಸಪ್ತಛಂದಸ್ಸುಗಳಲ್ಲಿ ಸರಸ್ವತಿ ಎಂಬ ಛಂದಸ್ಸು ಇಲ್ಲ ಎಂಬುದನ್ನು ಗಮನಿಸಬೇಕು.
೧೦.೭೫.೫ನೇ ಋಕ್ಕಿನಲ್ಲಿ ಬರುವ ಸುಷೋಮಾ (ಸಿಂಧೂ) ನದಿಯನ್ನು ಮುಖ್ಯ ನದಿಯನ್ನಾಗಿ ಅರ್ಥೈಸಿದರೆ, ಸರಸ್ವತಿಯನ್ನು ಬಿಟ್ಟೂ, ಏಳು ಮುಖ್ಯನದಿಗಳಾಗುತ್ತವೆ. ಗಂಗಾದಿ ಸಪ್ತನದಿಗಳು ಸರಸ್ವತಿಗೆ ಸಹೋದರಿಯರಾಗುತ್ತಾರೆ. ಸಪ್ತನದಿಗಳ ಮಾತೃಭೂತವಾದದ್ದು ಸರಸ್ವತೀ ನದಿ. ಆದ್ದರಿಂದ ಸರಸ್ವತೀ ನದಿಗೆ ಮಾತೃಸ್ಥಾನ ಸಿಗುತ್ತದೆ. ಗಂಗಾ, ಯಮುನ, ಶುತದ್ರಿ (ಸಟ್ಲೆಜ್), ಪರುಷ್ಣಿ (ರಾವಿ), ಅಸಿಕ್ನಿ (ಚೀನಾಬ್), ವಿತಸ್ತೆ (ಜೀಲಮ್), ಮತ್ತು ಸುಷೋಮಾ (ಸಿಂಧೂ) ಈ ಏಳನ್ನು (ಸಪ್ತಸ್ವಸಾ -ಗಂಗಾದಿ ಸಪ್ತನದಿಗಳು) ಪ್ರಮುಖ ನದಿಗಳನ್ನಾಗಿಯೂ, ಮರುದ್ವೃದೆ (ಜೀಲಮ್ ಮತ್ತು ಚೀನಾಬ್ ನದಿಗಳ ಸಂಗಮದಿಂದಾದ ಒಂದು ನದಿ) ಮತ್ತು ಆರ್ಜಿಕಾ (ಬಿಯಾಸ್) ಈ ಎರಡು ನದಿಗಳನ್ನು ಉಪನದಿಗಳನ್ನಾಗಿಯೂ ಊಹಿಸಬಹುದು. ಋಗ್ವೇದದಲ್ಲಿ ’ಸಪ್ತಸ್ವಸಾ’ ’ಸಪ್ತಧೀ’ ಎಂದು ಸರಸ್ವತಿಯನ್ನು ಕರೆದಿರುವಂತೆ, ಯಜುರ್ವೇದದಲ್ಲಿ ’ಪಂಚಧಾ’ ಎಂದು ಸರಸ್ವತಿಯನ್ನು ಸೇರಿಸಿಕೊಂಡು ಐದು ನದಿಗಳ ಗುಂಪನ್ನು ಸೂಚಿಸಲಾಗಿದೆ. ಆಗ ಋಗ್ವೇದದಲ್ಲಿ ಪ್ರಧಾನವಾಗಿ ಸೂಚಿಸಲಾಗಿರುವ ಗಂಗಾ-ಯಮುನಾ ಮತ್ತು ಶುತದ್ರಿ (ಸಟ್ಲೆಜ್)- ಪರುಷ್ಣಿ (ರಾವಿ) ನದಿಗಳ ಮಧ್ಯದಲ್ಲಿ ಸರಸ್ವತೀ ನದಿಯನ್ನು ಸೇರಿಸಿಕೊಳ್ಳಬೇಕಾಗುತ್ತದೆ.
’ಪ್ರವಾಹಯುಕ್ತಳಾದ, ರಥವೇಗದಲ್ಲಿ ಹರಿಯುವ ಸರಸ್ವತೀ ನದಿ ತನ್ನ ಮಹಿಮೆಯಿಂದ ಉಳಿದ ಸಮಸ್ತನದಿಗಳನ್ನು ತನ್ನಲ್ಲಿಯೇ ಸೇರಿಸಿಕೊಂಡಿದ್ದಾಳೆ’ ಮತ್ತು ’ಪ್ರವಹಿಸುತ್ತಿರುವ ಇತರ ಉದಕಗಳೊಂದಿಗೆ ವೃದ್ಧಿಯನ್ನು ಹೊಂದತಕ್ಕ ಸರಸ್ವತೀ ನದಿ’ ಎಂಬ ಮಾತುಗಳನ್ನು ಗಮನಿಸಿದರೆ, ಸರಸ್ವತಿ ನದಿಗೆ ಹಲವಾರು ಉಪನದಿಗಳಿದ್ದವು ಎನ್ನಿಸುತ್ತದೆ.
ಸರಸ್ವತೀ ನದಿ ಪರ್ವತಗಳಿಂದ ಸಮುದ್ರದವರೆಗೂ, ಸಮುದ್ರದೋಪಾದಿಯಲ್ಲಿ ಶಬ್ದ ಮಾಡುತ್ತಾ ಅತ್ಯಂತ ವೇಗವಾಗಿ ಪ್ರವಾಹವನ್ನುಂಟು ಮಾಡುತ್ತಾ ಹರಿಯುತ್ತದೆ. ಯಜುರ್ವೇದದ ಒಂದು ಮಂತ್ರವು ’(ಸರಸ್ವತೀ ನದಿ) ತನ್ನ ಹೆಚ್ಚಾದ ಉದಕಳನ್ನು ವಿಶ್ವಕ್ಕೆಲ್ಲಾ ಪ್ರೋಕ್ಷಿಸುತ್ತಿದ್ದಳು (ಮಹೋ ಮಹತ್ ಅರ್ಣಃ ಉದಕಂ ಪ್ರಚೇತಯತಿ)’ ಎಂದು ವರ್ಣಿಸುತ್ತದೆ. ಬಹುಶಃ ಸರಸ್ವತೀ ನದಿಯಲ್ಲಿ ಉಂಟಾಗುತ್ತಿದ್ದ ಪ್ರವಾಹವನ್ನು ಇದು ಸೂಚಿಸುತ್ತಿರಬಹುದು. ಅದರ ವೇಗ ರಭಸ ಎಂತಹುದೆಂಬುದಕ್ಕೆ ಹೋಲಿಕೆಯೊಂದನ್ನು ಒಂದು ಋಕ್ಕು ನೀಡುತ್ತದೆ. ತಾವರೆಯ ದಂಟು ಕೆಸರನ್ನು ಕೊರೆಯುವಂತೆ, ತನ್ನ ಶಕ್ತಿಯುತವಾದ ದೊಡ್ಡದಾದ ಅಲೆಗಳಿಂದ ಪರ್ವತಗಳನ್ನೇ ಕೊರೆಯುತ್ತಾ, ಹೆಮ್ಮರಗಳನ್ನು ಉರುಳಿಸುವಷ್ಟು ರಭಸವಾದದ್ದು ಸರಸ್ವತೀ ನದಿ. ಈ ನದಿಯ ಆರ್ಭಟದಿಂದ ಆಗಾಗ ತೊಂದರೆಗಳಾಗುತ್ತಿದ್ದುದರಿಂದ, ’ಅತಿಯಾದ ಪ್ರವಾಹದಿಂದ ತೊಂದರೆ ಮಾಡಬೇಡ’ ಎಂದು ಸರಸ್ವತಿಯನ್ನು ಪ್ರಾರ್ಥಿಸಿರುವುದಿದೆ.
ಸರಸ್ವತಿ ಎಂಬ ಹೆಸರೇ ಹರಿಯುವ ನೀರನ್ನು ಸೂಚಿಸುತ್ತದೆ. ’ಸರಸ್ವತೀ -ಸರ ಇತ್ಯುದಕನಾಮ ಸರ್ತೇಸ್ತದ್ವತೀ’ (ನಿರುಕ್ತ ೯-೨೬) ’ಸರವೆಂದರೆ ಉದಕವೆಂದರ್ಥ; ಉದಕವನ್ನು ಉಳ್ಳವಳು ಸರಸ್ವತೀ’ ಎನ್ನಲಾಗಿದೆ. ’ಋತಾವರಿ ಸರಸ್ವತೀ’ ಎಂದರೆ ಉದಕಯುಕ್ತಳಾದ (ನದಿ) ಸರಸ್ವತಿ ಎಂದರ್ಥವಿದೆ. ಇನ್ನೊಂದು ಋಕ್ಕಿನಲ್ಲಿ ಸರಸ್ವತಿಯನ್ನು ’ಋತಜಾತಃ’ ಅಂದರೆ ಉದಕದಿಂದ ಹುಟ್ಟಿದವಳು ಎಂದೇ ಕರೆಯಲಾಗಿದೆ. ಸರಸ್ವತೀ ನದಿಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ನದಿ ಹಾಗೂ ನದಿಗಳಿಗೆಲ್ಲಾ ಮಾತೃಪ್ರಾಯಳಾಗಿರುವವಳು. ಸರಸ್ವತಿಯು ಮಹತ್ತನ್ನುಳ್ಳ ನದಿಗಳ ನಡುವೆ ಅಧಿಕ ಮಹತ್ತನ್ನುಳ್ಳದ್ದು ಮತ್ತು ಬೇರೆ ನದಿಗಳಿಗಿಂತ ಪರಿಶುದ್ಧವಾದ ಸ್ವಚ್ಛವಾದ ನದಿಯಾಗಿದೆ. ಸರಸ್ವತಿಯು ನೀರನ್ನು ಪ್ರೋಕ್ಷಿಸುವವಳು. ಮಾನವರಿಗಾಗಿ ಉದಕರೂಪದಲ್ಲಿ ಸರಸ್ವತೀ ನದಿ ಹರಿಯುತ್ತಿದ್ದಾಳೆ. ಆದ್ದರಿಂದ ಅವಳು ಜನರನ್ನು ಶುದ್ಧಿಗೊಳಿಸುವ ಶುದ್ಧಿಕಾರಕಳು ಎಂಬ ಋಗ್ವೇದದ ಮಾತುಗಳಿಂದ ಸರಸ್ವತೀ ಪವಿತ್ರವಾದ ನದಿ ಎಂಬ ನಂಬಿಕೆಯಿದ್ದುದು ಸ್ಪಷ್ಟವಾಗುತ್ತದೆ.
ಹೀಗೆ ಸರಸ್ವತಿಯು ಪವಿತ್ರವಾದ ನದಿಯಾದ್ದರಿಂದಲೇ ಅದರ ದಡದಲ್ಲಿ ಯಾವಾಗಲೂ ಯಜ್ಞಗಳು ನಡೆಯುತ್ತಿರುತ್ತವೆ. ಯಾವುದೇ ದೇವತೆಗೆ ಸಂಬಂಧಿಸಿದ ಯಜ್ಞವಾದರೂ ಅದು ಸರಸ್ವತೀ ನದಿಯ ದಡದಲ್ಲಿಯೇ ನಡೆಯಬೇಕು. ನಹುಷನು ಸಾವಿರವರ್ಷಗಳವರೆಗೂ ನಡೆಸಲು ಉದ್ದೇಶಿಸಿದ್ದ ಯಜ್ಞಕ್ಕೆ, ಬೇರೆ ನದಿಗಳೂ, ಸರಸ್ವತೀ ನದಿಯ ದಂಡೆಯನ್ನೇ ಸೂಚಿಸುತ್ತವೆ. ’ನಹುಷನ ಪ್ರಾರ್ಥನೆಯಿಂದ ಸುಪ್ರೀತಳಾದ ಸರಸ್ವತೀ, ಸಕಲ ಭೂತ ಜಾತಗಳಿಗೂ ಪ್ರಭೂತವಾದ ಧನಗಳನ್ನು ಕೊಡುತ್ತಾ, ರಾಜನಾದ ನಹುಷನಿಗೆ ಸಾವಿರ ವರ್ಷಗಳಿಗಾಗುವಷ್ಟು ಘೃತವನ್ನೂ ಕ್ಷೀರವನ್ನೂ ಕರೆದಳು ಎಂದು ವಸಿಷ್ಠ ಋಷಿಯೇ ವರ್ಣಿಸಿದ್ದಾನೆ’ ಎಂದೂ ಋಗ್ವೇದದಲ್ಲಿ ಹೇಳಿದೆ.
ಋಗ್ವೇದದಲ್ಲಿ ೧೦ನೇ ಮಂಡಲದ ೭೫ನೇ ಸೂಕ್ತವೂ ನದೀ ಸೂಕ್ತವೆಂದೇ ಹೆಸರಾಗಿದೆ. ಒಟ್ಟಾರೆ ಋಗ್ವೇದದಲ್ಲಿ ಹಲವಾರು ನದಿಗಳು ಸ್ತುತಿಸಲ್ಪಟ್ಟಿದ್ದರೂ, ಮುಖ್ಯವಾಗಿ ಸರಸ್ವತೀ ಮತ್ತು ಸಿಂಧೂನದಿಯ ಸ್ತುತಿಯೇ ಹೆಚ್ಚಾಗಿದೆ. ಸಿಂಧೂನದಿಗೆ ಉಪನದಿಗಳು ಇರುವುದು, ಹೆಚ್ಚಾಗಿ ನೀರಿರುವುದು ಇದೇ ಮೊದಲಾದ ವಿಚಾರಗಳಿದ್ದರೆ, ಸರಸ್ವತಿಯ ವಿಷಯದಲ್ಲಿ ಹೆಚ್ಚು ವಿಶೇಷಣಗಳಿವೆ. ಆದ್ದರಿಂದಲೇ ಸರಸ್ವತಿಯನ್ನು ನದೀತಮೇ ಎಂದು ಗೌರವಿಸಲಾಗಿದೆ. (ಕೃಪೆ: ಸರಸ್ವತೀ ವಿಸ್ಮಯ ಸಂಸ್ಕೃತಿ)

1 comment:

Unknown said...

It is so interesting to know.
Thank you Sir.
GGHEGDE