Friday, June 01, 2018

ಟಿಪ್ಪಣಿ 3: ಹೊಸ ಸನ್ನಿವೇಶ ಸೃಷ್ಟಿ - ಮರುಪ್ರಯಾಣದ ಸಿದ್ಧತೆ, ಚಿತ್ರಭಾನುಗ್ರಸ್ತ ಇತ್ಯಾದಿ...

ಮಾರೀಚನ ಮನಸ್ಸನ್ನು ಒಲಿಸುವ ಕಾರ್ಯಾರ್ಥವಾಗಿ ಹೊರಟ ರಾವಣನನ್ನು ಕವಿ ‘ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ ಚಂದನಶ್ರಿಗಂಧ ಕಾನನೋಜ್ವಲನ್ ಆ ದೈತ್ಯೇಂದ್ರನ್’ ಎಂದು ಮಾರೀಚನಿಗೆ ಕಾಣಿಸುತ್ತಾರೆ! ಇಲ್ಲಿ ಚಿತ್ರಭಾನುಗ್ರಸ್ತ ಎಂದರೆ ಏನು? ಇದಕ್ಕೆ ಕವಿಯೇ ಕೊಟ್ಟಿರುವ ಉತ್ತರ: ಬೆಂಕಿ ಹತ್ತಿದ ಚೈತ್ರಮಾಸದ ಶ್ರೀಗಂಧದ ಕಾಡು ಉಜ್ವಲವಾಗಿ ಉರಿಯುವಂತೆ ರಾವಣನ ಬಾಹ್ಯಾಕಾರ ಥಳಥಳಿಸುತ್ತಿತ್ತು. ನೋಡಿದವರ ಕಣ್ಣನ್ನು ಕುಕ್ಕುತ್ತಿತ್ತು. ಅವನು ಚೈತ್ರ ಸುಂದರ ಚಿತ್ರವಿಚಿತ್ರವಾದ ರಂಗುರಂಗಿನ ಹೊಳೆಯುವ ಉಡಿಗೆ ತೊಡಿಗೆಗಳನ್ನು ತೊಟ್ಟುಕೊಂಡು ಬಂದಿದ್ದನು. ‘ಚಿತ್ರಭಾನು’ ಪದ ಸೂಚಿಸುವ ಅರ್ಥವೇ ಇದು. ಆದುದರಿಂದಲೇ ಆ ಪದಕ್ಕೆ ಬದಲಾಗಿ ಅಷ್ಟೇ ಮಾತ್ರೆಯ ಪದಗಳಿದ್ದರೂ ಹಾಕಿಲ್ಲ. ಅವನ ಮೈಯಿಂದ ಪರಿಮಳ ದ್ರವ್ಯಗಳ ವಾಸನೆ ಎರಚುತ್ತಿದೆ. ಚಂದನ ಶ್ರೀಗಂಧ ಈ ಅರ್ಥವನ್ನು ಸೂಚಿಸುತ್ತದೆ. ಮದನತಾಪದಿಂದ ರಾವಣ ಪರಿತಪಿಸುತ್ತಿದ್ದನೆಂದೂ ಈ ತಾಪಕ್ಕನುಗುಣವಾಗಿ ಅವನು ವೇಷಭೂಷಣಗಳನ್ನು ತೊಟ್ಟುಕೊಂಡಿದ್ದನೆಂದೂ ಈ ವಾಕ್ಯಸಮೂಹದ ಭಾವ. ಈ ಭಾವ ಆಲೋಚನಾಪೂರ್ವಕವಾಗಿ ನನಗೆ ಪ್ರತ್ಯಕ್ಷವಾಯಿತು ಎಂದು ತಿಳಿಯಬೇಡಿ, ನಾನು ಬರೆದಾಗಲಂತು ಈ ಅರ್ಥವನ್ನು ಬುದ್ದಿಪೂರ್ವಕವಾಗಿ ಕಲ್ಪಿಸಿಕೊಂಡೇ ಇರಲಿಲ್ಲ. ಇಲ್ಲಿಯ ಪಂಕ್ತಿಗಳಲ್ಲಿ ಒಂದಾದರೂ ಯೋಚಿಸಿ ಬರೆದುದಲ್ಲ; ಅನುಭವದ ಪರಿಣಾಮವಾಗಿ ಮೂಡಿದ್ದು. ಮಾರೀಚನ ಬಾಯಿಯ ಮಾತುಗಳನ್ನು ಬರೆಯುವಾಗ ನಾನು ಮಾರೀಚನಾಗಿ ಬರೆದಿದ್ದೇನೆ. ರಾವಣನ ಮಾತುಗಳನ್ನು ರಾವಣನಾಗಿ ಬರೆದಿದ್ದೇನೆ.
[ಸೀತೆಯನ್ನು ಎದುರುಗೊಳ್ಳಲಿದ್ದೇನೆ ಎಂಬ ಭಾವವೇ ರಾವಣನಿಗೆ ಅತ್ಯಂತ ಪ್ರಿಯವಾದುದು; ಅದಕ್ಕೇ ಈ ಬಾಹ್ಯ ಅಲಂಕಾರ; ಪರಿಮಳ ದ್ರವ್ಯಗಳ ಪ್ರೋಕ್ಷಣೆ! ಮನಸ್ಸು ಒಂದು ಮಾರೀಚನ ಓಲೈಸುವುದು ಹೇಗೆ? ಎಂಬ ಮಂಥನ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸೀತೆಯ ನೆನಪಿನಿಂದ ಸುಖಿಸುತ್ತಿರುತ್ತದೆ. ಆಗಿನ ಆತನ ಮನಸ್ಥಿತಿಗೆ ಚಿತ್ರಭಾನುಗ್ರಸ್ತ ಎಂಬ ರೂಪಕ]
ಪುಲಿ ಪುಲಿಯ ಮೋರೆಗೆ ಮೋರೆಯನ್ನಿಟ್ಟು ನೆಕ್ಕಿ ಮುಂಡಾಡುವೋಲ್ ಆಡಿ.......... ಕಾಡು ಪಕ್ಷಿ ಪ್ರಾಣಿಗಳ ಬಗ್ಗೆ ಒಲವಿರುವ ಕುವೆಂಪು ಮಾತ್ರ ಸೃಷ್ಟಿಸಬಹುದಾದ ಒಂದು ಉಪಮಾಲಂಕಾರ
ನೆನ್ನೆಯ ಟಿಪ್ಪಣಿಗೆ ಸೇರಿಸಬಹುದಾದ ಇನ್ನೆರಡು ಪದಗಳು ಸೊಗಬರವು (ಸುಸ್ವಾಗತ), ಬಡವು ಬಡಗನ್ (ಉತ್ತರದ ಬಡವಾ=ರಾಮ! ಇದು ರಾವಣನ ಮಾತು)
ಇನ್ನೊಂದು ಸಂಗತಿ ನಾನು ಗಮನಿಸಿದ್ದು: ಸೀತೆ ಪಂಚವಟಿಯ ಪರ್ಣಕುಟಿಯ ಸಮೀಪವೇ ತಾನು ಒಂದು ಕಾಡುಹೂವಿನ ಬಳ್ಳಿಯನ್ನು ನೆಟ್ಟು ಬೆಳೆಸಿದ್ದ ವಿಚಾರ. ಬಹುಶಃ ಇದೂ ಮೂಲರಾಮಯಾಣದಲ್ಲಿ ಇಲ್ಲ. ಕಾಡಿನ ನಡುವೆಯೇ ಇದ್ದ ಸೀತೆಗೆ ಹೂವುಗಳು ಸಿಕ್ಕುವುದು ಕಷ್ಟವೇನಲ್ಲ. ಆದರೆ, ಮನೆಯ ಮುಂದೆ ಒಂದು ಗಿಡ ನೆಟ್ಟು ಹೆತ್ತಮ್ಮನಂತೆ ಅದನ್ನು ಪೋಷಿಸುವುದು ಸದ್ಗೃಹಣಿಗೆ ಸಂತೋಷ ಕೊಡಬಹುದಾದ ಕೆಲಸ. ಸೀತೆ ಅದನ್ನು ಮಾಡಿದ್ದಾಳೆ. ಅದನ್ನು ಬಿಟ್ಟು ಹೊರಡಬೇಕಲ್ಲ ಎಂಬ ವ್ಯಥೆಯೂ ಅವಳನ್ನು ಕಾಡುತ್ತದೆ! ಒಂದು ಮಹಾಕಾವ್ಯದ ನಡುವೆ ಇಂತಹುದೊಂದು ಶ್ರೀಸಾಮಾನ್ಯವಾದ ವಿಚಾರ ಕಾಡಿನ ಕವಿಗೆ ಮಾತ್ರ ಸಾಧ್ಯವೇನೊ?
ರಾ. ಗಣೇಶ್ ವ್ಯಾಖ್ಯಾನದಿಂದ ತಿಳಿದ ಒಂದು ವಿಚಾರ: ಮೂಲ ಅಥವಾ ಇನ್ನಾವುದೇ ರಾಮಾಯಣದಲ್ಲೂ ಇರದ ಒಂದು ಸನ್ನಿವೇಷವನ್ನು ಕುವೆಂಪು ಕಾವ್ಯಸಹಜವಾಗಿ ಸೃಷ್ಟಿಸಿದ್ದಾರೆ. ಅದು, ವನವಾಸದ ಅವಧಿ ಹದಿಮೂರು ವರ್ಷ ಕಳೆದು, ಪಂಚವಟಿಯಿಂದ, ಅಯೋಧ್ಯೆಗೆ ಹಿಂತಿರುಗಲು ರಾಮ, ಸೀತೆ, ಲಕ್ಷ್ಮಣರು ಸಿದ್ಧತೆ ಮಾಡಿಕೋಳ್ಳುವ ಸನ್ನಿವೇಶ. ಹದಿನಾಲ್ಕು ವರ್ಷ ಕಳೆದ ಮಾರನೆಯ ದಿನ ಸೂರ್ಯೋದಯದ ಜೊತೆಯಲ್ಲಿಯೇ ರಾಮೋದಯ ಆಗದಿದ್ದರೆ ಅಗ್ನಿ ಪ್ರವೇಶ ಮಾಡುವುದಾಗಿ ಭರತ ಪ್ರತಿಜ್ಞೆ ಮಾಡಿದ್ದಾನೆ. ಆದ್ದರಿಂದ ಪಂಚವಟಿಯಿಂದ ಹೊರಟು ದಾರಿಯಲ್ಲಿ ಋಷಿಗಳ ಆಶ್ರಮಗಳಿಗೆ ಭೇಟಿ ಕೊಟ್ಟು ಅಲ್ಲ್ಲಿ ತಂಗುತ್ತಾ ಅಯೋಧ್ಯೆ ಸೇರಲು ಒಂದು ವರ್ಷ ಬೇಕು ಎನ್ನುವ ಲೆಕ್ಕಾಚಾರ! ಬೇಕಾದುದನ್ನೆಲ್ಲಾ ಗಂಟು ಕಟ್ಟುವ ಕೆಲಸವೂ ನಡೆತ್ತದೆ. ಸೀತೆ ಬುತ್ತಿಯನ್ನೂ ಸಿದ್ಧಪಡಿಸಿ ಕಟ್ಟುವ ಕೆಲಸ ಮಾಡುತ್ತಳೆ. (ಇನ್ನೊಂದು ದಿವಸ ತಡವಾಗಿದ್ದರೂ ರಾವಣನಿಗೆ ಸೀತೆ ಪಂಚವಟಿಯಲ್ಲಂತೂ ಸಿಗುತ್ತಿರಲಿಲ್ಲ!- ಇದು ದೈನಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆ) ಎಲೆವನೆಯಿಂದ ಹೊರಬಂದ ಸೀತೆ, ಋಷಿಗಳೊಬ್ಬರು ಕೊಟ್ಟಿದ್ದ ವಲ್ಕಲವನ್ನು ಲಕ್ಷ್ಮಣ ಒಣ ಹಾಕಿ, ಅದನ್ನು ತೆಗೆದುಕೊಳ್ಳದೆ ಬಿಟ್ಟಿದ್ದಾನೆ ಎಂದು ಭಾವಿಸಿ, ಅವನಿಗೆ ತಿಳಿಸುತ್ತಾಳೆ. ಒಣಗಿದ ಮೇಲೆ ತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ. ಆಗ ಸೀತೆ, ನೆರಳಿನಲ್ಲಿ ಒಣಹಾಕಿದ್ದೀಯಾ ಎನ್ನುತ್ತಾಳೆ. ಲಕ್ಷ್ಮಣನಿಗೆ ಆಶ್ಚರ್ಯ. ಬೇಸಗೆಯ ಆರಂಭದ ವಸಂತಮಾಸದ ದಿನಗಳು ಶುಭ್ರವಾಗಿದ್ದ ಆಕಾಶ. ಆದರೆ, ಆಕಾಶದಲ್ಲಿ ಅಕಾಲಿಕವಾಗಿ ದೊಡ್ಡ ಮೋಡವೊಂದು ಬಂದುಬಿಟ್ಟಿದೆ! (ಇದೇನಯ್ ಇಂದು ಎಂದಿಲ್ಲದೀ ಮೋಡವೀ ಪಚ್ಚೆಬಾಂಬೊಚ್ಚದೊಳ್?)ಅದು ರಾವಣ ಸೀತಾಪಹರಣಕ್ಕಾಗಿ ಪುಷ್ಪಕದಲ್ಲಿ ಬಂದು ಅಡಗಿ ನಿಂತಿದ್ದ ಕೃತಕ ಮೋಡ! (ರಾವಣರಥಂ ನಿಶ್ಚಲಂ, ಕೆರೆಯ ಮೇಲ್ಗಡೆ ನಭದಿ ಹಾರಿಯುಂ ಮೀನಿಗೆರಗುವ ಮುನ್ನ ನಿಲ್ಲುವ ಕುರರಿಯಂತೆ!) ಮೀನಿಗೆರಗುವ ಉದ್ದೇಶದಿಂದ ಹಾರುತ್ತಿದ್ದರೂ ನಿಶ್ಚಲವಾಗಿ ನಿಂತಿರುವ ಹಕ್ಕಿಯಂತೆ ಪುಷ್ಪಕ ನಿಂತಿದಿಯಂತೆ! ಇಂತಹ ಒಂದು ನವೀನ ಸನ್ನಿವೇಶವನ್ನು ಸೃಷ್ಟಿಸಿದ್ದಲ್ಲದೆ, ಅದನ್ನು ಮುಖ್ಯಕಾವ್ಯಧಾರೆಗೆ ಜೋಡಿಸಿರುವ ರೀತಿಯೂ ವಿಶೇಷವಾಗಿದೆ.
'ಠುವ್ವಿ' ಎಂಬ ಶಬ್ದವನ್ನು ಹಳಗನ್ನಡದ ಯಾವ ಕಾವ್ಯದಲ್ಲೂ ಬಳಸಲಾಗಿಲ್ಲ. ಅದನ್ನು ವಿಶೇಷವಾಗಿ ಕಾವ್ಯದಲ್ಲಿ ಬಳಸಿ ಅದನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲಬೇಕು. ಕಾವ್ಯದಲ್ಲಿ ಕುವೆಂಪು ಹೆಸರಿಸಿದ, ಚಿತ್ರಿಸಿದ, ಅನುಕರಿಸಿದ ಪಕ್ಷಿಗಳ ಸಂಖ್ಯೆ ಅದೆಷ್ಟು? ಬಹುಶಃ ಮತ್ತಾವ ಕವಿಯೂ ಕಾವ್ಯದಲ್ಲಿ ಇಂತಹ ಸಾಹಸ ಮಾಡಿರಲಾರ.

No comments: