Monday, June 04, 2018

ಟಿಪ್ಪಣಿ-8: ಕಬಂಧ ವಧೆ, ಖಿನ್ನತೆ, ವರ್ತಮಾನ ಇತ್ಯಾದಿ

[ಚಂದನ್ ಎಂಬುವವರ ಕುಟುಂಬದ ದುರಂತ ಅಂತ್ಯದ ಹಿನ್ನೆಲೆಯಲ್ಲಿ]
ಮೂಲ ವಾಲ್ಮಿಕಿ ರಾಮಾಯಣದಲ್ಲಿ ಕಬಂಧ ಎಂಬ ರಾಕ್ಷಸನ್ನು, ಸೀತೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮ-ಲಕ್ಷ್ಮಣರು ವಧಿಸುವ ಕಥೆ ಬರುತ್ತದೆ. ಅದರಲ್ಲಿ ಕಬಂಧನೊಡನೆ ನೇರ ಹೋರಾಟಕ್ಕಿಳದ ರಾಮಲಕ್ಷ್ಮಣರ ಕೈ ಸೋಲಾಗುತ್ತಾ ಸಾಗುತ್ತದೆ. ಆಗ, ರಾಮ, ಲಕ್ಷ್ಮಣನಿಗೆ ‘ನನ್ನ ಕಥೆ ಮುಗಿಯಿತು. ನೀನಾನಾದರು ತಪ್ಪಿಸಿಕೊಂಡು ಹೋಗು. ಅಯೋಧ್ಯೆಗೆ ವಿಷಯ ತಿಳಿಸು’ ಎಂದು ನಿರಾಶೆಯಿಂದ ನುಡಿಯುತ್ತಾನೆ. ಆದರೆ, ಲಕ್ಷ್ಮಣನ ಸಂದರ್ಭೋಚಿತ ಮಾತುಗಳಿಂದ ಸಾಹಸದಿಂದ ಇಬ್ಬರೂ ಸೇರಿ ಕಬಂಧನ ಬಾಹುಗಳನ್ನು ಕತ್ತರಿಸಿ ಅಪಾಯದಿಂದ ಪಾರಾಗುತ್ತಾರೆ. ಶ್ರೀರಾಮಾಯಣ ದರ್ಶನದಲ್ಲಿ ಕುವೆಂಪು ಅದನ್ನು ಆಧುನಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಹೊಸತಾಗಿ ಚಿತ್ರಿಸಿದ್ದಾರೆ. ಇಲ್ಲಿ ಕಬಂಧನ ಭೌತರೂಪ ನೇರವಾಗಿ ಪ್ರವೇಶಿಸುವುದಿಲ್ಲ. ರಾಮನ ಮನಸ್ಸಿನಲ್ಲಿಯೇ ನಡೆಯುವ ಹೋರಾಟ! ಇಲ್ಲಿಯ ಕಬಂಧ ಮನುಷ್ಯನ ಅಸಹಾಯಕ ಸ್ಥಿತಿಯಲ್ಲಿ ತೋರುವ ಖಿನ್ನತೆಯಂತೆ ಚಿತ್ರಿತವಾಗಿದೆ! ಅದೇ ಒಂದು ಪುಟ್ಟ ನಾಟಕದಂತಿದೆ ಎಂಬುದು ಇನ್ನೊಂದು ವಿಶೇಷ

ಹಿಂದಿನ ದಿನ ನಡೆಯಬಾರದ್ದೆಲ್ಲ ನಡೆದಿದೆ. ಸೀತಾಪಹರಣವಾಗಿದೆ. ಜಟಾಯು ಸತ್ತು ಹೋಗಿದ್ದಾನೆ. ರಾಮ ನಿರಾಶೆಯಲ್ಲಿ ಮುಳುಗಿದ್ದಾನೆ. ಜನಕಜಾಶೂನ್ಯರಾದ ರಾಮಲಕ್ಷ್ಮಣರಿಬ್ಬರೂ “ನರಳುವ ನೆರಳುಗಳಂತೆ ಮಸಣದಿಂ ಮರಳಿದರ್, ಮತ್ತೊಂದು ಮಸಣಕೆನೆ, ಪರ್ಣಶಾಲೆಯ ಶವದಶೂನ್ಯಕ್ಕೆ”. ರಾತ್ರಿಯಿಡೀ ನಿದ್ರೆಯಿಲ್ಲ. ನಿರಾಶೆ, ನಿಟ್ಟುಸಿರು, ಅರೆನಿದ್ದೆ, ಕನವರಿಕೆ ಮೊದಲಾದವುಗಳ ನಡುವೆಯೇ ಬೆಳಗಾಗುತ್ತದೆ. ರಾಮನಿಗೆ ಜಟಾಯು ಹೇಳಿದ ನೈರುತ್ಯ ಎಂಬುದಷ್ಟೇ ನೆನಪಾಗುತ್ತದೆ. ನಿರ್ಜನತೆ ನೈರಾಶದ ಆಕಳಿಕೆಯಾಗಿ ತೋರುತ್ತದೆ. ನಿಶ್ಯಬ್ಧ ರವದ ಶವವಾಗಿ ಕಾಣುತ್ತದೆ. (ರವಶವ - ಹೊಸ ರೂಪಕ) ರಾಮ ಖಿನ್ನತೆಗೊಳಗಾಗಿ ಹತಾಶೆಯ ಮಂಕು ಬಡಿದಂತೆ ಕಡಿದು ಕುಳಿತು ಮಾತನಾಡುತ್ತಾನೆ
ರಾಮ:
ಏತಕೆ? ಎಲ್ಲಿಗೆ? ಎತ್ತ ಹೋಗುತಿಹೆವು ಆವ್ ಇಂತು? ಸೌಮಿತ್ರಿ?

ಲಕ್ಷ್ಮಣ:
(ಭಯದಿಂದ) ಬೇಡ, ಬೇಡಣ್ಣಯ್ಯ; ನಿನ್ನಚಲ ಧೈರ್ಯಮಂ ನೈರಾಶ್ಯಕೌತಣಂಗೆಯ್ಯದಿರ್.
ನೆನ ಭರದ್ವಾಜ ಋಷ್ಯಾಶ್ರಮಂ; ಅತ್ರಿಯಂ, ಅನಸೂಯೆಯಂ; ನೆನ ಅಗಸ್ತ್ಯ ಗುರುದೇವನಂ;
ಬಗೆಗೆ ತಾರಯ್ಯ ವಿಶ್ವಾಮಿತ್ರ ಮಂತ್ರಮಂ!
ನಿನ್ನ ಮೈಮೆಯೆ ನೀನೆ ಮರೆವೆಯೇನ್?
ತನಗೆ ತಾಂ ನಿಂದೆಯಪ್ಪುದೆ ಕೊಂದುಕೊಂಡಂತೆ; ನನ್ನನುಂ ಕೊಂದಂತೆ!
ನಿನ್ನ ಮಹಿಮೆಯ ನೆನಹೆ ನನಗಿಂತು ವಜ್ರ ಚಿತ್ರವನಿತ್ತು ಹೊರೆಯುತಿರೆ,
ನೀನಿಂತು ಕಳವಳಿಸುತಾಸೆಗೇಡಿನ ಕಿಬ್ಬಿಗುರುಳುವೆಯ,
ಚಂದ್ರಚೂಡನ ರುಂದ್ರ ಕೋದಂಡಮಂ ಮುರಿದು ಮೈಥಿಲಯನೊಲಿದ ಜಗದೇಕೈಕವೀರ,
ಹೇ ಲೋಕ ಸಂಗ್ರಹ ಶಕ್ತಿಯವತಾರ?

ಇಲ್ಲಿ ಲಕ್ಷ್ಮಣನ ಮಾತುಗಳು ಖಿನ್ನತೆಗೆ ಒಳಗಾಗುತ್ತಿರುವ ರಾಮನ ಮನಸ್ಸಿಗೆ ಬಹಳ ಮುಖ್ಯ. ಲಕ್ಷ್ಮಣ ಇಲ್ಲಿ ಸೂರ್ಯವಂಶ, ಅಯೋಧ್ಯೆ ದಶರಥ, ಕೌಸಲ್ಯೆ, ಕೈಕೆ ಮೊದಲಾದವರ ಹೆಸರು ಎತ್ತುವುದಿಲ್ಲ. ರಾಮನ ಮನಸ್ಸಿಗೆ ಯಾವಾಗಲೂ ಸಂತೋಷವನ್ನುಂಟು ಮಾಡಿದ್ದ ಋಷ್ಯಾಶ್ರಮಗಳ ಋಷಿಗಳ ಹೆಸರನ್ನು ಮಾತ್ರ ಎತ್ತಿ ಸಂತೈಸುತ್ತಾನೆ! ಲಕ್ಷ್ಮಣನ ಮಾತುಗಳನ್ನು ಕೇಳುತ್ತಲೇ ರಾಮನಿಗೆ ಒಂದು ಮಾನಸಿಕ ಅನುಭವವಾಗುತ್ತದೆ. ಆಕಾರವೇ ಇರದ ಒಂದು ಆಕೃತಿ ಕಾಣಿಸುತ್ತದೆ. ರಾಹು, ಸರೀಸೃಪ, ಶ್ಲೇಷ್ಮಚರ್ಮ, ತಿರ್ಯಗ್ಯೋನಿ, ಕುಕ್ಷಿಗ, ವ್ಯಾಳ ಮುಂತಾದ ಪದಗಳಿಂದ ಅದರ ಭೀಕರತೆಯನ್ನು ಕವಿ ಕಟ್ಟಿಕೊಡುತ್ತಾರೆ. ಅಮೂರ್ತವಾದುದನ್ನು ಅನುಭವವೇದ್ಯಗೊಳಿಸಲು ಮೂರ್ತಕಲ್ಪನೆಯನ್ನು, ಉಪಮೆಗಳನ್ನು ತರುತ್ತಾರೆ. ಇನ್ನು ಮುಂದಿನದೆಲ್ಲವೂ ರಾಮನ ಪ್ರಜ್ಞಾವಸ್ಥೆಯಲ್ಲೇ ನಡೆಯುವ ಹೋರಾಟ!
ಕೊನೆಗೆ ಹೊಟ್ಟೆಯೇ ತಲೆಯೂ ಆದ, ಕಾಲುಗಳೇ ಕೈಗಳೂ ಆದ ರೂಪ ತೋರುತ್ತದೆ. ಕೈಗಳೂ ಯೋಜನ ಯೋಜನ ಉದ್ದವಿರುತ್ತವೆ. ಗುಹೆಯಂತಹ ಕಣ್ಣಿರುತ್ತದೆ. ತನ್ನ ನಿರಾಶೆಯೇ ತನಗೆ ಕಬಂಧನ ರೂಪದಲ್ಲಿ ಕಾಣಿಸುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಭಯ ಕಾಡುತ್ತದೆ. ನಡುಕು ಉಂಟಾಗುತ್ತದೆ. ಪೌರುಷದ ಫಣಿಯ ಹೆಡೆ ಮುಚ್ಚುತ್ತದೆ. ಪಲಾಯನವೆಂಬ ಕುದುರೆಯನ್ನೇರಲು ಮನಸ್ಸು ತವಕಿಸುತ್ತದೆ! ಆದರೆ ಓಡಲಾರದೆ, ಕಾಲ್ ಕೀಳಲಾರದೆ ಭಯದಿಂದ ಮೂರ್ಚೆ ಬಿದ್ದುಬಿಡುತ್ತಾನೆ. ಲಕ್ಷ್ಮಣ ಆತನನ್ನು ತನ್ನ ತೋಳಿನ ಆಶ್ರಯಕ್ಕೆ ತೆಗೆದುಕೊಳ್ಳುತ್ತಾನೆ.

ರಾಮ:
ಕೆಟ್ಟೆನಯ್, ಲಕ್ಷ್ಮಣಾ! ಪಿಡಿದನಸುರಂ.
ಕೈಯೆ ಬಾರದಯ್. ನೆಗಹಲೆಳಸಲ್ ಮೇಲೇಳದಿದೆ ಕತ್ತಿ.
ಓಡಲುಂ ಆರೆನಯ್ಯಯ್ಯೊ ಕೆಟ್ಟುದಯ್ ಕಾಲ್ ಬಲಂ.
ದೂರ ಸಾರ್, ದೂರ ಸಾರ್; ಬಾರದಿರೆನಗೆ ಹತ್ತೆ. ನಿನ್ನನುಂ ಪಿಡಿವನೀ ರಾಕ್ಷಸಂ.
ನೀನಾದಡಂ ಪೋಗಯೋಧ್ಯೆಯಂ ಸೇರಯ್ಯ. ಸಂತಯ್ಸು ಭರತನಂ. ಮಾತೆಯಂ.
ನನಗಿದೆ ವಲಂ ಒಲಿದ ಗತಿ. ಮೈಥಿಲಿಯನುಳಿದು ನನಗಿನ್ನಯೋಧ್ಯೆಯೇಂ ಮರಣಮೇಂ?
ಸಾವೆ ದಲ್ ದಿಟಮೆನಗೆ ಬಾಳ್ಕೆ!

ರಾಮನ ಎಚ್ಚರಿಕೆಯನ್ನೂ ಲೆಕ್ಕಿಸದೆ ಲಕ್ಷ್ಮಣ ಆ ರಾಕ್ಷಸನ ಕೈಗಳನ್ನು ಕತ್ತರಿಸತೊಡಗುತ್ತಾನೆ. ಕಣ್ಣುಗಳನ್ನು ಇರಿಯುತ್ತಾನೆ... ರಾಮನಿಗೆ ಬಿರಿದ ಕೆಟ್ಟ ಕನಸಿನಂತೆ ಆ ರಕ್ಕಸ ಮಾಯವಾಗುತ್ತಾನೆ. ರಾಮನಿಗೆ ಪೂರ್ತಿ ಎಚ್ಚರವಾಗುತ್ತದೆ. ಬೆವೆತು ಹೋಗಿರುತ್ತಾನೆ. ನೆಗೆದು ಎದ್ದು ಕೂತು, ಪೂರ್ತಿ ಕಣ್ದೆರೆದು, ನಿಟ್ಟುಸಿರು ಬಿಟ್ಟು ಲಕ್ಷ್ಮಣನೊಂದಿಗೆ ಮಾತಿಗೆ ತೊಡಗುತ್ತಾನೆ.

ರಾಮ:
ಬದುಕಿದೆನೊ ನಿನ್ನಿಂದೆ, ಸೌಮಿತ್ರಿ.

ಲಕ್ಷ್ಮಣಂ:
ತಿಳಿದವಂ ತನ್ನ ನೆರಳಿಗೆ ತಾನೆ ಹೆದರುವನೆ

ರಾಮ:
ತಿಳಿದವಂ! ತಿಳಿದ ಮೇಲಲ್ತೆ?

ಲಕ್ಷ್ಮಣ:
ಪೃಥ್ವಿಗೆ ರಾಹು ಬೇರೆಯೇಂ ತನ್ನ ನೆಳಲಲ್ಲದೆಯೆ

ರಾಮ:
ಅದ್ರಿಯಾದೊಡಮೊರ್ಮೆ ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ?
ಅಂತೆ ತಾಂ ನಡುಗುತಿದೆ ರಾಮಧೈರ್ಯಂ, ತಮ್ಮ, ಆ ಭೂಮಿ ಸುತೆಗಾಗಿ.
ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್, ಸುಸ್ಥಿರಂ. ನಿನ್ನಿಂದೆ ಸತ್ತನೊ ನಿಶಾಚರಂ;
ಕೊಂದೆನೊ ನಿರಾಶೆಯಂ; ಗೆಲ್ದೆನೊ ಕಬಂಧನಂ;
ಹತವಾದುದೊ ಹತಾಶೆ. ಕಿರಣದೋರಿದುದಾಶೆ.
ಬಾ, ನಡೆವಮಿಲ್ಲಿಂದೆ; ಬಲ್ಗಜ್ಜಮಿದಿರಿರ್ಪುದಯ್ ಮುಂದೆ, ಸೌಮಿತ್ರಿ!

ಎಂದು ಹೊಸಚೈತನ್ಯದಿಂದ ತನ್ನನ್ನು ಅಪ್ಪಿದ ರಾಮನನ್ನು ಲಕ್ಷ್ಮಣನೂ ಅಪ್ಪಿಕೊಳ್ಳುತ್ತಾನೆ. ಮೂಡಿದ ಆಸೆಯ ಅವಳಿಗಳು ಜೋಡಿಯಾಗಿ ನಡೆಯುವಂತೆ ಅವರಿಬ್ಬರೂ ಮುಂದೆ ನಡೆಯುತ್ತಾರೆ.

ಇಲ್ಲಿ ಕಬಂಧ ಭೌತಿಕ ರೂಪವನ್ನು ಹೊತ್ತು ಬರುವುದೇ ಇಲ್ಲ. ಮನಸ್ಸಿನ ಖಿನ್ನತೆಯ ರೂಪದಲ್ಲಿ ಬಂದು, ಕಷ್ಟಕ್ಕೊದಗುವವರ ಸಹಾಯದಿಂದ ಖಿನ್ನತೆ ದೂರವಾಗುವಂತೆ, ಲಕ್ಷ್ಮಣನ ನೆರವಿಂದ ದೂರವಾಗುತ್ತದೆ. ಮಾನವ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಮನಸ್ಸು ಖನ್ನತೆಗೊಳಗಾಗುವುದು ಸಹಜ. ಆದರೆ ಬಂಧು ಮಿತ್ರರ, ಹಿತಚಿಂತಕರ ಸಹಾಯದಿಂದ ಸಹಚಾರ್ಯದಿಂದ ಹೊರಬರುವುದೂ ಸಾಧ್ಯ. ಎಂತಹ ಅವಘಡವೇ ಆದರೂ ಮನುಷ್ಯ ನಿರಾಶೆಯಿಂದ ತನ್ನನ್ನು ತಾನು ಕೊಂದುಕೊಳ್ಳಬೇಕಿಲ್ಲ. ಬದುಕು ದೊಡ್ಡದೇ ಹೊರತು, ಬದುಕಿನ ಒಂದು ಕ್ಷಣದ ಘಟನೆಯಲ್ಲ!
ಮಹಾಕಾವ್ಯದ ಈ ಘಟನೆಯ ಓದು ಮನುಕುಲಕ್ಕೆ ಒದಗಿಸಬಹುದಾದ ದೊಡ್ಡ ಉಪಕಾರಗಳಲ್ಲಿ, ರಾಮನನ್ನು ಮಾನವೀಯವಾಗಿ ಚಿತ್ರಿಸಿ, ರಾಮನಂತವನಿಗೆ ಕಷ್ಟ ಬಂತು; ನಮ್ಮದು ಯಾವ ಲೆಕ್ಕ, ಕಷ್ಟವನ್ನು ಗೆಲ್ಲಬೇಕು ಎಂಬ ಎಚ್ಚರ ಮೂಡಿಸುವುದು!
ಮೊನ್ನೆ ಅಪಘಾತದಲ್ಲಿ ಚಂದನ್ ಎಂಬುವವರು ಮಡಿದರೆಂಬ ಸುದ್ದಿ ಬಂದಿತ್ತು. ಅದಾದ ಒಂದೆರಡು ದಿವಸದಲ್ಲಿ ಅವರ ಪತ್ನಿ, ತಮ್ಮ(ಹತ್ತು ವರ್ಷದ?) ಏನೂ ಅರಿಯದ ಮಗನ ಕೊರಳು ಕೊಯ್ದು, ತಾನೂ ಅತ್ಮಹತ್ಯೆ ಮಾಡಿಕೊಳ್ಳುತ್ತಾರೆ! ಹೌದು ಅವರ ದುಃಖ ದೊಡ್ಡದೆ. ಆದರೆ, ಅವರ ಬದುಕು, ಅವರ ಮಗನ ಬದುಕು ಅದಕ್ಕಿಂತ ದೊಡ್ಡದಿತ್ತು ಅನ್ನಿಸುತ್ತದೆ. ಆಕೆಗೊದಗಿದ ಖಿನ್ನತೆಯ ಕಬಂಧನನ್ನು ಕೊಲ್ಲುವ ಲಕ್ಷ್ಮಣರು ಸಕಾಲದಲ್ಲಿ ಒದಗಿಬರಲಿಲ್ಲವೆ ಎಂದು ಮನಸ್ಸು ಭಾರವಾಗುತ್ತದೆ.

1 comment:

ShopBie said...
This comment has been removed by the author.