Friday, June 01, 2018

ಟಿಪ್ಪಣಿ: 4 ಕಾವ್ಯಸಾಮಗ್ರಿ & ಕವಿವ್ಯಾಪಾರ ಆಧರಿಸಿದ ಅಲಂಕಾರ ಇತ್ಯಾದಿ

* ಕಟ್ಟಲಿಹ ಕಬ್ಬಕೆ ಮೊದಲ್ ಗುದ್ದಲಿಯ ಪೂಜಿಪೋಲ್.
* ಕಲೆಯನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಪನೆ?
* ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!
* ಕಾವ್ಯಯಾತ್ರೆಗೆ ತೇರುಕುದುರೆಯ ನೆರಂ ಬೇಕೆ?
* ರಸಾವೇಶಂ ಇಳಿದ ಸಮಯದ ಕವಿಯ ರಚನೆಯ ಉದಾಸೀನತಾ ವೇಗದಲಿ
* ಗಮಕಿವರ್ಯನ ವೇಣುವಾಣಿಗೆ ಕಲಾರಮಣಿ ವರ್ಣ ಲಯ ರಾಗಮಯ ನವರಸಾವೇಶದಿಂ ಮಮಕಾವ್ಯ ವೇದಿಕೆಯನೇರಿ ನರ್ತಿಸುವಂತೆ ನಲಿದುದಾ ಪೊನ್ಮಿಗಂ
* ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣುಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚಚ್ಉವ ಮಹಾಕವಿ ಮಾರ್ಗದಿಂ
* ಶಾಶ್ವತವನರಿಯಲ್ಕೆ ನಶ್ವರದ ಹೃದಯಮಂ ಭೇದಿಸುವ ಕವಿಯ ದರ್ಶನದಂತೆ
* ಲಘುವೆಣಿಸಿ ಗುರುವಾಯ್ತಲಾ! (ಕೇವಲ ಒಂದು ಹದ್ದು ಎಂದು ಉದಾಸೀನ ಮಾಡಿದ ರಾವಣ ಜಟಾಯುವಿನ ಉಗುರುಘಾತಕ್ಕೆ ಒಳಗಾದಾಗ ರಾವಣನಿಗೆ ಅನ್ನಿಸಿದ್ದು)
ಈ ಮೇಲಿನ ಅಲಂಕಾರಗಳೆಲ್ಲಾ (ಹೆಚ್ಚಿನವು ಉಪಮಾಲಂಕಾರ) ರಾಮಾಯಣ ದರ್ಶನಂನ ಮೊದಲ ಸಂಪುಟದವು. ಕೊನೆಯ ನಾಲ್ಕು ಎರಡನೆಯ ಸಂಪುದ ಮೊದಲೆರಡು ಸಂಚಿಕೆಯವರು. ನೂರಾರು ಅಲಂಕಾರಗಳ ನಡುವಿನಿಂದ ಆರಿಸಿ ಇಲ್ಲಿ ಪಟ್ಟಿ ಮಾಡಿರುವ ಇವುಗಳ ವಿಶೆಷವೇನೆಂದರೆ, ಕವಿಯೊಬ್ಬ ಕಾವ್ಯಪರಿಕರಗಳನ್ನು ಹಾಗೂ ಕವಿಕರ್ಮಗಳನ್ನು ಬಳಸಿಕೊಂಡು ಸೃಷ್ಟಿಸಿರುವ ಈ ಅಲಂಕಾರಗಳು ನವನವೀನವಾಗಿವೆ. ಬಹುಶಃ ರನ್ನನೊಬ್ಬನನ್ನು (’ಗುರು-ಲಘುಮಿಶ್ರಿತಂ ದೊರೆಕೊಳೆ ತದ್ಗುರು ತಚ್ಛಂದೋವೃತ್ತಿಗೆ ದೊರೆಯೆನಿಸಿರ್ದುದು’) ಬಿಟ್ಟು ಬೇರಾವ ಕನ್ನಡ ಕವಿಯೂ ಈ ಮಟ್ಟಿಗೆ ಕಾವ್ಯಸಾಮಗ್ರಿ ಮತ್ತು ಕವಿಕರ್ಮವನ್ನು ಅನುಸರಿಸಿ ಅಲಂಕಾರಗಳನ್ನು ಸೃಷ್ಟಿಸಿಲ್ಲ. ಇವುಗಳು ಒಂದೊಂದೂ ಬಂದಿರುವ ಸಂದರ್ಭ ಮತ್ತು ಅವುಗಳ ಸ್ವಾರಸ್ಯವನ್ನು ಗಮನಿಸಿದರೆ ಕವಿಯ ಕಲಾಸೃಷ್ಟಿಸಾಮರ್ಥ್ಯದ ವಿರಾಡ್’ದರ್ಶನವಾಗುತ್ತದೆ.
ಉದಾ: “ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣುಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚ್ಚುವ ಮಹಾಕವಿ ಮಾರ್ಗದಿಂ” ಇದು ರಾಮ ಮಾಯಾಜಿಂಕೆಯನ್ನು ಬೆನ್ನತ್ತಿ ಹೋಗಿ, ಹಿಡಿಯಲು ಸಾಧ್ಯವಾಗದೆ, ಸುಸ್ತಾಗಿ, ಕೊನೆಗೆ ಅನ್ಯಮಾರ್ಗ ಕಾಣದೆ ತನ್ನ ಬಿಲ್ಲಿಗೆ ಬಾಣವನ್ನು ಊಡುವ ಸನ್ನಿವೇಶದ ಚಿತ್ರಣ. ವ್ಯಾಕರಣ ಛಂದಸ್ಸು ಅಲಂಕಾರ ಇವುಗಳು ಕಾವ್ಯಕ್ಕೆ ಬೇಕು, ನಿಜ. ಆದರೆ ಅವಷ್ಟರಿಂದಲೇ ಕಾವ್ಯವನ್ನು ಕಟ್ಟಲಾಗುವುದಿಲ್ಲ. ಅವುಗಳನ್ನೇ ನೆಚ್ಚಿ ಕಾವ್ಯ ಕಟ್ಟಿದರೆ ಅದೊಂದು ಶಾಸ್ತ್ರ ಪಾಂಡಿತ್ಯದ ಜೊತೆಗೆ ಶುಷ್ಕ ಕವಿತೆಯಾಗುತ್ತದೆ, ಅಷ್ಟೆ. ನಿಜವಾಗಿ ಕಾವ್ಯಕ್ಕೆ ಬೇಕಾಗಿರುವುದು ಹೃದಯದಾವೇಶ. ಹೃದಯದಾವೇಶವನ್ನು ನೆಚ್ಚಿ ನಡೆಯುವವನು ಮಹಾಕವಿ. ಉಳಿದಂತೆ ವ್ಯಾಕರಣ ಛಂದಸ್ಸು ಅಲಂಕಾರ ಇವುಗಳು ಕಾವ್ಯಸೌಂದರ್ಯವನ್ನು ಸ್ವಲ್ಪ ಹೆಚ್ಚಿಸಬಹುದೇ ಹೊರತು, ಮೂಲ ಕಾವ್ಯದರ್ಶನವನ್ನಲ್ಲ! ಜಿಂಕೆಯನ್ನು ಅದರಲ್ಲೂ ನಿರ್ದಿಷ್ಟ ಉದ್ದೇಶದ ಮಾಯಾಜಿಂಕೆಯನ್ನು ಹಿಡಿಯಲು ಅದನ್ನು ಹಿಂಬಾಲಿಸಿ ಹೋದರೆ ವಿಫಲತೆ ಕಟ್ಟಿಟ್ಟ ಬುತ್ತಿ. ಅದಕ್ಕೆ ಮಂಗಳ ಹಾಡಬೇಕೆಂದರೆ ಬಾಣ ಊಡಲೇಬೇಕು. ವ್ಯಾಕರಣ ಛಂದಸ್ಸು ಅಲಂಕಾರ ಇವುಗಳ ಹಿನ್ನೆಲೆ ಕವಿಗಿರಬೇಕು; ಆದರೆ ಅವುಗಳನ್ನು ಸದಾ ಹೊತ್ತು ಹೊತ್ತು ಕವಿ ಕುಗ್ಗಬಾರದು; ಕಾವ್ಯ ಸೊರಗಬಾರದು!

ಮೆಚ್ಚಿದನ್; ಬೆಚ್ಚಿದನ್; ಕಿಚ್ಚೆದ್ದು ತುಟಿಗಚ್ಚಿದನ್! ವಾಹ್! ಎಂಥ ಅದ್ಭುತ ಅನುಪ್ರಾಸಸಹಿತ ಶಬ್ದಾಲಂಕಾರವಿದು. ವಿಶೇಷವೇನೆಂದರೆ ಇದು ಅರ್ಥಾಲಂಕಾರವೂ ಹೌದು. ಜಿಂಕೆಯ ಸೊಬಗಿಗೆ ಸೋತು ಲಕ್ಷ್ಮಣನನ್ನು ಬಿಲ್ಲು ಬಾಣ ತೆಗೆದುಕೊಂಡು ಬಾ ಎಂದು ಸೀತೆ ಕೂಗಿದಾಗ, ರಾಮಲಕ್ಷ್ಮಣರು ಗಾಬರಿಯಿಂದ ಹೊರಗೆ ಬರುತ್ತಾರೆ. ಆಗ ಅವರನ್ನು ಮೋಡದ ಮರೆಯಲ್ಲಿ ಪುಷ್ಪಕದಲ್ಲಿದ್ದ ರಾವಣ ನೋಡುತ್ತಾನೆ. ಆಗಿನ ಅವನಲ್ಲಿ ಉಂಟಾದ ಭಾವವನ್ನು ಕವಿ ಈ ನಾಲ್ಕು ಪದಗಳಲ್ಲಿ ಕಟ್ಟಿದ್ದಾರೆ. ಪುರುಷ ಪೌರುಷದ ಆರಾಧಕನಾದ ರಾವಣ, ರಾಮ ಲಕ್ಷ್ಮಣರ ಭದ್ರಾಕಾರವನ್ನು ಕಂಡು ಮೊದಲಿಗೆ ಮೆಚ್ಚುತ್ತಾನೆ; ತಾನು ಅಕಾರ್ಯಕ್ಕೆ ಬಂದಿರುವುದರಿಂದ, ಮುಂದೆ ಒದಗಬಹುದಾದ ಶತ್ರುತ್ವದ ಕಾರಣದಿಂದ ಬೆಚ್ಚುತ್ತಾನೆ. ಸ್ವತಃ ಪರಾಕ್ರಮಿಯಾದ ಕಾರಣದಿಂದ ಕಿಚ್ಚಿನಿಂದ ಅವಡುಗಚ್ಚುತ್ತಾನೆ!
ಮಹಾಕವಿಪ್ರಯೋಗಗಳ ಅರ್ಥವೈಶಾಲ್ಯತೆ ನಮ್ಮ ನಮ್ಮ ಓದಿನ ಅರಿವಿನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ!

No comments: