Showing posts with label Sarasvati. Show all posts
Showing posts with label Sarasvati. Show all posts

Friday, September 25, 2009

ಸರಸ್ವತಿಯ ಬಗ್ಗೆ ಒಂದಿಷ್ಟು ಮಾತು... ಭಾಗ-2

‘ಸಂವಹನ’ ಎಂಬುದು ಆಧುನಿಕ ಜಗತ್ತಿನ ಅತ್ಯಗತ್ಯ ಚಟುವಟಿಕೆಯಾಗಿದೆ. ಸಂಕೇತಗಳು, ನಿರ್ದಿಷ್ಟ ಶಬ್ದಗಳು ಸಂವಹನಕ್ರಿಯೆಗೆ ಆಧಾರವಾಗಿದ್ದ ಕಾಲದಿಂದಲೂ ನಿರಂತರ ಬದಲಾವಣೆಯೊಂದಿಗೆ, ಈ ಯುಗವನ್ನು ‘ಸಂವಹನಯುಗ’ವೆಂದು ಪ್ರಭಾವಿಸುವಷ್ಟರ ಮಟ್ಟಿಗೆ ಅದಕ್ಕೆ ವ್ಯಾಪ್ತಿ ಮತ್ತು ಪ್ರಾಮುಖ್ಯ ಉಂಟಾಗಿದೆ. ಸಂವಹನ ಕ್ರಿಯೆಗೆ ಅತ್ಯಗತ್ಯವಾಗಿದ್ದ ಶಬ್ದಗಳೇ ಒಂದು ನಿಶ್ಚಿತ ಧ್ವನಿರೂಪವನ್ನು ತಳೆಯುವುದರೊಂದಿಗೆ ಭಾಷೆಯ ಉಗಮಕ್ಕೆ ನಾಂದಿಯಾಯಿತು. ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಭಾಷೆಯ ಉಗಮಕ್ಕೆ ಕಾರಣೀಭೂತವಾದ ಹಾಗೂ ಸಂವಹನ ಕ್ರಿಯೆಗೆ ಅತ್ಯಗತ್ಯವಾದ ವಾಕ್ ಅಥವಾ ಮಾತು, ಭಾರತೀಯ ಸಂಸ್ಕೃತಿಯಲ್ಲಿ ದೈವತ್ವಕ್ಕೇರಿತು. ವಾಕ್‌ನ ಉಪಯೋಗ, ಪ್ರಭಾವ, ಆಯತಪ್ಪಿದರೆ ಅದರಿಂದಾಗುವ ಅನಾಹುತ....... ಇವುಗಳಿಂದಾಗಿ ಮಾತಿಗೆ ಮಹತ್ವದ ಸ್ಥಾನ ಲಭ್ಯವಾಗಿದೆ.
ಇಂತಹ ಮಾತು ದೈವತ್ವಕ್ಕೇರಿದಾಗ, ವಾಕ್ಕಿಗೇ ಒಂದು ದೇವತೆಯೂ ಸೃಷ್ಟಿಯಾಗಬೇಕಾಗುತ್ತದೆ. ಅಂತಹ ವಾಗ್ದೇವಿಯ ಸೃಷ್ಟಿ ಭಾರತೀಯ ಸಂಸ್ಕೃತಿಯಲ್ಲಿ ವಿಭಿನ್ನವಾಗಿಯೇ ಇದೆ. ಜನೋಪಯೋಗಿಯಾದ ಸರಸ್ವತೀ ನದಿಯು ದೈವತ್ವಕ್ಕೇರಿದ ಪರಿಣಾಮವಾಗಿ ನದಿದೇವತೆಯಾಗಿ ಆರಾಧನೆಗೊಳಗಾಗುತ್ತಾಳೆ. ತನ್ನ ಹರಿಯುವ ಪಾತ್ರವನ್ನು ಬದಲಿಸುವ ನದಿಯಂತೆ, ನದಿಯಾಗಿದ್ದ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸಿ ವಾಗ್ದೇವಿಯಾಗಿದ್ದು, ನಂತರದ ದಿನಗಳಲ್ಲಿ ವಿದ್ಯಾದೇವತೆ, ಸಾಹಿತ್ಯದೇವತೆ, ಸಕಲಕಲಾದೇವತೆಯಾಗಿ ಭಾರತೀಯರ ಜನಮಾನಸದಲ್ಲಿ ನೆಲೆನಿಂತದ್ದು ಒಂದು ಮಹಾಕಥನ. ಹಾಗೊಂದು ವೇಳೆ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸದಿದ್ದರೆ, (ಬೇರೊಂದು ದೇವತೆ ವಾಗ್ದೇವಿಪಟ್ಟವನ್ನು ಅಲಂಕರಿಸುತ್ತಿದ್ದುದು ನಿಜವಾದರೂ,) ಮರಳುಗಾಡಿನಲ್ಲಿ ಕಣ್ಮರೆಯಾದ ಸರಸ್ವತೀ ನದಿಯಂತೆ, ಭಾರತೀಯರ ಮನಸ್ಸಿನಿಂದ ಈಗಾಗಲೇ ಕಾಣೆಯಾಗಿರುವ ವೇದೋಕ್ತವಾದ ಹಲವಾರು ದೇವತೆಗಳಂತೆ ಸರಸ್ವತಿಯೂ ಕಣ್ಮರೆಯಾಗಬೇಕಾಗುತ್ತಿತ್ತು. ಸರಸ್ವತೀ ನದಿಯು ಮಾತ್ರ ತನ್ನ ಪಾತ್ರವನ್ನು ಬದಲಿಸದೆ ಮರಳುಗಾಡಿನಲ್ಲಿ ಇಂಗಿಹೆಗಿದ್ದು ಮಹಾನಾಗರಿಕತೆಯೊಂದರ ದುರಂತವೇ ಸರಿ.
‘ಸರಸ್ವತಿ’ ಎಂದರೆ ಈಗ ಕಣ್ಣಮುಂದೆ ನಿಲ್ಲುವುದು, ನಾವು ನೋಡಿರುವ ಯಾವುದೋ ಶಿಲ್ಪದ ಇಲ್ಲವೇ ಚಿತ್ರಪಟದ ಇಲ್ಲವೇ ಸಾಹಿತ್ಯವರ್ಣನೆಯಿಂದ ನಮ್ಮ ಮನಸ್ಸಿನಲ್ಲಿ ರೂಪಗೊಂಡ ಸುಂದರ ‘ಸ್ತ್ರೀ’ ದೇವತೆಯೊಬ್ಬಳ ಚಿತ್ರ. ಅರಳಿದ ಬೆಳ್ದಾವರೆಯ ಮೇಲೆ ವೀಣೆ-ಪುಸ್ತಕ-ಅಕ್ಷಮಾಲೆಗಳನ್ನು ಹಿಡಿದು ಶುಭ್ರವರ್ಣದ, ಪ್ರಸನ್ನವದನಳಾದ ಚತುರ್ಭುಜ ದೇವತೆಯ ಚಿತ್ರ. ಹತ್ತಿರದಲ್ಲಿ ಹಂಸ, ಕೆಲವೊಮ್ಮೆ ನವಿಲು ಇರುತ್ತದೆ. ಆದರೆ ಇಂದು ನಾವು ಕಾಣುತ್ತಿರುವ ಈ ಚಿತ್ರ ರೂಪುಗೊಂಡಿದ್ದಕ್ಕೆ ಸುಮಾರು ನಾಲ್ಕುಸಾವಿರ ವರ್ಷಗಳ ಇತಿಹಾಸವಿದೆ ಎಂದು ಅರಿತಾಗ ಆಶ್ಚರ್ಯ, ಸಂತೋಷ, ಹೆಮ್ಮೆ ಒಟ್ಟಿಗೇ ಉಂಟಾಗುತ್ತದೆ. ಸರಸ್ವತಿಯು ನಡೆದು ಬಂದ ನಾಲ್ಕುಸಾವಿರ ವರ್ಷಗಳ ಹಾದಿಯ ಅವಲೋಕನವೇ ಒಂದು ಚೇತೋಹಾರಿ ಅನುಭವ.

ಆಸೀನ ಚತುರ್ಭುಜ ಸರಸ್ವತಿ - ಬಗ್ಗವಳ್ಳಿ
ಸಂಸ್ಕೃತ ಕವಿಗಳು ತಮ್ಮ ಕಾವ್ಯಗಳಲ್ಲಿ ಸರಸ್ವತಿಯನ್ನು ನದಿಯಾಗಿ ಸ್ತುತಿಸಿದ್ದರೂ ವಾಗ್ದೇವತೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದಾಳೆ. ಶಬ್ದ ಮತ್ತು ಅರ್ಥಗಳಿಗೆ ಅಧಿದೇವತೆ. ‘ಶಬ್ದಾರ್ಥೌಸಹಿತೌಕಾವ್ಯಂ’ ಎಂಬಂತೆ ಕಾವ್ಯದ ಅಧಿದೇವತೆಯೂ ಹೌದು. ಅಕ್ಷರ, ಭಾಷೆ, ವಿದ್ಯೆ, ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಮೊದಲಾದವಕ್ಕೂ ಸರಸ್ವತೀ ಅಧಿದೇವತೆ. ಸರಸ್ವತಿಯ ಕಟಾಕ್ಷವಿಲ್ಲದವನು ಪಶುವಿಗೆ ಸಮಾನ. ಸರಸ್ವತಿಯು ಬ್ರಹ್ಮನಿಗೆ ಮಗಳು. ಆದರೆ ತಪಸ್ಸು ಮಾಡಿ ಅವನಿಂದ ಕಾವ್ಯಪುರುಷ ಎಂಬ ಮಗನನ್ನು ಪಡೆಯುತ್ತಾಳೆ. ಅವನನ್ನು ಗೌರಿಯ ಮಾನಸಪುತ್ರಿ ಕಾವ್ಯವಿದ್ಯಾವಧೂ ವರಿಸುತ್ತಾಳೆ. ಪುರಾಣಗಳ ಕಲ್ಪನೆಯಂತೆ ಆಕೆ ದೇವಲೋಕದಿಂದ ಶಾಪವಿಮೋಚನೆಗಾಗಿ ಭೂಲೋಕಕ್ಕೆ ಬರುತ್ತಾಳೆ. ಇಲ್ಲಿಯ ಋಷಿ ದಧೀಚನಿಂದ ಸಾರಸ್ವತ ಎಂಬ ಮಗನನ್ನು ಪಡೆದು ಆತನನ್ನು ವೇದಪಂಡಿತನನ್ನಾಗಿ ಮಾಡುತ್ತಾಳೆ. ಅವಳು ವೀಣಾವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಅಭಿನವಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ. ‘ಸರ್ವಭಾಷಾಸರಸ್ವತೀ’ ಎಂಬುದು ಮೀಮಾಂಸಕರ ಮತ್ತು ಕವಿಗಳ ಅಭಿಮತ. ಕಾಶ್ಮೀರದ ಅಧಿದೇವತೆಯಾಗಿರುವ ಶಾರದೆ, ಕಾಶ್ಮೀರದಲ್ಲಿ ಹಂಸರೂಪಿಯಾಗಿ ನೆಲೆನಿಂತಿದ್ದಾಳೆ ಎಂಬುದು ಕಾಶ್ಮೀರಿಮೂಲದ ಕವಿಗಳ ನಂಬಿಕೆ. ಹಂಸ ಅವಳ ವಾಹನ. ಸರ್ವಶುಕ್ಲೆಯಾದ ಆಕೆಯ ವಸ್ತ್ರಾಭರಣಗಳೂ ಶ್ವೇತವರ್ಣದವುಗಳು. ಆದಿಜಿನರ ಮುಖದಿಂದುಯಿಸಿದ ಸರಸ್ವತಿಯು ಸರ್ವಲೋಕವನ್ನೂ ವ್ಯಾಪಿಸಿದಳು ಎಂಬುದು ಜೈನಕವಿಗಳ ಅಭಿಪ್ರಾಯ.

ಸ್ಥಾನಕ ಚತುರಭುಜ ಸರಸ್ವತಿ ಹಳೇಬೀಡು
ಕನ್ನಡದಲ್ಲಿ ಜೈನ ವೈದಿಕ ವೀರಶೈವ ಪರಂಪರೆಯ ಕವಿಗಳು ತಮ್ಮ ತಮ್ಮ ದರ್ಶನಗಳಿಗನುಗುಣವಾಗಿ ಸರಸ್ವತಿಯನ್ನು ಸ್ತುತಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಮೀರಿದ ಮಾನವಧರ್ಮವೊಂದಿದೆ. ಆ ಹಿನ್ನೆಲೆಯಲ್ಲೂ ಸರಸ್ವತಿಯನ್ನು ಪ್ರತಿಭಾವಂತರಾದ ಕವಿಗಳು ಕಂಡಿದ್ದಾರೆ. ಸರಸ್ವತಿಯು ವಾಗ್ದೇವತೆ, ಕಾವ್ಯದೇವತೆ, ಜ್ಞಾನದೇವತೆ ಎಂಬ ಪ್ರಾರಂಭದ ಸೀಮಿತ ಚೌಕಟ್ಟನ್ನು ಮೀರಿ, ಸಂಸಾರಸಂಭಾವಿತಾತ್ಮೆ, ಕಾಮಸಂಜನನಿ, ಪ್ರೇಮಭೈರವಿ, ಶೃಂಗಾರಮೂರ್ತಿ, ರಸರಾಣಿ, ರಸಸರಸ್ವತಿ, ಕಲಾಸುಂದರಿ, ವಾಕ್ಸುಂದರಿ, ನುಡಿರಾಣಿ, ವಿಜ್ಞಾನನೇತ್ರಿ, ಸರ್ವಪಾರದರ್ಶಿಕೆ ಎಂದು ಮೊದಲಾದ ವಿಶೇಷಣಗಳನ್ನು ಧರಿಸಿ ಸರಸ್ವತಿಯು ಬೆಳೆದಿದ್ದಾಳೆ. ಕಾವ್ಯವಾಸಿಯಾಗಿದ್ದ ಸರಸ್ವತಿಯು ವಿದ್ಯಾಲಯವಾಸಿಯೂ, ವಿದ್ಯಾಲಯೆಯೂ, ಕವಿದೇಹವಾಸಿಯೂ ಆಗಿದ್ದಾಳೆ. ಕಾವ್ಯರಂಗಸ್ಥಳದಲ್ಲಿ, ಕವಿಗಳ ನಾಲಗೆಯಲ್ಲಿ ಮಾತ್ರ ನಟಿಸುತ್ತಿದ್ದ ಸರಸ್ವತಿಯು ಕವಿಮನೋಮಂದಿರದಲ್ಲಿ, ಕವಿಯಾತ್ಮಜಿಹ್ವೆಯಲ್ಲಿ ನರ್ತಿಸಿದ್ದಾಳೆ. ಹಂಸವಾಹನೆ ಮಾತ್ರವಲ್ಲದೆ, ನವಿಲುವಾಹನೆಯಾಗಿಯೂ ದರ್ಶನವಿತ್ತಿದ್ದಾಳೆ. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆಗಿ ಸರಸ್ವತಿಯ ದರ್ಶನ ಬೆಳೆದಿದೆ. ಬಹುಶಃ, ಬೇರಾವ ಭಾಷೆಗಳಲ್ಲೂ ಸಿಗದಿದ್ದ ‘ಅನಾದಿಕವಿ’ಯ ‘ಪಟ್ಟಗೌರವ’ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಿಕ್ಕಿದೆ.

ತ್ರಿಭಂಗಿ ಚತುರ್ಭುಜ ಸರಸ್ವತಿ ಬೇಲೂರು
ಜನಪದ ಸಾಹಿತ್ಯದಲ್ಲಿ ವಾಗ್ದೇವತೆಯ ಪರಿಕಲ್ಪನೆ ಇಲ್ಲದಿದ್ದರೂ ವಾಕ್ ಅಂದರೆ ಮಾತಿನ ಮಹತ್ವ ಅಭಿವ್ಯಕ್ತಗೊಂಡಿದೆ. ಶಾರದೆ ಮತ್ತು ಸರಸ್ವತಿ ಎಂಬವುಗಳು, ಒಂದೇ ದೇವತೆಯ ಎರಡು ಹೆಸರುಗಳಷ್ಟೆ; ಸರಸ್ವತಿ ಎಂಬುದಕ್ಕೆ ಸರಸೋತಿ, ಸರಸಾತಿ, ಸರಸತಿ ಮೊದಲಾದ ಪ್ರಯೋಗಗಳಿವೆ. ರಾಗಿಕಲ್ಲನ್ನೇ ಸರಸ್ವತಿಯೆಂದು ಪೂಜಿಸುವ ಪರಿಕಲ್ಪನೆ ನವೀನವಾಗಿದೆ. ಅಲ್ಲದೆ ಬೀಸುವ ಕ್ರಿಯೆಯಲ್ಲಿ ಸರಸ್ವತಿಯು (ಹಾಡಿನ ರೂಪದಲ್ಲಿ) ಜತೆಯಾಗಿ ಇರುತ್ತಾಳೆ, ಬೀಸುವುದರಿಂದ ಆಗುವ ಆಯಾಸವನ್ನು ಸರಸ್ವತಿಯು (ಹಾಡು) ಕಳೆಯುತ್ತಾಳೆ ಎಂಬ ಭಾವನೆ ವ್ಯಕ್ತವಾಗಿದೆ. ಸರಸ್ವತಿಯು ಬ್ರಹ್ಮನ ಮಗಳೇ? ಹೆಂಡತಿಯೇ? ಎಂಬ ಯಾವುದೇ ದ್ವಂದ್ವಗಳಿಲ್ಲ. ಜನಪದರ ದೃಷ್ಟಿಯಲ್ಲಿ ಸರಸ್ವತಿಯು ಬ್ರಹ್ಮನ ಹೆಂಡತಿ ಮಾತ್ರ. ಸರಸ್ವತಿಯು ಮಾತು, ಅಕ್ಷರ, ವಿದ್ಯೆ ಮತ್ತು ಹಾಡುಗಳನ್ನು ಕಲಿಸುವ ಅಧ್ಯಾಪಿಕೆ; ದೇವತೆ. ಸರಸ್ವತಿಯು ದೇವತೆಯಾಗಿದ್ದರೂ, ಶಿಷ್ಟ ಸಂಪ್ರದಾಯದಂತೆ ಬೇರೊಂದು ಲೋಕದವಳಲ್ಲ. ತಮ್ಮೊಂದಿಗೇ ಬದುಕುತ್ತಿರುವ, ತಮ್ಮಂತೆಯೇ ಕೆಲಸ ಮಾಡುತ್ತಿರುವ ಆದರೆ ತಮಗೆ ಹಾಡು ಕಲಿಸುವ ಸಹವಾಸಿ ಎಂದೇ ಪರಿಭಾವಿಸಲಾಗಿದೆ. ಮಾತು, ವಿದ್ಯೆ, ಹಾಡು ಇವಿಷ್ಟೇ ಅಲ್ಲದೆ ಒಟ್ಟಾರೆಯಾಗಿ ಕಲಿಯುವ ಇಡೀ ಕ್ರಿಯೆಯನ್ನೇ ಸರಸ್ವತಿ ಎಂದು ಪರಿಭಾವಿಸಿರುವುದನ್ನು ಕಾಣಬಹುದು.

ನೃತ್ಯ ದಶಭುಜ ಸರಸ್ವತಿ ಹಳೇಬೀಡು
ಚಿತ್ರಕಲೆಯಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯ ಸ್ವರೂಪದಲ್ಲಿ ಮಾತ್ರ ಅಭಿವ್ಯಕ್ತಿಸಲಾಗಿದೆ. ವಸ್ತ್ರಾಭರಣಗಳಲ್ಲಿ ವೈವಿಧ್ಯಯಿರುವುದಿಲ್ಲ. ಭಾರತೀಯ ಸ್ತ್ರೀಯರು ಪಾರಂಪರಿಕ ತೊಡುಗೆಯಾದ ಸೀರೆ, ರವಿಕೆ ಸರಸ್ವತಿಯ ಚಿತ್ರಗಳಲ್ಲಿಯೂ ಕಂಡು ಬರುತ್ತದೆ. ಬಹುತೇಕ ಆಧುನಿಕ ಸರಸ್ವತಿಯ ಚಿತ್ರಗಳಿಗೆ ರವಿವರ್ಮನ ಸರಸ್ವತಿಯ ಚಿತ್ರವೇ ಮೂಲ ಆಕರವಾಗಿದೆ. ಮೈಸೂರು ಮತ್ತು ತಂಜಾವೂರು ಶೈಲಿಯ ಸರಸ್ವತಿಯ ಚಿತ್ರಗಳು ಮಂಟಪಗಳಲ್ಲಿರುವಂತೆ ಸಂಯೋಜಿತವಾಗಿದ್ದರೆ, ಆಧುನಿಕ ಚಿತ್ರಗಳೆಲ್ಲವೂ ಪ್ರಕೃತಿಯ ನಡುವಿನಲ್ಲಿರುವಂತೆ ಚಿತ್ರಿತವಾಗಿವೆ. ಕೆಲವು ನವ್ಯವೆನ್ನಬಹುದಾದ ರಚನೆಗಳಲ್ಲಿ ರೇಖೆಗಳೇ ಪ್ರಧಾನವಾಗಿರುತ್ತವೆ. ಚಿತ್ರಕಲೆಯಲ್ಲಿ ವಿದ್ಯಾದೇವತೆಯಾಗಿ ಮಾತ್ರ ಚಿತ್ರಿತಳಾಗಿದ್ದಾಳೆ. ಕೆಲವೇ ಕೆಲವು ರೇಖೆಗಳನ್ನು ಬಳಸಿ, ಸರಸ್ವತಿಯನ್ನು ವಿದ್ಯಾದೇವತೆಯನ್ನಾಗಿಯೂ, ನದಿದೇವತೆಯನ್ನಾಗಿಯೂ ಬಿಂಬಿಸುವಲ್ಲಿ ಹುಸೇನರ ಚಿತ್ರ ಯಶಸ್ವಿಯಾಗಿದೆ. ಇನ್ನೊಬ್ಬ ಕಲಾವಿದ ರುದ್ರಕುಮಾರ್ ಝಾ ಅವರ ಚಿತ್ರದಲ್ಲೂ ಸರಸ್ವತಿ ನಗ್ನವಾಗಿಯೇ ಇದ್ದಾಳೆ. ಪ್ರಾಚೀನ ಶಿಲ್ಪಗಳಲ್ಲು ನಗ್ನತೆಯಿದೆ; ಆದರೆ ಅಶ್ಲೀಲತೆಯಿಲ್ಲ ! ಆದರೆ ಹುಸೇನರ ಚಿತ್ರವೊಂದಕ್ಕೆ ವಿರೋಧ ವ್ಯಕ್ತವಾಗಿದ್ದು ಮಾತ್ರ ದುರದೃಷ್ಟಕರ. ಹಾಗೆ ನೋಡಿದರೆ ಪುರಾಣಗಳಲ್ಲಿಯೇ ಸರಸ್ವತಿಯನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ!

ಬ್ರಹ್ಮನ ಜೊತೆಯಲ್ಲಿ ಸರಸ್ವತಿ ಹಳೇಬೀಡು
ಕರ್ನಾಟಕದಲ್ಲಿ ಪೂರ್ಣರೂಪದ ಬೌದ್ಧ ದೇವಾಲಯಗಳಾಗಲೀ ಸರಸ್ವತೀ ಶಿಲ್ಪಗಳಾಗಲೀ ದೊರೆತಿಲ್ಲ. ಬೌದ್ಧಾಲಯಗಳ ಅವಶೇಷಗಳು ಗುಲ್ಬರ್ಗಾ ಜಿಲ್ಲೆಯ ಸನ್ನತಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಘಟ್ಟ ಮುಂತಾದ ಕಡೆ ಕಂಡುಬಂದರೂ ಸರಸ್ವತೀ ಶಿಲ್ಪಗಳು ವರದಿಯಾಗಿಲ್ಲ. ಜೈನಬಸದಿಗಳಲ್ಲಿ ಸಿಗುವ ಸರಸ್ವತಿಶಿಲ್ಪಗಳ ಲಕ್ಷಣಗಳೇ ಶಿವ ಅಥವಾ ಕೇಶವ ದೇವಾಲಯಗಳಲ್ಲಿನ ಸರಸ್ವತಿಶಿಲ್ಪಗಳಲ್ಲೂ ಕಾಣುತ್ತವೆ. ತಾಂತ್ರಿಕಸರಸ್ವತಿಯ ಶಿಲ್ಪಗಳು ದೊರೆಯುವುದಿಲ್ಲವಾದರೂ, ದುರ್ಗಿಯೇ ಪುಸ್ತಕವನ್ನು ಹಿಡಿದು ಸರಸ್ವತಿಯಾಗಿ ನಿಂತಿರುವುದನ್ನು ಕಾಣಬಹುದು. ಶಿಲ್ಪಿಗಳು ಸರಸ್ವತಿಯನ್ನು ಬ್ರಹ್ಮನ ರಾಣಿಯೆಂದೇ ಚಿತ್ರಿಸಿದ್ದಾರೆ. ಆಕೆ ಬ್ರಹ್ಮನ ಮಗಳೆಂಬ ಕಲ್ಪನೆ ಶಿಲ್ಪಗಳಲ್ಲಿ ಎಲ್ಲಿಯೂ ಬಿಂಬಿತವಾಗಿಲ್ಲ. ‘ಪರಮಜಿನೇಂದ್ರವಾಣಿಯೇ ಸರಸ್ವತೀ’ ಆಗಿದ್ದರೂ, ಜೈನಧರ್ಮೀಯರೂ ಸಹ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ; ಪೂಜಿಸಿದ್ದಾರೆ. ಸರಸ್ವತೀ ಶಿಲ್ಪಗಳಿಗೆ ನಿರ್ದಿಷ್ಟವಾದ ಶಿಲ್ಪಲಕ್ಷ್ಷಣಗಳಿದ್ದರೂ ಸಾಹಿತ್ಯಕ ಆಧಾರಗಳಿದ್ದಾಗ್ಯೂ, ಕರ್ನಾಟಕದ ಶಿಲ್ಪಾಚಾರ್ಯರು ಸ್ವತಂತ್ರವಹಿಸಿ ಹತ್ತು ಹಲವಾರು ಸ್ವರೂಪಗಳಲ್ಲಿ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಸರಸ್ವತಿಗೆ ಬೇರೆ ಬೇರೆ ಸ್ವರೂಪಗಳು, ಬ್ರಹ್ಮನ ಪತ್ನಿ ಮತ್ತು ಮಗಳು ಎಂಬ ಪರಿಕಲ್ಪನೆಗಳು ಇದ್ದಾಗ್ಯೂ, ಆಕೆ ವಿದ್ಯಾದೇವತೆಯೆಂಬ ಭಾವನೆ ಮಾತ್ರ ಸಾರ್ವತ್ರಿಕವಾದದ್ದು, ಸಾರ್ವಕಾಲಿಕವಾದದ್ದು.
ಕೊನೆಯ ಮಾತು....
ಮೊದಲ ಕಂತಿಗೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು.
ಅಂತರಂಗದ ಮಾತುಗಳು ಬ್ಲಾಗಿನ ಶಾಮಲಾ ಜನಾರ್ಧನ್ ಅವರು 'ಈ ಬಾರಿ ದುರ್ಗಾಷ್ಟಮಿಯಂದೇ ಸರಸ್ವತಿ ಪೂಜೆ ಬಂದಿದೆ' ಎಂದಿದ್ದಾರೆ. ಹಾಸನ ಜಿಲ್ಲೆ ಮೊಸಳೆಯ ದೇವಾಲಯದ ಭಿತ್ತಿಯಲ್ಲಿ ಪುಸ್ತಕವನ್ನು ಹಿಡಿದಿರುವ ದುರ್ಗೆಯ ಶಿಲ್ವಿದೆ. ಅದನ್ನು ವಿದ್ವಾಂಸರು Durga Standing as Saraswati ಎಂದು ಕರೆದಿದ್ದಾರೆ. ಅದರ ಚಿತ್ರ ಈ ಬಾರಿಯ ದುರ್ಗಾಷ್ಟಮಿ-ಸರಸ್ವತೀ ಪೂಜೆಗೆ ವಿಶೇಷವೆನ್ನಿಸಬಹುದು, ನೋಡಿ.

Tuesday, September 22, 2009

ಸರಸ್ವತಿಯ ಬಗ್ಗೆ ಒಂದಿಷ್ಟು ಮಾತು... ಭಾಗ-1

ಸರಸ್ವತಿಗೂ ಮುನ್ನ...
ಮೊನ್ನೆ ಸ್ನೇಹಿತರೊಬ್ಬರು ‘ಏನ್ರಿ ಸರಸ್ವತೀ ಪೂಜೆ ಮಾಡೋಲ್ಲವೆ?’ ಎಂದರು. ಅವರ ಮಾತಿನ ಅರ್ಥ ನಾನು ಸರಸ್ವತಿಯ ಬಗ್ಗೆ ಪಿಹೆಚ್.ಡಿ. ಮಾಡಿರುವುದರಿಂದ ಸರಸ್ವತಿಯ ಪೂಜೆ ಮಾಡಲೇಬೇಕು ಎಂಬುದಾಗಿತ್ತು! ನಾನು ನಕ್ಕು ಸುಮ್ಮನಾಗಿದ್ದೆ. (ನಾನು ನಾಸ್ತಿಕ ಮಾತ್ರ; ಆದರೆ ನಾಸ್ತಿಕವಾದಿಯಲ್ಲ ಎಂಬುದು ಗೊತ್ತಿದ್ದುದರಿಂದ ಅವರೂ ಸುಮ್ಮನಾದರು.) ನವರಾತ್ರಿಯಲ್ಲಿ ಯಾವುದೋ ಒಂದು ದಿನ ಸರಸ್ವತಿಯನ್ನು ವಿಶೇಷವಾಗಿ ಪೂಜೆ ಮಾಡುತ್ತಾರೆಂದು ನನಗೆ ಗೊತ್ತಿತ್ತು. ಆದರೆ, ಪೂಜೆಯ ವಿಚಾರ ನನ್ನ ಅಧ್ಯಯನದಿಂದ ಹೊರತಾಗಿತ್ತು ಹಾಗೂ ಸಂಪೂರ್ಣವಾಗಿ ಸರಸ್ವತಿಯ ಹುಟ್ಟು, ವಿಕಾಸ, ಸಾಂಸ್ಕೃತಿಕ ಆಯಾಮಗಳು, ಮುಖ್ಯವಾಗಿ ಸರಸ್ವತಿ ವಾಗ್ದೇವತೆ-ವಿದ್ಯಾದೇವತೆ ಎಂಬ ಸ್ವರೂಪ, ಕಲಾಭಿವ್ಯಕ್ತಿ ಮುಂತಾದವುಗಳಿಗೆ ಮಾತ್ರ ನನ್ನ ಅಧ್ಯಯನ ಸೀಮಿತವಾಗಿತ್ತು. ಕುತೂಹಲದಿಂದ ಕ್ಯಾಲೆಂಡರ್ ಹಿಡಿದು ನೋಡಿದರೆ ಆಯುಧಪೂಜೆಯ ಹಿಂದಿನ ದಿನ (ಅಷ್ಟಮಿ) ‘ಸರಸ್ವತೀ ಪೂಜೆ’ ಎಂದಿತ್ತು. ಸರಿ, ನಾನಂತೂ ಪೂಜೆ ಮಾಡುವುದಿಲ್ಲ. (ಹಾಗೆ ನೋಡಿದರೆ ನನ್ನ ಅಧ್ಯಯನವೇ ಒಂದು ಪೂಜೆ!) ಮತ್ತೆ ನನ್ನ ಮಹಾಪ್ರಬಂಧವನ್ನು ಹಿಡಿದು ಒಮ್ಮೆ ಓದಬೇಕೆನ್ನಿಸಿತ್ತು. ಮೌಲ್ಯಮಾಪಕರ ವರದಿ ನನ್ನ ಕೈಸೇರಿದ್ದರಿಂದ ಅದರಲ್ಲಿ ಮೌಲ್ಯಮಾಪಕರು ಹೇಳಿರುವ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಓದಿದೆ. ನಂತರ ಅದರ ಪ್ರಮುಖಾಂಶಗಳನ್ನು ನನ್ನ ಓದುಗ ಮಿತ್ರರೊಂದಿಗೆ ಹಂಚಿಕೊಂಡರೆ ಹೇಗೆ ಎಂಬ ವಿಚಾರ ಮನಸ್ಸಿಗೆ ಹೊಳೆಯಿತು. ಅದರ ಪ್ರತಿಫಲವೇ ಈ ಬರಹ. ಹೇಗೆ ಸಂಗ್ರಹಿಸಿದರೂ ಲೇಖನ ಮೂರು ಪುಟಗಳನ್ನೂ ಮಿರಿಬಿಟ್ಟಿತು. ಕಂಪ್ಯೂಟರ್ ಪರದೆಯ ಮೇಲೆ ದೀರ್ಘಲೇಖನಗಳನ್ನು ಓದುವ ಕಷ್ಟದ ಅರಿವು ನನಗಿರುವುದರಿಂದ ಎರಡು ಕಂತುಗಳಲ್ಲಿ ಈ ಬರಹ ನಿಮ್ಮ ಮುಂದೆ ಬರಲಿದೆ.

ಸಾಮಾನ್ಯ ಗ್ರಹಿಕೆಯ ಸರಸ್ವತಿ...
ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು. ನದಿ, ನದಿದೇವತೆ, ವಾಗ್ದೇವತೆ, ವಿದ್ಯಾದೇವತೆ, ಜ್ಞಾನದೇವತೆ..... ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ ‘ಬ್ರಹ್ಮನ ಶಕ್ತಿ’ ಎಂಬ ಸ್ವರೂಪವೂ ಬೆಳೆದು ಬಂದಿದೆ. ‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಆಸೀನಳಾಗಿರುವ ಶುಭ್ರವರ್ಣದ ಸರಸ್ವತಿಯ
ಬೌದ್ಧ ಧರ್ಮದಲ್ಲಿ...
ಬೌದ್ಧಧರ್ಮದ  ‘ಕಾರಂಡವ್ಯೂಹ’ ಎಂಬ ಗ್ರಂಥದಲ್ಲಿ ದೇವತೆಗಳ ಸೃಷ್ಟಿಯನ್ನು ಕುರಿತು ಹೇಳಲಾಗಿರುವ ಪ್ರಕಾರ, ಆದಿಬುದ್ಧನ ಆದೇಶದ ಮೇರೆಗೆ ಪದ್ಮಪಾಣಿಯು ಮುಖ್ಯವಾಗಿ ಮೂರು ಗುಣ(ಕ್ರಿಯಾತತ್ವ)ಗಳನ್ನು - ಅಂದರೆ ಬ್ರಹ್ಮ (ದೇವತೆಗಳ ಮಾನವರ ಸೃಷ್ಟಿಕರ್ತ), ವಿಷ್ಣು (ರಕ್ಷಕ) ಮತ್ತು ಮಹಾದೇವ (ಲಯಕರ್ತ) ಇವರನ್ನು ಸೃಷ್ಟಿಸುತ್ತಾನೆ. ಬೋಧಿಸತ್ವನಿಂದ ವಾಯು, ಭೂಮಿ, ನೀರು, ಮಳೆ, ಸೂರ್ಯ, ಚಂದ್ರ ಮೊದಲಾದವರು ಸೃಷ್ಟಿಯಾಗುತ್ತಾರೆ. ಇವರ ಜತೆಯಲ್ಲಿಯೇ ಸಂಗೀತ ಮತ್ತು ಕಾವ್ಯದ ದೇವತೆಯಾಗಿ ಸರಸ್ವತಿ ಹಾಗೂ ಸೌಂದರ್ಯ ಮತ್ತು ಸಂಪತ್ತಿನ ದೇವತೆಯಾಗಿ ಲಕ್ಷ್ಮಿಯರು ಸೃಷ್ಟಿಯಾಗುತ್ತಾರೆ. ಆದರೆ ಬೌದ್ಧಧರ್ಮದ ಇನ್ನೊಂದು ಸೃಷ್ಟಿಪುರಾಣವಾದ ‘ಗುಣ-ಕಾರಂಡವ್ಯೂಹ’ ಪ್ರಕಾರ- ಪದ್ಮಪಾಣಿಯ ಭುಜಗಳ ನಡುವಿನಿಂದ ಬ್ರಹ್ಮ, ಆತನ ಎರಡು ಕಣ್ಣುಗಳಿಂದ ಸೂರ್ಯ ಚಂದ್ರರು, ಬಾಯಿಯಿಂದ ಗಾಳಿ, ಹಲ್ಲುಗಳಿಂದ ಸರಸ್ವತಿ, ಮಂಡಿಯಿಂದ ಲಕ್ಷ್ಮಿ, ಪಾದದಿಂದ ಭೂಮಿ, ನಾಭಿಯಿಂದ ನೀರು ಮೊದಲಾದವು ಸೃಷ್ಟಿಯಾಗುತ್ತವೆ. ಇದು ಹಿಂದೂ ಪುರಾಣಗಳಲ್ಲಿ ಬರುವ ಸರಸ್ವತಿಯ ಸೃಷ್ಟಿ ವಿಚಾರವನ್ನೇ ಅಲ್ಪಸ್ವಲ್ಪ ಹೆಲುತ್ತದೆ. ಆಸನ, ಭುಜಸಂಖ್ಯೆ, ಆಯುಧಗಳು, ಮುದ್ರೆಗಳು ಇವುಗಳನ್ನು ಆಧರಿಸಿ ವಜ್ರಸರಸ್ವತಿ, ಮಹಾಸರಸ್ವತಿ, ವಜ್ರವೀಣಾಸರಸ್ವತಿ, ವಜ್ರಶಾರದೆ, ಆರ್ಯಾಸರಸ್ವತಿ, ರಕ್ತಸರಸ್ವತಿ, ಸಿತಸರಸ್ವತಿ, ನೀಲಸರಸ್ವತಿ ಮೊದಲಾದ ಸ್ವರೂಪಗಳನ್ನು ಹೇಳಲಾಗಿದೆ.
ವಿದೇಶಗಳ ಬೌದ್ಧಧರ್ಮೀಯರಲ್ಲಿ ಸರಸ್ವತಿ...
ಸರಸ್ವತಿಯನ್ನು, ಚೀನಾದ ಬೌದ್ಧಧರ್ಮೀಯರು Ta-pien-ts’ai-t’iennu ಮತ್ತು Miao-yin mu ಎಂಬ ಹೆಸರುಗಳಿಂದ ಪೂಜಿಸುತ್ತಾರೆ. ಜಪಾನಿನಲ್ಲಿ Benten, ಮಂಗೋಲಿಯಾದಲ್ಲಿ Kele-yin ukin tegri ಎಂದೂ ಹಾಗೂ ಟಿಬೆಟ್‌ನಲ್ಲಿ Nag-gi-lha-mo ಮತ್ತು dByangs-can-ma (Yangchenma - English Phonetics) ಎಂಬ ಹೆಸರುಗಳಿಂದಲೂ ಆರಾಧಿಸುತ್ತಾರೆ. ಈ ಪದಗಳ ಅರ್ಥ ಸುಂದರವಾದ ಸ್ತ್ರೀ (Melodious Lady) ಮತ್ತು ಸುಂದರವಾದ ಧ್ವನಿ ಅಥವಾ ಸ್ವರ (Melodious voice) ಎಂಬುದಾಗಿದೆ. ಜಪಾನಿಯರ ಪರಿಕಲ್ಪನೆಯ ಏಳುಮಂದಿ ಅದೃಷ್ಟದೇವತೆಗಳಲ್ಲಿ Benten ಒಬ್ಬಳು. ಸರಸ್ವತಿಯ ಪೂರ್ಣ ಹೆಸರು Dai-ben-Zai-ten, ಅಂದರೆ Great Divinity of Reasoning Faculty ಎಂದರ್ಥ.
ಜೈನಧರ್ಮದಲ್ಲಿ...
ಆದಿಜಿನರ ಮುಖದಿಂದುದಯಿಸಿ, ಜಿನರ ಮುಖದಲ್ಲಿ ನೆಲೆನಿಂತ ಸರಸ್ವತಿಯ ಉಗಮ ಮತ್ತು ಶ್ರೇಷ್ಠತೆಯನ್ನು ಜೈನರ ಪವಿತ್ರಗ್ರಂಥವಾದ ‘ಮಹಾಪುರಾಣ’ದಲ್ಲಿ ವಿವರವಾಗಿ ವರ್ಣಿಸಲಾಗಿದೆ. ಜೈನತತ್ವದ ಬಗ್ಗೆ ಭರತನಿಗುಂಟಾದ ಸಂಶಯವನ್ನು ನಿವಾರಿಸಲು ಆದಿಜಿನನಾದ ವೃಷಭದೇವನು ಮಾತನಾಡುತ್ತಾನೆ.
ಅಪರಿಸ್ಪಂದತಾಲ್ವಾದೇರಸ್ಪಷ್ಟದಶನುದ್ಯುತೇಃ
ಸ್ವಯಂಭುವೋ ಮುಖಾಂಭೋಜಾಜ್ಜಾತಾ ಚಿತ್ರಂ ಸರಸ್ವತೀ
‘ಅಕ್ಷರೋತ್ಪತ್ತಿಸ್ಥಾನವಾದ ತಾಲು(ದವಡೆ) ಮೊದಲಾದವುಗಳ ಚಲನೆಯಿಲ್ಲದಿರುವುದೂ, ಹಲ್ಲುಗಳ ಕಾಂತಿಯೂ ಸ್ಪಷ್ಟವಾಗಿ ತೋರದಿರುವುದೂ ಆದ ಸ್ವಯಂಭೂ (ಆದಿಬ್ರಹ್ಮ)ನ ಮುಖಕಮಲದಿಂದ ಸರಸ್ವತಿಯು ಹೆರಟಳು.’ ಅಂದರೆ ಇಲ್ಲಿ ಸರಸ್ವತಿಯು ಆದಿಜಿನರ ನಾಲಗೆಯಿಂದ ಜನಿಸಲಿಲ್ಲ; ಬದಲಿಗೆ ನೇರವಾಗಿ ಮುಖದಿಂದಲೇ ಜನಿಸಿದ್ದಾಳೆ.
ವೈದಿಕಧರ್ಮದಲ್ಲಿ...
ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ. ಕ್ರಿ.ಪೂ. ಸುಮಾರು ೩೫೦೦ ವರ್ಷಗಳಷ್ಟು ಸುದೀರ್ಘ ಪ್ರಾಚೀನತೆ ಋಗ್ವೇದಕ್ಕಿದೆ. ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇರುವ ಅತ್ಯಂತ ಪ್ರಾಚೀನವಾದುದೂ, ಅಧಿಕೃತವೂ ಆದ ಆಕರವು ಋಗ್ವೇದವೇ ಆಗಿದೆ. ಇದರಲ್ಲಿ ಸರಸ್ವತಿಯು ಪ್ರಧಾನ ದೇವತೆಯಾಗಿಯೂ ಸ್ತುತಿಗೊಂಡಿದ್ದಾಳೆ. ಇಂದ್ರ, ಅಗ್ನಿ, ರುದ್ರ, ವಿಷ್ಣು ಮೊದಲಾದ ಪ್ರಧಾನ ದೇವತೆಗಳ ಜೊತೆಯಲ್ಲಿಯೂ ಸ್ತುತಿಗೊಂಡಿದ್ದಾಳೆ. ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ತುತಿಗೊಂಡಿದ್ದಾಳೆ. ಆರನೇ ಮಂಡಲದ ೬೧ನೆಯ ಸೂಕ್ತದ ಎಲ್ಲಾ ಹದಿನಾಲ್ಕು ಋಕ್ಕುಗಳೂ ಸರಸ್ವತಿಗೆ ಸಂಬಂಧಿಸಿದ್ದಾಗಿವೆ.
ವೇದಗಳಲ್ಲಿ ಸರಸ್ವತಿಯನ್ನು ನದಿ ಮತ್ತು ನದೀದೇವತೆ, ದೇವತೆ ಅಥವಾ ಯಜ್ಞದೇವತೆ, ಇಳಾ, ಕಾಮಧೇನು, ವಾಗ್ದೇವತೆ, ಯುದ್ಧದೇವತೆ ಅಥವಾ ರಕ್ಷಣಾದೇವತೆ, ಶಾಂತಿದೇವತೆ, ಅಹಿಂಸಾದೇವತೆ, ಅನ್ನಪೂರ್ಣೆ, ಭಾಗ್ಯದೇವತೆ, ಆರೋಗ್ಯದೇವತೆಯಾಗಿ ಮಾತ್ರವಲ್ಲದೆ ತಾಯಿ, ಸಹೋದರಿ, ಮಗಳು, ಸ್ನೇಹಿತೆ, ಪತ್ನಿ, ಸ್ವರೂಪದಲ್ಲಿ ಸ್ತುತಿಸಲಾಗಿದೆ. ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತು ಕೂಡಾ ಇದೆ.
ಪುರಾಣಗಳಲ್ಲಿ ಬರುವ ಸರಸ್ವತಿಯ ವಿಷಯಗಳು ಒಂದಕ್ಕೊಂದು ಪೂರಕವಾಗಿರದೆ ತುಂಬಾ ಗೊಂದಲ ಮೂಡಿಸುತ್ತವೆ. ಪುರಾಣದಲ್ಲಿ ಇಣುಕಿರುವ ಅಶ್ಲೀಲತೆಯ ಸೋಂಕನ್ನು ಇಂದಿನ ಕೆಲವರು ಪ್ರಶ್ನಿಸಿ, ಸರಸ್ವತಿಯನ್ನೂ ಪುರಾಣಗಳನ್ನೂ ತಿರಸ್ಕರಿಸುವಂತೆ ಕರೆಕೊಟ್ಟಿರುವುದೂ ಉಂಟು.
ಒಟ್ಟು ಭಾರತೀಯ ಸಂಸ್ಕೃತಿಯಲ್ಲಿ...
ಬೌದ್ಧಧರ್ಮದಲ್ಲಿ ಸರಸ್ವತಿಯು ಆದಿಬುದ್ಧನ ಹಲ್ಲುಗಳಿಂದಲೂ, ಜೈನಧರ್ಮದಲ್ಲಿ ಆದಿಜಿನರ ಮುಖದಿಂದಲೂ, ಹಿಂದೂಧರ್ಮದಲ್ಲಿ ಆದಿಬ್ರಹ್ಮನ ನಾಲಗೆ ಅಥವಾ ಮುಖದಿಂದಲೂ ಸೃಷ್ಟಿಯಾದಳು ಎಂದಿರುವುದನ್ನು ಗಮನಿಸಿದರೆ, ಸರಸ್ವತಿಯ ಜನನಸ್ಥಾನ ವಾಕ್ ಅಂದರೆ ಮಾತು ಜನಿಸುವ ಸ್ಥಳವೇ ಆಗಿದೆ. ಆದ್ದರಿಂದ ಸರಸ್ವತಿಯ ವಾಗ್ದೇವಿಯ ಸ್ವರೂಪ ಮೂರೂ ಧರ್ಮಗಳಿಗೂ ಸ್ವೀಕೃತ ಆಗಿದೆ ಎನ್ನಬಹುದು. ಮೂರೂ ಧರ್ಮಗಳಲ್ಲಿ ಸರಸ್ವತಿಗಿರುವ ಇನ್ನೊಂದು ಸಮಾನ ವಿಚಾರವೆಂದರೆ ವಿದ್ಯಾದೇವತೆ ಮತ್ತು ಜ್ಞಾನದೇವತೆ ಎಂಬ ಅಂಶಗಳು.
ಹಾಗೆಯೇ ಆಯಾಯ ಧರ್ಮದ ಧಾರ್ಮಿಕ ಗ್ರಂಥಗಳೇ ಸರಸ್ವತಿ ಎಂಬ ವಿಚಾರದಲ್ಲೂ ಸಾಮ್ಯತೆಯಿದೆ. ಬೌದ್ಧಧರ್ಮದಲ್ಲಿ ಮಂಜುಶ್ರೀಯ ಕೈಯಲ್ಲಿರುವ ‘ಪ್ರಜ್ಷಾಪಾರಮಿತ’ (ಬೌದ್ಧಧರ್ಮದ ಶಾಸ್ತ್ರಗ್ರಂಥ) ಗ್ರಂಥವೇ ಸರಸ್ವತಿಯಾಗಿದ್ದರೆ, ಜೈನಧರ್ಮದಲ್ಲಿ ಆದಿಜಿನೇಶ್ವರರ ವಾಣಿ ಮತ್ತು ಅದರಿಂದ ಉತ್ಪನ್ನವಾದ ‘ಜೈನವೇದ’ಗಳಾದ ‘ಶ್ರುತ’ಗಳೇ ಸರಸ್ವತಿಯಾಗಿವೆ. ವೈದಿಕಪರಂಪರೆಯಲ್ಲೂ ಬ್ರಹ್ಮನ ಸೃಷ್ಟಿಯಾದ ‘ವೇದ’ಗಳ ಅಧಿದೇವತೆ ಸರಸ್ವತಿಯೇ ಆಗಿದ್ದಾಳೆ. ಮೂರೂ ಧರ್ಮಗಳಲ್ಲೂ ಸರಸ್ವತಿಯನ್ನು ಒಳ್ಳೆಯ ವಾಕ್ಕಿಗೆ, ವಿದ್ಯೆಗೆ, ಜ್ಞಾನಕ್ಕೆ, ಕಾವ್ಯಾವೇಶಕ್ಕೆ ಪ್ರಾರ್ಥಿಸಲಾಗುತ್ತದೆ. ಧರ್ಮಗಳ ಒಳಪಂಗಡಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು, ತಾಂತ್ರಿಕ ಆಚರಣೆಯಲ್ಲಿ ಕಂಡುಬರುವ ಪ್ರಾದೇಶಿಕ ವೈವಿಧ್ಯತೆಗಳು ಇವುಗಳನ್ನು ಬಿಟ್ಟರೆ, ಒಟ್ಟಾರೆ ಭಾರತೀಯ ಸಂದರ್ಭದಲ್ಲಿ ಸರಸ್ವತಿಯ ಸ್ವರೂಪ ‘ಒಂದೇ’ ಆಗಿದೆ. ಗ್ರೀಕ್ ಸಂಸ್ಕೃತಿಯಲ್ಲಿ ಅಥೀನಾ ದೇವತೆ ಕೂಡಾ ಸ್ಯೂಸದೇವನ ತಲೆಯಿಂದಲೇ ಜನಿಸುತ್ತಾಳೆ.
ಈಜಿಪ್ಟ್ ಮತ್ತು ಗ್ರೀಕ್ ನಾಗರಿಕತೆಗಳನ್ನು ಅತ್ಯಂತ ಪ್ರಾಚೀನ ನಾಗರಿಕತೆಗಳೆಂದು ಗುರುತಿಸುತ್ತಾರೆ. ಈಜಿಪ್ಟ್‌ನಲ್ಲಿ ಈಸಿಸ್ (Isis) ದೇವತೆ ಸರಸ್ವತಿಯ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ಹೆಂದಿದ್ದರೆ, ಗ್ರೀಕ್ ನಾಗರಿಕತೆಯಲ್ಲಿ ಅಥೀನಾ ದೇವತೆ ಹಾಗೂ ರೋಮನ್ ಸಂಸ್ಕೃತಿಯಲ್ಲಿ ಮಿನರ್ವಾ ಸರಸ್ವತಿಗೆ ಸಂವಾದಿಯಾದ ದೇವತೆಯಾಗಿದ್ದಾರೆ.
[ಮುಂದಿನ ಭಾಗದಲ್ಲಿ ಸರಸ್ವತಿಯನ್ನು ಕುರಿತು ಸಂಸ್ಕೃತ, ಕನ್ನಡ ಕವಿಗಳು ಏನು ಹೇಳುತ್ತಾರೆ? ನಮ್ಮ ಜನಪದರ ಅಭಿಪ್ರಾಯಗಳೇನು? ಶಿಲ್ಪಿಗಳು ಖಂಡರಿಸಿರುವ ಸರಸ್ವತಿಯ ಸ್ವರೂಪಗಳೇನು? ಚಿತ್ರಕಲಾವಿದರ ಕಣ್ಣಲ್ಲಿ ಸರಸ್ವತಿ ಹೇಗೆ ಕಾಣುತ್ತಾಳೆ? ಎಂಬ ವಿಚಾರಗಳನ್ನು ತಿಳಿಸುತ್ತೇನೆ.]