Showing posts with label ತಮಿಳು ಸೆಲ್ವಿ. Show all posts
Showing posts with label ತಮಿಳು ಸೆಲ್ವಿ. Show all posts

Wednesday, December 23, 2009

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ತೀರ‍್ಮಾನ ನೀಡಿದೆ. ಶೇರ್ ಮೊಹಮದ್ ಮತ್ತು ಅಮಾನತ್ ಅಲಿ ಎಂಬಿಬ್ಬರು ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೂಗು ಕಿವಿಗಳನ್ನು ಕತ್ತರಿಸಿ ಹಾಕಿದ್ದರು. ಈಗ ನ್ಯಾಯಾಲಯ, ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಇಸ್ಲಾಂ ಧರ‍್ಮದ ಶಿಕ್ಷೆಯ ಭಾಗವಾಗಿ ಈ ಶಿಕ್ಷೆ ನೀಡಿದೆ. ಇದರ ಜೊತೆಗೆ ಇಬ್ಬರು ಅಪರಾಧಿಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳ ದಂಡ ಮತ್ತು ಜೀವಾವಧಿ ಶಿಕ್ಷೆಯನ್ನೂ ನೀಡಿದೆ. ಯುವಿಗೆ ಒಟ್ಟು ಏಳು ಲಕ್ಷ ರೂ ಪರಿಹಾರ ಕೊಡಿಸಿದೆ.
ಈ ಘಟನೆ ನನಗೆ ಇತಿಹಾಸದ ಒಂದು ಘಟನೆಯನ್ನು ನೆನಪಿಗೆ ತಂದಿತು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ತಮಿಳು ಸೆಲ್ವಿ ಅವರ ‘ನೇಪಥ್ಯ’ ಪುಸ್ತಕದಲ್ಲಿ ಇದನ್ನು ಓದಿದ್ದೆ. ಅವರ ಪುಸ್ತಕದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೂಗು ಕತ್ತರಿಸುವ ಪ್ರಕ್ರಿಯೆ’ ಎನ್ನುವ ಲೇಖನವಿದೆ. ಅದರಲ್ಲಿ ಹರಿಹರ ಮಹಾಕವಿಯ ‘ಕಳಚೆಂಗಪೆರುಮಾಳೆಯರ ರಗಳೆ’ ಹಾಗೂ ‘ಕಳರ್‌ಸಿಂಗ ನಾಯನಾರ್ ಪುರಾಣ’ದ ಘಟನೆಯೊಂದನ್ನು ವಿವರಿಸಲಾಗಿದೆ.
ಘಟನೆ ಹೀಗಿದೆ.
‘ಕಳಚೆಂಗ ಪೆರುಮಾಳ್’ ಅಥವಾ ‘ಕಳರ್ ಸಿಂಗ ನಾಯನಾರ್’ ಹೆಸರಿನ ದೊರೆ ಇತಿಹಾಸದಲ್ಲಿ ದಾಖಲಾಗಿರುವ ‘ವೀರನರಸಿಂಹ’. ಈತನ ಹೆಂಡತಿ ‘ಚೊಲ್ಲಡಿಯನಾಚಿ’ ಅಥವಾ ‘ಚೊಲ್ಲಡಿಯದೇವಿ’. ಇವಳು ಒಂದು ದಿನ ತನ್ನ ಪರಿವಾರದೊಂದಿಗೆ ಶಿವಾಲಯಕ್ಕೆ ಬರುತ್ತಾಳೆ. ಆ ಶಿವಾಲಯದಲ್ಲಿ ಮಹಾನ್ ಶಿವಭಕ್ತನಾದ ‘ಚಿರುತೊಣೆಯಾಂಡ’ ಎಂಬುವವನು ಇರುತ್ತಾನೆ. ಅಲ್ಲಿ ಶಿವನಿಗೆ ಅಲಂಕರಿಸಲು ಹಲವಾರು ವಿಧದ ಹೂವುಗಳನ್ನು ಮಾಲೆಯಾಗಿ ಕಟ್ಟಲಾಗಿರುತ್ತದೆ. ಪ್ರದಕ್ಷಿಣೆಯಲ್ಲಿ ಬರುತ್ತಿದ್ದ ‘ಚೊಲ್ಲಡಿಯನಾಚಿ’ಯ ಕಣ್ಣಿಗೆ ಆ ಹೂವುಗಳ ಮಧ್ಯ ಕಣ್ಣಿಗೆ ಕುಕ್ಕುವಂತಿದ್ದ ‘ಚೆಂಗಣಿಗಿಲೆ’ ಹೂವು ಬೀಳುತ್ತದೆ. ಅವಳು ಅದನ್ನು ಆಸೆಯಿಂದ ಕೈಗೆತ್ತಿಕೊಂಡು ಮೂಗಿನ ಬಳಿ ಕೊಂಡೊಯ್ದು ಅದರ ಸುವಾಸನೆಯನ್ನು ಆಘ್ರಾಣಿಸುತ್ತಾಳೆ. ಅದನ್ನು ಗಮನಿಸಿದ ‘ಚಿರುತೊಣೆಯಾಂಡ’ನು ‘ಶಿವದ್ರೋಹಿ! ಶಿವನ ಮುಡಿಗೇರಿಸಲು ತಂದಿದ್ದ ಪುಷ್ಪವನ್ನು ವಾಸಿಸಿದೆ’ ಎಂದು ನಿಂದಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ‘ಇದೇ ಮೂಗಲ್ಲವೆ ಹೂವನ್ನು ಮೂಸಿದ್ದು’ ಎಂದು ಆಕೆಯ ಮೂಗನ್ನೇ ಕತ್ತರಿಸಿ ಹಾಕುತ್ತಾನೆ! “ಘರಿಲನರಿದಂ ಮೂಗನಂ ಅಮ್ಮಮ್ಮ ತೊಣೆಯಾಂಡನ್” ಎಂದು ಕವಿ ಉದ್ಘರಿಸುತ್ತಾನೆ!
ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ರಾಜ ‘ವೀರನರಸಿಂಹ’ನಿಗೆ ವಿಷಯ ತಿಳಿಯುತ್ತದೆ. ರಕ್ತಸಿಕ್ತವಾದ ಮೂಗಿನೊಂದಿಗೆ ರಾಣಿ ರಾಜನ ಮುಂದೆ ನಿಲ್ಲುತ್ತಾಳೆ. ಆಕೆಯ ಪರಿವಾರದವರು ‘ರಾಣಿಯ ಮೂಗನ್ನು ಅರಿದವನಿಗೆ ಶಿಕ್ಷೆಯಾಗಲಿ’ ಎಂದು ಅಪೇಕ್ಷಿಸುತ್ತಾರೆ. ಆದರೆ ‘ವೀರನರಸಿಂಹ’ ಪಾಕಿಸ್ತಾನದ ನ್ಯಾಯಾಲಯದಂತೆ ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಸಿದ್ಧಾಂತದವನಲ್ಲ. ‘ಚಿರುತೊಣೆಯಾಂಡ’ನನ್ನು ಕರೆಸಿ ಹೀಗೆ ಹೇಳುತ್ತಾನೆ. ‘ಚಿರುತೊಣೆಯಾಂಡರೆ, ಹೂವನ್ನು ಮೊದಲು ತೆಗೆದುಕೊಟ್ಟಿದ್ದು ಹಸ್ತ. ಆಮೇಲೆ ತಾನೆ ಮೂಗು ಅದನ್ನು ಮೂಸಿದ್ದು. ಇದನ್ನು ಮರೆತು ಮೂಸಿದ ಮೂಗನ್ನು ಮಾತ್ರ ಕತ್ತರಿಸಿ ಬಿಟ್ಟಿರಿ’ ಎಂದು ಹೇಳುತ್ತಾನೆ. ಹಾಗೆ ಹೇಳಿ ಸ್ವತಃ ತಾನೇ ಮುಂದುವರೆದು ‘ಚೊಲ್ಲಡಿಯನಾಚಿ’ಯ ಬಲಗೈಯನ್ನು ಕತ್ತರಿಸಿ ಹಾಕುತ್ತಾನೆ. ಆತನೂ ಶಿವಭಕ್ತ! ತನ್ನ ಶಿವಭಕ್ತಿಯನ್ನು ಈ ರೀತಿಯಲ್ಲಿ ಪ್ರಕಟಿಸುತ್ತಾನೆ.
ಇನ್ನು ನಮ್ಮ ದೇವನಾದ ‘ಶಿವ’ ಸುಮ್ಮನಿರುತ್ತಾನೆಯೇ? ಸ್ವತಃ ಕೈಲಾಸದಿಂದ ಇಳಿದು ಬರುತ್ತಾನೆ. ತನ್ನ ಭಕ್ತರ ಸಾಹಸವನ್ನು ಮೆಚ್ಚಿಕೊಳ್ಳುತ್ತಾನೆ. ಇತ್ತ ರಾಣಿಯ ಮೂಗನ್ನು ಸರಿಪಡಿಸುತ್ತಾನೆ!
ಸ್ತ್ರೀಸಹಜವಾದ ಆಸೆಯಿಂದ ಹೂವನ್ನು ಇಷ್ಟಪಟ್ಟಿದ್ದೇ ರಾಣಿ ಮಾಡಿದ ತಪ್ಪು. ಅದಕ್ಕೆ ಈ ಮಹಾನ್ ಶಿವಭಕ್ತರು ನೀಡುವ ಶಿಕ್ಷೆ ಶಿವಭಕಿಯ ಪ್ರತೀಕ! ಪಾಪ ‘ಚೊಲ್ಲಡಿಯನಾಚಿ’. ಸ್ವತಃ ಶಿವಭಕ್ತೆಯಾದರೂ ಕೆಲ ಕಾಲವಾದರೂ ಮೂಗು ಹಾಗೂ ಬಲಗೈ ಕತ್ತರಿಸಿಕೊಂಡ ನೋವನ್ನು ಅನುಭವಿಸಬೇಕಾಯಿತು. ಇತಿಹಾಸದುದ್ದಕ್ಕೂ ಹೀಗೆ. ಮಹಿಳೆ ಪುರುಷರ ದೌರ್ಜನ್ಯಕ್ಕೆ ವಿನಾಕರಾಣ ಗುರಿಯಾಗುತ್ತಾಳೆ. ಏಕೆಂದರೆ ಆಕೆ ಸಹನಾ ಧರಿತ್ರಿ!
ಮೂಗು ಕೈ ಕತ್ತರಿಸಿದ ಘಟನೆಯಲ್ಲಿ ವಾಸ್ತವಾಂಶ ಇದೆಯೆನ್ನಬಹುದು. ಆದರೆ ಶಿವ ಬಂದು ಆಕೆಗೆ ಕತ್ತರಿಸಿದ್ದ ಮೂಗನ್ನು ಕೈಯನ್ನು ವಾಪಸ್ ಕೊಟ್ಟ ಎಂಬುದರಲ್ಲಿ ವಾಸ್ತಾವಾಂಶ ಇದೆ ಎನ್ನಲಾದೀತೆ? ಮೊದಲನೆಯದು ಮೂರ್ತವಾದರೆ ಎರಡನೆಯದು ಅಮೂರ್ತ! ಬಹುಶಃ ಆಕೆಯ ಸಹನೆಯೇ ಶಿವಸ್ವರೂಪದ್ದು! ಆಕೆ ಅವರು ಮಾಡಿದ್ದು ಸರಿ ಎಂದು ತನ್ನ ನವನ್ನು ತಾನೇ ಅನುಭವಿಸಿರುವುದೇ ಹೆಚ್ಚು ವಾಸ್ತವ ಎನ್ನಿಸುತ್ತದೆ. ಅತ್ತ ಪಾಕಿಸ್ತಾನದ ಯುವತಿಯದೂ ಅದೇ ಕಥೆಯಲ್ಲವೆ? ಧನಪರಿಹಾರವೇನೋ ಸಿಕ್ಕಿತು. ಆದರೆ ಕಳೆದುಕೊಂಡ ಮೂಗು ಕವಿಗಳನ್ನು ಸರಿಪಡಿಸಲಾದೀತೆ? ಈ ದೇವರು (ಇದ್ದರೆ) ಎಷ್ಟು ಕಟುಕನಪ್ಪ? ಜನರಲ್ಲಿ ಇಂತಹ ನೀಚ ಪ್ರವೃತ್ತಿಯನ್ನು ಆತ ಪ್ರೇರೇಪಿಸುವುದಾದರೂ ಏಕೆ?
ಈ ಎರಡೂ ಘಟನೆ ಪರಸ್ಪರ ಹೋಲಿಕೆ ಮಾಡಿ ಸರಿ ಯಾವುದು ತಪ್ಪು ಯಾವುದು ಎಂದು ನಿರ‍್ಧಾರ ಮಾಡುವುದಕ್ಕಲ್ಲ. ಇತಿಹಾಸದಲ್ಲಿ ಎಂತೆಂತಹ ಘಟನೆಗಳು ನಡೆದು ಹೋಗಿವೆ, ಅಥವಾ ನಮ್ಮ ಸಾಹಿತ್ಯ ಪರಂಪರೆ ಏನನ್ನು ಪೋಷಿಸಿಕೊಂಡು ಬಂದಿದೆ ಎಂಬುದನ್ನು ಪರಿಭಾವಿಸಲು, ಅಷ್ಟೆ.

Tuesday, December 15, 2009

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.

ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಈ ರೀತಿಯ ಹಲವಾರು ವಿಷಯಗಳು ಬೆಳಕು ಕಂಡಿವೆ.

೧೬ನೇ ಶತಮಾನದ ಪೂರ್ವಾರ್ಧದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನ ಒಂದು ಕ್ಷಣದ ದುಡುಕಿನಿಂದ ಉಂಟಾದ ಪ್ರಮಾದ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ನೆಪೋಲಿಯನ್ ಮತ್ತು ಅಂದಿನ ಪಾಂಡಿಚೆರಿಯ ಗೌರ್ನರ್ ಆಗಿದ್ದ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಅವರಿಂದ ತೊಡೆದು ಹೋಗುತ್ತದೆ! ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲೂ ಆಗುತ್ತದೆ.

ಇದರ ಪೂರ್ಣ ಕಥೆ ಹೀಗಿದೆ.

ಕೃಷ್ಣದೇವರಾಯ ತನ್ನ ಅಮಾತ್ಯನಾದ ಅಪ್ಪಾಜಿ ಎಂಬುವವನೊಂದಿಗೆ ದೇಶ ಸಾಂಚಾರ ಕೈಗೊಳ್ಳುತ್ತಾನೆ. ರಾಯವೇಲೂರಿನಿಂದ ಹೊರಟು ಪಾಮಡಿಚೆರಿಯಲ್ಲಿರುವ ವಿಲ್ಲಿಯನಲ್ಲೂರು (ವಿಲ್ವನಲ್ಲೂರು) ಎಂಬಲ್ಲಿ ತನ್ನ ಪರಿವಾರದೊಂದಿಗೆ ಬಿಡಾರ ಹೂಡುತ್ತಾನೆ. ಒಳಗೆರೆ (ಉಳವರೈಕೆರೈ) ಎಂಬಲ್ಲಿ ಉಯ್ಯಗುಂಡ ವಿಶ್ವರಾಯ ಮೊದಲಿಯಾರ್ ಎಂಬುವವರ ಅಂಗಾಲಿನಲ್ಲಿ ಕೂದಲು ಬೆಳೆದಿದೆ ಎಂಬ ವಿಚಿತ್ರ ವಿಷಯ ಆತನ ಕಿವಿಗೆ ಬೀಳುತ್ತದೆ.


ಕೃಷ್ಣದೇವರಾಯ ಮಂತ್ರಿ ಅಪ್ಪಾಜಿಯೊಂದಿಗೆ ಹೋಗಿ ಅದನ್ನು ನೋಡಿ ಹೀಂದಿರುಗಿ ಬರುವಾಗ ಒಂದು ದೇವಸ್ಥಾನದಂತೆ ಶೋಭಿಸುತ್ತಿದ್ದ ಭವ್ಯವಾದ ಸೌಧವನ್ನು ನೋಡುತ್ತಾರೆ. ದೀಪ ಧೂಪ ಗಂಧದ ಪರಿಮಳವನ್ನು ಕಂಡು ಅದನ್ನು ದೇವಸ್ಥಾನವೆಂದೇ ಭ್ರಮಿಸಿ ಇಬ್ಬರೂ ಅದಕ್ಕೆ ಕೈಮುಗಿದು ನಮಸ್ಕರಿಸುತ್ತಾರೆ. ಆಗ ಜೊತೆಯಲ್ಲಿದ್ದವರು ‘ಅದು ದೇವಸ್ಥಾನವಲ್ಲ, ಆಯಿ ಎಂಬ ಗಣಿಕೆಯೊಬ್ಬಳ ಮನೆ’ ಎಂದು ತಿಳಿಸುತ್ತಾರೆ. ಇದರಿಂದ ಕೃಷ್ಣದೇವರಾಯನಿಗೆ ಅಸಾಧ್ಯವಾದ ಕೋಪ ಬಂದು ‘ಗಣಿಕೆಯೊಬ್ಬಳ ಮನೆ ಈ ರೀತಿ ಇರಬಹುದೆ?’ ಎಂದು ದುಡುಕಿ ‘ಅದನ್ನು ಕೆಡವಿ ಹಾಕಿ. ಅಲ್ಲಿ ಒಂದು ಕೊಳವನ್ನು, ಬಾವಿಯನ್ನು ನಿರ್ಮಿಸಿ’ ಎಂದು ಆಜ್ಞಾಪಿಸುತ್ತಾನೆ.

[ಅರಸರು ಪ್ರಜೆಗಳೊಂದಿಗೆ ನಡೆದುಕೊಳ್ಳುತ್ತಿದ್ದ ಕ್ರೂರ-ದರ್ಪದ ಪ್ರತೀಕದಂತೆ ಹೊರಟಿತು ಈ ಆಜ್ಞೆ! ಮಾಡದ ಅಪರಾಧಕ್ಕೆ ಆಯಿ ಗುರಿಯಾದಳು. - ಡಾ. ತಮಿಳು ಸೆಲ್ವಿ]


ಆಯಿಗೆ ದಿಕ್ಕು ತೋಚದಂತೆ ಆಯಿತು. ಸ್ವಭಾವತಃ ಒಳ್ಳೆಯವಳಾದ ಆಕೆ ನೇರವಾಗಿ ರಾಜನ ಬಳಿ ಹೋಗಿ ‘ತನ್ನ ಸಂಪತ್ತಿನಿಂದಲೇ ಕೊಳವನ್ನು, ಬಾವಿಯನ್ನು ತೋಡಿಸುತ್ತೇನೆ’ ಎಂದು ಬೇಡಿಕೊಂಡು ರಾಜನನ್ನು ಒಪ್ಪಿಸುತ್ತಾಳೆ. ನಂತರ ತನ್ನ ಮಾತಿನಂತೆ ಮುತ್ತುರೈಯರ್ ಪಾಳ್ಯ ಎಂಬಲ್ಲಿ ದೊಡ್ಡದಾದ ಕೊಳವನ್ನು, ಒಂದು ಬಾವಿಯನ್ನು ನಿರ್ಮಾಣ ಮಾಡಿಸುತ್ತಾಳೆ. ಆ ಕೊಳ ‘ಆಯಿಕೊಳ’ ಎಂದೇ ಪ್ರಖ್ಯಾತವಾಗುತ್ತದೆ.

ಮುಂದೊಂದು ದಿನ ಆಯಿ ಸತ್ತು ಹೋಗುತ್ತಾಳೆ. ಆದರೆ ಆಕೆ ನಿರ್ಮಾಣ ಮಾಡಿಸಿದ ಕೊಳ ಮತ್ತು ಬಾವಿ ಉಳಿದುಕೊಳ್ಳುತ್ತವೆ.

ಕಾಲಾನಂತರದಲ್ಲಿ ಪಾಂಡಿಚೆರಿ ಫ್ರೆಂಚರ ಆಡಳಿತಕ್ಕೆ ಸೇರಿಹೋಗುತ್ತದೆ. ಆಗ ನಗರ ನಿರ್ಮಾಣಕ್ಕೆ ಮುಂದಾರ ಪ್ರೆಂಚರಿಗೆ ಆಯಿಕೊಳ ಉಪಯೋಗಕ್ಕೆ ಬರುತ್ತದೆ. ಆಯಿಕೊಳದ ಕಥೆಯನ್ನು ಕೇಳಿದ ಗೌರ್ನರ್ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಮತ್ತು ಮೂರನೆಯ ನೆಪೋಲಿಯನ್ ಅವಳ ಹೆಸರಿನಲ್ಲೊಂದು ಸ್ಮಾರಕ ನಿರ್ಮಿಸಲು ತೀರ್ಮಾನಿಸಿ ಅದರ ನಿರ್ವಹಣೆಯನ್ನು ಲಮಾರಸ್ ಎಂಬುವವನಿಗೆ ವಹಿಸುತ್ತಾರೆ. ಆತ ಪಾಂಡಿಚೆರಿಯ ಕೋಟೆಯ ಭಾಗದಲ್ಲಿ ಅಂದರೆ ಕಡಲ ತಡಿಯ ಪೂರ್ವಭಾಗದಲ್ಲಿ (ಆಯಿಯ ಮನೆಯಿದ್ದ ಜಾಗ) ಅವಳ ನೆನಪಿನಾರ್ಥ ಜಲಮಾಳಿಗೆಯೊಂದನ್ನು ನಿರ್ಮಾಣ ಮಾಡುತ್ತಾನೆ. ಆಯಿಕೊಳದಿಂದ ನೀರನ್ನು ಕಾಲುವೆಯಲ್ಲಿ ಹರಿಸಿ, ಏತದ ಮೂಲಕ ಜಲಮಾಳಿಗೆಗೆ ಹರಿಸಲಾಗುತ್ತಿತ್ತು. ಪಾಂಡಿಚೆರಿ ನಗರಕ್ಕೆ ಪ್ರಮುಖ ನೀರು ಸರಬರಾಜು ವ್ಯವಸ್ಥೆ ಇದಾಗಿತ್ತು. ಆಯಿಯ (ಸ್ವತಃ ರಾಜನೇ ಕೈಯೆತ್ತಿ ಮುಗಿಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಕಲಾತ್ಮಕವಾಗಿ ತನ್ನ ಮನೆಯನ್ನು ಇಟ್ಟುಕೊಂಡಿದ್ದ) ಕಲಾ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚಿ ಜಲಮಾಳಿಗೆಯ ಬಳಿ ಗ್ರೀಕ್-ರೋಮನ್ ಶೈಲಿಯ ಒಂದು ಮಂಟಪವನ್ನೂ ನಿರ್ಮಿಸಿ, ಆಯಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಭಂಗಿಯಲ್ಲಿರುವ ಒಂದು ಶಿಲ್ಪವನ್ನೂ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲದೆ ತಮಿಳು ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಶಾಸನವನ್ನೂ ಕೆತ್ತಿಸಿ ಆಯಿಯ ವ್ಯಕ್ತಿತ್ವವನ್ನು ಉಲ್ಲೇಖಿಸಲಾಗುತ್ತದೆ. ಆ ಮಂಟಪ ಈಗ ‘ಆಯಿಮಂಟಪ’ಎಂದೇ ಖ್ಯಾತವಾಗಿದೆ. ಈಗ ಅಲ್ಲಿ ದೊಡ್ಡ ಉದ್ಯಾನವನ (ಭಾರತಿ ಉದ್ಯಾನವನ) ನಿರ್ಮಾಣವಾಗಿದೆ. ಆಯಿಮಂಟಪ ಈಗಲೂ ಭಾರತಿ ಉದ್ಯಾನವನದ ನಡುವೆ ವಿರಾಜಮಾನವಾಗಿದೆ.


ಕೊಸರು: ತನ್ನ ಮನೆಯನ್ನು ದೇವಸ್ಥಾನದಂತೆ ಶೋಭಾಯಮಾನವಾಗಿ ಇಟ್ಟುಕೊಂಡಿದ್ದ ಆಯಿಯ ಸೌಂದರ್ಯಪ್ರಜ್ಞೆಯನ್ನು ಕೃಷ್ಣದೇವರಾಯ ಗುರುತಿಸಬಹುದಾಗಿತ್ತು. ಆ ಹೆಣ್ಣಿಗೆ ಗೌರವ ತೋರಬಹುದಾಗಿತ್ತು. ಆದರೆ ಆತನ ಅಧಿಕಾರದ ಅಹಂ ಇದಕ್ಕೆ ಅವಕಾಶ ಕೊಡಲಿಲ್ಲ. ಹಿಂದೂ ಧರ್ಮ ಸಂರಕ್ಷಕರೆಂದು ಕರೆದುಕೊಂಡು, ಕಂಡ ಕಂಡ ದೇವಾಲಯಗಳಿಗೆಲ್ಲಾ ಕೊಳಗಗಟ್ಟಲೆ ಮುತ್ತು ರತ್ನ ಬಂಗಾರವನ್ನು ಅಳೆದುಕೊಟ್ಟ ವಿಜಯನಗರದ ಅರಸು ಕೃಷ್ಣದೇವರಾಯ ಒಂದು ಹೆಣ್ಣಿಗೆ ಗೌರವ ತೋರುವ ವಿಚಾರದಲ್ಲಿ ಕುರುಡಾಗಿಬಿಟ್ಟನಲ್ಲ! ಧರ್ಮವೆಂಬುದು ದೇವಾಲಯ ವ್ಯವಸ್ಥೆಯಲ್ಲಿ ಮಾತ್ರ ಇದೆಯೆ? ಮನುಷ್ಯ ಮನುಷ್ಯನನ್ನು, ರಾಜ ಪ್ರಜೆಯನ್ನು, ಗಂಡು ಹೆಣ್ಣನ್ನು ಗೌರವಿಸುವುದರಲ್ಲಿ ಇಲ್ಲವೆ? ಅಥವಾ ಇದನ್ನು ಕಾಲಧರ್ಮ ಎನ್ನಬೇಕೆ?

ಸ್ವತಃ ಸೈನ್ಯವನ್ನು ಮುನ್ನೆಡೆಸಿದಂತಹ ರಾಜ ಕೃಷ್ಣದೇವರಾಯನ ಬಗೆಗಿನ ಅಭಿಮಾನದ ಬಲೂನಿಗೆ ಸೂಜಿ ಚುಚ್ಚಿದಂತಹ ಅನುಭವ!
(ಚಿತ್ರಕೃಪೆ : ಅಂತರಜಾಲ)