Monday, November 30, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ ಪರಿಸರದಲ್ಲಿ ಹುಟ್ಟಿ ಬೆಳೆದು ಕವಿಚಕ್ರವರ್ತಿ ಎನಿಸಿಕೊಂಡವನು.
ಕನ್ನಡ ಕವಿಚಕ್ರವರ್ತಿಗಳು ಮೂವರು. ಪೊನ್ನ, ರನ್ನ ಮತ್ತು ಜನ್ನ.
ಕನ್ನಡ ರತ್ನತ್ರಯರು ಮೂವರು. ಪಂಪ, ಪೊನ್ನ ಮತ್ತು ರನ್ನ.
ಆದರೆ ನಿಜವಾಗಿಯೂ ಈ ಎರಡೂ ಪಟ್ಟಿಯಲ್ಲಿ ಇರಬೇಕಾದವರು, ಪಂಪ, ರನ್ನ ಮತ್ತು ಜನ್ನ! ಇದು ನನ್ನ ಅನಿಸಿಕೆ. ಇರಲಿ ಬಿಡಿ. ಇಲ್ಲಿ ನಾನು ಯಾವ ಕವಿಯ ಸ್ಥಾನನಿರ್ದೇಶನಕ್ಕೂ ನಿಂತಿಲ್ಲವಾದ್ದರಿಂದ ಮತ್ತೆ ಜನ್ನನೆಡೆಗೆ ಬರುತ್ತೇನೆ.
ಈಗ್ಗೆ ಮೂರ್ನಾಲ್ಕು ತಿಂಗಳ ಹಿಂದೆ, ಅಂದರೆ ಉದಯ ಇಟಗಿಯವರು ಲಿಬಿಯಾದಿಂದ ಭಾರತಕ್ಕೆ ಬಂದು, ಬ್ಲಾಗ್ ಮಿತ್ರರನ್ನು ಒಂದೆಡೆ ಸೇರಿಸಿ ಊಟ ಹಾಕಿಸಿದ್ದರು. ಆ ದಿನ ಪ್ರಕಾಶ ಹೆಗಡೆ ಮೊದಲಾದವರು, ಹಳಗನ್ನಡ ಕಾವ್ಯಗಳ ನನ್ನ ಆಸಕ್ತಿಯಬಗ್ಗೆ ಮಾತನಾಡುತ್ತಾ, (ಅಷ್ಟೊತ್ತಿಗಾಗಲೇ ರನ್ನ ಜೀವನ ಚರಿತ್ರೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿತ್ತು) ‘ಸಾರ್ ಜನ್ನನ ಬಗ್ಗೆ ಬರೆಯಿರಿ. ಆತನ ಬಗ್ಗೆ ಕೇಳಿದ್ದೇವೆ. ನೀವು ವಿವರವಾಗಿ ಬರೆಯಿರಿ’ ಎಂದು ಹೇಳಿದ್ದರು. ಹಲವಾರು ಕಾರ‍್ಯನಿಮಿತ್ತವಾಗಿ ಅದಕ್ಕಿಂತ ಹೆಚ್ಚಾಗಿ ನನ್ನ ಸೋಮಾರಿತನದಿಂದಾಗಿ ನಾನು ಆ ಕಡೆ ತಲೆ ಕೂಡಾ ಹಾಕಿ ಮಲಗಲಿಲ್ಲ!
ಮೊನ್ನೆ ಪದವಿ ತರಗತಿಯೊಂದಕ್ಕೆ, (ಕನ್ನಡ ಉಪನ್ಯಾಸಕರೊಬ್ಬರು ದೀರ್ಘಾವಧಿ ರಜೆ ಹೋಗಿದ್ದರಿಂದ) ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್’ ಎಂಬ ಜನ್ನನ ಯಶೋಧರ ಚರಿತ್ರೆಯ ಪದ್ಯಭಾಗವನ್ನು ಪಾಠ ಮಾಡುವ ಅವಕಾಶ ಸಿಕ್ಕಿತ್ತು. ಅಂದಿನಿಂದ ಜನ್ನ ಮತ್ತೆ ಮತ್ತೆ ಕಾಡುತ್ತಿದ್ದಾನೆ. ಆತನ ಬದುಕಿನ ವಿವರಗಳನ್ನು ಕುರಿತು ವಿವರಗಳನ್ನು ಸಂಗ್ರಹಿಸಲು, ಓದಲು ಪ್ರಾರಂಭಿಸಿದ್ದೇನೆ.

ವಿಶೇಷಕವಿಯಾಗಿ ಜನ್ನನನ್ನು ಅಧ್ಯಯನ ಮಾಡುವಾಗ ಆತನ ಅನಂತನಾಥಪುರಾಣ ಕಾವ್ಯದ ಭಾಗವಾದ ಚಂಡಶಾಸನ ವೃತ್ತಾಂತ ನನ್ನ ಮೇಲೆ ತೀವ್ರವಾದ ಪರಿಣಾಮ ಬೀರಿದ್ದಲ್ಲದೇ ಮುಂದೆ ಒಂದು ಸಣ್ಣ ಕಥೆಯಾಗಿ ನನ್ನಿಂದ ಬರೆಯಿಸಿಕೊಂಡಿತ್ತು. ಚಂಡಶಾಸನ ಕಥೆಗೂ, ರಾವಣ ಸೀತಾಪಹರಣ ಮಾಡಿದ ಕಥೆಗೂ ಅಲ್ಲಲ್ಲಿ ಹೋಲಿಕೆಯನ್ನು ವಿಮರ್ಶಕರು ಗುರುತಿಸುತ್ತಾರೆ. ಅಪಹರಣದ ಸಮಯದಲ್ಲಿ ಅಲ್ಲಿ ಜಟಾಯು ಅಡ್ಡ ಬರುತ್ತಾನೆ; ಇಲ್ಲಿ ಸಿಂಹಚೂಡ ಎಂಬ ಸಾಮಂತ ಅಡ್ಡ ಬರುತ್ತಾನೆ! ರಾವಣ ರಾಮನ ಮಾಯಾಶಿರಸ್ಸನ್ನು ತಂದು ತೋರಿದಾಗ ಸೀತೆ ಮೂರ್ಛೆ ಹೋಗುತ್ತಾಳೆ. ಆದರೆ ಇಲ್ಲಿ ಸುನಂದೆ ಸತ್ತೇ ಹೋಗುತ್ತಾಳೆ! ರಾವಣ ಯುದ್ಧ ಮುಂದುವರೆಸಿ ರಾಮನಿಂದ ಹತನಾದರೆ ಇಲ್ಲಿ ಚಂಡಶಾಸನ ಸುನಂದೆಯ ಜೊತೆಯಲ್ಲಿಯೇ ಚಿತೆಯೇರುತ್ತಾನೆ!

ಕಥೆ ಸೃಷ್ಟಿಯಾಗುವ ಕೆಲವು ದಿನಗಳ ಹಿಂದಷ್ಟೇ ಗುಜರಾತಿನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತು. ಪ್ರಕೃತಿ ಸೃಷ್ಟಿಸಬಹುದಾದ ವಿಕೋಪಗಳ ಜೊತೆಯಲ್ಲಿ ಮಾನವ ಸೃಷ್ಟಿಸುತ್ತಿದ್ದ ವಿಕೋಪಗಳೂ ಭಯಾನಕವೇ ಆಗಿದ್ದವು. ಪ್ರಾಕೃತಿಕ ವಿಕೋಪಗಳು ಸೃಷ್ಟಿಸಬಹುದಾದ ಭಯಂಕರ ಅನಾಹುತಗಳು, ಅದರ ಮುಂದೆ ಮಾನವನ ಅಲ್ಪತೆ, ಕ್ಷುದ್ರತೆಗಳು ನನ್ನ ಮನಸ್ಸನ್ನು ಆವರಿಸಿದ್ದ ಕಾಲ. ಆ ಹಿನ್ನೆಲೆಯಲ್ಲಿ ಚಂಡಶಾಸನ ವೃತ್ತಾಂತ ಕಥೆ ರಚನೆಯಾಗಿತ್ತು. ಕಥೆಗೆ ಒಂದು ರೀತಿಯ ನಾಟಕೀಯತೆ ಆವರಿಸಿಕೊಂಡು ಹೊಸತನದಿಂದ ಕೂಡಿತ್ತು. ಈ ಹಿಂದೆ ನನ್ನ ಒಂದೆರಡು ಸಣ್ಣಕಥೆಗಳು ಸಣ್ಣಪುಟ್ಟ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ (ಈಗ ಅವುಗಳ ಪ್ರತಿ ಸಹ ನನ್ನಲ್ಲಿಲ್ಲ!) ಕನ್ನಡ ಪ್ರಭದಲ್ಲಿ ಪ್ರಕಟವಾದ ಈ ಕಥೆ ನನಗೆ ‘ಕಥೆಗಾರ’ ಎಂಬ ಗುರುತಿನ ಚೀಟಿಯನ್ನು ನೀಡಿತ್ತು! (ಪ್ರಕಟವಾಗಿ ಮೂರು ತಿಂಗಳ ನಂತರ ನನಗೆ ಓದುಗರೊಬ್ಬರಿಂದ ಈ ವಿಷಯ ತಿಳಿಯಿತು!)

ಜನ್ನನ ಬದುಕು ಬರಹದ ಬಗ್ಗೆಯೇ ಲೇಖನ ಬರೆಯಲು ಸಿದ್ಧತೆ ನಡೆಸುತ್ತಿದ್ದಾಗ ಇದೆಲ್ಲಾ ನೆನಪಾಯಿತು. ಲೇಖನ ಸಿದ್ಧವಾಗಲು ಇನ್ನೂ ಕೆಲವಾರು ದಿನಗಳು ಬೇಕು ಅಷ್ಟರಲ್ಲಿ ನಿಮಗೆ ಈ ಚಂಡಶಾಶನವೃತ್ತಾಂತವನ್ನು ಒಮ್ಮೆ ಓದಿಸಬೇಕೆಂದು ಬ್ಲಾಗಿಗೆ ಎರಡು ಕಂತುಗಳಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸುತ್ತದೆ ಎಂಬುದು ನನಗೆ ಮುಖ್ಯ.
* * *

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ

ಭಾಗ - ೧

ಸಹೃದಯರೆ, ನಾನು ಕಾಲ. ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ. ಈಕೆ ಸೃಷ್ಟಿ. ನನ್ನ ಸಹೋದರಿ. ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ. ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ. ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ. ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾದರು ಹೇಳು’ ಎಂದು ದಂಬಾಲು ಬೀಳುತ್ತಾಳೆ. ತನ್ನ ಗರ್ಭದಲ್ಲಿಯೇ ಅಗಣಿತ ವ್ಯಾಪಾರಗಳನ್ನಿಟ್ಟುಕೊಂಡಿರುವ ಇವಳಿಗೆ, ತಾನೇ ಪ್ರಸವಿಸಿದ ಇತಿಹಾಸವನ್ನು ಇಣುಕುವ ಚಪಲ ನನ್ನ ಗರ್ಭದಲ್ಲಿಳಿದು. ನಾನೂ ಒಪ್ಪಿದ್ದೇನೆ. ನಿಮ್ಮನ್ನೂ ಕರೆದಿದ್ದೇನೆ. ಈಕೆಯೊಬ್ಬಳಿಗೆ ನಾನು ಕಥೆ ಹೇಳಿದರೆ ಆಗುವ ಶ್ರಮ ಮತ್ತು ಸಾರ್ಥಕತೆ ನಿಮಗೆ ಹೇಳುವುದರಿಂದ ಹೆಚ್ಚೇನು ಆಗುವುದಿಲ್ಲ. ಒಮ್ಮೊಮ್ಮೆ ಸಾರ್ಥಕತೆಯ ತೂಕ ಹೆಚ್ಚಾಗುತ್ತದೆಯಾದರೂ, ಇಂದು ಇತಿಹಾಸದಿಂದ ಪಾಠ ಕಲಿಯುವವರೆಷ್ಟು ಮಂದಿ ಇದ್ದಾರೆ ಹೇಳಿ. ಇತಿಹಾಸವೆಂಬುದು ರಂಜನೆಯ ವಸ್ತುವಾಗಿದೆ. ವರ್ತಮಾನದಲ್ಲಿ ನಿಂತು, ಭೂತವನ್ನು ಮರೆತು, ಭವಿಷ್ಯವನ್ನು ನೋಡುತ್ತಿರುವ ಈಕೆಯ ಗರ್ಭಸಂಜಾತರಿಗೆ!
ಸೃಷ್ಟಿ ಕೇಳು, ನೀನು ಈಗಿನ ನಿನ್ನ ಇರುವಿಕೆಯಿಂದ ‘ನಾನೆಷ್ಟು ಸುಂದರಿ’ ಎಂದು ಅಹಂಕಾರ ಪಡುತ್ತಿದ್ದೀಯ. ನಿನ್ನೊಳಗೇನಿದೆಯೆಂಬುದೇ ನಿನಗೆ ಗೊತ್ತಿಲ್ಲ. ಪ್ರಸವದ ನಂತರ ತಿರುಗಿ ನೋಡದ ನಿನಗೆ, ನೀನು ಪ್ರಸವಿಸಿ ನನ್ನ ತೆಕ್ಕೆಗೆ ಬಂದ ‘ವಸ್ತು’ ಏನೆಂಬುದು ತಿಳಿಯುವುದೇ ಇಲ್ಲ. ನೀನು ಪ್ರಸವಿಸಿದ್ದೆಲ್ಲವೂ ಒಳಿತಲ್ಲ, ಕೆಡಕೂ ಇದೆ; ಸುಂದರವಲ್ಲ, ಕುರೂಪವೂ ಇದೆ; ಸತ್ಯವಲ್ಲ, ಅಸತ್ಯವೂ ಇದೆ. ಇದು ಎಲ್ಲ ಕಾಲಕ್ಕೂ ಇದ್ದದ್ದೆ. ಆದರೆ ಈ ವರ್ತಮಾನದ ಮಕ್ಕಳು ಅವಘಡಗಳು ನಡೆದಾಗ, ‘ಕೆಟ್ಟಕಾಲ’ ‘ಕಲಿಗಾಲ’ ‘ಕಾಲದ ಮಹಿಮೆ’ ಮುಂತಾಗಿ ಉದ್ಗರಿಸುತ್ತಾರೆ. ಪಾಪ! ಇವರಿಗೆ ಗೊತ್ತಿಲ್ಲ. ಇವರಂದುಕೊಂಡಿರುವ ಈ ನಾಗರೀಕತೆಯ ಒಂದೊಂದು ಪೊರೆ ಕಳಚಿದಾಗಲೂ ಬದಲಾಗುತ್ತಿರುವುದು ಅದರ ಹೊರಮೈಯಷ್ಟೇ ಎಂದು. ಅದರ ಸುಪ್ತಮನಸ್ಸಿನಾಳದಲ್ಲಿರುವ ಈ ಒಳಿತು ಕೆಡಕುಗಳು ವಾಸನಾರೂಪದಲ್ಲಿ ಉಳಿದುಬಿಡುತ್ತವೆ ಎಂದು.
ಸೃಷ್ಟಿ, ಈಗ ಹೇಳುತ್ತೇನೆ ಕೇಳು. ಪುರಾಣವೋ, ಇತಿಹಾಸವೋ ಅದು ಒತ್ತಟ್ಟಿಗಿರಲಿ. ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ ಸಂಬಂಧಿಸಿದ್ದಲ್ಲ. ನನ್ನ ಪ್ರಕಾರ ಈ ಕ್ರಿಯೆಗೆ ಹಿಂದು, ಇಂದು ಮತ್ತು ಮುಂದು ಎಂಬ ವಿಶೇಷಣಗಳೇ ಬೇಡ.
ಬಾ ಸೃಷ್ಟಿ, ಇತ್ತ ಬಾ. ನನ್ನೊಳಗೆ ಇಣುಕಿ ನೋಡು. ಅದೋ ಅಲ್ಲಿ ನೋಡು. ಕಾಣಿಸುತ್ತದೆಯೆ ಇದು ಯುದ್ಧಭೂಮಿ. ಬೆಳಗಿನಿಂದ ಸಂಜೆಯವರೆಗೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರು ನಿದ್ರಾಮಾತೆಯ ಮಡಿಲಲ್ಲಿದ್ದಾರೆ. ಗಾಯಗೊಂಡ ಯೋಧರಿಗೆ ಉಪಚಾರವೂ ನಡೆದಿದೆ. ಸಾಕಷ್ಟು ಬೆವೆರಿಳಿಸಿದ ಆನೆ ಕುದುರೆಗಳು ವಿಶ್ರಾಂತಿಯನ್ನುಣ್ಣುತ್ತಿವೆ. ಇದೆಲ್ಲಾ ಆ ಸೂರ್ಯದೇವನ ಕೃಪೆ ನೋಡು. ಹೆಣ್ಣು, ಹೊನ್ನು ಮತ್ತು ಮಣ್ಣು ಇಂತದ್ದಕ್ಕೆಲ್ಲಾ ಲಜ್ಜಾಹೀನರಾಗುವ ರಾಜರು, ಕಾನೂನು ಕಟ್ಟಳೆಗಳನ್ನು ಮುರಿದರೂ, ಸೂರ್ಯ ಮುಳುಗಿದ ಮೇಲೆ ಯುದ್ಧ ನಿಲ್ಲಿಸಿಬಿಡುತ್ತಾರೆ. ಇದು ಯುದ್ಧದ ಕಟ್ಟಳೆಗಳ ಬಗ್ಗೆ ಅವರಿಗಿರುವ ನಿಷ್ಟೆಗಿಂತ, ನಾಳೆ ಮತ್ತೆ ಕಚ್ಚಾಡಲು ಶಕ್ತಿ ಸಂಚಯಮಾಡಲಿಕ್ಕೆ ಮಾಡಿಕೊಂಡಿರುವ ಸಂಚು. ಅದನ್ನೇ ಅವರು ಕಾನೂನು, ಕಟ್ಟಳೆ, ಯುದ್ಧವಿಧಿವಿಧಾನಗಳೆಂದು ಹೇಳುತ್ತಾರೆ. ಆದರೆ ಅದನ್ನೂ ಮುರಿದ ‘ವೀರ ಯೋಧ’ರು ನನ್ನ ತೆಕ್ಕೆಯಲ್ಲಿದ್ದಾರೆ. ಅದಿರಲಿ, ಇಲ್ಲಿ ಕೇಳು. ಅಲ್ಲಿ ಪಂಜುಗಳುರಿಯುತ್ತಿರುವ ಬಿಡಾರವನ್ನು ನೋಡು. ರಾತ್ರಿಕಾವಲೂ ಇದೆ. ಬಿಡಾರದೊಳಗೆ ಅತ್ತಿಂದಿತ್ತ ತಿರುಗುತ್ತಿರುವವನು ವಸುಷೇಣ. ಸುರಮ್ಯ ದೇಶದ ಅರಸು. ಈಗ ಈತನ ಯುದ್ಧ ಈ ಮಕರಗ್ರಾಹಪುರದ ಅರಸು ಚಂಡಶಾಸನ ಮೇಲೆ. ಕಾರಣ! ನಾನು ಹೇಳುವುದಕ್ಕಿಂತ ನೀನೆ ತಿಳಿಯುವುದು ಉತ್ತಮ. ಹೋಗು, ಸ್ವಲ್ಪ ಹೊತ್ತು ಈತನ ಮಾನಸಸರೋವರದಲ್ಲಿ ವಿಹರಿಸಿ ಬಾ. ನಾನಿಲ್ಲಿಯೇ ಕಾಯುತ್ತಿರುತ್ತೇನೆ.
* * *

ನಾನು ಯಾರು? ನಾನು ಯಾರು? ಭರತವರ್ಷದ ಸುರಮ್ಯ ದೆಶದ ಅರಸು. ಪೌದನಪುರವರಾಧೀಶ್ವರ ವಸುಷೇಣ. ನನ್ನಂತವನ ವಿಷಯದಲ್ಲೂ ಹೀಗಾಗಬೇಕೆ? ಲತೆಯೆಂದು ಅಪ್ಪಿದ್ದು ಹಾವಾಗಿ ಕಚ್ಚಬೇಕೆ? ಅ ಹಾವು ಕಚ್ಚಿ ಮೈಯೆಲ್ಲಾ ವಿಷವೇರುತ್ತಿದೆ. ಅದು ನನ್ನ ಮೈಯನ್ನು ಪೂರ್ಣ ಆವರಿಸುವ ಮುನ್ನ ಆ ಜಂತುವನ್ನು ಹಿಡಿದು ಈ ವಿಷವನ್ನು ಇಳಿಸಬೇಕು. ಇಲ್ಲ, ಅದನ್ನು ಕೊಲ್ಲಬೇಕು. ಛೇ! ಈ ಸೂರ್ಯ ಇನ್ನೊಂದೆರಡು ಗಳಿಗೆ ತಡವಾಗಿ ಅಸ್ತಮಿಸಬಾರದೆ. ಇಂದೇ ಆ ಕ್ಷುದ್ರಜಂತುವನ್ನು ಇಲ್ಲವಾಗಿಸಿಬಿಡುತ್ತಿದ್ದೆ.
ಏನೆಲ್ಲಾ ಆಯಿತು ಈ ಐದು ದಿನಗಳಲ್ಲಿ. ಒಂದೇ ಗುರುವಿನ ಶಿಷ್ಯರಿಬ್ಬರಲ್ಲಿ ನಾಳೆ ಒಬ್ಬ ಸಾಯಬೇಕು, ಇನ್ನೊಬ್ಬನಿಂದ. ಇದು ನನ್ನ ಕನಸು ಮನಸುಗಳಲ್ಲೂ ಸುಳಿದಿರದ ಕಲ್ಪನೆ. ಆದರಿಂದು ವಾಸ್ತವವಾಗಿ ಬಂದು ನನ್ನೆದುರೇ ನಿಂತು ನನ್ನನ್ನೇ ಅಣಕಿಸುತ್ತಿದೆ.
ಓ ಚಂಡಶಾಸನ, ನನ್ನ ಪ್ರಿಯಮಿತ್ರ ಚಂಡಶಾಸನ. ನೀನೇಕೆ ಹೀಗೆ ಮಾಡಿದೆ? ಒಂದು ವಾರದ ಕೆಳಗೆ ನಿನ್ನಾಳೊಬ್ಬ ಬಂದು, ‘ಮಕರಗ್ರಾಹಪುರವರಾಧೀಶ್ವರ ಚಂಡಶಾಸನದೇವರು ನಿಮ್ಮನ್ನು ಕಾಣಲು ನಾಳೆ ಬರುವವರಿದ್ದಾರೆ’ ಎಂದಾಗ ನಾನೆಷ್ಟು ಸಂತೋಷಪಟ್ಟಿದ್ದೆ. ಆ ಖುಷಿಯಲ್ಲಿ ನನ್ನ ಕೊರಳಲಿದ್ದ ಆಭರಣವನ್ನೇ ಉಡುಗೊರಯಾಗಿ ಕೊಟ್ಟಿದ್ದೆ. ನನ್ನೆಲ್ಲಾ ಅರಮನೆಯ, ಅಂತಃಪುರದ ಜನಕ್ಕೆಲ್ಲಾ ನಿನ್ನ ಸ್ವಾಗತಕ್ಕೆ ಸಿದ್ದರಾಗುವಂತೆ ಆಜ್ಞೆ ಮಾಡಿದ್ದೆ. ಇಡೀ ಪೌದನಪುರವನ್ನೇ ನಿನ್ನ ಸ್ವಾಗತಕ್ಕೆ ಸಿದ್ಧಪಡಿಸಲು ನನ್ನಂತರಂಗದ ಜನಕ್ಕೆ ತಿಳಿಸಿದ್ದೆ. ಏಕೆ ಹೇಳು? ಆರು ವರ್ಷಗಳ ನಂತರ, ಜೊತೆಯಲ್ಲೇ ದೂಳಾಟವಾಡಿದ್ದ ಬಾಲ್ಯ ಸ್ನೇಹಿತರಿಬ್ಬರು, ಒಂದೇ ಗುರುವಿನ ಶಿಷ್ಯರಿಬ್ಬರು, ನೆರೆಹೊರೆ ರಾಜ್ಯಗಳ ರಾಜರಿಬ್ಬರು ಆರು ವರ್ಷಗಳ ನಂತರ ಮತ್ತೆ ಬೇಟಿಯಾಗುತ್ತಿದ್ದೆವು. ಚಂಡಶಾಸನ ನಿನಗೆ ನೆನಪಿದೆಯೋ, ಇಲ್ಲವೊ? ನಾವಂದು ಗುರುಕುಲದಿಂದ ಹೊರಟು ನಿಂತಾಗ, ಪ್ರತಿವರ್ಷಕ್ಕೊಮ್ಮೆ ನಾವಿಬ್ಬರು ಸೇರಿ ವಾರವಿಡೀ ಕ್ರೀಡಾವಿಲಾಸಗಳಲ್ಲಿ, ಜಲಕೇಳಿಗಳಲ್ಲಿ, ಮೃಗಕಥಾವಿನೋದಗಳಲ್ಲಿ ವಿಹರಿಸಬೇಕೆಂದು ಮಾತನಾಡಿಕೊಂಡಿದ್ದೆವು. ಅಲ್ಲಿಂದ ಬಂದು ತಿಂಗಳೆರಡರಲ್ಲಿ ನನ್ನ ಪಟ್ಟಾಭಿಷೇಕ. ನಂತರ ಮದುವೆ. ನೀನು ಮದುವೆಗೆ ಬರಲೊಪ್ಪಿದ್ದೆ. ಆದರೆ ನಿನ್ನ ದೇಶದ ದಕ್ಷಿಣದಲ್ಲಿ ಎದ್ದ ದಂಗೆಯಿಂದಾಗಿ ನೀನು ಬರುವುದಿಲ್ಲವೆಂದು ತಿಳಿದಾಗ ನಾನೆಷ್ಟು ಅವಲತ್ತುಕೊಂಡಿದ್ದೆ. ನಿಜ, ಮೊದಲು ಕರ್ತವ್ಯ. ನೀನೂ ಒಂದು ದೇಶದ ಅರಸು. ಎಲ್ಲಾ ಸರಿಯಾಗಿ ಒಂದು ಸ್ಥಿತಿ ತಲುಪಿದಾಗ ಬರುವುದಾಗಿ ನೀನು ತಿಳಿಸಿದ್ದೆ. ಅದಕ್ಕಾಗಿ ನಾನು ಆರು ವರ್ಷಗಳೇ ಕಾಯಬೇಕಾಯಿತು, ಮಿತ್ರ ಆರು ವರ್ಷಗಳು.
ಬಂದೆ. ನೀನು ಮಹೋತ್ಸವದಿಂದ ಪುರಪ್ರವೇಶ ಮಾಡಿದ್ದೆ ನಿನ್ನ ನರ್ಮಸಚಿವ ಸುದರ್ಶನನೊಂದಿಗೆ. ನಾವಿಬ್ಬರು ಆಲಂಗಿಸಿದೆವು. ಅಭಿನಂದಿಸಿದೆವು. ಆನಂದಿಸಿದೆವು. ಎರಡು ಘನಗಜಗಳನ್ನೇರಿ ಮೆರವಣಿಗೆಯಲ್ಲಿ ಅರಮನೆಗೆ ಬಂದೆವು. ಎಲ್ಲವೂ ನಾನಂದುಕೊಂಡಂತೆಯೇ ಆಯಿತು. ಸ್ವತಃ ದೇವಿ ಸುನಂದೆಯೇ ಆರತಿಯೆತ್ತಿ ನಮ್ಮನ್ನು ಸ್ವಾಗತಿಸಿದಳು.
ಮೊದಲೆರಡು ದಿನಗಳು ನಡೆದ ಸಹಪಂಕ್ತಿ ಬೋಜನ, ಸಹವಿಳಾಸಕ್ರೀಡೆಗಳನ್ನು ನಾನು ಹೇಗೆ ಮರೆಯಲಿ. ನಂತರ ನೀನ್ನಲ್ಲಿ ಸ್ವಲ್ಪ ಅನ್ಯಮನಸ್ಕತೆಯನ್ನು ಕಂಡೆ. ತನ್ನ ನಾಡಿನಿಂದ ದೂರವಿರುವುದಕ್ಕೆ ಇರಬೇಕೆಂದುಕೊಂಡೆ. ಆದರೆ ನಾಳೆಗೆ ನಡೆಸಲು ಯೋಜಿಸಿದ್ದ ಮೃಗಬೇಟೆಯ ವಿನೋದದ ಸುಖದ ಕಲ್ಪನೆಯಲ್ಲಿ ನಾನಿದ್ದೆ. ಇದು ನಿನಗೆ ಖುಷಿಕೊಡುತ್ತದೆಯೆಂದು ಭಾವಿಸಿ ಸುಮ್ಮನಾದೆ. ಕಾಡಿನಲ್ಲಿ ಮೃಗವೊಂದನ್ನು ಬೆನ್ನಟ್ಟಿ ನಾವಿಬ್ಬರೂ ದೂರವಾಗಿದ್ದೆವು. ನನಗೆ ಬೇಟೆ ಸಿಗಲಿಲ್ಲ. ಆದರೆ, ಆದರೆ,,,.. ..
* * *

ನೋಡಿದೆಯಾ ಸಹೋದರಿ, ಈ ಮನುಷ್ಯನಂತರಂಗವನ್ನು. ಕ್ರೋಧದ ಕೆಸರಿನಿಂದ ತನ್ನಮನದ ನೈರ್ಮಲ್ಯವನ್ನು ಕಳೆದುಕೊಂಡುಬಿಟ್ಟಿದ್ದಾನೆ. ಈಗ ನೀನು ಇನ್ನೊಬ್ಬನನ್ನು ನೋಡಬೇಕು. ಒಬ್ಬನಲ್ಲ ಇಬ್ಬರು. ಚಂಡಶಾಸನ ಮತ್ತು ಸುನಂದೆಯನ್ನು, ಅರಮನೆಯಲ್ಲಿ. ನೋಡಲ್ಲಿ, ಆತ ಚಂಡಶಾಸನ. ಅವನು ಸುನಂದೆಯನ್ನು ಅನುನಯಿಸುತ್ತಿದ್ದಾನೆ, ಕಾಡುತ್ತಿದ್ದಾನೆ. ಇಲ್ಲ ಆತ ಅವಳನ್ನು ಬೇಡುತ್ತಿದ್ದಾನೆ. ಹೋ, ಹೊರಟುಬಿಟ್ಟ. ನಮ್ಮ ಬರುವು ಒಂದು ಕ್ಷಣ ತಡವಾಯಿತೆ? ಇರಲಿ, ಸೃಷ್ಟಿ ಈಗ ನೀನು ಈತನ ಮನೋಮಂದಿರವನ್ನು ಹೊಕ್ಕು ಅಲ್ಲಿನ ವ್ಯಾಪಾರವನ್ನು ಗ್ರಹಿಸು. ಆತ ನಿದ್ರೆಯನ್ನಂತೂ ಮಾಡಲಾರ. ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ. ಹೋಗಿ ಬಾ, ನಾನಿಲ್ಲಿಯೇ ಚಲಿಸುತ್ತಿರುತ್ತೇನೆ.
ಮುಂದುವರೆಯುತ್ತದೆ........

8 comments:

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಜನ್ನನ ಚಂಡಶಾಶನವೃತ್ತಾಂತವನ್ನು ಓದಿರದಿದ್ದ ನನಗೆ ನಿಮ್ಮಿಂದಾಗಿ ಓದುವಂತಾಗಿದ್ದು ತುಂಬಾ ಸಂತಸ ತಂದಿದೆ.
ನಿಮ್ಮಿಂದಾಗಿ ಕನ್ನಡದ ಹಳೆಯ ಉತ್ತಮೊತ್ತಮ ಕೃತಿಗಳನ್ನು ಓದುವ ಭಾಗ್ಯ ನಮ್ಮೆಲ್ಲರದು. ಧನ್ಯವಾದಗಳು.

ಬಿಸಿಲ ಹನಿ said...

ಸತ್ಯನಾರಾಯಣವರೆ,
ನಿಮ್ಮ ಚಂಡಶಾಶನವೃತ್ತಾಂತದ ಕಥೆ ಚನ್ನಾಗಿ ಮೂಡಿಬಂದಿದೆ. ಕಾಲ ಮತ್ತು ಸೃಷ್ಟಿಯ ವಿವರಣೆ ಅದ್ಬುತವಾಗಿದೆ. "ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ." ಎನ್ನುವ ಸಾಲು ಅನುಭವದ ಆಳದಿಂದ ಎದ್ದು ಬಂದಂತಿದೆ. ಇಷ್ಟವಾಯಿತು. ಹೀಗೆ ನಿಮ್ಮಿಂದ ಯಶೋಧರ ಚರಿತೆಯ ಬಗ್ಗೆ ಲೇಖನ ಮೂಡಿಬರಲಿ.

ಜಲನಯನ said...

ಡಾ. ಬಿ.ಆರ್. ಚಂಡಶಾಸನನ ಕಥೆಯ ಬಗ್ಗೆ ಕೇಳಿದ್ದೆ...ಆದ್ರೆ ಓದಲಾಗಲಿಲ್ಲ...ನಿಮ್ಮ ಲೇಖನವನ್ನು ಹಿಂಬಾಲಿಸುತ್ತೇನೆ....

Unknown said...

ಡಾ.ವಿವೇಕ್ ರೈ ಅವರು ಈ-ಮೇಲ್ ಮೂಲಕ ನೀಡಿದ ಸಂದೇಶ:-
ಡಾ.ಸತ್ಯನಾರಾಯಣ ಅವರಿಗೆ ನಮಸ್ಕಾರ.
ಜನ್ನನ ಬಗ್ಗೆ ಬ್ಲಾಗಿನಲ್ಲಿ ನಿಮ್ಮ ಬರಹ ತುಂಬಾ ಚೆನ್ನಾಗಿದೆ.ಜನ್ನನನ್ನು ಬಹಳ ವರ್ಷಗಳ ಹಿಂದೆ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ನೆನಪುಗಳು ನೆನಪಾದುವು.ಜನ್ನ ಮತ್ತೆ ಮತ್ತೆ ಓದಿಸುವ ಕವಿ. ಕನ್ನಡ ಸಾಹಿತ್ಯವನ್ನು ಬ್ಲಾಗಿನಲ್ಲಿ ಜನಪ್ರಿಯಗೊಳಿಸುವ ನಿಮ್ಮ ಪ್ರಯತ್ನ ತುಂಬಾ ಮಹತ್ವದ್ದು.ಅಭಿನಂದನೆಗಳು.
ವಿಶ್ವಾಸದಿಂದ
ವಿವೇಕ ರೈ

PARAANJAPE K.N. said...

ನಿಮ್ಮ ಚಂಡ ಶಾಸನ ವೃತ್ತಾ೦ತ ಓದಿದೆ, ಚೆನ್ನಾಗಿದೆ. ಯಶೋಧರ ಚರಿತೆಯ ಮೇಲೆ ಇನ್ನಷ್ಟು ಬೆಳಕು ಚೆಲ್ಲಿ, ಜನ್ನನ ಬಗ್ಗೆ ನಮಗೆ ಇನ್ನಷ್ಟು ಮಾಹಿತಿ ಕೊಡಿ ಗುರುಗಳೇ

Mahanthesh said...

ವರ್ತಮಾನ ಇತಿಹಾಸವಾಗುವುದು. ಇತಿಹಾಸ ವರ್ತಮಾನಕ್ಕೆ ಅನ್ವಯಿಸುವುದು ಎಲ್ಲಾ ಕಾಲನ ಲೀಲೆ. ತಮ್ಮ ಬರವಣಿಗೆ ಎಲ್ಲರನ್ನೂ ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಮುಂದುವರೆಸಿ, ಮುಂದಿನ ಕಂತೆಗೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತೇವೆ.

AntharangadaMaathugalu said...

ಡಾ ಸತ್ಯ ಸಾರ್..

ಜನ್ನನ ಚಂಡಶಾಸನ ವೃತ್ತಾಂತ ತುಂಬಾ ಚೆನ್ನಾಗಿ ಆರಂಭವಾಗಿದೆ.... ಬೇಗ ಮುಂದಿನ ಕಂತು ಹಾಕಿ.

ಶ್ಯಾಮಲ

ಸೀತಾರಾಮ. ಕೆ. / SITARAM.K said...

ಅದ್ಭುತ ಬರವಣಿಗೆ ಶೈಲಿ ತಮ್ಮದು ಶ್ರೀಯುತ ಸತ್ಯನಾರಾಯಣರವರೇ. ಭಾಷೆಯಲ್ಲಿನ ತಮ್ಮ ಹಿಡಿತ, ನಿರೂಪಣಾ ಸಾಮರ್ಥ್ಯ ಅನೀರ್ವಚನೀಯ ಅನುಭೂತಿ ನೀಡಿದೆ. ಜನ್ನನ ಚ೦ಡಶಾಸನದ ಪರಿಚಯಕ್ಕೆ ಧನ್ಯವಾದಗಳು. ಮು೦ದಿನ ಕ೦ತಿಗೆ ಕುತೂಹಲದಿ೦ ಕಾಯುತ್ತಿರುವೆ......