Monday, March 17, 2014

ಜನಪದ ರಾಮಾಯಣದ ಕೆಲವು ಕಥೆಗಳು

ಹಳ್ಳಿಯ ಕಡೆ, ಜನರು ತುಂಬಾ ಸುಸ್ತಾಗಿ ನಿಟ್ಟುಸಿರು ಬಿಡುವಾಗ, ತಮ್ಮ ಕೈಮೀರಿ ಹೋದ ಸಂಕಟದ ಸಂದರ್ಭಗಳನ್ನು ನೆನೆಪಿಸಿಕೋಳ್ಳುವಾಗ, ಯಾವುದಾದರು ಒಂದು ಬಂಧನದಿಂದ ಕಳಚಿಕೊಳ್ಳುವಾಗ “ಓ ಲಕ್ಷ್ಮಣಾ” ಎಂದು ಉದ್ಘಾರ ತೆಗೆಯುತ್ತಾರೆ. ಈ ಉದ್ಘಾರ ಮೊದಲು ಬಂದಿದ್ದು ಮರೀಚನ ಬಾಯಿಯಿಂದ; ರಾಮನ ಧ್ವನಿಯ ರೂಪದಲ್ಲಿ! ಮಾರೀಚನ ಶರೀರ, ರಾಮನ ಶಾರೀರ ಇವೆರಡರ ಸಂಯೋಗದಿಂದ ಹುಟ್ಟಿದ ಈ ಉದ್ಘಾರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಿದೆ. “ಓ ಲಕ್ಷ್ಮಣಾ ಒಲೆಗೆ ಸೌದೆಯಿಲ್ಲ” ಎಂಬ ಉದ್ಘಾರವೂ ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿನ ಜನರ ಉದ್ಘಾರವಾಗಿ ಹೊರಹೊಮ್ಮುವುದನ್ನು ಕಾಣಬಹುದು.
ಕೇಳಬಾರದ್ದನ್ನು ಕೇಳಿದಾಗ, ಅನಪೇಕ್ಷಿತವಾದುದನ್ನು ಕಂಡಾಗ, ಕೇಳಿದಾಗ ಜನರು “ರಾಮ ರಾಮ” ಎಂದು ಎರಡೂ ಕೈಗಳಿಂದ ಕಿವಿ ಮುಚ್ಚಿಕೊಳ್ಳುತ್ತಾರೆ. ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತವೆ. ಈ “ರಾಮ ರಾಮ” ಎಂಬ ಉದ್ಘಾರವನ್ನು ಮೊದಲ ಭಾರಿಗೆ ಉದ್ಘರಿಸಿದವರು ಯಾರು? ಜನಪದ ರಾಮಾಯಣದಲ್ಲಿ ಈ ಪ್ರಶ್ನೆಗೆ ಒಂದು ಕಥಯೇ ಉತ್ತರರೂಪದಲ್ಲಿದೆ. ರಾಮ-ಲಕ್ಷ್ಮಣರು ಕಪಿಸೈನ್ಯದ ನೆರವಿನೊಂದಿಗೆ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಪ್ರವೇಶ ಪಡೆಯುತ್ತಾರೆ. ಅಂದು ಸಂಜೆ ರಾಮ ಏಕಾಂತದಲ್ಲಿದ್ದಾಗ ಒಂದು ವಿಚಾರ ಹೊಳೆಯುತ್ತದೆ. ರಾವಣನನ್ನು ಕೊಂದು ಸೀತೆಯನ್ನು ಕಾಪಾಡುವದಕ್ಕೋಸ್ಕರ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಬಂದಿದ್ದೇವೆ. ಸೀತೆಯೇನೊ ನಮ್ಮ ನಿರೀಕ್ಷೆಯಲ್ಲೇ ಇದ್ದಾಳೆ ಎಂದು ಆಂಜನೇಯ ಹೇಳಿದ್ದಾನೆ. ಆಳು ಮಾಡಿದ್ದು ಹಾಳು! ಜೊತೆಗೆ ಕೋತಿ ಬೇರೆ!! ಅವನ ಮಾತನ್ನಷ್ಟೇ ನಂಬಿ, ನಾನು ಲಂಕೆಯ ಮೇಲೆ ಯುದ್ಧ ಸಾರಿದ್ದೇನೆ. ರಾವಣನನ್ನೇನೊ ಕೊಲ್ಲಬಹುದು. ಆದರೆ… ಒಂದು ಪಕ್ಷ ಸೀತೆಯೇನಾದರೂ ರಾವಣನಿಗೆ ಮನಸೋತಿದ್ದರೆ ನನ್ನ ಹೋರಾಟವೇ ನಿರರ್ಥಕವಾಗುತ್ತದೆಯಲ್ಲವೆ? ಆದ್ದರಿಂದ ಮೊದಲು ಸೀತೆಯ ಮನಸ್ಸಿನಲ್ಲೇನಿದೆ ಎಂದು ತಿಳಿದುಕೊಳ್ಳಬೇಕು. ಎಂದು ಆಲೋಚಿಸಿದ ರಾಮ ಜೋಗಿಯ ವೇಷ ಧರಿಸಿ, ಸೀತೆಯನ್ನಿಟ್ಟಿದ್ದ ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಆತನ ಕಿಂದರಿಯ ನಾದಕ್ಕೆ, ಸೀತೆಯ ಕಾವಲಿಗಿದ್ದವರೆಲ್ಲಾ ಮಾಯದ ನಿದ್ದೆಗೆ ಹೋಗುತ್ತಾರೆ.
ಕಿಂದರಿಯ ನಾದದೊಂದಿಗೆ ರಾಮನಾಮವನ್ನು ಸೇರಿಸಿ ಹಾಡುತ್ತಿದ್ದುದರಿಂದ ಸೀತೆಗೆ ಸಂತೋಷವಾಗುತ್ತದೆ. ಜೋಗಿರಾಮನು, ರಾಮನನ್ನು ಹೊಗಳಿ ಹೊಗಳಿ ಹಾಡುತ್ತಾನೆ. ಸೀತೆ ಸಂತೋಷದಿಂದ ಕೇಳುತ್ತಾಳೆ. ಕೊನೆಯಲ್ಲಿ ಜೋಗಿರಾಮ, “ನೋಡಮ್ಮ. ರಾಮ ಎಷ್ಟೇ ಒಳ್ಳೆಯವನಿರಬಹುದು. ಆದರೆ ಕಡಲನ್ನು ದಾಟಿ ಬಂದು, ರಾಕ್ಷಸರನ್ನೆಲ್ಲಾ ಕೊಂದು, ನಿನ್ನನ್ನು ಬಿಡಿಸಿಕೊಂಡು ಹೋಗುತ್ತಾನೆ ಎನ್ನುವುದು ದೂರದ ಮಾತು. ಬಿಡಿಸಿಕೊಂಡು ಹೋದರೂ ಇಷ್ಟು ದಿನ ದೂರವಿದ್ದ ನಿನ್ನ ಮೇಲೆ ಆತನಿಗೆ ಪ್ರೀತಿ ಉಳಿದಿರುತ್ತದೊ? ಇಲ್ಲವೊ? ಆದ್ದರಿಂದ ಸುಮ್ಮನೆ ನೀನು ಅವನನ್ನು ಮರೆತು ನನ್ನನ್ನೇ ಏಕೆ ಮದುವೆಯಾಗಬಾರದು?” ಎನ್ನುತ್ತಾನೆ. ತಕ್ಷಣ ಸೀತೆ ತನ್ನೆರಡು ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು, “ರಾಮ ರಾಮ” ಎಂದು ಉದ್ಘರಿಸುತ್ತಾಳೆ. ಜೋಗಿಯನ್ನು ನೋಡಲಾರದೆ ಮುಚ್ಚಿಕೊಂಡಿದ್ದ ಕಣ್ಣುಗಳು ತೆರೆಯುವಷ್ಟರಲ್ಲಿ ಜೋಗಿರಾಮ ಅಲ್ಲಿಂದ ಮರೆಯಾಗಿಬಿಟ್ಟಿರುತ್ತಾನೆ. ಮಾರುವೇಷದಲ್ಲಿದ್ದ ರಾಮನ ಎದುರಿಗೇ ಸ್ವತಃ ಸೀತೆಯ ಬಾಯಿಂದ ಹೊರ ಬಿದ್ದ ಈ ಉದ್ಘಾರ ಇಂದಿಗೂ ಜನಸಾಮಾನ್ಯರು ಕೇಳಬಾರದ್ದನ್ನು ಕೇಳಿದಾಗ ಬಳಸುತ್ತಾರೆ ಎಂಬುದು ಜನಪದರ ನಂಬಿಕೆ.
‘ಇಂದ್ರಜಿತುವು ಶತ್ರು ಸಂಹಾರಾರ್ಥ, ಶಕ್ತಿಯ ಸಿಧ್ಧಿಗಾಗಿ ನಡೆಸುತ್ತಿದ್ದ ನಿಕುಂಬಿಲಾ ಯಾಗವನ್ನು ಪೂರೈಸದಂತೆ ತಡೆದರೆ ಮಾತ್ರ ನಮಗೆ ಗೆಲುವು ಇಲ್ಲದಿದ್ದರೆ ಇಲ್ಲ’ ಎಂಬ ವಿಭೀಷಣನ ಸಲಹೆಯನ್ನು ಸ್ವೀಕರಿಸಿ ಲಕ್ಷ್ಮಣ, ಆಂಜನೇಯ-ಅಂಗದರ ಸಹಾಯದಿಂದ ಆ ಯಾಗಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆ ಯಾಗವನ್ನು ಅರ್ಧಕ್ಕೆ ತಡೆದುದರಿಂದಲೇ ಇಂದ್ರಜಿತುವನ್ನು ಲಕ್ಷ್ಮಣ ಕೊಲ್ಲುವಲ್ಲಿ ಯಶಸ್ವಿಯೂ ಆಗುತ್ತಾನೆ. ಇದು ಶಿಷ್ಟರಾಮಾಯಣಗಳ ಕಥೆ. ಆದರೆ ಜನಪದ ರಾಮಾಯಣದ ಕಥೆ ಇದೇ ಘಟನೆಯನ್ನು ಬೇರೊಂದು ರೂಪದಲ್ಲಿ ಅಭಿವ್ಯಕ್ತಿಗೊಳಿಸಿವೆ.
ಇಂದ್ರಜಿತುವಿನೊಂದಿಗಿನ ಯುದ್ಧದಲ್ಲಿ ರಾಮನ ಸೈನ್ಯಕ್ಕೆ ಹಿನ್ನೆಡೆಯಾಗಿರುತ್ತದೆ. ಆಗ, ಇಂದ್ರಜಿತುವನ್ನು ಕೊಲ್ಲುವ ಬಗ್ಗೆ ಮಂತ್ರಾಲೋಚನೆ ನೆಡೆಯುತ್ತಿರುತ್ತದೆ. ವಿಭೀಷಣ, “ಯಾರು ಹದಿನಾಲ್ಕು ವರ್ಷಗಳ ಕಾಲ ನಿರಂತರವಾಗಿ ಉಪವಾಸ ಮಾಡಿರುತ್ತಾರೊ, ಬ್ರಹ್ಮಚರ್ಯ ಪಾಲಿಸಿರುತ್ತಾರೊ ಅಂಥವರು ಮಾತ್ರ ಇಂದ್ರಜಿತುವನ್ನು ಸುಲಭವಾಗಿ ನಿಗ್ರಹಿಸಬಹುದು” ಎಂದು ಸೂಚನೆ ಕೊಡುತ್ತಾನೆ. ಆಗ ಎಲ್ಲರಿಗೂ ಯೋಚನೆಯಾಗುತ್ತದೆ, ಹದಿನಾಲ್ಕು ವರ್ಷ ಉಪವಾಸ ಮಾಡಿರುವ ವ್ಯಕ್ತಿ ಸಿಗುವುದು ದುರ್ಲಭ ಎನ್ನಿಸುತ್ತದೆ. ತಕ್ಷಣ ಮೇಲೆದ್ದ ಲಕ್ಷ್ಮಣ “ನಾನು ಇಂದ್ರಜಿತುವನ್ನು ಕೊಲ್ಲಬಲ್ಲೆ” ಎನ್ನುತ್ತಾನೆ. ರಾಮನಿಗೆ ಆಶ್ಚರ್ಯ! “ಲಕ್ಷ್ಮಣ ನೀನು ಹದಿನಾಲ್ಕು ವರ್ಷ ಬ್ರಹ್ಮಚರ್ಯವನ್ನು ಪಾಲಿಸಿದ್ದೀಯ. ಆದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಉಪವಾಸವನ್ನೂ ಮಾಡಿದ್ದೀಯಾ?” ಎಂದು ಪ್ರಶ್ನಿಸುತ್ತಾನೆ. ಲಕ್ಷ್ಮಣ “ಹೌದು” ಎನ್ನುತ್ತಾನೆ. ವನವಾಸದ ಉದ್ದಕ್ಕೂ, ಲಕ್ಷ್ಮಣ ತನ್ನೆದುರಿಗೆ ಕುಳಿತು ಊಟ ಮಾಡಿದ್ದು ರಾಮನ ನೆನಪಿಗೆ ಬರುವುದಿಲ್ಲ. ಆದರೂ ರಾಮನಿಗೆ ಸಂದೇಹ.
ಏನೋ ನೆನಪಿಸಿಕೊಂಡವನಂತೆ, “ಲಕ್ಷ್ಮಣ ಒಂದು ಗುಡ್ಡದ ಮೇಲೆ, ನಾವಿಬ್ಬರೂ ಹಸಿವು ನೀರಡಿಕೆಯಿಂದ ಬಳಲಿದ್ದಾಗ, ಸಿಕ್ಕ ಒಂದೇ ಒಂದು ಬೋರೆ ಹಣ್ಣನ್ನು ನಾನೇ ಎರಡು ಭಾಗ ಮಾಡಿ ನಿನಗೊಂದು ಭಾಗ ಕೊಟ್ಟಿದ್ದೆ. ಅದನ್ನು ನೀನು ತಿಂದೆಯಲ್ಲವೆ?” ಎನ್ನುತ್ತಾನೆ. ಆಗ ಲಕ್ಷ್ಮಣ, “ಅಣ್ಣ ನಾನು ವನವಾಸದ ಮೊದಲ ದಿನದಿಂದಲೇ ಉಪವಾಸದ ವ್ರತವನ್ನು ಕೈಗೊಂಡಿದ್ದೆ. ಅಂದು ನೀನು ಹಣ್ಣು ಕೊಟ್ಟಾಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ನೀರು ಹುಡುಕಿ ತರುತ್ತೇನೆ ಎಂದು ಎದ್ದು ಹೋದೆ. ನೀನು ನಿನ್ನ ಕೈಯಾರೆ ಕೊಟ್ಟ ಹಣ್ಣನ್ನು ಎಸೆಯಲು ಮನಸ್ಸು ಬರಲಿಲ್ಲ. ಆದರೆ ತಿಂದು ವ್ರತಭಂಗ ಮಾಡಿಕೊಳ್ಳಲೂ ಮನಸ್ಸಾಗಲಿಲ್ಲ. ತಿನ್ನದೆ, ಬೇರೆ ಯಾವ ರೂಪದಲ್ಲಾದರೂ ಸರಿ ಆ ಹಣ್ಣನ್ನು ನನ್ನ ದೇಹದ ಒಳಗೆ ಸೇರಿಸಿಬಿಟ್ಟರೆ ವ್ರತವೂ ಉಳಿಯುತ್ತದೆ; ನೀನು ಕೊಟ್ಟ ಹಣ್ಣನ್ನು ನಿರಾಕರಿಸಿದಂತೆಯೂ ಆಗುವುದಿಲ್ಲ ಎಂದುಕೊಂಡು, ನನ್ನ ಎಡದ ತೊಡೆಯ ಒಂದು ಭಾಗವನ್ನು ಬಾಣದಿಂದ ಸೀಳಿ, ಅದರೊಳಗೆ ಆ ಹಣ್ಣನ್ನು ಇಟ್ಟುಬಿಟ್ಟೆ. ಅದು ಈಗಲೂ ಹಾಗೆಯೇ ಇದೆ. ಈಗ ಅದನ್ನು ತೆಗೆದು ತೋರಿಸಲೆ” ಎಂದು ಬಾಣದಿಂದ ತೊಡೆಯನ್ನು ಸೀಳಲು ಮುಂದಾಗುತ್ತಾನೆ. ರಾಮ, ವಿಭೀಷಣ ಮೊದಲಾದವರು ಅದರ ಅಗತ್ಯವಿಲ್ಲ ಎನ್ನುತ್ತಾರೆ. ರಾಮನಿಗೆ ಎಲ್ಲವೂ ನೆನಪಾಗುತ್ತದೆ. ಅಂದು ತುಂಬಾ ಬಳಲಿದ್ದ ತನಗೆ, ನೀರು ಹುಡುಕಿ ತಂದು ಸೇವೆ ಮಾಡಿದ ತಮ್ಮನಿಗೆ ಏನಾದರೂ ಕೊಡಬೇಕೆನ್ನಿಸಿ, ತನ್ನಲ್ಲಿದ್ದ ಒಂದು ವಿಶೇಷ ಬಾಣವನ್ನು ವರವಾಗಿ ನೀಡಿದ್ದು ನೆನಪಾಗುತ್ತದೆ. ಎಲ್ಲರ ಹರಕೆಯೊಂದಿಗೆ, ಲಕ್ಷ್ಮಣ ಯುದ್ಧದಲ್ಲಿ ಇಂದ್ರಜಿತುವನ್ನು, ಅಂದು ರಾಮ ಕೊಟ್ಟ ಬಾಣದಿಂದಲೇ ಕೊಲ್ಲುತ್ತಾನೆ.
ಈ ಕಥೆಯನ್ನು ಎಂದೂ ಮರೆತು ಹೋಗದಂತೆ ನನ್ನಲ್ಲಿ ಉಳಿಸಿದ್ದು “ಬಾಣಾವರ” ಎಂಬು ಊರು ಮತ್ತು ಅದರ ಸ್ಥಳಪುರಾಣ! ಆ ಊರು ಇರುವ ಜಾಗದಲ್ಲೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ನೀಡಿದ್ದು. ಆದ್ದರಿಂದಲೇ ಆ ಊರಿಗೆ “ಬಾಣಾವರ” ಎಂಬ ಹೆಸರು ಎಂಬ ಇನ್ನೊಂದು ಜನಪದ ಐತಿಹ್ಯದ ಕಾರಣದಿಂದ ಈ ಕಥೆ ಇಂದಿಗೂ ನನ್ನ ಮನದಲ್ಲಿ ಅಚ್ಚ ಹಸುರಾಗಿದೆ. ಜೊತೆಗೆ, ನಾನು ಬಾಣಾವರ ಮಾರ್ಗದಲ್ಲಿ ಪ್ರಯಾಣ ಮಾಡುವಾಗಲೆಲ್ಲಾ ಅಲ್ಲಿ ಕಾಣುವ ಒಂದು ಸಣ್ಣ ಗುಡ್ಡದ ಮೇಲೆಯೇ ರಾಮ ಲಕ್ಷ್ಮಣನಿಗೆ ಬಾಣವನ್ನು ವರವಾಗಿ ಕೊಟ್ಟಿರಬೇಕು ಎಂದು ಚಿತ್ರಿಸಿಕೊಳ್ಳುತ್ತೇನೆ!
ಉತ್ತರ ರಾಮಾಯಣದ ಕಥೆಯು ಮೂಲ ವಾಲ್ಮೀಕಿ ಕೃತವಲ್ಲ ಎಂಬ ಮಾತೂ ಇದೆ. ಅದು ನಿಜವೂ ಇರಬಹುದು. ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆಯ ಬಗೆಗಿನ ಶ್ರದ್ಧೆ ತೀವ್ರವಾಗಿದ್ದ ಕಾಲದಲ್ಲಿ ಅದು ಸೇರ್ಪಡೆ ಗೊಂಡಿರಲೂಬಹುದು. ತಪಸ್ಸು ಮಾಡಿದನೆಂಬ ಕಾರಣದಿಂದ ರಾಮನಿಂದಲೇ ಕೊಲೆಯಾಗುವ ಶೂದ್ರ ಶಂಭೂಕ, ಸೀತೆ ಮತ್ತೆ ಕಾಡುಪಾಲಾಗುವುದಕ್ಕೆ ಕಾರಣನಾದ ಅಗಸನ ಕಥೆ ಇವೆಲ್ಲವೂ ಅದಕ್ಕೆ ಸಾಕ್ಷಿಯಾಗಿವೆ. ಶಿಷ್ಟ ಪರಂಪರೆಯಲ್ಲಿ ಅಗಸನ ಮಾತಿನಿಂದ ನೊಂದ ರಾಮ, ಸೀತೆಯನ್ನು ಮತ್ತೆ ಕಾಡಿಗೆ ಅಟ್ಟುತ್ತಾನೆ. ಆದರೆ ಜನಪದ ರಾಮಾಯಣದ ಕಥೆಗಳು ಬೇರೆಯದನ್ನೇ ಹೇಳುತ್ತವೆ.

ಅಯೋಧ್ಯೆಗೆ ಹಿಂತಿರುಗಿ ಬಂದು ರಾಮ ಪಟ್ಟಾಭಿಷಕ್ತನಾಗಿರುತ್ತಾನೆ. ಸೀತೆ ತನ್ನ ತಂಗಿಯರೊಂದಿಗೆ, ಅತ್ತೆಯರೊಂದಿಗೆ, ಸಖಿಯರೊಂದಿಗೆ ಸುಖವಾಗಿ ಕಾಲ ಕಳೆಯುತ್ತಿರುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ಸೀತೆಯಿಂದ ವನವಾಸದ, ಲಂಕೆಯ ವಿಷಯಗಳನ್ನು ಕಥೆಯ ರೂಪದಲ್ಲಿ ಕೇಳುತ್ತಿರುತ್ತಾರೆ. ಸೀತೆ ಲಂಕೆ ಮತ್ತು ರಾವಣನ ಬಗ್ಗೆ ಎಷ್ಟು ವರ್ಣಿಸಿದರೂ ಅವರಿಗೆ ಕುತೂಹಲ. ಹತ್ತು ತಲೆ, ಇಪ್ಪತ್ತು ಕೈಗಳಿರುವ ರಾವಣನ ಬಗ್ಗೆ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಒಂದು ದಿನ ಸೀತೆ, ಅವರಿಗೆ ಹೇಳುತ್ತಲೇ, ಅವರ ಕುತೂಹಲ ತಣಿಸಲೊ ಎಂಬಂತೆ ರಾವಣನ ಒಂದು ಚಿತ್ರವನ್ನು ಬಿಡಿಸುತ್ತಾಳೆ. ದಶಕಂಠನ ಚಿತ್ರವನ್ನು ಸಖಿಯರೆಲ್ಲರೂ ನೋಡುತ್ತಿರುವಾಗಲೇ ರಾಮ ಬಂದುಬಿಡುತ್ತಾನೆ. ಗಡಿಬಿಡಿಯಲ್ಲಿ ಅವರೆಲ್ಲಾ ಎದ್ದು ಹೋಗುವಾಗ, ಒಬ್ಬ ಸಖಿ ಆ ಚಿತ್ರವನ್ನು ಸೀತೆ ಕುಳಿತಿದ್ದ ಪಲ್ಲಂಗದ ಕೆಳಗೆ ತಳ್ಳಿಬಿಡುತ್ತಾಳೆ. ಯಾವುದೋ ಸಂದರ್ಭದಲ್ಲಿ ಅದು ರಾಮನ ಕಣ್ಣಿಗೆ ಬೀಳುತ್ತದೆ. ರಾಮನಿಗೆ ‘ಸೀತೆ ಇನ್ನೂ ಆ ದಶಕಂಠನನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಾಳೆ. ಆದ್ದರಿಂದಲೇ ಆತನ ಚಿತ್ರವನ್ನು ಎರಕ ಹೊಯ್ದಂತೆ ಬರೆದು ಪಲ್ಲಂಗದ ಕೆಳಗೆ ಇಟ್ಟುಕೊಂಡಿದ್ದಾಳೆ’ ಎನ್ನಿಸುತ್ತದೆ. ಅವಳ ಮನಸ್ಸಿನಲ್ಲಿರುವ ಆ ಕೆಟ್ಟ ನೆನಪು ಕಳೆದು, ಆಕೆ ಪರಿಶುದ್ಧವಾಗುವವರೆಗೂ ಮತ್ತೆ ಆಕೆಗೆ ವನವಾಸವನ್ನು ವಿಧಿಸುತ್ತಾನೆ. ಅಂತೂ ಸೀತೆ ಎರಡನೆಯ ಬಾರಿಗೆ ಕಾಡು ಪಾಲಾಗುತ್ತಾಳೆ! ಇಲ್ಲಿಯೂ ರಾಮನ ಪಾತ್ರದ ಔನ್ನತ್ಯ, ಅಗಸನ ಕತೆಯಲ್ಲಿ ಆದಂತೆ ಕಡಿಮೆಯೇ ಆಗುತ್ತದೆಯಾದರೂ, ಈ ಕತೆಯಲ್ಲಿ ಜಾತಿವ್ಯವಸ್ಥೆಯ ಸೋಂಕು ಇಲ್ಲ ಎಂಬುದನ್ನು ಗಮನಿಸಬಹುದು.
ಶಿಷ್ಟರಾಮಾಯಣ ಪರಂಪರೆಯಲ್ಲಿ, ವಶಿಷ್ಠ ಮೊದಲಾದವರು ನಿರ್ಧರಿಸಿದ ಒಂದು ನಿರ್ಧಿಷ್ಟ ದಿವಸ ರಾಮನಿಗೆ ಪಟ್ಟಾಭಿಷೇಕವಾಗುತ್ತದೆ. ಆದರೆ ಜನಪದ ಪರಂಪರೆಯಲ್ಲಿಯೂ ಪುರೋಹಿತರು (ವಶಿಷ್ಠ) ಪಟ್ಟಾಭಿಷೇಕದ ದನವನ್ನು ನಿಗಧಿ ಪಡಿಸುತ್ತಾರಾದರೂ ಅದು ಒಂದು ದಿನ ತಡವಾಗಿ ನೆರವೇರುತ್ತದೆ! ರಾಮಪಟ್ಟಾಭಿಷೇಕಕ್ಕೆ ಒಂದು ದಿನದ ತಡೆಯಾದುದಕ್ಕೆ ಯಾರಿಗೂ ಬೇಸರವಾಗದೆ ಒಂದು ಹರ್ಷದ ವಾತಾವರಣವನ್ನೆ ಆ ಕಂಟಕ ಸೃಷ್ಟಿಸುತ್ತದೆ ಎಂಬುದು ಜನಪದ ಕಥೆಯಲ್ಲಿನ ವೈಶಿಷ್ಟ್ಯ.
ಪಟ್ಟಾಭಿಷೇಕದ ಮುನ್ನಾದಿನ ರಾಮ ಕಪಿಸೈನ್ಯಕ್ಕೇ ಒಂದು ಭಾರೀ ಭೋಜನಕೂಟ ಏರ್ಪಡಿಸಿದ್ದ. ಸಮಸ್ತ ಕಪಿಸೈನ್ಯ ಭೋಜನಕ್ಕೆ ಆಗಮಿಸಿದ್ದು ಪಂಕ್ತಿ ಪಂಕ್ತಿಗಳಲ್ಲಿ ಕುಳಿತಿತ್ತು. ಅಗ್ರಭಾಗದಲ್ಲಿ ಜಾಂಬವ, ಆಂಜನೇಯ, ಸುಗ್ರೀವ, ಅಂಗದ ಮುಂತಾದವರು ಕುಳಿತಿದ್ದರು. ನಂತರ ಕಪಿಗಳ ಗಾಥ್ರ ಶಕ್ತಿಯನ್ನು ಅನುಸರಿಸಿ ಕಪಿಗಳು ಕುಳಿತಿದ್ದರು. ತೀರಾ ಕೊನೆಯಲ್ಲಿ ಒಂದು ತೀರಾ ಚಿಕ್ಕದಾದ ಕಪಿ ಕುಳಿತಿತ್ತು. ಆರಂಭದಲ್ಲೇ ಉಪ್ಪಿನಕಾಯಿಯನ್ನು ಬಡಿಸಲಾಯಿತು. ನಂತರ ಬೇರೆ ಭಕ್ಷ್ಯಗಳು ಬರಲಾರಂಭಿಸಿದವು. ಅಷ್ಟರಲ್ಲಿ ಕೊನೆಯಲ್ಲಿದ್ದ ಕಪಿ, ತನ್ನ ತಟ್ಟೆಯಲ್ಲಿದ್ದ ಉಪ್ಪಿನಕಾಯಿಯನ್ನು ಹಿಡಿದು ಹಿಂದೆ ಮುಂದೆ ತಿರುಗಿಸಿ, ನೋಡುತ್ತಿತ್ತು. ಹಾಗೆ ನೋಡುತ್ತಲೇ ಅದನ್ನು ಬಲವಾಗಿ ಅದನ್ನು ಹಿಚುಕಿಬಿಟ್ಟಿತು. ಉಪ್ಪಿನಕಾಯಿಯಲ್ಲಿದ್ದ ಬೀಜ ಒಂದಷ್ಟು ಎತ್ತರಕ್ಕೆ ಎಗರಿಬಿಟ್ಟಿತು. ಅದನ್ನು ಕಂಡ ಕಪಿ ‘ಎಲಾ, ನನ್ನ ಎದುರಿಗೇ ಎಗರುತ್ತೀಯಾ? ನೋಡು ನಾನು ನಿನಗಿಂತ ಎತ್ತರೆಕ್ಕೆ ಎಗರಬಲ್ಲೆ’ ಎಂದು ನೆಗೆದೇ ಬಿಟ್ಟಿತು. ಅದರ ಪಕ್ಕದಲ್ಲಿ ಕುಳಿತಿದ್ದ ಕಪಿ, ‘ನಿನಗಿಂತ ನಾನು ಎತ್ತರಕ್ಕೆ ಹಾರಬಲ್ಲೆ ನೋಡು’ ಎಂದು ನೆಗೆಯಿತು. ಹೀಗೆ ಎಲ್ಲಾ ಕೋತಿಗಳು ಒಂದಕ್ಕಿಂತ ಒಂದು ಎತ್ತರಕ್ಕೆ ನೆಗೆಯಲಾರಂಭಿಸಿದವು. ಈ ಚೇಷ್ಟೆ ಅಂಗದ ಸುಗ್ರೀವರನ್ನೂ ಬಿಡಲಿಲ್ಲ. ಕೊನೆಯಲ್ಲಿ ಕುಳಿತು ಇದೆಲ್ಲವನ್ನೂ ನೋಡುತ್ತಿದ್ದ ಆಂಜನೇಯ ‘ಎಲಾ, ಸಮುದ್ರನ್ನು ಹಾರಿ ಲಂಕೆಗೆ ಹೋಗಿ ಬಂದವನು ನಾನು. ನನ್ನ ಎದುರಿಗೇ ಹಾರುತ್ತೀರಲ್ಲಾ’ ಎಂದವನೇ ಜಾಂಬವ ತಡೆಯುತ್ತಿದ್ದರೂ ನೆಗೆದೇ ಬಿಟ್ಟ. ಹೇಗೆ ನೆಗೆದನೆಂದರೆ ಆತ ಎಷ್ಟು ಹೊತ್ತಾದರೂ ವಾಪಸ್ಸು ಬರಲೇ ಇಲ್ಲ. ಆಂಜನೇಯ ಬರದೆ ಭೋಜನ ಕೂಟವೇ ನಡೆಯಲಿಲ್ಲ. ಅವನು ಬರುವವರೆಗೂ ಪಟ್ಟಾಭಿಷೇಕವೂ ನಡೆಯುವಂತಿಲ್ಲ. ಎಲ್ಲರೂ ಆಂಜನೇಯನಿಗೆ ಕಾದು ಕುಳಿತಿದ್ದರು. ಒಂದು ದಿನ ಕಳೆದ ಮೇಲೆ ಆಂಜನೇಯ ಆಕಾಶದಿಂದ ಇಳಿದ. ತನ್ನ ಕೃತ್ಯದ ಬಗ್ಗೆ ತನಗೇ ನಾಚಿಕೆಯಾಗಿತ್ತು ಆತನಿಗೆ. ಎಲ್ಲರ ಕ್ಷಮೆ ಕೇಳಿದ. ಎಲ್ಲರು ನಕ್ಕು, ಮುಂದೆ ನಡೆಯಬೇಕಾಗಿದ್ದ ಪಟ್ಟಾಭಿಷೇಕಕ್ಕೆ ಸಿದ್ಧರಾಗುತ್ತಾರೆ. ಅಂತೂ ಆಂಜನೇಯನ ಕಾರಣದಿಂದ ಒಂದು ದಿನ ತಡವಾಗಿ ರಾಮನಿಗೆ ರಾಜ್ಯೇಭಿಷೇಕವಾಗುವ ಈ ಕಥೆ ಯಾರಲ್ಲೂ ಯಾರ ಬಗ್ಗೆಯೂ ಕಹಿ ಭಾವನೆಗಳನ್ನು ಉಳಿಸುವುದಿಲ್ಲ ಎಂಬುದು ಗಮನಾರ್ಹ. ಕಪಿಗಳಿಗೆ ಸಹಜವಾದ ಚಂಚಲಚಿತ್ತ ಮನಸ್ಥಿತಿಯನ್ನು ರಾಮಾಯಣದ ಮಹೋನ್ನತ ಪಾತ್ರಗಳನ್ನೇ ಬಳಸಿಕೊಂಡು ಜನಪದ ಪ್ರಜ್ಞೆ ಚಿತ್ರಿಸಿದೆ ಎನ್ನಬಹುದು. ಜೊತೆಗೆ ಆಂಜನೇಯನ ಮೇಲೆ ರಾಮ ಮತ್ತು ಆತನ ಪರಿವಾರದ ಜನರಿಗಿದ್ದ ಗೌರವವೂ ವ್ಯಕ್ತವಾಗುತ್ತದೆ.
ರಾಮಾಯಣ ಕೇವಲ ಒಂದು ಕಾವ್ಯವಲ್ಲ; ಬರೀ ರಾಮನ ಕಥೆಯಲ್ಲ. ಅದು ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಅವರ ಬದುಕಿನಲ್ಲಿಯೇ ಅಂತರ್ಗತವಾಗಿದೆ ಎಂಬುದಕ್ಕೆ ಸಾಕ್ಷಿಯಂತಿವೆ ಈ ಕಥೆಗಳು

Saturday, March 01, 2014

ರಾಮನ ಬಾಲಲೀಲೆಗಳು ಮತ್ತು ಜನಪದ ಪರಂಪರೆ

ಸಾಮಾನ್ಯವಾಗಿ ಬಾಲಲೀಲೆಗಳು ಎಂದರೆ ನಮಗೆ ನೆನಪು ಬರುವುದು ಕೃಷ್ಣನವು ಮಾತ್ರ. ಶ್ರೀರಾಮನ ಬಾಲಲೀಲೆಗಳೂ ಸಾಕಷ್ಟು ಇದ್ದರೂ ಅಷ್ಟು ಚಿರಪರಿಚಿತವೇನಲ್ಲ. ಮೊನ್ನೆ ನಮ್ಮ ವಾರಂತ್ಯದ ಅಧ್ಯಯನದ ತರಗತಿಯಲ್ಲಿ ಇಂತಹ ಕೆಲವೊಂದು ಬಾಲಲೀಲೆಗಳು ಪ್ರಸ್ತಾಪವಾದುವು. ಈಗ ನಾವು ಅಧ್ಯಯನ ಮಾಡುತ್ತಿರುವುದು ಅಭಿನವಪಂಪನೆಂದೇ ಖ್ಯಾತನಾಗಿರುವ ನಾಗಚಂದ್ರನ ಪಂಪರಾಮಾಯಣ ಅರ್ಥಾತ್ ರಾಮಚಂದ್ರಚರಿತಪುರಾಣ. ಅದರಲ್ಲೇನೂ ರಾಮ ಬಾಲಲೀಲೆಗಳ ಪ್ರಸ್ತಾಪವಿಲ್ಲವಾದರೂ, ಆ ಕಾವ್ಯದ ನೆಪದಲ್ಲಿ ನಾವು ರಾಮನ ಬಾಲಲೀಲೆಗಳನ್ನು ನೆನಪಿಸಿಕೊಳ್ಳುವಂತಾಗಿದ್ದು ಒಂದು ಸುಸಂದರ್ಭವೇ ಸರಿ!
ನಮ್ಮ ಸ್ನೇಹಿತರಾದ ಡಾ. ಜಿ.ಮನೋಜ್ ಅವರು, ಅವರ ಅಜ್ಜಿ ಹೇಳಿದ್ದೆಂದು ಎರಡು ರಾಮನ ಬಾಲಲೀಲೆಗಳನ್ನು ಹೇಳಿದರು. ಅದರಲ್ಲಿ ಒಂದು ರಾಮನ ಕಾಲಂದಿಗೆಗಳು ಸವೆದು ಹೋಗಿದ್ದರ ಬಗ್ಗೆ. ಕೌಸಲ್ಯೆಗೆ ರಾಮನನ್ನು ಕಂಡರೆ ಪಂಚಪ್ರಾಣ. ಏನಾದರೂ ನೆಪವೊಡ್ಡಿ ಅವನನ್ನು ನೋಡುವುದು, ಮಾತನಾಡಿಸುವುದು, ಮುದ್ದುಮಾಡುವುದು, ಲಲ್ಲೆಗರೆಯುವುದು ಮಾಡುತ್ತಿರುತ್ತಾಳೆ. ಒಂದು ದಿನ ಸುಮ್ಮನೇ ಬಾಲರಾಮನೊಂದಿಗೆ ಹರಟೆ ಹೊಡೆಯುತ್ತಾ, ಆತನ ಕೈಕಾಲುಗಳನ್ನು ನೀವುತ್ತಾ, ಮುದ್ದು ಮಾಡುತ್ತ ಕುಳಿತಿರುತ್ತಾಳೆ. ಆಗ ಸುಮ್ಮನೆ, “ಮಗು, ಏಕೆ ನಿನ್ನ ಕಾಲಂದಿಗೆಗಳು ಇಷ್ಟೊಂದು ಸವೆದು ಹೋಗಿಬಿಟ್ಟಿವೆಯಲ್ಲಾ?’ ಎಂದು ಕೇಳುತ್ತಾಳೆ. ಅವು ನಿಜವಾಗಿ ಸವೆದು ಹೋಗಿದ್ದವೋ, ಅಥವಾ ಆಕೆಗೆ ಮಾತನಾಡುವುದಕ್ಕೆ ಒಂದು ನೆಪ ಬೇಕಾಗಿತ್ತೋ ತಿಳಿಯದು. ಆದರೆ ರಾಮ ತನ್ನ ಬಾಲಭಾಷೆಯಲ್ಲಿ ‘ಅಮ್ಮಾ, ನಾನೇನು ಮಾಡಲಮ್ಮಾ, ಎಲ್ಲರೂ ನನ್ನ ಕಾಲುಗಳನ್ನು ತಮ್ಮ ಕೈಗಳಿಂದ ಮುಟ್ಟುತ್ತಿರುತ್ತಾರೆ. ಅವರು ಮುಟ್ಟಿ ಮುಟ್ಟಿಯೇ ನನ್ನ ಕಾಲಂದಿಗೆಗಳು ಸವೆದು ಹೋಗಿವೆ. ಇದರಲ್ಲಿ ನನ್ನ ತಪ್ಪೇನು ಇಲ್ಲಮ್ಮಾ’ ಎಂದು ಹೇಳುತ್ತಾನೆ.
ರಾಮನು ದೈವಾಂಶಸಂಭೂತನೆಂಬುದು ಜನಪದರ ನಂಬಿಕೆ. ಆದ್ದರಿಂದ, ಆತನು ಬಾಲಕನಾದರೂ ನಮಸ್ಕಾರಕ್ಕೆ ಅರ್ಹ ಎಂದಾಯಿತು. ಬಾಲರಾಮನಿಗೆ ಆತನ ಜೊತೆಗಾರರು, ಅರಮನೆಯಲ್ಲಿದ್ದವರು, ಜನಸಾಮಾನ್ಯರು ಬಾಲಕನಾಗಿದ್ದಾಗಲೂ ನಮಸ್ಕರಿಸುತ್ತಿದ್ದರು, ಗೌರವಿಸುತ್ತಿದ್ದರು. ಆದರೆ, ಸ್ವತಃ ರಾಮನಾದರೊ ಎಲ್ಲಾ ಮಕ್ಕಳಂತೆ ಆತನೂ ಒಬ್ಬ. ಜನ ತನ್ನ ಕಾಲುಗಳನ್ನು ಏಕೆ ಮುಟ್ಟುತ್ತಾರೆ ಎಂದು ಆತನಿಗೆ ತಿಳಿಯುವುದಿಲ್ಲ. ಆದರೆ ಜನ ಹಾಗೆ ಮುಟ್ಟುವುದರಿಂದಲೇ ತನ್ನ ಕಾಲಂದಿಗೆಗಳು ಸವೆದು ಹೋಗಿವೆ ಎಂಬ ತರ್ಕ ಬಾಲಕನ ಮಗ್ಧತೆಗೆ ಸಾಕ್ಷಿಯಾಗಿದೆ.
ಇನ್ನೊಂದು ಕಥೆಯೂ ತಾಯಿ ಮಗನ ಅನೋನ್ಯತೆಯನ್ನೇ ಎತ್ತಿ ಹಿಡಿಯುತ್ತದೆ. ಒಂದು ದಿನ ಬೇರೆ ಮಕ್ಕಳೊಂದಿಗೆ ಆಡಲು ಹೋಗಿದ್ದ ರಾಮ ಅಳುತ್ತಲೇ ವಾಪಸ್ಸು ಬರುತ್ತಾನೆ. ಕೌಸಲ್ಯೆ ಎಷ್ಟು ಸಮಾಧಾನ ಮಾಡಿದರೂ ಆತ ಸುಮ್ಮನಾಗುವುದಿಲ್ಲ. ಬಹಳ ಹೊತ್ತಿನ ನಂತರ ಆತನ ಅಳುವಿಗೆ ಕಾರಣವೇನೆಂದು ತಿಳಿಯುವಲ್ಲಿ ಕೌಸಲ್ಯೆ ಸಫಲಳಾಗುತ್ತಾಳೆ. ರಾಮನ ಪ್ರಕಾರ, ಆತ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುತ್ತಾನೆ. ಕಣ್ಣು ಮುಚ್ಚಿಸಿಕೊಂಡವನು, ಕಣ್ಣು ಬಿಟ್ಟ ಕೂಡಲೇ, ರಾಮ ಎಲ್ಲೇ ಅವಿತುಕೊಂಡಿದ್ದರೂ ನೇರವಾಗಿ ಬಂದು ರಾಮನನ್ನೇ ಹಿಡಿಯುತ್ತಿರುತ್ತಾನೆ. ಒಬ್ಬ ಹುಡುಗುನಲ್ಲ; ಕಣ್ಣು ಕಟ್ಟಿಸಿಕೊಂಡ ಎಲ್ಲಾ ಮಕ್ಕಳಿಗೂ ರಾಮ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾನೆ. ಅದೇ ಕಾರಣದಿಂದ ರಾಮನಿಗೆ ಅಳು ಬಂದಿರುತ್ತದೆ. ಕೌಸಲ್ಯೆ ರಾಮನಿಗೆ ಸಮಾಧಾನ ಹೇಳುತ್ತಾಳೆ. ‘ಮಗು, ನೀನು ಎಷ್ಟು ಚಂದ ಇದ್ದೀಯಾ, ಎಷ್ಟೊಂದು ಪ್ರಕಾಶಮಾನವಾಗಿ ಇದ್ದೀಯ ಎಂದರೆ, ನಿನ್ನ ಸುತ್ತಲೂ ಒಂದು ಪ್ರಭಾವಳಿಯೆ (ಬೆಳಕಿನ ವಲಯ) ಇದೆ. ನೀನು ಎಲ್ಲೇ ಇದ್ದರು, ಆ ಬೆಳಕಿನ ದೆಸೆಯಿಂದ ಬೇಗ ಎಲ್ಲರಿಗೂ ಕಾಣಿಸಿಂಡು ಬಿಡುತ್ತೀಯಾ ಅಷ್ಟೆ. ನೀನು ಅಷ್ಟೊಂದು ಚೆಂದ ಇರುವುದು ನಿನಗೆ ಖುಷಿಯಲ್ಲವೆ? ಹೇಳು’ ಎನ್ನುತ್ತಾಳೆ. ಆಗ ರಾಮನಿಗೆ ಖುಷಿಯಾಗುತ್ತದೆ. ನಾನು ಎಲ್ಲರಿಗಿಂತ ಚೆನ್ನಾಗಿದ್ದೇನೆ, ವಿಶೇಷವಾಗಿದ್ದೇನೆ ಎಂಬ ಸಮಾಧಾನದಿಂದ ರಾಂ ತನ್ನ ಅಳಲನ್ನು ಮರೆಯುತ್ತಾನೆ! ಆದ್ದರಿಂದಲೇ ಆತ ‘ರಾಮ’ ಮಾತ್ರನಲ್ಲ; ರಾಮಚಂದ್ರನೂ ಹೌದು! ಚಂದ್ರ ಬೆಳಕನ್ನು ಸೂಸುವವನು, ಜೊತೆಗೆ ಆತನ ಸುತ್ತಲೂ ಬೆಳಕಿನ ವಲಯ ಇರುತ್ತದೆ. ಕೌಸಲ್ಯೆ ಮತ್ತು ರಾಮ ಇಬ್ಬರೂ ಜನಮನದ ದೃಷ್ಟಿಯಲ್ಲಿ ಜಗದ್ವಂದ್ಯರಾದರೂ, ಕೌಸಲ್ಯೆ ರಾಮನ ತಾಯಿ; ರಾಮ ಕೌಸಲ್ಯೆಯ ಮಗ ಮಾತ್ರ!
ಇಲ್ಲಿಯೇ ಈ ಕಥೆಗೆ ಇರುವ ವೈರುದ್ಧ್ಯವೊಂದನ್ನು ಗಮನಿಸಬಹುದು. ಶಿಷ್ಟಕಾವ್ಯದಲ್ಲಿ ರಾಮ ಕೃಷ್ಣವರ್ಣದವನು. ಅಚ್ಚಗನ್ನಡದಲ್ಲಿ ಹೇಳುವುದಾದರೆ ಆತ ‘ಕರಿಯ’. ನಮ್ಮ ಜನಪದರಲ್ಲಿ ಕಪ್ಪಗಿರುವವರನ್ನು ಸ್ವಲ್ಪ ಹೀಯಾಳಿಸಿ ಮಾತನಡುವಾಗ, ‘ತೊಳೆದ ಕೆಂಡ’, ‘ನೀನಿದ್ರೆ ಕತ್ತಲೆ ಮನೆಗೆ ಬೆಳಕೆ ಬೇಡ’ ಎಂಬ ಮಾತುಗಳನ್ನು ಬಳಸುತ್ತಾರೆ. ಕತ್ತಲೆ ಮನೆಗೆ ಬಳಕೇ ಬೇಡ ಎಂದೆನ್ನಿಸಿಕೊಳ್ಳುವ ಕಪ್ಪುಬಣ್ಣದ ರಾಮನಿಗೆ, ಅದೇ ಜನಪದ ಪ್ರತಿಭೆ ಬೆಳಕಿನ ಪ್ರಭಾವಳಿಯನ್ನು ಸೃಷ್ಟಿಸುತ್ತದೆ! ಕಪ್ಪುಬಣ್ಣ ಬೆಳಕನ್ನು ಚೆನ್ನಾಗಿ ಹೀರಿಕೊಳ್ಳುತ್ತದೆಯೆ ಹೊರತು, ಹೊರಚೆಲ್ಲುವುದಿಲ್ಲ. ಆದರೆ ಜನಪದ ಪ್ರಜ್ಞೆಗೆ ರಾಮ ಕೇವಲ ‘ರಾಮ’ನಲ್ಲ!
ಇದೇ ಸಂದರ್ಭದಲ್ಲಿ ನೆನಪಾದ ಪ್ರಸಂಗವೆಂದರೆ, ಚಂದ್ರನಿಗಾಗಿ ರೋಧಿಸುತ್ತಿದ್ದ ರಾಮನಿಗೆ ಮಂಥರೆ ಕನ್ನಡಿಯೊಂದನ್ನು ಕೊಟ್ಟು ಸಮಾಧಾನ ಮಾಡಿದ, ಶ್ರೀರಾಮಾಯಣ ದರ್ಶನಂ ಕಾವ್ಯಭಾಗದ್ದು. ಆ ಕಾವ್ಯದ ಅಧ್ಯಯನ ಸಂದರ್ಭದಲ್ಲಿ ಚರ್ಚೆಯಾಗಿತ್ತು. ಮೂಲತಃ ಅದೊಂದು ಜನಪದ ಕಥೆ. ಅದನ್ನು ಅತ್ಯಂತ ಧ್ವನಿಪೂರ್ಣವಾಗಿ ದರ್ಶನಾತ್ಮಕವಾಗಿ ಕುವೆಂಪು ಅವರು ಶಿಷ್ಟ ಕಾವ್ಯದ ಪರಿಧಿಗೆ ಅಳವಡಿಸಿರುವ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆ ಕಥೆಯನ್ನೊಮ್ಮೆ ಇಲ್ಲಿ ಗಮನಿಸಬಹುದಾಗಿದೆ.
ಒಂದು ದಿನ ಬೆಳದಿಂಗಳ ರಾತ್ರಿ, ಅಂತಃಪುರದ ಎಲ್ಲರೂ ಉದ್ಯಾನವನದಲ್ಲಿ ಸೇರಿರುತ್ತಾರೆ. ಎಲ್ಲ ಮಕ್ಕಳು, ತಾಯಂದಿರು ‘ಉದ್ಯಾನ ಶಾದ್ವಲ ಶ್ಯಾಮ ವೇದಿಕೆಯಲ್ಲಿ’ ವಿಹರಿಸುತ್ತಿರುತ್ತಾರೆ. ಆಗ ಶಿಶುರಾಮ ಆಕಾಶದಲ್ಲಿದ್ದ ಪೂರ್ಣಚಂದ್ರನನ್ನು ನೋಡಿ, ಅದು ನನಗೆ ಬೇಕೆಂದು ಅಳಲಾರಂಬಿಸುತ್ತಾನೆ. ‘ನೋಡಿ, ಮೋಹಿಸಿ, ಪಡೆಯೆ ಹಲುಬಿ, ಹಂಬಲಿಸಿ ಕಾಡಿದನು ಕೌಸಲ್ಯಯಂ’ ಎಂದು ಒಂದೇ ವಾಕ್ಯದಲ್ಲಿ ಕವಿ ಆತನ ಗೋಳಾಟವನ್ನು ಹಿಡಿದಿಟ್ಟಿದ್ದಾರೆ. ‘ನಭದಚಂದ್ರಂ ನರರ ಧರಣಿಗೈತರನ್’ ಎಂದು ಕೌಸಲ್ಗಯೆ ಹೇಳಿದ ಸಮಾಧಾನ ರಾಮನ ಅಳುವನ್ನು ನಿಲ್ಲಿಸುವುದಿಲ್ಲ. ಅಲ್ಲಿದ್ದವರೆಲ್ಲಾ ರಾಮನಿಗೆ ಚಿನ್ನದ ಆಟದ ಸಾಂಆನುಗಳನ್ನು, ಗೊಂಬೆಗಳನ್ನು, ತಿನ್ನಲು ಸಿಹಿಗಳನ್ನು, ಹಣ್ಣುಗಳನ್ನು ಕೊಟ್ಟು ಸಮಾಧಾನ ಮಾಡುವ ಯತ್ನ ಮಾಡುತ್ತಾರೆ. ರಾಮ ಅಳು ನಿಲ್ಲಿಸುವುದಿಲ್ಲ. “ದಮ್ಮಯ್ಯ, ದಮ್ಮಯ್ಯ, ಸುಮ್ಮನಿರೊ, ಓ ನನ್ನ ಕಣ್ಮಣಿಯೆ, ಕಂದಯ್ಯ, ಕೈಮುಗಿವೆನ್ ಅಳಬೇಡ” ಎಂದು ಕೌಸಲ್ಯೆ ತಾನೂ ಅಳುತ್ತಾ, ‘ರವಿವಂಶದವನು ಎಂಬ ಕರುಬಿಂದ ನೀನು ಹೀಗೆ ರಾಮನನ್ನು ಗೋಳಾಡಿಸುತ್ತಿದ್ದೀಯ’ ಎಂದು ಚಂದ್ರನಿಗೆ ಬಯ್ಯುತ್ತಿರುತ್ತಾಳೆ!
ಭೂಮಿಯೇ ಬೆಚ್ಚುವಷ್ಟು ಆರ್ತವಾಗಿದ್ದ ಆತನ ಅಳು ಕೇಳಿದ ದಶರಥ ಓಡೋಡಿ ಬರುತ್ತಾನೆ. ವಿಷಯ ತಿಳಿದು ದಶರಥ ‘ಮಗನಾಸೆ ತನ್ನ ಬಲ್ಮೆಗೆ ಮೀರಿ ಕೈಗೂಡಲಸದಳಮಲಾ’ ಎಂದು ಮರುಕಗೊಳ್ಳುತ್ತಾನೆ. ‘ತನ್ನ ಸಿರಿ ಇನಿತು ಪುಸಿಯಾಯ್ತೆ’ ಎಂದುಕೊಂಡು ಕೌಸಲ್ಯೆಯಿಂದ ರಾಮನನ್ನು ಕರೆದುಕೊಂಡು ಉದ್ಯಾನವನದಲ್ಲಿದ್ದ ಜಿಂಕೆಗಳನ್ನು ತೋರಿಸಲು ಹೋಗುತ್ತಾನೆ. ಆದರೂ ರಾಮ ಚಂದ್ರನಿಗಾಗಿ ಅಳುವುದನ್ನು ನಿಲ್ಲಿಸಲಿಲ್ಲ. ದಶರಥನ ಮಂತ್ರಿ ಸುಮಂತ್ರನೂ ನಿರುತ್ತರನಾಗುತ್ತಾನೆ.
ಆಗ ಎಲ್ಲಿದ್ದಳೊ ಮಂಥರೆ, ಭರ್ರನೆ ಬರುತ್ತಾಳೆ. ಆಕೆಯ ಕಂಕುಳಲ್ಲಿ ಭರತನಿರುತ್ತಾನೆ. ಅವಳು ಬಂದಿದ್ದನ್ನು ಕಂಡು ಕೈಕೆಯನ್ನುಳಿದು ಇತರರು ಮುಖ ತಿರುಗಿಸುತ್ತಾರೆ – ಅಮಂಗಳವನ್ನೀಕ್ಷಿಸಿದಂತೆ! ಇದಾವುದನ್ನೂ ಗಮನಿಸದ ಮಂಥರೆ ತನ್ನ ಮಡಿಲಿನಿಂದ ಒಂದು ಕನ್ನಡಿಯನ್ನು ತೆಗೆದು ಅಳುತ್ತಿದ್ದ ರಾಮನ ಕೈಯಲ್ಲಿಡುತ್ತಾಳೆ. ಕನ್ನಡಿಯಲ್ಲಿ ಚಂದ್ರನ ಪ್ರತಿಬಿಂಬವನ್ನು ಕಂಡ ರಾಮ, ಚಂದ್ರನೇ ತನ್ನ ಕೈಯಲ್ಲಿ ಇದ್ದಾನೆ ಎಂದುಕೊಂಡು ಕುಣಿಕುಣಿದು ನಲಿಯುತ್ತಾನೆ. ಪಾಪ, ಮಂಥರೆ ರಾಮನ ಸಂಭ್ರಮವನ್ನು ತಾನೂ ಅನುಭವಿಸಿ ತನ್ನನ್ನು ತಾನು ಮರೆತುಬಿಡುತ್ತಾಳೆ. ಆ ಸಂಭ್ರಮದ ಸ್ಥಿತಿಯಲ್ಲಿಯೇ ರಾಮನನ್ನು ಎತ್ತಿಕೊಳ್ಳಲು ಮುಂದಾಗುತ್ತಾಳೆ. ‘ಕಂದಂಗೆ ಅಮಂಗಳಂ, ಮುಟ್ಟದಿರ್ ಮುಟ್ಟದಿರ್, ಬೇಡ ಬೇಡ’ ಎನ್ನುತ್ತಾ ಕೌಸಲ್ಯೆ ಮಂಥರೆಯನ್ನು ತಡೆಯುತ್ತಾಳೆ. ಮಂಥರೆಯ ಸಂಭ್ರಮ ಕುಸಿಯುತ್ತದೆ. ಒಲುಮೆ ಮುರಿಯುತ್ತದೆ. ಕಣ್ಣೀರು ಚಿಮ್ಮುತ್ತದೆ. ಭರತನನ್ನು ಬಿಗಿದು ಅಪ್ಪಿಕೊಂಡು ‘ತುಳಿದ ಸರ್ಪಿಣಿಯಂತೆ ಮುಳಿಸಿನುರಿಯಿಂ ಪೊಗೆದು, ಸುಯ್ದು, ಹೆಡೆಯೆತ್ತಿ’ ಹೊರಟು ಬಿಡುತ್ತಾಳೆ.
ರಾಮನ ಅಳು ನಿಲ್ಲಿಸುವವರೆಗೆ ಮಾತ್ರವಿದ್ದ ಜಾನಪದ ಕಥೆಯನ್ನು ಬಳಸಿಕೊಂಡು, ಕೌಸಲ್ಯೆಯ ಬಗ್ಗೆ ಮಂಥರೆಗಿದ್ದ ಅಸಮಧಾನಕ್ಕೆ ಕಾರಣವನ್ನೊದಗಿಸುವಂತೆ, ಮಂಥರೆಗೆ ಆಗುವ ಒಲುಮೆ ಭಂಗವಾಗುವಂತೆ ಸನ್ನಿವೇಶ ಸೃಷ್ಟಿಸಿ, ಮುಂದೆ ಪತಿತಪಾತ್ರಖಳಾದ ಮಂಥರೆಯಾತ್ಮವನ್ನೂ ಉದ್ಧಾರಪಥದತ್ತ ಹೊರಳಿಸುವ ಸಾಹಸಕ್ಕೆ ತೊಡಗುತ್ತಾರೆ ಕವಿ.
ಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾಮ ಲಕ್ಷ್ಮಣರ ಸ್ನೇಹದ ಬಗ್ಗೆ ಹೇಳುತ್ತ, ರಾಮನಿಗೆ ಲಕ್ಮಣನಲ್ಲಿ ವಿಶೇಷವಾದ ಪ್ರೀತಿ, ಆಟ ಪಾಟ ಊಟ ನಿದ್ರೆ ಎಲ್ಲದಕ್ಕೂ ಲಕ್ಷ್ಮಣ ಆತನ ಜೊತೆಗಿರಬೇಕಿತ್ತು ಎಂಬ ಚಿತ್ರಣವಿದೆ. ಇದನ್ನೇ ಸ್ವಲ್ಪ ವಿಸ್ತರಿಸಿರುವ ಶ್ರೀ ವೀರಪ್ಪ ಮೊಯಿಲಿಯವರು, ಕೌಸಲ್ಯೆ ರಾಮನಿಗೆ ಊಟ ತಿನ್ನಿಸಲು ಬಂದಾಗ, ಆತ, ಲಕ್ಷ್ಮಣನನ್ನು ಮುಂದೆ ನಿಲ್ಲಿಸಿ, ಆತನಿಗೆ ಕೌಸಲ್ಯೆ ತಿನ್ನಿಸುವುದನ್ನು, ಆತ ತಿನ್ನುವುದನ್ನು ನೋಡಿ ರಾಮ ಸಂತಸದಿ ಕುಣಿಯುತ್ತಿದ್ದ ಎಂದಿದ್ದಾರೆ.
‘ಶ್ರೀಲಕ್ಷ್ಮಣ ಮಹಾನ್ವೇಷಣೆಯ ಮಹಾಕಾವ್ಯ’ವನ್ನಾಗಿಸುವ ಭರದಲ್ಲಿ ಮೊಯಿಲಿಯವರು, ಲಕ್ಷ್ಮಣನಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತೋರಿಸುವುದಕ್ಕೋ ಏನೊ ಒಂದು ಕಥೆಯನ್ನು ಸೃಷ್ಟಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ, ಮೂಲ ರಾಮಾಯಣದಲ್ಲಾಗಲೀ, ಕನ್ನಡ ರಾಮಾಯಣಗಳ ಪರಂಪರೆಯಲ್ಲಾಗಲೀ ಲಕ್ಷ್ಮಣ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದನು, ನಿರ್ಲಕ್ಷಕ್ಕೊಳಗಾಗಿದ್ದನು ಎಂಬ ಮಾಹಿತಿಯಿಲ್ಲ. ಕವಿಗೆ ಜಾನಪದ ಮೂಲದಲ್ಲೇನಾದರೂ ಈ ಕಥೆ ಸಿಕ್ಕಿದೆಯೆ ಎಂಬುದಕ್ಕೆ ಸಧ್ಯಕ್ಕಂತೂ ಆಧಾರಗಳಿಲ್ಲ. ಧ್ರುವನ ಕಥೆ ಅವರಿಗೆ ಈ ಪ್ರೇರಣೆಯನ್ನು ಒದಗಿಸಿರಬಹುದು.ಆದರೆ, ‘ಸೌಮಿತ್ರಿಯ ಚರಣಕ್ಕೆರಗಿ ಲಕ್ಷ್ಮಣಾಯಣಮಾಗಿಸುವ’ ಉದ್ದೇಶದಿಂದ ಈ ಕಥೆಯನ್ನು ಸೃಷ್ಟಿಸಿದ್ದಾರೆ. ಬಿಡಿಯಾಗಿ ಒಂದು ಸುಂದರ ಚಿತ್ರಣವಾಗಿ ಈ ಕಥೆ ಮೂಡಿಬಂದಿದೆ.
ಒಂದು ದಿನ ದಶರಥ ವಿರಮಿಸುತ್ತಿದ್ದಾಗ, ರಾಮ ಲಕ್ಷ್ಮಣ ಭರತ (ಶತ್ರುಘ್ನ ಇಲ್ಲ!) ಮೂವರೂ ಓಡಿ ಆತನ ಬಳಿಗೆ ಬರುತ್ತಾರೆ. ದಶರಥ ಮೂವರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾನೆ. ರಾಮ ಬಲದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಭರತ ಎಡದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಪಾಪ ಲಕ್ಷ್ಮಣನಿಗೆ ಯಾವ ತೊಡೆ? ಆತನಿಗೆ ದುಃಖವಾಗುತ್ತದೆ. ಹೃದಯ ತೊಯ್ದಾಡುತ್ತದೆ. ಕಣ್ಣು ತೇವವಾಗುತ್ತದೆ. ‘ತಾನಾವ ತೊಡೆಯನೇರಲಿ, ತನಗೆಲ್ಲಿದೆ ಸ್ಥಾನ’ ಎಂದು ಹಂಬಲಿಸುತ್ತಾನೆ ಲಕ್ಷ್ಮಣ. ‘ಬಲವಿಲ್ಲ ಎಡವಿಲ್ಲ ಯಾವ ಹೃದಯವು ಇಲ್ಲ ಶೂನ್ಯವಾಗಿದೆ ಪ್ರೇಮ ಮನವು ಮರ್ಕಟವಾಗಿ ಚಡಪಡಿಸಿ ಹೊಯ್ದಾಡೆ ಪ್ರೇಮದನ್ವೇಷಣೆಯು ಮರದ ರೆಂಬೆಗಳಲಿ ಹಾರಾಡಿ ಮತ್ತಲ್ಲಿಯೆ ಚಡಪಡಿಸಿ ನಿಂತಿಹುದು’ ಎಂದು ಲಕ್ಷ್ಮಣನ ಆಗಿನ ಸ್ಥಿತಿಯನ್ನು ಕವಿ ಮಾತಾಗಿಸಿದ್ದಾರೆ. ಆಗ ರಾಮ ತೊಡೆಯಿಂದ ಇಳಿದು, ಲಕ್ಷ್ಮಣನನ್ನು ಬಿಗಿದಪ್ಪಿ, ಕಣ್ಣೀರನೊರೆಸಿ ‘ತನ್ನೆದೆಯ ಕಾವನ್ನು ಸೋದರತೆಗೆ ನೀಡುತ್ತ’ ಲಕ್ಷ್ಮಣನಿಗೆ ಪ್ರೀತಿಯಲ್ಲಿ ಕಾಣಿಸಿಕೊಂಡಿದ್ದ ಶೂನ್ಯತೆಯನ್ನು ಹೋಗಲಾಡಿಸುತ್ತಾನೆ. ರಾಮ ಪ್ರತಿಮೆಯ ುಪ್ಪು ಗೊಂಬೆಯಲಿ ಕರಗಿ ಹೋದ ಲಕ್ಷ್ಮಣ ಭಾತೃಪ್ರೇಮದ ಸಾಗರದಲ್ಲಿ ಐಕ್ಯವಾಗುತ್ತಾನೆ ಎನ್ನುತ್ತಾರೆ ಕವಿ.
ರಾಮನ ಬಾಲಲೀಲೆಗೆ ಸಂಬಂದಿಸಿದಂತೆ ಜಾನಪದ ಪ್ರಜ್ಞೆ ಮೆರೆದಿರುವ ಪಾರಮ್ಯವನ್ನು ಇದುವರೆಗೆ ಗಮನಿಸಿದ್ದೇವೆ. ಮೂಲತಃ ರಾಮಾಯಣ, ಮಹಾಭಾರತಗಳು ಜನಪದ ಕಥೆಗಳು ಮಾತ್ರವಾಗಿದ್ದು, ಯಾವುದೋ ಕಾಲಘಟ್ಟದಲ್ಲಿ ಅವು ವಾಲ್ಮೀಕಿ ವ್ಯಾಸರಿಂದ ಶಿಷ್ಟತೆಯ ಆವರಣದೊಳಕ್ಕೆ ಬಂದಿವೆ ಎಂಬ ವಾದವೊಂದಿದೆ. ಜಗತ್ತಿನ ಪುರಾತನ ಮಹಾಕಾವ್ಯಗಳಲ್ಲಿ ಒಂದಾದ ‘ಗಿಲ್ಗಿಮೆಶ್’ ಕೂಡಾ ಜನಪದ ಮಹಾಕಾವ್ಯವೇ ಆಗಿದೆ. ಹೋಮರನ ಈಲಿಯಡ್ ಕೂಡಾ ಹಾಡುಗಬ್ಬವೆ! ಇವೆಲ್ಲವನ್ನು ಗಮನಿಸಿದಾಗ ಜಗತ್ತಿನ ವಸ್ತುಕ ಮಹಾಕಾವ್ಯಗಳೆಲ್ಲವೂ ಮೂಲತಃ ಮೌಖಿಕ ಪರಂಪರೆಗೆ ಸೇರಿದವುಗಳಾಗಿದ್ದು, ನಂತರ ಶಿಷ್ಟಪರಂಪರೆಗೆ ವರ್ಗಾವಣೆಗೊಂಡಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

Wednesday, February 19, 2014

ಸ್ವರ್ಗದಲ್ಲಿರುವ ಬಾರ್ಬೇಕ್ಯು ಎಕ್ಸ್ಪರ್ಟ್ ಕೃಷ್ಣಣ್ಣನ ನೆನಪು ಕಾಡುತ್ತಿದೆ!

ಅಡ್ಡ ಹೆಸರು ಎಂದರೇನು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ, ಇರುವ ಹೆಸರು ಬಿಟ್ಟು, ಬೇರೊಂದು ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸಿದರೆ, ಆ ಹೆಸರನ್ನು ಅಡ್ಡ ಹೆಸರು ಎನ್ನುತ್ತಾರೆ. ಮಾವಿನ ಮರಕ್ಕೆ ಹಬ್ಬಿದ ಬಂದಳಿಕೆ, ಮಾವಿನ ಮರವನ್ನೇ ಮರೆಸುವಂತೆ, ಈ ಅಡ್ಡ ಹೆಸರುಗಳು ನಿಜ ಹೆಸರುಗಳನ್ನೇ ಮರೆಸಿಬಿಡುತ್ತವೆ. ಭಾರತಕ್ಕೆ ಇಂಡಿಯಾ ಅಡ್ಡ ಹೆಸರು ಎಂಬುದು ನನ್ನ ಸ್ನೇಹಿತರೊಬ್ಬರ ವಾದ. ಮೊನ್ನೆ ನನ್ನ ಮಗಳ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬನ ಅಮ್ಮ ನನಗೆ ಫೊನ್ ಮಾಡಿ ‘ಸಾರ್ ಇಂಡಿಯಾ ಭಾರತ ಬೇರೆ ಬೇರೆಯೇ? ಅಥವಾ ಎರಡೂ ಒಂದೆಯೇ? ಇಲ್ಲಿ ನನ್ನ ಮಗ ಅವೆರಡೂ ಬೇರೆ ಬೇರೆ ಎನ್ನುತ್ತಿದ್ದಾನೆ’ ಎಂದು ಕೇಳಿದ್ದರು. ಬಿಡಿ ಆ ವಿಷಯ. ಒಟ್ಟಾರೆ ಪ್ರತಿಯೊಂದು ಅಡ್ಡ ಹೆಸರಿನ ಹಿಂದೆ ಒಂದು ಸೃಜನಶೀಲ ಮನಸ್ಸು ಕೆಲಸ ಮಾಡಿರುತ್ತದೆ ಎಂದರೆ ನೀವು ನಂಬಲೇ ಬೇಕು. ಒಂದೊಂದು ಅಡ್ಡ ಹೆಸರಿನ ಹಿಂದೆಯೂ ಒಂದೊಂದು ಕಥೆಯೂ ಇರುತ್ತದೆ. ಈ ಹೇಳಿಕೆಗೆ ಸಾಕ್ಷಿಯೇ ಕೆಳಗಿನ ಕಥೆಗಳು.
ನಮ್ಮ ಭಾವನವರ ಊರಿನಲ್ಲಿ ಒಬ್ಬನಿದ್ದ. ಅವನನ್ನು ಬಾಲಕರಾದಿಯಾಗಿ ಎಲ್ಲರೂ ‘ನಾಯಿನೆಕ್ಕ’ ಎಂದೇ ಕರೆಯುತ್ತಿದ್ದರು. ಆ ಹೆಸರು ಕೇಳುವುದಕ್ಕೇ ವಿಚಿತ್ರವೂ, ಅದಕ್ಕಿರುವ ಅರ್ಥಗಳನ್ನು ಯೋಚಿಸಿದಾಗ ಅಸಹ್ಯವೂ ಆಗುತ್ತಿತ್ತು. ಈತ ನಾಯಿಯನ್ನು ನೆಕ್ಕಿದ್ದಿರಬಹುದು ಎಂದುಕೊಂಡಿದ್ದೆ ನಾನು. ನಾಯಿನೆಕ್ಕನ ನಿಜನಾಮವೇನೆಂದು ತಿಳಿದುಕೊಳ್ಳುವ ಕುತೂಹಲದಿಂದ ಒಂದೆರಡು ಹುಡುಗರನ್ನು ಕೇಳಿದೆ. ಅವರು ನಾಯಿನೆಕ್ಕ ಎಂಬುದೇ ಆತನ ಹೆಸರು ಎಂದುಬಿಟ್ಟರು. ಇರಲಾರದು ಅನ್ನಿಸಿ, ಆತನನ್ನೇ ಒಂದು ದಿನ ನಾನು ಕೇಳಿದೆ. ನಾನು ಕೇಳಿದ ಸಮಯ ಸರಿಯಿರಲಿಲ್ಲವೇನೊ, ಆತ ಸ್ವಲ್ಪ ಕುಡಿದಿದ್ದನೋ ಏನೊ, ‘ನನ್ನ ಹೆಸರು ನಾಯಿನೆಕ್ಕ. ಎಲ್ಲರೂ ಹಾಗೇ ಕರೆಯುತ್ತಾರೆ. ನೀನೂ ಹಾಗೇ ಕರಿ’ ಎಂದ. ಅಷ್ಟಕ್ಕೆ ಬಿಡದೆ, ಅಲ್ಲಿ ನನಗೆ ಪರಿಚಿತರಾಗಿದ್ದ ಒಬ್ಬ ಹಿರಿಯರನ್ನು ಕೇಳಿದೆ. ಅವರು ‘ಅಯ್ಯೋ ಅದೊಂದು ಕಥೆ’ ಎಂದರು. ನನಗೆ ಬೇಕಾಗಿದ್ದುದು ಅದೇ ಕಥೆ ತಾನೇ!
ಈ ನಾಯಿನೆಕ್ಕನಿಗೆ ಮನೆಯವರು ಇಟ್ಟ ಹೆಸರು ಸಣ್ತಮ್ಮನೊ ಸಣ್ದಿಮ್ಮನೊ ಇರಬೇಕು. ಈಗ ಅದೂ ಮರೆತು ಹೋಗಿದೆ. ಈತ, ಬಹಳ ಹಿಂದೆ ಸಂತೆಯಲ್ಲಿ ರಾಗಿ ವ್ಯಾಪಾರ ಮಾಡುವ ಸಾಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸಂತೆ ವಾರಕ್ಕೊಂದು ದಿನ ಪ್ರತಿ ಗುರುವಾರ ನಡೆಯುತ್ತಿತ್ತು. ಗುರುವಾರದ ದಿನ ಆತನಿಗೆ ಕೈತುಂಬಾ ಸಂಪಾದನೆ. ಸಾಬರು ಕೊಡುತ್ತಿದ್ದ ಕೂಲಿಯಲ್ಲದೆ, ಆತ ತೂಕಕ್ಕೆ ಹೊರುತ್ತಿದ್ದ ಪ್ರತೀ ಚೀಲದಿಂದ ಒಂದೊಂದು ಬೊಗಸೆ ರಾಗಿ ಸಂಗ್ರಹಿಸುತ್ತಿದ್ದ. ಪಾಪ ರೈತರು ‘ಅಯ್ಯೊ ಒಂದು ಬೊಗಸೆಯಲ್ಲವಾ’ ಎಂದು ಸುಮ್ಮನಾಗುತ್ತಿದ್ದರು. ಸಂಜೆಯ ಹೊತ್ತಿಗೆ ಅದೇ ಸುಮಾರು ಅರ್ಧ ಚೀಲದಷ್ಟು ರಾಗಿಯಾಗುತ್ತಿತ್ತು. ಅದನ್ನೂ ಆ ಸಾಬರಿಗೇ ಮಾರಿ, ಬಂದ ಹಣದಲ್ಲಿ ಮನೆಗೆ ವಾರಕ್ಕಾಗವಷ್ಟು ಸಾಮಾನು ಕೊಂಡು, ಹೆಂಡತಿಯ ಜೊತೆಯಲ್ಲಿ ಕಳುಹಿಸಿ, ಉಳಿದ ದುಡ್ಡಿನಲ್ಲಿ ಚೆನ್ನಾಗಿ ಕುಡಿದು ತೂರಾಡುತ್ತಾ ತಡರಾತ್ರಿ ಮನೆಗೆ ಬರುವ ಅಭ್ಯಾಸ ಈತನದು. ಒಂದು ದಿನ ಅದೇ ರೀತಿ, ಕುಡಿದು ಬರುವಾಗ, ಹೆಚ್ಚು ಕುಡಿದಿದ್ದರಿಂದಲೂ ಅಥವಾ ಕಳ್ಳಭಟ್ಟಿ ಸೇರಿದ್ದರಿಂದಲೊ ರಸ್ತೆ ಬದಿಯಲ್ಲಿ ಬಿದ್ದುಬಿಟ್ಟಿದ್ದ. ಸಿಕ್ಕಾಪಟ್ಟೆ ವಾಂತಿಯನ್ನೂ ಮಾಡಿಕೊಂಡಿದ್ದ.
ದಾರಿಯಲ್ಲಿ ಹೋಗುವವರೆಲ್ಲಾ ಆ ದುರ್ವಾಸನೆಗೆ ಮೂಗು ಮುಚ್ಚಿ ಓಡಾಡುತ್ತಿದ್ದರೆ, ಒಂದು ನಾಯಿ ಮಾತ್ರ, ಸಂತೋಷದಿಂದಲೇ ವಾಂತಿಯನ್ನು ನೆಕ್ಕುತ್ತಿತ್ತು. ಅದು ಹಾಗೇ ನೆಕ್ಕುತ್ತಾ ನೆಕ್ಕುತ್ತಾ ಆತನ ಮುಖ ಮೂತಿಯೆಲ್ಲವನ್ನೂ ನೆಕ್ಕಿ ಸ್ವಚ್ಛಗೊಳಿಸುವ ಕೆಲಸವನ್ನೂ ನಿರ್ವಂಚನೆಯಿಂದ ಮಾಡಿತು. ಅದನ್ನು ಗಮನಿಸಿದವರೆಲ್ಲಾ ಅಸಹ್ಯಸಿಕೊಂಡರೇ ಹೊರತು ಇನ್ನೇನನ್ನೂ ಮಾಡಲಿಲ್ಲ. ಇದಾದ ಕೆಲವು ದಿನಗಳ ನಂತರ ಆತನಿಗೂ ಇನ್ನೊಬ್ಬನಿಗೂ ಮಾರಾಮಾರಿ ಜಗಳ. ಇಬ್ಬರೂ ಕೈಕೈ ಮಿಲಾಯಿಸಿ ಹೊಡೆದಾಡದಿದ್ದರೂ ಅಪಾದಸೊಂಟದ ತನಕ ಬಯ್ಗುಳಗಳನ್ನು ಪ್ರಯೋಗಿಸಿ ಸುಮಾರು ಹೊತ್ತು ಜಗಳವಾಡಿದರು. ಹಳ್ಳಿಯ ಕಡೆ ಕೈ ಕೈ ಮಿಲಾಯಿಸಿ ಜಗಳವಾಡುವವರೆಗೆ ಯಾರೂ ಜಗಳ ಬಿಡಿಸುವ ಕೆಲಸಕ್ಕೆ ಹೋಗುವುದಿಲ್ಲ. ಬಿಟ್ಟಿ ಮನರಂಜನೆಯನ್ನು ಯಾರು ಕಳೆದುಕೊಳ್ಳುತ್ತಾರೆ ಹೇಳಿ? ಇಬ್ಬರಿಗೂ ತಮ್ಮಲ್ಲಿದ್ದ ಬಯ್ಗುಳಗಳ ಸ್ಟಾಕು ಖಾಲಿಯಾದ, ಕಾರಣ ಹೊಸ ಹೊಸ ಬಯ್ಗಳಗಳ ಅನ್ವೇಷಣೆಯಲ್ಲಿ ಅವರ ಮನಸ್ಸು ತೊಡಗಿಬಿಟ್ಟಿತ್ತು. ಅಂತಹ ಸಂದರ್ಭದಲ್ಲಿಯೇ ಆ ಎದುರಾಳಿ, ಮುಖವನ್ನು ನಾಯಿ ನೆಕ್ಕುತ್ತಿದ್ದ ಸಂದರ್ಭವನ್ನು ಪ್ರಸ್ತಾಪಿಸಿ ‘ನಾಯಿನೆಕ್ಕ’ ಎಂದು ಬಯ್ದುಬಿಟ್ಟ. ಆ ಮಾತು ಸುಮಾರು ನಲವತ್ತು ವರ್ಷಗಳಾದರೂ ಇನ್ನೂ ನಿಂತಿದೆ ಎಂದರೆ, ಜನಪದ ಸೃಜನಶೀಲತೆಯ ಘಟ್ಟಿತನವಲ್ಲದೆ ಇನ್ನೇನು?

ಇನ್ನೊಂದು ಅಡ್ಡ ಹೆಸರಿನ ಕಥೆ, ಆ ಅಡ್ಡ ಹೆಸರೇ ಮನೆತನದ ಹೆಸರೂ ಆಗುವಂತದ್ದು. ನಾವು ಮಿಡಲ್ ಸ್ಕೂಲಿಗೆ ಹೋಗುತ್ತಿದ್ದ ಊರಿನಲ್ಲಿ ಒಬ್ಬ ಹುಡಗನಿದ್ದ. ಮೇಷ್ಟ್ರು ಅಟೆಂಡೆನ್ಸ್ ಕರೆಯುವಾಗ ‘ರಮೇಶ’ ಎಂದು ಆತನನ್ನು ಕೂಗುತ್ತಿದ್ದರು. ಆದರೆ ಬೇರೆ ಸಮಯದಲ್ಲಿ ಅವರನ್ನೂ ಸೇರಿಸಿದಂತೆ ಉಳಿದವರೆಲ್ಲಾ ‘ಹಂದಿವಡೆ’ ಎಂದು ಕರೆಯುತ್ತಿದ್ದರು! ಆ ಹುಡುಗನ ಅಪ್ಪ, ಅಜ್ಜರಿಗೂ ಹಂದಿವಡೆ ಎಂಬ ಹೆಸರೇ ಇದ್ದವು! ಊರೊಳಗೆ ಜನ ಆ ಹುಡುಗನ ಮನೆಯವರನ್ನು ‘ಹಂದಿವಡೆ’ ಮನೆಯವರು ಎಂದೇ ಕರೆಯುತ್ತಿದ್ದರು. ಇದೇನು ಹಂದಿವಡೆ ಎಂದು ನನಗೆ ಕುತೂಹಲ. ಬಹಳ ದಿನಗಳ ನಂತರ ನನಗೆ ತಿಳಿದ ಕಥೆಯಿದು. ಆ ಊರಿನವರೆಲ್ಲಾ ಮಾಂಸಾಹಾರಿಗಳಾದರೂ ಅದು ನಿತ್ಯದ ಆಹಾರವಾಗಿರಲಿಲ್ಲ. ಅದು ಕೇವಲ ಹಬ್ಬ ಹುಣ್ಣಿಮೆಗಳಿಗೆ, ಮನೆಗೆ ಯಾರಾದರೂ ನೆಂಟರು ಬಂದಾಗ ಮಾತ್ರ ನಡೆಯುತ್ತಿತ್ತು. ಹೀಗೆ ಊರಿನಲ್ಲಿ ಕುರಿ, ಹೋತ, ಹಂದಿಗಳನ್ನು ಕತ್ತರಿಸಿದಾಗ ಸೇರುಗಟ್ಟಲೆ ಮಾಂಸ ಕೊಂಡು ವಾರಪೂರ್ತಿ ಉಳಿಕೆ ಮಾಡಿಕೊಂಡು ತಿನ್ನುವ ಅಭ್ಯಾಸ ಕೆಲವರಿಗಿತ್ತು. ಈ ರಮೇಶನ ಮನೆಯವರಿಗೆ ಹಂದಿಮಾಂಸವೆಂದರೆ ತುಂಬಾ ಇಷ್ಟ. ಊರಿನಲ್ಲಿ ಹಂದಿ ಕಡಿದರೆಂದರೆ ಐದಾರು ಸೇರು ಮಾಂಸ ಅವರಿಗೇ ಬೇಕಿತ್ತು. ಇಲ್ಲ ಒಬ್ಬರಿಗೆ ಇಂತಿಷ್ಟೇ ಕೊಡುವುದು ಎಂದು ಮೊದಲೇ ನಿರ್ಧಾರವಾಗಿದ್ದರೆ, ಸೂತಕದ ಕಾರಣದಿಂದಲೊ, ದೇವರಪೂಜೆ ಹರಕೆ ಮತ್ತಾವ ಕಾರಣದಿಂದಲೊ ಆ ಬಾರಿ ಮಾಂಸ ಬೇಡ ಎಂದು ಹೇಳಬಹುದಾದ ಮನೆಗಳನ್ನು ಪತ್ತೆ ಹಚ್ಚಿ ಅವರ ಮನೆಯವರ ಮಾಂಸವನ್ನೂ ರಮೇಶನ ಮನೆಯವರೇ ಕೊಂಡುಕೊಳ್ಳುತ್ತಿದ್ದರಂತೆ.
ಇವರೇಕೆ ಇಷ್ಟೊಂದು ಹಂದಿ ಮಾಂಸ ಕೊಂಡು ಕೊಳ್ಳುತ್ತಾರೆ ಎಂದು ಹುಡುಕಿ ಹೊರಟವರು ಕಂಡಿದ್ದು, ಅವರ ಮನೆಯವರು, ಮಾಂಸದ ಅಡುಗೆ ಮಾಡುವಾಗ ಸಂಗ್ರಹಿಸುತ್ತಿದ್ದ ಮಡಕೆಗಟ್ಟಲೆ ಜಿಡ್ಡು. ಹಂದಿ ಮಾಂಸದ ಜಿಡ್ಡನ್ನು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿ ಔಷಧಿಗೆಂದು ಬಳಸುವುದು ಎಲ್ಲರಿಗೂ ಗೊತ್ತಿತ್ತು. ಎತ್ತುಗಳ ಹೆಗಲು ನೋವಿಗೆ ಅದು ರಾಮಭಾಣ ಎಂದು ರೈತರಿಗೆಲ್ಲಾ ಗೊತ್ತಿದ್ದ ವಿಷಯವೆ. ಆದರೆ ಅದನ್ನು ಮಡಕೆಗಟ್ಟಲೆ ಏಕೆ ಸಂಗ್ರಹಿಸುತ್ತಾರೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿತ್ತು. ಕೆಲವು ವರ್ಷಗಳ ನಂತರವೇ ಗೊತ್ತಾಗಿದ್ದು, ಹಾಗೆ ಸಂಗ್ರಹಿಸಿದ್ದ ಜಿಡ್ಡನ್ನು ‘ವಡೆ’ ಬೇಯಿಸಲು ಬಳಸುತ್ತಾರೆ ಎಂದು! (ರಾಮನಗರದ ಒಂದು ಕಡೆ, ಸಂಜೆಯ ವೇಳೆ ವಡೆ ಮಾಡುತ್ತಾರೆ. ಹೋದಾಗ ಮರೆಯದೆ ತಿಂದು ಬನ್ನಿ ಎಂದು ಸ್ನೇಹಿರೊಬ್ಬರು ಹೇಳಿದ್ದರು. ನಾನು ಒಮ್ಮೆ ತಿಂದು ಬಹಳ ರುಚಿಯಾಗಿದ್ದುದರಿಂದ ಒಂದಷ್ಟನ್ನು ಪಾರ್ಸೆಲ್ ಮಾಡಿಸಿಕೊಂಡು ತಂದಿದ್ದೆ. ಅಷ್ಟೊಂದು ರುಚಿಗೆ ಕಾರಣ ಏನೆಂದು ಸ್ನೇಹಿತರಲ್ಲಿ ವಿಚಾರಿಸಿದಾಗ ತಿಳಿದಿದ್ದು, ವಡೆಗೆ ಒಣ ಸೀಗಡಿಯನ್ನು ಹುರಿದು ಪುಡಿ ಮಾಡಿ ಬಳಸುತ್ತಾರೆ ಎಂಬ ವಿಷಯ! ಅದ್ಭುತ ಸಂಶೋಧನೆ ಅಲ್ಲವೆ?)  ಹಂದಿಯ ಕೊಬ್ಬಿನಿಂದ ವಡೆ ಬೇಯಿಸುವ ಸಂಶೋಧನೆ ಮಾಡಿದ ಆ ಮನೆತನಕ್ಕೆ, ಪಾಪ ಸಲ್ಲಬೇಕಾದ ಗೌರವ ಸಲ್ಲದೆ, ಸಿಕ್ಕಿದ್ದು ‘ಹಂದಿವಡೆ’ ಎಂಬ ಅಡ್ಡ ಹೆಸರು. ಅನ್ಯಾಯವಲ್ಲವೆ ಅದು?
ಇನ್ನೊಂದು ಕಥೆ ಕೇಳಿ ಇಲ್ಲ. ನಮ್ಮ ಊರಿನಲ್ಲೇ ಒಂದು ಕುಟುಂಬಕ್ಕೆ ‘ಎಪ್ಪತ್ತೈದು ಇಲಿ’ ಎಂಬ ಅಡ್ಡ ಹೆಸರಿತ್ತು. ಸ್ಕೂಲ್ ಮಕ್ಕಳು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ ‘ಸೆವೆಂಟಿಫೈವ್ ರ್ಯಾಟ್ಸ್’ ಎಂದೂ ಕರೆಯುತ್ತಿದ್ದರು. ಅವರ ಮನೆಯವರೆಲ್ಲರೂ ದೃಢ ಮೈಕಟ್ಟಿನವರು. ಕೆಲಸ ಮಾಡುವುದರಲ್ಲಿ ತಿನ್ನುವುದರಲ್ಲಿ ಎಲ್ಲದರಲ್ಲೂ ಮುಂದು. ಮೂವರು ಮಾಡುವ ಕೆಲಸವನ್ನು ಒಬ್ಬೊಬ್ಬರೇ ಮಾಡುತ್ತಿದ್ದರು. ಒಬ್ಬ ಒಂದು ಗಾಡಿ ಮಣ್ಣು ತುಂಬಲು ಅರ್ಧ ಗಂಟೆ ತೆಗೆದುಕೊಂಡರೆ, ಆ ಮನೆಯವನೊಬ್ಬ ಹತ್ತೇ ನಿಮಿಷದಲ್ಲಿ ತುಂಬಿಬಿಡುತ್ತಿದ್ದ. ಒಮ್ಮೆ, ಸೂರ್ಯ ಗ್ರಹಣವಿದ್ದ ದಿನ, ನಮ್ಮ ತೋಟದಲ್ಲಿ ಕೆಲಸ ನಡೆಯುತ್ತಿದ್ದರೆ, ಅವರ ಮನೆಯಲ್ಲಿ ಎಲ್ಲರೂ, ಮಕ್ಕಳು ಮರಿ, ದನಕರು, ಕುರಿಕೋಳಿ ಎಲ್ಲವೂ ಮನೆಯೊಳಗೆ ಸೇರಿಬಿಟ್ಟಿದ್ದರು. ಊಟ ತಿಂಡಿ ಏನೂ ಇಲ್ಲ. ಬೆಳಗಿನಿಂದ ಏನೂ ತಿಂದಿಲ್ಲ ಕುಡಿದೂ ಇಲ್ಲ. ಗ್ರಹಣ ಮುಗಿದ ಮೇಲೆ, ಕೆಲಸದ ನಿಮಿತ್ತ ಅವರ ಮನೆಗೆ ಹೋಗಿದ್ದೆ. ಮಕ್ಕಳು ಮರಿ ಎಲ್ಲಾ ಸೇರಿ ಏಳೆಂಟು ಜನರಿದ್ದ ಮನೆಯಲ್ಲಿ, ಬೆಳಗಿನಿಂದ ಉಪವಾಸ ಇದ್ದುದರಿಂದ ತಕ್ಷಣ ತಿನ್ನುವುದಕ್ಕೆ ಉಪ್ಪಿಟ್ಟು ಮಾಡುವ ಕೆಲಸ ನಡೆಯುತ್ತಿತ್ತು. ಅದಕ್ಕೆ ಅವರು ಹುರಿದು ಸಿದ್ಧಪಡಿಸಿಟ್ಟುಕೊಂಡಿದ್ದ ರೆವೆ ಎಷ್ಟು ಗೊತ್ತೆ? ಕೇವಲ ಎರಡು ಕೇಜಿ! ತುರಿದಿಟ್ಟುಕೊಂಡಿದ್ದ ತೆಂಗಿನಕಾಯಿ ಕೇವಲ ನಾಲ್ಕು!
ಇನ್ನೊಮ್ಮೆ ನಮ್ಮೆರಡು ಮನೆಯವರು ಆಲೋಗೆಡ್ಡೆ ಬೆಳೆದಿದ್ದೆವು. ಅದನ್ನು ಮಾರಲು ಬೆಂಗಳೂರಿನ ಮಾರುಕಟ್ಟೆಗೆ ತರಬೇಕಾಗಿತ್ತು. ನಾನಾಗಲೇ ಬೆಂಗಳೂರಿಗೆ ಒಂದೆರಡು ಭಾರಿ ಬಂದಿದ್ದೆನಾದ್ದರಿಂದ ನನ್ನೊಂದಿಗೆ ಆ ಮನೆಯ ಅಣ್ಣತಮ್ಮ ಇಬ್ಬರು, ಮೊದಲ ಬಾರಿಗೆ ಬೆಂಗಳೂರಿಗೆ ಬಂದರು. ಆಲೋಗೆಡ್ಡೆ ಎಲ್ಲಾ ಹರಾಜಾಗಿ, ಮಾರಾಟವಾಗಿ ಕೈಗೆ ದುಡ್ಡು ಬರುವಷ್ಟರಲ್ಲಿ ಮಧ್ಯಾಹ್ನ ಎರಡು ಗಂಟೆ. ಯಶವಂತಪುರ ಮಾರುಕಟ್ಟೆಯಿಂದ ಮೆಜೆಸ್ಟಿಕ್ಕಿಗೆ ಬಂದು ಹೋಟೆಲಿನಲ್ಲಿ ಕುಳಿತುಕೊಳ್ಳುವುದರಲ್ಲಿ ಮೂರು ಗಂಟೆ. ಮೂವರಿಗೂ ಹೊಟ್ಟೆ ಹಸಿದು ತಾಳ ಹಾಕುತ್ತಿತ್ತು. ಮೂರು ಟೋಕನ್ ಕೊಂಡು, ಟೇಬಲ್ಲಿನಲ್ಲಿ ಕುಳಿತಿದ್ದೆವು. ಸರ್ವರ್ ಊಟದ ತಟ್ಟೆ ಹಿಡಿದು ನಮಗೆ ಹತ್ತಿರವಾದಂತೆ, ತಮ್ಮನ ಮುಖ ಕಳೆಗುಂದತೊಡಗಿತು. ನಾನು ಗಮನಿಸುತ್ತಲೇ ಇದ್ದೆ. ತಟ್ಟೆ ಟೇಬಲ್ಲಿನ ಮೇಲೆ ಇಟ್ಟ ತಕ್ಷಣ ಒಂದೇ ದೃಷ್ಟಿಯಲ್ಲಿ ಇಡೀ ತಟ್ಟೆಯನ್ನು ಅವಲೋಕಿಸಿ, ‘ನನಗೆ ಇನ್ನೊಂದು ಊಟ ಆರ್ಡರ್ ಮಾಡಿಬಿಡಪ್ಪ’ ಎಂದು ತಮ್ಮ ನನಗೆ ಆರ್ಡರ್ ಮಾಡಿಬಿಟ್ಟ!

ಕ್ಷಮೆಯಿರಲಿ ಮಹಾಶಯರೆ. ಅಡ್ಡ ಹೆಸರಿನ ಕಥೆಯನ್ನು ಉದ್ದಕ್ಕೆ ಬಳೆಸಿದ್ದಕ್ಕೆ, ಕಥೆ ಉದ್ದ ಹಾದಿ ಹಿಡಿದಿದ್ದಕ್ಕೆ. ರಾಗಿ ಹೊಲದಲ್ಲಿ, ಮೆದೆಯ ಕೆಳಗೆ ಹಿಡಿದು, ಯಾವುದೋ ಹಳ್ಳಿಯ ಮನೆಯೊಂದರ ಅಡುಗೆ ಮನೆಯ ಒಲೆಯ ಮೇಲೆ ಸಾರಾಗಿ ಹೋಗಿದ್ದ ಎಪ್ಪತ್ತೈದು ಇಲಿಯ ಕಥೆ ದಾರಿತಪ್ಪಿ ಬೆಂಗಳೂರಿನ ಮೆಜೆಸ್ಟಿಕ್ಕಿನ ಹೋಟೆಲ್ಲಿನ ಟೇಬಲ್ಲಿಗೆ ಬಂದಿದ್ದಕ್ಕೆ. ನಮ್ಮ ಹಳ್ಳಿಗಳ ಕಡೆ, ಸುಗ್ಗಿಯ ಸಮಯದಲ್ಲಿ, ರಾಗಿಯ ಪೈರನ್ನು ಕತ್ತರಿಸಿ, ಕಂತೆಗಳನ್ನಾಗಿ ಕಟ್ಟಿ ಅದು ಚೆನ್ನಾಗಿ ಒಣಗಲೆಂದು ಸಣ್ಣ ಸಣ್ಣ ಮೆದೆಗಳ ಅಥವಾ ಗುಪ್ಪೆಗಳ ರೂಪದಲ್ಲಿ ಹೊಲಗಳಲ್ಲಿ ನೆಲದ ಮೇಲೆಯೇ ಒಟ್ಟಿರುತ್ತಾರೆ. ಅವನ್ನು ಒಂದು ದಿನ ಸಾಗಿಸಿ, ಕಣದಲ್ಲಿ, ಅಟ್ಟಣಿಗೆ ಮಾಡಿ, ಅದರ ಮೇಲೆ ದೊಡ್ಡ ಮೆದೆಯ ರೂಪದಲ್ಲಿ ಒಟ್ಟುತ್ತಾರೆ. ಹೊಲದ ಮೆದೆಗಳಿಗೆ ತೋಡ (ಬೆಳ್ಳಿಲಿ ಎನ್ನುತ್ತಾರೆ. ಬಿಳಿಯ+ಇಲಿ) ಬಿದ್ದಿರುತ್ತವೆ. ಅಂದರೆ, ನೆಲದಲ್ಲಿಯೇ ಸುರಂಗ ತೋಡಿ, ರಾಗಿ ತೆನೆಗಳನ್ನು ಸಾಗಿಸಿ ಸಂಗ್ರಹಿಸಿಟ್ಟುಕೊಂಡಿರುತ್ತವೆ. ಭತ್ತದ ಗದ್ದೆಗಳಲ್ಲೂ ಹೀಗೆ ಮಾಡುತ್ತವೆ. ಹಿಂದೊಮ್ಮೆ ತೀರಾ ಬರಗಾಲ ಬಂದಾಗ, ಬಿತ್ತನೆಗೂ ಸಹ ರಾಗಿಯಿಲ್ಲದೆ, ಜನ ಇಂತಹ ಇಲಿ ಬಿಲಗಳನ್ನು ಅಗೆದು ಬೀಜಕ್ಕೆ ರಾಗಿ ಸಂಗ್ರಹಿಸಿದ್ದರೆಂದು ನನ್ನ ಅಜ್ಜಿ ಹೇಳುತ್ತಿದ್ದರು. ತೋಡಗಳನ್ನು ಹಿಡಿಯುವುದು ಸುಲಭ. ಹೊರಹೋಗುವ ಬಿಲದ ದಾರಿಗಳನ್ನು ಮುಚ್ಚಿ ಎರಡನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಒಂದರಲ್ಲಿ ಹೊಗೆ ಹಾಕಿದರೆ, ಇನ್ನೊಂದರಲ್ಲಿ ಇಲಿಗಳು ಹೊರಬರುತ್ತವೆ. ಅವನ್ನು ಹಿಡಿದು, ಅವುಗಳ ಬಾಲವನ್ನು ಬಲವಾಗಿ ಜಗ್ಗಿದರೆ ಸಾಕು ಸತ್ತೇ ಹೋಗುತ್ತವೆ! ಕೆಲವರು ಬಿಲಕ್ಕೆ ನೀರು ತುಂಬಿಸುತ್ತಾರೆ. ಹೊಲದ ಕೊಯ್ಲಿನ ಸಮಯದಲ್ಲಿ ಅಲೆಮಾರಿಗಳಾದ ಹಕ್ಕಿಪಿಕ್ಕಿಗಳು ಇಲಿಗಳನ್ನು ಹಿಡಿಯುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ.
ಅದೇನೆ ಇರಲಿ. ಕೆಲವರು ಈ ಬೆಳ್ಳಿಲಿಗಳನ್ನು ಬೇಟೆಯಾಡಿ, ಸ್ವಚ್ಛಗೊಳಿಸಿ, ಅದರ ಒಡಲನ್ನೆಲ್ಲಾ ಖಾಲಿ ಮಾಡಿ, ಒಳಗೆ ಮಸಾಲೆ ತುಂಬಿ, ಬೆಂಕಿಯಲ್ಲಿ ಸುಟ್ಟು, ಮೇಲೆ ಮತ್ತೆ ಮಸಾಲೆ ಸವರಿ, ಮತ್ತೆ ಸುಟ್ಟು (ಬಾರ್ಬೇಕ್ಯು!) ತಿನ್ನುತ್ತಾರೆ. ಅದರ ಮಾಂಸ ಅತ್ಯಂತ ರುಚ್ಚಿಯದ್ದಾಗಿರುತ್ತದೆ. ನಮ್ಮ ಮನೆಯಲ್ಲಿದ್ದ ಕೃಷ್ಣಣ್ಣ ಎಂಬುವವನ ಸಹವಾಸದಿಂದ, ಕುತೂಹಲಕ್ಕಾಗಿ ನಾನು ತಿಂದಿರುವೆನಾದ್ದರಿಂದ ಅಧಿಕೃತವಾಗಿ ಈ ಮಾತು ಹೇಳುತ್ತಿದ್ದೇನೆ. ಅದರಷ್ಟು ರುಚಿಕಟ್ಟಾದ ಯಾವುದೇ ಖಾದ್ಯವನ್ನೂ ಮನೆಯಲ್ಲಾಗಲೀ, ಹೋಟೆಲ್ಲಿನಾಗಲೀ (ಮಾಂಸಾಹಾರ ಮತ್ತು ಸಸ್ಯಹಾರ ಯಾವುದರಲ್ಲೂ) ನಾನು ಇದುವರೆಗೆ ತಿಂದಿಲ್ಲ! ಮೊನ್ನೆ ಮೊನ್ನೆ ಟಿ.ಎಲ್.ಸಿ. ವಾಹಿನಿಯಲ್ಲಿ ಇಲಿ ಬೇಟೆಯಾಡಿ ಈ ರೀತಿ ಸುಟ್ಟು ತಿನ್ನುವುದನ್ನು ನೋಡಿದ ಮೇಲೆ ನನಗೆ, ಸತ್ತು ಸ್ವರ್ಗದಲ್ಲಿರುವ ಬಾರ್ಬೇಕ್ಯು ಎಕ್ಸ್ಪರ್ಟ್ ಕೃಷ್ಣಣ್ಣನ ನೆನಪು ಕಾಡುತ್ತಿದೆ; ಬಾಯಿಯಲ್ಲಿ ನೀರೂರುತ್ತಿದೆ. (ಈ ಕೃಷ್ಣಣ್ಣನ ಬಗ್ಗೆ ‘ಕೃಷ್ಣಾವತಾರ’ ಎಂಬ ಕಥೆಯನ್ನೇ ಬರೆದಿದ್ದೇನೆ. ಅವನಿಗಿದ್ದ ಅಡ್ಡ ಹೆಸರುಗಳದೇ ಒಂದು ಪಟ್ಟಿಯಿದೆ. ಅದೆಲ್ಲವೂ ಆ ಕಥೆಯಲ್ಲಿಯೇ ಬಂದಿರುವುದರಿಂದ, ಹಾಗೂ ‘ತುರಿಸುವಾನಂದ’ ಎಂಬ ಪ್ರಬಂಧದಲ್ಲಿಯೂ ಬಂದಿರುವುದರಿಂದ ಇಲ್ಲಿ ಬೇಡ)
ಇಂತಿಪ್ಪ ಒಂದು ಸಂದರ್ಭದಲ್ಲಿ, ಮೇಲೆ ಹೇಳಿದ ಮನೆತನದ ಹಿರಿಯರು ಯಾರೊ ಒಮ್ಮೆ ಎಪ್ಪತ್ತೈದು ಇಲಿಗಳನ್ನು ಹಿಡಿದರಂತೆ. ಅಷ್ಟೂ ಇಲಿಗಳನ್ನು ಏನು ಮಾಡುವುದು? ಬೇರೆಯವರಿಗೆ ಕೊಡಲು ಮನಸ್ಸಿಲ್ಲ! ಸುಟ್ಟು ತಿಂದರೆ ಒಂದೇ ರುಚಿ. ಅದಕ್ಕೆ ಒಂದಷ್ಟು ಇಲಿಗಳ ಮಾಂಸವನ್ನು ಸೇರಿಸಿ ಸಾರನ್ನೂ ಮಾಡಿ ವಾರಗಟ್ಟಲೆ ಇಟ್ಟುಕೊಂಡು ಸವಿದಿದ್ದರಂತೆ. ಬೆಳ್ಳಿಲಿಗಳನ್ನು ಸುಟ್ಟು ತಿನ್ನುವುದು ಸಾಮಾನ್ಯ ಸಂಗತಿಯಾದರೂ ಅದರಿಂದ ಸಾರು ಮಾಡುವ ಸಂಶೋಧನೆ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದು ಆ ಕುಟುಂಬದವರು ಮಾತ್ರ. ಅದಕ್ಕೆ ಖುಷಿ ಪಡುವ ಬದಲು ಅವರ ಮನೆಯವರಿಗೇ ಎಪ್ಪತ್ತೈದು ಇಲಿ ಎಂದು ಅಡ್ಡ ಹೆಸರು ಇಡುವುದು ಎಷ್ಟು ಸರಿ? ನನಗನ್ನಿಸುತ್ತದೆ, ಎಪ್ಪತ್ತೈದು ಇಲಿ ಎಂಬ ಅಡ್ಡ ಹೆಸರಿನ ಕಿಡಿಗೇಡಿ ಕರ್ತೃ, ನನಗೂ ಒಂದೆರಡನ್ನಾದರೂ ಕೊಡದೆ, ಎಪ್ಪತ್ತೈದನ್ನೂ ಆ ಮನೆಯವರೇ ತಿಂದರಲ್ಲ ಎಂಬ ಹೊಟ್ಟೆಕಿಚ್ಚಿಗೆ ಆ ಅಡ್ಡ ಹೆಸರನ್ನು ಇಟ್ಟಿರಬೇಕು ಎಂದು. ಹೀಗೆ ಇತಿಹಾಸದಲ್ಲಿ ಹುದುಗಿ ಹೋಗಬಹುದಾಗಿದ್ದ ಘಟನೆಗಳನ್ನು ಕೇವಲ ಒಂದೊ ಎರಡೊ ಪದಗಳ ಅಡ್ಡ ಹೆಸರುಗಳ ರೂಪದಲ್ಲಿ ಹಿಡಿದಿಟ್ಟಿರುವ ಜನಪದ ಪ್ರತಿಭೆಗೆ ನಮೋ ಎನ್ನೋಣ. (ನರೇಂದ್ರ ಮೋದಿ ಅಲ್ಲ ಮತ್ತೆ!)