ಹುಟ್ಟಿನಿಂದಲೂ
ನಮ್ಮ ಕಣ್ಣಸೀಮೆಯಿಂದ
ಅತ್ತಿತ್ತ ಅಲುಗಾಡದೆ,
ಕಣ್ಬೊಲವ ಮೀರದೆ
ಆಡಿ, ಬೆಳೆದಿದ್ದ ಮಗಳೀಗ
ಬೆಳೆದು ನಿಂತಿದ್ದಾಳೆ, ಎದೆಯೆತ್ತರ.
ಅವಳು
ಕುಳಿತರೆ ನಿಂತರೆ
ಅವಳಮ್ಮನ ಕಣ್ಣಲ್ಲಿ ತಪ್ಪು,
ಬರುವುದು ತಡವಾದರೆ
ನನ್ನ ಕಣ್ಣಲ್ಲಿ ಆತಂಕ.
ಈಗ
ನಮ್ಮಿಷ್ಟ ಅವಳಿಗೆ ಕಷ್ಟ
ಅವಳಿಷ್ಟ ನಮಗೆ ನಷ್ಟ!
‘ಊರಿನಲ್ಲಿ ಬೀದಿನಾಯಿಗಳು ಹೆಚ್ಚಾಗಿವೆ’
ಪತ್ರಿಕೆಯ ಸುದ್ದಿಗೆ
‘ಹೌದು. ಏಕೋ ಇತ್ತೀಚಿಗೆ
ಬೀದಿನಾಯಿಗಳು ಹೆಚ್ಚಾಗಿವೆ’
ಅವಳಮ್ಮನ ಪ್ರತಿಕ್ರಿಯೆ!
ಮೊನ್ನೆ
ಏಕೋ, ಏನೋ
ಮಾತಿಗೆ ಮಾತು ಬೆಳೆದು
ಮೌನವೇ ಕೆಲಸವಾಗಿ
ಅವರವರ ರೂಮು, ಬೆಡ್ಡು ಸೇರಿ
ಮೌನವನೆ ಉಂಡು, ಕುಡಿದು
ಮೌನವನೆ ಹೊದ್ದು ಮಲಗಿಬಿಟ್ಟೆವು.
ಮೌನಕ್ಕೆ
ಮನೆಯ ಮನಸ್ಸಿನ
ಗೋಡೆ ಬಿರಿಯದಿರುತ್ತದೆಯೆ!?
‘ಗುಡ್ ಮಾರ್ನಿಗ್ ಪಪ್ಪಾ’
ಧ್ವನಿಗೆ, ಮುಸುಕು ಸರಿಸಿ ನಗುವಷ್ಟರಲ್ಲಿ
ಬೆಚ್ಚಿಬಿದ್ದಿದ್ದೆ.
ಐದು ವರ್ಷದ ಹಿಂದಿನ ಹಳೆಯ ಡ್ರೆಸ್
ತೊಟ್ಟ ಮಗಳ ಕಂಡು.
ಗುಂಡಿ ಕಿತ್ತಿದೆ, ಹೊಲಿಗೆ ಬಿಚ್ಚಿದೆ
ಬಿಗಿಯಾಗಿದೆ,
ಅವಳ ಗಾತ್ರವ ಗಂಟುಮೂಟೆ ಕಟ್ಟಿದಂತೆ.
ಕಾಫಿ ಹಿಡಿದು ಬಂದ
ಅವಳಮ್ಮನ ಕಣ್ಣಲ್ಲಿ ಬೆಂಕಿ
‘ಇಷ್ಟು ಬಿಗಿಯಾಗಿರುವ ಹಳೆಯ ಡ್ರೆಸ್ ಏಕೆ?’
ಎಂಬ ಪ್ರಶ್ನೆ ಕಿಡಿ!
‘ನನ್ನ ಮೈಬೆಳೆದಂತೆ ಮನಸ್ಸೂ ಬೆಳೆದಿದೆ, ಅಮ್ಮಾ!’ ಮಗಳ ಉತ್ತರ
ಕಾಫಿ ಹೀರುವ ಶಬ್ದ;
ಉಳಿದಂತೆ ಎಲ್ಲವೂ ನಿಶ್ಯಬ್ದ!
2 comments:
ya thanks sir.... can i know about you...
ನಮಸ್ಕಾರ ಸರ್. ಎಲ್ಲೆಂಲ್ಲಿಂದಲೋ ಸುತ್ತಿ ಬಂದೆ ನಿಮ್ಮನೆಗೆ. ನಿಮ್ಮೊಂದೊಂದ್ ಮಾತೂ ಚೆನ್ನಾಗಿವೆ. ಇಷ್ಟವಾಗಿವೆ. ಅದ್ರಲ್ಲೂ ಈ ಪೋಸ್ಟ್...
Post a Comment