Friday, February 27, 2009

ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನವನ್ನು ವಿರೋಧಿಸುವುದು ಏಕೆ?

ಕರ್ನಾಟಕ ರಾಜ್ಯ ಸರ್ಕಾರವು ‘ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಶ್ವವಿದ್ಯಾಲಯಗಳು ಮತ್ತು ಶಾಲಾಕಾಲೇಜುಗಳನ್ನೇ ವೇದಿಕೆಯಾಗಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದು ಉನ್ನತ ಶಿಕ್ಷಣ ಸಚಿವರೂ ಮುಖ್ಯಮಂತ್ರಿಗಳೂ ಒಟ್ಟಾರೆ ಸರ್ಕಾರವೇ ಮತ್ತೆ ಮತ್ತೆ ಅದನ್ನು ಸಪಷ್ಟಪಡಿಸುತ್ತಿದೆ. ಆದರೂ ಅಭಿಯಾನದ ಘೋಷಣೆಯಾದ ದಿನದಿಂದಲೇ ಒಂದು ವರ್ಗದಿಂದ ಇದಕ್ಕೆ ತೀವ್ರತರವಾದ ವಿರೋಧ ವ್ಯಕ್ತವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಪಕ್ಷಗಳು ಅದನ್ನು ವಿರೋಧಿಸುತ್ತಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಪರಿಸರವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬುದು ಅದರ ಆರೋಪ. ಹಾಗೇ ಹಲಕೆಲವು ವಿಚಾರವಾದಿಗಳು ಭಯೋತ್ಪಾದನಾ ವಿರೋಧಿ ಅಭಿಯಾನ ಒಂದು ವರ್ಗದವರನ್ನು ಗುರಿಯಾಗಿರಿಸಿಕೊಂಡಿದೆ ಎಂದೂ ಆರೋಪ ಮಾಡಿದ್ದಾರೆ. ಆದೇನೇ ಇರಲಿ. ಮೇಲ್ನೋಟಕ್ಕೆ ಸರ್ಕಾರದ ಕೆಲಸ ಒಳ್ಳೆಯ ಕೆಲಸವಾಗಿ ಕಂಡರೆ ಅದು ನಮ್ಮ ತಪ್ಪಲ್ಲ. ಆದರೆ ಅದರ ಬಗೆಗಿರುವ ವಿರೋಧಗಳನ್ನು - ರಾಜಕೀಯಕ್ಕಾಗಿ ವಿರೋಧಿಸುವುದನ್ನು ಹೊರತುಪಡಿಸಿ - ಗಮನಿಸಿದರೆ ಅವುಗಳಲ್ಲಿ ಸತ್ಯಾಂಶವಿಲ್ಲದಿಲ್ಲ. ಈ ಸತ್ಯಾಂಶವೇನು? ಅದರ ಪರಿಣಾಮವೇನು ಎಂಬುದನ್ನು ಒಂದು ಉದಾಹರಣೆಯಿಂದ ತಿಳಿದುಕೊಳ್ಳಬಹುದು. ಭಯೋತ್ಪಾದನಾ ವಿರೋಧಿ ಅಭಿಯಾನದ ಒಂದು ಕಾರ್ಯಕ್ರಮವನ್ನು ತೀರಾ ಹತ್ತಿರದಿಂದ ಗಮನಿಸುವ ಅವಕಾಶ ನನಗೆ ಲಭಿಸಿತ್ತು. ಒಂದು ವಿದ್ಯಾಸಂಸ್ಥೆಯಲ್ಲಿ, ಅಭಿಯಾನದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಎಡಸಿಕೊಳ್ಳಲಾಯಿತು. ಅದರಲ್ಲಿ ಪ್ರಬಂಧ ರಚನೆಯೂ ಒಂದು. ‘ಭಯೋತ್ಪಾದನೆಯ ನಿಗ್ರಹದಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬುದು ವಿಷಯ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಬಂಧಗಳನ್ನು ರಚಿಸಬಹುದಾಗಿತ್ತು. ಹಾಗೆ ರಚನೆಯಾದ ಪ್ರಬಂದಗಳಲ್ಲಿ ಮೂರಕ್ಕೆ ಬಹುಮಾನ ನೀಡುವುದು ಸಂಘಟಕರ ಉದ್ದೇಶ. ಹಾಗೆ, ಮೂರನೇ ಬಿ.ಕಾಂ. ವಿದ್ಯಾರ್ಥಿಯೊಬ್ಬಳಿಂದ ರಚಿತವಾಗಿ, ಮೊದಲನೇ ಬಹುಮಾನ ಪಡೆದ ಒಂದು ಪ್ರಬಂಧವನ್ನು ಓದುವ ಅವಕಾಶ ನನಗೆ ಲಭಿಸಿತು. ಓದಿದಿ ತಕ್ಷಣ ನನಗೆ ಶಾಕ್ ಆಯಿತು. ಪ್ರಬಂಧದ ಭಾಷೆಯೂ ಅಷ್ಟಕ್ಕಷ್ಟೆ. ವಿದ್ಯಾರ್ಥಿಗಳ ಪಾತ್ರವನ್ನು ಕುರಿತ ನಾಲ್ಕೈದು ವಾಕ್ಯಗಳನ್ನು ಬಿಟ್ಟರೆ, ನಾಲ್ಕುಪುಟಗಳ ಪ್ರಬಂಧದಲ್ಲಿ ಉಳಿದ ವಿಷಯವೆಲ್ಲವೂ ಒಂದು ದೇಶವನ್ನು, ಒಂದು ಸಮುದಾಯವನ್ನು ನಿಂದಿಸುವುದಕ್ಕೇ ಮೀಸಲಾಗಿತ್ತು. ಕೆಲವು ಉದಾಹರಣೆಗಳನ್ನು ನೋಡಿ. (ಎಡಿಟ್ ಮಾಡಿಲ್ಲ)

  • ಭಯೋತ್ಪಾದನೆ ಎಂಬುದು ದೇಶಾದ್ಯಂತ ತನ್ನ ಅಟ್ಟಹಾಸವನ್ನು ಪ್ರದರ್ಶಿಸುತ್ತಿದೆ. ಹೀಗೆ ಪ್ರದರ್ಶಿಸುತ್ತಿರುವ ಅಟ್ಟ ಹಾಸವು, ಪ್ರಾರಂಭವಾದದ್ದು ಮೊದಲು ‘ಪಂಜಾಬ್’ನಲ್ಲಿ. ಇಲ್ಲಿ ಜಾಗ ಹೂಡಿಕೊಂಡ ಭಯೋತ್ಪಾದಕರು, ಯಾವುದೇ ಪರಿಣಾಮವನ್ನು ಕಂಡು ಕೊಳ್ಳದ ಭಯೋತ್ಪಾದಕರು ‘ಕಾಶ್ಮೀರವನ್ನು ಆರಿಸಿಕೊಂಡರು.
  • ಭಯೋತ್ಪಾದನೆ ಎಂದಕೂಡಲೇ ಪಾಕಿಸ್ತಾನದ ಜನಕನಾದ ‘ಮೊಹಮದ್ ಆಲಿ ಜಿನ್ನಾ’ ಎಂಬುವವನು “ಈಗ ನಗುನಗುತ್ತಾ ಪಾಕಿಸ್ತಾನವನ್ನು ತೆಗೆದುಕೊಂಡೆವು ಮುಂದೆ ‘ಖಡ್ಗ ಮತ್ತು ಬಂದೂಕಿ’ನಿಂದ ಭಾರತವನ್ನು ನಮ್ಮ ವಶಕ್ಕೆ ಪಡೆಯುತ್ತೇವೆ” ಎಂಬ ಮಾತು ಈಗ ಅರಿವಾಗುತ್ತಿದ್ದು, ಈಗ ಜಿನ್ಹಾನ ಮಾತುಗಳು ಅಲ್ಲಿನ ಜನರಿಗೆ ಅದರಲ್ಲೂ ಭಯೋತ್ಪಾದಕರಿಗೆ ಪ್ರೇರಣೆಯಾಗಿದೆ.
  • ಇಂತಹ ಒಂದು ಭಯೋತ್ಪಾದನೆ ಹುಟ್ಟಿದ್ದು ಮತ್ತು ನೆಲೆಯೂರಿದ್ದು ಭಾರತಕ್ಕೂ ಸೇರದ ಪಾಕಿಸ್ತಾನಕ್ಕೂ ಸೇರದ ‘ಆಜಾದ್ ಕಾಶ್ಮೀರ’ದಲ್ಲಿ.
  • ಮುಸ್ಲಿಂ ಅಲ್ಲದ ಭಾರತೀಯರನ್ನು ಕೊಂದು ‘ರೈಲು ಗೂಡ್ಸುಗಳ ಮೂಲಕ ಹೆಣಗಳನ್ನು ರವಾನಿಸಿದರು.
  • ಅದೇ ರೀತಿ ಈ ‘ಮುಸ್ಲಿಂ’ ಅಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನ ಶಿಬಿರಗಳನ್ನು ಮತ್ತು ಮದರಸಗಳಲ್ಲಿ ‘ಭಾರತ ನಮ್ಮ ಶತ್ರು ರಾಷ್ಟ್ರ, ಅಲ್ಲಿ ಅಶಾಂತಿಯನ್ನು ಹರಡಬೇಕು, ಹಾಗೂ ಅಲ್ಲಿನ ಜನರು ಭಯಭೀತರಾಗಿ ಇರಬೇಕು’ ಇಂತಹ ವಾತಾವರಣವನ್ನು ಉಂಟುಮಾಡಬೇಕೆಂಬುದೇ ಅವರ ಉದ್ದೇಶವಾಗಿದೆ.
  • ಈ ಭಯೋತ್ಪಾದಕರು ಹೆಚ್ಚಾಗಿ ಪಾಕಿಸ್ತಾನದವರೇ ಆಗಿರುತ್ತಾರೆ.

ಇಲ್ಲಿ ನನಗನ್ನಿಸುವುದು ಇಷ್ಟು.

  • ಅಭಿಯಾನ ನಡೆಸುವವರು, ಅಭಿಯಾನದ ಉದ್ಧೇಶಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಲ್ಲ. ಅಥವಾ ಅವರು ತಿಳಿಸಿರುವ ವಿಷಯಗಳು ಒಂದು ದೇಶ ಮತ್ತು ಒಂದು ಸಮುದಾಯವನ್ನು ಮಾತ್ರ ಗುರಿಯಾಗಿರಿಸಿಕೊಂಡಿವೆ.
  • ಈ ಪ್ರಬಂಧವನ್ನು ಬರೆದ ವಿದ್ಯಾರ್ಥಿನಿಯ ಭಾಷಾ ಪ್ರಬುದ್ಧತೆಯ ಬಗ್ಗೆಯಾಗಲೀ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆಯಾಗಲೀ ನನ್ನ ಆಕ್ಶೇಪವಿಲ್ಲ (ಅದು ಮೌಲ್ಯಮಾಪಕರ ಅಜ್ಞಾನವನ್ನು ತೋರಿಸುತ್ತದೆ). ಆದರೆ ಪ್ರಬಂಧ ಬರೆಯಲು ಕೊಟ್ಟಿರುವ ವಿಷಯಕ್ಕೂ ಬರೆದಿರುವ ವಿಷಯಕ್ಕೂ ಯಾವುದೇ ಸಂಬಂಧವಿಲ್ಲದ ಈ ಪ್ರಬಂಧಕ್ಕೆ ಮೊದಲ ಬಹುಮಾನವನ್ನು ಕೊಟ್ಟಿರುವುದು ಎಷ್ಟು ಸರಿ?
  • ಅಥವಾ ಈ ರೀತಿಯ ಪ್ರಬಂಧಗಳನ್ನೇ ಬೆಂಬಲಿಸಬೇಕೆಂಬ ಉದ್ದೇಶವೇನಾದರೂ ಇದೆಯೇ? ಅಥವಾ ಯಾರನ್ನಾದರೂ ಮೆಚ್ಚಿಸಲು ಈ ರೀತಿಯ ಪ್ರಬಂಧಗಳನ್ನು ಪ್ರೋತ್ಸಾಹಿಸಲಾಗುತ್ತಿದೆಯೇ?
  • ವಿದ್ಯಾರ್ಥಿ ಜೀವನ ಎಂಬುದು ಚಿನ್ನದ ಸಮಯ ಎನ್ನುತ್ತಾರೆ. ಆದರೆ ಅರಳುವ ಮನಸ್ಸುಗಳಲ್ಲಿ ಈ ರೀತಿಯ ವಿಷ ಬೀಜವನ್ನು ಬಿತ್ತುವುದೇಕೆ?

ತಿಳಿದವರು ಯೋಚಿಸಬೇಕು. ಇದಕ್ಕಾಗಿಯಾದರೂ ಸರ್ಕಾರದ ಈ ಕಾರ್ಯಕ್ರಮವನ್ನು ತಿಳಿದವರು ಖಂಡಿಸಬೇಕು.

3 comments:

Umesh Balikai said...

ಯಾಕೆ ಬಿಜೆಪಿ ಸರ್ಕಾರ ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಜಾತಿಯ ಬಣ್ಣ ಹಚ್ಚಬೇಕು? ಇದೆ ಆಭಿಯಾನವನ್ನು ಕಾಂಗ್ರೆಸ್ಸ್ ಸರ್ಕಾರವೊಂದು ಹಮ್ಮಿಕೊಂಡಿದ್ದರೆ ವಿರೋಧಿಸುತ್ತಿದ್ದೀರ? ಪಕ್ಷಗಳ ಮಾತು ಒಂದು ಕಡೆ ಇರಲಿ. ಅಂತ ಅಭಿಯಾನಗಳಲ್ಲಿ ಒಂದು ನಿರ್ದಿಷ್ಟ ಸಮುದಾಯವೇ ಇದಕ್ಕೆ ಹೊಣೆ ಎಂದು ಬಿಂಬಿಸುವ ಪ್ರಯತ್ನ ನಡೆದಿದ್ದರೆ ಅದನ್ನು ವಿರೋಧಿಸೋಣ. ಆದರೆ ಭಯೋತ್ಪಾದನೆ ಎಂಬ ರಾಕ್ಷಸನ್ನೆ ವಿರೋಧಿಸುವುದು ಬೇಡ ಎಂಬುದು ಎಷ್ಟು ಸರಿ? ಭಯೋತ್ಪಾದಕತೆಯ ವಿರುದ್ಧದ ಕೆಲಸವೆಲ್ಲಾ ಒಂದು ಸಮುದಾಯದ ವಿರುದ್ಧದ ಕೆಲಸ ಎಂದೇಕೆ ಭಾವಿಸಬೇಕು? ಆ ವಿದ್ಯಾರ್ಥಿನಿಯ ಅಪಕ್ವ ಬರಹಕ್ಕೆ ಬಹುಮಾನ ಕೊಟ್ಟವರನ್ನು ನಿಂದಿಸೋಣ. ಒಂದು ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ಪೂರ್ತಿ ಅಭಿಯಾಣವನ್ನೇ ವಿರೋಧಿಸುವುದು ಸಮಂಜಸವೇ?

Unknown said...

ನಿಮ್ಮ ಮುಕ್ತವಾದ ಅಭಿಪ್ರಾಯಕ್ಕೆ ಧನ್ಯವಾದಗಳು. ಅಭಿಯಾನವನ್ನು ವಿರೋಧಿಸಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಅದು ನೆರವೇರುತ್ತಿರುವ ರೀತಿಯ ಬಗ್ಗೆಯಷ್ಟೇ ನನ್ನ ಆಕ್ಷೇಪ. ನಾನು ಯಾವ ರಾಜಕೀಯ ಪಕ್ಷದ ಪರವೂ ಅಲ್ಲ; ವಿರೋಧವೂ ಅಲ್ಲ.

ತೇಜಸ್ವಿನಿ ಹೆಗಡೆ said...

ಸತ್ಯನಾರಾಯಣ ಅವರೆ,

ಆಕೆಯ ಪ್ರಬಂಧದಲ್ಲಿ ಪ್ರೌಢತೆಯ ಕೊರತೆಯುರುವುದಂತೂ ನಿಜ. ವಿಷಯವನ್ನು ಪ್ರತಿಪಾದಿಸದೇ ಕೇವಲ ಆರೋಪಗಳನ್ನಷ್ಟೇ ಮಾಡಿದರೆ ಏನೂ ಉಪಯೋಗವಿಲ್ಲ. ಆದರೆ ಒಂದು ಮಾತು ಮಾತ್ರ ಸತ್ಯ. ಭಯೋತ್ಪಾದನೆಗೂ ಒಂದು ಮತಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಹಿಂದುಗಳೆಲ್ಲಾ ಸಾಚಾ ಎನ್ನುತ್ತಿಲ್ಲ. ಆದರೆ ಹೆಚ್ಚಿನ ಧಾಳಿಗಳೆಲ್ಲಾ ನಡೆದಿರುವುದು ಒಂದು ಕೋಮಿನವ, ಹೆಚ್ಚಾಗಿ ಒಂದು ದೇಶಕ್ಕೆ ಸೇರಿದ ಜನರಿಂದಲೇ ಆಗುತ್ತಿದೆ. ಅವರು ಪಾಕಿಸ್ತಾನ, ಅಫಘಾನಿಸ್ತಾನ, ತಾಲಿಬಾನ್ ಇತ್ಯಾದಿ ದೇಶಗಳಿಂದಲೇ ಬಂದಿರಬಹುದು. ಉದ್ದೇಶ ಮಾತ್ರ ಒಂದೇ ಆಗಿದೆ. ಭಯೋತ್ಪಾದನೆ ಹಾಗೂ ಈ ಮೂಲಕ ಎಲ್ಲರನ್ನೂ ತಮ್ಮ ಪಂಗಡಕ್ಕೆ ಸೇರ್ಪಡೆಮಾಡಿಕೊಳ್ಳುವ ಮೂರ್ಖತೆ. ಇಲ್ಲಿ ನಾನು ಮುಸ್ಲಿಂ ವಿರೋಧಿಯಾಗಿ ಹೇಳುತ್ತಿಲ್ಲ. ನನಗೆ ಕಂಡ ಸತ್ಯತೆಯನ್ನು ಹೇಳುತ್ತಿದ್ದೇನಷ್ಟೇ. ಉತ್ತಮ ಲೇಖನ. ಯೋಚನೆಗೀಡುಮಾಡುವಂತಿದೆ.