ಶಿಶುಪ್ರಾಸಗಳು ಜಾನಪದ ಸಾಹಿತ್ಯದ ಒಂದು ಪ್ರಾಕಾರ. ಇವುಗಳಲ್ಲಿ ಅರ್ಥಕ್ಕೂ ಹಾಗೂ ಅರ್ಥಕ್ಕಿಂತ (ಹೆಸರೇ ಹೇಳುವಂತೆ) ಪ್ರಾಸಕ್ಕೂ ಲಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇವು ಕರ್ನಾಟಕದಾದ್ಯಂತ ಕೇಳಸಿಗುತ್ತವೆ. ಆದರೆ ಇತ್ತೀಚಿನ ಆಧುನೀಕರಣ ಪ್ರಕ್ರಿಯೆಯಿಂದಾಗಿ, ವಿಭಕ್ತ ಕುಟುಂಬಗಳಿಂದಾಗಿ ಇಂತಹ ಶಿಶುಪ್ರಾಸಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.ನಮ್ಮ ಬಯಲಸೀಮೆಯಲ್ಲಿ (ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೋಕು) ಹಲವಾರು ಶಿಶುಪ್ರಾಸಗಳು ಪ್ರಚಲಿತದಲ್ಲಿವೆ. ಗಾದೆ, ಒಗಟುಗಳ ರೂಪವೂ ಅವಕ್ಕಿವೆ ಹಾಗೂ ಕ್ರೀಡಾ ಸ್ವರೂಪವೂ ಇದೆ. ಭಾಷೆಯು ಬದಲಾದಂತೆ, ಆಯಾಯ ಪ್ರಾಂತ್ಯದ ವೈಶಿಷ್ಟ್ಯವನ್ನು ಅವು ಮೈಗೂಡಿಸಿಕೊಂಡಿರುತ್ತವೆ. ಉದಾಹರಣೆಗೆ,
ಕಬಡ್ಡಿ ಕಬಡ್ಡಿ ಕಾರ
ಹುಳ್ಳಿ ಹೊಲದಲ್ಲಿ ಕೀರ
ಇದು ನಮ್ಮ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಸರಳ ಶಿಶುಪ್ರಾಸ. ಆದರೆ ಇದನ್ನು ಮಂಡ್ಯ, ಕೊಳ್ಳೆಗಾಲದ ಕಡೆ
ಕಬಡ್ಡಿ ಕಬಡ್ಡಿ ಕಾರ
ಕಬ್ಬಿನ ಗದ್ದೆಲಿ ಕೀರ
ಎಂದು ಹೇಳುತ್ತಾರೆ.
ಬಯಲಸೀಮೆಯಲ್ಲಿ ಹುಳ್ಳಿ (ಹುರುಳಿ) ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ, ಅದರ ಹೆಸರನ್ನು ಬಳಸಿದರೆ, ಕಬ್ಬನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಕಬ್ಬಿನ ಹೆಸರನ್ನು ಹೆಚ್ಚಾಗಿ ಬಳಸುವುದನ್ನು ಗಮನಿಸಬಹುದಾಗಿದೆ.ನಮ್ಮ ಕಡೆ ಕೇಳಸಿಗುವ ಹಾಗೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ಶಿಶುಪ್ರಾಸಗಳನ್ನು, ನನ್ನ ಮಗಳಿಗೆ ಹೇಳಿಕೊಡುವ ನೆಪದಲ್ಲಿ ಆಗಾಗ ಮನಸ್ಸಿಗೆ ತಂದುಕೊಳ್ಳುತ್ತಿರುತ್ತೇನೆ. ಅವುಗಳನ್ನು ಒಂದು ಕಡೆ ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾದದ್ದು ರೂಪಶ್ರೀ ಎನ್ನುವವರ ಬ್ಲಾಗಿನಲ್ಲಿ, ‘ಕಣ್ಣಾಮುಚ್ಚೆ ಕಾಡಿಗೆ ಓಡೆ’ ಎಂಬ ಶಿಶುಪ್ರಾಸವನ್ನು ನೋಡಿದ ಮೇಲೆ. ಇಲ್ಲಿ ಸಂಗ್ರಹವಷ್ಟೇ ನನ್ನ ಕೆಲಸ. ಹೆಚ್ಚಿನ ವಿವರಣೆ, ಸಂಪಾದನೆ, ವಿಶ್ಲೇಷಣೆ ಇವ್ಯಾವುದಕ್ಕೂ ಇಳಿಯದೇ, ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿದರೆ, ನಿಮಗನ್ನಿಸಿದ್ದನ್ನು ಹಂಚಿಕೊಂಡರೆ, ನಿಮಗೆ ನೆನಪಿರುವ ಶಿಶುಪ್ರಾಸಗಳನ್ನು ಇತರರೊಂದಿಗೆ ಹಂಚಿಕೊಂಡರೆ ಸಂತೋಷ.
ನಾನು ಹೈಸ್ಕೂಲ್ ಓದಿದ ಕುಂದೂರು ಮಠ ಮತ್ತು ಅದರ ಕುದುರೆ, ಅದರ ಸವಾರಿ ಮಾಡುವ ಸ್ವಾಮಿಜಿಗಳು ನಮ್ಮ ಕಡೆ, ನಮ್ಮ ಕಾಲದಲ್ಲಿ ಕಾಣಸಿಗುತ್ತಿದ್ದವು. ಅದರ ಹಿನ್ನೆಲೆಯಲ್ಲಿರುವ ಶಿಶುಪ್ರಾಸ.
ಬಾಗೂರಯ್ಯ ಬಾಗ್ಲು ತೆಗಿ
ಬಗ್ಗಿ ನೋಡೋಣ
ಕುಂದೂರಯ್ಯ ಕುದುರೆ ಕೊಡು
ಹತ್ತಿ ನೋಡೋಣ!
ಪ್ರಶ್ನೋತ್ತರ ರೂಪದ ಶಿಶುಪ್ರಾಸಗಳೂ ಇರುತ್ತವೆ.
ಕಾಗೆ ಕಾಗೆ ಕೌವ್ವ
ಯಾರು ಬರ್ತಾರವ್ವ?
ಮಾವ ಬರ್ತನವ್ವ
ಮಾವಗೇನು ಊಟ?
ರಾಗಿಕಲ್ಲಿನ ಗೂಟ!
ಇನ್ನೊಂದು ಗೀತೆ
ಶಾಂತಕ್ಕ ಶಾಂತಕ್ಕ ಚೆನ್ನಾಗಿದಿಯಾ?
ಮಂಚದ ಮೇಲೆ ಮಲಗಿದಿಯಾ?
ಅತ್ಯಂತ ಸರಳ ಶಿಶುಪ್ರಾಸಗಳು ಹೇಗಿರುತ್ತವೆ ನೋಡಿ!
ನಾನು ನೀನು ಜೋಡಿ
ಗಾಡಿ ಕಟ್ಟಿಕೊಂಡು ಓಡಿ
ಹೆಣ್ಣುಮಗಳೊಬ್ಬಳು ತನ್ನ ತಾಯಿಗೆ ಹೇಳುತ್ತಿರುವ ರೀತಿಯ ಒಂದು ಶಿಶುಗೀತೆ ಹೀಗಿದೆ.
ಯವ್ವ ಯವ್ವ ಗೆಣಸೆ
ಕುಕ್ಕೆಲಿ ಕುಣಿಸೆ
ಕರಿಸೀರೆ ಉಡಿಸೆ
ಗಂಡನ ಮನೆಗೆ ಕಳಿಸೆ!
ಆಟ ಆಡುವಾಗ ಬಳಕೆಯಾಗುವ ಶಿಶುಪ್ರಾಸಗಳೂ ಇರುತ್ತವೆ!
ಕಣ್ಣಾಮುಚ್ಚೆ
ಕಾಡಿಗೆ ಓಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನನ್ನ ಹಕ್ಕಿ ಬಿಟ್ಟೇಬಿಟ್ಟೆ
ನಿನ್ನ ಹಕ್ಕಿ ಹಿಡ್ಕೋ ಹಿಡ್ಕೋ!
ಇನ್ನೊಂದು ಆಟದ ಗೀತೆ.
ಅಪ್ಪಪ್ಪಂಡೆ ಆರಿಗೆಜ್ಜೆ
ಊರೆಲ್ಲ ಕೇಳೊ ಗೆಜ್ಜೆ
ಕಲ್ಲ್ ಕಲ್ಲಮ್ಮು
ಮಾಯಿಮೊಗ್ಗು
ಮಲ್ಲಿಸೀರೆ
ಗಿಲೀಟ್!
ಈ ಆಟದ ಮುಂದುವರಿಕೆಯಲ್ಲಿ ಬರುವ ಕೆಲವು ಸಾಲುಗಳು ಹೀಗಿವೆ.
ಕೈ ಕೈ ಎಲ್ಹೋದೋ?
ಸಂತೆಗ್ ಹೋದೋ
ಸಂತೇಲಿ ಏನ್ ತಂದೋ?
ಬಾಳೆಹಣ್ಣು ತಂದೋ
ಬಾಳೆಹಣ್ಣು ಏನ್ ಮಾಡ್ದೆ?
ಒಳ್ಳೆದು ತಿಂದು ಕೆಟ್ಟದ್ದು ಬಾಗ್ಲಿಂದಕ್ಕೆ ಹಾಕ್ದೆ
ಬಾಗ್ಲೇನು ಕೊಡ್ತು?
ಬಾಗ್ಲು ಚಕ್ಕೆ ಕೊಡ್ತು
ಚಕ್ಕೆ ಏನ್ ಮಾಡ್ದೆ?
ಒಲೆಗೆ ಹಾಕ್ದೆ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ?
ತಿಪ್ಪೆಗೆ ಹಾಕ್ದೆ
ತಿಪ್ಪೆ ಏನ್ ಕೊಡ್ತು?
ಗೊಬ್ಬರ ಕೊಡ್ತು
ಗೊಬ್ಬರ ಏನ್ ಮಾಡ್ದೆ?
ಹೊಲಕ್ಕೆ ಹಾಕ್ದೆ
ಹೊಲ ಏನ್ ಕೊಡ್ತು?
ಗರಿಕೆ ಕೊಡ್ತು
ಗರಿಕೆ ಏನ್ ಮಾಡ್ದೆ?
ಹಸಿಗೆ ಹಾಕ್ದೆ
ಹಸ ಏನ್ ಕೊಡ್ತು?
ಹಾಲು ಕೊಡ್ತು
ಹಾಲು ಏನ್ ಮಾಡ್ದೆ?
ಬೊಮ್ಮ(ಬ್ರಹ್ಮ)ಗೆ ಕೊಟ್ಟೆ
ಬೊಮ್ಮ ಏನ್ ಕೊಟ್ಟ?
ಹೆಣ್ಣು ಕೊಟ್ಟ
ಹೆಣ್ಣು ಏನ್ ಮಾಡ್ದೆ?
ದೊಡ್ಡ ಕೆರೇಲಿ ನೂಕ್ದೆ, ಚಿಕ್ಕ ಕೆರೆಲಿ ಕೈತೊಳ್ಕೊಂಡೆ!
ಐದಾರು ಮಕ್ಕಳು ಆಡುವಾಗ ಒಬ್ಬರನ್ನು ಆಟದಿಂದ ಕೈ ಬಿಡಬೇಕಾಗಿ ಬರುತ್ತದೆ. ಆಗ ಕೆಳಗಿನ ಶಿಶುಪ್ರಾಸದ ಒಂದೊಂದು ಸೊಲ್ಲನ್ನು ಒಬ್ಬೊಬ್ಬರಿಗೆ ಹೇಳಿ ‘ಕ್ವಟಾಸ್’ ಎಂಬ ಪದ ಬಂದವನನ್ನು ಹೊರಗೆ ಕಳುಹಿಸಲಾಗುತ್ತದೆ. (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಅವಲಕ್ಕಿ
ಪವಲಕ್ಕಿ
ಕಾಂಚನ
ಮಿನಮಿನ
ಡಾಂಡೂಂ
ಕಯ್ಯ
ಕ್ವಟಾಸ್!
ಎರಡೂ ಕೈಗಳನ್ನು ಕೈ ಮುಗಿಯುವ ಭಂಗಿಯಲ್ಲಿ ಹಿಡಿದುಕೊಂಡು, ಒಂದೊಂದು ಸೊಲ್ಲಿಗೆ ಒಂದೊಂದು ಜೊತೆ ಬೆರಳನ್ನು ಬಡಿಯುತ್ತಾ ಹಾಡುವ ಶಿಶುಪ್ರಾಸ ಹೀಗಿದೆ.
ಹಬ್ಬ ಬಂತು ಹಬ್ಬ (ಎರಡೂ ಕಿರುಬೆರಳನ್ನು ಒಂದಕ್ಕೊಂದು ತಟ್ಟಬೇಕು)
ಹಬ್ಬಕ್ಕೆ ಅಕ್ಕಿಯಿಲ್ಲ (ಉಂಗುರದ ಬೆರಳು........)
ಸಾಲ ಮಾಡೋಣ (ಮಧ್ಯದ ಬೆರಳು..........)
ಸಾಲ ಯಾರು ತೀರ್ಸೋರು? (ತೋರುಬೆರಳು...............)
ನಾನು ಇದ್ದೀನಲ್ಲ (ಎಂದು, ಹೆಬ್ಬೆರಳನ್ನು ಮೇಲೆತ್ತಿ ‘ಡನ್’ ಅನ್ನುವಂತೆ ತೋರಿಸಬೇಕು)
ಒಗಟಿನ ಸ್ವರೂಪವನ್ನು ಪಡೆದಿರುವ ಒಂದು ಶಿಶುಪ್ರಾಸ ಹೀಗಿದೆ. ಸಾಮಾನ್ಯವಾಗಿ ಇದನ್ನು ಹೇಳುವಾಗ ಒಬ್ಬರು ಪ್ರಶ್ನೆ ಕೇಳುತ್ತಿರುವಂತೆ, ಇನ್ನೊಬ್ಬರು ಪಟಪಟನೆ ಉತ್ತರ ಹೇಳುತ್ತಾ ಹೋಗುತ್ತಾರೆ.
ಏರಿ ಹಿಂದೆ ಕೆಂದೆತ್ತು ಬಾಲ ಬೀಸುತ್ತೆ
ಭತ್ತ
ಭತ್ತಕ್ಕೆ ಮೂರು ಮುತ್ತು
ಇಬ್ಬನಿ
ಇಬ್ಬನಿಗೊಬ್ಬಣ್ಣ
ಬಿಸಿಲು
ಬಿಸಿಲಿಗೆ ಬಿರಿಯಣ್ಣ
ಕೆಕ್ಕರಿಕೆ ಹಣ್ಣು
ಕೆಕ್ಕರಿಕೆ ಹಣ್ಣು ಕೆರಿಯಣ್ಣ
ಹಲ್ಲು
ಹಲ್ಲಿಗೆ ಮೂರು ಸೊಲ್ಲು
ಎಲೆ ಅಡಿಕೆ ಸುಣ್ಣ
ನಾಲಿಗೆ ಹೊರಳಲು ಸಹಾಯ ಮಾಡುವಂತಹ ಪದಪುಂಜಗಳನ್ನು ನಾವು ಚಿಕ್ಕ ಹುಡುಗರಾಗಿದ್ದಾಗ, ನಮ್ಮ ಕಡೆ ದೊಡ್ಡವರು ಹೇಳಿಕೊಡುತ್ತಿದ್ದರು. ಅವು ಮೂರು ನೆನಪಿವೆ.
ಅರಳಿಮರಬುಡತಳಿರೊಡೆದೆರಡೆಲೆಯಾಯ್ತು
ತರಿಕೆರೆಕೆರೆಏರಿಮೇಲೆಮೂರುಕರಿಕುರಿಮರಿಮೇಯ್ತಿದ್ವೋ (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಸಂಕಂಗಪ್ಪನಮಗಮರಿಸಂಕಂಗಪ್ಪ
ವಾಟೀಸ್ ದಿಸ್
ಹೊಟ್ಟೆಗಿಲ್ಲದೆ ಪುಸ್
ಈ ಸಾಲುಗಳನ್ನು ನಾವು ಮೂರನೇ ತರಗತಿಯಲ್ಲಿದ್ದಾಗ ಹೆಚ್ಚಾಗಿ ಹೇಳಿಕೊಳ್ಳುತ್ತಿದ್ದ ನೆನಪು. ಇದನ್ನು ಯಾವಾಗಲೂ ಹೇಳುತ್ತಿದ್ದುದನ್ನು ಕಂಡು ನಮ್ಮ ತಂದೆ ನನಗೆ ಎರಡೇಟು ಕೊಟ್ಟಿದ್ದು ನೆನಪಿದೆ!
ಇವಲ್ಲದೆ ಅಶ್ಲೀಲವೆನ್ನಬಹುದಾದ ಕೆಲವು ಶಿಶುಪ್ರಾಸಗಳೂ ಇವೆ. ನನಗೆ ನೆನಪಿಗೆ ಬರುತ್ತಿರುವುದು ಎರಡು ಮಾತ್ರ. ಅದರಲ್ಲಿ ಒಂದು ಅರ್ಧ ಮಾತ್ರ! ಆದರೂ ಆ ಒಂದೂವರೆ ಶಿಶುಪ್ರಾಸವನ್ನು ಇಲ್ಲಿ ಟೈಪಿಸಲು ‘ನಮಸೆಮಂ’ (ನನ್ನ ಮನಸ್ಸಿನ ಸೆನ್ಸಾರ್ ಮಂಡಳಿ) ಒಪ್ಪುತ್ತಿಲ್ಲ, ಕ್ಷಮಿಸಿ!
14 comments:
ಆಧುನಿಕತೆಯ ಜಾಡಿನಲ್ಲಿ ಮರೆಯಾಗುತ್ತಿರುವ ಶಿಶುಪ್ರಾಸಗಳನ್ನು ನೆನಪಿಸಿದ್ದಿರಿ. ಚೆನ್ನಾಗಿವೆ.
ಸತ್ಯನಾರಾಯಣರೆ...
ನಿಮ್ಮ ಬ್ಲಾಗಿನ ಹೊಸ ಸ್ವರೂಪ ಬಹಳ ಇಷ್ಟವಾಯಿತು...
ನೀವು ತಿಳಿಸಿದ ಕೆಲವು ಶಿಶು ಪ್ರಾಸಗಳು ನಮ್ಮೂರ ಕಡೆಗೂ ಇವೆ...
ಅವಲಕ್ಕಿ, ಪವಲಕ್ಕಿ..ಇತ್ಯಾದಿ...
ನನಗೆ ನೆನಪಾಗುವದು..
"ಅಕ್ಕೊರೊಕ್ಕೊರೆ...
ಶಾಂತಕ್ಕೋರೆ...
ಕಬ್ಬಿನ ಗದ್ದೇಲಿ..
ದಿಬ್ಬಣ ಬಂತು ನೋಡ್ ಅಕ್ಕೋರೆ..."
(ಅಕ್ಕೋರೆ .. ಅಂದರೆ ಟೀಚರ್ ಅಂತ.
ಟೀಚರನ್ನು ಚಾಳಿಸಲು ಹೇಳುತ್ತಿದ್ದರು..
ಅವರ ಎದುರಿಗೆ ಅಲ್ಲ...!!)
ಇನ್ನೊಂದು..ನಾಲ್ಕು ಕಂಬ ಗಳಲ್ಲಿ ಮೂರು ಕಂಬ ದಲ್ಲಿ
ಮಕ್ಕಳು ನಿಂತಿರುತ್ತಾರೆ..
ಒಂದು ಮಗು ಅವರು ಕಂಬ ಬದಲಿಸುವಾಗ ಅವರನ್ನು ಮುಟ್ಟಲು ನಿಂತಿರುತ್ತದೆ...
ಆಗ ಈ ಹಾಡು...
"ಕಂಬ ಕಂಬದಾಟ..
ನಿಂಬೆ ತೋಟ..
ಬನವಸೆ ಬಯಲು ..
ಬಾಳೆ ತೋಟ..."
ಮತ್ತೆ ಹಳೆಯದನ್ನು ನೆನಪಿಸಿದ್ದಕ್ಕೆ ವಂದನೆಗಳು...
ಸತ್ಯನಾರಾಯಣರೆ,
ಸುಂದರವಾದ ಶಿಶುಪ್ರಾಸಗಳನ್ನು ಕೊಟ್ಟಿದ್ದೀರಿ. ಇವಕ್ಕೆ ಶಿಶುಪ್ರಾಸವೆನ್ನುವ ಅಭಿಧಾನವೂ ಸಹ ಸೊಗಸಾಗಿದೆ.ಓದಿ ತುಂಬಾ ಖುಶಿಪಟ್ಟೆ.
ತುಂಬಾ ಒಳ್ಳೆಯ ಸಂಗ್ರಹ ಮಾಡಿದ್ದಿರಿ...
ನಮ್ಮ ಕಡೆ ಆಟ ಆಡೋವಾಗ ಇನ್ನೊಂದು ಶಿಶುಪ್ರಾಸ ಹೇಳ್ತಾ ಇದ್ರೂ..
"ಅಂಟಿ,
ಮಿಂಟಿ,
ಚಾವಲ ಗಂಟಿ,
ಗಜಗ,
ಪೇಪರ್,
ಟಾಮ್,
ಟೂಮ್,
ಟುನಿಯ,
ಬಾಯ.
ಟುಸುಕ್."
ಸತ್ಯನಾರಾಯಣರೇ,
ಈಗಿನ ಕಾಲದಲ್ಲಿ ಮಕ್ಕಳಿಗೆ ಇವೆಲ್ಲಾ ಗೊತ್ತಿರೋದೇ ಇಲ್ಲ.
ಬಾಲ್ಯದಲ್ಲಿ ಇದನ್ನೆಲ್ಲಾ ಹೇಳ್ಕೊಂಡು ಆಟ ಆಡ್ತಿದ್ವಿ.
ಬಾಲ್ಯವನ್ನು ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು.
-ಅನಿಲ್
ಸತ್ಯನಾರಯಣ ಸರ್,
ಹೊಸ ವಿಚಾರ ಖಂಡಿತ ನನಗೆ ಇಷ್ಟವಾಯುತು...ಕಾರಣ ಚಿಕ್ಕಂದಿನಲ್ಲಿ ನಾನು ಇಲ್ಲಿ ನೀವು ಹೇಳಿರುವ ಸುಮಾರು ಆಟಗಳನ್ನು ಆಡಿದ್ದೇನೆ. ಅದರ ಮಜಾನೇ ಬೇರೆ..ಆಗಿನ ಆನಂದವೇ ಬೇರೆ...ಆದ್ರೆ ಇವು ಶಿಶುಪ್ರಾಶ ಅಂತ ಗೊತ್ತಿರಲಿಲ್ಲ...
ಅವೆಲ್ಲಾ ಈಗಿನ ಮಕ್ಕಳಿಗೆ ಗೊತ್ತೇ ಇಲ್ಲ ಅನ್ನೋದು ನನ್ನ ಕೊರಗು...
ನಾನು ಈಗಲು ಅವನ್ನೆಲ್ಲಾ ನೆನಪಿಸಿಕೊಂಡು ಸಂತೋಷ ಪಡುತ್ತೇನೆ...
ನೀವು ನಮಗೆ ಇದನ್ನೆಲ್ಲಾ ನಮಗಾಗಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಸರ್,
" ಆಕ ಪಾಕು ತಮಿಳ ಪಾಕು ಏಕ ಜುಟ್ಟು ಎಲಕ ಪಂಡು ಮಾಮಿಡಾಕು ಮಲ್ಲೆ ಮೊಗ್ಗು ದಡಲ್ ಬುಡಲ್"
" ವಾಟಿಸ್ ದಿಸ್ ವಂಕಾಯ್ ಪುಲ್ಸ್"
ಎರಡೂ ತೆಲುಗಿನವು ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದುದು ನೆನಪಾಯ್ತು.
ಬಾಲ್ಯಕ್ಕೆ ಕರೆದೊಯ್ಯಿತು ನಿಮ್ಮ ಈ ಬರಹ. ತುಂಬಾ ಚೆನ್ನಾಗಿದೆ.
ಚೆನ್ನಾಗಿದೆ ಶಿಶುಪ್ರಾಸಗಳ ಪರಿಚಯ
ಸತ್ಯರವರೆ....
ತುಂಬ ಚೆನ್ನಾಗಿ ಇದೆ ಶಿಶುಪ್ರಾಸನ ......ಇದನ್ನೆನ್ನ ನೋಡುತ್ತಾ ನನಗು ನನ್ನ ಬಾಲ್ಯದ ನೆನಪು ಆಯಿತು......ಕೆಲವೊಂದು ನನಗು ಗೊತ್ತಿತ್ತು..... ಇನ್ನು ಕೆಲವು ಇದೆ... ಆದರೆ ಇವಾಗ ನೆನಪಿಗೆ ಬರ್ತಾ ಇಲ್ಲ......ನೆನಪಾದಾಗ ಬರೆದು ಹೇಳುತ್ತೇನೆ....
ನಿಜಕ್ಕೂ ಇವಗಿನ ಮಕ್ಕಳು ಇಂಥ ಆಟ ಪಾಠ ಎಲ್ಲವನ್ನು ಮಿಸ್ ಮಾಡ್ಕೋತಾ ಇದ್ದಾರೆ..... ಮೊನ್ನೆ ನಮ್ಮ ಪಕ್ಕದ ಮನೆಯಾ ಒಬ್ಬ ಹುಡುಗ 5th stand.. ಗಾದೆ ಅಂದ್ರೆ ಏನು,,, ಅದು ಹೀಗೆ ಇರುತ್ತೆ ಅಂತ ಕೇಳ್ತಾ ಇದ್ದ... ಕೆಲವೊಂದು ಗಾದೆಗಳನ್ನು ಹೇಳಿದರೆ....ಏನು ಅರ್ಥ ಆಗದೆ ಸುಮ್ನೆ ಇದ್ದ... ನಮ್ಮ ಕಾಲದಲ್ಲಿ ಬರಿ ಪುಸ್ತಕದ ಬದೆನೆಕಯಿಗಿಂಥ ಇಂಥ ಗಾದೆ ಮಾತು,,,ಶಿಸುಪ್ರಾಸನ ಮೊದಲಾದ activities ನಿಂದ ಎಸ್ಟೋ ಲೋಕಜ್ಞ್ಯನ ಪಡ್ಕೋತ ಇದ್ವಿ ಅಲ್ವ ...
ಹಳೆಯ ನೆನಪನ್ನು ಒಳ್ಳೆಯ ಬರಹದ ಮೂಲಕ ಕೊಟ್ಟಿದಕ್ಕೆ ಧನ್ಯವಾದಗಳು
ಗುರು
ಮಾಹಿತಿ ಚೆನ್ನಾಗಿದೆ. ಓದಿ ಆನಂದಿಸಿದೆ....
ಡಾ. ಸತ್ಯ
ಇಂಟರ್ನೆಟ್, ಕಂಪ್ಯೂಟರ್ ಎಂದೆಲ್ಲಾ ಇಂದಿನ ಮಕ್ಕಳ ಬಾಲ್ಯ ಈ ಎಲೆಕ್ಟ್ರಾನಿಕ್ ಆಟಿಕೆಗಳಲ್ಲೇ ಕಳೆದು ಹೋಗುತ್ತೆ. ನಿಮ್ಮ ಲೇಖನ ಅದ್ಭುತವಾಗಿ ಹಳೆಯ ಹೊಸತುಗಳನ್ನು ತಂದಿದೆ. ಕಣ್ಣಾ ಮುಚ್ಚೆ ಕಾಡೇಗೋಡೇ ಅಂತ ನನ್ಗೆ ಈ ವರೆಗೂ ತಿಳಿದಿದ್ದದ್ದು..ಆದರೆ ನೀವು ಹೇಳಿದ್ದು ಕಾಡಿಗೆ ಓಡೆ..ಹೆಚ್ಚು ಅರ್ಥಕೊಡುತ್ತೆ..ಆಗಿನ ಕಾಲದಲ್ಲಿ ಹಳ್ಳಿ ಮನೆಗಳು ಕಾಡಿಗೆ ಅಂಟಿದಂತಿದ್ದು..ಕಣ್ಣು ಮುಚ್ಚಿದವರು ಹುಡುಕಬೇಕಾದದ್ದು ಬಚ್ಚಿಟ್ಟುಕೊಂಡವರನ್ನು..ಕಾಡೇಗೋಡೆ ಏನರ್ಥ..?? ಕಾಡಿಗೆ ಓಡೆ..ಅಂದರೆ ಬಚ್ಚಿಟ್ಟುಕೊಳ್ಳಲು ಹೇರಳ ಅವಕಾಶಗಳು..
ಚನ್ನಾಗಿದೆ ಬ್ಲಾಗ್ ಪೋಸ್ಟ್
ಓಳ್ಳೇ ಸಂಗ್ರಹ
ಚೆನ್ನಾಗಿದೆ.... ಅರಳೀಮರದಡಿಯಲ್ ರೆರಡೆರಡರಣೆಗಳುರುಳಾಡುತ್ತಿದ್ದವು... !!! :-)
ಪ್ರಿಯ ಸತ್ಯನಾರಾಯಣ ಅವರೇ, ಇಲ್ಲಿ ಹಾಕಿರುವ ಶಿಶುಪ್ರಾಸಗಳಿಗೆ ಕಾಪಿರೈಟ್ ಇಲ್ಲ ಅಲ್ಲವಾ, ಅಂದರೆ ಸಾರ್ವಜನಿಕರ ಬಳಕೆಗೆ, ಮಕ್ಕಳ ಬಳಕೆಗೆ (ಅಂದರೆ ಲಾಭರಹಿತ ಉದ್ದೇಶಕ್ಕೆ) ಬೇರೆ ಕಡೆ ಬಳಸಿಕೊಳ್ಳಬಹುದು ಅಲ್ಲವೇ? ದಯವಿಟ್ಟು ಉತ್ತರಿಸಿ - sumangalagm@gmail.com
Post a Comment