Monday, June 01, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - ೧೭

ಬೆಂಕಿ ದೆವ್ವ
ನಾವು ಒಂಬತ್ತನೇ ತರಗತಿಯಲ್ಲಿದ್ದಾಗಲೇ ಹೈಸ್ಕೂಲ್ ಬಿಲ್ಡಿಂಗ್ ಕೆಲಸ ಮುಗಿದಿತ್ತು. ಸ್ಕೂಲ್ ಜವಾನ ನಂಜಪ್ಪನ ಮಗನೂ ಹಾಸ್ಟೆಲಿನ ವಿದ್ಯಾರ್ಥಿಯಾಗಿದ್ದ. ಆತನೇ ಬೆಳಿಗ್ಗೆ ಎದ್ದು ಬೇಗ ಸ್ಕೂಲಿನ ಕೊಠಡಿಗಳ ಕಸ ಗುಡಿಸುತ್ತಿದ್ದ. ಇಡೀ ಸ್ಕೂಲಿನ ಬೀಗದ ಕೈಗಳೆಲ್ಲಾ ಅವನ ಬಳಿಯೇ ಇರುತ್ತಿದ್ದವು! ಆತನ ಅಪ್ಪ ಮಾತ್ರ ಯಾವಾಗ ಬೇಕೋ ಆಗ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಿದ್ದ. ಕೇಳಿದರೆ ‘ಕಸ ಗುಡಿಸಿದೆಯಲ್ಲ’ ಎಂದು ಹೆಡ್ಮಾಸ್ಟರಿಗೇ ರೋಫು ಹಾಕುತ್ತಿದ್ದ. ವೆಂಕಟಪ್ಪನವರು ಇದ್ದ ದಿನಗಳಲ್ಲಿ ಸರಿಯಾಗಿಯೇ ಇದ್ದ ಅವನು, ಅವರು ವರ್ಗವಾಗಿ ಹೋಗುತ್ತಲೇ ಕೆಲವು ಮೇಷ್ಟ್ರುಗಳಂತೆ ತನ್ನ ಸ್ವಾತಂತ್ರ್ಯವನ್ನು ತಾನೇ ಘೋಷಿಸಿಕೊಂಡುಬಿಟ್ಟಿದ್ದ! ಆತನ ಅಸಡ್ಡಾಳತನದಿಂದಾಗಿ, ಡಸ್ಟರ್, ಸೀಮೆಸುಣ್ಣ, ಕೋಲು ತಂದು ಕೊಡುವುದು, ಬೋರ್ಡ್ ಒರೆಸುವುದು, ಮೇಷ್ಟ್ರಿಗೆ ಕುಡಿಯಲು ನೀರು, ಹೋಟೆಲಿನಿಂದ ತಿಂಡಿ ತಂದು ಕೊಡುವುದು ಹುಡುಗರ ಕೆಲಸವಾಗಿತ್ತು. ಸ್ಕೂಲಿನ ಸುತ್ತಮುತ್ತಲಿನ ಗಲೀಜನ್ನೂ ಸಹ ಹುಡುಗರೇ ಗುಂಪಿನಲ್ಲಿ ಕ್ಲೀನ್ ಮಾಡಬೇಕಾಗಿತ್ತು. ನಂಜಪ್ಪ ಮಾತ್ರ ತಾನು ಸರ್ಕಾರಿ ಕೆಲಸದಲ್ಲಿದ್ದರೂ ಹೇಗೋ ತನ್ನ ಮಗನಿಗೆ ಹಾಸ್ಟೆಲ್ಲಿನಲ್ಲಿ ಸೀಟು ಕೊಡಿಸಿದ್ದ.
ನಂಜಪ್ಪನ ಮಗನ ಹೆಸರು ಮಂಜುನಾಥ. ಅವನದೇ ಒಂದು ಗುಂಪಿತ್ತು. ಅವರೆಲ್ಲರೂ ಹತ್ತಿರದ ಚೌಳಗಾಲ ಎಂಬ ಊರಿನವರು. ಅವರು ರಾತ್ರಿ ವೇಳೆ, ಹಾಸ್ಟೆಲ್ಲಿನಲ್ಲಿ ಮಲಗದೆ ಸ್ಕೂಲಿಗೆ ಹೋಗಿ ಒಂದು ಕ್ಲಾಸ್ ರೂಮಿನಲ್ಲಿ ಬೆಂಚ್‌ಗಳನ್ನು ಜೋಡಿಸಿಕೊಂಡು ಮಲಗುತ್ತಿದ್ದರು. ಬೆಂಚ್‌ಗಳ ಆಕರ್ಷಣೆಯೋ ಏನೋ ನಾವೂ ಒಂದಷ್ಟು ಜನ ಆ ಗುಂಪಿಗೆ ಸದಸ್ಯರಾಗಿಬಿಟ್ಟೆವು. ದಿನಾ ರಾತ್ರಿ ಊಟ ಮುಗಿಸಿ, ಹಾಸಿಗೆಗಳನ್ನು ಹೊತ್ತುಕೊಂಡು ಹೋಗಿ, ಬೆಂಚ್‌ಗಳನ್ನು ಜೋಡಿಸಿಕೊಂಡು ಮಂಚದ ಮೇಲೆ ಮಲಗಿದಂತೆ ಮಲಗುತ್ತಿದ್ದೆವು. ಬೆಳಿಗ್ಗೆ ಎದ್ದು ಮತ್ತೆ ಜೋಡಿಸಿ ಬರುತ್ತಿದ್ದೆವು. ನಮಗೆ ಅಲ್ಲಿ ಹೆಚ್ಚು ಸ್ವಾತಂತ್ರ್ಯವಿತ್ತು. ಎಷ್ಟು ಬೇಕಾದರೂ ಗಲಾಟೆ ಮಾಡಬಹುದಾಗಿತ್ತು. ಪೋಲಿ ಜೋಕು ಹೇಳಬಹುದಿತ್ತು! ಬೆಳಿಗ್ಗೆ ಯಾರೂ ವಾರ್ಡನ್ ಹತ್ತಿರ ಕಂಪ್ಲೇಂಟ್ ಮಾಡುವಂತಿರಲಿಲ್ಲ. ನಾವು ವಾರ್ಡನ್ ಹತ್ತಿರ ‘ಅಲ್ಲಿ ಓದಿಕೊಳ್ಳಲು ಹೋಗುತ್ತೇವೆ’ ಎಂದು ಹೇಳಿ ಪರ್ಮಿಷನ್ ತೆಗೆದುಕೊಂಡಿದ್ದೆವು. ಹದಿನೈದು ಜನ ಅಲ್ಲಿಗೆ ಓದಿಕೊಳ್ಳಲು ಹೋಗುವುದರಿಂದ, ಒಂದೇ ಹಾಲ್‌ನಲ್ಲಿ ಐವತ್ತು ಜನ ಇರುವುದು ತಪ್ಪುತ್ತದೆಂದು ಅವರೂ ಸುಮ್ಮನಾಗಿಬಿಟ್ಟಿದ್ದರು!
ನಾವು ಅಲ್ಲಿಗೆ ಹೋಗಿ ಓದುತ್ತಿದ್ದೆವೋ ಬಿಡುತ್ತಿದ್ದೆವೋ ಅದು ಮುಖ್ಯವಾಗಲೇ ಇಲ್ಲ. ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಎಂ.ಕೆ.ಸ್ವಾಮಿ, ಚಿಕ್ಕಯ್ಯ ಮತ್ತು ನನ್ನಣ್ಣ ಇವರಿಗೆಲ್ಲಾ ನಮ್ಮ ಸ್ವಾತಂತ್ರ್ಯವನ್ನು ಸಹಿಸಲಾಗಲಿಲ್ಲ. ಒಂದು ಮಧ್ಯರಾತ್ರಿ ನಾವು ಮಲಗಿದ್ದಾಗ ಬಂದು ಹೆಂಚಿನ ಮೇಲೆ ಸಣ್ಣ ಸಣ್ಣ ಕಲ್ಲುಗಳನ್ನೆಲ್ಲಾ ತೂರಿದ್ದರು. ನಮಗೇನು ಗೊತ್ತು? ಅದು ಅವರ ಕೆಲಸ, ಎಂದು! ನಾವೆಲ್ಲಾ ಭಯದಿಂದ ನಡುಗಿ ಹೋಗಿದ್ದೆವು. ಮಾರನೇ ದಿನ ಅವರೆಲ್ಲರೂ ರಾತ್ರಿ ಹಾಸ್ಟೆಲ್ಲಿನ ಮೇಲೆ ರಣ(ದೆವ್ವ) ಓಡಾಡಿದ್ದನ್ನು ನೋಡಿದ್ದಾಗಿ ಮಾತನಾಡಿಕೊಳ್ಳುತ್ತಿದ್ದರು. ನಾವೆಲ್ಲಾ ಅದನ್ನು ನಿಜವೆಂದು ನಂಬಿದ್ದರೂ, ರಾತ್ರಿ ಮಲಗಲು ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಇನ್ನೊಂದು ರಾತ್ರಿ ಕಲ್ಲು ಮಣ್ಣು ತೂರುವುದರ ಜೊತೆಗೆ, ಬೆಂಕಿ ಪಂಜುಗಳನ್ನು ಉರಿಸುವುದನ್ನು ಮಾಡಿದ್ದಾರೆ. ನಾವೆಲ್ಲಾ ಒಬ್ಬರ ಕೈಗಳನ್ನು ಇನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದೆವು. ಸೀಮೆಎಣ್ಣೆಯನ್ನು ಬಾಯಿಯಲ್ಲಿ ತುಂಬಿಕೊಂಡು ಪಂಜಿನ ಮೇಲೆ ಊದಿದಾಗ ಬೆಂಕಿಯ ಒಂದು ಗೋಳಾಕಾರ ನಿರ್ಮಾಣವಾಗುತ್ತದೆ. ಹಳ್ಳಿಯಲ್ಲಿ ನಾಟಕ ಆಡುವಾಗ, ಶನಿದೇವರು, ಚಂಡಿ ಮೊದಲಾದವರು ಪ್ರತ್ಯಕ್ಷವಾಗುವಾಗ ಈ ತಂತ್ರವನ್ನು ಬಳಸುತ್ತಿದ್ದರು. ಅಂತದ್ದೇ ಒಂದು ಪ್ರಯತ್ನವನ್ನು ಎಂ.ಕೆ.ಸ್ವಾಮಿ ಮಾಡಿದ್ದಾನೆ. ಬಾಯಿಯ ತುಂಬಾ ಸೀಮೆಎಣ್ಣೆ ತುಂಬಿಕೊಂಡು ಉರಿಯುತ್ತಿದ್ದ ಪಂಜಿನ ಮೇಲೆ ಬುರ್‌ರ್‌ರ್‌ರ್... ಎಂದು ಉಗುಳಿದ್ದಾನೆ. ಇಡೀ ಸ್ಕೂಲ್ ಬಿಲ್ಡಿಂಗ್ ಬೆಂಕಿ ಹೊತ್ತಿಕೊಂಡಂತೆ ಜ್ವಲಿಸಿದಾಗ, ಹೆಂಚಿನ ಸಂದಿಗೊಂದುಗಳೊಳಗೆಲ್ಲಾ ಬೆಂಕಿಯ ಜ್ವಾಲೆ ನುಗ್ಗಿದಂತಾಯಿತು. ನಮ್ಮ ಗುಂಪಿನಲ್ಲಿದ್ದ ಆನೆಕೆರೆ ರಮೇಶ ಎಂಬ ಪುಕ್ಕಲ ‘ಅಯ್ಯಯ್ಯಪ್ಪೋ ಸತ್ತೆ’ ಎಂದು ಜೋರಾಗಿ ಕಿರುಚಿದ. ಆ ಕಿರುಚಾಟ ನಿಲ್ಲುವಷ್ಟರಲ್ಲಿ ಯಾರೋ ಕಿಸಕ್ಕನೆ ನಕ್ಕಂತಾಯಿತು! ಹಾಗೆ ನಗುವುದು ಚಿಕ್ಕಯ್ಯ ಎಂದು ಎಲ್ಲರಿಗೂ ಗೊತ್ತಾಯಿತು. ಮಾತಿಗೆ ಮೊದಲು ನಗುತ್ತಲೇ ಮಾತನಾಡುವ ಅಭ್ಯಾಸವಿದ್ದ ಚಿಕ್ಕಯ್ಯನ ನಗು ಕೇಳಿದ ಮೇಲೆ ನಾವೆಲ್ಲಾ ಧೈರ್ಯದಿಂದ ಹೊರಗೆ ಬಂದೆವು. ಆದರೂ ನಾವು ಏನು ಮಾಡುವಂತಿಲ್ಲ. ಏಕೆಂದರೆ ಹದಿನೈದು ಜನರನ್ನು ಅವರು ಮೂವರೇ ಹೊಡೆದು ಸುಮ್ಮನಾಗಿಸುತ್ತಿದ್ದುದರಲ್ಲಿ ಅನುಮಾನವಿರಲಿಲ್ಲ! ಆದರೆ ವಾರ್ಡನ್‌ಗೆ ಗೊತ್ತಾಗಿಬಿಡುತ್ತದೆ ಎಂಬ ಭಯ ಅವರಿಗೂ ಇತ್ತು. ಕೊನೆಗೆ ‘ವಾರ್ಡನ್‌ಗೆ ವಿಷಯ ತಿಳಿಸಬಾರದೆಂದು, ಇನ್ನು ಮುಂದೆ ಬೇರಾವ ರೀತಿಯಲ್ಲೂ ಹೆದರಿಸಲು ಬರುವುದಿಲ್ಲ’ವೆಂದು ಎಂ.ಕೆ.ಸ್ವಾಮಿ ಹೇಳಿದ್ದರಿಂದ ವಿಷಯವನ್ನು ಅಲ್ಲಿಗೆ ಬಿಟ್ಟೆವು.
ಕದ್ದಿದ್ದಕ್ಕೆ ಮಾಫಿ; ಕದಿಯದ್ದಕ್ಕೆ ಶಿಕ್ಷೆ!
ನಾವು ಕ್ಲಾಸ್ ರೂಮಿಗೆ ಮಲಗಲು ಹೋಗುವ ಪದ್ಧತಿ ಮುಂದುವರೆಯಿತು. ಆದರೆ ನಮ್ಮಲ್ಲಿ ಕೆಲವರಿಗೆ ಕಳ್ಳತನ ಮಾಡಿಯಾದರೂ ಮಜಾ ಉಡಾಯಿಸುವ ಹುಚ್ಚು. ಅವರೆಲ್ಲರೂ ಒಂದು ರಾತ್ರಿ ಬೆಳಗುಲಿಯವರೊಬ್ಬರು ಬೆಳೆದಿದ್ದ ಕಡಲೆ ಗಿಡಗಳನ್ನು ಕದ್ದು ಕಿತ್ತುಕೊಂಡು ಬರುವುದೆಂದು ಪ್ಲಾನ್ ಮಾಡಿದರು. ಕಳ್ಳತನದ ಮಜಾ ಉಡಾಯಿಸುವ ಬಯಕೆ ನಮಗೂ ಇತ್ತು. ಆದರೂ ಭಯದಿಂದ ನಾವು ಬರುವುದಿಲ್ಲ ಎಂದು ನಾನು ಮತ್ತು ರಮೇಶ ಹೇಳಿದರೆ, ಮಲಗಲು ಬರುವಂತಿಲ್ಲ ಎಂದುಬಿಟ್ಟರು. ಅಂದಿನ ನಮ್ಮ ಒಳಮನಸ್ಸಿನ ಧ್ವನಿಗೆ ಓಗೊಟ್ಟ ನಾವೂ ಕಳ್ಳತನಕ್ಕೆ ಹೊರಟೆವು!
ನಡು ರಾತ್ರಿ. ಯುಕ್ತಾಯುಕ್ತ ವಿವೇಚನೆಯಿಲ್ಲದ ಹದಿನೈದು ಹದಿನಾರು ವಯಸ್ಸಿನ ಹುಡುಗರ ಗುಂಪು ಒಂದು ಕಡ್ಲೆಕಾಯಿ ಹೊಲಕ್ಕೆ ನುಗ್ಗಿದರೆ ಏನಾಗಬೇಕೋ ಅದೇ ಆಯಿತು. ಸುಮಾರು ಒಂದು ಸಣ್ಣ ಗಾಡಿ ತುಂಬವಷ್ಟು ಗಿಡಗಳನ್ನು ಕಿತ್ತುಕೊಂಡು, ನೇರವಾಗಿ ಸ್ಕೂಲಿಗೆ ಬರದೆ ಯಾವದೋ ಹಳ್ಳದ ಕಡೆಗೆ ಹೋದೆವು. ಅಲ್ಲಿ, ಸುಮಾರು ಬೆಳಗಿನ ಜಾವದವರೆಗೂ ಕುಳಿತು ಒಂದೂ ಮಾತನಾಡದೆ ಅರ್ಧಂಬರ್ಧ ಕಾಯಿಗಳನ್ನು ಕಿತ್ತು ತಿಂದು, ಮತ್ತೆ ಸ್ಕೂಲಿಗೆ ವಾಪಸ್ ಬಂದು ಏನೂ ಗೊತ್ತಿಲ್ಲದವರಂತೆ ಮಲಗಿಬಿಟ್ಟೆವು. ಎರಡು ಮೂರು ದಿನಗಳ ನಂತರ ‘ಯಾರೋ ಕಳ್ಳರು ಗಿಡಗಳನ್ನು ಕಿತ್ತು ತಿಂದು ಹೋಗಿದ್ದಾರೆ’ ಎಂದು ಜನ ಮಾತನಾಡಿಕೊಂಡರು. ಆ ಹೊಲದವರು ಅಲ್ಲಿ ಒಂದು ಗುಡಿಸಲು ಹಾಕಿ ಕಾವಲು ನಿಂತರು. ಆದ್ದರಿಂದ ಮತ್ತೆ ನಮಗೆ ಕಳ್ಳತನದ ಮಜಾ ಉಡಾಯಿಸಲು ಆಗಲಿಲ್ಲ.
ನಮ್ಮ ದುರಾದೃಷ್ಟಕ್ಕೆ, ಇದಾದ ಹದಿನೈದೇ ದಿನಗಳಲ್ಲೇ ಬೇರೆ ದಿಕ್ಕಿನಲ್ಲಿದ್ದ ಒಂದು ಹೊಲದಲ್ಲಿ ಆಲೂಗೆಡ್ಡೆಯ ಗಿಡಗಳನ್ನು ಯಾರೋ ಕಿತ್ತೊಯ್ದರು. ಕಡ್ಲೆ ಗಿಡಗಳ ಕಳ್ಳತನದಲ್ಲೇ ನಮ್ಮ ಕೈವಾಡವಿದೆಯೆಂದು ಹಾಸ್ಟೆಲ್ಲಿನ ಕೆಲವರು ಗುಸುಗುಟ್ಟಿದ್ದರು. ಆದರೆ ಅದು ಅಷ್ಟೊಂದು ಬಲವಾಗಿರಲಿಲ್ಲ. ಆಲೂಗಡ್ಡೆ ಕಳ್ಳತನದಲ್ಲಿ ನಮ್ಮ ಕೈವಾಡವಿದೆಯೆಂದು ಯಾರಿಗೆ ಮೊದಲು ಅನ್ನಿಸಿತೋ ಆತ ಏನಾದರೂ ನಮಗೆ ಒಂಟಿಯಾಗಿ ಸಿಕ್ಕಿದ್ದರೆ ಅವನನ್ನು ಕೊಲ್ಲಲೂ ನಾವು ಅಂದು ಹೇಸುತ್ತಿರಲಿಲ್ಲವೇನೊ?! ಒಟ್ಟಾರೆ, ಒಂದು ದಿನ ಮಠದಿಂದ, ಸ್ಕೂಲಿಗೆ ಮಲಗಲು ಹೋಗುವ ಹುಡುಗರನ್ನು ಕರೆದುಕೊಂಡು ಬರಲು ಬುಲಾವ್ ಬಂತು.
ವಾರ್ಡನ್ ನಮ್ಮನ್ನು ಬರಲು ಹೇಳಿದರು. ಹೋಗುವ ಮುಂಚೆ ಅವರು ನಮ್ಮನ್ನು ಪ್ರತ್ಯೇಕವಾಗಿ ಕರೆದು, ‘ನನ್ನ ಬಳಿ ನಿಜ ಹೇಳಿಬಿಡಿ. ನೀವು ಕಳ್ಳತನ ಮಾಡಿದ್ದು ನಿಜವಾದರೆ ನಾನೇ ಸ್ವಾಮೀಜಿಯವರ ಬಳಿ ಮಾತನಾಡಿ ಹೇಗೋ ಸಮಸ್ಯೆ ಬಗೆ ಹರಿಸುತ್ತೇನೆ’ ಎಂದರು. ನಾವು ಪ್ರಾಮಾಣಿಕವಾಗಿ, ಹಿಂದೆ ಕಡ್ಲೆ ಗಿಡ ಕಿತ್ತಿದ್ದು ನಾವೇ ಎಂದೂ, ಆದರೆ ಈಗ ಆಲೂಗೆಡ್ಡೆ ಕಿತ್ತಿದ್ದು ನಾವಲ್ಲವೆಂದು ನಮಗೆ ತಿಳಿದ ದೇವರುಗಳ ಮೇಲೆ ಆಣೆ ಮಾಡಿದೆವು. ಆಗ ವಾರ್ಡನ್ ಅವರು ಯಾರಲ್ಲೂ ಕಡ್ಲೆ ಗಿಡದ ವಿಷಯ ಬಾಯಿ ಬಿಡಬೇಡಿರೆಂದೂ, ಅದರ ವಿಚಾರಣೆಯನ್ನು ನಾನೇ ಮಾಡುತ್ತೇನೆಂದು ಹೇಳಿ ನಮ್ಮನ್ನು ಕರೆದುಕೊಂಡು ಮಠಕ್ಕೆ ಬಂದರು. ಕೆಲವು ಸೋಮಾರಿಗಳು ಆಗಲೇ ಮಠದಲ್ಲಿ ಜಮಾಯಿಸಿದ್ದರು. ಚಿಕ್ಕಯ್ಯನೋರು ದೊಡ್ಡಯ್ಯನೋರು ಇಬ್ಬರೂ ಕುಳಿತಿದ್ದರು. ವಿಚಾರಣೆ ಪ್ರಾರಂಭವಾಯಿತು. ನಾವೇ ಕದ್ದಿದ್ದೆಂದು ನೇರವಾಗಿ ನಮ್ಮನ್ನು ದೂಷಿಸಲು, ಶಿಕ್ಷಿಸಲು ಕೆಲವರು ಮುಂದಾರು. ಆಗ ನಮ್ಮನ್ನು ಕಾಪಾಡಿದ್ದು ನಮ್ಮ ವಾರ್ಡನ್.
ಅವರು ‘ಅಷ್ಟೊಂದು ಆಲೂಗಡ್ಡೆಗಳನ್ನು ಕಿತ್ತುಕೊಂಡು ಅವರೇನು ಮಾಡುತ್ತಾರೆ. ಬೇಕಾದರೆ ಹಾಸ್ಟೆಲ್ಲಿನಲ್ಲಿ ಚೆಕ್ ಮಾಡಿ. ಅಷ್ಟೊಂದನ್ನು ಸುಟ್ಟು ತಿಂದಿದ್ದರೆ ಅವರಿಗೆ ಹೊಟ್ಟೆ ಕೆಡುತ್ತಿರಲಿಲ್ಲವೆ?’ ಎಂದು ಮುಂತಾಗಿ ವಾದಿಸಿ, ‘ಬೇಕಾದರೆ ಅವರ ಕೈಯಲ್ಲಿ ದೇವರ ಮೇಲೆ ಪ್ರಮಾಣ ಮಾಡಿಸಿ’ ಎಂದುಬಿಟ್ಟರು.
ಸ್ವಾಮೀಜಿಗಳಿಬ್ಬರೂ ಅದೇ ಸರಿಯೆಂದರು. ನಮ್ಮನ್ನು ಸಾಲಾಗಿ ನಿಲ್ಲಿಸಿ, ಒಂದು ತೆಂಗಿನ ಕಾಯಿಯನ್ನು ಕೊಟ್ಟು ಪ್ರಮಾಣ ಮಾಡಲು ಹೇಳಲಾಯಿತು. ‘ನಾವು ಆಲೂಗಡ್ಡೆ ಕಳ್ಳತನ ಮಾಡಿದ್ದರೆ ನಮಗೆ ವಾಂತಿಭೇದಿ ಆಗಲಿ’ ಎಂದು ಧೈರ್ಯವಾಗಿ ಪ್ರಮಾಣ ಮಾಡಿದೆವು.
ಹಾಸ್ಟೆಲ್ಲಿಗೆ ಬಂದ ನಂತರ ವಾರ್ಡನ್ ನಮಗೆ ಚೆನ್ನಾಗಿ ಬಯ್ದರು. ಅಂದಿನಿಂದಲೇ ಸ್ಕೂಲಿಗೆ ಮಲಗಲು ಹೋಗುವುದನ್ನು ನಿಲ್ಲಿಸಿಬಿಟ್ಟರು!
ಕಲ್ಲಂಗಡಿ ಕಾಯಿ ಕೊಯ್ದು ಸಿಕ್ಕಿಬಿದ್ದುದ್ದು!
ಶನಿವಾರ ಭಾನುವಾರ ಬಂತೆಂದರೆ ಹಾಸ್ಟೆಲ್ಲಿನ ಹುಡುಗರಿಗೆ ಎಲ್ಲವೂ ಬೋರು ಬೋರು. ಹಾಸ್ಟೆಲ್ಲಿನಲ್ಲಿ ಮುದ್ದೆ ತಿನ್ನುವುದು; ನಿದ್ದೆ ಮಾಡುವುದು, ಎರಡೇ ಕೆಲಸ. ಆದರೆ ಕಾಲಿನಲ್ಲಿ ಚಕ್ರ ಕಟ್ಟಿಕೊಂಡಿದ್ದ ನನ್ನಂಥವನಿಗೆ ಆದು ಆಗಿ ಬರದ ವಿಚಾರ. ಕಾಡು ಮೇಡು ಅಲೆಯುವುದು, ಊರೂರು ಸುತ್ತುವುದು ನನ್ನ ಮೆಚ್ಚಿನ ಹವ್ಯಾಸ.
ಹೀಗೆ ಒಂದು ಭಾನುವಾರ ನಾವು ನಾಲ್ಕು ಮಂದಿ ಹತ್ತಿರವಿದ್ದ ಚಿಕ್ಕಕರಡೇವು ಎಂಬ ಗ್ರಾಮಕ್ಕೆ ಹೋದೆವು. ಹಾಗೆ ಬರುತ್ತೇವೆ ಎಂದು ಅದೇ ಊರಿನವನಾಗಿದ್ದ ಕುಮಾರ ಎಂಬ ಹುಡುಗನಿಗೆ ಹೇಳಿದ್ದೆವು. ಆತನೂ ಬನ್ನಿ ಎಂದಿದ್ದ. ಡಿಸೆಂಬರ್ ಅಥವಾ ಜನವರಿ ತಿಂಗಳು ಇರಬಹುದು. ನಾವು ಆ ಊರಿಗೆ ಹೋದಾಗ, ಆತ ಕಣದ ಬಳಿ ಇದ್ದಾನೆಂದು ತಿಳಿಯಿತು. ಅಲ್ಲಿ ಹೋದರೆ ಆತ ಅಲ್ಲಿಗೆ ಬಂದೇ ಇಲ್ಲ ಎಂದು ತಿಳಿಯಿತು. ಅವನನ್ನು ಇನ್ನೆಲ್ಲಿ ಹುಡುಕುವುದು? ಕೊನೆಗೆ ಅದೇ ಊರಿನ ಇನ್ನೊಬ್ಬ ವಿದ್ಯಾರ್ಥಿ ನೇತ್ರ ಅನ್ನುವನನ್ನು ಹುಡುಕಿಕೊಂಡು ಹೊರಟೆವು. ಆತನು ಅವರ ಕಣದ ಬಳಿ ಸಿಕ್ಕ.
ಆ ಕಣದ ಪಕ್ಕದಲ್ಲೇ ಕಲ್ಲಂಗಡಿ ಹೊಲವಿತ್ತು. ದಪ್ಪದಾದ ಕಲ್ಲಂಗಡಿ ಹಣ್ಣುಗಳು ಇದ್ದವು. ನೇತ್ರನ ಕಣದ ಪಕ್ಕದಲ್ಲೇ ಇದ್ದುದ್ದರಿಂದ, ಆ ಹೊಲವೂ ಅವನದೆ ಎಂದು ಭಾವಿಸಿ ಅವನನ್ನು ಕೇಳುವ ಗೋಜಿಗೂ ಹೋಗದೆ ಎರಡು ಕಾಯಿಗಳನ್ನು ಕೊಯ್ದೇ ಬಿಟ್ಟೆವು. ಅವು ಹಣ್ಣಾಗಿವೆಯೋ ಇಲ್ಲವೋ ಒಂದನ್ನೂ ನಾವು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಆಗ ನೇತ್ರ ‘ಅಯ್ಯೋ ಅದು ನಮ್ಮ ಹೊಲವಲ್ಲ. ಬೇರೆಯವರದು’ ಎಂದ. ನಮಗೂ ಗಾಬರಿಯಾಗಿ, ‘ಸರಿ. ನಾವೀಗ ಹೋಗುತ್ತೇವೆ. ಆ ಹೊಲದವರು ಬಂದಾಗ ನೀನು ಹೇಳಬೇಡ ಅಷ್ಟೆ’ ಎಂದು ಕಾಯಿಗಳನ್ನು ಹೊತ್ತುಕೊಂಡು ಹೊರಟೆವು.
ಒಂದರ್ಧ ಕಿಲೋಮೀಟರ್ ನಡೆದಿದ್ದೆವೋ ಇಲ್ಲವೋ ಹಿಂದಿನಿಂದ ಯಾರೋ ಎಮ್ಮೆ ಕೂಗಿದಂತೆ ಕೂಗುತ್ತಿದ್ದರು. ನೋಡಿದರೆ ದೈತ್ಯಾಕಾರದ ಒಬ್ಬ, ಪ್ರಯಾಸದಿಂದ ಸೈಕಲ್ ತುಳಿಯುತ್ತಾ ಬರುತ್ತಿದ್ದ. ನಾವು ತಕ್ಷಣ ಕಾಯಿಗಳನ್ನು ಪಕ್ಕದಲ್ಲಿದ್ದ ಬೇಲಿಯ ಒಳಗೆ ಎಸೆದುಬಿಟ್ಟೆವು. ಆದರೆ ಅದನ್ನು ಗಮನಿಸಿದ್ದ ಆತ ಬಂದವನೆ ನೇರವಾಗಿ ನಮ್ಮ ಕೊರಳಪಟ್ಟಿಗಳನ್ನು ಹಿಡಿದುಕೊಂಡು, ಇಬ್ಬರ ಕೈಯಲ್ಲಿ ಕಾಯಿಗಳನ್ನು ಹೊರೆಸಿಕೊಂಡು ವಾಪಸ್ಸು ಊರ ಕಡೆಗೆ ಹೊರಟು ಬಿಟ್ಟ. ನಾವು ಅತ್ತೆವು. ಬೇಡಿಕೊಂಡೆವು ಆತ ಬಿಡಲಿಲ್ಲ. ಒಂದೂ ಮಾತನಾಡಲಿಲ್ಲ! ಊರಿಗೆ ಕರೆದುಕೊಂಡು ಹೋಗಿ ಒಂದು ಮರದ ನೆರಳಿನಲ್ಲಿ ನಮ್ಮನ್ನು ನಿಲ್ಲಿಸಿ ತಾನೂ ನಿಂತುಕೊಂಡ. ಎಷ್ಟು ಹೊತ್ತಾದರೂ ಒಂದೂ ಮಾತನಾಡಲಿಲ್ಲ. ಯಾರೂ ಬರಲಿಲ್ಲ.!
ನಾವು ಮೊಂಡು ಧೈರ್ಯ ಮಾಡಿ ಆಗ ಬೇಡಿಕೊಳ್ಳುವುದನ್ನು, ಅಳುವುದನ್ನು ನಿಲ್ಲಿಸಿದ್ದೆವು. ಪಕ್ಕದಲ್ಲಿದ್ದ ಸೋಮಶೇಖರ ‘ಲೋ, ನಮ್ಮ ಸ್ಕೂಲಿನ ಮೂವರು ಹುಡುಗಿಯರು ಇದೇ ಊರಿನವರು. ಅವರು ಬಂದರೆ ಮರ್ಯಾದೆ ಹೋಗುತ್ತದೆ. ಏನು ಮಾಡೋಣ’ ಎಂದ.
ಆತ ಸ್ವಲ್ಪ ಜೋರಾಗಿಯೇ ಮಾತನಾಡಿದರೂ ನಮ್ಮನ್ನು ಹಿಡಿದುಕೊಂಡು ಬಂದಾತ ನಮ್ಮೆಡಗೆ ತಿರುಗಿ ನೋಡಲಿಲ್ಲ. ಆಗ ನಾವು ಪರಸ್ಪರ ಮಾತನಾಡಿಕೊಂಡು ಬೇರೆ ಬೇರೆ ದಿಕ್ಕಿಗೆ ಓಡಿ, ನಂತರ ಕುಂದೂರುಮಠದಲ್ಲಿ ಸಂಧಿಸುವುದೆಂದು ತೀರ್ಮಾನಿಸಿದೆವು. ಇಷ್ಟಾದರೂ ಆ ಪ್ರಾಣಿ ಸುಮ್ಮನೇ ನಿಂತಿತ್ತು. ಒಂದು ಬಾರಿ ಮಾತ್ರ ‘ಹೋ’ ಎಂದು ಜೋರಾಗಿ ಕಿರುಚಿದ ಅಷ್ಟೆ. ಆಗ ನಮಗೆ ಆತ ನಿಜವಾಗಿಯೂ ಕಿವುಡನೂ ಮೂಗನೂ ಇರಬೇಕೆಂದು ಸ್ಪಷ್ಟವಾಗಿತ್ತು.
‘ಇನ್ನು ತಡ ಮಾಡಬೇಡಿ. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಓಡಿ’ ಎಂದು ಜೋರಾಗಿಯೇ ಕಿರುಚಿ, ನಾನೂ ಒಂದು ದಿಕ್ಕಿನಲ್ಲಿ ಓಡಿದೆ. ಇದನ್ನು ನಿರೀಕ್ಷಿಸಿರದ ಆತ ಯಾವ ಕಡೆಗೆ ಓಡಬೇಕೆಂದು ತಿಳಿಯದೆ ನಿಂತುಬಿಟ್ಟಿರಬೇಕು! ನಾವಂತೂ ಓಡೋಡಿ ಸುಮಾರು ಒಂದು ಗಂಟೆಯ ನಂತರ ಕುಂದೂರುಮಠಕ್ಕೆ ಬಂದೆವು.
ಬೆಳಿಗ್ಗೆ ಸ್ಕೂಲಿಗೆ ಬಂದಾಗ ನೇತ್ರನಿಗೆ ಚೆನ್ನಾಗಿ ಗೂಸ ಕೊಡಬೇಕೆಂದು ತೀರ್ಮಾನಿಸಿದ್ದೆವು. ಆದರೆ ಬೆಳಿಗ್ಗೆ ಆತ ಬಂದವನು ನಾವು ಹೊಡೆಯಲು ಹೋದಾಗ ‘ನೀವು ಹೊಡೆದರೆ ನಾನು ನಾಳೆ ಅವರ ಮನೆಯವರನ್ನು ಇಲ್ಲಿಗೇ ಕರೆದುಕೊಂಡು ಬರುತ್ತೇನೆ’ ಎಂದು ನಮ್ಮನ್ನೇ ಹೆದರಿಸಿದ! ನಾವೂ ಸುಮ್ಮನಾದೆವು. ‘ಆತನೇನಾದರೂ ಮೂಗ ಮತ್ತು ಕಿವುಡನಾಗದಿದ್ದರೆ ಅಥವಾ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಕಾಯುತ್ತಿದ್ದವರು ಬಂದಿದ್ದರೆ ನಿಮಗೆ ಖಂಡಿತಾ ಧರ್ಮದೇಟು ಬೀಳುತ್ತಿದ್ದವು, ಗೊತ್ತಾ?’ ಎಂದು ನೇತ್ರ ಹೇಳಿದ್ದಕ್ಕೆ ಸೋಮಶೇಖರ ‘ಆಗಲಾದರೂ ನಾವು ನಿನಗೆ ಚೆನ್ನಾಗಿ ಹೊಡೆಯಬಹುದಿತ್ತು ಬಿಡು’ ಎಂದು ಎಲ್ಲರನ್ನೂ ನಗಿಸಿದ್ದ.

6 comments:

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಬಾಲ್ಯದ ತುಂಟತನಗಳನ್ನು..
ಆ ದಿನಗಳ ಸವಿ ನೆನಪುಗಳನ್ನು..
ತುಂಬಾ ಆತ್ಮೀಯವಾಗಿ ಬಿಡಿಸಿಟ್ಟಿದ್ದೀರಿ....

ನನಗೂ ನನ್ನ ಬಾಲ್ಯದ ನೆನಪು ಮಾಡಿಸಿದ್ದೀರಿ...

ಚಂದದ ಬರಹಕ್ಕೆ ಅಭಿನಂದನೆಗಳು...

ರವಿಕಾಂತ ಗೋರೆ said...

ಸೂಪರ್ ಸಾರ್... ಬರಹಗಳು ತುಂಬಾ ಮಜವಾಗಿವೆ... :-)

PARAANJAPE K.N. said...

ಆ ಪ್ರಾಯದಲ್ಲಿ ಕಿತಾಪತಿ ಪ್ರವೃತ್ತಿ ಸಹಜ. ಆದರೆ ನೀವು ಅದನ್ನು ಅಕ್ಷರರೂಪದಲ್ಲಿ ರೋಚಕವಾಗಿ ದಾಖಲಿಸಿದ ಬಗೆ ಓದಿಸಿಕೊ೦ಡು ಹೋಗುವ, ನಾವೇ ಅನುಭವಿಸಿದ೦ತೆ ಅದು ಕೊಡುವ ಅನುಭೂತಿ ಈ ಲೇಖನ ಮಾಲೆಯ ವಿಶೇಷತೆ. ಚೆನ್ನಾಗಿದೆ.

shivu said...

ಸತ್ಯನಾರಾಯಣ ಸರ್,

ಬೆಂಚಿನ ಮೇಲೆ ಮಲಗಿದ್ದಾಗ ಹೆದರಿದ್ದು, ಕಡ್ಲೆಕಾಯಿ ಗಿಡದ ಕಳ್ಳತನದ ಪ್ರಕರಣ, ಅದರ ವಿಚಾರಣೆ, ಕಲ್ಲಂಗಡಿ ಪ್ರಕರಣವನ್ನೆಲ್ಲಾ ತುಂಬಾ ಬರೆದಿದ್ದೀರಿ...ಓದಿಸಿಕೊಂಡು ಹೋಗುತ್ತಾ ನಮ್ಮ ಹಳೆಯ ನೆನಪುಗಳನ್ನು ಮರುಕಳಿಸುತ್ತದೆ...
ಮುಂದುವರಿಸಿ ಸರ್....

sunaath said...

ನಿಮ್ಮ ಹುಡುಗುತನದ ದಿನಗಳು ರೋಚಕವಾಗಿವೆ!

naasomeswara said...

ಸಾಹಸಗಳು ಇಷ್ಟೇನಾ?

ಈಜುಹೊಡೆದದ್ದು...ಜೇನನ್ನು ಕಿತ್ತದ್ದು...ಜಾತ್ರೆಯಲ್ಲಿ ಮೆರೆದದ್ದು...ಶಿವರಾತ್ರಿ ಎಳನೀರು ಕಿತ್ತದ್ದು...ಎಲ್ಲವನ್ನು ಒಂದೊಂದಾಗಿ ಬರೆಯುವಂತರಾಗಿ..

-ನಾಸೋ