ಮೊನ್ನೆ ಸುಚಿತ್ರಾದಲ್ಲಿ ’ದಿ ಪ್ಯಾಕ್’ ಪ್ರದರ್ಶನವಾಯಿತು. ನಾನೂ ನನ್ನ ಮಗಳ ಜೊತೆ ಹೋಗಿ ನೋಡಿದೆ. ಅದೊಂದು ಅದ್ಭುತ! ಪ್ರದರ್ಶನ ಮುಗಿದ ನಮ್ಮ ಕಾಲೇಜಿನ ಒಂದಿಬ್ಬರು ಹಳೆಯ ವಿದ್ಯಾರ್ಥಿಗಳು ಸಿಕ್ಕಿದರು. ಅದರಲ್ಲಿ ಒಬ್ಬ ಪ್ರಾಣಿ ಪಕ್ಷಿ ಫೋಟೋಗ್ರಫಿಯಲ್ಲಿ ಸ್ವಲ್ಪ ಆಸಕ್ತಿಯಿರುವಾತ. ಆದರೆ ಬಹಳ ಉಡಾಫೆ ಮನುಷ್ಯ; ಆದರೆ ಕೆಟ್ಟವನಲ್ಲ. ಒಟ್ಟಾರೆ ಬದುಕನ್ನು ಸೀರಿಯಸ್ಸಾಗೇನೂ ತೆಗೆದುಕೊಂಡವನಲ್ಲ ಎನ್ನಬಹುದು. ಅಪ್ಪ ಮಾಡಿಟ್ಟಿದ್ದ ಆಸ್ತಿಯಿದ್ದುರಿಂದ ಯಾವುದೇ ಸಂಪಾದನೆ ಇಲ್ಲದಿದ್ದರೂ ಆರಾಮವಾಗಿಯೇ ಇದ್ದ. ಈ ಎಲ್ಲಾ ವಿಲಕ್ಷಣಗಳು ಅವನಿಗಿದ್ದುದರಿಂದಲೋ ಏನೋ ಆತ ಕಾಲೇಜು ಬಿಟ್ಟು ಆರೇಳು ವರ್ಷಗಳೇ ಕಳೆದರು ನನ್ನಂತೆಯೇ ಇನ್ನೂ ಕೆಲವು ಸಹೋದ್ಯೋಗಿಗಳಿಗೆ ಒಬ್ಬ ಸ್ನೇಹಿತನಾಗಿ ಉಳಿದಕೊಂಡು ಬಿಟ್ಟಿದ್ದ. ಆತನ ಮನೆಯೂ ನಮ್ಮ ಮನೆಯ ಬಳಿಯೇ ಇದ್ದುದರಿಂದ ನನ್ನೊಂದಿಗೆ ಸಿನಿಮಾ ಓದು ಹರಟೆ ಎಲ್ಲಾ ನಡೆಸುತ್ತಿದ್ದ. ಆತ ಪ್ಯಾಕ್ ನೋಡಿ ತುಂಬಾ ಖುಷಿಯಾಗಿದ್ದ. ಒಂದಷ್ಟು ಹೊತ್ತು ಚಿತ್ರದ ಬಗ್ಗೆ ಹರಟೆ ಹೊಡೆದು, ’ಸರ್. ನಾನು ಕೃಪಾಕರ ಸೇನಾನಿಯವರು ಬರೆದ ಹದಿನಾಲ್ಕು ದಿನಗಳು ಪುಸ್ತಕ ಓದಿಲ್ಲ. ಈ ಚಿತ್ರ ನೋಡಿದ ಮೇಲೆ ಅದನ್ನು ಓದಬೇಕೆನ್ನಿಸಿದೆ. ನಿಮ್ಮಲ್ಲಿದ್ದರೆ ದಯಮಾಡಿ ಕೊಡಿ. ಒಂದೇ ದಿನದಲ್ಲಿ ವಾಪಸ್ ಕೊಡುತ್ತಾನೆ’ ಎಂದ. ಈ ಹಿಂದೊಮ್ಮೆ ಆತ ತೆಗೆದುಕೊಂಡಿದ್ದ ಪುಸ್ತಕ ಹಿಂದಿರುಗಿಸಲು ಮೂರು ತಿಂಗಳು ಸತಾಯಿಸಿಕೊಂಡಿದ್ದರಿಂದ, ನಾನು ನಯವಾಗಿಯೇ ನಿರಾಕರಿಸಿದೆ. ಆದರೆ ಬಿಡಲೇ ಇಲ್ಲ. ಕೊನೆಗೆ ವಿಧಿಯಿಲ್ಲದೆ ’ಕೊಡುತ್ತೇನೆ. ಆದರೆ ಹೇಳಿದ ಸಮಯಕ್ಕೆ ಸರಿಯಾಗಿ ವಾಪಸ್ಸು ಕೊಡಬೇಕು. ಇಲ್ಲದಿದ್ದರೆ ಇನ್ನು ಜೀವಮಾನದಲ್ಲೇ ನಿನಗೆ ಪುಸ್ತಕ ಕೊಡುವುದಿಲ್ಲ’ ಎಂದು ಕಡಕ್ಕಾಗಿ ನುಡಿದು, ’ನಾಳೆ ಬಂದು ತೆಗೆದುಕೊಂಡು ಹೋಗು’ ಎಂದಿದ್ದೆ.
ಮಾರನೆಯ ದಿನ ಹೇಳಿದ ಸಮಯಕ್ಕೆ ಸರಿಯಾಗಿ ಆತ ಹಾಜರು. ’ನೋಡಿ ಸಾರ್ ಕೃಪಾಕರ ಸೇನಾನಿಯವರ ಬಗ್ಗೆ ಇಂಟರ್ ನೆಟ್ಟಿನಲ್ಲಿ ಸಾಕಷ್ಟು ಮಾಹಿತಿ ಕೂಡಾ ಕಲೆಕ್ಟ್ ಮಾಡಿದ್ದೇನೆ. ಅವರ ಬಗ್ಗೆ ಬಹಳ ಇಂಟರೆಸ್ಟ್ ಬಂದುಬಿಟ್ಟಿದೆ ಸರ್’ ಎಂದ. ನಾನು ಮಾತ್ರ ಪುಸ್ತಕವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸುವಂತೆ ಮತ್ತೆ ಮತ್ತೆ ಹೇಳಿ ಆತನನ್ನು ಬೀಳ್ಕೊಟ್ಟಿದ್ದೆ.
ಅದರ ಮಾರನೆಯ ದಿನ ಆತ ಹಾಜಾರಾಗಿಬಿಟ್ಟ! ನನಗೆ ಆಶ್ಚರ್ಯ. ಸುಮ್ಮನೆ ಬಂದಿದ್ದಾನೆಯೋ ಅಥವಾ ಪುಸ್ತಕ ಓದಿ ಮುಗಿಸಿ ತಂದಿದ್ದಾನೆಯೋ ಎಂದುಕೊಳ್ಳುವಷ್ಟರಲ್ಲಿ, ಆತನೇ ತನ್ನ ಬ್ಯಾಗಿನಿಂದ ಪುಸ್ತಕ ಹೊರತೆಗೆದ. ಅದರ ಮಧ್ಯದಲ್ಲಿ ಕಾಗದದ ಚೂರೊಂದನ್ನು ಇಟ್ಟಿದ್ದ. ’ಸದ್ಯ ಪುಸ್ತಕ ಬಂತಲ್ಲ’ ಎಂದು ನಾನು ತೆಗೆದುಕೊಳ್ಳುವಷ್ಟರಲ್ಲಿ ಆತ ’ಸರ್ ನೀವು ಜಾತಕ ಜೋತಿಷ್ಯ ದೇವರು ಏನನ್ನೂ ನಂಬುವುದಿಲ್ಲ. ಅಲ್ಲವೆ?’ ಎಂದ. ಈ ಹಿಂದೆಯೇ ಒಮ್ಮೆ ಕಾಲೇಜಿನಲ್ಲಿ ದೊಡ್ಡ ವಾದ ವಿವಾದವಾಗಿ ಹೋಗಿತ್ತು. ಜಾತಕ ಗ್ರಹಣ ಫಲಜೋತಿಷ್ಯ ಇವುಗಳೆಲ್ಲಾ ಚರ್ಚೆಗೆ ಬಂದಿದ್ದವು. ತಮಾಷೆಯಾಗಿ ಪ್ರಾರಂಭವಾಗಿದ್ದ ವಾದ ವಿವಾದ ಗಂಭೀರ ಸ್ವರೂಪ ಪಡೆದುಕೋಂಡಿತ್ತು. ಅಂದಿನಿಂದ ನಾನು ವಾದಕ್ಕಿಳಿಯುವುದನ್ನು ಬಿಟ್ಟುಬಿಟ್ಟಿದ್ದೆ. ಅದು ಈತನಿಗೂ ಗೊತ್ತಿತ್ತು. ಆದರೂ ಆಗಾಗ ನನ್ನನ್ನು ವಾದಕ್ಕೆಳೆಯುವ ವಿಫಲ ಪ್ರಯತ್ನ ಮಾಡುತ್ತಿದ್ದ. ನನಗೆ ವಾದ ಮಾಡಲು ಮನಸ್ಸಿರಲಿಲ್ಲ. ಪ್ರತಿಕ್ರಿಯಿಸದೆ ಸುಮ್ಮನಾದೆ.
ಆದರೆ ಆತ ಸುಮ್ಮನಾಗಲಿಲ್ಲ. ’ಸರ್. ಈಗ ನೀವು ಹೇಳಲೇಬೇಕು. ಈ ಪುಸ್ತಕದ ಹಿನ್ನೆಲೆಯಲ್ಲಿ ಜೋತಿಷ್ಯ ಸತ್ಯ ಎಂದು ನಾನು ಪ್ರೂವ್ ಮಾಡುತ್ತೇನೆ’ ಎಂದ. ಒಂದು ಕ್ಷಣ ನನಗೆ ಗಾಬರಿಯಾಯಿತು. ಕೃಪಾಕರ ಸೇನಾನಿಯವರ ಹದಿನಾಲ್ಕು ದಿನಗಳು ಪುಸ್ತಕ ಕೊಟ್ಟಿದ್ದೆನೋ ಅಥವಾ ಯಾವುದಾದರೂ ಜೋತಿಷ್ಯದ ಪುಸ್ತಕ ಕೊಟ್ಟಿದ್ದೆನೋ ಎಂದು ಗಾಬರಿಯಾಗಿ ಮತ್ತೊಮ್ಮೆ ಪುಸ್ತಕ ನೋಡಿದೆ. ಅದೇ ಪೊದೆ ಮೀಸೆಯ ವೀರಪ್ಪನ್ ನಗುತ್ತಿದ್ದ ಮುಖಪುಟದಲ್ಲಿ. ಕೃಪಾಕರ ಸೇನಾನಿ ಜ್ಯೋತಿಷ್ಯದ ಬಗ್ಗೆ ಇದರಲ್ಲಿ ಏನು ಬರೆದಿದ್ದಾರೆ ಎಂದು ಮೂರು ಬಾರಿಯಾದರೂ ಓದಿದ್ದ ನಾನು ತಲೆಕೆಡಿಸಿಕೊಳ್ಳತೊಡಗಿದೆ. ನನಗೆ ತಕ್ಷಣ ನೆನಪಿಗೆ ಬಂದಿದ್ದು ಡಾ.ಮೈಥಿ ಹಸ್ತರೇಖೆ ನೋಡಿ ವೀರಪ್ಪನಿಗೆ ಭವಿಷ್ಯ ಹೇಳಿದ ಪ್ರಸಂಗ!
ಪುಸ್ತಕದ ನಡುವೆ ಇಟ್ಟಿದ್ದ ಕಾಗದದ ಚೂರಿದ್ದ ಪುಟವನ್ನು ತೆರೆದೆ. ನನ್ನ ಊಹೆ ನಿಜವಾಗಿತ್ತು. ಆಗ ಆತ ’ಸರ್. ಕೃಪಾಕರ ಸೇನಾನಿ ಸಳ್ಳನ್ನಂತೂ ಬರೆಯುವುದಿಲ್ಲ. ಅಲ್ಲವಾ ಸಾರ್’ ಎಂದ. ನನಗೂ ಮಾಡಲು ಬೇರೆ ಕೆಲಸವಿರಲಿಲ್ಲ. ಜೊತೆಗೆ ಈ ಪುಸ್ತಕ ಯರ್ಯಾರ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಭಾವ ಬೀರಿದೆ ಎಂಬ ಕುತೂಹಲವೂ ಇದ್ದುದರಿಂದ ಇಲ್ಲ ಎಂದು ತಲೆಯಲ್ಲಾಡಿಸಿದೆ. ’ನೋಡಿ ಸರ್, ಕೃಪಾಕರ ಸೇನಾನಿ ಸುಳ್ಳು ಬರೆಯುವವರಲ್ಲ. ಡಾ.ಮೈಥಿ ಹೇಳಿದ ಭವಿಷ್ಯ ನಿಜವಾಗಿದೆ ಅಲ್ಲವಾ ಸರ್’ ಎಂದ. ನಾನು ’ಅದು ಹೇಗೆ’ ಎಂದೆ.
’ನೀವೆ ನೋಡಿ ಸಾರ್. ಮೈಥಿ ವಿಜ್ಞಾನಿ. ಆತನೂ ಕಾರಣವಿಲ್ಲದೆ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಆತ ಕೃಪಾಕರರಿಗೆ ಹೇಳಿದ್ದೇನು? ನಿನ್ನ ಐವತ್ತನೇ ವಯಸ್ಸಿಗೆ ನೀನು ವಿಶ್ವವಿಖ್ಯಾತನಾಗುತ್ತೀಯ ಎಂದು’ ಆ ವಾಕ್ಯವನ್ನು ಬೆರಳಿನಿಂದ ತೋರಿಸುತ್ತಾ ಹೇಳಿದ. ’ಈಗ ಅದು ನಿಜವಾಗಿದೆ. ಕೃಪಾಕರ ಸೇನಾನಿ ಇಬ್ಬರೂ ದಿ ಪ್ಯಾಕ್ ನಿಂದ ವಿಶ್ವವಿಖ್ಯಾತರಾಗಿದ್ದಾರೆ. ಮೈಥಿಯವರು ಹೇಳಿದ್ದ ಭವಿಷ್ಯ ನಿಜವಾಗಿದೆ’ ಎಂದು ಘೋಷಿಸಿಯೇಬಿಟ್ಟ! ಮುಂದುವರೆದು ’ಸರ್ ಇನ್ನು ಮುಂದೆ ನೀವು ಜೋತಿಷ್ಯ ನಂಬಬಾರದೇಕೆ?’ ಎಂದು ಪ್ರಶ್ನಿಸಿದ. ನಾನು ಏನೂ ಮಾತನಾಡಲಿಲ್ಲ. ಆತನ ಬುದ್ಧಿವಂತಿಕೆಗೆ ಮನಸ್ಸಿನಲ್ಲಿ ನಗುತ್ತಿದ್ದೆ. ಮತ್ತೆ ಆತನೇ ಮಾತು ಮುಂದುವರೆಸಿದ.
’ಸರ್ ಇನ್ನೂ ಒಂದು ಉದಾಹರಣೆ ಇದೇ ಪುಸ್ತಕದಿಂದ ತೋರಿಸಿಕೊಡುತ್ತೇನೆ. ಆಗಲಾದರೂ ನೀವು ಭವಿಷ್ಯ ಜೋತಿಷ್ಯ ಎಲ್ಲಾ ನಂಬುತ್ತೀರಾ’ ಎಂದ. ನಾನು ಅದೇನಿರಬಹುದು ಎಂದು, ’ಮೊದಲು ತೋರಿಸು. ಆಮೇಲೆ ನೋಡೋಣ’ ಎಂದೆ. ’ಡಾ.ಮೈಥಿ ವೀರಪ್ಪನ ಕೈನೋಡಿ ಏನು ಹೇಳಿದರು, ಗೊತ್ತಾ?’ ಎಂದ. ನನಗೆ ಮೈಥಿ ಹೇಳಿದ ಮಾತು ಸೇನಾನಿ ಹತ್ತು ವರ್ಷ ಹೆಚ್ಚಿಸಿ ಹೇಳಿದ್ದು, ಕೃಪಾಕರ, ಸೇನಾನಿಯನ್ನು ಹೊಸ ಬ್ರಹ್ಮನೆಂದು ಕರೆದಿದ್ದು ಎಲ್ಲಾ ನೆನಪಾಯಿತು. ಆದರೂ ಇಲ್ಲ ಎನ್ನುವಂತೆ ತಲೆಯಾಡಿಸಿದೆ. ’ಮೈಥಿ, ಇವನು ಇನ್ನು ಹತ್ತು ವರ್ಷ ಸಾಯುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಸೇನಾನಿ ಹತ್ತು ಸೇರಿಸಿ ಎಪ್ಪತ್ತು ಅಂದಿದ್ದರು. ಈಗ ಹೇಳಿ. ಯಾರ ಮಾತು ನಿಜವಾಯಿತು. ಮೈಥಿ ಹೇಳಿದ ಸರಿಸುಮಾರು ಹತ್ತು ವರ್ಷದ ನಂತರ ವೀರಪ್ಪನ್ ನೆಗೆದುಬಿದ್ದ. ಸೇನಾನಿ ಹತ್ತು ವರ್ಷ ಹಚ್ಚಿಸಿ ಹೇಳಿದ್ದು ಸುಳ್ಳಾಯಿತು. ಮೈಥಿ ಒಳ್ಳೆಯ ಭವಿಷ್ಯಕಾರರು. ವಿಜ್ಞಾನಿ ಬೇರೆ. ಈಗ ಎಲ್ಲಿದ್ದಾರೋ ಏನೋ!’ ಎಂದು ಯೋಚಿಸತೊಡಗಿದ. ಗೊತ್ತಾದರೆ ಮೈಥಿಯವರನ್ನು ಹುಡುಕಿ ಹೊರಟುಬಿಡುತ್ತಿದ್ದನೋ ಏನೋ?
ನಾನು ’ಸರಿಯಪ್ಪ ಮೈಥಿ ಸಿಕ್ಕರೆ ನಿನಗೆ ಹೇಳುತ್ತೇನೆ. ಸದ್ಯಕ್ಕೆ ಹೊರಡು. ನನಗೆ ಬೇರೆ ಕೆಲಸವಿದೆ’ ಎಂದೆ. ಅದಕ್ಕೆ ಆತ, ’ಸರ್ ನೀವು ಏನೂ ಹೇಳಲೇ ಇಲ್ಲ. ಭವಿಷ್ಯ ಜೋತಿಷ್ಯ ಎಲ್ಲಾ ನಿಜ ಎಂದು ಒಪ್ಪಿಕೊಳ್ಳಿ. ಇಲ್ಲ ಇದನ್ನು ಬರೆದಿರುವ ಕೃಪಾಕರ ಸೇನಾನಿಯವರು ಸುಳ್ಳು ಸುಳ್ಳೇ ಬರೆದಿದ್ದಾರೆ ಎಂದು ನೀವು ಒಪ್ಪಿಕೊಳ್ಳಬೇಕಾಗುತ್ತದೆ!’ ಎಂದ.
ನಾನು ಕುಸಿದು ಹೋದೆ. ಏನೇನೋ ಹೇಳಿ ಅವನನ್ನು ಕಳುಹಿಸಿದೆ. ಒಂದು ಪುಸ್ತಕ ಯಾವ್ಯಾವ ರೀತಿ ಯೋಚನೆಗಳನ್ನು ಒಬ್ಬ ಓದುಗನಲ್ಲಿ ಹುಟ್ಟುಹಾಕುತ್ತದೆ ಎಂಬುದನ್ನು ಕಂಡು ನನಗೆ ವಿಸ್ಮವಾಗಿತ್ತು. ನಂತರ ಆತ ಹೇಳಿದ ವಿಚಾರಗಳನ್ನು ಒಂದಕ್ಕೊಂದು ತಾಳೆ ಹಾಕಿದೆ. ಕೃಪಾಕರ ಸೇನಾನಿಯವರು ಇಂದು ವಿಶ್ವವಿಖ್ಯಾತರಾಗಿದ್ದಾರೆ. ವೀರಪ್ಪನ್ ಸತ್ತುಹೋಗಿದ್ದಾನೆ. ಮೈಥಿ ಎಲ್ಲಿದ್ದಾರೋ ಗೊತ್ತಿಲ್ಲ. ಇದರ ಬಗ್ಗೆ ಕೃಪಾಕರ ಸೇನಾನಿ ಏನು ಹೇಳಬಹುದು ಎಂಬ ಕುತೂಹಲವಂತೂ ನನ್ನಲ್ಲಿ ಉಳಿದುಬಿಟ್ಟಿದೆ.
ಓವರ್ ಟು ಕೃಪಾಕರ ಸೇನಾನಿ!
9 comments:
ಸತ್ಯನಾರಾಯಣರೆ...
ನಂಬಿದರೆ ಇದೆ..
ಇಲ್ಲವಾದಲ್ಲಿ ಇಲ್ಲ...
ಆದರೆ ಅಸಹಾಯಕ ಸ್ಥಿತಿಯಲ್ಲಿ ಈ ಭವಿಷ್ಯಗಳು ಧೈರ್ಯಕೊಡುವದಂತೂ ನಿಜ...
ನನಗಂತೂ ಇವುಗಳ ಬಗೆಗೆ ಹೆಚ್ಚಿಗೆ ಗೊತ್ತಿಲ್ಲ..
ಒಂದು ಸುಂದರ ಅನುಭವ ಹಂಚಿಕೊಂಡು ನಮ್ಮಲ್ಲೂ ಕುತೂಹಲ ಹುಟ್ಟಿಸಿಬಿಟ್ಟಿದ್ದೀರಿ...
very Interesting........
Interesting..!!
ಒಂದು ಸುಂದರ ಅನುಭವ ಹಂಚಿಕೊಂಡು ನಮ್ಮಲ್ಲೂ ಕುತೂಹಲ ಹುಟ್ಟಿಸಿಬಿಟ್ಟಿದ್ದೀರಿ
ತು೦ಬಾ ಅಸಕ್ತಿಕರವಾಗಿದೆ.
vichaara haagu nimma baraha eradu interesting aagide....
shyamala
ಸರ್, ಪುಸ್ತಕಗಳೂ ವಿಸ್ಮಯವೇ ಸರಿ.
ಕೃಪಾಕರ ಸೇನಾನಿಯ ಶ್ರಧ್ಧೆ ನೋಡಿ ಅವರು ಹಾಗೇ ಹೇಳಿರಲೂಬಹುದು. ಜೊತೆಗೆ ವೀರಪ್ಪನ್ನನ್ನು ಬೇಟೆಯಾಡಲು ಕಾಯುತ್ತಿದ್ದರು. ನಿಜವಾಗಲೂ ಭವಿಷ್ಯದ ಬಗ್ಗೆ ತಲೆ ಮೇಲೆ ಹೊಡೆದಂತಿದೆ.
ಸರ್,
ಅವತ್ತು ಪ್ಯಾಕ್ ನೋಡಲು ನನಗೆ ಫೋನ್ ಮಾಡಿದಾಗ ನಾನು ಪ್ರೋಗ್ರಾಂನಲ್ಲಿದ್ದೆ. ಈ ಮೊದಲು ಅದನ್ನು ಅನೇಕ ಬಾರಿ ನೋಡಿದ್ದೇನೆ. ಅವರ ಸಾಹಸ ಮತ್ತು ಸಾಧನೆಗಳು ಮತ್ತು ಪ್ರಾಮಾಣಿಕ ಪ್ರಯತ್ನಗಳು ಈ ಚಿತ್ರದಲ್ಲಿ ಎದ್ದುಕಾಣುತ್ತವೆ. ಅದೆಲ್ಲಾ ಸರಿ, ಇದ್ಯಾರಿದೂ ಹೊಸ ಜ್ಯೋತಿಷ್ಯವನ್ನು ನಂಬಿಸುವ ವಿಚಾರ....
ಅದು ಅವರವರಿಗೆ ಬಿಟ್ಟಿದ್ದು. ನಮ್ಮಲ್ಲಿ ಆಸಕ್ತಿ ಇದ್ದರೆ ಮಾತ್ರ ಅದೆಲ್ಲಾ ಇಷ್ಟವಾಗುವುದು.
ಒಟ್ಟಾರೆ ಈ ವಿಚಾರವಂತೂ ನನಗೆ ಕುತೂಹಲ ಹುಟ್ಟಿಸುವುದಿಲ್ಲ..
:-)
Post a Comment