ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಲವತ್ತೆಂಟನ್ನು ಮೈಸೂರು ಶಿವಮೊಗ್ಗ ರಸ್ತೆ ಛೇದಿಸುವಲ್ಲಿರುವುದೇ ವರಗೂರು ಹ್ಯಾಂಡ್ ಪೋಸ್ಟ್. ನೀವು ಆ ಮಾರ್ಗವಾಗಿ ಓಡಾಡುವ ಬಸ್ಸುಗಳಲ್ಲಿ ಅಥವಾ ನಿಮ್ಮ ನಿಮ್ಮ ಕಾರುಗಳಲ್ಲಿ ಪ್ರಯಾಣಿಸುವಾಗ ಈ ಹ್ಯಾಂಡ್ಪೋಸ್ಟಿನಲ್ಲಿ ಆಕಡೆ ಈಕಡೆ ಕಣ್ಣಾಡಿಸಿದ್ದರೆ ನಿಮ್ಮ ಕಣ್ಣಿಗೆ ಕಾಣುವುದು, ಮೊದಲ ಸುತ್ತಿನಲ್ಲಿ ಹತ್ತಾರು ಪೆಟ್ಟಿಗೆ ಅಂಗಡಿಗಳು. ಎರಡನೆಯ ಸುತ್ತಿನಲ್ಲಿ ಒಂದೈವತ್ತು ಹೆಂಚಿನ-ಆರ‍್ಸಿಸಿಯ ಮನೆಗಳು, ಸ್ಕೂಲು, ಮಸೀದಿ, ರೈಸ್ ಮಿಲ್ಲು. ಮೂರನೆಯ ಸುತ್ತಿನಲ್ಲಿ ಸುಣ್ಣದ ಕಾರ್ಖಾನೆ, ಹಾಲೋಬ್ಲಾಕ್ಸ್ ಮಾಡುವ ಫ್ಯಾಕ್ಟರಿಗಳು, ಡಾಬಾ ಇತ್ಯಾದಿ ಇತ್ಯಾದಿ . . .
ಆದರೆ ನನಗೆ ಇಲ್ಲಿ ಮುಖ್ಯವಾಗುವುದು ಹತ್ತಿಪ್ಪತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಒಂದಾದ ಶಮೀವುಲ್ಲಾನ ಮಾಡರ‍್ನ್ ಸೈಕಲ್ ಷಾಪ್! ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಈ ಶಮೀವಲ್ಲಾನನ್ನು ನೋಡಿದ್ದೆ. ಆದರೆ ಆ ಮಾರ್ಗದಲ್ಲಿ ನಾನು ಪ್ರಯಾಣಿಸುವಾಗ, ಚನ್ನರಾಯಪಟ್ಟಣಕ್ಕೆ ಹೋಗುವಾಗ ಬಸ್ಸಿನಲ್ಲಿ ಎಡಗಡೆ ಕುಳಿತಿದ್ದರೆ, ನನ್ನ ಊರಿಗೆ ಹೋಗುವಾಗ ಬಲಗಡೆ ಕುಳಿತಿದ್ದರೆ, ಆತನ ಅಂಗಡಿಯ ಕಡೆ ಕಣ್ಣಾಡಿಸದೇ ಬಿಡುತ್ತಿರಲಿಲ್ಲ. ಆಗೆಲ್ಲಾ ನನ್ನ ಕಣ್ಣಿಗೆ ಬೀಳುತ್ತಿದ್ದ ಕೆಲವು ದೃಶ್ಯಗಳೆಂದರೆ, ತುಸು ವಾಲಿಕೊಂಡಿದ್ದ ಒಂದು ಹಳೆಯ ಪೆಟ್ಟಿಗೆ ಅಂಗಡಿ, ಅದರ ಮುಂದೆ ನಿಂತಿದ್ದ ನಾಲ್ಕಾರು ಸೈಕಲ್ಲುಗಳು, ಪಂಚರ್ ಹಾಕುತ್ತಲೋ, ಚಕ್ರದ ಬೆಂಡ್ ತೆಗೆಯುತ್ತಲೋ ಕುಳಿತಿರುತ್ತಿದ್ದ ಶಮೀವುಲ್ಲಾ, ಒಮ್ಮೊಮ್ಮೆ ಪಂಚರ್ ಹಾಕುತ್ತಿದ್ದ ಸುಮಾರು ಹತ್ತು ಹದಿನೈದು ವರ್ಷದ ಹುಡಗ (ಬಹುಶಃ ಅವನ ಮಗನಿರಬಹುದು), ಪೆಟ್ಟಿಗೆ ಅಂಗಡಿಯ ಮುಂದೆ ಎರಡು ಮರದ ತುಂಡುಗಳ ಮೇಲೆ ಇನ್ನೊಂದು ಮರದ ತುಂಡು ಇಟ್ಟು ಭದ್ರಪಡಿಸಿದ್ದ ಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಾ, ಬೀಡಿ ಸೇದುತ್ತಾ ಬಸ್ಸಿಗೋ ಇನ್ಯಾವುದಕ್ಕೋ ಕಾಯುತ್ತಿದ್ದ ರೈತಾಪಿ ಜನಗಳು ಹೀಗೇ . . . ಆ ಚಿತ್ರಗಳು ಕಣ್ಣಮುಂದೆ ಚಲಿಸಿ ಮಾಯವಾಗುತ್ತವೆ.
ಆಗ, ಇಪ್ಪತ್ತೈದು ವರ್ಷಗಳ ಹಿಂದೆ, ನನಗೆ ಈತನ ಹೆಸರು ಕುಲ ಗೋತ್ರ ಯಾವುದೂ ಗೊತ್ತಿರಲಿಲ್ಲ. ನಾನೀಗಾಗಲೇ, ನನ್ನ ಹೈಸ್ಕೂಲು ದಿನಗಳು ಪುಸ್ತಕದಲ್ಲಿ ದಾಖಲಿಸಿರುವಂತೆ, ಮಂಜಣ್ಣ ನನಗೆ ಓಡಿಸಲು ಅವಕಾಶ ಮಾಡಿಕೊಟ್ಟಿದ್ದ ಹಿರೋಮೆಜೆಸ್ಟಿಕ್ ಮೋಟರ್ ಸೈಕಲ್ಲಿನ ಸ್ಟಾರ‍್ಟಿಂಗ್ ಪ್ರಾಬ್ಲೆಮ್ಮನ್ನು ಕ್ಷಣಾರ್ಧದಲ್ಲಿ ಸರಿಮಾಡಿಕೊಟ್ಟಿದ್ದ ಈ ಶಮೀವುಲ್ಲ ಆಗಿನ್ನೂ ಮೂವತ್ತು ಮೂವತ್ತೈದರ ಪ್ರಾಯದವ. ಈಗ ನಾನು ಮೊನ್ನೆ, ಅವನನ್ನು ಭೇಟಿಯಾದಾಗ ನೋಡಿದ್ದು, ಸುಮಾರು ಅರವತ್ತು ವರ್ಷಗಳ, ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡ, ಬೀಡಿ ಎಳೆದೂ ಎಳೆದೂ ಒಳ ಹೋಗಿದ್ದ ಕೆನ್ನೆಗಳ, ದಾಡಿಯೆಲ್ಲಾ ಮೆಹಂದಿಯ ಬಣ್ಣದಿಂದ ಕೆಂಚಗಾಗಿದ್ದ ಶಮೀವುಲ್ಲಾನನ್ನು.
ನಾನು ಬೆಂಗಳೂರಿನಲ್ಲಿ ಕುಳಿತು, ನನ್ನ ತೋಟದಲ್ಲಿ ಅತ್ಯಂತ ಕಡಿಮೆ ದುಡ್ಡಿನಲ್ಲಿ ಕೊಬ್ಬರಿ ಶೆಡ್ ಮಾಡಲು ರೂಪಿಸಿದ ಹತ್ತಾರು ಯೋಜನೆಗಳಲ್ಲಿ ಒಂದನ್ನು ಕಾರ್ಯಗತಗೊಳಿಸಲು ಹಾಲೋಬ್ಲಾಕ್ಸುಗಳ ಬೆಲೆ ತಿಳಿದುಕೊಳ್ಳಬೇಕಾಗಿತ್ತು. ಅದಕ್ಕಾಗಿ ವರಗೂರು ಹ್ಯಾಂಡ್ಪೋಸ್ಟಿನಲ್ಲಿ ಪೈಪೋಟಿಯಲ್ಲಿ ನಡೆಯುತ್ತಿದ್ದ ಮೂರು ಫ್ಯಾಕ್ಟರಿಗಳಲ್ಲಿ ವಿಚಾರಿಸಿ, ಮತ್ತೆ ನನ್ನೂರಿಗೆ ಬಸ್ ಹತ್ತಲು ಅಲ್ಲಿಗೆ ಹೋಗಿದ್ದೆ. ಸಣ್ಣದಾಗಿ ಮಳೆ ಪ್ರಾರಂಭವಾಗಿದ್ದರಿಂದ ಹತ್ತಿರವೇ ಇದ್ದ ಶಮೀವುಲ್ಲಾನ ಸೈಕಲ್ ಷಾಪಿನ ಮುಂಗಟ್ಟಿಗೆ ಧಾವಿಸಿದ್ದೆ. ಶಮೀವುಲ್ಲಾ ಸೈಕಲ್ಲುಗಳನ್ನೆಲ್ಲಾ ಅಂಗಡಿಯೊಳಗೆ ಒತ್ತೊತ್ತಾಗಿ ಜೋಡಿಸಿ ಅಂಗಡಿ ಮುಚ್ಚುವ ಸನ್ನಾಹದಲ್ಲಿದ್ದ. ಮಳೆ ಬಂದಿದ್ದರಿಂದ ಅಂಗಡಿ ಮುಚ್ಚುವುದನ್ನು ನಿಲ್ಲಿಸಿ ಮತ್ತೆ ಅಂಗಡಿಯ ಹೊರಗೆ ನಿಂತುಕೊಂಡ. ನಾನು ಒಮ್ಮೆ ಅಂಗಡಿಯಲ್ಲೆಲ್ಲಾ ಕಣ್ಣಾಡಿಸಿದೆ. ಪೆಟ್ಟಿಗೆ ಅಂಗಡಿಯಲ್ಲಿ ಬರೀ ಸೈಕಲ್ಲುಗಳೇ ತುಂಬಿಹೋಗಿದ್ದವು. ಇನ್ನು, ಒಂದೇ ಒಂದು ಸೈಕಲ್ಲಗಲೀ, ಒಬ್ಬ ವ್ಯಕ್ತಿಯಾಗಲೀ ಆ ಅಂಗಡಿಯಲ್ಲಿ ಪ್ರವೇಶ ಪಡೆಯುವಂತಿರಲಿಲ್ಲ! ಒಂದು ತಗಡಿನ ಮೇಲೆ `ಮಾಡರ‍್ನ್ ಸೈಕಲ್ ಷಾಪ್, ಪ್ರೊ. ಶಮೀವುಲ್ಲ`ಎಂದು ಬರೆದಿತ್ತು. ಅಂಗಡಿಯ ಮೂಲೆಯೊಂದರಲ್ಲಿ ಯಡ್ಯೂರಪ್ಪನ ಚಿತ್ರ ನಗುತ್ತಿತ್ತು! ನನಗೋ ಆಶ್ಚರ್ಯ. ಆದರೆ ಅವನನ್ನು ಹೇಗೆ ಕೇಳುವುದು? ಅದಕ್ಕೆ ನನ್ನ ಅವನ ಮೊದಲ ಭೇಟಿಯ ಸಂದರ್ಭವನ್ನು ನೆನಪಿಸಿ ಪರಿಚಯಕ್ಕೆ ಮುಂದಡಿಯಿಟ್ಟೆ.
`ದಿನಕ್ಕೆ ಹತ್ತಾರು ಜನ ಬಂದು ಹೋಗೋ ಜಾಗ. ಇಪ್ಪತ್ತೈದು ವರ್ಷದ ಹಿಂದೆ ಮೋಟ್ರುಸೈಕಲ್ಲು ರಿಪೇರಿ ಮಾಡಿಕೊಟ್ಟಿದ್ದನ್ನು ಹೇಗೆ ನೆನಪಿಟ್ಟುಕೊಳ್ಳಲಿ ಹೇಳಿ?`ಎಂದು ಮಾತಿಗೆ ಮೊದಲಿಟ್ಟ.
ಸೋನೆ ಸ್ವಲ್ಪ ಬಿರುಸಾಗಿಯೇ ಬರುತ್ತಿದ್ದುದರಿಂದ ನನಗೂ ಮಾತನಾಡಲು ಸಾಕಷ್ಟು ಸಮಯ ಸಿಕ್ಕಿತ್ತು. `ವರಗೂರು ಮಂಜಣ್ಣ, ಕುಂದೂರುಮಠದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ, ಇಬ್ಬರನ್ನು ಮದುವೆಯಾಗಿದ್ದ`ಎಂದು ನೆನಪು ಮಾಡಿಕೊಡಲು ಪ್ರಯತ್ನಿಸಿದೆ.
ತಕ್ಷಣ, `ಆ ಮಂಜಣ್ಣನ ಗಾಡಿಯಾ? ಗೊತ್ತಾಯ್ತು ಬಿಡಿ. ಆಗ ನೀವು ಬಂದಿದ್ದಿರಾ? ಯಾವ್ದೋ ಸ್ಕೂಲು ಮಕ್ಕಳಲ್ಲವಾ? ಆ ಮಂಜಣ್ಣ ಈಗ ಎಲ್ಲಿದ್ದಾನೋ? ಇನ್ನೇನೇನು ವೇಷ ಹಾಕಿದ್ದಾನೋ? ಗಾರೆ ಕೆಲ್ಸ ಆಯ್ತು. ಮೇಸ್ತ್ರಿಕೆಲಸ್ ಆಯ್ತು. ಹೋಟೆಲ್ ಆಯ್ತು`ಎಂದ.
ನಾನು `ಅದೇ, ಆ ಸ್ಕೂಲು ಮಕ್ಕಳಲ್ಲಿ ಇದ್ದವನು ನಾನೆ ನೋಡು`ಎಂದೆ. ಮುಂದುವರೆದು, `ಬಹಳ ಸೈಕಲ್ಲುಗಳಿವೆಯಲ್ಲಾ, ಬ್ಯುಸಿನೆಸ್ ಜೋರೋ`ಎಂದೆ.
`ಹೌದು, ಎಲ್ಲಾ ಯಡ್ಯೂರಪ್ಪನ ದಯೆ`ಎಂದು ಯಡ್ಯೂರಪ್ಪನ ಫೋಟೋ ಕಡೆ ಕೈತೋರಿಸಿದ! ನನಗೆ ಬೇಕಿದ್ದುದೂ ಅದೆ.
`ಯಡ್ಯೂರಪ್ಪನ ಫೋಟೋ ಇಟ್ಟುಕೊಂಡಿದ್ದೀಯಲ್ಲ, ಅದು ಹೇಗೆ?`ಎಂದು ಕೇಳಿದೆ.
ಆತ ಬೀಡಿಯೊಂದನ್ನು ಹಚ್ಚುತ್ತಿದ್ದವನು ನಿಲ್ಲಿಸಿ `ಯಾಕೆ ಇಟ್ಟುಕೋಬಾರದಾ? ಅವರು ನಮ್ಮ ಸಿ.ಎಂ. ಅಲ್ಲವಾ?`ಎಂದು ಬೀಡಿ ಹಚ್ಚಿಕೊಂಡ. `ಈಗ ಹೇಳ್ತೀನಿ ಕೇಳಿ. ಊರತುಂಬಾ ಬರೀ ಮೋಟ್ರುಸೈಕಲ್ಲುಗಳೇ ಆಗಿ ಈ ಲಡಕಾಸಿ ಸೈಕಲ್ಲುಗಳನ್ನ ಕೇಳುವವರೇ ಇಲ್ಲದೆ, ನನ್ನ ಸೈಕಲ್ ಶಾಪ್ ಬಂದ್ ಆಗೋ ಹೊತ್ತಿನಲ್ಲಿ, ಈ ಆಪತ್ಬಾಂಧವ ಬಂದು ಈ ಇಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡೊ ಯೋಜನೆ ತಂದಿದ್ದು, ನನ್ನಂತಹ ಎಷ್ಟೋ ಮಂದಿಗೆ ಒಳ್ಳೆದಾಯ್ತು ನೋಡಿ. ದಿನಕ್ಕೆ ಐವತ್ತು ರೂಪಾಯಿ ಯಾಪಾರ ಇಲ್ದೆ ಒಪ್ಪತ್ತಿನ ಊಟಕ್ಕೆ ಲಾಟ್ರಿ ಹೊಡಿತಿದ್ದೆ. ಈಗ ದಿನಕ್ಕೆ ಸಾವ್ರ ಕಲೆಕ್ಷನ್ನು ಆದ್ರು ಆತು`ಎಂದ.
ದಂ ಎಳೆದು ಹೊಗೆ ಬಿಡುತ್ತಾ ಮಾತು ಮುಂದುವರೆಸಿದ. ನಾನೂ ಉತ್ತೇಜಕರಕವಾಗಿಯೇ ಪ್ರತಿಕ್ರಿಯಿಸುತ್ತಿದ್ದೆ. ಆದರೆ ನನ್ನ ಗಮನವೆಲ್ಲಾ ಆತನ ಮಾತಿನ ಮೇಲೆಯೇ ಇತ್ತು. `ನೋಡಿ. ಈ ಸುತ್ತಮುತ್ತ ಆರು ಹೈಸ್ಕೂಲು ಅವೆ. ಒಂದೊಂದು ಇಸ್ಕೂಲಲ್ಲಿ ನೂರು ಮಕ್ಕಳಂದ್ರು ಆರನೂರು ಮಕ್ಕಳಿದಾವೆ. ಅಷ್ಟಕ್ಕೆಲ್ಲಾ ನನ್ನದೊಂದೆ ಸೈಕಲ್ ಷಾಪ್. ಈಗ ಅರ್ಥವಾಗಿರ‍್ಬೇಕಲ್ಲ ನಿಮ್ಗೆ`ಅಂದ.
`ಆಹಾ! ಅದ್ಯಾವ ಪುಣ್ಯಾತ್ಮ ಐಡಿಯಾ ಕೊಟ್ಟನಪ್ಪ ಸೈಕಲ್ ಕೊಡೋದಿಕ್ಕೆ. ಈಯಪ್ಪ ಕೊಟ್ಟಿದ್ದೆ ಕೊಟ್ಟಿದ್ದು. ಅದೂ ಎಂಥಾ ಸೈಕಲ್ ಅಂತೀರಿ? ನಾನು ಹತ್ತಿ ಕೂತ್ಕೊಂಡು ಹೊಡೆದ್ರೆ ಸೈಕಲ್ ಚಕ್ರ ಖಲ್ಲಾಸ್! ಈ ಇಸ್ಕೂಲು ಮಕ್ಳಿಗೆ ಕೊಟ್ಟ ಮೂರೇ ವಾರದಲ್ಲಿ ಚಕ್ರ ಮುರ‍್ಕೊಂಡು, ಹ್ಯಾಂಡಲ್ ಬೆಂಡ್ ಮಾಡಿಕೊಂಡು, ಚೈನ್ ಹರ‍್ದುಕೊಂಡು ಇಲ್ಲಿಗೆ ತಂದು ಹಾಕ್ತವೆ. ಈಗಿನ ಮಕ್ಳು, ಈ ಬೈಕ್ ಜಮಾನದಲ್ಲಿ ಹುಟ್ಟಿ ಬೆಳೆದವು, ಭರ್ರ್ ಅಂತ ಹೋಗೋದೆ ಅವಕ್ಕೆ ಖುಷಿ. ಈ ಹಳ್ಳಿ ರಸ್ತೆಲಿ ಅವರ ಹೊಡತನೆಲ್ಲ ಈ ಲಡಕಾಸಿ ಸೈಕಲ್ಲು ಎಲ್ಲಿ ತಡಿತಾವೆ ಹೇಳಿ? ಇನ್ನು ಅವರ ಅಪ್ಪಂದಿರಿದಾರೆ ನೋಡಿ, ಸೈಕಲ್ ಮನೆಗೆ ಬಂದಿದ್ದ ತಡ, ಮಿಲ್ಲಿಗೆ, ರೇಷನ್ ತರೋಕೆ, ದನಿಗೆ ಮೇವು ತರಾಕೆ ಎಲ್ಲಕ್ಕೂ ಈ ಮಕ್ಳ ಸೈಕಲ್ಲೇ ಆಗ್ಬೇಕು. ಮೊದಲೇ ಲೋ ಕ್ವಾಲಿಟಿ ಐಟಮ್ಮು. ಇನ್ನು ಅವರ ಅಪ್ಪಂದಿರ ಕೈಗೆ ಸಿಕ್ಕಿದರೆ ಉಳಿಯೋದುಂಟಾ! ಜೊತೆಗೆ ಈ ಇಸ್ಕೂಲು ಮೇಷ್ಟ್ರುಗಳೋ ಕೊಟ್ಟಿರೋ ಸೈಕಲ್ಲನ್ನ ದಿನಾ ತರಲೇ ಬೇಕು ಅಂತ ಮಕ್ಳಿಗೆ ಒಂದೇ ತಾರೀಪು ಮಾಡ್ತಾರೆ. ಅವು ರಿಪೇರಿಗೆ ಅಂತ ಇಲ್ಲಿಗೆ ತಂದಾಕ್ತಾವೆ. ಒಟ್ಟಲ್ಲಿ ನನ್ನ ಅದೃಷ್ಟ. ಅಂಗಡಿ ಮುಚ್ಚಿ ಚನ್ನರಾಯಪಟ್ಟಣದಲ್ಲಿ ಆಟೋ ಓಡುಸ್ಕೊಂಡಿರೂ ಮಗನ ಮನೇಲಿ ಇದ್ಕೊಂಡು ಏನಾರ ವ್ಯಾಪಾರ ಮಾಡ್ಕೊಂಡು ಇರಾನ ಅಂದ್ಕೊಂಡಿದ್ದೆ. ಆದ್ರೆ ಈಗ ನೋಡಿ ಮಗನೇ ಆಟೋ ಓಡ್ಸೋದು ಬಿಟ್ಟು ಇಲ್ಲಿ ಬಂದು ಸೆಟ್ಲಾಗಿದಾನೆ. ಇಬ್ಬರು ಬೆಳಿಗ್ಗೆಯಿಂದ ಸಂಜೆವರ‍್ಗೂ ರಿಪೇರಿ ಮಾಡಿದ್ರೂ ಕೆಲ್ಸ ಮುಗಿಯಲ್ಲ`ಎಂದು ಅಂಗಡಿಯಲ್ಲಿ ಪೇರಿಸಿಟ್ಟ ಸೈಕಲ್ಲಿನ ರಾಸಿಯ ಕಡೆ ಕೈತೋರಿಸಿದ.
ಮಳೆ ನಿಂತಿದ್ದರೂ ಬಸ್ ಅಥವಾ ಆಟೋ ಬರದೆ ನಾನು ಹೋಗುವಂತಿರಲಿಲ್ಲ. ಮಾತಿನ ಲಹರಿಗೆ ಒಳಗಾಗಿಬಿಟ್ಟಿದ್ದ ಶಮೀವುಲ್ಲಾ ಮಾತು ನಿಲ್ಲಿಸುವಂತೆಯೂ ಇರಲಿಲ್ಲ.
ನಾನೇ `ಮತ್ತೆ ಈ ಫೋಟೋ ನಿನ್ನ ಅಂಗಡಿಗೆ ಹೇಗೆ ಬಂತು? ನಿಜವಾಗ್ಲೂ ನೀನು ಯಡ್ಯೂರಪ್ಪಗೆ ಓಟ್ ಮಾಡ್ತೀಯಾ`ಎಂದೆ.
`ನೋಡಿ ಸ್ವಾಮಿ. ನಾನು ಯಾರಿಗೆ ಓಟ್ ಹಾಕ್ತಿನೋ, ಬಿಡ್ತಿನೋ ಅದಲ್ಲ. ಆದ್ರೆ ಈವಯ್ಯನಿಂದ ನನ್ಗೆ ಉಪ್ಯೋಗ ಆಗಿದೆ, ಅದು ಮುಖ್ಯ. ಇನ್ನೂ ಹತ್ತಾರು ವರ್ಷ ಈವಯ್ಯನೇ ಸಿಎಮ್ಮಾಗಿರ‍್ಲಿ ಬಿಡಿ. ಇಲ್ಲ ಮುಂದೆ ಬರೋರು ಯಾರಾದ್ರೂ ಸರಿ. ಸೈಕಲ್ ಕೊಡೋದು ಮಾತ್ರ ನಿಲ್ಸೋದು ಬ್ಯಾಡ ಅಷ್ಟೆ' ಎಂದು ಬಾಗಿಲು ಮುಚ್ಚಲು ಅನುವಾದ.
`ಅದ್ಸರಿ ಈ ಫೋಟೋ ಬಂದ ಕಥೆ ಹೇಳಲೇ ಇಲ್ಲ ನೀನು' ಎಂದೆ.
`ಅದಾ. ಇಲ್ಲಿ ಬರೋ ಸೆಟ್ಲ್ ಬಸ್ ಹಿಂದೆ, ಯಡ್ಯೂರಪ್ಪ ಹೆಂಗಸ್ರಿಗೆ ಸೀರೆ ಕೊಡ್ತಾ ಇರೋ ಫೊಟೋ ಇತ್ತು. ಅದ್ರ ಎರಡ ಕಡೆ ಸ್ಕ್ರೂ ಕಿತ್ತೋಗಿ, ಅದು ಬಡಾ ಬಡಾ, ಬಡಾ ಬಡಾ ಅಂತ ಸೌಂಡ್ ಮಾಡ್ತಿತ್ತು. ಇಲ್ಲಿ ಟೀ ಕುಡಿಯೋಕೆ ಅಂತ ನಿಲ್ಸಿದ್ದಾಗ ಅದ್ರ ಡ್ರೈವರ್, ಸಾಬಣ್ಣ ಇದನ್ನ ಕಿತ್ತಾಕೋ ಅಂದ್ರು. ಕಿತ್ತಾಕಿದ ಮೇಲೆ ಅದನ್ನ ಏನು ಮಾಡೋದು. ಯಡ್ಯೂರಪ್ಪನ ಚಿತ್ರಾನ ಕತ್ತರಿಸಿ ಒಳಗೆ ಅಂಟಿಸ್ದೆ. ಉಳಿದಿದ್ದನ್ನ, ಇಗೋ ಇಲ್ನೋಡಿ ನಿಮ್ಮ ನೆತ್ತಿ ಮೇಲೆ, ಅಲ್ಲಿಗೆ ಹಾಕಿದೆ`ಎಂದು ಅಂಗಡಿ ಮುಂಗಟ್ಟಿಗೆ ಹಾಕಿದ್ದ ಚಪ್ಪರವನ್ನು ತೋರಿಸಿದ.
ಶೂನ್ಯದಿಂದ ಚಾಚಿರುವ ಎರಡು ಕೈಗಳಿಂದ ಸೀರೆ ತೆಗೆದುಕೊಂಡು ನಗುತ್ತಿರುವ ಇಬ್ಬರು ಹೆಂಗಸರ ಚಿತ್ರ ಅಂತರಿಕ್ಷದಲ್ಲಿ ತೇಲುತ್ತಿರುವಂತೆ ಕಾಣುತ್ತಿತ್ತು. ಶಮೀವುಲ್ಲ ಅಂಗಡಿಗೆ ಬೀಗ ಜಡಿದು, ಇನ್ನೊಂದು ಬೀಡಿ ಹಚ್ಚಿಕೊಂಡು, ಹೊರಡಲನುವಾದ. ಬರದ ಆಟೋ ಬಸ್ಸುಗಳನ್ನು ಶಪಿಸುತ್ತಾ ನಾನು ಬಂದು ಎಷ್ಟು ಹೊತ್ತು ಆಯಿತೆಂದು ಲೆಕ್ಕ ಹಾಕುತ್ತಿದ್ದೆ. ಆಗ ಇದ್ದಕಿದ್ದಂತೆ ಮೊನ್ನೆ ನನ್ನ ಮಗಳೊಂದಿಗೆ ನೋಡಿದ್ದ 'ನೈಟ್ ಅಟ್ ಮ್ಯೂಸಿಯಮ್' ಚಿತ್ರ ನೆನಪಾಯಿತು. ಪೆಟ್ಟಿಗೆ ಅಂಗಡಿಯ ಕತ್ತಲ ಮೂಲೆಯಲ್ಲಿ ನಗುತ್ತಿರುವ ಯಡ್ಯೂರಪ್ಪನ ಪೋಸ್ಟರ್ ಕೂಡಾ ನೆನಪಾಯಿತು. ಪೋಸ್ಟರಿನಲ್ಲಿದ್ದ ಯಡ್ಯೂರಪ್ಪಗೆ ಜೀವ ಬಂದು, ರಿಪೇರಿಗಾಗಿ ಪೇರಿಸಿಟ್ಟ ಸೈಕಲ್ಲುಗಳನ್ನು ಲೆಕ್ಕ ಹಾಕುತ್ತಿರಬಹುದೆ!?
15 comments:
Hahaha.. Nice one.. Yadyoorappa zindaabad!! :-)
ಡಾ. ಸತ್ಯ ತುಂಬಾ ವಾಸ್ತವಗಳ ಪ್ರತಿಫಲನವೆನ್ನುವ ರೀತಿಯ ಮತ್ತು ಬದುಕು ರೂಪಿಸುವವ ದಾರಿ ಕಂಡುಕೋತಾನೆ ಎನ್ನೋದನ್ನ ನಿಜ ನಿದರ್ಶನದ ಮೂಲಕ ಬಹಳ ರಸವತ್ತಾಗಿ ಬಣ್ಣಿಸಿದ್ದೀರಿ...ಮುದ ನೀಡ್ತು ಮನಸಿಗೆ ನಿಮ್ಮ ಲೇಖನ.
ನಮ್ಮೂರಲ್ಲಿ ಸರಕಾರ ಕೊಡುತ್ತಿರುವ ಸೈಕಲ್ ಮತ್ತು ಬಿಸಿ ಊಟಗಳ ಸಹವಾಸವೇ ಬೇಡ! - ಎಂದು ಹಲವು ಮಕ್ಕಳು ಹೋಬಳಿಯಲ್ಲಿ ವಿರಾಜಿಸುತ್ತಾ ಇರುವ ಆಂಗ್ಲ ಮಾಧ್ಯಮದ ಶಾಲೆಯನ್ನು ಸೇರುತ್ತಿದ್ದಾರೆ! ಆ ಶಾಲೆ ಆಂಗ್ಲ ಮಾಧ್ಯಮದ ಶಾಲೆಯನ್ನು ನಡೆಸುವವರಿಗೂ ಸುಗ್ಗಿ! ಅವರೂ, ತಮ್ಮ ಶಾಲೆಯಲ್ಲೊಂದು ಸಿ. ಎಂ. ಭಾವಚಿತ್ರ ಇಟ್ಟಿರ ಬಹುದು!
hilarious comedy sir.
thumbaa chennagide, Baredha shaili mana muttuvanthide.......
super sir nice
DAmodar dondole
ಹೌದು. ಯೆಡ್ಡಿ ಕೊಟ್ಟ ಸೈಕಲುಗಳೆಲ್ಲ ಲಟಾರಿ ಸೈಕಲುಗಳೇ. ಅಪಾರ ಸಂಖ್ಯೆಯಲ್ಲಿ ತಯಾರಾಗುವ ಈ ಕಳಪೆ ಸೈಕಲುಗಳಿಂದಾಗಿ ನಮಗೆ ಮಾರುಕಟ್ಟೆಯಲ್ಲಿ ಹುಡುಕಿದರೂ ಉತ್ತಮ ಸೈಕಲು ಸಿಗದು ಎನ್ನುವ ಸನ್ನಿವೇಶ ಉಂಟಾಗುವ ಲಕ್ಷಣ ಕಾಣುವುದು ಬೇಸರದ ಸಂಗತಿ.
ನಮಸ್ತೆ ಸರ್,
ಚೆನ್ನಾಗಿದೆ ಶಮಿಮ್ಸಾಬ್ ಸೈಕಲ್ ಜೀವನ..:)
ಧನ್ಯವಾದಗಳು.
ಬಿಡುವಿದ್ದಾಗ ಭೇಟಿ ಕೊಡಿ; http://pennupaper.blogspot.com/
sir... nice one... is it a true story.? if yes plz let me know...
ತುಂಬಾ ಚೆನ್ನಾಗಿ ಬಂದಿದೆ ಲೇಖನ. ಆದರೆ ಸರಿಯಾದ ಹೆಸರು ಸಮೀವುಲ್ಲಾ ಎಂದಾಗಬೇಕು. ಶಮೀವುಲ್ಲಾ ಅಲ್ಲ.
ಈಗ ಯಡಿಯೂರಪ್ಪರ ಸೈಕಲ್ ವಿತರಣೆಯಿಂದ ಸೈಕಲ್ ಶಾಪಿನವರು ಬದುಕಿದರು. ಕರ್ನಾಟಕದಲ್ಲಿ ಹಲವು ಗೃಹಕೈಗಾರಿಕೆಗಲು ಅವನತಿಯ ಹಾದಿಯಲ್ಲಿವೆ. ಬೆತ್ತದ ಕೆಲಸ, ಬಿದಿರಿನ ಬುಟ್ಟಿ ಹೀಗೇ ಹಲವಾರಿವೆ. ಇವುಗಳನ್ನೂ ಯಾವುದಾದರೂ ಒಂದು ಜನಮೆಚ್ಚುವ ಸ್ಕೀಂ ಪ್ರಾರಂಭಿಸಿದರೆ ಈ ಉದ್ಯಮಗಳಿಗೂ ಒಂದು ದಾರಿ ತೋರಿಸಿದಂತಾಗುತ್ತದೆ, ನಗರಗಳಿಗೆ ಜನರು ವಲಸೆ ಹೋಗುವುದೂ ತಪ್ಪುತ್ತದೆ.
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
www.vismayaplus.blogspot.com
ಅದ್ಬುತವಾಗಿದೆ ಸಾರ್
ತುಂಬಾ ಚೆನ್ನಾಗಿದೆ..ಕಥಾ ರೂಪದಲ್ಲಿ, ವ್ಯಂಗ್ಯಭರಿತ ಶೈಲಿ ಓದಿಸಿಕೊಂಡು ಹೋಯಿತು
Very nicely written hilarious article.
The puns and the satires are very apt to the subject and the rot in the system
Very nice article.
Very nicely written hilarious article.
The puns and the satires are very apt to the subject and the rot in the system
Very nice article.
Post a Comment