Monday, October 24, 2011

ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?

ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?
ನೋವೆ ಬಾಳಿಗೆ ಸಾಣೆಯಲ್ತೆ?
ಮಣಿಕರ್ಣಿಕೆಯಲ್ಲಿ ಮಸಣಗಾಹಿಯು ನೀನಲ್ತೆ?
ಬೃಂದಾವನದಲ್ಲಿ ತುರುಗಾಹಿಯೂ ನೀನಲ್ತೆ?
ಅದರಿಂದಲೆ ನಾನು ನಿನ್ನನ್ನು
ಸುಖದಲ್ಲಿಯೂ ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ.
೫.೯.೧೯೩೦ರಂದು ಬರೆದ ಸಾಲುಗಳಿವು. ಆದರೆ ೧೯೨೬ರ ಹೊತ್ತಿಗಾಗಲೇ ಈ ತೆರನಾದ ಮನೋಭೂಮಿಕೆ ಕುವೆಂಪು ಅವರಿಗೆ ಸಿದ್ಧಿಸಿತ್ತು ಎಂಬುದಕ್ಕೆ ಹಲವಾರು ಕವನಗಳು ಸಾಕ್ಷಿಯಾಗಿವೆ. ಮೈಸೂರಿನ ಸಂತೇಪೇಟೆಯ ಗಲಾಟೆ ಗೊಂದಲಗಳ ಗೂಡಿನಂತಿದ್ದ ರೂಮಿನಲ್ಲಿ ವಾಸವಾಗಿದ್ದ ತರುಣ ಕವಿ ಪುಟ್ಟಪ್ಪ, ಮಹಾಕವಿ ಕುವೆಂಪು ಆಗಿ ಬದಲಾಗುವ ಮಹತ್ ಘಟನೆ ಘಟಿಸುವ ಮೊದಲು ಅಂದರೆ ೫.೧೦.೧೯೨೬ರಂದು ಪ್ರಾರ್ಥನಾ ಎಂಬ (ಅಪ್ರಕಟಿತ) ಕವಿತೆಯನ್ನು ಬರೆದಿದ್ದರು. ಅಂದು ಅವರು ತೀವ್ರತರವಾದ ಜ್ವರದಿಂದ ಬಳಲಿಹೋಗಿದ್ದರು. ಅದು ಹೀಗಿದೆ.
ಕ್ಷಣಮಾತ್ರ ಹೀನಬಯಕೆಗಳ ಬಿಸುಡು, ಮನವೆ!
ಕ್ಷಣಮಾತ್ರ ಪರಮ ಬಯಕೆಯನು ಬಯಸು, ಮನವೆ!
ಧೂಮಪರಿವೃತಮಾದ ಭೂಮಿಯಿಂ ಮೇಲೇರು
ನಿರ್ಮಲಾನಿಲ ಭರಿತ ನೀಲ ಗಗನವ ಸೇರು.
ಕೊಳೆತು ನಾರುವ ತಿಪ್ಪೆಯಂ ತ್ಯಜಿಸಿ ಹಾರು.
ರಮಣೀಯತರ ಸುಮದ ನವಮಧುವ ಹೀರು.
ಕ್ಷಣಮಾತ್ರ ಹೀನಬಯಕೆಗಳ ಬಿಸುಡು, ಮನವೆ!
ಕ್ಷಣಮಾತ್ರ ಪರಮ ಬಯಕೆಯನು ಬಯಸು, ಮನವೆ!
ಮೇಲಿನ ಕವಿತೆ ಸೃಷ್ಟಿಯಾಗುವುದಕ್ಕೆ ಹತ್ತು ದಿನ ಮೊದಲೆ (೨೬.೯.೧೯೨೬) ’ಕೃಪೆ’ ಎಂಬ ಕವನ ಸೃಷ್ಟಿಯಾಗಿದ್ದು ಅದರಲ್ಲಿ ಅಭದ್ರತೆಯಿಂದ ಪಾತಾಳಕ್ಕಿಳಿದಿರುವ ತನ್ನ ಮೇಲೆ ಕೃಪೆ ಮಾಡುವಂತೆ ತಾಯಿಯನ್ನು ಕೋರುವ ಚಿತ್ರಣವಿದೆ.
ಪ್ರಾರ್ಥಾನಾರೂಪದ ಇಂತಹ ಕವಿತೆಗಳು ಸೃಷ್ಟಿಯಾದ ನಂತರ ನಡೆದ ಘಟನಾವಳಿಗಳ ಬಗ್ಗೆ ನೆನಪಿನದೋಣಿಯಲ್ಲಿ ಕವಿ ನನ್ನ ಪ್ರಾರ್ಥನೆಗೆ ಓಗೊಡುವಂತೆ ಕ್ಲೇಶರೂಪಿ ಭಗವತ್ ಕೃಪೆಯ ಗದೆಯಾಘಾತ ಬಂದೆರಗಿರು. ಕೊಳೆತು ನಾರುವ ತಿಪ್ಪೆಯಿಂದ ನನ್ನನ್ನು ರಮಣೀಯತರ ಸುಮದ ನವಮಧುವಿರುವ ಉದ್ಯಾನದೆಡೆಗೆ ಕಚ್ಚಿ ಹಾರಿತು ವಿಧಿಯ ಉಗುರುಗೊಕ್ಕು! ಎಂದು ಬರೆದಿದ್ದಾರೆ.
ಅಂದು ಸಂಜೆ ಶ್ರೀರಾಮಕೃಷ್ಣಾಶ್ರಮದಲ್ಲಿ, ನಾ. ಕಸ್ತೂರಿಯವರ ನೇತೃತ್ವದ ’ವಿವೇಕಾನಂದ ರೋವರ್ ಸ್ಕೌಟ್ಸ್’ ದಳದ ಉದ್ಘಾಟನೆಯಾಗುತ್ತದೆ. ಅಲ್ಲಿ ಕುವೆಂಪು ಅವರ ’ಶ್ರೀ ವಿವೇಕಾನಂದ ಬಾಲಚಾರರ ಹಾಡು’ ಸಾಮೂಹಿಕವಾಗಿ ಹಾಡಲ್ಪಡುತ್ತದೆ. ಆದರೆ ಕವಿಯ ಪತ್ತೆಯೇ ಇಲ್ಲ!. ಅದನ್ನರಿತ ಸ್ವಾಮಿ ಸಿದ್ಧೇಶ್ವರಾನಂದರು, ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಪುಟ್ಟಪ್ಪ ತೀವ್ರ ಜ್ವರಗ್ರಸ್ತನಾಗಿ ಮಲಗಿರುವ ಹಾಗೂ ವೈದ್ಯರ ಬಳಿಗೂ ಹೋಗದಿರುವ ಸಮಾಚಾರ ದೊರೆಯುತ್ತದೆ. ಸಮಾರಂಭ ಮುಗಿದ ಮೇಲೆ ಸ್ವಾಮೀಜಿ, ತಾತಗಾರು (ನಿವೃತ್ತ ರೈಲ್ವೆ ಅಧಿಕಾರಿ ವೆಂಕಟಸುಬ್ಬಯ್ಯನವರು) ಮತ್ತು ನಾ. ಕಸ್ತೂರಿಯವರು ಅವರನ್ನು ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ಫೀಟನ್ (ನಾಲ್ಕು ಚಕ್ರದ ಕುದುರೆಯ ಕೋಚ್, ಸ್ವಲ್ಪ ದೊಡ್ಡದು) ತೆಗೆದುಕೊಂಡು ಹೊರಡುತ್ತಾರೆ. ಆಗ ಕಸ್ತೂರಿಯವರು, ’ನಮ್ಮ ವಿವೇಕಾನಂದ ರೋವರ್ ಸ್ಕೌಟ್ದಳದ ಮೊತ್ತಮೊದಲನೆಯ ಗುಡ್ ಟರ್ನ್ ಅದೇ ಆಗಲಿ, ಪುಟ್ಟಪ್ಪನವರ ಸೇವೆ!’ ಎಂದು ತಮ್ಮ ಸಂತೋಶಶೀಲದ ವಿನೋದಾತ್ಮಕ ರೀತಿಯಲ್ಲಿ ಹೇಳಿ, ಲಕ್ಷ್ಮಣ ಮತ್ತು ಚಂದ್ರ ಎಂಬ ಇಬ್ಬರು ಸ್ಕೌಟ್ ಹುಡುಗರನ್ನು ಕರೆದುಕೊಂಡು ಹೊರಟರಂತೆ!
ಅವರೆಲ್ಲಾ ಸಂತೆಪೇಟೆಯ ಕೊಠಡಿ ತಲುಪಿದಾಗ, ಗೌರವ ಸೂಚಿಸುವುದಕ್ಕಾದರೂ ಏಳಲಾಗದಷ್ಟು ಜ್ವರಪೀಡಿತರಾಗಿ ಕವಿ ಮಲಗಿದ್ದರು. ಜ್ವರ ೧೦೪-೧೦೫ ಡಿಗ್ರಿ ಇತ್ತಂತೆ. ಅಲ್ಲಿಯ ಕೊಳಕು ವಾತಾವರಣ, ಹಾಸಿಗೆಯಲ್ಲಿ ಹುದುಗಿ ಮಲಗಿದ್ದ ಕವಿ, ಪಕ್ಕದಲ್ಲಿ ಗುಡ್ಡೆಹಾಕಿಕೊಂಡಿದ್ದ ಪುಸ್ತಕಗಳು... ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ಸ್ವಾಮೀಜಿ ಆಸ್ಪತ್ರೆಗೆ ಸೇರಿಸಲು ಬಂದಿರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರಂತೆ. (ಅದಕ್ಕೆ ಮುಂಚೆಯೇ, ಅಂದರೆ ೧೭.೨.೧೯೨೬ರಂದು ಮೊದಲಬಾರಿಗೆ ತಾತಗಾರು ಅವರ ಜೊತೆಯಲ್ಲಿ ಆ ರೂಮಿಗೆ ಬಂದಿದ್ದಾಗಲೇ, ಅದರ ಕೊಳಕುತನವನ್ನು, ಅಲ್ಲಿನ ಗಲಾಟೆಯ ವಾತಾವರಣವನ್ನು ಕಂಡು ಸ್ವಾಮೀಜಿ ’Puttappa how can a poet like you live in this dingy place?’ ಎಂದಿದ್ದರಂತೆ! ಆಗ ಅಲ್ಲಿದ್ದ ಸಂಪಿಗೆ ಮರವೊಂದನ್ನು ತೋರಿಸಿ ಕುವೆಂಪು ಅವರು ’Why Swamiji, what is wrong with the place? There is a beautiful Champak Tree!’ ಎಂದು ಉತ್ತರಿಸಿದ್ದರಂತೆ!) ಸುಮಾರು ಅರ್ಧಮುಕ್ಕಾಲು ಗಂಟೆ ಪುಸಲಾಯಿಸಿದರೂ ಕೊಠಡಿಯನ್ನು ಬಿಡಲು ಒಪ್ಪದಿದ್ದ ಕವಿಗೆ, ಸ್ವಾಮೀಜಿಯವರು, ’ಪುಟ್ಟಪ್ಪ ನಿಮಗೆ ಆಸ್ಪತ್ರೆಯಲ್ಲಿ ಮೇಲಿನ ಮಹಡಿಯಲ್ಲಿ ಅತ್ಯಂತ ಸೊಗಸಾದ ರೂಮ್ ಕೊಡಿಸುತ್ತೇನೆ. ಅಲ್ಲಿಂದ ನೋಡಿದರೆ ಮೈಸೂರು ಚಾಮುಂಡುಬೆಟ್ಟ ದೀಪದ ಸಾಲುಗಳು ಎಲ್ಲಾ ಕಾಣಸಿಗುತ್ತವೆ’ ಎಂದು ಮುಂತಾಗಿ ಪುಸಲಾಯಿಸಿದರೆ, ತಾತಗಾರು ವಿವೇಕದ ಮಾತುಗಳನ್ನು ಹೇಳಿ, ಆಸ್ಪತ್ರೆ ಸೇರುವಂತೆ ಒತ್ತಾಯಿಸಿದರಂತೆ. ’ತಾಯಿ ಇದ್ದಾಳೆ. ಯೋಗಕ್ಷೇಮವೆಲ್ಲ ಅವಳ ಕೈಲಿ’ ಎಂಬುದು ಕವಿಯ ಧೋರಣೆ! ಆದರೆ ’ನನ್ನ ಹಟಮಾರಿತನದ ಅವಿವೇಕ ಬಿಲ್‌ಕುಲ್ ಆಸ್ಪತ್ರೆಗೆ ಹೋಗಲು ಒಪ್ಪಲಿಲ್ಲ’ ಎನ್ನುತ್ತಾರೆ ಕವಿ. ಆಗ ಸ್ವಾಮೀಜಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತುಬಿಟ್ಟರಂತೆ. ಆ ಕ್ಷಣ ಸ್ವಲ್ಪಹೊತ್ತು ಯಾರೂ ಮಾತನಾಡಲಿಲ್ಲ. ’ಆ ಕ್ಷಣ’ವನ್ನು ಕುರಿತು ಕವಿ ಹೇಳುವುದು ಹೀಗೆ: ’ನನ್ನ ಭವಿಷ್ಯಜ್ಜೀವನದ ಹಣೆಯ ಬರಹದ ನಿರ್ಣಯದ ವಿಷಯದಲ್ಲಿ ಅಸುರೀ ಶಕ್ತಿಗಳೀಗೂ ದೈವೀ ಶಕ್ತಿಗಳೀಗೂ ತೂಗುಯ್ಯಾಲೆಯ ಕಾದಾಟ ನಡೆಯುತಿತ್ತೆಂದು ತೋರುತ್ತದೆ! ದೇವರ ಪಾದ ಸೇರಿದ್ದ ನನ್ನ ತಂದೆ ತಾಯಿಯರು ಆತನಲ್ಲಿ ಮೊರೆಯಿಟ್ಟಿರಬಹುದು! ಕನ್ನಡ ತಾಯಿ ತನ್ನ ಕೈಜೋಡಿಸಿ ಸರ್ವಭಾಷಾಮಯೀ ಮಹಾಸರಸ್ವತಿಗೆ ತನ್ನ ಕಂದನ ಪರವಾಗಿ ನಮನಗೈದಳೋ ಏನೊ? ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮಧುಮಗಳು, ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣಪರಮಹಂಸ, ಶ್ರೀರಾಮಾಯಣದರ್ಶನಂ ಇತ್ಯಾದಿ ಕೃತಿರೂಪಿ ಅಲೋಕಚೇತನಗಳು ತಮ್ಮ ಆಗಾಮೀ ಅವತರಣ ಪಾತ್ರದ ಶಾರೀರಿಕ ಕ್ಷೇಮಕ್ಕಾಗಿ ತಪೋಲೋಕಯಾತ್ರಿಗಳಾಗಿದ್ದುವೊ ಏನೊ? ವಿಶಾಲ ಜಗಜ್ಜೀವನದಲ್ಲಿ ಒಂದು ಯಃಕಶ್ಚಿತ ನಗರದ ಯಃಕಶ್ಚಿತ ಬೀದಿಯ ಒಂದು ಯಃಕಶ್ಚಿತ ಹೋಟೆಲಿನ ಉಪ್ಪರಿಗೆಯ ಕಿರುಕೊಠಡಿಯಲ್ಲಿ ಒಬ್ಬ ಯಃಕಶ್ಚಿತ ವಿದ್ಯಾರ್ಥಿಯ ಕ್ಷೇಮಕ್ಕಾಗಿ ಆ ಸಂಜೆ ಜರುಗುತ್ತಿದ್ದ ಆ ಘಟನೆ ತಾತ್ಕಾಲಿಕ ಬಾಹ್ಯ ದೃಷ್ಟಿಗೆ ಅತ್ಯಂತ ಯಃಕಶ್ಚಿತವಾಗಿ ತೋರುತ್ತಿದ್ದರೂ ನನ್ನನ್ನು ಗುರುವಿನೆಡೆಗೆ ಕರೆದ ಗುರಿವಿಗೆ - ಆ ಸಂನ್ಯಾಸಿಗೆ- ಆತನ ಯೋಗದೃಷ್ಟಿಗೆ- ಅದಾಗಿತ್ತು ಒಂದು ಮಹದ್ ಘಟನೆ!’
ಸ್ವಾಮೀಜಿ ತುಸು ಗದರಿಸುತ್ತಲೇ ಒತ್ತಾಯಿಸಿದಾಗ, ಅಂತೂ ಕೊನೆಗೆ ಆಸ್ಪತ್ರೆ ಸೇರಲು ಕವಿ ಒಪ್ಪಿಕೊಳ್ಳುತ್ತಾರೆ. ಫೀಟನ್ ಏರಿ ಕೃಷ್ಣರಾಜೇಂದ್ರ ಆಸ್ಪತ್ರೆ ಸೇರುತ್ತಾರೆ. ಸ್ವಾಮೀಜಿ ಹೇಳಿದ್ದಂತೆ ಮೇಲಿನ ಮಹಡಿಯ ಸೊಗಸಾದ ಸ್ಥಳದಲ್ಲಿ ಸುಪ್ಪತ್ತಿಗೆಯ ಮಂಚ ದೊರಕಿತಂತೆ! ಆದರೆ ಒಂದೇ ದಿನದಲ್ಲಿ, ಆ ಸಮಯದಲ್ಲಿ ಅವರಿಗೆ ಕಜ್ಜಿಯೂ ಇದ್ದುದರಿಂದ ಆಸ್ಪತ್ರೆಯ ಮುಖ್ಯ ಕಟ್ಟಡದ ಹಿಂಬದಿಯಲ್ಲಿ ಸ್ವಲ್ಪ ದೂರದಲ್ಲಿದ್ದ ಷೆಡ್ಡುಗಳಿಗೆ ವರ್ಗಾಯಿಸಿದರಂತೆ. ಆ ಸಮಯದಲ್ಲಿ ಮಾನಸಿಕ ಖಿನ್ನತೆಯೂ ಉಂಟಾಗುತ್ತಿತ್ತಂತೆ. ಸ್ವಾಮೀಜಿ ತಂದುಕೊಟ್ಟಿದ್ದ ಶ್ರೀಗುರುಮಹರಾಜ್, ಶ್ರೀಮಹಾಮಾತೆ ಮತ್ತು ಶ್ರೀ ವಿವೇಕಾನಂದರು ಇದ್ದ ಮಡಿಸಿಟ್ಟುಕೊಳ್ಳಬಹುದಾಗಿದ್ದ ಒಂದು ಚಿತ್ರಪಟವನ್ನು ನೋಡುತ್ತಾ ನೋಡುತ್ತಾ ಧೈರ್ಯ ತಂದುಕೊಳ್ಳುತ್ತಿದ್ದರಂತೆ. ಅದನ್ನು ಎದೆಗೂ ಹಣೆಗೂ ಒತ್ತಿಕೊಳ್ಳುತ್ತಾ ಶ್ರೀಗುರುವನ್ನು ಬೇಡಿಕೊಳ್ಳುತ್ತಿದ್ದರಂತೆ! (ಆ ಚಿತ್ರಪಟ ನೆನಪಿನ ದೋಣಿಯಲ್ಲಿ ಬರೆಯುವಾಗಲೂ ಅವರ ಬಳಿಯಿತ್ತಂತೆ). ಮಾನಸಿಕವಾಗಿ ಅತ್ಯಂತ ಕ್ಷೋಭೆಗೊಳಗಾಗಿದ್ದ ಕವಿಯ ಮನಸ್ಸಿಗೆ ಸ್ವಾಮೀಜಿಯ ಸಾಂತ್ವಾನ ಹಿತವಾಗುತ್ತಿತ್ತು. ಅವರ ಪ್ರಭಾವದಿಂದ ವಿಶೇಷ ಔಷಧ ಉಪಚಾರಗಳು ನಡೆದಿದ್ದವು. ಆಗ ಒಬ್ಬ ಯುವ ಡಾಕ್ಟರ್ ಒಬ್ಬರು, ತರುಣಿಯಾದ ನರ್ಸಿಗೆ ಸಲಹೆ ಸೂಚನೆ ಕೊಡುತ್ತಿದ್ದಾಗ, ಕುವೆಂಪುವನ್ನು ತೋರಿಸುತ್ತಾ ’You have got a beautiful patient to nurse!’ ಎನ್ನುತ್ತಿದ್ದರಂತೆ. ಅಂತಹ ಸರಸ ಸಂಭಾಷಣೆಯ ಮಾತುಗಳು, ಆವೊತ್ತಿನ ಕವಿಯೆ ಮನಸ್ಥಿತಿಗೆ, ಅತಿರೇಕದ ನೀತಿಪ್ರಜ್ಞೆಗೆ ಅಸಹ್ಯವಾಗಿ ಜುಗುಪ್ಸೆ ಹುಟ್ಟಿಸುತ್ತಿದ್ದುವಂತೆ! ಈ ತೆರನಾದ ಅಸ್ಥಿರ ಮನಸ್ಥಿತಿಯ ಸಮಯದಲ್ಲೇ (೨೧.೧೦.೧೯೨೬) ಬರೆದ ಎರಡು ಕವಿತೆಗಳು ’ನನ್ನ ಹೃದಯದಲ್ಲಿ ಉಂಟಾಗಿದ್ದ ಕ್ಷೋಭೆ, ಭೀತಿ, ದುಃಖ, ಧೈನ್ಯಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತವೆ’ ಎನ್ನುತ್ತಾರೆ. ಆ (ಅಪ್ರಕಟಿತ) ಕವಿತೆಗಳು ಹೀಗಿವೆ.

ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಮೇಲೆ ನೋಡೆ ಶಶಿ ತಾರೆಗಳಿಲ್ಲ
ಕಾರ ಮುಗಿಲೋ ಮುತ್ತಿದೆ ಎಲ್ಲ.
ಚಂಡ ಅನಿಲ ಗರ್ಜಿಸಿ ಭೋರೆದು
ಧರೆಯ ತಲ್ಲಣಿಸಿ ಬೀಸುವನಿಂದು.
ಗುಡುಗು ಅಂಬರದಿ ಆರ್ಭಟಿಸುತಿದೆ
ಮಿಂಚು ಥಳಥಳಿಸಿ ಓಡುತಲಿಹುದು.
ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!
ಕೂಗಿದರೆ ನಾನು, ಮರುದನಿಯಿಲ್ಲ;
ಆಪ್ತವಚನದಾ ಭರವಸೆಯಿಲ್ಲ!
ತಿರುಗಾಡುವವರ ಸುಳಿವೇ ಇಲ್ಲ;
ಬಹು ಕಾಳರಾತ್ರಿಯಿದು, ಹೇ ಜನನಿ!
ಕೇಳಿಬರುತಲಿದೆ ಕಿವಿಗಿಂಪಾಗಿ!
ಕಂಡರು ಕಾಣದ ತೆರದೊಳು ನೀನು
ಮಿಂಚಿನ ಬೆಳಕಲಿ ಅಡಗುವೆ ತೋರಿ!
ಅಂಧನಂತೆ ನಾ ಬೇಡುವೆ ನಿನ್ನ;
ಕೈಹಿಡಿದೆನ್ನನು ನಡೆಸೌ, ತಾಯೆ!
ಘೋರ ಘನ ನಿಬಿಡ ತಿಮಿರವಿದು, ತಾಯೆ,
ದಾರಿಗಾಣೆನು ಬಾ, ಕೈಹಿಡಿದು ನಡಸೆನ್ನನು!

ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ಸುತ್ತ ನೋಡೆ ನಿರ್ಜನ ಮರುಭೂಮಿ
ಎತ್ತಿಕೊಳ್ಳುವರನೊಬ್ಬರ ಕಾಣೆ!
ಜೊತೆಗಾರರೆಲ್ಲ ನಡೆದರು ಮುಂದೆ
ಏಕಾಂಗಿಯಾಗಿ ಉಳಿದೆನು ಹಿಂದೆ.
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ತಾಳಲಾರೆ ನಾನಿದು ಘೋರ ಮೌನ,
ಬಾಲನ ಕರುಣಿಸಿ ಕಾಯೌ, ತಾಯೆ.
ನಿನ್ನೆರಡು ಕರಕಮಲಗಳಿಗೆ ಮನವು
ಹಂಬಲಿಸುತಿಹುದು ಕಂಬನಿ ತುಂಬಿ.
ಎತ್ತಿಕೋ ಬಂದೆನ್ನ, ಎಲೆ ದೇವಮಾತೆ,
ಅತ್ತು ಅತ್ತು ಬಲು ಬಳಲಿದೆನಮ್ಮಾ!
ಆ ಚಿತ್ರಪಟವನ್ನು ನೋಡುತ್ತಾ ಮೊರೆಯಿಡುತ್ತಾ ಕೃಪಾಹಸ್ತಕ್ಕಾಗಿ ಹಂಬಲಿಸುತ್ತಿದ್ದಾಗಲೇ (೨೩.೧೦.೧೯೨೬) ರಚಿತವಾದ ಇನ್ನೊಂದು ಅಪ್ರಕಟಿತ ಕವನ ಹೀಗಿದೆ.
ಹೃದಯ ಸರಸಿಜನ ಜಲವು
ಆರಿಹೋಗಿದೆ, ಜನನಿ;
ಕಮಲ ನೈದಿಲೆ ಎಲ್ಲ
ಬಳಲಿ ಬೆಂಡಾಗಿಹವು.
ಅರಸಂಜೆಗಳು ಎಲ್ಲ
ಹಾರಿಹೋದವು ದೂರ
ಅಂಚಿನೊಳು ನಲಿನಲಿವ
ಹಸುರಿಲ್ಲ! ಕಳೆಯಿಲ್ಲ!
ಅಳಿದಿಹುದು ಸೊಬಗೆಲ್ಲ,
ಮಸಣದಂತಿಹುದೆಲ್ಲ;
ಕರುಣ ಸರಿಯನು ಸುರಿಸು!
ಭಕುತಿ ಬುಗ್ಗೆಯ ಬರಿಸು!
ಜಲ ತುಂಬಿ ತುಳುಕಾಡಿ,
ಮುನ್ನಿನಂದದಿ ಗಾಡಿ
ಮೆರೆಯಲಾನಂದದಿಂದ,
ಶೋಭಿಸಲಿ ಚೆಂದದಿಂದ!
ಕವಿಯ ಕರ್ಮ ನಿಂತುಹೋಗಿತ್ತು. ಅಭದ್ರತೆ ಕಾಡುತ್ತಿತ್ತು. ಖಿನ್ನತೆ ಆವರಿಸಿತ್ತು. ಭರವಸೆ ಬತ್ತುತ್ತಿತ್ತು. ಆಗೆಲ್ಲಾ ಗುರುವಿನ ಕೃಪಾಕಟಾಕ್ಷಕ್ಕಾಗಿ ಕವಿ ಹಂಬಲಿಸುತ್ತಿದ್ದರು. ಹೀಗೆ ಆರ್ತನಾದ ಹೊಮ್ಮುತ್ತಿದ್ದರೂ ಕವಿಯ ಅಂತರಾಳದಲ್ಲಿ ಅಂತರಾತ್ಮನಿಗೆ ಸಹಜವಾಗಿರುವ ಆಶಾವಾದ ತಲೆಯೆತ್ತಿ ಧೈರ್ಯಘೋಷ ಮಾಡಿ ಹುರಿದುಂಬಿಸುತ್ತಿತ್ತಂತೆ! ಮೇಲಿನ ಕವಿತೆ ರಚಿತವಾದಂದೇ (೨೩.೧೦.೧೯೨೬) ಪ್ರಸಿದ್ಧವಾದ, ತನಗೆ ತಾನೇ ಹೇಳಿಕೊಳ್ಳುವಂತೆ ಬರೆದ ’ನಡೆಮುಂದೆ’ ಎಂಬ ಕವಿತೆ ರಚಿತವಾಗಿದ್ದು. ಅದು ಕೊಳಲು ಸಂಗ್ರಹದಲ್ಲಿ ಪ್ರಕಟವಾಗಿತ್ತು. ಅ ಇಡೀ ಕವಿತೆಯನ್ನು ಅವಲೋಕಿಸಿದರೆ ಕವಿಯ ಆತ್ಮವಿಶ್ವಾಸ, ಕೆಚ್ಚು, ಧೈರ್ಯ, ಮನೋಬಲ, ಧೀರೋದಾತ್ತ ನಿಲುವು, ದರ್ಶನ ಎಲ್ಲವೂ ವಿಧಿತವಾಗುತ್ತವೆ! ಈ ಕವಿತೆ ರಚಿತವಾದ ಮೇಲೆ, ಕೆಲ ದಿನಗಳಲ್ಲೇ ಕೆ.ಆರ್.ಆಸ್ಪತ್ರೆಯಿಂದ ನೇರವಾಗಿ ರಾಮಕೃಷ್ಣಾಶ್ರಮದ ಮಡಿಲಿಗೆ ಕುವೆಂಪು ಬರುತ್ತಾರೆ!! ಅಲ್ಲಿಂದ ಮುಂದೆ ನಡೆದುದೆಲ್ಲವೂ ಈಗ ಇತಿಹಾಸ!!!
ನಡೆ ಮುಂದೆ
ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ನಡೆ!
ವೇದಾಂತ ಕೇಸರಿಯೆ, ನುಗ್ಗಿ ನಡೆ ಮುಂದೆ!
ಗರ್ಜಿಸುತ ನಡೆ ಮುಂದೆ,
ನಿರ್ಭಯದಿ ನಡೆ ಮುಂದೆ.
’ತತ್ವಮಸಿ’ ’ಬ್ರಹ್ಮಾಸ್ಮಿ’ ’ಶಿವ ನಾನು’ ಎಂದು,
ವೀರಾತ್ಮ, ಧೀರಾತ್ಮ, ನಡೆ ನುಗ್ಗು ಮುಂದೆ!
ಹಿಂದಿರುಗಿ ನೋಡದಿರು, ಅಭಯಾತ್ಮನೀನು;
ಬೆದರದಿರು! ಬೆದರದಿರು! ಅಮೃತಾತ್ಮ ನೀನು!
ಆದ್ಯಂತವಿಲ್ಲದವ ನೀನು,
ಆನಂದಶೀಲನೈ ನೀನು!
ಹಂಗಿಸಿಯದೃಷ್ಟವಂ ನುಗ್ಗು ನಡೆ ಮುಂದೆ,
ಭಂಗಿಸುತ ಮೃತ್ಯುವಂ ನಡೆ ಮುಂದೆ, ಮುಂದೆ.
ಜಗದಿ ನಿನ್ನನು ತಡೆವ ಧೀರರಾರಿಲ್ಲ;
ನಿನ್ನ ನಾದಕೆ ಕಂಪಿಪುದು ಲೋಕವೆಲ್ಲ.
ಅದ್ವೈತವಿಲಯಾಗ್ನಿ ನಿನ್ನ
ಹೃದ್ವನವ ತುಂಬಿಹುದು ಮುನ್ನ!
ಅಶುಚಿಯೆಲ್ಲವ ದಹಿಸಿ ನುಗ್ಗಿ ನಡೆ ಬೇಗ,
ಪಾಪಪುಣ್ಯಗಳಿರಲಿ ನಡೆ ಮುಂದಕೀಗ.
ಪಾಪಿ ನಾನೆಂದಳಲು ಇದು ಕಾಲವಲ್ಲ!
ಎದ್ದೇಳು, ವಿಶ್ವಾತ್ಮ, ಹೇಡಿ ನೀನಲ್ಲ!
ಸೋಹಮೆನ್ನುತ ಏಳು! ಏಳು!
ಅಚಲಾತ್ಮ, ಎದದೇಳು! ಏಳು!
ನಿದ್ದೆಯನು ಬಿಡು; ನುಗ್ಗು ನಡೆ ಮುಂದೆ, ಮುಂದೆ,
ಎದ್ದೇಳು! ಎದ್ದೇಳು! ಎದ್ದು ನಡೆ ಮುಂದೆ!
ವೇದಾಂತಕೇಸರಿಯೆ, ಗರ್ಜಿಸುತ ಹೋಗು;
ಘೋರ ವಿಪಿನಗಳೆಲ್ಲ ಕಂಪಿಸಲಿ, ಕೂಗು!
ಕಾಳನಿಶೆ ಕವಿದರೇನು?
ಕಾರ್ಮುಗಿಲು ಮುಸುಗಲೇನು!
ಮಿಚ್ಚು ಥಳಿಸಲಿ, ಗರ್ಜಿಸಲಿ ಗುಡುಗು ಘೋರ;
ಧರೆಯ ತುಂಬಿದರೇನು ಕಾರ ಹಾಕಾರ?
ದಾರಿತೋರ್ಪುದು ನಿನ್ನ ನಯನಗಳ ಕಾಂತಿ;
ಹರುಷವೀವುದು ನಿನ್ನ ಹೃದಯದಾ ಶಾಂತಿ!
ಜನನ ಮರಣಾತೀತ ನೀನು;
ಹರ್ಷ ದುಃಖಾತೀತ ನೀನು;
ಅಳಿವಿಲ್ಲ; ಉಳಿವಿಲ್ಲ; ಬಾಳು ಬೇರಿಲ್ಲ;
ಉಂಟು ಇಲ್ಲೆಂಬುವಾ ಹಾಳು ಗೋಳಿಲ್ಲ!
ಧಿರಾತ್ಮ, ವೀರಾತ್ಮ, ನುಗ್ಗು ನಡೆ ಮುಂದೆ!
ಅಚಲಾತ್ಮ, ಅಮೃತಾತ್ಮ, ನಡೆ ಮುಂದೆ, ಮುಂದೆ!
ಗರ್ಜಿಸುತ ನಡೆ ಮುಂದೆ;
ನಿರ್ಭಯದಿ ನಡೆ ಮುಂದೆ!
ಎದ್ದೇಳು! ಎದ್ದೇಳು! ಏಳು! ನಡೆ ಮುಂದೆ!
ವೇದಾಂತಕೇಸರಿಯೆ, ನಡೆ ನುಗ್ಗು ಮುಂದೆ!
ಯುಗದಂತ್ಯದಲ್ಲಿ, ಎಂಬತ್ತೈದು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಅಂದು ತನ್ನನ್ನು ತಾನೇ ಉದ್ಬೋಧಗೊಳಿಸಿಕೊಂಡ ಕವಿ- ನಡೆದ ದಾರಿ, ಏರಿದ ಎತ್ತರ ಎಲ್ಲವೂ ಸಹೃದಯರನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸುತ್ತವೆ! ಅಂದ ಹಾಗೆ ಈ ಕವಿತೆ ಬರೆದಾಗ ಕವಿಗೆ ಇಪ್ಪತ್ತೆರಡು ವರ್ಷ!!!

1 comment:

Rajanikanth said...

ಸೂಪರ್ ಬರಹ. ಧನ್ಯವಾದಗಳು.

ಸರ್... ನಡೆಮುಂದೆ ನಡೆ ಮುಂದೆ ಅನ್ನೊ ಕವಿತೆಯನ್ನ ಯಾರಾದರೂ ಹಾಡಿದ್ದಾರಾ?.....ಇಲ್ಲದಿದ್ದರೆ ಹಾಡಿಸಲು ಸಾಯವೇ?.. ನಾನು ಕೈಜೋಡಿಸಲು ಸಿಧ್ದ.