Monday, October 10, 2011

ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆವುದು ನೋಬೆಲ್!

ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದುಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು ಕೇಳುತ್ತಿದ್ದಾಗ ಶ್ಮಶಾನ ಕುರುಕ್ಷೇತ್ರ ನಾಟಕ ಬಂದಿತ್ತು. ’ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎನ್ನುವ ಭೀಮನ ಮಾತುಗಳಲ್ಲಿ ಇಡೀ ಮಹಾಭಾರತ ಯುದ್ಧದ ನಿರರ್ಥಕತೆ ಬಿಂಬಿತವಾಗಿದೆ. ಕುರುಕ್ಷೇತ್ರ ಯುದ್ಧವೇ ನಾಟಕದ ವಸ್ತುವಾದರೂ, ಅದನ್ನು ಯಾವ ಯುದ್ಧಕ್ಕಾದರೂ ಅನ್ವಯಿಸಿಕೊಳ್ಳಬಹುದಾದಂತಹ ನಾಟಕ. ಕನ್ನಡದ ರಂಗನಿರ್ದೇಶಕರೊಬ್ಬರು ಕಾರ್ಗಿಲ್ ಯುದ್ಧಕ್ಕೂ ಅದನ್ನು ಅನ್ವಯಿಸಿ ರಂಗಪ್ರದರ್ಶನ ನೀಡಿದ್ದನ್ನು ಗಮನಿಸಿದರೆ, ಆ ನಾಟಕದ ಸಾರ್ವಕಾಲಿಕತೆ ಮನದಟ್ಟಾಗುತ್ತದೆ.
ಇಂತಹ ನಾಟಕವನ್ನು ಸಹೃದಯರ ಒತ್ತಾಯದ ಮೇರೆಗೆ ಸ್ವತಃ ಕವಿಯೇ ವಾಚನ ಮಾಡುತ್ತಾರೆ. ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ, ಗ್ರಂಥಪಾಲಕ ಎನ್.ಎಸ್.ನರಸಿಂಹಮೂರ್ತಿ, ವರ್ಣಶಿಲ್ಪಿ ಕೆ.ವೆಂಕಟಪ್ಪ ಮತ್ತು ಎ.ಸೀತಾರಾಂ (ಆನಂದ) ಮೊದಲಾದವರು ಆ ಸಹೃದಯಗೋಷ್ಠಿಯಲ್ಲಿ ಇರುತ್ತಾರೆ. ಸ್ವತಃ ಕವಿಯೇ ಅಭಿನಯಪೂರ್ವಕವಾಗಿ ಅತ್ಯಂತ ಪ್ರಬುದ್ಧವಾಗಿ ವಾಚಿಸಿದ ನಾಟಕ ಕೇಳಿದ ಸಹೃದಯರು ಸಂತುಷ್ಟರಾಗುತ್ತಾರೆ. ಆಗ ಎ.ನರಸಿಂಹಮೂರ್ತಿಯವರು ’ಶ್ಮಶಾನಕುರುಕ್ಷೇತ್ರ’ವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ಖಂಡಿತ ನೊಬೆಲ್ ದೊರೆಯುತ್ತದೆ’ ಎಂದು ಅಭಿಪ್ರಾಯ ಪಡುತ್ತಾರೆ. ಈ ಹಿಂದೆಯೂ ಕೆಲವು ಮಿತ್ರರು ಕೆಲವು ಕವಿತೆಗಳನ್ನು ಕೇಳಿದಾಗ ಇಂತಹ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಆದರೆ ಸ್ವತಃ ಕವಿಗೆ ಇದರಿಂದ ಏನನ್ನಿಸುತ್ತಿತ್ತು ಎಂಬುದು ಮುಖ್ಯ. ಕವಿಯ ಮಾತುಗಳು ನೆನಪಿನ ದೋಣಿಯಲ್ಲಿ ಹೀಗೆ ದಾಖಲಾಗಿವೆ. ’ನನಗೆ ಅದು ಅಷ್ಟು ಹಿತವಾಗಲಿಲ್ಲ, ಅವರು ಹಾಗೆ ಅಂದದ್ದು. ಏಕೆಂದರೆ ’ಶ್ಮಶಾನಕುರುಕ್ಷೇತ್ರ’ದ ಯೋಗ್ಯತೆಗೆ ನೊಬೆಲ್ ಬಹುಮಾನದ ಬೆಲೆ ಕಟ್ಟುವುದು ಆ ನನ್ನ ಕೃತಿಗೆ ಅವಮಾನ ಮಾಡಿದಂತೆ ಎಂಬುದು ನನ್ನ ಭಾವನೆಯಾಗಿತ್ತು.’ ಎನ್ನುತ್ತಾರೆ. ಈ ಘಟನೆ ನಡೆದದ್ದು೧೬-೧-೧೯೩೨ರಲ್ಲಿ!
ಈ ತರದ ಪ್ರತಿಕ್ರಿಯೆಗಳು ಇದೇ ಮೊದಲಾಗಿರಲಿಲ್ಲ. ಈ ಹಿಂದೆಯೂ ಆಗಾಗ ಇಂತಹ ಮಾತುಗಳನ್ನು ಕೇಳುತ್ತಿದ್ದ ಕವಿ ಒಂದು ದಿನ (೪.೧೦.೧೯೩೧; ಮೇಲಿನ ಘಟನೆ ನಡೆಯುವ ಎರಡೂವರೆ ತಿಂಗಳ ಮುಂಚೆಯೇ!) ಬೆಳಿಗ್ಗೆ ವಾಯು ಸಂಚಾರದಲ್ಲಿದ್ದಾಗ ಕೋಗಿಲೆಯ ಹಾಡು ಕೇಳಿಸುತ್ತದೆ. ಆಗ ಹುಟ್ಟಿಕೊಂಡಿದ್ದೇ ’ಬಹುಮಾನ’ ಎಂಬ ಕವಿತೆ. ’ನವಿಲು’ ಕವನಸಂಗ್ರಹದಲ್ಲಿದೆ. ಕವಿತೆಯ ಪೂರ್ಣಪಾಠ ಇದು.

ಕುಹೂ! ಕುಹೂ! -ಕೋಕಿಲವಾಣಿ!
ಜಗಜುಮ್ಮೆಂದುದು ಅದ ಕೇಳಿ!
ನೀರವ ಪರ‍್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ.-
ಗಾನವಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತಿತ್ತು!
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
ಕುಹೂ! ಕುಹೂ! ಕೂಗಿತ್ತು!
ಆಲಿಸಿದೊರ‍್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು:-
ಮಲೆಗಳಲುಲಿಯುವ ಓ ಕೋಗಿಲೆಯೇ,
ಬಲು ಚೆಲುವಿದೆ ನಿನ್ನೀ ಗಾನ!
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೋಬೆಲ್ ಬಹುಮಾನ!
ಅರಣ್ಯ ರೋದನ! ಸುಮ್ಮನೆ ಹಾಡುವೆ!
ಕೇಳುವರಾರಿಲ್ಲಿ?-
ಕೂಗಿತು ಕೋಗಿಲೆ ಕುಹೂ ಎಂದು!
ತಲ್ಲಣಿಸಿತು ಜಗ ಜುಮ್ಮೆಂದು!

ತನ್ನ ಕಾವ್ಯವನ್ನು ಕುರಿತ ಬಂದ ಪ್ರತಿಕ್ರಿಯೆಗೆ, ಜಗವೇ ಜುಮ್ಮೆನ್ನುವಂತೆ ಹಾಡುತ್ತಿರುವ ಕೋಗಿಲೆಯ ಹಾಡನ್ನು ಎದಿರೊಡ್ಡಿ, ಇಂಗ್ಲಿಷ್ ಭಾಷೆಗೆ ಅನುವಾದವಾಗಬೇಕು, ನೋಬೆಲ್ ದೊರೆಯಬೇಕು ಎಂಬ ಅಭಿಲಾಷೆಯ ನಿರರ್ಥಕತೆಯನ್ನು ಸಾರುವ ಈ ಕವಿತೆಯ ರಚನೆಯ ಹಿನ್ನೆಲೆ ಸ್ಪಷ್ಟವಾಗಿಯೇ ಇದೆ. ಇಲ್ಲಿ ಕವಿ, ’ಕೋಗಿಲೆಗೆ ನೋಬೆಲ್ ಬಹುಮಾನ ಬರಲೇಬೇಕು ಎಂದು ಹೇಳುವ ಮೂಲಕ, ತನಗೆ ಬರಬೇಕು ಎಂಬ ಅಭಿಲಾಷೆಯನ್ನು ಹೊಂದಿದವರಾಗಿಲ್ಲ’ ಎಂಬುದು ಸಹೃದಯ ಓದುಗನಿಗಿರಲಿ ಒಬ್ಬ ಸಾಮಾನ್ಯ ಸಾಹಿತ್ಯಾಸಕ್ತನಿಗೂ ಮನದಟ್ಟಾಗುತ್ತದೆ. ಅದೊಂದು ವಿಡಂಬನಾತ್ಮಕ ಕವಿತೆ. ಇಂಗ್ಲಿಷ್, ನೊಬೆಲ್ ಇವಿಷ್ಟೇ ಶ್ರೇಷ್ಟತೆಗಳಲ್ಲ ಎಂಬುದೂ ಗೋಚರಿಸುತ್ತದೆ. ಆದರೆ ವಿಮರ್ಶೆ ಮಾಡಲೇಬೇಕು, ಆ ಮೂಲಕ ಈ ಕವಿಯನ್ನು ಅಣಿಯಬೇಕು ಎಂದು ಕಾದು ಕುಳಿತಿದ್ದವರು ಸುಮ್ಮನಿರುತ್ತಾರೆಯೇ? ’ಬಹುಮಾನ’ ಕವಿತೆ ಪ್ರಕಟವಾಗುತ್ತಿದ್ದಂತೆಯೇ, ಅಸೂಯಾಪರರಾದ ಕೆಲವರು ’ಈ ಕವಿ ಈಗಾಗಲೆ ನೊಬೆಲ್ ಬಹುಮಾನ ತನಗೆ ದೊರಕಲು ತಾನು ಅರ್ಹನೆಂಬುದಾಗಿ ಅಹಂಕಾರಿಯಾಗಿದ್ದಾನೆ’ ಎಂಬ ಆರೋಪಣೆ ಮಾಡಿ ಸಂತೋಷಪಟ್ಟುಕೊಂಡರಂತೆ! ಆಗಿನ್ನು ಕವಿಗೆ ಕೇವಲ ೨೫-೨೬ ವರ್ಷ. ಇನ್ನೂ ಕಾನೂರು ಹೆಗ್ಗಡತಿ, ರಾಮಾಯಣದರ್ಶನಂ, ಮಲೆಗಳಲ್ಲಿ ಮದುಮಗಳು, ಚಿತ್ರಾಂಗದಾ ಯಾವುವೂ ಸೃಷ್ಟಿಯಾಗಿರಲಿಲ್ಲ! ಮೊಗ್ಗರಳಿ ಹೂವಾಗುವಷ್ಟರಲ್ಲೇ ಚಿವುಟಿ ಹಾಕುವ ಕಿಡಿಗೇಡಿತನ ಅಂತಹ ಟೀಕೆಗಳಲ್ಲಿ ಕಾಣುತ್ತದೆ, ಅಷ್ಟೆ. ಅಳ್ಳೆದೆಯ ಕವಿಯಾಗಿದ್ದರೆ ಬರವಣಿಗೆ ಬಿಟ್ಟುಬಿಡುತ್ತಿದ್ದರೇನೋ! ಆದರೆ ಕುವೆಂಪು ಶ್ರೀರಾಮಕೃಷ್ಣ-ವಿವೇಕಾನಂದರ ಶ್ರೇಷ್ಠ ಚಿಂತನೆಗಳಿಂದ ಸದೃಡಗೊಂಡಿದ್ದ ಮನಸ್ಸುಳ್ಳವರು; ಮುಖ್ಯವಾಗಿ ನಿರ‍್ಲಿಪ್ತರು!
ಒಂದು ಕಲಾಕೃತಿಯ ಶ್ರೇಷ್ಠತೆ ಮತ್ತು ಪರಿಪೂರ್ಣತೆ ಅದು ಸಹೃದಯನ ಹೃದಯದಲ್ಲಿ ಉಂಟುಮಾಡುವ ಪರಿಣಾಮದಲ್ಲಿದೆ. ಆದರೆ ಅದು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಅದು ಇಂಗ್ಲಿಷಿನಲ್ಲಿ ಬರಬೇಕಿತ್ತು, ಬಹುಮಾನ ಪ್ರಶಸ್ತಿ ಬರಬೇಕಿತ್ತು ಎಂದು ಅಭಿಪ್ರಾಯ ಪಡುವುದು ಸಹೃದಯನ ತಪ್ಪಲ್ಲ. ಆದರೆ ಅದೇ ಜಪವಾದಾಗ ಆತ ಮಹತ್ತರವಾದುದನ್ನು ಕಳೆದುಕೊಳ್ಳುತ್ತಾನೆ. ಸಹೃದಯರಲ್ಲಿ, ವಿಮರ್ಶಕರಲ್ಲಿ ಇರಲೇಬೇಕಾದ ಗುಣ ಉದಾರತೆ. ಎಲ್ಲಿ ಅನುದಾರತೆ ಇರುತ್ತದೆಯೋ ಅಲ್ಲೆಲ್ಲಾ ಇಂತಹ ಅಪಾರ್ಥಗಳು, ಆರೋಪಗಳು ಇರುತ್ತವೆ.
ಹೀಗೆ ಅಸೂಯಾಪರವಾದ ವಿಮರ್ಶೆಗಳು ಆಗಾಗ ಬರುತ್ತಲೇ ಇರುತ್ತವೆ. ’ಮುಂಗಾರು’, ’ಕಾಜಾಣ’, ’ಕೊಳಲು’, ’ತಳಿರು’ ಮತ್ತು ’ಅರುಣಗೀತ’ ಮುಂತಾದ ಕೊಳಲು ಸಂಗ್ರಹದ ಕವಿತೆಗಳ ಬಗ್ಗೆ ಈ ತರದ ವಿಮರ್ಶೆ ಪತ್ರಿಕೆಯೊಂದರಲ್ಲಿ ಬಂದಿರುತ್ತದೆ. ಆ ಸಂದರ್ಭದಲ್ಲಿ ಎ.ಸೀತಾರಾಂ ಅವರು ಕುವೆಂಪು ಅವರಿಗೆ ಹೀಗೆ ಕಾಗದ ಬರೆದಿದ್ದಾರೆ. ನನಗೆ ತೋರುವುದೇನೆಂದರೆ ಅವನು ಪುಸ್ತಕದ ವಿಮರ್ಶೆಗಿಂತ, ತನ್ನ ಪಾಂಡಿತ್ಯ ಪ್ರದರ್ಶನವನ್ನು ಹೆಚ್ಚಾಗಿ ಮಾಡಿಕೊಂಡಂತೆ ತೋರುತ್ತದೆ. ಅವನ ವಿಮರ್ಶೆಯನ್ನು ಓದುತ್ತ ಓದುತ್ತ ಅವನ ತಲೆಯಲ್ಲಿರುವುದು ಮೆದುಳೋ-ಮಣ್ಣೋ ಎಂದು ಸಂದೇಹವಾಗುತ್ತದೆ. ನನ್ನ ಸಿದ್ಧಾಂತವು ಅದು ಮಣ್ಣೇ ಎಂದು! ಆ ಮಣ್ಣು ಮೆದುಳಿನ ಆಕೃತಿಯಲ್ಲಾದರೂ ಇದ್ದಿದ್ದಿರೆ ಅವನ ವಿಮರ್ಶೆಯ ಸರಣಿ ಬೇರೆಯಾಗಿರುತ್ತಿತ್ತು. ಅಂತೂ ಆ ವಿಮರ್ಶಕನ ವಿವೇಕಶೂನ್ಯವಾದ ವಿಮರ್ಶೆಯನ್ನು ಓದಿ ನಾವೆಲ್ಲಾ ಪಟ್ಟಾಗಿ ನಕ್ಕೆವು! ಅವನಿಂದ ದೂರದಲ್ಲಿದ್ದೇವೆ! - ಇನ್ನೇನು ಮಾಡಲು ಸಾಧ್ಯ? ಅವನೊಬ್ಬ ಪ್ರಾಂತಿಕಭಾವನೆ(ಪ್ರಾವಿನ್ಸಿಯಲಿಸಮ್)ಗೆ ಬಲಿಬಿದ್ದ ಅಂಧಪಶು. ನಿಮ್ಮ ಕವನಗಳಲ್ಲಿ ದೋಷವನ್ನು ಹುಡುಕಿದನೆಂದು ನನಗೆ ಅವನಲ್ಲಿ ಆಗ್ರಹವಿಲ್ಲ. ಏಕೆಂದರೆ ಅಲ್ಲಲ್ಲಿ ದೋಷವಿರಬಹುದು. -ಇದೆ- ಎಂಬ ಭಾವನೆಯನ್ನು ’ಕವಿತೆಗೆ’ ಎಂಬ ಕವನದಲ್ಲಿ ನೀವೇ ನುಡಿದಿದ್ದೀರಿ. ವಿಮರ್ಶಕನ ಕಣ್ಣಿಗೆ ಆ ಸುಂದರವಾದ ಕವನವು ಬಿದ್ದಂತೆ ತೋರುವುದಿಲ್ಲ. ಅವನಿಗೆ ಪಂಚೇಂದ್ರಿಯಗಳ ಶಕ್ತಿಯೂ ಪಲ್ಲಟವಾದಂತಿದೆ. ಅಂತು ಅವನ ವಿಮರ್ಶೆಯಿಂದ ಒಂದು ಉಪಯೋಗವು ಕಾಣಬರುತ್ತದೆ. ಮುಂದೆ ಒಂದು ಕಾಲದಲ್ಲಿ, ಕಾವ್ಯ ವಿಮರ್ಶೆಗಳ ಚರ್ಚೆ ಬಂದಾಗ ’ಹೀನವಿಮರ್ಶೆ’ ಎಂದರೇನು ಅನ್ನುವುದಕ್ಕೆ ನಮ್ಮ -ದ ವಿಮರ್ಶಕನ ವಿಮರ್ಶೆಯನ್ನು ಉತ್ತಮವಾದ ಉದಾಹರಣೆಯಾಗಿ ಹೇಳಬಹುದು. ಅದು ಬಿಟ್ಟು, ಅವನ ವಿಮರ್ಶೆಗಳಿಂದ ಇನ್ನು ಯಾವ ಉಪಯೋಗವೂ ಕಾಣಬರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಅವನು ಕಾವ್ಯರಸಾನುಭವ ಮಾಡಲಾರದ ಷಂಡನೆನ್ನಬಹುದು! ಸಾಕು-ಅವನ ಮಾತು
ಇಂತಹುದೇ ಇನ್ನೊಂದು ಪತ್ರ ಬರೆದಿದ್ದವರು ಭೂಪಾಳಂ ಚಂದ್ರಶೇಖರಯ್ಯನವರು. ಅವರ ಅಭಿಪ್ರಾಯ ಹೀಗಿದೆ.
ಜಯಕರ್ಣಾಟಕದಲ್ಲಿನ ವಿಮರ್ಶೆಯನ್ನು ಓದಿದ್ದೇವೆ (ನಾನು ಚಿದಂಬರ ಸೀತಾರಾಂ ಶ್ರೀಹರಿ ಜೋಯಿಸ ಈಶ್ವರ) ವಿಮರ್ಶಕನ ವಿಷಯದಲ್ಲಿ ನಮಗೆ ಸಿಟ್ಟು ಬರಲಿಲ್ಲಾ; ಜುಗುಪ್ಸೆಯೂ ಹುಟ್ಟಲಿಲ್ಲಾ; ಆದರೆ ನಗುಬಂತು. ಬಹಳ ಗಟ್ಟಿಯಾಗಿಯೆ ನಕ್ಕುಬಿಟ್ಟೆವು....... ’ಸೋದರಿಯರೆ ನೀವೆಲ್ಲರು ಬನ್ನಿ’ ಎಂಬ ಕವನದ ಮೇಲಿನ ವಿಮರ್ಶೆಯಲ್ಲಿ ಈ ಸೋದರಿಯರು ಯಾರು? ಹಕ್ಕಿಗಳಾಗುತ್ತಾರೆ. ಬಾಲಕರಾಗುತ್ತಾರೆ ವಗೈರೆ ಮಾತುಗಳು. ಮತ್ತು ’ರತಿ’ ’...ಗೆ’ ’ಗುರಿ’ ಈ ಕವನಗಳ ಮೇಲಣ ವಿಮರ್ಶೆಯಲ್ಲಿ ’ಮತ್ತು ಪುಟ್ಟಪ್ಪನವರಂತಹ ಯುವಕರು ಮುದುಕರಂತೆ... ಸರಿಯಲ್ಲಾ ಈ ಮಾತುಗಳು ನಮ್ಮನ್ನು ನಗುವಿನ ಸಮುದ್ರದಲ್ಲಿಯೇ ಮುಳಿಗಿಸಿವೆ..... ನೀವು ಬರೆದಂತೆ ಆ ವಿಮರ್ಶೆಯಲ್ಲಿ ಕೆಲವು ಪದ್ಯಗಳು ವಿನಹ ಉಳಿದ ಪದ್ಯಗಳ ಯಿಂಗ್ಲಿಷ್ ಮೂಲಗಳೆಂದು ಕೊಟ್ಟಿರುವ ಪದ್ಯಗಳು ಸ್ವಲ್ಪವೂ ಸಮಂಜಸವಾಗಿಲ್ಲಾ; ಹೊಂದುವಂತಿಲ್ಲಾ; ಅದಿರಲಿ. ’ಕೊಳಲಿಗೆ ನಿಮ್ಮದೊಂದು ಪ್ರಸ್ತಾವನೆ ಯಿದ್ದಿದ್ದರೆ ಚೆನ್ನಾಗಿತ್ತು. ಅದರಲ್ಲಿ ಕೆಲವು ವಿಚಾರಗಳು ವಿವರಿಸಿ ಬರೆದಿದ್ದರೆ ವಿಮರ್ಶಕನಿಗೆ ಹೆಚ್ಚು ಬರೆಯಲವಕಾಶವಿರುತ್ತಿರಲಿಲ್ಲಾ.
ಕೊಳಲು ಸಂಗ್ರಹಕ್ಕೆ ಬಂದ ಅಸೂಯಾಪರವಾದ ವಿಮರ್ಶೆಯನ್ನು ಕುರಿತು ಪರವಿರೋದವಾದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವಂತೆ. ಅದನ್ನು ಕುರಿತು ಕವಿ ಹೇಳುವುದಿಷ್ಟು: ನಾನು ಅವನ್ನೆಲ್ಲ ನೋಡುವ ಗೋಜಿಗೇ ಹೋಗಲಿಲ್ಲ.

No comments: