Monday, September 19, 2011

’ವಿರಹ’ ಎಂಬ ಮಧುರ ಮೃತ್ಯ!

ನಾನು ಈ ಮೊದಲೇ ಬರೆದಂತೆ ’ಜೇನಿರುಳು ಅಥವಾ ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಎರಡೂ ಕವಿತೆಗಳು ಒಂದೇ ದಿನ ಬರೆದವುಗಳಾಗಿವೆ. ಸ್ವತಃ ಕವಿವರ್ಯರೇ ೨೪.೫.೧೯೩೭ರಲ್ಲಿ ಇಂಗ್ಲಾದಿಯಲ್ಲಿ ಬರೆದಿದ್ದೆಂದು ದಾಖಲಿಸಿದ್ದಾರೆ. ಈ ಕವಿತೆಯನ್ನು ಪ್ರವೇಶಿಸುವ ಮೊದಲು ’ವಿರಹ’ ಕುರಿತಾದ ಕವಿಗಳ ಅಭಿಪ್ರಾಯವನ್ನು ಸ್ಥೂಲವಾಗಿ ಗಮನಿಸಬಹುದು, ಕವಿಗಳ ಮಾತಿನಲ್ಲೇ!
’ವಿರಹ’ ಪದವನ್ನು ಉಪಯೋಗಿಸಿ ’ವಿರಹಯಾತನೆ’ಯನ್ನು ಕಾವ್ಯಗಳಲ್ಲಿ ಚಿತ್ರಿಸಿದ್ದೆ. ಇತರ ಎಲ್ಲ ಮಹಾಕವಿಗಳ ಕಾವ್ಯನಾಟಕಗಳಲ್ಲಿಯೂ ವಿಪ್ರಲಂಭ ಶೃಂಗಾರದ ವಿರಹವರ್ಣನೆಗಳನ್ನು ಓದಿದ್ದೆ. ಆದರೆ ವಿರಹಯಾತನೆ, ನರಕಯಾತನೆ, ಅರ್ಥವಾದುದು ಈಗಲೆ! ’ಅರ್ಥವಾದುದು’ ಎಂದು ಬರೆದೆ; ಆದರೆ ಬರೆಯಬೇಕಾದುದು ’ಅರ್ಥವಾಗದುದು’ ಎಂದೇ. ಇದ್ದಕ್ಕಿದ್ದ ಹಾಗೆ ನನಗೆ ಸಂಭವಿಸಿದ ಆ ಸಂಕಟದ ಮನಃಸ್ಥಿತಿ ನನಗೆ ಅರ್ಥವಾಗಲಿಲ್ಲ. ದಿಗ್‌ಭ್ರಮೆಯುಂಟು ಮಾಡಿತು! ನನ್ನ ಹೃದಯ ಸ್ಥಿತಿ ಬೆಂಕಿಗೆ ಬಿದ್ದು ಸುಡುತ್ತಿರುವ ಪತಂಗದಂತಾಯ್ತು; ಆಗ ನಾನು ಬರೆಯುತ್ತಿದ್ದ ಶ್ರೀರಾಮಾಯಣದರ್ಶನದಲ್ಲಿ ಎಲ್ಲೆಲ್ಲಿ ಈ ವಿಯೋಗ ದುಃಖ ದಾವಾನಲನ ವರ್ಣನೆ ಇದೆಯೋ ಅಲ್ಲೆಲ್ಲ ನಾನು ಅನುಭವಿಸಿದ ಆ ಒಲವಿನ ಅಗಲುವಿಕೆಯ ಘೋರವೇದನೆಯೆ ಚಿತ್ರಿತವಾಗಿದೆ ಎಂದು ತಿಳಿಯಬಹುದು.
ಮೇ ಒಂದನೆಯ ತಾರೀಖಿನಂದು ಮದುವೆಯಾದ ಕವಿಗೆ ಮೇ ೧೯ರಂದು ಪ್ರಥಮಮಿಲನ. ಮೇ ೨೧ರಂದು ಶ್ರೀ ಗುರುಮಹಾರಾಜರ ಉತ್ಸವವಾದ ಮೇಲೆ ಶ್ರೀಮತಿಯವರು ತವರಿಗೆ ಹಿಂತಿರುಗಿದ್ದಾರೆ. ಆ ಸಂದರ್ಭದಲ್ಲಿ ಕವಿ ಅನುಭವಿಸಿದ ವಿರಯಾತನೆಯ ಅಕ್ಷರರೂಪ ಮೇಲಿನದು!
ಮೇಲಿನ ಘಟನೆಯನ್ನು ದಾಖಲಿಸುತ್ತ ಕವಿ ಹಿಂದೆ ನಡೆದ ಒಂದು ಘಟನೆಯನ್ನು ಹೇಳುತ್ತಾರೆ. ಮಹಾರಾಜಾ ಕಾಲೇಜಿನ ಅಧ್ಯಾಪಕರ ಕೊಠಡಿಯಲ್ಲಿ ಸಂಸ್ಕೃತದ ಯುವ ಅಧ್ಯಾಪಕರೊಬ್ಬರು ಕಾಳಿದಾಸನ ವರ್ಣನೆಗಳಲ್ಲಿ ಅತಿ ಉತ್ಪ್ರೇಕ್ಷೆಯಿದೆ ಎಂದು ವಾದಿಸುತ್ತಾ ಮೇಘದೂತ ಕಾವ್ಯದ ಮೊದಲನೆಯ ಪದ್ಯವನ್ನು ಉದಾಹರಣೆಯಾಗಿ ನೀಡುತ್ತಾರೆ. ’ವಿರಹಗುರುಣೌ ಎಂದು ಅತಿಯಾಗಿ ಉತ್ಪ್ರೇಕ್ಷಿಸಿದ್ದಾನೆ. ಏನು ಮಹಾ? ಒಂದಾರು ತಿಂಗಳು, ಒಂದು ವರ್ಷ, ಹೆಂಡತಿಯಿಂದ ದೂರವಿರುವ ಶಾಪಕ್ಕೆಲ್ಲ ಚೇತನಾಚೇತನಗಳ ಅರಿವೂ ಆಗದಷ್ಟು ವಿರಹ ಸಂಕಟವಾಗುತ್ತದೆಯೇ?’ ಎಂದು ಆ ಯುವ ಅಧ್ಯಾಪಕರು ನಕ್ಕುಬಿಟ್ಟಿದ್ದರಂತೆ. ಆ ಅಧ್ಯಾಪಕರು ಎರಡನೆಯ ಮದುವೆಯಾಗಿದ್ದ ವಿಷಯ ಆಮೇಲೆ ತಿಳಿಯಿತಂತೆ! ಇದೆಲ್ಲವನ್ನೂ ದಾಖಲಿಸುತ್ತಾ ಕವಿ  ಈ ಪ್ರೇಮವಿರಹಗಳ ತೀವ್ರತೆ ಕವಿಚೇತನಕ್ಕೆ ಆಗುವಂತೆ ಇತರರಿಗೆ ಆಗುವುದಿಲ್ಲವೋ ಏನೋ ಎಂದು! ನಿಶ್ಚಯಕ್ಕೆ ಬರುತ್ತಾರೆ.

ನೀನು ಬಳಿಯಿರೆ ಹೊತ್ತು ಹರಿಯುವುದು ಹೊನಲಾಗಿ
ಕುಣಿಕುಣಿದು ನಲಿನಲಿದು ನೊರೆನಗೆಯ ಬೀರಿ;
ನೀನಿಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ
ಭಾರದಿಂದೆದೆಯ ಜೀವವ ಹಿಂಡಿ ಹೀರಿ:

ನೀನು ಬಳಿಯಿರೆ ಬಾಳ ಕೊಳ ತುಳುಕುವುದು ತುಂಬಿ
ನಲ್ ಸೊಗದ ತಾವರೆಯ ನೂರು ಹೂವರಳಿ;
ನೀನಿಲ್ಲದಿರೆ ಬದುಕು ಶೂನ್ಯತೆಯ ಸುಳಿಯಲ್ಲಿ
ಹೊರಳುರುಳಿ ಕಂತುವುದುಸಿರ್ ಕಟ್ಟಿ ಕೆರಳಿ!

ನೀನೆನ್ನ ಬಳಿಯಿರಲು ರವಿಯುದಯ ಬಲುಸೊಗಸು;
ನಿನ್ನ ಸೋಂಕಿರೆ ಸೊಗಸು ಕಾಂತಾರ ವೀಚಿ;
ನಿನ್ನ ಸೋಂಕಿರೆ ಸೇರೆ ಹಕ್ಕಿಗೊರಲಿಂಚರಕೆ
ನಂದನದ ಗಾನ ಮೈಗರೆಯುವುದು ನಾಚಿ!

ನೀನು ಬಳಿಯಿಲ್ಲದಿದ್ದರೆ, ಓ ನಲ್ಲೆ ಹೇಮಾಕ್ಷಿ,
ಜಗವೆಲ್ಲ ಜಡಂಬಡೆ, ಬೇಸರದ, ಬೀಡು!
ನೀನಗಲಿದೀ ಕವಿಗೆ ಇಂದು ಈ ಮಲೆನಾಡು,
(ಹೇಳೆ ನಾಚಿಗೆಗೇಡು!) ಹಿರಿ ಮರಳುಗಾಡು!
ಜಗವೆಲ್ಲಾ ಜಡವೆಂದ ಮೇಲೆ ಹೇಳುವುದೇನಿದೆ? ಈ ಕವಿತೆಯ ಮೂಲಕ ಶ್ರೀಮತಿ ಹೇಮಾವತಿಯವರು ಕುವೆಂಪು ಅವರ ಕಾವ್ಯವನ್ನು ಪ್ರವೇಶಿಸಿದರು ಎನ್ನಬಹುದು! ಇಂತಹ ಅನುಭವ ಪ್ರತಿಯೊಬ್ಬರಿಗೂ - ಹೆಣ್ಣು ಗಂಡಗಳಿಬ್ಬರಿಗೂ - ಆಗಿರುತ್ತದೆ. ಆದರೆ ಅಕ್ಷರರೂಪಕ್ಕಿಳಿಸುವುದು ಮಾತ್ರ ಕಷ್ಟ. ಏಕೆಂದರೆ ಕವಿಯೇ ಹೇಳುವಂತೆ ಅದು ’ಅರ್ಥವಾಗದುದು’.
ಈ ಕವಿತೆಗೆ ಸಂಬಂಧಪಟ್ಟಂತೆ ಇಲ್ಲಿಗೆ ನಿಲ್ಲಿಸಿಬಿಡಬಹುದು. ಆದರೆ ಸ್ವತಃ ಕವಿಯೇ ಶ್ರೀರಾಮಾಯಣದರ್ಶನದಲ್ಲಿನ ವಿಯೋಗ ದುಃಖ ದಾವಾನಲನ ವರ್ಣನೆಯ ಮೇಲೆ, ಆ ಸಂದರ್ಭದಲ್ಲಿ ಅನುಭವಿಸಿದ ಘೋರಯಾತನೆಯ ಪರಿಣಾಮವಿದೆ ಎಂಬ  ಮಾತೆತ್ತಿದ ಮೇಲೆ ಸಹೃದಯ ಪ್ರತಿಭೆ ವಿರಮಿಸಲು ಸಾಧ್ಯವೇ? ಸಾಧುವೇ?
ಜಟಾಯುವಿನಿಂದ ಸೀತಾಪಹರಣದ ಸುದ್ದಿಯನ್ನು ತಿಳಿದ ರಾಮನಿಗೆ ದಿಕ್ಕುಗಾಣದಾಗುತ್ತದೆ. ಸೀತೆಯ ನೆನಪಷ್ಟೇ; ಉಳಿದೆಲ್ಲವೂ ಜಡವಾಗಿ ಕಾಣಿಸುತ್ತದೆ. ಮಾತು ಮಾತಿಗೆ ’ಹಾ ಸೀತೆ! ಹಾ ಸೀತೆ! ಹಾ ಸೀತೆ!’ ಎಂದು ನಿಟ್ಟುಸಿರುಬಿಡುತ್ತಾನೆ ರಾಮ. ಲಕ್ಷ್ಮಣನ ಸಮಾಧಾನದ ನುಡಿಗಳು ಆತನಿಗೆ ಕೇಳುವುದೇ ಇಲ್ಲ. ದೇವಿ ಗೋದಾವರಿಗೆ ನಮಸ್ಕರಿಸು ಎಂದ ಲಕ್ಷ್ಮಣ ಮಾತುಗಳೂ ಕೇಳಿಸುವುದಿಲ್ಲ. ವಿಭ್ರಾಂತ ಮನಸ್ಥಿತಿಯ ರಾಮನ ಚಿತ್ರಣ ಹೇಗಿದೆ ನೋಡಿ.
. . . . . ಕುಣಿಕುಣಿದಟ್ಟಹಾಸಮಂ ಗೆಯ್ಯುತ್ತೆ
ಧಾವಿಸಿದನನುಜನೆಂದುದನಿನಿತು ಗಮನಿಸದೆ,
ತಗ್ಗುಬ್ಬುಗಳನೆಡವಿ, ಮರಮಂ ಪಾಯ್ದು, ಬಳ್ಳಿ
ತೊಡರ‍್ದುದಂ ಲೆಕ್ಕಿಸದೆ, ಮುಳ್ಳು ನಾಂಟಿರ‍್ದೊಡಂ
ಕಿಳ್ತೆಸೆಯದಾನಂದದುನ್ಮಾದದಿಂದೆ ಆ
ರಮಣೀಯ ಗೋದಾವರಿಯ ಪುಳಿನಮಯ ಶುಭ್ರ
ತಟಿಗೆ. ಓ ಸೀತೆ! ಓ ಸೀತೆ! ಓ ಸೀತೆ! ಓ
ಸೀತೆ! ರಾಮನ ಕೊರಲ ಕೂಗನಾಲಿಸುತೆ
ನೆರವೀಯಲೆಂದು ವಿಶ್ವವೆ ಜನಕಜಾತೆಯಂ
ಪೆಸರ‍್ವಿಡಿದು ಕರೆದುದೆನೆ, ಮರುದನಿಗಳೆದ್ದುವಯ್
ಮರದಿಂದೆ ಗಿಡದಿಂದೆ ಲತೆಯಿಂದೆ ನದಿಯಿಂದೆ
ಪರ್ವತಾರಣ್ಯಂಗಳಿಂದೆ. ದಶ ದಶ ಕೋಟಿ
ಕಂಠಂಗಳಿಂದೆ ದೆಸೆದೆಸೆ ತಲ್ಲಣಿಸುವಂತೆ
ಕೂಗಿತನುಕಂಪದಿಂ ಸೃಷ್ಟಿ, ದಶಕಂಠಂಗೆ
ಮೃತ್ಯು ಡಿಂಡಿಮ ಭೇರಿಯಂ ಪೊಯ್ವವೋಲಿಂತು:
ಹೀಗೆ ಕಾಡಿನಿಂದ ಮಾರ್ದನಿಗೊಂಡ ತನ್ನ ದನಿಯನ್ನೇ ಸೀತೆಯ ಮಾರುತ್ತರವೆಂದು ಭಾವಿಸಿ ರಾಮ ಉನ್ಮತ್ತತೆಯಿಂದ ಲಕ್ಷ್ಮಣನಿಗೆ
...........................................ಕಂಡೆಯಾ
ಸೌಮಿತ್ರಿ, ಮೈಥಿಲಿಯ ಮಾಯೆಯಂ? ಪುಸಿಯಲ್ತು
ದಿಟಮಾಕೆ ಭೂಮಿಜಾತೆಯೆ ವಲಂ! ತಾಯ್ಮರೆಗೆ
ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ
ನಮ್ಮಡನಣಕವಾಡುತಿಹಳಲ್ತೆ?
ಎಂದು ಕೇಳುತ್ತಾನೆ. ಆಗ್ಗೆ ರಾಮನಿಗೆ ಎಲ್ಲವೂ ಜಡ; ಸೀತೆಯೊಬ್ಬಳೇ ಚೇತನ! ಎಂದ ಮೇಲೆ ಹೇಳುವುದೇನಿದೆ?
ಹೀಗೆಯೇ ಇನ್ನೊಮ್ಮೆ ರಾಮ ವಿಸ್ಮೃತಿಗೆ ಒಳಗಾಗುತ್ತಾನೆ. ಶಬರಿ ಹೇಳಿದ ಮಾರ್ಗದಲ್ಲೇ ನಡೆದು ಋಶ್ಯಮೂಕ ಪರ್ವತಕ್ಕೆ ಹತ್ತಿರ ಹತ್ತಿರ ಬರುತ್ತಾರೆ. ಸಂಜೆ ಸೂರ್ಯಾಸ್ತದ ಸಮಯ ರಾಮಲಕ್ಷ್ಮಣರಿಬ್ಬರೂ ಸೂರ್ಯಾಸ್ತವನ್ನು ನೋಡುತ್ತಾ ಕುಳಿತಿರುತ್ತಾರೆ. ರಾಮ ಮೊದಲಿಗೆ ಒಬ್ಬ ನೋಡುಗನಾಗಿ, ಸಹೃದಯನಾಗಿ, ಕವಿಯಾಗಿ ಬದಲಾಗಿಬಿಡುತ್ತಾನೆ. ಸೂರ್ಯಾಸ್ತದ ವರ್ಣಚಿತ್ತಾರವನ್ನು, ವೈಭವವನ್ನು ಲಕ್ಷ್ಮಣನಿಗೆ ವರ್ಣಿಸಿ ಹೇಳುತ್ತಾನೆ. ಹೀಗೆ ಹೇಳುತ್ತಲೇ ಸೀತೆಯ ನೆನಪಿಗೆ ಜಾರಿಬಿಡುತ್ತಾನೆ. ರಾಮ ಕಟ್ಟಿಕೊಡುವ ಸೂರ್ಯಾಸ್ತದ ಚಿತ್ರಣ ಮತ್ತು ಆತನಿಗೆ ಸೀತೆ ಕಾಡಿದ ಬಗೆಯನ್ನು ಕುವೆಂಪು ಹೀಗೆ ಚಿತ್ರಿಸಿದ್ದಾರೆ.
ವತ್ಸ,
ಲಕ್ಷ್ಮಣಾ, ವೈವಾಹ ಮಂಟಪ ಸ್ಮರಣೆಯಂ
ಬಗೆಗೊಳಿಸುವೀ ಮನೋಹರ ಚಿತ್ರ ದೃಶ್ಯಮಂ
ನೋಳ್ಪೆನಗೆ ಬಾಳಿನುರಿ ನೂರ‍್ಮಡಿಸುತಿದೆ. ನಾಳ
ನಾಳದೊಳ್ ಜ್ವಾಳೆವರಿದಿದೆ ಮನ್ಮನೋಹರಿಯ
ಚಿಂತೆ. ಅದೊ ದಡದ ಮರದುಯ್ಯಾಲೆಯಿಂ ಗಾಳಿ
ಮಳೆಯೆರಚುತಿದೆ ಚಿನ್ನವೂಗಳಂ; ಬಂಡೆಯುಂ,
ಪುಳಿನಮುಂ, ಶಿಖರಗೋಪುರದಂತೆ ನೀರಮೇಲ್
ನೀಳ್ದು ಮಲಗಿಹ ಬಂಡೆಕರ್ನೆಳಲುಮೆಸೆಯುತಿವೆ
ಸುಮರಂಗವಲ್ಲಿ ಚಿತ್ರಿತ ರತ್ನಕಂಬಳಿಯವೋಲ್!
ಬಿರಿವ ನೀರ್ವೊಗಳೊಳ್ ಬಂಡುಣುವ ಪರಮೆ ಮೊರೆ
ನೀರ್ವಕ್ಕಿಹಳ ಬೇಟದಿಂಚದೊಡನೆ ಹೊಂಚಿ
ನನ್ನನೇಳಿಪುದಲ್ತೆ? ಅಃ! ಕೇಳಾಲಿಸದೊ ಕೂಗುತಿದೆ,
ಆ ದರಿಯ ದುಮುಕುತಿಹ ವನನಿರ್ಝರದ ಮೊರೆಯ
ಮೀರಿ, ದಾತ್ಯೂಹಕಂ! ವಿರಹದುಲಿ! ಕರೆಯುತಿದೆ
ಪೆಣ್ವಕ್ಕಿಯಂ! ಮೋದಲಿಸುತಿದೆ ನನ್ನನಯ್ಯೋ ಹಾ,
ಸೌಮಿತ್ರಿ: ಪಂಚವಟಿ ಪರ್ಣಶಾಲೆಯೊಳಂದು
ಈ ಉಲಿಯನಾಲಿಸಿದೊಡನೆ ದಯಿತೆ ತಾನುಮಾ
ಕೊರಳನನುಕರಿಸಿ, ಹಾ, ಕರೆಯುತಿರ್ದಳೊ  ನಿನ್ನ
ಈ  ನಿರ್ಭಾಗ್ಯನಂ... ಇನ್ನೆನಗೆ ವಿಸ್ಮೃತಿಯೆ
ಪರಮಾಶ್ರಯಂ, ಶಾಂತಿ, ಸದ್ಗತಿ, ಮಧುರ ಮೃತ್ಯು!

No comments: