Monday, September 12, 2011

ಹಾಳು ರವಿ ಉದಯಿಸಿದನೇಕೆ?

ಈ ಹಿಂದಿನ ನಾಲ್ಕೈದು ಕಂತುಗಳಲ್ಲಿ ವಿರಹ ಗೀತೆಗಳ ಬಗ್ಗೆ ಬರೆದಿದ್ದೆ. ಅವು ಕೇವಲ ವಿರಹಗೀತೆಗಳಾಗಿರದೆ ವಾತ್ಸಲ್ಯವಿರಹಿಯ ಗೀತೆಗಳಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ವಾತ್ಸಲ್ಯವಿರಹಿಯ ಗೀತೆಗಳನ್ನು ಬೀಳ್ಕೊಡುವಷ್ಟರಲ್ಲಿ ಮತ್ತೊಂದು ವಿರಹ ಗೀತೆ ಕಣ್ಣಿಗೆ ಬೀಳಬೇಕೆ? ’ಪ್ರಥಮ ವಿರಹ’ ಎಂಬುದು ಅದರ ಹೆಸರು. ಆದರೆ ಈ ’ಪ್ರಥಮ ವಿರಹ’ದ ಬಗ್ಗೆ ಬರೆಯುವುದಕ್ಕಿಂತ ಮುಂಚೆ ’ಜೇನಿರುಳು ಅಥವಾ ಪ್ರಥಮಮಿಲನ’ ಎಂಬ ಕವಿತೆಯ ಬಗ್ಗೆ ಬರೆಯಬೇಕೆಂದಿದ್ದೇನೆ. ಏಕೆಂದರೆ ಈ ಎರಡೂ ಕವಿತೆಗಳು ಒಂದೇ ದಿನ ಅಂದರೆ ೨೪-೫-೧೯೩೭ ರಂದು ರಚನೆಯಾದವುಗಳಾಗಿವೆ. ಅಂದರೆ ಕವಿಯ ವಿವಾಹವಾದ ಒಂದು ತಿಂಗಳಳಗಿನ ರಚನೆಯಾಗಿವೆ! ಅವರ ಮದುವೆ ನಡೆದದ್ದು ೩೦-೪-೧೯೩೭ ಮತ್ತು ೧-೫-೧೩೯೭ ರ ನಡುವಿನ ರಾತ್ರಿ ೧ ಗಂಟೆಯ ಸುಮಾರಿಗೆ! ಆಗ ಪುರೋಹಿತರು ಶೂದ್ರವರ್ಗದವರ ಮದುವೆಗಳಿಗೆ ನಿಶಾಲಗ್ನಗಳನ್ನೇ ಇಟ್ಟುಕೊಡುತ್ತಿದ್ದರಂತೆ. ’ಮದುವೆಯ ವಿಷಯದಲ್ಲಿ ಸಂಪ್ರದಾಯವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಲು ಕೇಳಿಕೊಂಡಿದ್ದೆನಾದರೂ ಲಗ್ನ ಇಟ್ಟುಕೊಡುವ ಮುಹೂರ್ತದ ಪುರೋಹಿತರ ಈ ವಿಚಾರವನ್ನು ಗಮನಕ್ಕೇ ತಂದುಕೊಂಡಿರಲಿಲ್ಲ’ ಎಂದಿದ್ದಾರೆ.
ಮದುವೆಯಾದ ೧೯ ದಿನಗಳ ನಂತರ ೧೯-೫-೧೯೩೭ರಂದು ಕವಿಗಳ ಪ್ರಥಮ ರಾತ್ರಿಯ ಸಂಭ್ರಮ ಕೂಡಿಬರುತ್ತದೆ. ’ಸಹೋದರಿ ರಾಜಮ್ಮನವರ ಉತ್ಸಾಹವೇ ಕಾರಣವಾಗಿ ಎಂದು ಊಹಿಸುತ್ತೇನೆ, ಪ್ರಸ್ಥದ ಏರ್ಪಾಡು ನಡೆಯಿತು, ನನಗೆ ಸ್ವಲ್ಪವೂ ಸುಳುಹು ತೋರದಂತೆ’ ಎಂದಿದ್ದಾರೆ ಕವಿ. ಅದನ್ನು ಕವಿಗಳ ಮಾತಿನಲ್ಲೇ ನೋಡೋಣ.
ಕತ್ತಲಾಗಿ ದೀಪ ಹೊತ್ತಿಸಿದ ಮೇಲೆ ನಾವೆಲ್ಲ ಕೆಲವು ಮಿತ್ರರು ಸೇರಿ ಇಸ್ಪೀಟೋ ಏನೋ ಆಟದಲ್ಲಿ ತೊಡಗಿದ್ದೆವು. ನಮ್ಮನ್ನು ಊಟಕ್ಕೆ ಕರೆದ ಸಮಯದಲ್ಲಿ ನಾವೆಲ್ಲ ಕೆಳಗಿಳಿದು ಊಟಕ್ಕೆ ಹೋಗಿದ್ದಾಗ, ಪದ್ಧತಿಯಂತೆ ತಡಿ ದಿಂಬುಗಳನ್ನು ಹಾಕಿ, ಮಗ್ಗಲು ಹಾಸಿಗೆ ಹಾಸಿ, ಹೊದೆಯಲು ಹಾಕಿಡುತ್ತಿದ್ದರು, ಸುಮಾರು ಹತ್ತು ಹದಿನೈದು ನೆಂಟರಿಗೆ, ಎಷ್ಟು ಇರುತ್ತಿದ್ದರೂ ಅಷ್ಟು ಸಂಖ್ಯೆಯಲ್ಲಿ. ನಾವೆಲ್ಲ ಊಟ ಎಲೆ ಅಡಕೆ ಹಣ್ಣು ಮುಂತಾದವನ್ನು ತಿಂದು, ಮಲಗಲೆಂದು ಉಪ್ಪರಿಗೆಗೆ ಬಂದು, ಒಬ್ಬೊಬ್ಬರು ಒಂದೊಂದು ಹಾಸಗೆಗೆ ಕುಳಿತು ನೋಡುತ್ತೇವೆ, ಒಂದು ಹಾಸಗೆ ಕಡಮೆಯಾಗಿದೆ! ಹಾಸಗೆ ಹಾಸಿದ್ದ ಹುಡುಗನನ್ನು ಕರೆದು, ಬೈದು, ಇನ್ನೊಂದು ಹಾಸಿಗೆ ತಂದು ಹಾಕೋ, ಮಂಕೂ! ಎಂದು ಆಜ್ಞೆ ಮಾಡಿದೆವು. ಅಮ್ಮೋರು ಹೇಳಿದ್ದಾರೆ ಇಷ್ಟೇ ಹಾಸಗೆ ಸಾಕು ಎಂದ. ಯಾವ ಅಮ್ಮನೋ ಹೇಳಿದ್ದು? ಕರೆಯೋ! ಎಂದು ಗದರಿಸಲು ಕೆಳಗೆ ಇಳಿದು ಹೋದನು. ತುಸು ಹೊತ್ತಿನಲ್ಲಿ ರಾಜಮ್ಮ ಏಣಿ ಮೆಟ್ಟಲು ಸದ್ದಾಗುವಂತೆ ಹತ್ತಿಬಂದು, ಏನೂ ವಿಶೇಷವಿಲ್ಲ ಎಂಬಂತಹ ನಿರುದ್ವಿಗ್ನ ಧ್ವನಿಯಲ್ಲಿ ಪುಟ್ಟಣ್ಣಯ್ಯಗೆ ಇಲ್ಲಿ ಹಾಸಿಲ್ಲ. ಕೆಳಗೆ ’ಅವರ ಕೋಣೆಯಲ್ಲಿ’ ಹಾಸಿದೆ ಎಂದು, ಮಾರುತ್ತರಕ್ಕೆ ನಿಲ್ಲದೆ ಹೊರಟೇ ಬಿಟ್ಟಳು. ಅದನ್ನು ಗ್ರಹಿಸಿದ ಮಿತ್ರರು ’ನಿಮಗೆ ಕೆಳಗೆ ಹಾಸಿದ್ದಾರಂತೆ. ಇಲ್ಲಿ ಜಾಗ ಕೊಡುವುದಿಲ್ಲ ಹೋಗಿ! ಎಂದೂ ಬಿಟ್ಟರು. ಮೆಟ್ಟಿಲಿಳಿದು ಮಲಗಲು ’ನಮ್ಮ ಕೋಣೆಗೆ’ ತೆಪ್ಪಗೆ ಹೋದೆ.
ಆ ಕೋಣೆಯ ಬಗ್ಗೆ ತಮ್ಮಗಿದ್ದ ಭಾವನಾತ್ಮಕ ಸಂಬಂಧದ ಬಗ್ಗೆ ಹೀಗೆ ಬರೆದಿದ್ದಾರೆ.
ನಮ್ಮ ಕೋಣೆ ಎಂದರೆ ಕುಪ್ಪಳಿ ಮನೆಯಲ್ಲಿ ನನ್ನ ಅಪ್ಪಯ್ಯ ಅವ್ವ ಮಲಗುತ್ತಿದ್ದ ಕೋಣೆ. ನಾನು ಶಿಶುವಾಗಿದ್ದಾಗಿನಿಂದಲೂ ಅಮ್ಮನ ಮಗ್ಗುಲಲ್ಲಿ ಮಲಗಿ ಮೊಲೆವಾಲು ಕುಡಿದ ದೊಡ್ಡಮಂಚವಿದ್ದ ಕೋಣೆ. ನನ್ನ ಹಾಗೆ ನನ್ನ ತಂಗಿಯರಿಬ್ಬರೂ!
ಆ ಕೋಣೆಗೆ ಹೋಗಿ, ಅಲ್ಲಿ ಮಾಡಿದ್ದ ವಿಶೇಷ ಅಲಂಕಾರವನ್ನು ನೋಡುತ್ತಾ, ಬೇಸಗೆಯಾದ್ದರಿಂದ ಹೊದಿಕೆಯನ್ನು ನಿರಾಕರಿಸಿ ರೂಢಿಯಂತೆ ಶ್ರೀಗುರುವನ್ನು ಶ್ರೀಮಾತೆಯರನ್ನು ಜಗನ್ಮಾತೆಯನ್ನೂ ಧ್ಯಾನಿಸುತ್ತಾ, ಮುಂದಿನ ನನ್ನ ಜೀವನ ಸಂಗಾತಿಯನ್ನು ಹೃದಯ ಹಿಗ್ಗಿ ನಿರೀಕ್ಷಿಸುತ್ತಾ ಕಾಯುತ್ತಿದ್ದೆ ಎನ್ನುತ್ತಾರೆ. ಆಗ ಗಳೆತಿಯರಿಂದ ದೂಡಿಸಿಕೊಂಡು ಒಳ ಬಂದ ತಮ್ಮ ಪೂರ್ಣಾಂಗಿಯನ್ನು (ಕುವೆಂಪು ಅವರು ಅವರ ಶ್ರೀಮತಿಯನ್ನು ಅರ್ಧಾಂಗಿಯೆಂದು ಕರೆಯದೆ ಪೂರ್ಣಾಂಗಿಯಂದೇ ಕರೆಯಲು ಇಚ್ಛಿಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ನೆನಪಿನ ದೋಣಿಯಲ್ಲೇ ’ಚಿ. ಸೌ. ಹೇಮಾವತಿ ನನ್ನ ಚೇತನವನ್ನು ಅರ್ಧಾಂಗಿಯಾಗಿ ಅಲ್ಲ, ಪೂರ್ಣಾಂಗಿಯಾಗಿಯೇ ಆಲಿಂಗಾಕ್ರಮಿಸುತ್ತಾಳೆ’ ಎಂದು ಬರೆದಿದ್ದಾರೆ) ಕುರಿತು ಗುರುಕೃಪೆ ಕವನದ ನಾಲ್ಕು ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ನಿರಿನಿರಿ ಮೆರೆದುದು ನೀಲಿಯ ಸೀರೆ,
ಶರಧಿಯನುಟ್ಟಳೆ ಭೂಮಿಯ ನೀರೆ?
ಚಂದ್ರಮುಖದಲ್ಲಿ ತಾರೆಯ ಬಿಂದು
ಚಂದ್ರೋದಯದಲಿ ಮಿಂದುದೆ ಸಿಂಧು:
ಪ್ರಥಮರಾತ್ರಿಯ ಸಂಭ್ರಮ ಕಳೆದ ಎರಡನೆಯ ದಿನ, ಕುಪ್ಪಳಿ ಮನೆಯ ಉಪ್ಪರಿಗೆಯಲ್ಲಿ ಸತಿಯೊಡಗೂಡಿ ಪ್ರಥಮಬಾರಿಗೆ ಶ್ರೀಗುರುಮಹರಾಜರ ಉತ್ಸವವನ್ನು ಆಚರಿಸುತ್ತಾರೆ. ಅಂದೇ ಶ್ರೀಮತಿ ಹೇಮಾವತಿಯವರು ಶಿವಮೊಗ್ಗೆಕ್ಕೆ ಹೊರಡುತ್ತಾರೆ. ಆಗಿನಿಂದಲೇ ಮಹಾಯಾತನಾಕ್ಲಿಷ್ಟವಾದ ’ವಿರಹ’ ಶುರುವಾಯಿತು ಎನ್ನುತ್ತಾರೆ. ಆಗ, ’ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಕವಿತೆಗಳೆರಡೂ ರೂಪುವೊಡೆದು ದಿನಾಂಕ ೨೪.೫.೧೯೩೭ರಂದು ಅಕ್ಷರರೂಪಕ್ಕಿಳಿದಿವೆ.
ಜೇನಿರುಳು ಅಥವಾ ಪ್ರಥಮಮಿಲನ

ಮೊದಲನೆಯ ಮಿಲನವೇನ್?
ಅಹುದು; ಈ ಜನ್ಮದಲಿ!
ಇಲ್ಲದಿರೆ ಮರೆತ ಚಿರಪರಿಚಿತೆಯನಿನ್ನೊಮ್ಮೆ
ಎದುರುಗೊಂಡಂತಾದುದೇಕೆ!
ಜನ್ಮಾಂತರದ ನಲ್ಲೆಯಾಕೆ!
ಜನ್ಮಾಂತರದ ದರ್ಶನದಲ್ಲಿ ಕವಿಗೆ ನಂಬಿಕೆಯಿತ್ತು. ಗಂಡಹೆಂಡತಿಯರ ಸಂಬಂಧ ಜನ್ಮಾಂತರ ಸಂಬಂಧ ಎಂಬುದರ ಬಗ್ಗೆಯೂ ನಂಬಿಕೆಯಿತ್ತು. ಆದ್ದರಿಂದಲೇ ’ಈ ಪ್ರಥಮ ಮಿಲನ ಮೊದಲನೆಯದೇ?’ ಎಂಬ ಪ್ರಶ್ನೆ ಎತ್ತಿಕೊಳ್ಳುತ್ತಾರೆ. ಉತ್ತರ ’ಅಹುದು’ ಎಂದಾದರೆ ’ಅದು ಈ ಜನ್ಮಕ್ಕೆ ಮಾತ್ರ’ ಎನ್ನುತ್ತಾರೆ. ಜನ್ಮಾಂತರ ಸಂಬಂಧವಲ್ಲದಿದ್ದರೆ, ಸತಿ ಮೊದಲ ಬಾರಿಗೆ ಎದುರುಗೊಂಡಾಗ ಮರೆತ ಚಿರಪರಿಚಿತರೊಬ್ಬರನ್ನು ಬಹಳ ದಿನಗಳ ನಂತರ ಎದುರುಗೊಂಡಾಗ ಮೂಡುವಂತಹ ಭಾವ ಮೂಡುತ್ತಿತ್ತೇ? ಆದ್ದರಿಂದ ತಮ್ಮ ಸತಿ ಜನ್ಮಾಂತರದ ನಲ್ಲೆ ಎಂಬುದು ಕವಿಯ ನಂಬಿಕೆ! ಮುಂದೆ ಗಗನದಂತೆ ಕಾಯುತ್ತಿದ್ದ ನನ್ನ ಬಳಿಗೆ ಮಿಂಚಿನಂತೆ ಸತಿ ಬಂದಳೆಂದು ಹೇಳುತ್ತಾರೆ.

ಕುಳಿತು ಕಾಯುತ್ತಿದ್ದೆ ಗಗನದಂತೆ
ಪ್ರಣಯಿ ನಾನು,
ಕತ್ತಲೆಗೆ ಕೆಮ್ಮಿಂಚು ಬಳುಕಿ ಬರುವಂತೆ
ಬಂದೆ ನೀನು,
ಓ ನನ್ನ ಚಿರಪರಿಚಿತೆ!

ನೀ ನ್ನ ಗುರುತಿಸಿದೆ;
ನಾ ನಿನ್ನ ಗುರುತಿಸಿದೆ;
ಕರಗಿದುದು ಬಹುಜನ್ಮ ಕಾಲದೇಶದ
ಹಿರಿಯ ಕರಿಯ ಕಲ್ ಗೋಡೆ
ನಾ-ನಿನ್ನ, ನೀನೆನ್ನ ನೋಡೆ!
ಚೆಲುವೆ, ಶರಣಾದೆ ನೀನೆನ್ನನೊಪ್ಪಿ;
ಸಂಪೂರ್ಣನಾದೆ ನಾ ನಿನ್ನನಪ್ಪಿ!
ನಾನು ಮಾತಿನ ಹೊಳೆಯ ಹೊನಲಾಗಿ ಹರಿದೆ
ಸವಿನುಡಿಯ ಮಳೆಯ ಕರೆದೆ;
ನೀನು ಮೌನದ ಬಂಡೆಯಂದದಲಿ ಕುಳಿತೆ
ನೀರ್ ನಡುವೆ ನಲ್ ಮೊರೆಯನಾಲಿಸುತ, ಓ ಎನ್ನ ಲಲಿತೆ!
ಇಲ್ಲಿ ಒಬ್ಬರನೊಬ್ಬರು ಪರಸ್ಪರ ಗುರುತಿಸುವುದೆಂದರೆ ಬಹುಜನ್ಮದ ಅನುಬಂಧವನ್ನು ಗುಉತಿಸಿದಂತೆ. ಒಂದು ರೀತಿಯಲ್ಲಿ ಆತ್ಮಗಳ ಪರಸ್ಪರ ಗುರುತಿಸುವಿಕೆ, ಸ್ಪಂದಿಸುವಿಕೆ, ಒಪ್ಪಿಸುವಿಕೆ! ಗಂಡು ಮಾತನಾಡುತ್ತಾನೆ. ಹೆಣ್ಣು ಮೌನಬಂಡೆಯಂತೆ ಕುಳಿತಿದ್ದಾಳೆ. ಆದರೆ ಗಂಡನ ಮಾತು ಪ್ರೇಮಾಮೃತದಂತಿದೆ. ಅದನ್ನು ಮಾತ್ರ ಆಲಿಸುತ್ತಾ, ಉಳಿದೆಲ್ಲದಕ್ಕೂ ಕಿವುಡಿಯಾಗಿದ್ದಾಳೆ.

ಅಯ್ಯೋ ಆ ಜೇನಿರುಳು ಬೆಳಗಾದುದೇಕೆ?
ನಮ್ಮಿರ್ವರಾ ಬಿಗಿದ ನಲ್ಮೆತೋಳ್ ತಾವರೆಯ ಸೆರೆಗೆ
ಬಿಡುಗಡೆಯ ಹಾಳು ರವಿ ಉದಯಿಸಿದನೇಕೆ?
ಎಲ್ಲ ನವದಂಪತಿಗಳು ಬೆಳಗಾಗುವುದನ್ನು ವಿರೋಧಿಸಿದಂತೆ ಅವರೂ ವಿರೋಧಿಸುತ್ತಾರೆ! ಸೂರ್ಯೋದಯವನ್ನು ದೇವರ ದಯೆಯೆಂದು ಬಗೆದು ಆರಾಧಿಸಿದ, ಅನುಭವಿಸಿದ, ದರ್ಶಿಸಿದ, ವರ್ಣಿಸಿದ ಮಹಾಕವಿ ಮೊದಲ ಬಾರಿಗೆ, ಒಬ್ಬ ಪತಿಯಾಗಿ, ಪ್ರೇಮಿಯಾಗಿ ’ರವಿಯುದಯ’ವನ್ನು ’ಹಾಳು’ ಎಂದು ಕರೆದಿದ್ದಾರೆ!
(ಮುಂದಿನ ಭಾಗದಲ್ಲಿ ’ಪ್ರಥಮ ವಿರಹ’ ಕವಿತೆಯ ಜೊತೆಯಲ್ಲಿ ವಿರಹವನ್ನು ಕುರಿತ ಕವಿಯ ಅಭಿಪ್ರಾಯಗಳನ್ನು, ಆ ಸಂಧರ್ಭದ ಯಾತನೆ ’ಶ್ರೀ ರಾಮಾಯಣ ದರ್ಶನಂ’ ಕಾವ್ಯದ ಮೇಲೆ ಬೀರಿದ ಪರಿಣಾಮವನ್ನು ಕುರಿತು ಬರೆಯುತ್ತೇನೆ)

1 comment:

Srinivasa Mahendrakar said...

tumbaa santhosha aagtaa ide nimma ee prayatna noodi.. tumbaa tumbaa dhanyavaadagalu.