ಮೊದಲ ಬಾರಿಗೆ ’ಕೊಳಲು’ ಸಂಕಲನದಲ್ಲಿ ಅಚ್ಚಾಗಿದ್ದ ’ಮುಂಗಾರು’ ಶೀರ್ಷಿಕೆಯ ಕವಿತೆ ಈಗ ’ಪಕ್ಷಿಕಾಶಿ’ ಸಂಕಲನದಲ್ಲಿದೆ. ೨೨-೪-೧೯೨೯ ಕವಿತೆ ರಚನೆಯಾದ ದಿನ. ಮಲೆನಾಡಿನ ರೌದ್ರಭಯಂಕರ ಹಾಗೂ ರುದ್ರರಮಣೀಯ ಮುಂಗಾರು ಮಳೆಯಾರ್ಭಟವನ್ನು ಅನುಭವಿಸಿದ ಕವಿಯ ಮನಸ್ಸಿನಿಂದ ಹುಟ್ಟಿದ ಸ್ವಾನುಭವ ಕವಿತೆ. ಆ ಕವಿತೆ ಅರಳಿದ ಸಂದರ್ಭವನ್ನು ಕವಿ ’ನೆನಪಿನ ದೋಣಿಯಲ್ಲಿ’ ಹೀಗೆ ದಾಖಲಿಸಿದ್ದಾರೆ.
’ಮುಂಗಾರು’ - ಇದನ್ನು ನಾನು ರಚಿಸಿದ್ದು ಕುಪ್ಪಳ್ಳಿಯ ಉಪ್ಪರಿಗೆಯಲ್ಲಿ ಕುಳಿತು. ಆ ಉಪ್ಪರಿಗೆ ಪೂರ್ವದಿಕ್ಕಿಗೆ ಪೂರ್ತಿ ತೆರೆದಿದೆ. ಪೂರ್ವದಿಕ್ಕಿಗೆ ಅಡಕೆ ತೋಟದ ಆಚೆಗೆ ಏರುವ ಮಲೆನೆತ್ತಿ ಅರ್ಧ ಆಕಾಶಕ್ಕೆ ಏರಿದೆ. ಮಲೆ ಎಂದರೆ ಬರಿಯ ಬೆಟ್ಟವಲ್ಲ. ನಿಬಿಡಾರಣ್ಯ ಮುಚ್ಚಿ ಮುಸುಗಿರುವ ಪರ್ವತಶ್ರೇಣಿ. ಆ ದಿನ ಸಂಜೆಯ ಹೊತ್ತು ನಾನು ಹಸುರುಗೋಡೆಯಂತೆ ಓರೆಯಾಗಿ ಬಾನುದ್ದ ಎದ್ದಿದ್ದ ಮಲೆಯ ಕಡೆ ಧ್ಯಾನನೇತ್ರಗಳಿಂದ ನೋಡುತ್ತಾ ಕುಳಿತಿದ್ದೆ. ಆಕಾಶದಲ್ಲಿ ಮುಂಗಾರಿನ ಮೋಡ ಕವಿದು ಭಯಂಕರ ಗುಡುಗು ಮಿಂಚುಗಳಿಂದ ವಿಜೃಂಭಿಸಿತ್ತು. ಕರ್ಮೋಡದ ತುದಿ ಮಲೆನೆತ್ತಿಯನ್ನೆ ಮರೆಗೊಳಿಸಿ ಭೂಮಿಗೆ ಸಮೀಪಿಸಿತ್ತು. ಹೆಮ್ಮರಗಳನ್ನೂ ಅಲುಬಿ ತೂಗಿಸುವ ಬಿರುಗಾಳಿಯೂ ಎದ್ದಿತು. ನೋಡುತ್ತಿದ್ದಂತೆ, ಮಳೆ ಶುರುವಾದುದು ಮಲೆಯ ನೆತ್ತಿಯ ಮರಹಸುರು ಮಬ್ಬಾಗಿ ಗೊತ್ತಾಯಿತು. ಮತ್ತೆ ಮಳೆ ಮಲೆಯ ಇಳಿಜಾರಿನಲ್ಲಿ ಮನೆಯ ಕಡೆಗೆ ಇಳಿಯತೊಡಗಿತು, ನೆತ್ತಿಯಿಂದ ಮಲೆಯ ಓರೆಯ ಸೋಪಾನವನ್ನಿಳಿದು ಬರುವಂತೆ. ಅದು ಇಳಿದಂತೆಲ್ಲ ಕಾಡು ಮಬ್ಬಾಗುತ್ತಾ ಮಬ್ಬು ಮುಂದುವರಿಯುತ್ತಿತ್ತು. ದೂರವಿದ್ದ ಹನಿಗಳು ಬರುಬರುತ್ತಾ ಬಳಿಸಾರಿ ಕೊನೆಗೆ ನಮ್ಮ ತೋಟವೂ ಸೇರಿದಂತೆ ಎಲ್ಲವೂ ಸೊಳ್ಳೆಪರದೆಯೊಳಗಾದಂತೆ ದೃಶ್ಯ ಕಂಗೊಳಿಸಿತು.
ಕವಿಯ ಮೇಲಿನ ಮಾತುಗಳು ಕವಿತೆಯಲ್ಲಿ ಒಡಮೂಡಿರುವುದು ಹೀಗೆ.
ಪಡುವಲ ಕಡಲಿನ ಮಿಂಚನು ಗುಡಗನು ನುಂಗಿ ಬಸಿರಿನಲಿ, ಮುಡಿಗೆದರಿ,
ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಂದಳು ಬಲು ಗದರಿ!
ಗುಟುರನು ಹಾಕಿತು ಮುಂಗಾರ್ ಗೂಳಿ!
ಘೀಳಿಟ್ಟೊರಲಿತು ಘನಘಟೆಯಾಳಿ!
ಬುಸುಗುಟ್ಟಿತು, ಬೀಸಿತು ಬಿರುಗಾಳಿ!
ಸುತ್ತಲು ಮುತ್ತಿತು ಕಾರ್ಮೋಡ!
ಹರಿಯುವ ಹಾವಿನ ತೆರದಲಿ ಕತ್ತಲೆ ಮೆಲ್ಲನೆ ನುಂಗಿತು ಮಲೆನಾಡ!
ಹಿಂಜರಿದುರಿಬಿಸಿಲಂಜುತಲಡಗಿತು, ರವಿಮಂಡಲ ಕಣ್ಮರೆಯಾಯ್ತು;
ಕಾಳಿಯ ಕೇಶದ ತಿಮಿರವು ಮುಸುಗಿತು, ಶಾಂತಿಯ ಗಲಭೆಗೆ ಸೆರೆಯಾಯ್ತು.
ಕಾಳಿಯ ಕಂಗಳ ಕೆಂಬೆಳಕಂತೆ,
ಕೈ ಹೊಂಬಳೆಗಳ ಹೊಸ ಹೊಗರಂತೆ,
ಝಳಪಿಪ ಖಡ್ಗದ ದೀಧಿತಿಯಂತೆ,
ಮಿಂಚುಗಳೆಸೆದುವು ಗೊಂಚಲಲಿ!
ಹೊಳೆದುವು, ಅಳಿದುವು, ಸುಳಿಸುಳಿದಲೆದುವು ಮುತ್ತುವ ಮೋಡಗಳಂಚಿನಲಿ!
ಹಾಡುವ ಹಕ್ಕಿಯ ಹಣ್ಣಿನ ಮರದಿಂದೋಡುತ ಹುಲ್ಲಿನ ಹಕ್ಕೆಯಲಿ
ಚಿಲಿಪಿಲಿ ದನಿ ಮಾಡವ್ವನ ಕರೆಯುವ ಮರಿಗಳನಪ್ಪಿತು ತಕ್ಕೆಯಲಿ.
ಬೆಚ್ಚನೆ ರೆಕ್ಕೆಯೊಳವುಗಳನಿಟ್ಟು,
ಹಸಿದಿಹ ಮಕ್ಕಳಿಗುಣಿಸನು ಕೊಟ್ಟು,
ಗೂಡಿನ ಬಾಯಲಿ ಮಂಡೆಯನಿಟ್ಟು
ದಿಟ್ಟಿಯನಟ್ಟಿತು ಯೋಗಿಯೊಲು,
ಕೊಂಬೆಯ ತೊಟ್ಟಿಲ ತೂಗುತ ಗಾಳಿಯು ಬುಸುಬುಸುಗುಡುತಿರೆ ಭೋಗಿಯೊಲು!
ಬನದಲಿ ಬಯಲಲಿ ಮೇಯುವ ತುರುಗಳು ಜವದಲಿ ಕೊಟ್ಟಿಗೆಗೋಡಿದವು;ಈ ನಾಲ್ಕೂ ಪದ್ಯಗಳಲ್ಲಿ, ಮಲೆನಾಡಿಗೆ ಕಾಲಿಡುತ್ತಿರುವ ವರ್ಷದ ಮೊದಲ ಮುಂಗಾರಿನ ಆರ್ಭಟ ಆವೇಶಗಳನ್ನು ಕಾಣಬಹುದು. ಕವಿತೆಗಿರುವ ವೇಗದ ಲಯ, ಮಳೆಯ ಆರ್ಭಟವನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ. ಮೊದಲ ಪದ್ಯದ ಮೊದಲ ಸಾಲಿನಲ್ಲಿ ಮತ್ತೆ ಮತ್ತೆ ಬಂದಿರುವ ’ಡ’ಕಾರ ಮಲೆನಾಡಿನ ಮುಂಗಾರಿನ ಮಳೆಯಲ್ಲಿ ಮೂಡುವ ಗುಡುಗು ಸಿಡಿಲಿನ ಶಬ್ದಾಡಂಬರಕ್ಕೆ ಸಾಕ್ಷಿಯಾಗಿದೆ! ಸುಳಿಸುಳಿ, ಬುಸುಬುಸು ಈ ರೀತಿಯ ಪದಪುಂಜಗಳು ಮುಂಗಾರಿನ ಆವೇಶದ ಅಕ್ಷರರೂಪಗಳಾಗಿವೆ. ಮುಂದಿನೆರಡು ಪದ್ಯಗಳಲ್ಲಿ ಮಳೆ ಹಿಡಿದ, ಸುರಿದ ಸನ್ನಿವೇಶ, ಅದರಿಂದ ತಿರೆಗೆ, ಕವಿಗೆ ದೊರೆತ ಫಲಾನುಭವ ಮಡುಗಟ್ಟಿದೆ.
ಬಾಲವನೆತ್ತಿದ ಕರುಗಳು ಅಂಬಾ ಎನ್ನುತ ತಾಯ್ಗಳ ಕೂಡಿದವು.
ಗುಡುಗಿನ ಸದ್ದಿಗೆ ಕಾಡುಗಳದುರಿ,
ಅಡವಿಯ ಮಿಗಗಳು ಸಿಡಿಲಿಗೆ ಬೆದರಿ
ಪೊದೆಗಳ ಗುಹೆಯನು ಸೇರಿದುವು.
ತೊಳಲುವ ಕರ್ಮುಗಿಲಾಲಿಯ ಕಲ್ಗಳ ಮಿರುಗುವ ಮಳೆಯನು ಕಾರಿದುವು!
ವನಪರಿವೃತ ಗಿರಿಶಿರದಿಂದೊಯ್ಯನೆ ಮರದಲೆದಳಿರನು ತುಳಿತುಳಿದು[ಮಳೆಯ ಹನಿಯ ದಾರಗಳಿಂದ ನೆಯ್ದ ಒಂದು ಯವನಿಕೆ (ಪರದೆ) ಕಾಡನ್ನು ಸುತ್ತುವರಿದಂತಾಗಿ ಮಲೆ ಕಾಡು ಎಲ್ಲ ಒಂದು ಸೊಳ್ಳೆಪರದೆಯೊಳಗಾದಂತಾಗಿ ಮಸುಗು ಮಸುಗಾಗುತ್ತದೆ ಎಂಬ ಸುಂದರ ದೃಶ್ಯಕ್ಕೆ ಪ್ರತಿಮೆಯೊಡ್ಡುತ್ತದೆ ಕವಿಪ್ರತಿಭೆ, ಕೊನೆಯ ಪಂಕ್ತಯಲ್ಲಿ]
ಚೆಲುವಿನ ಹನಿಗಳು, ಸುರಶಿಶುಮಣಿಗಳು, ಬುವಿಗಿಳಿತಂದರು ನಲಿನಲಿದು.
ಬಳಿ ಸಾರುವ ದೂರದ ಸರ ಕೇಳೆ,
ಗಣನೆಗೆ ಸಿಲುಕದ ಮಳೆಹನಿ ಬೀಳೆ,
ಕಬ್ಬಗನೆದೆಯಲಿ ಮುದ ಮೊಳೆತೇಳೆ
ನೆನೆವುದು ಸೊಗದಲಿ ಬಗೆಗಣ್ಣು:
ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!
ಮುಗಿಲಿನ ಮುತ್ತುಗಳಾಲಿಯ ಕಲ್ಲುಗಳುದುರಲು ಹೂಮಳೆಯಂದದಲಿಈ ಕವಿತೆಯನ್ನು ಸಹೃದಯಗೋಷ್ಠಿಯಲ್ಲಿ ಓದಿದಾಗ ಸಹೃದಯರು ಮೆಚ್ಚಿ ಹರ್ಷಘೋಷ ಮಾಡುತ್ತಿದ್ದರಂತೆ. ಆದರೆ ಅದು ಕೊಳಲು ಸಂಗ್ರಹದಲ್ಲಿ ಪ್ರಕಟವಾದಾಗ ವಿಮರ್ಶಕರೊಬ್ಬರು ’ಜಯಕರ್ಣಾಟಕ’ ಮಾಸಪತ್ರಿಕೆಯಲ್ಲಿ, ಕೊಳಲಿನ ಕವನಗಳಲ್ಲಿ ಬರಿಯ ದೋಷಗಳನ್ನೆ ಕೆದಕಿ ಪರಿಹಾಸ್ಯ ಮಾಡಿದರಂತೆ. ಈ ಪದ್ಯಕ್ಕೆ ಸಂಬಂಧಪಟ್ಟಂತೆ ಆ ವಿಮರ್ಶಕರು ಎತ್ತಿದ ದೋಷ ಯಾವುದು ಗೊತ್ತೆ? ಐದನೆಯ ಪದ್ಯದ ಕೊನೆಯ ಸಾಲು - ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು! ಎಂಬುದು. ಅದಕ್ಕೆ ಆ ಪೂರ್ವಾಗ್ರಹದಿಂದ ಕೂಡಿದ ವಿಮರ್ಶಕರು ನೀಡಿದ ವಿವರಣೆ ’ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದ್ದಿರಬೇಕು?’ ಎಂದು. ಕವಿ ಕಟ್ಟಿದ ಸುಂದರ ಪ್ರತಿಮೆಯೊಂದನ್ನು ಕ್ಷಣ ಮಾತ್ರದಲ್ಲಿ ಕುರೂಪಗೊಳಿಸಿ, ನೋಡಿ ’ಆನಂದ’ಪಟ್ಟ ಆ ಸಹೃದಯ ವಿಮರ್ಶಕ ವಿಭೂತಿಗೆ ಧಿಕ್ಕಾರವಿರಲಿ. ಹೆಣ್ಣಿನ ಸೊಂಟವನ್ನು ಮೈಲಿಯ ಲೆಕ್ಕಾಚಾರದಲ್ಲಿ ಕಲ್ಪಿಸಿಕೊಳ್ಳುವುದರಲ್ಲೇ ವಿಮರ್ಶಕರ ಕಲ್ಪನಾದಾರಿದ್ರ್ಯ ಎದ್ದು ಕಾಣುತ್ತದೆ. ಇಂತಹ ಪ್ರತಿಕ್ರಿಯೆಗಳಿಗೆ ಕವಿಯ ಮರುಪ್ರತಿಕ್ರಿಯೆ ಹೇಗಿದ್ದೀತು? ಇಲ್ಲಿದೆ ನೋಡಿ, ಕವಿಯ ಮಾತು.
ಹುಡುಗರು ಹುಡುಗಿಯರಾಯ್ದಾಯ್ದವುಗಳ ಕುಣಿದು ತಿಂದರಾನಂದದಲಿ.
ಸಗ್ಗದ ಕಂಬನಿ ತಿರೆಯನು ತೊಯ್ಯೆ,
ಬೆಂದಿಹದುರಿಯನು ಪರ ಬಂದೊಯ್ಯೆ,
ಲೋಕಕೆ ನಾಕವು ಬಿಜಯಂಗೆಯ್ಯೆ
ಕಿಸಲಯ ಸುಮ ಸೋಪಾನದಲಿ,
ಕವಿ ಹೃದಯದಿ ಮೋಹನ ಸುರಗಾನದ ಮಳೆಗರೆವುದು ಸುಮ್ಮಾನದಲಿ!
"ನನ್ನ ಕವನಗಳಲ್ಲಿ ಬಹುಪಾಲು ಸ್ವಾನುಭವ ಸನ್ನಿವೇಶಗಳಿಂದಲೆ ಹೊಮ್ಮಿವೆ. ಅಂತಹ ಸನ್ನಿವೇಶಗಳ ಪರಿಚಯದಾರಿದ್ರ್ಯವಾಗಲಿ ಅಂತಹ ಅನುಭವಗಳ ದರಿದ್ರತೆಯಾಗಲಿ ಇರುವ ಓದುಗ ಸಹೃದಯನಾಗಿದ್ದರೆ, ಆ ಸನ್ನಿವೇಶ ಮತ್ತು ಅನುಭವಗಳನ್ನು ತನ್ನ ’ಭಾವಯಿತ್ರೀ’ ಪ್ರತಿಭೆಯಿಂದ ಕಲ್ಪಿಸಿಕೊಂಡು ಆ ಕವನಗಳ ರಸಾಸ್ವಾದನೆ ಮಾಡಬೇಕಾಗುತ್ತದೆ. ಅಸೂಯೆ ಅಥವಾ ದ್ವೇಷವಿದ್ದರಂತೂ ಅಂತಹ ವಾಚಕನಿಗೆ ಅವಯ ಒಣಕಟ್ಟಿಗೆಯೆ ಆಗುತ್ತವೆ. ಅವನು ಗೆದ್ದಲಾಗಿಯೆ ಅವನ್ನು ತಿಂದು ಹಾಳು ಮಾಡುತ್ತಾನೆ."
ಇದೇ ಸಂದರ್ಭದಲ್ಲಿ ರಚಿತವಾದ ’ಅರುಣಗೀತೆ’ ಕವನದ್ದು ಇದೇ ತೆರನಾದ ಚರಿತ್ರೆ! ಕವಿಯ ಮಾತಿನಲ್ಲೇ ಕೇಳೋಣ. ’ಸಹಾನುಭೂತಿಯಿಲ್ಲದೆ ವಿಮರ್ಶೆ ಮಾಡುವವನು ಎಂತಹ ಮೂರ್ಖನಾಗುತ್ತಾನೆ ಎನ್ನುವುದಕ್ಕೆ ಇದರ ಒಂದು ಪಂಕ್ತಿಯನ್ನು ಆಶ್ರಯಿಸಿ ಕವಿಯನ್ನು ಲೇವಡಿ ಮಾಡಲು ಹೊರಟು ತನ್ನನ್ನೆ ಶಾಶ್ವತ ಲೇವಡಿಗೆ ಗುರಿಮಾಡಿಕೊಂಡ ಒಬ್ಬ ಪಂಡಿತನ ವಿಚಾರ ಹೇಳಿ, ಅನುದಾರತೆಗೆ ಒಂದು ನಿದರ್ಶನ ಕೊಡುತ್ತೇನೆ’ ಎನ್ನುತ್ತಾರೆ. ಪಠ್ಯಪುಸ್ತಕವೊಂದನ್ನು ಸೇರಿದ ಈ ಶಿಶುಗೀತೆಯ ಮೇಲೆ ಆ ಪಂಡಿತರ ಪ್ರಹಾರ ನಡೆದಿರುತ್ತದೆ. ಕವಿತೆ
ದೇವರ ಮಕ್ಕಳೆ, ಎಲ್ಲರು ಏಳಿ,ಎಂದು ಪ್ರಾರಂಭವಾಗುತ್ತದೆ. ಬೆಳ್ಳಗೆ ಬೆಳಗಾಯಿತು ಎಂಬ ಸಾಲಿನ ಬಗ್ಗೆ ಆತನ ಆಕ್ಷೇಪ! ಈಗಲೂ ಹಳ್ಳಿಗಳ ಕಡೆ ’ಬೆಳ್ಳಂಬೆಳಗಾಗಿದೆ’ ಎಂಬ ಪ್ರಯೋಗವಿದೆ. ಚೆನ್ನಾಗಿ ಬೆಳಕಾಗಿದೆ, ಸೂರ್ಯೋದಯವಾಗಿ ತುಂಬಾ ಹೊತ್ತು ಆಗಿದೆ ಎಂದರ್ಥ ಅಷ್ಟೆ. ಆದರೆ ಆ ವಿಮರ್ಶಕರಿಗೆ ಅದು ಪುನರುಕ್ತಿಯಾಗಿ ಕಂಡಿದೆ. ಪ್ರಾತಃಕಾಲವಾಗಿ ಚೆನ್ನಾಗಿ ಹೊತ್ತು ಮೂಡಿದೆ, ಆದ್ದರಿಂದ ಇನ್ನೂ ಮಲಗಿರುವುದು ಸೋಮಾರಿತನವಾಗುತ್ತದೆ, ಬೇಗನೆ ಎದ್ದು ಬಿಡಿ - ಎಂದು ಮಕ್ಕಳಿಗೆ ಕರೆಕೊಡುತ್ತದೆ ಆ ಪಂಕ್ತಿ! ಅಷ್ಟೆ.
ಬೆಳ್ಳಗೆ ಬೆಳಗಾಯಿತು ಬೇಗೇಳಿ!
ಇದನ್ನು ಕುರಿತಂತೆ ಕವಿ ಹೀಗೆ ಬರೆಯುತ್ತಾರೆ. "ಸ್ವಲ್ಪ ಸಹಾನುಭೂತಿಯಿಂದ ಓದಿದ್ದರೆ ಆ ಪಂಡಿತರಿಗೆ ಅದೇನು ಅರ್ಥವಾಗದಂತಹ ಬ್ರಹ್ಮಗ್ರಂಥಿಯಾಗುತ್ತಿರಲಿಲ್ಲ. ವಿಮರ್ಶಿಸಲೇ ಬೇಕು ಖಂಡಿಸಲೇ ಬೇಕು ಎಂಬ ಪೂರ್ವಗ್ರಹಪೀಡಿತರಾಗಿ ಹೊರಟಿದ್ದರೆ ಮಾತ್ರ ಅಲ್ಲಿ ಪುನರುಕ್ತಿಯ ದೋಷಾರೋಪಣೆಗೆ ಅವಕಾಶ ದೊರೆಯುತ್ತದೆ! ಕವಿಯನ್ನು ಖಂಡಿಸಿದ ತೃಪ್ತಿಯಿಂದ ಪಂಡಿತ ಹೆಮ್ಮೆಯ ಹುಂಜ ಮನೆಯ ಬೆಂಗಟೆಗೆ ಹಾರಿ ರೆಕ್ಕೆ ಬಡಿದು ಕೊಕ್ಕೊಕ್ಕೋ ಎಂದು ತನ್ನ ದಿಗ್ವಿಜಯ ಸಾರಲು ಸಹಾಯವಾಗುತ್ತದೆ."
2 comments:
Very informative sir,
nimma barahagalallina vishaya sangraha tumba ishta agatte
ಕುವೆಂಪು, ಅವರ ಚಿತ್ತವನ್ನು ಎಷ್ಟು ಚೆನ್ನಾಗಿ ನಮ್ಮೆದುರು ಅನಾವರಣಗೊಳಿಸಿದಿರಿ...ಓದುವಾಗ ಕಣ್ಣುಗಳು ಒದ್ದೆಯಾದವು...ವಿಮರ್ಶಕರು ಯಾವ ರೀತಿ ಕವಿಗಳನ್ನು ಅರಿಯಬೇಕೆಂದು ನಿಮ್ಮಿಂದ ಕಲಿಯಬೇಕು.
Post a Comment