Monday, December 12, 2011

ಜನನ ಮರಣಾತೀತವಾಗಿರುವುದಾತ್ಮ! ಎರಡು ಚರಮಗೀತೆಗಳು

ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಗೆಳೆಯರ ಜೊತೆ ಅಲೆದಾಟ, ಬೇಟೆ, ಕಾಡು, ಕಾಡುಹರಟೆ, ತನ್ನ ಸಾಹಿತ್ಯ ಸಾಧನೆ, ಆದ್ಯಾತ್ಮ ಇವುಗಳಲ್ಲಿ ಕವಿಚೇತನ ಮುಳುಗೇಳುತ್ತಿತ್ತು. ಆದರೆ ಕವಿಯೇ ಹೇಳುವಂತೆ, ಮನೆಯಲ್ಲಿ ನಡೆಯುತ್ತಿದ್ದ ಮದುವೆ, ಹುಟ್ಟು, ಸಾವುಗಳ ವಿಚಾರದಲ್ಲಿ ಅವರು ಅತ್ಯಂತ ಉದಾಸೀನರಾಗಿದ್ದರು. ತಂದೆಯ ಮರಣ ಇನ್ನೂ ಚಿಕ್ಕವನಿದ್ದಾಗಲೇ ಘಟಿಸಿಬಿಟ್ಟಿತ್ತು. ಆದರೆ ಯೌವ್ವನಕ್ಕೆ ಕಾಲಿಟ್ಟ ಮೇಲೆ ಘಟಿಸಿದ ತಾಯಿಯ ಮರಣ, ತಂಗಿಯರಿಬ್ಬರ ಮದುವೆ, ಮರಣ, ಅಜ್ಜಯ್ಯನ ಸಾವು, ಜೊತೆಗೆ ಮನೆಯಲ್ಲಿದ್ದ ಇತರ ಅಮ್ಮಂದಿರ ಸಾವು ಇವೆಲ್ಲವನ್ನೂ ಕವಿಚೇತನ ನಿರ್ಲಕ್ಷಿಸಿದ ಹಾಗೆ ಪುಟ್ಟಪ್ಪನವರ ದಿನಚರಿಯೂ ನಿರ್ಲಕ್ಷಿಸಿಬಿಟ್ಟಿದೆ. ದಿನಚರಿಯಲ್ಲಿ ಉಲ್ಲೇಖವಾಗಿದ್ದರೂ ಅದು ಒಂದೆರಡು ಸಾಲಿನ ಮಟ್ಟಿಗೆ ಮಾತ್ರ! ಹೀಗೆ ದಿನಚರಿ ಲೆಕ್ಕಿಸದಿದ್ದರೂ, ಅಪ್ರಕಟಿತವಾಗಿರುವ ಎರಡು ಕವಿತೆಗಳು ಮನೆಯಲ್ಲಿ ನಡೆದ ಎರಡು ಸಾವಿನ ಸಂದರ್ಭಗಳನ್ನು ಅನುಲಕ್ಷಿಸಿ ರಚಿತವಾದ ಚರಮಗೀತೆಗಳಾಗಿವೆ.

'ಮೋಕ್ಷಗತನಾದ ನನ್ನ ಮುದ್ದು ಸೋದರ ವಾಸುವ ನೆನಪಿಗೆ ಬರೆದ ಚರಮಗೀತೆ’ ಎಂಬ ಟಿಪ್ಪಣಿಯನ್ನೊಳಗೊಂಡ ’ಶ್ರೀವಾಸ’ ಎಂಬುದು ೧೬.೧.೧೯೨೭ರ ರಚನೆಯಾಗಿದ್ದು, ಸೋದರ ವಾಸಪ್ಪನ ಅಕಾಲ ಮರಣವನ್ನು ಕಂಡು ದುಃಖಿಸುತ್ತದೆ. ಕವಿಯ ದೊಡ್ಡ ಚಿಕ್ಕಪ್ಪಯ್ಯನವರ ಹಿರಿಯ ಹೆಂಡತಿಯ ಕಿರಿಯಮಗ ವಾಸಪ್ಪ. ದೇವಂಗಿಯ ಮಿಷನ್ ಸ್ಕೂಲಿನಲ್ಲಿ ಓದಿ, ದೇವಂಗಿ ರಾಮಣ್ಣಗೌಡರ ಆಶ್ರಯದಲ್ಲಿ ಮುಂದಿನ ಓದಿಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ್ದರು. ಅಲ್ಲಿ ಟೈಫಾಯ್ಡ್ ಆಗಿದ್ದ ಆತ, ಒಂದು ದಿನ ನಡುರಾತ್ರಿಯಲ್ಲಿ ಈ ಲೋಕದ ನಂಟನ್ನು ಕಡಿದುಕೊಂಡು ಹೊರಡುತ್ತಾನೆ.

ಮೈಸೂರಿನಲ್ಲಿ ಓದುತ್ತಿದ್ದ ಅಣ್ಣ ಊರಿಗೆ ಬಂದಾಗಲೆಲ್ಲಾ ಮನೆಯಲ್ಲಿ ಕಿರಿಯನಾಗಿದ್ದ ವಾಸುವಿಗೆ ಸಂಭ್ರಮವೇ ಸಂಭ್ರಮ. ಅವನ ಮುಗ್ಧ ಆಟಪಾಟ ನಡೆನುಡಿ ಹುಡುಗಾಟ ಅಣ್ಣನಿಗೂ ಇಷ್ಟವಾಗುತ್ತಿದ್ದುವು. ಕಾಡಿನಲ್ಲಿ ಅಲೆದಾಡಲು, ಕವಿಶೈಲಕ್ಕೆ ಹೋದಾಗ, ತೋಟದಲ್ಲಿ ತಿರುಗಾಡುವಾಗ, ಕೆರೆಯಲ್ಲಿ ಈಜಾಡುವಾಗ ತಮ್ಮನ ಸಾನಿಧ್ಯ ಅಣ್ಣನಿಗಿರುತ್ತಿತ್ತು. ಅವೆಲ್ಲವನ್ನೂ ನೆನೆಯುತ್ತಾ, ಚಿಕ್ಕವಯಸ್ಸಿನಲ್ಲೇ ಅಸ್ತಂಗತನಾದ ತಮ್ಮನಿಗಾಗಿ ಹಂಬಲಿಸುತ್ತದೆ ಕವಿಮನ. ಶ್ರೀವಾಸ ಚರಮಗೀತೆ ಅತ್ಯಂತ ದೀರ್ಘವಾಗಿದ್ದು, ೨೨೭ ಸಾಲುಗಳವರೆಗೆ ವಿಸ್ತರಿಸಿದೆ. ಹಲವಾರು ಪ್ರಶ್ನೆಗಳನ್ನೆತ್ತುತ್ತಲೇ ಕವಿತೆ ಪ್ರಾರಂಭವಾಗುತ್ತದೆ.
ಶ್ರೀವಾಸನಳಿದನೇ? ಬಾಡಿತೇ ಎಳೆಯಲರು
ಹೂವಾಗಿ ಕಾಯಾಗಿ ಫಲಿಸುವಾ ಮುನ್ನ?
ಏಕಿಂತುಟೊಣಗಿದೈ, ಮಲ್ಲಿಕಾ ಬಾಲಲತೆ,
ಚೈತ್ರಮಾಸವು ಬಂದು ಮುದ್ದಿಡುವ ಮುನ್ನ?
ಬೇಸರಾಯಿತೆ ನಿನಗೆ ಧರೆಯ ಹೂದೋಟ?
ಬೇಡವಾದುದೆ ನಿನಗೆ ತಂಬೆಲರ ತೀಟ?
ಪೂರೈಸಿತೇ ನಿನ್ನ ಇಹಲೋಕದಾಟ?
ನಿನಗಿನ್ನು ಪರಲೋಕವೇ ಪರಮಪೀಠ?................
ಅಕಾಲದಲ್ಲಿ ಶ್ರೀವಾಸನಳಿದುದ್ದರಿಂದ ಪ್ರಕೃತಿಯೂ ಶೋಕಿಸುತ್ತಿರುವ ಚಿತ್ರಣವನ್ನು ಕಟ್ಟಿಕೊಡುತ್ತಲೇ, ಮತ್ತೆ ಪ್ರಶ್ನಿಸುತ್ತಾರೆ.
ಹೋದನೇ? ಹಾ! ಇನ್ನು ಹಿಂತಿರುಗಿ ಬಾರನೇ?
ಇನ್ನು ತನ್ನಣ್ಣನಿಗೆ ಬಂದು ಮೊಗದೋರನೇ?
’ಅಣ್ಣಯ್ಯ, ಬಾ!’ ಎಂದು ಕರೆಯನೇ ಎನ್ನ?
ತೊರೆದೆಯಾ ನೀನೆನ್ನ, ಮುದ್ದಿನೆನ ತಮ್ಮಾ?
ಶ್ರೀವಾಸ, ಎನ್ನ ಹೃದಯದ ಹರುಷದಾವಾಸ,.......................
ಕವಿತೆಯ ಈ ಭಾಗದ ಓಟ, ಸೀತೆಯ ಅಗಲಿಕೆಯಿಂದ ವಿಸ್ಮೃತಿಗೆ ಒಳಗಾಗಿ ಗೋಳಾಡುವ ರಾಮನ ಚಿತ್ರಣವನ್ನು ನೆನಪಿಸುತ್ತದೆ. ಮುಂದೆ, ಕವಿ ತಮ್ಮನೊಡನೆ ಕಳೆಯುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳುತ್ತಾರೆ.
ಎನ್ನೊಡನೆ ವನಗಳಿಗೆ ಬರುವರಿನ್ನಾರು?
ಹೊಲಗದ್ದೆಯೊಳು ಕೂಡಿ ತಿರುಗಾಡುವವರಾರು?
ಮನೆಯ ಮುಂದಿನ ಕೆರೆಯೊಳೀಜುತಿರೆ ನಾನು
ನಿಂತು ಎನ್ನ ಹೊಗಳುವವರಾರು?
ನೀರಿಗಿಳಿಯಲು ಬೇಡ ಎಂದಾರ ಬೆದರಿಸಲಿ?
..................
ಆ ಮರವ ನೋಡಣ್ಣ! ಈ ಹೂವ ನೋಡಣ್ಣ!
ಕೋಗಿಲೆಯ ಕೇಳಣ್ಣ! ಹಾಡೆಷ್ಟು ಇಂಪಣ್ಣ!
ಅಲ್ಲಿ ಹಣ್ಣಿವೆ, ಅಣ್ಣ! ನಾನು ಕಂಡಿಹೆನಣ್ಣ!
ಮಳೆಬಿಲ್ಲ ನೋಡಣ್ಣ! ಬಾ ಎನ್ನ ಜೊತೆ, ಅಣ್ಣ!
ಅಣ್ಣ ತಮ್ಮಂದಿರ ಒಡನಾಟಕ್ಕೆ ಸಾಕ್ಷಿಯಾಗಿವೆ ಮೇಲಿನ ಸಾಲುಗಳು. ಮುಂದೆ, ತಮ್ಮನ ಸಾವಿನಿಂದ ತಮಗೆ ಕವಿದ ಶೂನ್ಯತೆಯ ಬಗ್ಗೆ ಹೇಳಿ, ಸಾವು ಸಂಭವಿಸಿದ ಕ್ಷಣವನ್ನು ಕಣ್ಣ ಮುಂದೆ ನಿಲ್ಲಿಸುತ್ತಾರೆ.
ನಡುರಾತ್ರಿ ಒಯ್ದಿತೇ ನಿನ್ನನೆಲೆ ಸೋದರನೆ?
ಹಗಲೊಳೊಯ್ಯಲು ಯಮನು ಬೆದರಿದನು ನಿನಗೆ;
ಕಳ್ಳನಾದನೆ ಮೃತ್ಯು? ಧರ್ಮವಂ ಮೀರಿದನೆ
ನಿನ್ನ ಮಹಿಮೆಗೆ ಬೆದರಿ? ಸುಡು ಯಮನ ಬಾಳ!
ಹೀಗೆ ಯಮನ ಅಕೃತ್ಯವನ್ನು ಖಂಡಿಸುತ್ತಾ, ಅದನ್ನು ಖಗ-ಮೃಗ, ತರು-ಲತೆ, ಮಲೆ-ಕಾಡು ಮೊದಲಾದವುಗಳು ನಿದ್ರಿಸುತ್ತಿರುವಾಗ ಯಮ ಕದ್ದೊಯ್ದನಲ್ಲ! ಆತ ಹಾಗೆ ಮಾಡಲು ನನ್ನ ಸಹೋದರ ಧೀರಾತ್ಮನಾಗಿದ್ದುದೇ ಕಾರಣವೆನ್ನುತ್ತಾರೆ. ಮುಂದುವರೆದು ಸಾವಿನ ಅನಂತತೆಯ, ಅನಿವಾರ್ಯತೆಯ ಕಡೆಗೆ ತಿರುಗುತ್ತಾರೆ.
ಬಾರನೇ? ಹೋದನೇ? ಶೂನ್ಯಗತನಾದನೇ?
ಆಟವೋ? ನಾಟಕವೊ? ಭೂತಳವಿದೇನು?
ಪಾತ್ರಧಾರರೊ ನಾವು ಸೂತ್ರಧಾರನ ಕೈಲಿ?
ಎಲ್ಲಿಂದ ಬಂದಿಹೆವು? ಹೋಗುತಿಹೆವಾವೆಡೆಗೆ?
ಮಾಯೆಯೋ? ಸ್ವಪ್ನವೋ ಸತ್ಯವೋ ನಿತ್ಯವೋ?
ಪಥವಾವುದೆಮಗೆಲ್ಲ? ಗತಿಯಾವುದು?
ಶೂನ್ಯದಿಂದಲೆ ಬಂದು ಶೂನ್ಯಗತವಾಗುವೆವೆ?
ಸತ್ಯದಿಂದಲೆ ಬಂದು ಮಿಥ್ಯೆಯೊಳು ನಿಂದು
ಸತ್ಯಗತವಾಗುವೆವೆ ಮತ್ತೆ? ಬಲ್ಲವರದಾರು?
ಮೃತ ಎಂಬುದದು ಸುಳ್ಳೆ? ಅಮೃತವದು ಸತ್ಯವೇ?
ಸಂದೇಹದಲಿ ಕುಂದಿ ಕೊರಗುವೆವು ನಾವು!
ಹೀಗೆ ಸಂದೇಹದಲ್ಲಿ, ಶೂನ್ಯದಲ್ಲಿ ಕವಿಯ ಜೀವ ತೊಳಲಾಡುತ್ತದೆ. ಆದರೆ, ಕವಿಯ ವಿವೇಕದ ವಾಣಿ, ಗುರುವಿನ ಅಭಯ, ದೇವನ ಕೃಪೆ ಸಮಾಧಾನ ಹೇಳುತ್ತದೆ, ಕೆಳಗಿನಂತೆ!
’ಬೆದರ ಬೇಡಲೆ ಜೀವ ಬೆದರಬೇಡ;
ಸಂದೇಹವನು ಬಿಡು, ನಿರಾಶನಾಗದಿರು.
ಶೂನ್ಯವಲ್ಲದು ಸತ್ಯ; ಅಮೃತ, ಅದು ನಿತ್ಯ!
ಜನನವಲ್ಲವು ಮೊದಲು, ಮರಣವಲ್ಲವು ತುದಿಯು,
ಜನನ ಮರಣಾತೀತವಾಗಿರುವುದಾತ್ಮ!
ಮೇಲ್ನೋಟಕ್ಕೆ ನಶ್ವರದಂತೆ ಕಾಣುವ ಈ ಬದುಕಿಗೆ ಒಂದು ಘನ ಉದ್ದೇಶವಿರುತ್ತದೆ. ನಮ್ಮ ಚಿಂತನಾನಿಲುವಿಗೆ ಅಸದಳವಾದ ಶಕ್ತಿಯೊಂದು ಈ ವಿಶ್ವವನ್ನು ಧರ್ಮದಿಂದಾಳುತ್ತಿದೆ! ಆದ್ದರಿಂದ ಇಲ್ಲಿ ನಡೆಯುವ ರವಿಯುದಯ, ತಾರೆಗಳ ಚಲನೆ, ಗಾಳಿ, ಬೆಂಕಿ ಎಲ್ಲವೂ ಗತಿಯನಗಲದೆ ಧರ್ಮದಿಂದ ಕಾರ್ಯವನ್ನಾಚರಿಸುತ್ತಿವೆ. ಅಂತೆಯೆ ಸಾವೂ ಕೂಡಾ! ಅದೂ ಕೂಡಾ ವಿಶ್ವನಿಯಾಮಕನ ಮನೋಗತವೇ ಆಗಿದೆ.
ಆನಂದದಿಂದುದಿಸಿ ಆನಂದದೊಳೆ ಬೆಳೆದು
ಆನಂದದೊಳಗೈಕ್ಯವಾಗುವುದು ಈ ಸೃಷ್ಟಿ!
ಸಾವು ಸಾವಲ್ಲವೈ, ಅದು ಪರಮ ಬಾಳು,
ಸಂಶಯಾತ್ಮಕನಾಗದಿರು, ಜೀವ, ಮೇಲೇಳು!
ಆದ್ದರಿಂದ,
ಶ್ರೀವಾಸನಳಿದಿಲ್ಲ; ಶೂನ್ಯಗತನಾಗಿಲ್ಲ:
ಸಾವು ಸತ್ತಿತು, ವಾಸನಳಿದಿಲ್ಲ, ಇಲ್ಲ!
ಬೊಮ್ಮದೊಳಗೊಂದಾಗಿ ಆನಂದದಿಂದಿಹನು;
ಹೀಗೆ ಸಮಾಧಾನ ಹೇಳುತ್ತಲೇ ಸಾವಿಗಾಗಿ ದುಃಖಿಸುವುದು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಶೋಕಿಸೆನು ನಿನಗಾಗಿ; ಕಂಬನಿಯ ಕರೆಯೆ;
ಮರುಳುತನವೈ ವ್ಯಸನ; ದುಃಖವದು ಮಾಯೆ!
ಎಲೆ ಮುದ್ದು ಸೋದರನೆ, ಎನ್ನಾತ್ಮದಾತ್ಮ,
ನೀನಿರುವೆ! ನೀನಿರುವೆ! ಎಲ್ಲಿಯೂ ಇರುವೆ!
ಎಂದು ತನ್ನ ಸುತ್ತ ಮುತ್ತ ಕಾಣುವ ಶಶಿ, ತಾರೆ, ರವಿ, ನಭ, ಧರೆ, ಕಾಲ, ದೇಶ ಎಲ್ಲವುಗಳಲ್ಲಿಯೂ ತಮ್ಮನಿದ್ದಾನೆ ಎನ್ನುತ್ತಾರೆ. ಕೊನೆಯಲ್ಲಿ,
ಹರ್ಷವಾಗಲಿ ಶೋಕ! ಮೋದವಾಗಲಿ ಖೇದ!
ದುಃಖಾಶ್ರು ಸುಖದ ಕಂಬನಿಯಾಗಲಿ!
ಮರಣವೆಂಬುದು ಮಧುರ! ಮೃತ್ಯು ಮಾತೆಯ ಉದರ!
ಸುಖಿಯಾದೆಯೈ ನೀನು ಸುಖ ದುಃಖಗಳ ಮೀರಿ!
ಕಾಲ ದೇಶವ ಮೀರಿದೂರು ನಿನ್ನದು, ತಮ್ಮ,
ಅದು ನಮ್ಮ ತವರೂರು! ಅಲ್ಲಿಹಳು ಅಮ್ಮ
ಜಗದಂಬೆ ಜೋಗುಳದಿ ಕರೆಯುತೆಮ್ಮ!
ಆಲಿಸುವೆನಮ್ಮನಾ ಜೋಗುಳವ ನಾನು,
ಎಂದಾದರೊಂದು ದಿನ ಸೇರುವೆನು ನಿನ್ನ.
ಅಲ್ಲಿಗಾನೈತರಲು ಮರೆಯದಿರು ನನ್ನ!
ಅಣ್ಣ ಬಂದಾ ಅಣ್ಣ! ಅಮ್ಮ, ನೋಡೆಂದು
ಅಪ್ಪಿಕೊಂಡೆನ್ನ ಕರೆದೊಯ್ಯೆಲೈ ತಮ್ಮ!
ತಾಯಿಯಂಕದ ಮೇಲೆ ನಾವಿರ್ವರೂ ಕೂಡಿ
ಮನ ಬಂದವೊಲು ತೊದಲು ಮಾತುಗಳನಾಡಿ
ನಿತ್ಯತೆಯ ಪೀಡಿಸುವ ಚೆಲ್ಲಾಟವಾಡಿ!
ಎಂದು ತಮ್ಮನಾತ್ಮವನ್ನು ಜಗದಂಬೆಯ ಉದರಕ್ಕೆ ಹಾಕುತ್ತಾರೆ. ಮುಂದೊಂದು ದಿನ ತಾನು ಅಲ್ಲಿಗೆ ಹೋಗುವಷ್ಟರಲ್ಲಿ, ತಮ್ಮನೇ ಅಣ್ಣನನ್ನು ಜಗದಂಬೆಗೆ ಪರಿಚಯಿಸುತ್ತಾನೆ ಎಂಬ ಭಾವದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ. ಈ ಚರಮಗೀತೆಯ ವಸ್ತು ವಿಷಯ ಭಾವ ಪ್ರಸ್ತುತಿ ಕುರಿತಂತೆ ಕವಿಯ ಮಾತುಗಳೇ ಅಂತಿಮ; ಬೇರೆ ವಿಮರ್ಶೆ ವಿವರಣೆ ಒಗ್ಗರಣೆ ಏಕೆ ಬೇಕು!? ಕವಿಯ ಮಾತುಗಳು ನೆನಪಿನ ದೋಣಿಯಲ್ಲಿ ಹೀಗೆ ದಾಖಲಾಗಿವೆ.
ಈ ಸುದೀರ್ಘ ಚರಮಗೀತೆಯಲ್ಲಿ ತತ್ಕಾಲದಲ್ಲಿ ಕವಿಗೆ ಜೀವ, ಜಗತ್ತು, ದೇವರು, ಹುಟ್ಟು, ಸಾವು, ಸೃಷ್ಟಿಯ ಉದ್ದೇಶ ಇತ್ಯಾದಿಗಳ ವಿಚಾರದಲ್ಲಿ ಇದ್ದ ಭಾವನೆಗಳೆಲ್ಲ ಚೆಲ್ಲಿ ಸೂಸಿದಂತಿದೆ. ಭಾವೋತ್ಕರ್ಷದ ಅಭಿವ್ಯಕ್ತಿಯಲ್ಲಿ ಸಂಯಮಭಾವ ತೋರಿರುವುದು ಆವೇಶದ ದುರ್ದಮ್ಯತೆಯನ್ನೂ ಅನುಭವದ ಹೃತ್ಪೂರ್ವಕತೆಯನ್ನೂ ಸೂಚಿಸುತ್ತದೆ. ಬೆಳೆಯುತ್ತಿರುವ ಕವಿಯ ಮನಸ್ಸು ಸೃಷ್ಟಿಯ ರಹಸ್ಯಗಳೊಡನೆ ಮಲ್ಲಗಾಳೆಗವಾಡುತ್ತಿತ್ತೆಂದು ತೋರುತ್ತದೆ. ಆಶ್ರಮವಾಸದ ಪ್ರಭಾವವನ್ನೂ ಚೆನ್ನಾಗಿ ಗುರುತಿಸಬಹುದು.
ಭದ್ರಾವತಿಯ ಡಾ. ಚೊಕ್ಕಂ ಅವರ ಆಸ್ಪತ್ರೆಯಲ್ಲಿ ನ್ಯೂಮೋನಿಯಾದಿಂದ ಮುಕ್ತಿ ಪಡೆದು, ಊರಿಗೆ ಹೊರಡುತ್ತಾರೆ. ಶಿವಮೊಗ್ಗದಲ್ಲಿ ಸ್ವಲ್ಪ ದಿನಗಳಿದ್ದು, ಸಂಪೂರ್ಣ ಚೇತರಿಸಿಕೊಂಡು ಕುಪ್ಪಳ್ಳಿಗೆ ಹೋಗುವ ಹಾದಿಯಲ್ಲಿ ಇಂಗ್ಲಾದಿಗೆ ಹೋಗಿ ತಂಗುತ್ತಾರೆ. ಅಲ್ಲಿನ ಮಿತ್ರವರ್ಗದವರೊಡನೆ ಸೇರಿ ಬೇಟೆಗೆ ಹೋಗುತ್ತಾರೆ. ಆಗ ನಡೆದ ಒಂದು ದುರ್ಘಟನೆಯೇ ಇನ್ನೊಂದು ಚರಮಗೀತೆಯ ಹುಟ್ಟಿಗೆ ಕಾರಣವಾಗುತ್ತದೆ. ಈ ಚರಮಗೀತೆಯ ವಿಶೇಷವೆಂದರೆ, ಅದು ಮನುಷ್ಯನಿಗೆ ಸಂಬಂಧಿಸದೆ ’ಕೇಸರಿ’ ಹೆಸರಿನ ಬೇಟೆ ನಾಯಿಗೆ ಸಂಬಂಧಿಸಿರುವುದು. ತಾವು ಸಾಕಿದ ನಾಯಿಗಳು ಮರಣವೊಂದಿದಾಗ ಅವುಗಳಿಗೆ ಗೌರವಪೂರ್ವಕ ಸಂಸ್ಕಾರ ನಡೆಸುವ, ಸ್ಮಾರಕಗಳನ್ನು ನಿರ್ಮಿಸಿರುವ ನೂರಾರು ಉದಾಹರಣೆಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಯುದ್ಧದಲ್ಲಿ ತುರುಗೋಳು, ಪೆಣ್ಬುಯಲು ಮೊದಲಾದ ಕಾದಾಟದಲ್ಲಿ ಹೋರಾಡಿ ಮರಣ ಹೊಂದಿದ್ದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಬಹುದೊಡ್ಡ ಪರಂಪರೆಯೇ ಕನ್ನಡ ನಾಡಿನಲ್ಲಿರುವುದನ್ನು ನೋಡಬಹುದಾಗಿದೆ. ಮಂಡ್ಯಜಿಲ್ಲೆಯ ಆತಕೂರಿನಲ್ಲಿದ್ದ ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕವನ್ನು ಈಗ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.  ಶಾಸನದ ಜೊತೆಯಲ್ಲಿ (ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನ ಬಳಿಯಿದ್ದ ಕಾಳಿ ನಾಯಿಯನ್ನು ವೀರ ಮಣೆಲರ ಬೇಡಿ ಪಡೆದುಕೊಳ್ಳುತ್ತಾನೆ. ಕಲ್ಲುಗುಡ್ಡವೊಂದರಲ್ಲಿ ಹಂದಿಗೂ ‘ಕಾಳಿ’ ನಾಯಿಗೂ ಹೋರಾಟವಾಗಿ, ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ನಾಯಿಯ ಶವವನ್ನು ಆತಕೂರಿಗೆ ತಂದು ಸಂಸ್ಕಾರ ಮಾಡಿ ಶಾಸನ-ಸ್ಮಾರಕಶಿಲೆಯನ್ನು ನೆಡೆಸುತ್ತಾನೆ.

ಇಲ್ಲಿಯೂ, ಕವಿಗೆ ಅಚ್ಚುಮೆಚ್ಚಾಗಿದ್ದ ’ಕೇಸರಿ’ ಜೂಲುನಾಯಿ, ಒಂಟಿಗ ಹಂದಿಯೊಂದನ್ನು ತಡೆದು ಹೋರಾಡಿ, ಅದರ ಕೋರೆಗೆ ತುತ್ತಾಗುತ್ತದೆ. ಹೊಟ್ಟೆಯಿಂದ ಹೊರಕ್ಕೆ ಬಂದಿದ್ದ ಕರುಳಿನ ಭಾಗ, ನಾಯಿ ಬಿದ್ದು ಹೊರಳಾಡಿದಾಗ ಮಣ್ಣು ಕಸ ಕಡ್ಡಿಗಳಿಂದ ಆವೃತ್ತವಾಗುತ್ತದೆ. ಅದರ ಯಮಯಾತನೆಯನ್ನು ನೋಡಿ, ಅದು ಬದುಕುವುದಿಲ್ಲವೆಂದು ತಿರ್ಮಾನಿಸಿ ಅದರ ತಲೆಗೆ ಗುಂಡು ಹೊಡೆದು ಕೊಲ್ಲಲು ಕವಿಯೇ ಸೂಚನೆ ನೀಡುತ್ತಾರೆ. ಆದರೆ ಗುಂಡು ಹೊಡೆಯುವ ಎದೆಗಾರಿಕೆ ಅಲ್ಲಿ ಯಾರಿಗೂ ಇಲ್ಲ. ಕೇಸರಿಗೆ ಆ ಸ್ಥಿತಿಯನ್ನು ತಂದಿದ್ದ ಹಂದಿಯನ್ನು ಕೊಂದು ಅಂದಿನ ’ಹೀರೊ’ ಅಗಿದ್ದ ಈಡುಗಾರ ಮರಾಠಿ ’ಯಲ್ಲು’ ಎಂಬಾತ ಅದಕ್ಕೆ ಶುಶ್ರೂಷೆ ಮಾಡಲು ತೊಡಗುತ್ತಾನೆ. ಹೊರಬಂದಿದ್ದ ಕರುಳನ್ನು, ತಕ್ಕಮಟ್ಟಿಗೆ ಕೈಯಿಂದ ಸ್ವಚ್ಛಗೊಳಿಸಿ, ಹೊಟ್ಟೆಯೊಳಗೆ ತಳ್ಳಿ, ಸೂಜಿದಾರದಿಂದ ಹೇಗೆ ಹೇಗೋ ಒಲಿದುಬಿಡುತ್ತಾನೆ, ಮೂಟೆ ಹೊಲಿಯುವಂತೆ! ಅಷ್ಟೂ ಹೊತ್ತು ಕೇಸರಿ ಪಿಳುಪಿಳನೆ ಕಣ್ಣು ಬಿಟ್ಟುಕೊಂಡು ಉಳಿದವರ ಕಡೆ ದೈನ್ಯದೃಷ್ಟಿ ಬೀರುತ್ತಿತ್ತು. ಹಳ್ಳದಿಂದ ನೀರು ತಂದು ಕುಡಿಸಿದ ನಂತರ ಕಂಬಳಿಯೊಂದನ್ನು ಡೋಲಿಯ ರೀತಿಯಲ್ಲಿ ಮಾಡಿಕೊಂಡು ಮನೆಗೆ ಹೊತ್ತು ತರುತ್ತಾರೆ. ರಾತ್ರಿ ತುಂಬಾ ಹೊತ್ತು ನೋವಿನಿಂದ ಅಳುತ್ತಿದ್ದ ಕೇಸರಿ, ಬೆಳಗಿನ ಜಾವ ನೋಡಿದಾಗ ಸಂಪೂರ್ಣ ನಿಃಶಬ್ದವಾಗಿತ್ತು, ಪ್ರಾಣ ಹೋಗಿ! ಕೇಸರಿಗೆ ವೀರೋಚಿತವಾದ ಸಂಸ್ಕಾರ ಸಲ್ಲುತ್ತದೆ. (ಏನೋ ಕಾರಣದಿಂದ, ಹೀಗೆಯೆ ಹೊಟ್ಟೆಯ ಭಾಗದಲ್ಲಿ ಸ್ವಲ್ಪಮಾತ್ರ ಹೊರಬಂದಿದ್ದ ಕರುಳನ್ನು ಒಳಗೆ ತಳ್ಳಿ ನಮ್ಮ ಮನೆಯ ನಾಯಿಯೊಂದಕ್ಕೆ ನಮ್ಮ ತಂದೆಯವರೂ ಹೊಲಿಗೆ ಹಾಕಿದ್ದನ್ನು ನಾನು ನೋಡಿದ್ದೇನೆ. ಆಶ್ಚರ್ಯವೆಂದರೆ ಆ ನಾಯಿ ವರ್ಷಗಳ ಕಾಲ ಬದುಕಿತ್ತು).

ಕೇಸರಿಯ ಹೋರಾಟ, ಅದರ ಕೆಚ್ಚು ಮೊದಲಾದವನ್ನು ಕಂಡ ಬೇಟೆಗಾರ ಪುಟ್ಟಪ್ಪ; ಕವಿ ಕುವೆಂಪು ಆಗಿ ಕೇಸರಿಗೆ ಚರಮಗೀತೆ ಹಾಡುತ್ತಾರೆ. ಈ ಚರಮಗೀತೆ ಅಪ್ರಕಟಿತವಾಗಿದ್ದು, ಶೀರ್ಷಿಕೆಯೂ ಇರುವುದಿಲ್ಲ. ಆದರೆ, ’ಬೇಟೆಯಲ್ಲಿ ಕಾಡುಹಂದಿಯೊಡನೆ ಹೋರಾಡಿ ಮಡಿದ ಮುದ್ದು ನಾಯಿ ’ಕೇಸರಿ’ಯ ನೆನಪಿಗಾಗಿ ಬರೆದುದು’ ಎಂಬ ಟಿಪ್ಪಣಿಯನ್ನೊಳಗೊಂಡಿದೆ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ,
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ನಿನ್ನ ಬಾಳಿನ ಪಯಣ ಪೂರೈಸಿತಿಂದು
ಇನ್ನು ವಿಶ್ರಾಂತಿಯೈ ಮುಂದೆ ನಿನಗೆಂದೂ!
ನಿನ್ನ ಗೋರಿಯ ತೋರಲಾವ ಗುರುತಿಲ್ಲ;
ನಿನ್ನ ಕೀರ್ತಿಯ ಸಾರೆ ಬಡ ಚೈತ್ಯವಿಲ್ಲ.
ಆದರೇನಾ ಪೂತ ಪೊದೆ ಸಹಜ ಚೈತ್ಯ;
ನಿನ್ನ ಕೀರ್ತಿಯ ಕಲ್ಲೆ ಶಾಶ್ವತವು ನಿತ್ಯ.
ತಿಳಿನೀಲ ಬಾಂದಳವು ಮೆರೆಯುವುದು ಮೇಲೆ;
ಮುಗಿಲು ಕೊಡೆ ಹಿಡಿಯುವುದು, ಮೋಡಗಳು ತೇಲೆ.
ಇನಿದನಿಯ ಬೀರುವುದು ಲಾವುಗೆಯು ಇಲ್ಲಿ;
ಚೀರುಲಿಯ ಕೋಗಿಲೆಯು ವನದಳಿರಿನಲ್ಲಿ.
ಪೂತ ಪೊದೆಯನ್ನೇ ನಿತ್ಯಸ್ಮಾರಕವಾಗಿಸಿ, ಕೊಡೆ ಹಿಡಿದ ಮುಗಿಲು, ಚೀರುಲಿಯ ಕೋಗಿಲೆ ಮೊದಲಾದವನ್ನು ಜೊತೆಗಿರಿಸಿ ಕೇಸರಿಗೆ ವಿದಾಯ ಹೇಳುತ್ತಾರೆ. ಕೊಳಲೂದುವ ಗೋಪಾಲಕರು ಮುಂದೆ ಕೇಸರಿಯ ಸಾಹಸವನ್ನು ಕಥೆಯಾಗಿಸಿ ಹೇಳುತ್ತಾರೆ, ಕೇಳುತ್ತಾರೆ ಎಂಬ ಆಶೆಯೂ ಕವಿಗಿದೆ.
ಬೇಸರಾಗದು ನಿನಗೆ: ಗೋಪಾಲರಿಲ್ಲಿ
ಕೊಳಲೂದಿ ನಲಿಯುವರು ಬಯಲ ಹಸುರಲ್ಲಿ.
ವರುಷಗಳ ಮೇಲವರು ನಿನ್ನ ಕತೆ ಹೇಳಿ
ನಿಟ್ಟುಸಿರು ಬಿಡುವರೈ ಕಿವಿಗೊಟ್ಟು ಕೇಳಿ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಯುವೀ ನೆಲದಾಳದಲ್ಲಿ!
ಯುದ್ಧದಲ್ಲಿ ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಬಂದು ಸ್ವರ್ಗಕ್ಕೇ ಕರೆದೊಯ್ಯುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವೀರಗಲ್ಲುಗಳನ್ನು ಅದೇ ರೀತಿ ಚಿತ್ರಿಸಿರುತ್ತಾರೆ. ಇಲ್ಲಿ ಕವಿಯು ಆ ಹಿನ್ನೆಲೆಯಲ್ಲಿ
ಘೋರ ಸೂಕರದೊಡನೆ ಮಡಿದೆ ಕಾದಾಡಿ;
ನಾಕದೊಳು ನಲಿವೆ ನೀ ವೀರರೊಡಗೂಡಿ
ಸುಖದಿಂದ ನಿದ್ರಿಸೈ ಗಲಭೆ ಇಲ್ಲಿಲ್ಲ;
ಇಲ್ಲಿ ಹೊಗಳುವವರಿಲ್ಲ, ನಿಂದಿಸುವವರಿಲ್ಲ.
ಮೇಲಾಟ ಹೋರಾಟವೆಂಬುವಿಲ್ಲಿಲ್ಲ,
ಸಿರಿಸುತರು ಬಡವರೆಂಬುವ ಭೇದವಿಲ್ಲ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ಎಂದು ಹಾಡುತ್ತಾರೆ. ಘೋರ ಸೂಕರದೊಡನೆ ಮಡಿದೆ ಕಾದಾಡಿ ಎಂಬ ಸಾಲು ಹಂದಿಯೂ ಸತ್ತಿತು ಎಂಬುದನ್ನು ಸೂಚಿಸುತ್ತದೆ. ಸಾವಿನಲ್ಲಿ ಎಲ್ಲರೂ - ಮನುಷ್ಯ ಪ್ರಾಣಿ ಪಕ್ಷಿ ಗಿಡ ಮರಗಳೆಲ್ಲವೂ ಸಮಾನರು; ಅದಕ್ಕೆ ಬಡವ ಬಲ್ಲಿದ ಎಂಬ ಬೇದವಿಲ್ಲ! ಮುಂದುವರೆದು, ಅದರ ಮರ್ತ್ಯದ ಸಾಹಸದ ಹಿನ್ನೆಲೆಯನ್ನು ತಿಳಿಸುತ್ತಲೇ, ಈಗ ಅವಾವೂ ಸಾಧ್ಯವಿಲ್ಲ ಎನ್ನುತ್ತಾರೆ.
ಮುಂದೆ ನೀ ಜಿಂಕೆಗಳನೋಡಿಸುವುದಿಲ್ಲ;
ನೀನಿನ್ನು ಹುಲಿಗಳನು ಅಟ್ಟುವುದು ಇಲ್ಲ.
ನಿನ್ನ ಕೂಗಿಗೆ ಕಾಡು ಗಿರಿ ಗುಹೆಗಳೆಲ್ಲ
ಇನ್ನೆಂದು ಮಾರ್ದನಿಯ ಬೀರುವುದೆ ಇಲ್ಲ.
ಬೇಟೆಗಾರರ ಕೂಗ ನೀ ಕೇಳಲಾರೆ;
ಸಿಡಿದ ಗುಂಡಿನ ಸದ್ದನಾಲಿಸಲು ಆರೆ,
ನಿತ್ಯ ಮೌನತೆ ನಿನ್ನ ನುಂಗಿರುವುದೀಗ;
ನಿನ್ನ ಗಂಟಲಿಗಾಯ್ತು ಮಿರ‍್ತುವಿನ ಬೀಗ.
ಹೋಗುವೆವು ನಾವೆಲ್ಲ ಮನೆಗೆ; ಮಲಗಿಲ್ಲ
ಹೊಸ ಹಸುರಿನಿಂದೆಸೆಯುವೀ ಪಸಲೆಯಲ್ಲಿ!
ಆದರೆ, ನೀನು ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೀಯ ಬೇರೆ ಬೇರೆ ರೂಪದಲ್ಲಿ. ನಿನಗೆ ಸನ್ಮಾನವೂ ಉಂಟು; ಗೌರವವೂ ಉಂಟು ಎಂದು ಹೇಳುತ್ತಾ ಕೇಸರಿಯಾತ್ಮಕ್ಕೆ ಮಂಗಳವೆನ್ನುತ್ತಾ ಕವಿತೆ ಮುಕ್ತಾಯವಾಗುತ್ತದೆ.
ಇಲ್ಲ; ನೀನಿಲ್ಲಿಲ್ಲ, ನಿತ್ಯ ಸಂಚಾರಿ!
ನಲಿಯುತಿಹೆ ಯಾರು ಕಾಣದ ಊರ ಸೇರಿ.
ಪೂರ್ವ ಜನ್ಮದೊಳಾವ ವೀರನೋ ನೀನು?
ಕರ್ಮದಿಂದೀ ಜನ್ಮವೆತ್ತಿದೆಯೊ ಏನು?
ಯಾರು ಬಲ್ಲರು ಎಲ್ಲಿ ಜನಿಸಿಹೆಯೊ ಈಗ?
ಮುದ್ದು ಕೇಸರಿಯೆ, ನೀ ಎಲ್ಲಿದ್ದರೇನು?
ಯಾವ ಲೋಕವ ಸೇರಿ ಎಂತಿದ್ದರೇನು?
ಗುಂಡುಗಳು ಹಾರುವುವು ಸನ್ಮಾನಕಾಗಿ!
ಜಯವೆನ್ನುವೆವು ನಿನ್ನ ಗೌರವಕೆ ಕೂಗಿ!
ಶಾಂತಿ ಸುಖಗಳು ಬರಲಿ, ವೀರಾತ್ಮ, ನಿನಗೆ!
ಮಂಗಳವೊ ಮಂಗಳವು, ಕೇಸರಿಯೆ, ನಿನಗೆ!

2 comments:

ಮನಸು said...

ಸಾರ್. ಈ ಚಮರಗೀತೆಗಳನ್ನು ನೋಡಿದರೆ ಅವರ ಮನದಲ್ಲಿ ಎಂತಾ ಪರಿಣಾಮ ಬೀರಿತ್ತೆಂದು ಗೊತ್ತಾಗುತ್ತದೆ. ಮನೆಯಲ್ಲಿ ತೀರಾ ಆತ್ಮೀಯರು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರೆ ಮನಸ್ಸಿಗೆ ಬಹಳ ಸಂಕಟವಾಗುತ್ತದೆ. ಈ ಗೀತೆಗಳ ವಿವರ ಬಹಳ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು

ashokkodlady said...

ಈ ಚರಮಗೀತೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿದ್ದಕ್ಕೆ ವಂದನೆಗಳು,.....ವರ್ಣನೆ ಇಷ್ಟ ಆಯಿತು....ಧನ್ಯವಾದಗಳು....