ಸುಮಾರು ಏಂಟತ್ತು ವರ್ಷದ ಬಾಲಕ ಪುಟ್ಟಪ್ಪ, ತೀರ್ಥಹಳ್ಳಿಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಾಗಿನ ಘಟನೆ. ಒಂದು ಸಂಜೆ, ಚಾಟರ್‌ಬಿಲ್ಲನ್ನು ಹಿಡಿದು, ಅದಕ್ಕೆ ಬೇಕಾದ ಕಲ್ಲುಗಳನ್ನು ಒಂದು ಜೇಬಿನಲ್ಲಿ ತುಂಬಿಕೊಂಡು, ಇನ್ನೊಂದು ಜೇಬಿನಲ್ಲಿ ಪೆಪ್ಪರಮೆಂಟು ಬಾಳೆ ಹಣ್ಣು ತುಂಬಿಕೊಂಡು ಕಾಡು ಅಲೆಯುತ್ತಿದ್ದ. ಪೆಪ್ಪರ್‌ಮೆಂಟು ಎಲ್ಲಾ ಮುಗಿದು ಬಾಳೆ ಹಣ್ಣು ಕೈಗೆ ಬಂತು. ಆಗ ಬಾಲಕನ ಮನಸ್ಸಿಗೆ ಒಂದು ವಿಚಿತ್ರ ಹೊಳೆಯುತ್ತದೆ. ’ಈ ಕಾಡು ಗುಡ್ಡ ಮೋಡ ಆಕಾಶ ಎಲ್ಲವನ್ನೂ ಮಾಡಿದ್ದಾನಲ್ಲ ಆ ದೇವರು ಅದೆಷ್ಟು ಶಕ್ತಿಶಾಲಿ’ ಎಂಬುದೇ ಆ ವಿಚಿತ್ರ. ಅಷ್ಟರಲ್ಲಿ ತಿಂದು ಮುಗಿದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಯಾಂತ್ರಿಕವಾಗಿ ದಾರಿ ಬದಿಗೆ ಬಿಸಾಕಿ ಮುಂದೆ ನಡೆಯುತ್ತಾನೆ. ಒಂದಷ್ಟು ದೂರ ಹೋದ ತಕ್ಷಣ, ’ಯಾವುದೋ ತೋಟದಲ್ಲಿ ಬೆಳೆದು, ಯಾರಿಂದಲೋ ಮಾರಲ್ಪಟ್ಟು, ನಾನು ಕೊಂಡು, ನನ್ನ ಹೊಟ್ಟೆ ಸೇರಿದ ಈ ಬಾಳೆಹಣ್ಣಿನ ಸಿಪ್ಪೆ ಇಂತಿಲ್ಲೇ ಬೀಳಬೇಕೆಂಬುದು ದೇವರ ಇಚ್ಛೆ’ ಎನ್ನಿಸುತ್ತದೆ. ತಕ್ಷಣ ದೇವರ ನಿರಂಕುಶ ಇಚ್ಛಾಶಕ್ತಿಗೆ ದಂಗೆಯೇಳುವ ರೀತಿಯಲ್ಲಿ ಹುಡುಗನ ಮನಸ್ಸು ರೇಗುತ್ತದೆ. ’ದೇವರ ಇಚ್ಛೆಗೆ ಭಂಗ ತರಲೇಬೇಕು’ ಎಂದು ಸಿಪ್ಪೆ ಎಸೆದಲ್ಲಿಗೆ ಬಂದು, ಅದನ್ನು ಎತ್ತಿ ಬೇರೆಡೆಗೆ ಬಿಸಾಕಿ ವಿಜಯದ ನಗೆ ಬೀರುತ್ತಾನೆ. ಆದರೆ ಸ್ವಲ್ಪ ಹೊತ್ತಿನಲ್ಲೇ, ’ಅಯ್ಯೋ ಆ ಸಿಪ್ಪೆ ಈಗ ಬಿದ್ದಿರುವಲ್ಲೇ ಬೀಳಬೇಕಿತ್ತೇನೊ! ಅದನ್ನು ಮೊದಲು ಹಾಕಿದ ಜಾಗದಿಂದ ತಂದು ಇಲ್ಲಿಗೆ ಹಾಕುವ ವಿಧಿಯ ಇಚ್ಛೆಗೆ ನಾನು ದಾಸನಾದೆನಲ್ಲ’ ಎನ್ನಿಸುತ್ತದೆ. ಅಸಹಾಯಕತೆ ಮೂಡುತ್ತದೆ. ಕಣ್ಣುಗಳಲ್ಲಿ ಹನಿಯುದುರುತ್ತವೆ!
ಅಂದು ಬಾಲಕನ ಮನಸ್ಸಿನಲ್ಲಿ ಹುಟ್ಟಿದ ವಿಶ್ವನಿಯಾಮಕನ ಕೌತುಕ ಯಾವತ್ತೂ ಮುಂದುವರೆದಿರುವುದನ್ನು ನೋಡಬಹುದಾಗಿದೆ. ನಮ್ಮ ಅತಿ ಸಣ್ಣ ಕಾರ್ಯವೂ ವಿಶ್ವನಿಯಮಕ್ಕೆ ಬದ್ಧವಾಗಿಯೇ ನಡೆಯುತ್ತಿರುತ್ತದೆ ಮತ್ತು ವಿಶ್ವನಿಯಾಮಕನ ಕಣ್ಣಳತೆಯಲ್ಲೇ ಇರುತ್ತವೆ. ಎಂತಹ ಸಣ್ಣ ಘಟನೆಯಾದರೂ ಅದು ಇಡೀ ವಿಶ್ವದ ಸಮಸ್ತ ಕ್ರಿಯೆಯ ಸಂವಾದಿಯಾಗಿಯೇ ಇರುತ್ತದೆ. ’ಯಾವ ಜನ್ಮದ ಮೈತ್ರಿ’ ಎಂಬ ಪ್ರಸಿದ್ಧ ಸಾನೆಟ್ಟಿನಲ್ಲಿ ಬರುವ ಸಾಲುಗಳಿವು.
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು:ಇಹದಲ್ಲಿ ನಡೆಯುವ ಪ್ರೀತಿ, ಜಗಳ, ದ್ವೇಷ, ವಂಚನೆ, ಸ್ನೇಹ, ಸಂಬಂಧ ಎಲ್ಲವೂ ಅಂತಿಮವಾಗಿ ವಿಶ್ವಪ್ರೇಮದಲ್ಲಿಯೇ ಸೇರಿಹೋಗುತ್ತವೆ. ಯಾವುದೇ ಘಟನೆ ಮೇಲ್ನೋಟಕ್ಕೆ ಕನಿಷ್ಠವೆನಿಸಿದರೂ, ನಮ್ಮನ್ನು ಬಂಧಿಸಿರುವ ವಿಶ್ವಪ್ರೇಮತತ್ವದ ದೃಷ್ಟಿಯಿಂದ ಅದು ಮಹತ್ವವೆನ್ನಿಸುತ್ತದೆ. (ಮನುಷ್ಯಪ್ರಜ್ಞೆ ಸ್ವತಂತ್ರವೊ ಪರಾಧೀನವೊ ಎಂಬ ಪ್ರಶ್ನೆ ತೇಜಸ್ವಿಯವರ ’ಚಿದಂಬರ ರಹಸ್ಯ’ ಕೃತಿಯಲ್ಲಿ ಚರ್ಚಿತವಾಗುವುದನ್ನು ನೋಡಬಹುದು).
ಮೇಲೆ ತೆರೆ ನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿವೆ ಪ್ರೇಮತೀರ್ಥದಿ ಮಿಂದು!
ದೈವೀ ಪುರುಷರು ಅವತಾರವೆತ್ತುವಾಗ, ಮಹಾ ವ್ಯಕ್ತಿಗಳ ಜನನವಾಗುವಾಗ, ಮಹತ್ವದ ಘಟನೆಗಳು ಸಂಭವಿಸುವಾಗ... ಅದು ಮಹತ್ತಾಗಿರುವುದರಿಂದ ಸುತ್ತಣ ನಿಸರ್ಗವೂ ಅದಕ್ಕೆ ಪೂರಕವಾಗಿ ಪ್ರವರ್ತಿಸುತ್ತದೆ ಎಂಬುದು ಕಾವ್ಯಲೋಕದ ಸತ್ಯ. ಆಂಶಿಕವಾಗಿ ವೈಜ್ಞಾನಿಕ ಸತ್ಯವೂ ಹೌದು - ಭೂಕಂಪ, ಸುನಾಮಿ ಆಗುವ ಮುಂಚೆ ಪ್ರಾಣಿ ಪಕ್ಷಿಗಳ ನಡವಳಿಕೆ, ಸಮದ್ರದ ನಡುವೆ ಚಂಡಮಾರುತ ಆರಂಭವಾಗು ವಮುನ್ನ ನೆಲೆಸುವ ಶಾಂತತೆ ಇತ್ಯಾದಿ.
ಇನ್ನು ಕಾವ್ಯಲೋಕಕ್ಕೆ ಬಂದರೆ-
ಕರ್ಣಾರ್ಜುನರ ಯುದ್ಧ ಸಂದರ್ಭ, ವಿಶ್ವದ ಯಾವುದೋ ಒಂದು ಕಿರುಮೂಲೆಯಲ್ಲಿ ನಡೆಯುವ, ವಿಶ್ವದ ಅಗಾದತೆಗೆ ಹೋಲಿಸಿದಾಗ ತೀರಾ ಯಕಃಶ್ಚಿತ್ ಎನ್ನಬಹುದಾದ ಒಂದು ಘಟನೆ. ಆದರೆ ಅದಕ್ಕೆ ಸಾಕ್ಷಿಯಾಗಲು ಇಂದ್ರ ಸೂರ್ಯರಾದಿಯಾಗಿ ಸಮಸ್ತ ದೇವತೆಗಳು ಅಂತರಿಕ್ಷದಲ್ಲಿ ನೆರೆಯುತ್ತಾರೆ.
ಭೀಮ ದುಶ್ಯಾಸನನ್ನು ವಧಿಸಿ ದ್ರೌಪದಿಯ ಪ್ರತಿಜ್ಞೆಯನ್ನು ಈಡೇರಿಸಿದಾಗ ಪುಷ್ಪವೃಷ್ಟಿಯಾಗುತ್ತದೆ.
ಸೂರ್ಯನು ದಿನವೂ ಉದಯಿಸುತ್ತಾನೆ; ಅಸ್ತಮಿಸುತ್ತಾನೆ. ಆದರೆ ಕವಿ 'ಎನ್ನುಮನ್ ಅಸುರಾರಿಯ ಪಿಡಿವುನ್ನತ ಕರಚಕ್ರಂ' ಎಂದು ಭಾವಿಸಿ ಭೀಷ್ಮ ನಾಶ ಮಾಡುತ್ತಾನೆ ಎಂದು ಹೆದರಿ ಪಶ್ಚಿಮಾಂಬುಧಿಯಲ್ಲಿ ಮುಳುಗಿದ ಎನ್ನುತ್ತಾನೆ.
ಆದಿದೇವನ ಜನ್ಮೋತ್ಸವ ಕಾಲದಲ್ಲಿ ’ಎಲ್ಲ ಋತುಗಳು ಏಕಕಾಲದಲ್ಲಿ ಕಾಣಿಸಿಕೊಂಡುವು, ಆಕಾಶವೆಲ್ಲವೂ ಮೇಲಕ್ಕೆದ್ದ ಚಲ್ಲೆಹಿಟ್ಟಿನ ಹೊಂಬಣ್ಣದಿಂದ ಮೆರೆಯಿತು. ಕುಲಪರ್ವತಗಳ ಸಮೂಹವೆಲ್ಲ ತೂರ್ಯಧ್ವನಿಗಳಿಂದ ತುಂಬಿದ್ದಿತು. ನಾಭಿರಾಜಪುತ್ರನ ಜನ್ಮೋತ್ಸವವು ಜಗತ್ತಿಗೆಲ್ಲ ಅತ್ಯಾಶ್ಚರ್ಯಕರವಾಯಿತು’ ಎನ್ನುತ್ತಾನೆ ಪಂಪ.
ಐತಿಹಾಸಿಕ ವ್ಯಕ್ತಿ ಬಸವಣ್ಣನನ್ನು ಹರಿಹರ ಕವಿ ನೇರವಾಗಿ ಕೈಲಾಸದಿಂದಲೇ ಇಳಿಸುತ್ತಾನೆ.
’ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷದಾ ಕ್ಷೀರಸಾಗರದಿಂ ಕಿಶೋರತತಿ ಬರುವಂತೆ, ಪ್ರತಿಭಾ ಮನದಿಂ ಮಹಾ ಕಾವ್ಯಮುದ್ಭವಿಪಂತೆ’ ಚೈತ್ರನವಮಿಯ ದಿನ ಶ್ರೀರಾಮನ ಜನನವಾಗುತ್ತದೆ.
ರಾವಣ ಸೀತೆಯನ್ನು ಕದ್ದೊಯ್ಯಲು ಬರುವಾಗ ಬೀಸುವ ಬಲವಾದ ಗಾಳಿ ’ಕುಣಿದಿಲ್ಲಿ, ನೆಗೆದಲ್ಲಿ, ಹಾರುತ್ತಮೋಡುತ್ತಮಾಡುತಂ, ನಿಲುತ್ತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ, ಮತ್ತೊಮ್ಮೆ ನಡುಬಳುಕಿ ನಟಿಯಂತೆವೋಲಾಡಿ, ಒಮ್ಮೆ ತುಂಬುರುಗೊಳ್ಳಿಯೆನೆ ಚಿಮ್ಮಿ, ಮತ್ತಂತೆಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ’ಯಾಗಿ ಕವಿ ಕಾಣುತ್ತದೆ.
ಮೇಲಿನ ಇಷ್ಟೆಲ್ಲಾ ಪೀಠಿಕೆಗೆ ಕಾರಣ ಕುವೆಂಪು ಅವರ ’ವರ್ಧನ್ತಿ’ ಎಂಬ ಕವಿತೆ. ಕವಿಯ ಐವತ್ತನಾಲ್ಕನೇ ಹುಟ್ಟುಹಬ್ಬಕ್ಕೆ ಮೂರುದಿಗಳಿದ್ದಾಗ, ಅಂದರೆ ೨೬.೧೨.೧೯೫೭ ರಂದು ಈ ಕವಿತೆ ರಚಿತವಾಗಿದೆ. [ಇಂದಿಗೆ (೨೬.೧೨.೨೦೧೧) ವರ್ಷಗಳ ಹಿಂದಿನೆ ಕವಿತೆ!] ಹುಟ್ಟಿದ್ದ ಹಬ್ಬ ಮೂರು ದಿನವಿದ್ದಾಗ ಕವಿಗೆ ತಾನು ಐವತ್ತಮೂರು ವರ್ಷಗಳ ಹಿಂದೆ ದೂರದ ಹಿರೇಕೂಡಿಗೆಯಲ್ಲಿ ಜನ್ಮತಾಳಿದ್ದು ನೆನಪಾಗುತ್ತದೆ. ಯಾರೊಬ್ಬರು ಹುಟ್ಟುವಾಗ ಪ್ರಕೃತಿ ಹೇಗಿತ್ತೆಂದು ಯಾರಿಗೂ ತಿಳಿಯುವುದಿಲ್ಲ. ಯಾವ ತಾಯಂದಿರು ಅದರ ವರ್ಣನೆಗೆ ಇಳಿಯುವುದಿಲ್ಲ. ಹೆಚ್ಚೆಂದರೆ ’ನೀನು ಹುಟ್ಟುವಾಗ ಮಳೆ ಸುರಿಯುತ್ತಿತ್ತು’ ಎಂದೊ, ’ಹೊಳೆಗೆ ಪ್ರವಾಹ ಬಂದಿತ್ತು’ ಎಂದೊ ವಾಚ್ಯವಾಗಿ ಹೇಳುಬಹುದು ಅಷ್ಟೆ. ಐವತ್ತಮೂರು ವರ್ಷಗಳಾಗುವಷ್ಟರಲ್ಲಿ ಕವಿ ಕುವೆಂಪು, ಕನ್ನಡನಾಡಿನಲ್ಲಿ ಮಹಾಕವಿಯಾಗಿ ಜನಮಾನಸಲದಲಿ ನೆಲೆನಿಂತಿದ್ದರೂ, ಅವರು ಹುಟ್ಟಿದ ಸಂದರ್ಭ ಎಲ್ಲರ ಹುಟ್ಟಿನ ಸಂದರ್ಭದಂತೆಯೇ ಒಂದು ಸಂದರ್ಭ ಅಷ್ಟೆ! ಆದರೆ, ಸ್ವತಂತ್ರವಾಗಿ ಕಾಲದೇಶಗಳನ್ನು ಮೀರಿ ಅಲೆಯುವ, ಆದ್ಯಾತ್ಮ-ಅಲೌಕಿಕತೆಗಳಲ್ಲಿ ಮುಳುಗಿ ಏಳುವ ಕವಿಯ ಮನಸ್ಸು, ತನ್ನ ಹುಟ್ಟಿನ ಸಂದರ್ಭಕ್ಕೊಂದು ವಿಶೇಷ ಪರಿವೇಷವನ್ನು ಕಲ್ಪಿಸಿಬಿಡುತ್ತದೆ. ಲೋಕರಂಗದಲ್ಲಿ ಅಸಹಜವೂ ಅಸಂಭವವೂ ಆಗಿದ್ದಿರಬಹುದಾದರೂ ಕಲಾರಂಗದಲ್ಲಿ ಸಹಜವಾಗಿ ಸಲ್ಲುವ ಅಲೌಕಿಕತೆಯನ್ನು ತನ್ನ ಹುಟ್ಟಿನ ಸಂದರ್ಭಕ್ಕೂ ಆರೋಪಿಸಿ ರಚಿಸಿರುವ ಕವಿತೆ ಇದಾಗಿದೆ.
ಮೊದಲ ಭಾಗದಲ್ಲಿ, ಸಹ್ಯಾದ್ರಿಯ ಮಡಿಲಲ್ಲಿ ನಾಗರಿಕತೆಯಿಂದ ದೂರವಿರುವ ಹಿರೇಕೂಡಿಗೆ ಎಂಬ ಕುಗ್ರಾಮದಲ್ಲಿ ತನ್ನ ಚೊಚ್ಚಲು ಕಂದನ ನಿರೀಕ್ಷೆಯಲ್ಲಿರುವ ತಾಯಿಯ ಚಿತ್ರಣ ಬಂದರೆ, ಎರಡನೆಯ ಭಾಗ, ಹಿರೇಕೂಡಿಗೆಯನ್ನು ದೂರದ ಕಲ್ಕತ್ತೆಗೆ ಬೆಸೆಯುತ್ತದೆ.
೧
ಇಂದಿಗೈವತ್ತುಮೂರು ವರುಷಗಳಾಚೆ ಅಲ್ಲಿ,
ಹಿರಿಕೂಡಿಗೆಯಲ್ಲಿ,
ಸಹ್ಯಾದ್ರಿಯ ಕಾನ್ಮಲೆಗಳ ಮಡಿಲೊಳಗಿದ್ದ
ಆ ಕುಗ್ರಾಮದಲ್ಲಿ,
ಒಂದೆಮನೆ ಹಳ್ಳಿಯಲ್ಲಿ:
ನೆತ್ತಿಮೇಲೆ ಶೀಖರಪಂಕ್ತಿ ಪರಿಧಿಯಾದ ನೀಲಶರಧಿ ಬಾನು;
ಸುತ್ತಮುತ್ತ ಕಾಫಿಕಾನು;
ಮತ್ತೆ, ಬತ್ತದ ಗದ್ದೆ, ಅಡಕೆ ಬಾಳೆಯ ತೋಟ:
ಗುಡ್ಡ ಬೆಟ್ಟ ಕಾಡು ತೆರೆಬಿದ್ದು ಎದ್ದ ಚೆಲ್ವು ನೋಟ:
ನಾಗರಿಕತೆಗತಿದೂರದ ಅಜ್ಞಾತದ
ಆ ಹಿರಿಕೂಡಿಗೆಯಲ್ಲಿ
ನನ್ನಮ್ಮ, ದೇವಿ ಸೀತಮ್ಮ, ಚೊಚ್ಚಲೆನ್ನಂ ಪಡೆವ ತಪದೊಳಿರೆ:
೨
ಓ ಆ ದೂರದ, ಬಹುದೂರದ, ಬಂಗಾಳದ,
ಕಲ್ಕತ್ತದ ದಕ್ಷಿಣೇಶ್ವರದಿಂದ ಹುಟ್ಟಿ,
ಬಾನ್ಗೇರಿ ಬಾಗಿ
ಯೋಜನಂಗಳ ಮೀಟಿ ದಾಟಿ,
ಕುಪ್ಪಳಿಯಾಚೆಯ ಕೊಪ್ಪದೆಡೆಯ ಹಿರಿಕೂಡಿಗೆಯ ಮುಟ್ಟಿ
ನಿಂದುದೊಂದು ಮಹಾ ಮಳೆಬಿಲ್ಲು, ಕಮಾನು ಕಟ್ಟಿ,
ಶ್ರೀಗುರುವಿನ ಕೃಪೆಯ ಬರವಿಗೊಂದು ದೇವಸೇತುವಾಗಿ,
ಅಲ್ಲಿಂದಿಲ್ಲಿಗೆ ಬೀಸಿದೊಂದೆ ರುಂದ್ರ ಕಮಾನು ಬಾಗಿ!
ರಾಮಕೃಷ್ಣಾಶ್ರಮದ ಆಶ್ರಯ, ಪ್ರಭಾವದಿಂದಲೇ ತನ್ನ ಉನ್ನತಿಯನ್ನು ಕಂಡುಕೊಂಡ, ಜಗದ್ಧಾತ್ರಿಯನ್ನು ಆರಾಧಿಸುತ್ತಿದ್ದ, ಮನಃಪೂರ್ವಕವಾಗಿ ರಾಮಕೃಷ್ಣರನ್ನು ಗುರು ಎಂದು ಸ್ವೀಕರಿಸಿ ಧೀಕ್ಷೆಯನ್ನು ಪಡೆದ, ’ಪರಬ್ರಹ್ಮ ಎನಗೆ ತಂದೆ, ಮಹಾಕಾಳಿ ಎನ್ನ ತಾಯಿ; ರಾಮಕೃಷ್ಣರೆನಗೆ ಗುರುವು, ಶ್ರೀ ವಿವೇಕಾನಂದರೆನಗೆ ಗುರುಭಾಯಿ! ಎಂದು ಹಾಡಿದ, ತನ್ನನ್ನು ತಾನು ’ರಾಮಕೃಷ್ಣಗೋತ್ರಸಂಜಾತ’ ಎಂದು ಪರಿಭಾವಿಸಿದ ಕವಿಯ ಚೇತನ, ತನ್ನ ಹುಟ್ಟು, ಮಾತೆಯ ಹಾಗೂ ಗುರುವಿನ ಸಂಕಲ್ಪದಿಂದಲೇ ಆಗಿದೆ ಎಂದು ಭಾವಿಸುತ್ತದೆ. ಆದ್ದರಿಂದಲೇ ದಕ್ಷಿಣೇಶ್ವರದಿಂದ ಹಿರೇಕೂಡಿಗೆಯವರಿಗೆ ದೇವಸೇತುವಾಗಿ ಮಹಾ ಕಾಮನಬಿಲ್ಲು ಮೂಡಿದೆ. ಆ ಕಮಾನಿನ ಮುಖಾಂತರವೆ, ಅಲ್ಲಿಂದಿಲ್ಲಿಗೆ ದೈವಕೃಪೆ ಬಂದಿಳಿಯುತ್ತದೆ, ಮಳೆಯ ರೂಪದಲ್ಲಿ - ಭವತಾರಿಣಿ ಜಗದಂಬೆಯಿಂದ ಆದೇಶಿತವಾಗಿ. ಮಳೆಯ ರೂಪದ ತಾಯಿ! ಸಹ್ಯಾದ್ರಿಗೂ ಮಳೆಗೂ ಆದ್ಯಂತ್ಯದ ನಂಟು! ಆಗ, ಮುಂದೆ ಕವಿಯನ್ನು ಸಾಕಿ, ಪೋಷಿಸಿ ಸಲುಹಲಿರುವ ಸಹ್ಯಾದ್ರಿ ತಾಯಿ ಮಹಾಬಿಲ್ಲಿನಿಂದಿಳಿದ ತಾಯಿಯನ್ನು ಸಂಧಿಸುತ್ತಾಳೆ. ೩
ಅಮ್ಮ ನೋವಿನ ಸಮಾಧಿಯೊಳಿರೆ
ಕೇಳಿಸಿತೊಂದು ಇಂಪಿನ ಕರೆ,
ಆಕಾಶದಿಂದಿಳಿದಾ ಗಂಗೆಯ ಮೊರೆ:
ಆರಮ್ಮ ನೀನು?
ಶ್ರೀಗುರುಕೃಪೆ ನಾನು!
ಎಲ್ಲಿಂದ ಬಂದೆ?
ದಕ್ಷಿಣೇಶ್ವರದಿಂದಲೈತಂದೆ. . . .
ನೀನಾರಮ್ಮಾ, ಇಲ್ಲಿ ಸಂಭ್ರಮಿಸುತಿರ್ಪೆಯಲ್ಲಾ?
ಅಕ್ಕ, ನಾನ್ ಸಹ್ಯಾದ್ರಿಯ ಅಧಿದೇವಿ.
ನನ್ನ ಗರ್ಭದೊಳೊಂದು
ದಿವ್ಯಕೃತಿ ಆವಿರ್ಭವಿಪುದೆಂದು
ಆಕಾಶದಾದೇಶವನು ಆಲಿಸಿದೆನಿಂದು.
ಅದಕಾಗಿ ಅರಸಿ ಬಂದು ನೋಡುತಿಹೆನಿಲ್ಲಿ ನಿಂದು.
ಪರಸ್ಪರ ಪರಿಚಯವಾಗುತ್ತದೆ. ದಿವ್ಯಕೃತಿ ಆವಿರ್ಭವಿಸುವ ವಿಷಯ ತಿಳಿದ ಸಹ್ಯಾದ್ರಿ ತಾಯಿ ಸಂಭ್ರಮದಿಂದ ಗುರುಕೃಪಾಮಾತೆಗೆ ಹೇಳುತ್ತಾಳೆ. ಅದಕ್ಕೆ ಪ್ರತ್ಯುತ್ತರವಾಗಿ, ಜಗದಂಬೆಯಿಂದ ಆಶೀರ್ವಾದವನ್ನು ತಂದಿರುವ ತಾಯಿ ಕೇಳುತ್ತಾಳೆ.ಇಲ್ಲೆಲ್ಲಿಯೊ ಹುಟ್ಟಿಹನಂತಮ್ಮಾ ಅವನು.
ಕಳುಹಿದಳೆನ್ನನು ಭವತಾರಿಣಿ ಜಗದಂಬೆ.
ಆಶೀರ್ವಾದವ ತಂದಿಹೆನು.
ತೋರುವೆಯೇನ್, ಅಮ್ಮಾ?
ತೋರುವೆ, ಬಾರಮ್ಮಾ...
ಅವನಾರೌ, ತಾಯೀ?
ಈ ಕೌತುಕವನ್ನು ಕಂಡ ಸಹ್ಯಾದ್ರಿ ’ಅವನಾರೌ ತಾಯೀ?’ ಎನ್ನುತ್ತದೆ! ಅದಕ್ಕುತ್ತರವಾಗಿ ಹೀಗೆ ಹೇಳುತ್ತಾಳೆ, ಆ ಜಗದಂಬೆಯ ದೂತಿ.ಶ್ರೀಗುರು ಕೃಪೆಮಾಡಿಹ ವಾಗ್ದೇವಿಯ ಹೃದಯ ಶಿಶು;
ಯುಗಯುಗವೂ ದೇಶದೇಶದಲಿ ಸಂಭವಿಸುವ ಆವೇಶದ ಯಜ್ಞಪಶು:
ಇವನ ಗುರುವಹನಿಹನು ಕಾಶಿಯಲಿ,
ಭೀಷಣ ತಪೋಮಗ್ನ.
ಗುರುವಿನೆಡೆಗೊಯ್ವಾತನಿಹನು
ಮಲೆಯಾಳದಾ ಕೊಚ್ಚಿಯಲಿ,
ಅರಮನೆಯೊಳೂ ಅಣುಗ ಚಿಂತಾನಿಮಗ್ನ.
ಇವನ ಕೈಹಿಡಿದು ನಡಸೆ,
ಆಲಿಸಮ್ಮಾ,
ನನಗಿಹುದು ಇವನೊಡನೆ ಸಹಧರ್ಮಿಣಿಯ ಯೋಗಲಗ್ನ!
ಹುಟ್ಟಲಿರುವ ಶಿಶು ಗುರುಕೃಪೆ ಮಾಡಿರುವ ಸರಸ್ವತಿಯ ಪ್ರೀತಿಯ ಶಿಶು! ಇವನ ದೀಕ್ಷಾ ಗುರು (ಸ್ವಾಮಿ ಶಿವಾನಂದ) ಕಾಶಿಯಲ್ಲಿ ಸಾಧನೆ ಮಾಡುತ್ತಿದ್ದಾನೆ. ಆ ಗುರುವಿನೆಡೆಗೆ ಕರೆದೊಯ್ಯಲಿರುವಾತ ಕೇರಳದ ಅರಮನೆಯೊಂದರಲ್ಲಿ (ಸ್ವಾಮಿ ಸಿದ್ಧೇಶ್ವರಾನಂದ) ಆಗಲೇ ಹುಟ್ಟಿದ್ದಾನೆ. ಅಂತ ಮಹಾ ವ್ಯಕ್ತಿಯನ್ನು ನೀನು ಸಲುಹಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆತನೊಂದಿಗೆ ಸಹಧರ್ಮಿಣಿಯ ಯೋಗಲಗ್ನ ನನಗಿದೆ ಎನ್ನುತ್ತಾಳೆ. "ಭವತಾರಿಣಿಯ ಆಶೀರ್ವಾದಿಂದ, ಗುರುಕೃಪೆಯಿಂದ ಜನ್ಮತಾಳಿರುವ ನನಗೆ ಸತಿಯಾಗಿ ಬರುವವಳೂ ಜಗದಂಬೆಗೆ ಪ್ರೀತಿ ಪಾತ್ರಳೇ ಆಗಿರುತ್ತಾಳೆ; ಅವಳಿಗೂ ತಾಯಿಯ ಗುರುವಿನ ಆಶೀರ್ವಾದವಿರುತ್ತದೆ" ಎಂಬುದರ ಸೂಚನೆ. ಸಹ್ಯಾದ್ರಿ ತಾಯಿಗೆ ಸಂದೇಹ! ಕಾಡು ಕೊಂಪೆಯಲ್ಲೇಕೆ ಕವಿಯವತಾರವಾಗಬೇಕು? ಅದಕ್ಕಿಲ್ಲಿದೆ ಉತ್ತರ.ಎಲ್ಲಿಂದೆಲ್ಲಿಗೆ, ತಾಯಿ?
ಜನವಿಲ್ಲದ ಈ ಕಾಡಿನ ಕೊಂಪೆಯೊಳೇಕೊ
ಆ ಕವಿಯವತಾರ?
ಓಃ! ಆ ಚೇತನಕೀ ಸಹ್ಯಾದ್ರಿಯೆ ಲಿಂಗಶರೀರ!
ಮುಂದವನಿಂದಾಗುವ ಕಜ್ಜಕೆ ಇಂದೀ
ಕಾಡೇ
ಹಾಡುತ್ತಿದೆ ನಾಂದಿ!
ಶಕ್ತಿಯ ವಿಕಸನಕಾವಶ್ಯವೀ ಸಂಸ್ಕಾರ:
ಹುಲಿಯಾರ್ಭಟೆ, ಹಕ್ಕಿಯ ಇಂಚರ, ಮೋಡದ ಸಂಚಾರ,
ದುಮುದುಮುಕುವ ಹೊಳೆನೀರಾಟ,
ಹಸುರಿನ ಹೂವಿನ ಹಣ್ಣಿನ ರಸದೂಟ!...
ನೀನ್ ಅವನೊಡನಾಡಿ;
ನೀ ದಾದಿ;
ಅವನರಳುವ ಸಿರಿನೋಟವೆ ನಿನಗೊದಗುವ ಔತಣವಾಗಿರೆ,
ಅದನಿಂದೇ ಅರಿಯುವ ಅವಸರವೇಕಮ್ಮಾ? -
ಈ ಸಹ್ಯಾದ್ರಿಯ ಘೋರಾರಣ್ಯದ ಮರೆಯ ಬಾಹುರಕ್ಷೆಯಲಿ
ತನ್ನಾ ಮಾತೃವಕ್ಷದೊಳಿರ್ಪಾತನನು ನನಗೆ ತೋರಮ್ಮಾ,
ಬೇಗ ತೋರಮ್ಮಾ!
ತೋರುವೆ, ಬಾರಮ್ಮಾ...
ನಾ ಧನ್ಯೆ!... ಬಾರಮ್ಮಾ!...
ಅದೊ ಓ ಕಾಣಮ್ಮಾ!
ಸಹ್ಯಾದ್ರಿ ಪರಿಸರದಿಂದ ಕವಿ ಕುವೆಂಪು ಪಡೆದಿರುವ ಅನುಭವ, ತನ್ಮಯತೆ, ಪ್ರೇರಣೆ, ಯಶಸ್ಸು ಎಲ್ಲವನ್ನು ಗಮನಿಸಿದಾಗ ಮೇಲಿನ ಸಾಲುಗಳು ಹೆಚ್ಚು ಅರ್ಥವತ್ತಾಗುತ್ತವೆ. ಹುಟ್ಟಿಗೊಂದು ದೈವೀ ಕಾರಣ (ಪ್ರತಿಭೆ) ಇರಬಹುದಾದರೂ, ಸಾಧನೆಗೆ ಈ ಜಗತ್ತಿನ ಸಂಸ್ಕಾರ, ವಿದ್ಯೆ, ಅನುಭವ (ವ್ಯುತ್ಪತ್ತಿ) ಇರಲೇಬೇಕು. ನಮ್ಮ ಉನ್ನತಿಗೆ ನಾವೇ ಮೆಟ್ಟಿಲಾಗಬೇಕು! ವರ್ತಮಾನದಲ್ಲಿ ನಿಂತು, ಭೂತಕಾಲವನ್ನು ಹೊಕ್ಕು ಭವಿಷತ್‌ಕಾಲವನ್ನು ತೋರಿಸುವ ಕಾವ್ಯತಂತ್ರಗಾರಿಕೆ! 'ಶ್ಮಶಾನ ಕುರುಕ್ಷೇತ್ರಂ' ನಾಟಕದ ಕೊನೆಯ ದೃಶ್ಯವನ್ನೊಮ್ಮೆ ನೆನಪು ಮಾಡಿಕೊಳ್ಳಿ. 'ತ್ರೈಲೋಕ್ಯಸ್ಯಾಸ್ಯ ಸರ್ವಸ್ಯ ಕಾವ್ಯಂ ಭಾವಾನುಕೀರ್ತನಂ', 'ನಿಯತಿಯನಾರ್ ಮೀರ‍್ದಪರ್' ಎಂಬ ಕವಿಮಾತಿಗೆ 'ನಿಯತಿಯನ್ ಕವಿಗಳ್ ಮೀರ‍್ದಪರ್' ಎಂಬುದೇ ಉತ್ತರ! 'ಕವಿ ವರ್ಣಿಸುವ ಸಂಗತಿಗಳು ಹಿಂದೆ ನಡೆದಿರಬೇಕಾಗಿಲ್ಲ; ಅವುಗಳಲ್ಲಿ ಹಲವು ಯಥಾವತ್ತಾಗಿ ಲೋಕದಲ್ಲಿ ನಡೆಯುವ ಸಂಭವವೂ ಕಡಮೆ' ಎಂದು ಹೇಳುತ್ತಾ, ತೀನಂಶ್ರೀಯವರು ತಮ್ಮ 'ಕಾವ್ಯಮೀಮಾಂಸೆ' ಗ್ರಂಥದಲ್ಲಿ 'ನೇಮಿಚಂದ್ರ'ನ ಸುಪ್ರಸಿದ್ಧ ಪದ್ಯವನ್ನು ಉಲ್ಲೇಖಿಸುತ್ತಾರೆ. 'ಕವಿಗಳು ಅನಭಿಷಕ್ತ ಶಾಸನಕರ್ತರು' ಎಂಬ ಷೆಲ್ಲಿಯ ಮಾತುಗಳನ್ನು ಹಾಗೂ 'ಅಭಿನವ ಸೃಷ್ಟಿಕರ್ತರು' ಎನ್ನುವ ಭಾರತೀಯ ಕಾವ್ಯಮೀಮಾಂಸಕರ ದೃಷ್ಟಿಕೋನವನ್ನು ನೇಮಿಚಂದ್ರ ಒಂದು ವೃತ್ತದಲ್ಲಿ ಕಟ್ಟಿಕೊಟ್ಟಿದ್ದಾನೆ. ಅದು ಹೀಗಿದೆ:
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿಈ ಮೊದಲೆ ಹೇಳಿದಂತೆ ಲೋಕರಂಗಕ್ಕೆ ಅಸಹಜವೂ ಅಸಂಭವವೂ ಆಗಿದ್ದಿರಬಹುದಾದರೂ ಕಲಾರಂಗಕ್ಕೆ ಸಹಜವಾಗಿ ಸಲ್ಲುವ ಈ ಕವಿತೆ (ವರ್ಧನ್ತಿ) ಕಲಾಸೃಷ್ಟಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ನಭಮಂ
ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ
ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ ಮುಟ್ಟಿದರ್ ಇಕ್ಕಿ ಮೆಟ್ಟಿದರ್
ಅದೇನ್ ಕವೀಂದ್ರರಾ ಅಳವೊ ಅಗ್ಗಳಮೋ!!
[ಡಿಸೆಂಬರ್ 29 ಕವಿ ಜನ್ಮದಿನ. ನನ್ನ ಮುಂದಿನ ಪೋಸ್ಟ್ ಪ್ರಸಿದ್ಧ 'ಪಾಂಚಜನ್ಯ' ಕವಿತೆಯ ಸಂದರ್ಭವನ್ನು ಕುರಿತದ್ದು. ಅಷ್ಟರಲ್ಲಿ 2011 ಮುಗಿದು 2012 ಆರಂಭವಾಗಿರುತ್ತದೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು]
1 comment:
ಪ್ರತ್ಯೊಬ್ಬರ ದೇವ ಪರಿಕಲ್ಪನೆ ಬೇರೆ ಬೇರೆ ರೀತಿಯದು ಹಾಗೂ ಅದು ಅವರ ಸ್ವಂತದ್ದು.
ಕವಿಗಳಿಗೆ ಕಾಮನ ಬಿಲ್ಲೇ ದೈವ ಸಾಕ್ಷಾತ್ಕಾರ ಹಾಗೂ ಗುರು ಸನ್ನಿಧಿ ನೀಡಿದ್ದು ಹೃದಯಂಗಮವಾದ ಉಪಮೆ.
Post a Comment