Friday, December 16, 2011

ವೆನಿಲ್ಲಾ ಬಗ್ಗೆ ತೇಜಸ್ವಿ ಅಂದೇ ಹೇಳಿದ್ದರು!



2003ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಂವಾದದಲ್ಲಿ "ರೈತನಿಗೆ ಕೃಷಿ ಏಕೆ ಹೊರೆಯಾಗುತ್ತಿದೆ?" ಎಂಬ ಪ್ರಶ್ನೆಗೆ ತೇಜಸ್ವಿ ನೀಡಿದ್ದ ಇಡೀ ಉತ್ತರವನ್ನು ನೋಡಿ:
ವಿಪರೀತ ದೊಡ್ಡ ಪ್ರಶ್ನೆ ಕಂಡ್ರೀ ಇದು! ಇಷ್ಟುದ್ದ ಇದೆ ಅಷ್ಟೆ ಇದು! ಮೊಟ್ಟಮೊದಲನೆಯದಾಗಿ, ಕೃಷಿ ಏಕೆ ಭಾರವಾಗುತ್ತಿದೆ ಅಂದರೆ, ನಮಗೆ, ಅವನಲ್ಲಿ ನಾವು ಏನು ಮಾಡಿದರೂ ಹಿಂಗಿಸಲಾಗದೇ ಇರುವಂತಹ ಒಂದು ದಾಹವನ್ನು ಎಬ್ಬಿಸಿದ್ದೇವೆ. ಓವರ್ ಎಕ್ಸ್‌ಪೆಕ್ಟೇಷನ್ -  ರೈತನಿಗೆ ಜೀವನಮಟ್ಟವನ್ನೆಲ್ಲಾ ಓವರ್ ಎಕ್ಸ್‌ಪೆಕ್ಟೇಷನ್ ಮಾಡೋ ಹಾಗೆ ಮಾಡಿದ್ದೇವೆ ನಾವು. ಇದರಲ್ಲಿ ಅಷ್ಟು ಕೋಟಿ ರುಪಾಯಿ ಬರುತ್ತೆ.... ದಿನ ಬೆಳಗಾದರೆ ಆ ದೂರದರ್ಶನ ಅವರು ಇವರು ಎಲ್ಲಾ... ಮಲ್ಲಿಗೆ ಹೂವು ಬೆಳದರೆ ಅಷ್ಟು ಕೋಟಿ ರುಪಾಯಿ ಮಾಡಬಹುದು, ಇನ್ನೊಂದು ಬೆಳದರೆ ಅಷ್ಟು ಕೋಟಿ ಮಾಡಬಹುದು ಅಂತ, ಆ ರೈತರ ಸಮೇತ ಹೇಳುತ್ತಾ ಇರುತ್ತಾರೆ. ಆದರೆ, ವಾಸ್ತಾವಾಂಶ ಏನು ಅಂತ ಗೊತ್ತಿಲ್ಲ! ಆದರೆ ಸುಮಾರು ಜನ ರೈತರು, ’ಅಷ್ಟು ಕೋಟಿ ಬರುವ ಹಾಗಿದ್ದರೆ ಏಕೆ ಬಿಡಬೇಕು’ ಅಂತ ನೆಗೆದಾಡುತ್ತಾರೆ. ಇನ್ನಷ್ಟು ಜನ ಅದೂ ಬೇಡ, ನೆಟ್ಟಗೆ ಆನ್‌ಲೈನ್ ಲಾಟರಿಗೆ ಹಾಕುತ್ತಾರೆ. ಸ್ಥೂಲವಾಗಿ ಹೇಳುತ್ತಾ ಇರುವುದು ನಾನು ಅಷ್ಟೇನೆ. ಇದು ರೈತನಿಗೆ ಇನ್ಸೆಂಟೀವ್ ಕ್ರಿಯೇಟ್ ಮಾಡುವುದಕ್ಕೆ ಅಗತ್ಯ ಇದೆ. ಇಲ್ಲದೇ ಇರೋವನು ಮಲಗಿಬಿಡುತ್ತಾನೆ ಅಷ್ಟೆ! ಹಾಳಾಗಿ ಹೋಗಲಿ ಅಂತ ಒಂದಷ್ಟು ಕಳ್ಳಭಟ್ಟಿ ಕುಡಿದುಕೊಂಡು ನಿದ್ದೆ ಮಾಡಿಬಿಡುತ್ತಾನೆ! ಇದರಲ್ಲಿಯಾದರೂ ಕೊನೆಪಕ್ಷ ಒಂದಷ್ಟು ದುಡ್ಡಾದರೂ ಸಂಪಾದನೆ ಮಾಡೋಣ ಅಂತ ಹೇಳಿ, ಏನಾದರೂ ಮಾಡುವುದಕ್ಕೆ ಹೋಗುತ್ತಾನೆ. ಅಂದರೆ ಆ ಮಿತಿಯನ್ನು ಮೀರಿ ನಾವು ಅವನಲ್ಲಿ ಆಸೆ ಆಕಾಂಕ್ಷೆಗಳನ್ನು ಗೋಜಲನ್ನು ಎಬ್ಬಿಸಿದ್ದೇವೆ. ಈಗ ವೆನಿಲ್ಲಾ ಬೆಳೆಯೋದಿಕ್ಕೆ ಅಂತ ಕಂಡಾಪಟ್ಟೆ ಓಡಾಡುತ್ತಾ ಇದ್ದಾರೆ. ಇವತ್ತು ಬೇಕಾದರೆ ನಾನು ಹೇಳುತ್ತಾ ಇದ್ದೇನೆ; ’ಮೂರು ವರ್ಷ ಆದ ಮೇಲೆ ವೆನಿಲ್ಲಾ ಬೆಳೆದು ಅಲ್ಲಿ ನೇಣು ಹಾಕಿಕೊಂಡರಂತೆ, ಇಲ್ಲಿ ನೇಣು ಹಾಕಿಕೊಂಡರಂತೆ. ಸರ್ಕಾರದವರು ಅವರಿಗೆ ಬೆಂಬಲ ಬೆಲೆ ಡಿಕ್ಲೇರ್ ಮಾಡಬೇಕು, ಸಹಾಯ ಧನ ಕೊಡಬೇಕು’ ಅಂತಾರೆ. ಹಿಂದು ಮುಂದು ನೋಡದೆ ನೆಗೆದು ಹಾರುವವರು ಇವರು. ಆಮೇಲೆ ಗೌರ‍್ನಮೆಂಟಿನೋರು ಬಂದು ಇವರಿಗೆ ಬೆಂಬಲ ಬೆಲೆ ಸಹಾಯಧನ ಎಲ್ಲಾ ಕೊಡಬೇಕು ಅಂತ ಗಲಾಟೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಇದು ವೆನ್ನಿಲ್ಲಾಗೂ ಆಗುತ್ತೆ! (ಈ ಮಾತು ನೂರಕ್ಕೆ ನೂರು ನಿಜವಾಗಿರುವುದನ್ನು ನಾವು ಗಮನಿಸಬೇಕಾಗಿದೆ) ಇವೆಲ್ಲಾ ನಾವೇ ಮಾಡುತ್ತಿರುವಂತಹ ಅನಾಹುತ. ಹಾಗೆ ಮಾಡಿ ಹೀಗೆ ಮಾಡಿ ಕ್ಷಣಮಾತ್ರದಲ್ಲಿ ಕೋಟ್ಯಾಧಿಪತಿ ಆಗಬಹುದು ಅಂತ ಆಸೆ ಎಬ್ಬಿಸಿದರೆ, ಅವನು ನೇಣು ಹಾಕಿಕೊಳ್ಳುವ ಲೆವೆಲ್ಲಿಗೆ ಹೋಗುತ್ತೆ!

1 comment:

Pejathaya said...

ಪ್ರೀತಿಯ ಡಾ. ಸತ್ಯ
ರೈತರಾದ ನಾವು ವೆನಿಲ್ಲಾ ಬೆಳೆಯಿಂದ ಓವರ್ ಎಕ್ಸ್ಪೆಕ್ಟೇಶನ್ ಮಾಡಿದ್ದು ಸಹಜ.
ಆದರೆ, ಬೆಲೆ ಬಿದ್ದು ಹೋಯಿತು.

ಜತೆಯಾಗಿ ಪ್ರಕೃತಿಯೇ ವೆನಿಲ್ಲಾ ಬೆಳೆಗೆ ಇತಿ ಶ್ರೀ ಹಾಡಿತು.


ನನ್ನ ಹಿರಿಯ ಗೆಳೆಯ ತಿಮ್ಮೇಗೌಡರು ಹೇಳುತ್ತಾ ಇದ್ದರು.
" ಕೇಸರಿ ಅವರೇ! ರೈತನಿಗೆ ಅತಿ ಆಸೆ ಸಲ್ಲದು. ಏನನೋ ಹೊಸತನ್ನು ಬೆಳೆಯ ಹೋಗಿ; ಆ ಬೆಳೆಗಳು ಪ್ರಕೃತಿಯ ಸಮತೋಲ ತಪ್ಪಿಸಿದರೆ, ಪ್ರಕೃತಿಯೇ ಆ ಬೆಳೆಯನ್ನು ನಾಶಮಾಡುವ ಜವಾಬ್ದಾರಿ ಹೊತ್ತುಕೊಳ್ಳುತ್ತೆ!" - ಅಂತ.

ಇಂದು ತಿಮ್ಮೇ ಗೌಡರು ಇಲ್ಲ. ಅದೇರೀತಿ ತೇಜಸ್ವಿಯವರೂ ಇಲ್ಲ.

ಮಲೆನಾಡಿನಲ್ಲಿ ವೈರಾಣು ರೋಗ ಬಂದು ವೆನಿಲ್ಲಾವನ್ನೇ ನೆಚ್ಚಿ ಕುಳಿತಿದ್ದ ರೈತರನ್ನು ಸಂಪೂರ್ಣವಾಗಿ ಕಂಗೆಡಿಸಿದೆ. ನಮ್ಮಲ್ಲಿ ಇಂದು ಮದ್ದಿಗೆ ಕೂಡಾ ಒಂದು ವೆನಿಲ್ಲಾ ಬಳ್ಳಿ ಸಿಗದು.

ವೆನಿಲ್ಲಾ ಬೆಳೆಯಲ್ಲಿ ಭ್ರಮನಿರಸನ ಹೊಂದಿದವರಲ್ಲಿ ನಾನೂ ಒಬ್ಬ.
ವೆನಿಲ್ಲಾ ನಂಬಿದವಗೆ ಏನೂ ಇಲ್ಲ ಆಯ್ತು!

ಆದರೆ, ಉಳಿದ ಸಾಂಪ್ರದಾಯಿಕ ಬೆಳೆಗಳನ್ನು ಕಡೆಗಣಿಸದೇ ಇದ್ದುದರಿಂದ ನಾನು ಇಂದು ನನ್ನ ವೃತ್ತಿಯಲ್ಲಿ ಉಳಿದಿದ್ದೇನೆ.