ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
’ಪಾಂಚಜನ್ಯ’ ಹೆಸರಿನ ಈ ಕವಿತೆ ಅದೇ ಹೆಸರಿನ ಸಂಕಲನದ ಆದ್ಯ ಕವಿತೆಯಾಗಿದೆ. ಕುವೆಂಪು ಅವರ ಬಹುತೇಕ ಕ್ರಾಂತಿಗೀತೆಗಳನ್ನು ’ಪಾಂಚಜನ್ಯ’ ಸಂಕಲನ ಒಳಗೊಂಡಿದೆ. ಕವಿವಾಣಿ ಯುಗವಾಣಿಯೂ ಹೌದು; ಜನವಾಣಿಯೂ ಹೌದು. ಒಂದು ಯುಗದ ಆಗುಹೋಗುಗಳ, ಜನಜೀವನದ ವಕ್ತಾರನಂತೆ ಒಬ್ಬ ಕಲಾಕಾರನಿರುತ್ತಾನೆ. ೨೦.೯.೧೯೨೯ರಂದು ರಚನೆಯಾಗಿರುವ ’ಪಾಂಚಜನ್ಯ’ದ ಹಿಂದೆ, ಅಂದಿನ ಸ್ವತಂತ್ರ ಹೋರಾಟದ ಹುತಾತ್ಮರೊಬ್ಬರ ಕಥೆಯಿದೆ. ಇಡೀ ಭಾರತ ’ನಾನೊಂದೆ’ ಎಂಬಂತೆ ಪ್ರವರ್ತಿಸುತ್ತಿದ್ದ ಕಾಲವದು. ’ಸ್ವಾತಂತ್ರಕ್ಕಾಗಿ ನಡೆಯುತ್ತಿದ್ದ ಸತ್ಯಾಗ್ರಹದ ಸಮರದಲ್ಲಿ ನಿರ್ಭೀತರಾಗಿ ನುಗ್ಗಿ ಜಯವನ್ನು ಸಾಧಿಸಬೇಕೆಂದು ಕುವೆಂಪು ’ಪಾಂಚಜನ್ಯ’ ಎಂಬ ಹೆಸರಿನ ಕವನದಲ್ಲಿ ನಾಡಿನ ಯುವಶಕ್ತಿಗೆ ಕರೆ ಕೊಟ್ಟಿದ್ದಾರೆ’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಹೇಳಬಹುದು. ಆದರೆ, ಸ್ವತಃ ಕವಿಗಿಂತ ಎರಡು ತಿಂಗಳಷ್ಟೇ ಹಿರಿಯರಾಗಿದ್ದ ಕ್ರಾಂತಿಕಾರಿಯೊಬ್ಬರು ಕೇವಲ ೨೫ನೇ ವಯಸ್ಸಿನಲ್ಲಿ ಹುತಾತ್ಮರಾಗಿ ಹೋದ ಇತಿಹಾಸವನ್ನೊಮ್ಮೆ ನೋಡಲೇಬೇಕು. ಆಗ ’ಪಾಂಚಜನ್ಯ’ ಕವಿತೆಯ ಹಿರಿಮೆ ಗರಿಮೆಗಳು ಮನದಟ್ಟಾಗುತ್ತವೆ.
ಕಲ್ಕತ್ತಾದಲ್ಲಿ ೨೭.೧೦.೧೯೦೪ರಂದು ಮದ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಜತೀಂದ್ರನಾಥ ದಾಸ್ ಅವರ ತಂದೆ ಭಂಕಿಮ್ ಬೆಹಾರಿ ಮತ್ತು ತಾಯಿ ಸುಹಾಸಿನಿ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜತೀಂದ್ರನಾಥ ಮೆಟ್ರಿಕ್ಯುಲೇಷನ್ ಮತ್ತು ಇಂಟರ್ಮಿಡಿಯೇಟ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದರು. ಅಂದು ದೇಶದಾದ್ಯಂತ ನಡೆಯುತ್ತಿದ್ದ ಸ್ವತಂತ್ರ ಹೋರಾಟದ ಬಿಸಿಗೆ ವಿದ್ಯಾರ್ಥಿಯಾಗಿದ್ದಾಗಲೇ ಆಕರ್ಷಿತರಾಗಿದ್ದರು. ಗಾಂಧೀಜಿಯವರಿಂದ ಪ್ರಭಾವಿತರಾದರು. ೧೯೨೧ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಪಿಕೆಟಿಂಗ್ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದಾಗ ಅವರ ವಯಸ್ಸು ಕೇವಲ ೧೭.
ಜೈಲಿನಲ್ಲೇ ಇದ್ದುಕೊಂಡು, ಭಗತ್ ಸಿಂಗ್ ಮತ್ತು ಸಹಚರರೂ ಸೇರಿದಂತೆ ಭಾರತದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದ ಹಲವಾರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯೂ ಆದರು. ಬಂಗಾಳದ ಕ್ರಾಂತಿಕಾರಿ ಸಂಘಟನೆಯಾದ ’ಅನುಶೀಲನ ಸಮಿತಿ’ಯನ್ನು ಸೇರಿ ತಮ್ಮ ಹೋರಾಟಕ್ಕೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ೧೯೨೫ರಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರು. ಆಗ ಬ್ರಿಟಿಷ್ ಸರ್ಕಾರ, ತೀವ್ರತರವಾದ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂಬ ಆಪಾದನೆಯ ಮೇಲೆ ಬಂಧಿಸಿ, ಮೈಮೆನ್ ಸಿಂಗ್ ಕೇಂದ್ರ ಕಾರಾಗೃಹಕ್ಕೆ ತಳ್ಳಿಬಿಟ್ಟಿತು. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದ್ದುದನ್ನು ಕಂಡ ಜತೀಂದ್ರನಾಥ್ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ೨೦ ದಿನಗಳವರೆಗೂ ನಡೆದ ಉಪವಾಸ ಸತ್ಯಾಗ್ರಹ, ಜೈಲ್ ಸೂಪರಿಂಟೆಂಡೆಂಟ್ ಕ್ಷಮಾಪಣೆ ಕೇಳುವುದರೊಂದಿಗೆ ಕೊನೆಗೊಂಡಿತು. ಕೇವಲ ೨೧ ವರ್ಷದ ಸತ್ಯಾಗ್ರಹಿ ಜತೀಂದ್ರನಾಥ ಎಂಬ ಯುವಕ ಕಲ್ಕತ್ತಾದಲ್ಲಿ ಮನೆಮಾತಾಗಿಬಿಟ್ಟ. ಆ ಹೋರಾಟದ ಯಶಸ್ಸಿನ ನಂತರ ಜತೀಂಧ್ರನಾಥರನ್ನು ಬ್ರಿಟಿಷ್ ಸರ್ಕಾರ ಸಣ್ಣಪುಟ್ಟ ಕಾರಣಗಳಿಗೂ ಜೈಲಿಗೆ ಕಳುಹಿಸುವ ಮನೋಧರ್ಮ ಪ್ರದರ್ಶಿಸುತ್ತಿತ್ತು.
೧೪.೬.೧೯೨೯ರಂದು ಜತೀಂದ್ರನಾಥರ ಕ್ರಾಂತಿಕಾರಿ ಚಟುವಟಿಕೆಗಳ ಕಾರಣವನ್ನೊಡ್ಡಿ ಬಂಧಿಸಿ, Supplementary Lahore Conspiracy Caseನಲ್ಲಿ ಅಪಾದಿತನೆಂದು ತೀರ್ಮಾನಿಸಿ, ಲಾಹೋರ್ ಬೋರ್ಸ್ಟಲ್ ಜೈಲಿಗೆ ಕಳುಹಿಸಲಾಯಿತು. ಲಾಹೋರ್ ಜೈಲಿನಲ್ಲಿ ಸ್ವತಂತ್ರ ಹೋರಾಟಗಾರರಿಗೆ, ವಿಚಾರಣಾಧೀನ ಖೈದಿಗಳಿಗೆ ಅತಿಯಾಗಿ ಕಿರುಕುಳ ನೀಡಲಾಗುತ್ತಿತ್ತು. ಖೈದಿಗಳಿಗೆ ನೀಡಲಾಗುತ್ತಿದ್ದ ಸಮವಷ್ತ್ರಗಳು ಕೊಳೆಯಾಗಿರುತ್ತಿದ್ದುವು. ಅಡುಗೆಮನೆ ಜಿರಲೆ ಇಲಿಗಳ ವಾಸಸ್ಥಾನವಾಗಿಬಿಟ್ಟಿತ್ತು. ಕುಡಿಯಲು ಕೊಡುತ್ತಿದ್ದ ನೀರಿನಲ್ಲಿ ಹುಳುಗಳು ತೇಲುತ್ತಿದ್ದುವು. ಓದಲು ಪುಸ್ತಕ ಪತ್ರಿಕೆಗಳನ್ನು ಕೊಡುತ್ತಿರಲಿಲ್ಲ. ಆದರೆ, ಅದೇ ಜೈಲಿನಲ್ಲಿದ್ದ ಇಂಗ್ಲಿಷ್ ಖೈದಿಗಳನ್ನು ಉತ್ತಮತರವಾಗಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಜತೀಂದ್ರನಾಥ ದಂಗೆಯೆದ್ದುಬಿಟ್ಟರು. ತಾರತಮ್ಯವನ್ನು ವಿರೋಧಿಸಿ ೧೩.೭.೧೯೨೯ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ಜೈಲಿನ ಆಡಳಿತ ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳಿಗೆ ಹೊಡೆದು ಬಡಿದು ಹಿಂಸಿಸಿದ್ದಲ್ಲದೆ, ಕುಡಿಯಲು ನೀರನ್ನು ಸಹ ಕೊಡಲಿಲ್ಲ. ಬಲವಂತವಾಗಿ ಆಹಾರ ತಿನ್ನಿಸುವ ಯತ್ನವೂ ನಡೆಯಿತು. ಆದರೂ ಜತೀಂದ್ರನಾಥ ಉಪವಾಸವನ್ನು ನಿಲ್ಲಿಸಲಿಲ್ಲ. ಗಾಂಧೀಜಿ ಮೊದಲಾದ ನಾಯಕರುಗಳು ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು. ದಿನೇ ದಿನೇ ತೀವ್ರತರವಾಗುತ್ತಿದ್ದ ಹೋರಾಟವನ್ನು ಗಮನಿಸಿದ ಜೈಲು ಆಡಳಿತ ಯಾವುದೇ ನಿರ್ಬಂಧಗಳಿಲ್ಲದೆ ಜತೀಂದ್ರನಾಥರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ವರದಿ ನೀಡಿತು. ಆದರೆ ಸರ್ಕಾರ ಅದಕ್ಕೆ ಒಪ್ಪದೆ ಬೇಲ್ ಮೇಲೆ ಬಿಡುಗಡೆ ಮಾಡುವುದಾಗಿ ಹೇಳಿತು. ಜತೀಂದ್ರನಾಥರು ಅದನ್ನು ಒಪ್ಪಲಿಲ್ಲ. ೧೩.೯.೧೯೨೯ ಉಪವಾಸ ಸತ್ಯಾಗ್ರಹದ ೬೩ನೆಯ ದಿನ, ಮಧ್ಯರಾತ್ರಿ ೧ ಗಂಟೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜತೀಂದ್ರನಾಥರ ಪ್ರಾಣಪಕ್ಷಿ ಹಾರಿಹೋಯಿತು. ಸಾವಿನ ಸುದ್ದಿ ತಿಳಿದ ತಕ್ಷಣ ವೈಸರಾಯ್ Jatin Das of the Conspiracy Case, who was on hunger strike, died this afternoon at 1 p.m. Last night, five of the huunger strikers gave up their hunger strike. So there are only Bhagat Singh and Dutt who are on strike ...ಎಂದು ಲಂಡನ್ನಿಗೆ ತಂತಿ ಕಳುಹಿಸಿದ.
ಹುತಾತ್ಮ ಜತೀಂದ್ರನಾಥರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕಲ್ಕತ್ತಾಕ್ಕೆ ರೈಲಿನಲ್ಲಿ ತರಲಾಯಿತು. ದಾರಿಯುದ್ದಕ್ಕೂ ಪ್ರತೀ ನಿಲ್ದಾಣದಲ್ಲೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿದ್ದರು. ಕಲ್ಕತ್ತಾದಲ್ಲಿ ಸುಮಾರು ೬ ಲಕ್ಷ ಜನರ ಎರಡು ಮೈಲಿ ಉದ್ದ ಮೆರವಣಿಗೆಯಲ್ಲಿ ಇಡೀ ದೇಶದ ಪರವಾಗಿ ಅಂತಿಮ ನಮನ ಸಲ್ಲಿಸಲಾಯಿತು.
ಇಷ್ಟೆಲ್ಲಾ ಘಟನೆಗಳಿಂದಾಗಿ ಭಾರತದದಾದ್ಯಂತ ಸ್ವಂತಂತ್ರ ಹೋರಾಟದ ಕಿಚ್ಚು ಹೆಚ್ಚಾಯಿತು. ಬೀದಿ ಬೀದಿಗಳಲ್ಲಿ ಹರತಾಳ, ಪ್ರತಿಭಟನೆ, ಪಿಕೆಟಿಂಗ್ ನಡೆದವು. ಮೋತಿಲಾಲ್ ನೆಹರೂ ಅವರು, ಲಾಹೋರ್ ಜೈಲಿನ ಅಮಾನವೀಯ ನಡವಳಿಕೆಯನ್ನು ವಿರೋಧಿಸಿ, ನಡೆಯಬೇಕಿದ್ದ ಕೇಂದ್ರೀಯ ಅಸೆಂಬ್ಲಿಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಲ್ಲದೆ, ಅಸೆಂಬ್ಲಿಯಲ್ಲಿ ಗೊತ್ತುವಳಿಯನ್ನು ಮಂಡಿಸಿ ೫೫-೪೭ರ ಅಂತರದಲ್ಲಿ ಗೆಲುವಾಗುವಂತೆ ನೋಡಿಕೊಂಡರು. ಮೊಹಮದ್ ಅಲಂ, ಗೋಪಿನಾಥ ಚಂದ್ ಭಾರ್ಗವ ಮೊದಲಾದ ನಾಯಕರು ಪಂಜಾಬ್ ಲೆಜಿಸ್ಲೇಟೀವ್ ಕೌನ್ಸಿಲ್ಲಿಗೆ ರಾಜಿನಾಮೆ ನೀಡಿ ಪ್ರತಿಭಟಿಸಿದರು. Another name has been added to the long and splendid roll of Indian martyrs. Let us bow our heads and pray for strength to act to carry on the struggle, however long it may be and whatever consequences, till the victory is ours ". ಎಂದು ಜವಹರಲಾಲ್ ನೆಹರೂರವರೂ ಹೋರಾಟಕ್ಕಿಳಿದರು. ಜತೀಂದ್ರನಾಥರ ಸತ್ಯಾಗ್ರಹ ಮತ್ತು ಸಾವು, ಬ್ರಿಟೀಷ್ ಸರ್ಕಾರದ ತಾರತಾಮ್ಯ ನೀತಿಯನ್ನು, ತಣ್ಣನೆಯ ಕ್ರೌರ್ಯವನ್ನು ಜಗತ್ತಿನೆದರಿಗೆ ತೆರೆದಿಟ್ಟಿತ್ತು.
ಜತೀಂದ್ರನಾಥರ ಸಾವು ಇಡೀ ಭಾರತವನ್ನು ಅದರಲ್ಲೂ ಯುವಕರನ್ನು ಬಡಿದೆಬ್ಬಿಸಿಬಿಟ್ಟಿತ್ತು. ದಕ್ಷಿಣ ಭಾರತದ ದಕ್ಷಿಣ ಮೂಲೆಯ ಮೈಸೂರು ಸಂಸ್ಥಾನದಲ್ಲೂ ಬ್ರಿಟೀಷ್ ಸರ್ಕಾರದ ವಿರುದ್ಧ ಪ್ರತಿಭಟನೆಗಳಾಗುತ್ತಿದ್ದುವು. ಯುವಕರೇ ಹೆಚ್ಚಾಗಿ ಹೋರಾಟಕ್ಕೆ ಇಳಿದರು. ಆಗಲೇ ಈ ’ಪಾಂಚಜನ್ಯ’ ಮೊಳಗಿಬಿಟ್ಟಿತು. ’ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ!’ ಎಂದು ಕರೆಯನ್ನಿತ್ತು ಕವಿತೆ ಮುಂದುವರೆಯುತ್ತದೆ.
ಬೆಚ್ಚ ಬಿಡು, ನೆಚ್ಚ ನೆಡು
ಕೆಚ್ಚದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?
ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!
ನೋಡದೋ ನೋಡಲ್ಲಿ: ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ! ನುಗ್ಗು, ನಡೆ, ಕಟ್ಟ ಹರಿ!
ತಡೆಯ ಬಂದವರ ಇರಿ! ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ? ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ? ಸಾವೆ ಸಿರಿ ಕಲಿಗೆ!
ನಿಂತೇನು ನೋಡುತಿಹೆ? ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು ರಣರಂಗದಲ್ಲಿ!
ನೆತ್ತರನು ನೋಡುವೆಯ? ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ? ಮರಳುಗಳ ನೆಲೆಬೀಡೆ?
ಕಾಳಿಯಳಕುವಳೇನು ರಕ್ಕಸರ ಬಲಿಗೆ?
ಸಮರ ರಂಗದ ನಡುವೆ ಬೆದರಿಕೆಯೆ ಕಲಿಗೆ?
ಹಾ ನೋವು! ಹಾ ನೋವು!ಭರತಖಂಡದ ಹಿತವೇ ನನ್ನ ಹಿತ ಎಂದು ಭರತಮಾತೆಯ ಮತವೆ ನನ್ನ ಮತ ಎಂದು... ಭಾರತಾಂಬೆಯ ಮುಕ್ತಿ ನನಗೆಂದು ನುಗ್ಗು ಮುಂದಕ್ಕೆ ಧೀರ ಕಾಳೆಗದ ಕೊಲೆಗೆ ನುಗ್ಗು ಮರಣಕೆ ವೀರಸಗ್ಗದ ನೆಲೆಗೆ ಎಂದು ಕವಿತೆ ಕರೆಕೊಡುತ್ತದೆ.
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು,
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಅತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯ ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಕವಿತೆಯ ಛಂದೋಬಂಧವೇ ಓದುಗ ಮತ್ತು ಕೇಳುಗ ಇಬ್ಬರನ್ನೂ ಬಡಿದೆಬ್ಬಿಸುವಂತಿದೆ. ೫ ೫ ಮಾತ್ರೆಯ ಪುಟ್ಟ ಪುಟ್ಟ ಪಂಕ್ತಿಗಳು ಈ ದೀರ್ಘ ಕವಿತೆಯಲ್ಲಿವೆ. ಒಂದೇ ರೀತಿಯ ಛಂದೋಬಂಧವಿದ್ದರೆ ದೀರ್ಘ ಕವಿತೆಗಳಿಗೆ ತಟ್ಟಬಹುದಾದ ಏಕತಾನತೆಯಿಂದ ಈ ಕವಿತೆ ಮುಕ್ತವಾಗಿದೆ ಎನ್ನಬಹುದು. ಕೆಲವೊಮ್ಮೆ, ಮುಕ್ತಾಯದ ಸಾಲುಗಳಲ್ಲಿ ಭಾವಕ್ಕನುಗುಣವಾಗಿ ೫ ೩ ಮಾತ್ರೆಯ ಪಂಕ್ತಿಗಳನ್ನು ತಂದಿರುವುದರಿಂದ ಕವನದ ವಾಚನ ಏರಿಳಿತದೊಂದೊಗೆ ಸಾಗುತ್ತದೆ. ಮೊದಲ ಸಾಲುಗಳಿಂದಲೇ ಈ ತಂತ್ರ ಪ್ರಯೋಗಗೊಂಡಿದ್ದು, ಫಲಪ್ರದವಾಗಿದೆ. ಎರಡೆರಡು ಸಾಲುಗಳನ್ನು ಒಟ್ಟಿಗೆ ಸೇರಿಸಿ ೫ ೫ ೫ ೫ ಮಾತ್ರೆಗಳ ಮತ್ತು ೫ ೫ ೫ ೩ ಮಾತ್ರೆಗಳ ಪಂಕ್ತಿಗಳಾಗಿಯೂ ಬದಲಾಯಿಸಿಕೊಳ್ಳಬಹುದು. ಇದರಿಂದ ಕವಿತೆ ಓಟಕ್ಕಾಗಲಿ ಅರ್ಥಕ್ಕಾಗಲಿ ತೊಂದೆರೆಯಾಗುವುದಿಲ್ಲ ಎನ್ನುವುದು ವಿಶೇಷ. (ಪ್ರಯೋಗಾರ್ಥವಾಗಿ ಒಂದು ಭಾಗವನ್ನು ಹಾಗೇ ಸಂಯೋಜಿಸಲಾಗಿದೆ.)
’ಪಾಂಚಜನ್ಯ’ ಮತ್ತು ಆ ರೀತಿಯ ಕ್ರಾಂತಿಗೀತೆಗಳನ್ನು ಹಾಡುವುದರ ಬಗ್ಗೆ, ಕುವೆಂಪು ಅವರು ಪಾಂಚಜನ್ಯದಂತಹ ಕವಿತೆಗಳನ್ನು ಸಾಭಿನಯ ವಾಚನಕ್ಕಾಗಿಯೆ ಬರೆದ್ದದ್ದು. ಸಾಧಾರಣವಾಗಿ ’ಪಾಂಚಜನ್ಯ’ ಮತ್ತು ’ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ ಕವನಸಂಗ್ರಹಗಳಲ್ಲಿರುವ ಕವನಗಳೆಲ್ಲ ವಾಚನ ಜಾತಿಗೆ ಸೇರಿವೆ, ಗಾಯನ ಜಾತಿಗಲ್ಲ. ಆದರೂ ಕೆಲವರು, ಅದರಲ್ಲಿಯೂ ಇತ್ತೀಚಿಗೆ ರೇಡಿಯೋ ಪ್ರಚಾರಕ್ಕೆ ಬಂದ ಮೇಲೆ, ಅವುಗಳನ್ನು ಗಾಯನ ಮಾಡುತ್ತಿರುವುದನ್ನು ಆಲಿಸಿ ತುಂಬ ನೊಂದುಕೊಂಡಿದ್ದೇನೆ. ಎನ್ನುತ್ತಾರೆ
ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ’ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ’ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ’ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. ಸಭೆಗಳಲ್ಲಿ ಮಾತ್ರವಲ್ಲದೆ ಜೈಲಿನ ಒಳಗೂ ’ಪಾಂಚಜನ್ಯ’ ಕವಿತೆ ಕ್ರಾಂತಿಗೀತೆಯಾಗಿ ಕೇಳತೊಡಗಿತು.
ಸ್ವತಂತ್ರಹೋರಾಟದ ಸಭೆ ಸಮಾರಂಭಗಳಲ್ಲಿ, ಸೆರೆಮನೆಗಳಲ್ಲಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮೊಳಗುತ್ತಿದ್ದ ಈ ಕ್ರಾಂತಿಗೀತೆ ಬ್ರಿಟಿಷ್ ಆಡಳಿತದ ಕಿವಿಗೂ ಬಿದ್ದಿತ್ತು. ಬ್ರಿಟಿಷರ ಪರವಾಗಿ ದೇಶೀಯ ಸಂಸ್ಥಾನಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ರೆಸಿಡೆಂಟ್ ’ರಾಜದ್ರೋಹದ ವಸ್ತುವನ್ನು ಪ್ರಕಟಿಸಿದ್ದಕ್ಕಾಗಿ’ ಎಂದು ವಿಶ್ವಕರ್ಣಾಟಕ ಪತ್ರಿಕೆಯ ಸಂಪಾದಕರಿಗೆ ನೋಟೀಸು ಕೊಟ್ಟೇಬಿಟ್ಟ! ಪಾಂಚಜನ್ಯವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಲು ಹಾಗೂ ಅದರಲ್ಲಿರುವ ರಾಜದ್ರೋಹದ ವಿಷಯವನ್ನು ತೋರಿಸಲು ಮೈಸೂರು ಸರ್ಕಾರದ ಅಧಿಕೃತ ಭಾಷಾಂತರ ಇಲಾಖೆಗೆ ಕಳುಹಿಸಲಾಯಿತು. ಆದರೆ, ಅಲ್ಲಿ ಭಾಷಾಂತರಕಾರರಾಗಿದ್ದವರು ಸಿ.ಕೆ.ವೆಂಕಟರಾಮಯ್ಯ ಎಂಬ ದೇಶ ಭಕ್ತರು! ಅವರು ಪಾಂಚಜನ್ಯವನ್ನು ಭಾಷಾಂತರಿಸಿ ಅದರಲ್ಲಿ ಸಾಮಾನ್ಯವಾದ ದೇಶಭಕ್ತಿಯ ವಿಚಾರವಿದೆಯೆಂದೂ ಯಾವ ದೇಶವನ್ನಾಗಲಿ ಸರ್ಕಾರವನ್ನಾಗಲಿ ಜನಾಂಗವನ್ನಾಗಲಿ ಹೆಸರಿಸಿಲ್ಲವೆಂದೂ, ಆದ್ದರಿಂದ ಕಾನೂನು ಪ್ರಕಾರಕ್ಕೆ ಅದು ಒಳಗಾಗುವಂತಿಲ್ಲವೆಂದೂ ಉತ್ತರ ನೀಡಿದ್ದರು.
3 comments:
ಸತ್ಯ ಸರ್,
ಕುವೆಂಪು ಅವರ ಕವನ ಲೇಖನಗಳ ಪರಿಚಯ ಬಲು ಸೊಗಸಾಗಿ ಮೂಡಿಬರುತ್ತಿದೆ. ರಾಷ್ಟ್ರಕವಿಯ ಬಗ್ಗೆ ನಮಗೆ ತಿಳಿಯದ ಅದೆಷ್ಟೋ ವಿಚಾರಗಳು ನಿಮ್ಮ ಲೇಖನಗಳಿಂದಾಗಿ ತಿಲಿಯುತ್ತಿವೆ. ನಿಮ್ಮ ಈ ಪ್ರಯತ್ನಕ್ಕೆ Hats up!!!
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.
ಸತ್ಯ ಸರ್,
ಕುವೆಂಪು ರವರು ನಮ್ಮ ಜೊತೆಗಿಲ್ಲದಿದ್ದರೂ ಅವರು ಬಿಟ್ಟು ಹೋದ ಆಸ್ತಿ ಕನ್ನಡಿಗರಿಗೆ ಕುಳಿತು ತಿಂದರೂ ಖಾಲಿಯಾಗದಷ್ಟಿದೆ....ಮಹಾನ್ ಕವಿಗೆ ಮತ್ತೊಮ್ಮೆ ನಮನ....ಉತ್ತಮ ಲೇಖನ...
ಭಾರತದಲ್ಲಿ ಕ್ರಾಂತಿಪುರುಷರೆಂದರೆ ಭಗತ್, ಸುಖ್ದೇವ್, ರಾಜ್ಗುರು, ಅಜಾದ್ ಮಾತ್ರ ಎಂದರಿತಿದ್ದೆ.
ಸ್ವಾತಂತ್ರ್ಯ ಹೋರಾಟವೆಂದರೆ, 1757, 1857ರ ಯುದ್ಧ, ಗಾಂಧಿ ಚಳುವಳಿ ಎಂದು ತಿಳಿದಿದ್ದೆ.
ಈ ಲೇಖನ ಸ್ವಾತಂತ್ರ್ಯದ ಕ್ರಾಂತಿ ಚರಿತ್ರೆಯನು ಅರಿಯಲು ಪ್ರೇರೇಪಿಸಿತು
Post a Comment