Friday, January 31, 2014

ಕಥೆ ಹೇಳೊ ತಾತಯ್ಯ

ಸಂಕ್ರಾಂತಿಯ ಮುನ್ನಿನ ದಿನಗಳು. ಇಡೀ ಜಗತ್ತನ್ನು ಕಬಳಿಸಿದಂತೆ ಕಾಣುವ ಮಂಜು. ಚಳಿಗೆ ಕೈಕಾಲುಗಳೆಲ್ಲ ಮರುಗಟ್ಟಿ ಹೋಗುವಂತಹ ವಾತಾವರಣ. ಆದರೆ ತಾತಯ್ಯ ಮಾತ್ರ ರಾಶಿ ಕಣದಲ್ಲಿ ಮಲಗುವ ತನ್ನ ವಾರ್ಷಿಕ ಕಾರ್ಯಕ್ರಮವನ್ನು ನಿಲ್ಲಿಸುವನಲ್ಲ. ನಾನು ಚಿಕ್ಕವನಾಗಿದ್ದಾಗಲಿಂದಲೂ ಈ ತಾತಯ್ಯ ತನ್ನ ಅವಿಭಕ್ತ ಕುಟುಂಬದ ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಕಣದ ಮೂಲೆಯಲ್ಲಿ ಬೆಂಕಿ ಕಾಯಿಸುತ್ತಾ, ಕಥೆ ಹೇಳುತ್ತಾ ರಂಜಿಸುವ ದೃಶ್ಯವನ್ನು ನೋಡುತ್ತಿದ್ದೇನೆ. ಆತನಿಗಿನಿತೂ ಬೇಸರವಿಲ್ಲ. ತನ್ನ ಕಥೆಯನ್ನು ಆರಂಭಿಸುತ್ತಲೇ, ತನ್ನೊಂದಿಗೆ ಕಥೆ ಕೇಳುವವರನ್ನೂ ಕಣ, ಮನೆ, ಊರು ಹೀಗೆ ಇಡೀ ಜಗತ್ತನ್ನೇ ಬಿಟ್ಟು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಾನೆ. ಶತಕದ ಅಂಚಿನಲ್ಲಿರುವ ವಯೋವೃದ್ಧ ತಾತಯ್ಯ ಹತ್ತು ಮಕ್ಕಳ ತಂದೆ. ತನ್ನ ಮುಂದಿನ ನಾಲ್ಕು ತಲೆಮಾರುಗಳನ್ನು ಕಂಡವನು. ಆತನ ಕಿರಿಯ ಮಗನ ಕಿರಿಯ ಮಗ ನಾನು. ಚಿಕ್ಕಂದಿನಿಂದಲೂ ಅಷ್ಟೆ. ನನ್ನನ್ನು ಕಂಡರೆ ವಿಶೇಷ ಅಕ್ಕರೆ. ಆತ ಹೇಳುತ್ತಿದ್ದ ಕಥೆಗಳನ್ನು ಹೆಚ್ಚು ಉತ್ಸುಕತೆಯಿಂದ ಕೇಳುತ್ತಿದ್ದವನು ನಾನು. ಈಗೀಗ ಊರ ಮಕ್ಕಳ ಬಾಯಲ್ಲಿ ‘ಕಥೆ ಹೇಳೊ ತಾತಯ್ಯ’ನಾಗಿ ಮೊದಲಿಗಿಂತಲೂ ಹೆಚ್ಚಾಗಿ ಪ್ರಚಲಿತದಲ್ಲಿದ್ದಾನೆ. ತಾತಯ್ಯನ ಮಕ್ಕಳು ಮೊಮ್ಮಕ್ಕಳು  ಬಹುತೇಕ ಮಂದಿ ಉದ್ಯೋಗ ನಿಮಿತ್ತವಾಗಿಯೋ ಮತ್ತಾವುದೊ ಕಾರಣದಿಂದಾಗಿಯೋ ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡಿದ್ದಾರೆ. ಆದರೂ ನಲವತ್ತಕ್ಕೆ ಇಳಿಯದ ಸಂಸಾರದ ಸದಸ್ಯರೆಲ್ಲರೂ ತಾತಯ್ಯನ ಯಜಮಾನಿಕೆಯನ್ನು ಅನಿವಾರ್ಯವೆಂಬಂತೆ ಒಪ್ಪಿಕೊಂಡಿದ್ದಾರೆ.
ನಾನು ಕಳೆದ ಬಾರಿ ಊರಿಗೆ ಹೋದಾಗ ತಾತಯ್ಯ ಆಗಾಗ ಹೇಳುತ್ತಿದ್ದ ನಮ್ಮ ವಂಶದ ಮೂಲಪುರುಷನ ಕಥೆಯನ್ನು ಹೇಳಬೇಕೆಂದು ತಾತಯ್ಯನಲ್ಲಿ ಕೇಳಿದ್ದೆನಾದರೂ, ಕೇಳಲು ನನಗಾಗಲಿ ಹೇಳಲು ತಾತಯ್ಯನಿಗಾಗಲಿ ಬಿಡುವಾಗಿರಲಿಲ್ಲ. ಆದರೆ ಈ ಬಾರಿ ಕಣಗಾಲಕ್ಕೆ ಸರಿಯಾಗಿ ಊರಿಗೆ ಹೋಗಿದ್ದರಿಂದ, ತಾತಯ್ಯನೇ ‘ರಾತ್ರಿ ನಮ್ಮ ಮೂಲಪುರುಷನ ಕಥೆ ಹೇಳುತ್ತೇನೆ’ ಎಂದು ನಾನು ಹೋದ ತಕ್ಷಣ ಹೇಳಿಬಿಟ್ಟಿದ್ದ. ತಾತಯ್ಯ ಮಾತಿಗೆಂದೂ ತಪ್ಪಿದವನಲ್ಲ. ಈಗಲೂ ಸುತ್ತಮುತ್ತಲ ಊರಿನವರು ತಾತಯ್ಯನನ್ನು ‘ಧರ್ಮರಾಯ’ನೆಂದು ಕರೆಯುವುದನ್ನು ಕಂಡಾಗ ನನಗೆ ಖುಷಿಯಾಗುತ್ತದೆ. ನನಗನ್ನಿಸುತ್ತದೆ, ನನ್ನ ತಾತಯ್ಯನಿಗೆ ಮಾತಿಗೆ ತಪ್ಪಲೇ ಬೇಕಾದಂತ ಪರಿಸ್ಥಿತಿ ಬಂದೇ ಇಲ್ಲವೆಂದು. ಏಕೆಂದರೆ ತಾತಯ್ಯನ ಮನಸ್ಸೇ ಅಂತಹವುದು. ಅತಿಯಾಸೆಯಾಗಲಿ ದುಬಾರಿ ಕನಸುಗಳಾಗಲಿ ಇಲ್ಲದ ತಾತಯ್ಯನದು ಕೆಲವೊಮ್ಮೆ ಗಾಂಧಿಯನ್ನೂ ಮೀರಿಸುವಂತ ಸರಳತೆ.
ಸಂಜೆ ಏಳುಏಳೂವರೆಗಲ್ಲ ಊಟ ಮುಗಿಸಿದ ತಾತಯ್ಯ ಕಣಕ್ಕೆ ಹೊರಟು ನಿಂತಾಗ ಹತ್ತಾರು ಮಕ್ಕಳು ಅವನ ದಾರಿ ಹಿಡಿಯಲು ತುದಿಗಾಲಲ್ಲಿ ಕಾಯುತ್ತಿದ್ದವು. ನನ್ನ ಊಟ ಮುಗಿಯುತ್ತಲೆ, ಹೊಸದಾಗಿ ಕೊಂಡುತಂದಿದ್ದ ಒಂದು ಕಂಬಳಿಯನ್ನು ನನಗೆ ಕೊಡುತ್ತ ‘ಹೋಗಾನ’ ಎಂದ. ನಾವು ಕಣದ ಹತ್ತಿರ ಬರುವಷ್ಟರಲ್ಲಿ ಊರಿನ ಇನ್ನಿತರ ಕೆಲವು ಮಕ್ಕಳು ಮತ್ತು ದೊಡ್ಡವರು ಬೆಂಕಿ ಕಾಯಿಸುತ್ತಾ ಕಾಯುತ್ತಿದ್ದರು. ಕುಶಲೋಪರಿಗಳಾದ ತಕ್ಷಣವೇ ತಾತಯ್ಯ ಕಥೆ ಹೇಳುವುದಕ್ಕೆ ಚಡಪಡಿಸ ತೊಡಗಿದ. ಅದನ್ನು ಮನಗಂಡು ನಾನು ಒಂದೇಒಂದು ಪ್ರಶ್ನೆಯನ್ನು ಆತನ ಮುಂದಿಟ್ಟೆ. ‘ತಾತಯ್ಯ ಈ ವಯಸ್ಸಿನಲ್ಲಿ ನಿನಗೆ ಎಂದೂ ಈ ಸಂಸಾರದ ಭಾರ ಸಾಕು. ಸನ್ಯಾಸಿಯಾಗಬೇಕು. ದೇವರ ಪಾದ ಸೇರಬೇಕು. ಎಂದು ಅನ್ನಿಸಿಲ್ಲವೆ?’ ಎಂದ ನನ್ನ ಮುಖವನ್ನೇ ಮುಗುಳು ನಗುತ್ತಾ ನೋಡಿದ ತಾತಯ್ಯ ‘ನಿನ್ನ ಪ್ರಶ್ನೆಗೆ ಈ ಕಥೆಯಲ್ಲಿಯೇ ಉತ್ತರವಿದೆ. ಕೇಳು’ ಎಂದು ಕಥೆ ಹೇಳಲು ಪ್ರಾರಂಭಿಸಿದ. ಆವರಿಸಿದ ಹಿಮದ ನಡುವೆ ಚಟಿಲ್ ಚಟಿಲ್ ಎಂದು ಬೆಂಕಿಯ ನಡುವೆ ಬೆಳಗಿ ಬೂದಿಯಾಗುತ್ತಿದ್ದ ಹುಚ್ಚೆಳ್ಳು ಕಡ್ಡಿಯ ಹಿಂಬಾಗದಲ್ಲಿ ಹೊರಡುತ್ತಿದ್ದ ಹೊಗೆಯನ್ನು ಕ್ಷಣಮಾತ್ರದಲ್ಲಿ ತನ್ನ ತೆಕ್ಕೆಗೆ ತಗೆದುಕೊಳ್ಳುತ್ತಿದ್ದ ಹಿಮರಾಶಿಯಂತೆ ಕಥೆ ನಮ್ಮೆಲ್ಲರನ್ನೂ ತನ್ನ ಗರ್ಭದೊಳಗೆ ಸೇರಿಸಿಕೊಳ್ಳುತ್ತಾ ಸಾಗಲಾರಂಭಿಸಿತು.
***** ****  ***   **    *    **   ***  **** *****
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆತ ಊರ ಗೌಡನೂ ಆಗಿದ್ದ. ಆತನೇ ನಮ್ಮ ವಂಶದ ಮೂಲಪುರುಷ ಮತ್ತು ಈ ಕಥೆಯ ನಾಯಕ. ರೈತಾಪಿ ಜನಗಳು ಕಾಲಕಾಲಕ್ಕೆ ಆಗುತ್ತಿದ್ದ ಮಳೆ ಬೆಳೆಯಿಂದಾಗಿ ಉಂಡುಟ್ಟು ಸುಖವಾಗಿ ಕಾಲ ಕಳೆಯುತ್ತಿದ್ದರು. ನಮ್ಮ ಮೂಲಪುರುಷನ ಹೆಸರು ಉತ್ತಮಗೌಡ. ಊರಿನ ಮೇಲೊಮ್ಮೆ ಶತ್ರುಗಳು ದಾಳಿ ಮಾಡಿದಾಗ, ಊರಿನವರ ಬೆಂಬಲದಿಂದ ಅವರನ್ನೆಲ್ಲ ಸದೆಬಡಿದು ರಾಜನಿಗೆ ಒಪ್ಪಿಸಿದ, ಗೌಡನಿಗೆ ಮಹರಾಜರು ಪುರುಷಸಿಂಹ ಅಂತ ಬಿರುದು ಕೊಟ್ಟಿದ್ದರು. ಹತ್ತು ತಲೆಮಾರು ಕೂತು ತಿಂದರೂ ಕರಗದ ಬಾರೀ ಆಸ್ತಿ. ಮನಮೆಚ್ಚಿದ ಮಡದಿ ಪದ್ಮವ್ವ. ಒಬ್ಬನೇ ಮಗ ರಾಯಗೌಡ. ಊರವರ ಕಣ್ಣಲ್ಲಿ ಸಾಕ್ಷತ್ ದೇವರ ಸಮಾನನಾದ ಗೌಡನು, ಅದಕ್ಕೆ ತಕ್ಕಂತೆ ಬಾಳುತ್ತಿದ್ದನು. ಮಗನಿಗೆ ಐದು ವರ್ಷಗಳಾದಾಗ, ಆತನಿಗೆ ಭಾರೀ ಅದ್ದೂರಿಯಾಗಿ ಜನ್ಮಮಹೋತ್ಸವವನ್ನು ಮಾಡಿದ. ನೂರಾರು ಜನ ಬಡವರಿಗೆ, ಸಾಧುಸಂತರಿಗೆ, ಬ್ರಾಹ್ಮಣರಿಗೆ ಕೈತುಂಬ ದಾನ ಮಾಡಿದ. ಎಲ್ಲವೂ ಸುಸೂತ್ರವಾಗಿ ನಡೆದು ಗೌಡನಲ್ಲಿ ಒಂದು ರೀತಿಯ ಧನ್ಯತೆಯ ಭಾವ ನೆಲೆಗೊಂಡಿದ್ದಾಗಲೇ ಹೆಂಡತಿ ಪದ್ಮವ್ವ ಅಕಾಲ ಮರಣಕ್ಕೆ ತುತ್ತಾದಳು. ಅದನ್ನು ಕಂಡ ಗೌಡ ಕಂಗೆಟ್ಟು ಹೋದ. ತಬ್ಬಲಿಯಾದ ಮಗನನ್ನು ತಬ್ಬಿಕೊಂಡು ಗೋಳಾಡಿದ. ಆಗ ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು ಆತನಿಗೆ ಸಮಾಧಾನ ಮಾಡಿದರು. ‘ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಅವರು ಸತ್ತರು. ನಾಳೆ ನೀನೂ ನಾನೂ ಸಾಯಲೇಬೇಕು. ಇದೆಲ್ಲವೂ ಬರಿ ಕ್ಷಣಿಕ. ಹೆಂಡತಿ ಮಕ್ಕಳೆಂಬ ಮಾಯೆಯನ್ನು ತೊರೆ. ಆ ಭಗವಂತನಲ್ಲಿ ಮೊರೆ ಹೋಗು’ ಹೀಗೆ ಇನ್ನೂ ಏನೇನೊ ಹೇಳಿದರಂತೆ. ಎಲ್ಲವನ್ನು ಕೇಳಿಸಿಕೊಂಡ ಗೌಡ, ‘ಸ್ವಾಮಿ ನೀವು ಹೇಳುವುದೇನೊ ಸರಿ. ಆದರೆ ಈ ಐದು ವರ್ಷದ ಕಂದನಿಗೆ ಗತಿ ಯಾರು? ನಾನು ದೇವರನ್ನು ಸೇರುವುದಕ್ಕೆ ಏನೂ ಅರಿಯದ ಈ ಕಂದನನ್ನು ಅನಾಥನನ್ನಾಗಿ ಮಾಡಲೆ? ಅದಾಗದು. ನಾನೀಗ ತಂದೆಯ ಸ್ಥಾನದಲ್ಲಿದ್ದೇನೆ. ಅದನ್ನು ನಿಭಾಯಿಸಲೇ ಬೇಕು. ಕರ್ತವ್ಯ ವಿಮುಖನಾಗುವದನ್ನು ಯಾವ ದೇವರೂ ಮೆಚ್ಚಲಾರ. ಅಲ್ಲವೆ?’ ಅಂದನಂತೆ. ಅದಕ್ಕೆ ಆ ಸನ್ಯಾಸಿಯು, ‘ಅಯ್ಯಾ ಗೌಡ ನೀನು ಒಂದು ಕ್ಷಣ ಈ ಕ್ಷಣಿಕವಾದ ಜಗತ್ತಿನಿಂದ ದೂರವಾಗಿ ಯೋಚಿಸು. ನಿಜವಾಗಿಯೂ ಭಗವಂತನನ್ನು ಕಾಣುತ್ತೀಯ. ನನಗೆ ಗೊತ್ತು ನಿನಗೆ ನಿನ್ನ ಮಗನನ್ನು ಬಿಟ್ಟು ಬರಲು ಕಷ್ಟವಾಗುತ್ತದೆ ಎಂದು. ಆದರೆ ಈ ಸಣ್ಣ ಕಷ್ಟಕ್ಕೇ ಹೆದರಿ ಇದಕ್ಕಿಂತ ನೂರು ಸಾವಿರ ಪಟ್ಟು ಕಷ್ಟವನ್ನು ತಂದುಕೊಳ್ಳುತ್ತೀಯಾ? ಸಂಸಾರವೆಂಬುದು ಬಲು ಕಷ್ಟ. ನಿನ್ನ ಮಗನು ನಿನ್ನ ಮಗನಲ್ಲ. ಆತ ದೇವರ ಮಗ. ಕೊಟ್ಟ ದೇವರು ಕಾಯುವುದಿಲ್ಲವೆ? ಈಗ ನನ್ನ ವಿಷಯವನ್ನೇ ನೋಡು. ತೊಟ್ಟಿಲ ಕೂಸಿಗೆ ರಾಜ್ಯಪಟ್ಟವನ್ನು ಕಟ್ಟಿ ಸನ್ಯಾಸಿಯಾದವನು. ಇಗೊ. ನನ್ನ ಜೊತೆಯಲ್ಲಿ ಬಂದಿರುವ ಈ ಶಿಷ್ಯ, ಪೂರ್ವಾಶ್ರಮದಲ್ಲಿ ನನ್ನ ಮಗನಾಗಿದ್ದವನು. ಆತನೂ ಅಷ್ಟೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಪತ್ನಿಯ ಗರ್ಭದಲ್ಲಿದ್ದ ಕೂಸಿಗೇ ರಾಜ್ಯಪಟ್ಟವನ್ನು ಕಟ್ಟಿ ನನ್ನ ಹಿಂದೆ ಸನ್ಯಾಸಿಯಾಗಿ ಮೋಕ್ಷ ಸಾಧನೆ ಮಾಡುತ್ತಿದ್ದಾನೆ’ ಎಂದಾಗ ಅಚ್ಚರಿಗೊಂಡ ಗೌಡನು ‘ಸ್ವಾಮಿ ನೀವು ಹೇಳಿದ ಮಾತುಗಳಿಂದ ನೀವು ಮಹಾನ್ ವ್ಯಕ್ತಿಗಳಂತೆ ತೋರುತ್ತಿರುವಿರಿ. ನೀವು ಯಾರು? ಎಲ್ಲಿಯವರು? ನೀವೇನೊ ವೃದ್ದರು. ಆದರೆ ಈ ಯುವಕನು ಈ ಏರುಜವ್ವನದ ಕಾಲದಲ್ಲಿ ಏಕೆ ಸನ್ಯಾಸಿಯಾಗಿದ್ದಾರೆ? ನಿಮ್ಮ ಅಭ್ಯಂತರವಿಲ್ಲದಿದ್ದಲ್ಲಿ ತಿಳಿಸಿ. ನಿಮ್ಮ ಕಥೆಯನ್ನು ಕೇಳಿಯಾದರೂ ಈ ದುಃಖವನ್ನು ಮರೆಯುತ್ತೇನೆ’ ಎಂದು ಗೌಡನು ಪ್ರಾರ್ಥಿಸಿದ. ಅದಕ್ಕುತ್ತರವಾಗಿ ಆ ಹಿರಿಯ ಸನ್ಯಾಸಿಯು ‘ಗೌಡನೇ ಕೇಳು. ನನ್ನ ಕಥೆಯಿಂದ ನಿನ್ನ ದುಃಖ ಶಮನವಾಗುವದಾದರೆ ಆಗಲಿ. ಅಥವಾ ನಿನಗೆ ಈ ಕ್ಷಣಿಕ ಜಗತ್ತಿನ ಮೇಲಿರುವ ವ್ಯಾಮೋಹವೂ ಕಳೆಯಲಿ’ ಎಂದು ಕಥೆಯನ್ನು ಹೇಳಲು ಪ್ರಾರಂಭಿಸಿದನು.
***** ****  ***   **    *    **   ***  **** *****
ಪೂರ್ವಾಶ್ರಮದಲ್ಲಿ ನಾನು ಒಂದು ರಾಜ್ಯದ ರಾಜನಾಗಿದ್ದವನು. ವಿಶಾಲವಾದ ರಾಜ್ಯ. ಅದ್ದೂರಿಯಾದ ರಾಜಧಾನಿ. ಏಳು ಜನ ಹೆಂಡತಿಯರು. ಎಲ್ಲರೂ ಸುಂದರಿಯರೆ. ಆದರೆ ಲಗ್ನವಾಗಿ ಆರೇಳು ವರ್ಷಗಳೇ ಕಳೆದರು ಮಕ್ಕಳಾಗಲಿಲ್ಲ. ಇದೊಂದು ಚಿಂತೆಯನ್ನು ಬಿಟ್ಟು ಇನ್ನವುದೇ ಕೊರತೆ ನಮಗಿರಲಿಲ್ಲ. ರಾಜಗುರುಗಳ, ಹಿರಿಯರ ಆಸೆಯಂತೆ, ನಾನೂ ಪಟ್ಟದ ರಾಣಿಯೂ ನಲವತ್ತೆಂಟು ದಿನಗಳ ಕಾಲ ದೀಕ್ಷೆಯಲ್ಲಿದ್ದು ಸಂತಾನಲಕ್ಷ್ಮಿಯನ್ನು ಪೂಜಿಸಿದೆವು. ಆ ಸಂದರ್ಭದಲ್ಲಿ ನನ್ನ ರಾಣಿಯು ತನಗೆ ಬಿದ್ದ ಕನಸಿನ ವಿಚಾರವನ್ನು ಹೇಳಿ ತಮಗೆ ಪುತ್ರಸಂತಾನವಾಗುವುದಾಗಿ ದೇವದೂತನೊಬ್ಬನಿಂದ ಭರವಸೆ ಸಿಕ್ಕಿತು ಎಂದು ಹೇಳಿದಳು. ಆದರೆ ಆಕೆ ಕನಸಿನ ಪೂರ್ಣವಿಚಾರವನ್ನು ಯಾರಿಗೂ ಹೇಳಲಿಲ್ಲವೆಂದು ನಂತರ ತಿಳಿಯಿತು. ‘ನಿನ್ನ ಅಫೇಕ್ಷೆಯಂತೆ ನಿನಗೆ ಪುತ್ರಸಂತಾನವಾಗುವುದು. ಆದರೆ ಆ ವರಪುತ್ರನ ಮುಖದರ್ಶನಾದ ಕೂಡಲೇ ನಿನ್ನ ಪತಿಯು ಸಂಸಾರ ವೈರಾಗ್ಯದಿಂದ ಸನ್ಯಾಸಿಯಾಗುತ್ತಾನೆ. ಆ ಸನ್ಯಾಸಿಯೇ ತನ್ನ ತಂದೆಯೆಂದು ತಿಳಿದ ಕೂಡಲೆ ನಿನ್ನ ಮಗನೂ ಸನ್ಯಾಸಿಯಾಗುತ್ತಾನೆ’ ಎಂಬುದು ಆಕೆಗೆ ಕನಸ್ಸಿನಲ್ಲಿ ಸಿಕ್ಕ ಭರವಸೆಯ ಮಾತುಗಳು ಎಂದು. ಆಕೆಗೆ ಪುತ್ರಸಂತಾನವಾಗುತ್ತದೆ ಎಂದು ಸಂತೋಷವಾದರೂ, ಗಂಡನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ತನ್ನ ಅಂತಃಪುರದ ಕೆಳಗೆ ಗೌಪ್ಯವಾಗಿ ಒಂದು ನೆಲಮಾಳಿಗೆಯನ್ನು ನಿರ್ಮಿಸಿಸಿಕೊಂಡು, ತಾನು ಗರ್ಭವತಿ ಎಂದು ತಿಳಿದಾಕ್ಷಣ ತನ್ನ ನಂಬಿಕೆಯ ದಾಸಿಯೊಂದಿಗೆ ನೆಲಮನೆಯನ್ನು ಸೇರಿ ಯಾರಿಗೂ ತಿಳಿಯದಂತೆ ಇದ್ದುಬಿಟ್ಟಳು. ದಾಸಿಯೂ ಅಷ್ಟೆ. ತನ್ನ ಒಡತಿಯ ಆಸೆಯಂತೆ ಯಾರಿಗೂ ಹೇಳದೆ, ರಾಣಿಗೂ ಹೊರ ಜಗತ್ತಿಗೂ ಸೇತುವೆಯಾಗಿದ್ದಳು. ಎಷ್ಟು ದಿನವೆಂದು ಹೀಗಿರಲು ಸಾದ್ಯ. ಹೆಣ್ಣು ಎಷ್ಟೆಂದರೂ ಚಂಚಲೆ. ಅವಳಿಗೆ ಮತ್ತೊಂದು ಹೆಸರೇ ಅದು. ಶಿಶುಜನನವಾಗಿ ಹದಿನೈದು ದಿನಗಳಾದ ಮೇಲೆ ದಾಸಿಯು ನೀರು ತರಲು ಹೋಗಿದ್ದಾಗ ಯಾರಿಗೂ ಹೇಳಬೇಡವೆಂದು ತನ್ನ ಗೆಳತಿಯ ಕೂಡ ರಾಣಿಗೆ ಪುತ್ರಸಂತಾನವಾದ ವಿಷಯವನ್ನು ಬಾಯಿ ಬಿಟ್ಟಳು.
ಆದರೆ ಅಲ್ಲಿಗೆ ಬಡತನದಿಂದ ಹಸಿವಿನಿಂದ ಕಂಗೆಟ್ಟು ನೀರು ಕುಡಿಯಲು ಬಂದಿದ್ದ ಬ್ರಾಹ್ಮಣನೊಬ್ಬ ಅವರ ಮಾತುಗಳನ್ನು ಕೇಳಿಸಿಕೊಂಡು, ‘ಇನ್ನು ತನ್ನ ಬಡತನ ಅಳಿಯಿತು’ ಎಂದುಕೊಂಡು ಹೇಗೊ ಒಂದು ಮಾವಿನ ಹಣ್ಣನ್ನು ಸಂಪಾದಿಸಿಕೊಂಡು, ಅರಮನೆಗೆ ಬಂದು ರಾಜನಿಗೆ ಫಲವನ್ನಿತ್ತು ಆತನಿಗೆ ಗಂಡುಮಗುವಾಗಿರುವ ವಿಚಾರವನ್ನು ತಿಳಿಸಿದ. ರಾಜನಿಗೆ ಆಶ್ಚರ್ಯ! ಆದರೆ ಬ್ರಾಹ್ಮಣನ ಮಾತನ್ನು ತಳ್ಳಿಹಾಕುವಂತಿರಲಿಲ್ಲ. ಆತನೂ ಪುತ್ರಾಫೇಕ್ಷೆಯಿದ್ದವನಲ್ಲವೆ? ‘ನನಗೆ ತಿಳಿಯದ ವಿಚಾರ ನಿನಗೆ ಹೇಗೆ ತಿಳಿಯಿತು. ಸುಳ್ಳು ಹೇಳುತ್ತಿದ್ದೀಯ’ ಎನ್ನಲು, ಬ್ರಾಹ್ಮಣನು ನೆಲಮಾಳಿಗೆಯಲ್ಲಿ ಹಿರಿಯ ರಾಣಿ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಬೇಕಾದರೆ ಪರೀಕ್ಷಿಸಿ ನೋಡಬಹುದು ಎಂದ. ಪರೀಕ್ಷಿಸಿ ನೋಡಿ ಬಂದವರು ಬ್ರಾಹ್ಮಣ ಹೇಳಿದ್ದು ನಿಜವೆಂದರು. ಬ್ರಾಹ್ಮಣನಿಗೆ ಜೀವನಾಶ್ರಯಕ್ಕೆ ಬೇಕಾದಷ್ಟು ದ್ರವ್ಯಗಳನ್ನು ಬಹುಮಾನವಾಗಿ ನೀಡಲಾಯಿತು.
ಸಂತೋಷಭರಿತನಾದ ರಾಜ ರಾಣಿಯನ್ನು ಅಭಿನಂದಿಸಿ, ಮಗುವನ್ನು ನೋಡಲು ಕಾತುರದಿಂದ ಹೋದ. ಮಗುವನ್ನೂ ನೋಡಿದ! ‘ನನ್ನ ಕೆಲಸವಾಯಿತು. ಈ ರಾಜ್ಯಕ್ಕೊಬ್ಬ ಉತ್ತರಾಧಿಕಾರಿ ಬಂದಾಯಿತು. ನನ್ನ ವಂಶವೂ ಮುಂದುವರೆಯುತ್ತದೆ’ ಎಂದುಕೊಂಡು ಸನ್ಯಾಸವನ್ನು ಸ್ವೀಕರಿಸಲು ಸಿದ್ದನಾದ. ರಾಣಿಯರು ಕಾಲಿಡಿದು ಬೇಡಿದರು. ಪುರಜನರು ಅಡ್ಡಿಪಡಿಸಿದರು. ಆದರೆ ಅದಾವುದನ್ನು ಗಣಿಸದೆ ರಾಜ ಸನ್ಯಾಸಿಯಾಗಿ ಅರಮನೆಯನ್ನೂ ರಾಜ್ಯಕೋಶಗಳನ್ನೂ ತೊರೆದು ಹೊರಟುಹೋದ. ಅತ್ತ ರಾಣಿಗೆ ರಾಜನ ಮೇಲೆ ವಿಪರೀತ ಕೋಪವುಂಟಾಯಿತು. ಮಗುವಿನ ಮುದ್ದಾದ ಮುಖವನ್ನು ನೋಡಿದ ಮೇಲಾದರೂ ಆತ ನಿಲ್ಲಬಹುದು ಎಂದುಕೊಂಡಿದ್ದಳು. ತಾಯಿಮಗುವನ್ನು ಅನಾಥರನ್ನಾಗಿಸಿ ಹೋದ ರಾಜನನ್ನು ‘ಕೈಲಾಗದವನು’ ಎಂದುಕೊಂಡು ಇಡೀ ರಾಜ್ಯಭಾರವನ್ನು ತನ್ನ ಕೈಗೆ ತಗೆದುಕೊಂಡಳು. ಒಂದು ಮೂವತ್ತೆರಡು ಅಂತಸ್ತಿನ ಸೌಧವನ್ನು ಕಟ್ಟಿಸಿ ಅದರಲ್ಲಿ ಸಕಲ ಸೌಕರ್ಯಗಳನ್ನು ಸಿದ್ಧಪಡಿಸಿದಳು. ರಾಜಕುಮಾರನ ಆಟಪಾಠಗಳಿಗೆ, ವಿಹಾರ ವಿನೋದಗಳಿಗೆಲ್ಲವಕ್ಕೂ ಅಲ್ಲಿಯೇ ವ್ಯವಸ್ಥೆ ಮಾಡಿದಳು. ಆತನ ವಿದ್ಯಾಭ್ಯಾಸಕ್ಕೂ ಏರ್ಪಾಡಾಯಿತು. ಅದರ ಜೊತೆಗೆ ಆ ಭವನದ ಸುತ್ತ ಯಾವ ಸಾಧು ಸನ್ಯಾಸಿಗಳೂ ಬರದಂತೆ ಕಟ್ಟೆಚ್ಚರ ವಹಿಸಿದಳು!
ಹೀಗೆ ಹದಿನೆಂಟು ವಸಂತಗಳನ್ನು ಕಳೆದ ರಾಣಿ ಅತ್ಯಂತ ಚೆಲುವೆಯರಾದ ಹತ್ತು ಜನ ಹೆಣ್ಣುಮಕ್ಕಳನ್ನು ತಂದು ರಾಜಕುಮಾರನಿಗೆ ಮದುವೆ ಮಾಡಿದಳು. ಕುಮಾರನು ಅವರೆಲ್ಲರೊಂದಿಗೆ ಶೃಂಗಾರ ವಿಹಾರ ವಿನೋದಗಳಲ್ಲಿ ಕಾಲ ಕಳೆಯುತ್ತಿದ್ದನು. ಹೀಗೆ ಆರು ತಿಂಗಳು ಕಳೆಯಲು ಒಂದು ದಿನ ಸಂಜೆ ಕುಮಾರನು ತನ್ನ ಹೆಂಡತಿಯರೊಂದಿಗೆ ಉಪ್ಪರಿಗೆಯ ಮೇಲೆ ಸರಸವಾಗಿ ಕಾಲ ಕಳೆಯುತ್ತಿದ್ದಾಗ ರಾಣಿಯೂ ಅಲ್ಲಿಗೆ ಬಂದಳು. ಆಗ ಅನತಿ ದೂರದಲ್ಲಿ ವ್ಯಕ್ತಿಯೊಬ್ಬ ನಡೆದು ಬರುತ್ತಿರುವದನ್ನು ಕಂಡ ರಾಜಕುಮಾರ, ‘ಅದಾರು? ಇಷ್ಟೊಂದು ವಿಚಿತ್ರವಾಗಿದ್ದಾನಲ್ಲ. ಈ ಮೊದಲು ಇಷ್ಟೊಂದು ವಿಚಿತ್ರವಾದ ಮನುಷ್ಯನನ್ನು ನಾನು ನೋಡಿಯೇ ಇಲ್ಲ’ ಎಂದು ತನ್ನ ರಾಣಿಯರನ್ನು ಕೇಳಿದ. ಅದನ್ನು ಗಮನಿಸಿದ ಆತನ ತಾಯಿ ‘ಮಗು, ಅದಾರೊ ಭಿಕ್ಷುಕ. ತಿರಿದು ತಿನ್ನುವವನು. ನಡೆಯಿರಿನ್ನು ಹೋಗೋಣ. ಊಟದ ಸಮಯವಾಗುತ್ತಿದೆ’ ಎಂದುಬಿಟ್ಟಳು. ಆಗ ಪಕ್ಕದಲ್ಲಿಯೇ ಇದ್ದ ದಾಸಿಯೊಬ್ಬಳು ‘ಇದೇನು ಮಹಾರಾಣಿಯವರೆ! ಹೀಗೆಂದು ಬಿಟ್ಟಿರಿ. ಅದು ನಿಮ್ಮ ದೇವರಲ್ಲವೆ?ನಮ್ಮ ಮಹಾರಾಜರಲ್ಲವೆ?’ ಎಂದು ರಾಣಿಯು ಸನ್ಹೆ ಮಾಡುತ್ತಿದ್ದಾಗ್ಯೂ ಕೌತುಕದಿಂದ ಕೇಳಿದಳು. ಆಗ ಕುಮಾರನು ‘ಏನೊ, ನೀವೆಲ್ಲ ನನ್ನಿಂದ ಮುಚ್ಚಿಡುತ್ತಿದ್ದೀರಿ. ಅದೇನೆಂದು ಹೇಳಿ’ ಎಂದು ಒತ್ತಾಯಿಸಿದನು. ಅದಕ್ಕೆ ಪ್ರತಿಯಾಗಿ ರಾಣಿಯು ಆತನಿಗೆ ಮುಖ ಕೊಟ್ಟು ಮಾತನಾಡದೆ ಆತನ ರಾಣಿಯರಿಗೆ ಉಪಾಯವಾಗಿ ಕರೆತನ್ನಿರೆಂದು ಹೇಳಿ ಹೊರಟು ಹೋದಳು. ಯುವರಾಣಿಯರು ಎಷ್ಟೆಷ್ಟು ಒತ್ತಾಯಿಸಿದರೂ ಕೇಳಲೊಲ್ಲದ ಕುಮಾರ ‘ನೀವು ಹೇಳುವವರಗೆ ನಾನು ಊಟ ಮಾಡುವುದರಿಲಿ, ಇಲ್ಲಿಂದ ಕದಲುವುದಿಲ್ಲ’ ಎಂದು ಹಠ ಹಿಡಿದು ಕೇಳಿದನು. ಆಗಿನಿಂದ ಸುಮ್ಮನೆ ನೋಡುತ್ತ ನಿಂತಿದ್ದ ದಾಸಿಯು ಇನ್ನು ತಡೆಯಲಾರೆನೆಂಬತೆ ‘ಸ್ವಾಮಿ ಆವರು ನಿಮ್ಮ ತಂದೆಯವರು. ನೀವು ಅವರ ಮುಖವನ್ನು ನೋಡಿದಾಕ್ಷಣ ಸನ್ಯಾಸಿಯಾಗುತ್ತೀರ ಎಂಬ ಭಯ ನಿಮ್ಮ ತಾಯಿಯವರಿಗೆ. ಅದಕ್ಕೆ ಅವರು ಏನನ್ನೂ ಹೇಳದೇ ಹೋದುದ್ದು’ ಎಂದು ಮೊದಲ್ಗೊಂಡು ಆತನ ಜನ್ಮವೃತ್ತಾಂತವನ್ನೆಲ್ಲಾ ವಿವರವಾಗಿ ಹೇಳಿಬಿಟ್ಟಳು.
ಎಲ್ಲವನ್ನು ಕೇಳಿಬಿಟ್ಟ ರಾಜಕುಮಾರನು ‘ಜೀವನ ಇಷ್ಟೊಂದು ಕ್ಷಣಿಕವೇ?’ ಎಂದು ತಪಸ್ಸಿಗೆ ಹೋಗುವುದಾಗಿ  ತನ್ನ ರಾಣಿಯರಿಗೆ ಹೇಳಿದ. ವಾರ್ತೆ ಇಡೀ ಭವನವನ್ನು ಕ್ಷಣಮಾತ್ರದಲ್ಲಿ ವ್ಯಾಪಿಸಿತು. ಓಡೋಡಿ ಬಂದ ತಾಯಿ ಪರಿಪರಿಯಾಗಿ ಮಗನಿಗೆ ಹೇಳಿದಳು. ‘ನೀನು ತಪಸ್ಸಿಗೆ ಹೋದರೆ ಈ ಚಿಕ್ಕ ವಯಸ್ಸಿನ ರಾಣಿಯರ ಗತಿಯೇನು? ನಿನ್ನ ತಂದೆ ಮಾಡಿದ ತಪ್ಪನ್ನು ನೀನೂ ಮಾಡಬೇಡ. ನನ್ನ ಮಾತನ್ನು ಕೇಳು. ನೀನು ಹೋದರೆ ಈ ವಂಶದ ಗತಿಯೇನು? ರಾಜ್ಯಕ್ಕೆ ವಾರಸುದಾರರು ಯಾರು?’ ಎಂದು ಮುಂತಾಗಿ ಮಗನನ್ನು ತಡೆಯಲು ಪ್ರಯತ್ನಿಸಿದಳು. ಯಾರ ಮಾತನ್ನೂ ಕೇಳದ ರಾಜಕುಮಾರನು, ಆಗಲೇ ಗರ್ಭವತಿಯಾಗಿದ್ದ ತನ್ನ ರಾಣಿಯೊಬ್ಬಳನ್ನು ಕರೆದು, ಅವಳ ಗರ್ಭದಲ್ಲಿದ್ದ ಕೂಸಿಗೇ ಪಟ್ಟಾಭಿಷೇಕವನ್ನು ಮಾಡಿ ತನ್ನ ತಂದೆಯನ್ನನುಸರಿಸಿ ತಪಕ್ಕೆ ನಡೆದು ಬಿಟ್ಟ.
***** ****  ***   **    *    **   ***  **** *****
ಕಥೆಯನ್ನು ಹೇಳಿ ಮುಗಿಸಿದ ಸ್ವಾಮೀಜಿಯು ‘ಈಗಲಾದರು ನೋಡು. ಈ ಜೀವನ ಎಷ್ಟೊಂದು ಕ್ಷಣಿಕವಾದುದೆಂದು. ಭಗವಂತನನ್ನು ಸೇರುವುದೊಂದೇ ನಿಜ. ಉಳಿದುದ್ದೆಲ್ಲ ಕೇವಲ ಭ್ರಮೆ’ ಎಂದನು. ಎಲ್ಲವನ್ನು ಶಾಂತವಾಗಿ ಕೇಳಿಸಿಕೊಂಡ ಗೌಡ ‘ಸ್ವಾಮಿ, ತಪ್ಪು ತಿಳಿಯಬೇಡಿ. ನೀವು ಹೇಳುವುದು ನಿಜವೇ ಆದರೂ ನನ್ನ ಮಗನನ್ನು ಒಂಟಿಯಾಗಿ ಬಿಟ್ಟುಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂದು ಅಷ್ಟೇ ಶಾಂತನಾಗಿ ಉತ್ತರಿಸಿದ. ಅದಕ್ಕುತ್ತರವಾಗಿ ಸನ್ಯಾಸಿಯು ‘ಅದು ನಿಜವೆ. ವೈರಾಗ್ಯವೆಂಬುದು ಒಳಗಿನಿಂದ ಬರಬೇಕಾದುದ್ದು. ಅದು ಹೊರಗಿನಿಂದ ತುಂಬುವಂತವುದಲ್ಲ. ನಿನ್ನಿಚ್ಛೆಯಂತೆ ಮಾಡು ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಆಶೀರ್ವದಿಸಿ ತನ್ನ ಶಿಷ್ಯನೊಡನೆ ಹೊರಟು ಹೋದನು.
ತನ್ನ ಮಗನ ಆಟ ಪಾಠ ವಿನೋದಗಳಲ್ಲಿ ಹೆಂಡತಿ ಸತ್ತು ಹೋದ ದುಖಃವನ್ನು ಮರೆತ ಗೌಡ ಮಗನಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿದನು. ಉಳಿದ ಸಮಯವನ್ನು ಊರಿನ ಜನತೆಯ ಸೇವೆಗೆಂದು ಮೀಸಲಿಟ್ಟನು. ಜನತೆಯ ಸೇವೆಯೇ ಜನಾರ್ಧನನ ಸೇವೆ ಎಂಬುದು ಅವನ ಬಾಳಿನ ನಿತ್ಯ ಮಂತ್ರವಾಯಿತು. ಮಗನೂ ಅಷ್ಟೆ. ತಂದೆಯ ಹಾಗೆಯೆ ಸತ್ಪುತ್ರನಾಗಿ ಬೆಳದು ಸಕಲವಿದ್ಯಾಪಾರಂಗತನಾದನು. ಹೀಗೆ ಹದಿನೆಂಟು ವಸಂತಗಳನ್ನು ಕಳೆದ ಉತ್ತಮ ಗೌಡನು ತನ್ನ ಮಗನಿಗೆ ಅನುರೂಪಳಾದ ಕನ್ಯೆಯನ್ನು ಹುಡುಕಿ ವೈಭವದಿಂದ ಮದುವೆ ಮಾಡಿದನು. ಊರಿನ ಜನತೆಯೆಲ್ಲವೂ ತಮ್ಮದೇ ಮನೆಯ ಮದುವೆಯ ಕೆಲಸವೆಂಬಂತೆ ಓಡಾಡಿದರು. ಸಾಧುಸಂತರುಗಳಿಗೆ ಬ್ರಾಹ್ಮಣರಿಗೆ ಕೈತುಂಬ ಧಾನಧರ್ಮಗಳನ್ನು ಮಾಡಿದನು.
ಹೀಗೆ ಕಾಲ ದೂಡುತ್ತಿದ್ದ ಗೌಡನು ಮುಂದೆ ತನ್ನ ಮಗನಿಗೆ ಹುಟ್ಟಿದ ಇಬ್ಬರು ಮಕ್ಕಳ ಜೊತೆ ಮಗುವಿನಂತೆ ಆಟವಾಡುತ್ತಾ ಊರಿನ ಜನರ ಕಷ್ಟಗಳಿಗೆ ನೆರವಾಗುತ್ತಾ ನೂರುವರ್ಷ ಬಾಳಿ ಒಂದು ದಿನ ಮರಣವನ್ನಪ್ಪಿದನು. ಸಾಯುವ ದಿನವೂ ಅಷ್ಟೇ. ‘ನನ್ನ ಸಾವಿಗಾಗಿ ಯಾರು ಅಳಬೇಡಿರೆಂತಲೂ, ನಾನು ಇರುವವರಿಗೆ ಸಂತೋಷವಾಗಿಯೇ ಇದ್ದೆ. ಸಾಯುವಾಗಲೂ ಸಂತೋಷವಾಗಿಯೇ ಸಾಯುತ್ತೇನೆ’ ಎಂದು ಹೇಳಿ ನಗುನಗುತ್ತಲೇ ಪ್ರಾಣ ಬಿಟ್ಟನಂತೆ!
ಇತ್ತ ಉತ್ತಮಗೌಡ ಸತ್ತದಿನವೇ ಅತ್ತ ಕಾಡಿನಲ್ಲಿ ಒಂದು ವಿಚಿತ್ರ ನಡೆದು ಹೋಯಿತು. ಗೌಡನಿಗೆ ಆಶೀರ್ವದಿಸಿ ಹೋಗಿದ್ದ ಸನ್ಯಾಸಿಯೂ ಮತ್ತು ಆತನ ಶಿಷ್ಯನೂ ಅನ್ನ ಅಹಾರಾದಿಗಳನ್ನು ತೊರೆದು ಉಗ್ರವಾದ ತಪಸ್ಸನ್ನು ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಹೆಬ್ಬುಲಿಯೊಂದು, ಹಸಿದು ಕಂಗಾಲಾಗಿದ್ದರಿಂದ ತಪಸ್ಸು ಮಾಡುತ್ತಿದ್ದ ಕಿರಿಯ ಸನ್ಯಾಸಿಯನ್ನು ಅಹಾರಕ್ಕಾಗಿ ಬೇಡಿತು. ಕಿರಿಯ ಸನ್ಯಾಸಿಯು ತನ್ನಲ್ಲಿ ಕೊಡಲು ಏನೂ ಇಲ್ಲವೆಂದು ಹೇಳಿ, ಬೇಕಾದರೆ ಈ ದೇಹವನ್ನೇ ತಿನ್ನು ಎಂದು ಅರ್ಪಿಸಿಕೊಂಡುಬಿಟ್ಟನು. ಹಸಿದ ಹುಲಿಯು ತಕ್ಷಣ ಆತನನ್ನು ತಿನ್ನಲಾರಂಭಿಸಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಸನ್ಯಾಸಿಯು ತನ್ನ ತಪೋಬಲದಿಂದ ಆ ಹೆಣ್ಣು ಹುಲಿಯು ಹಿಂದಿನ ಜನ್ಮದಲ್ಲಿ ತನ್ನ ಹೆಂಡತಿಯೂ ಆತನ ತಾಯಿಯೂ ಆಗಿದ್ದವಳು. ಕಳೆದ ಜನ್ಮದ ಸೇಡಿನಿಂದ ತನ್ನ ಮಗನನ್ನೇ ತಿನ್ನುತ್ತಿದೆ ಎಂದು ಭಾವಿಸಿ, ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯಿಂದ ಅದರ ತಲೆಗೆ ಹೊಡೆದು ‘ಅಯ್ಯೋ ಪಾಪಿಷ್ಟೆ. ಹೆತ್ತ ಮಗನನ್ನೇ ತಿಂದೆಯಲ್ಲ. ನೀನು ನರಕಕ್ಕೆ ಹೋಗು’ ಎಂದು ಶಪಿಸಿ, ಮತ್ತೆ ಮತ್ತೆ ಹೊಡೆದು ಕೊಂದನು. ಶವವಾಗಿ ಬಿದ್ದಿದ್ದ ಮಗನನ್ನಪ್ಪಿ ತಾನೂ ಪ್ರಾಣವನ್ನು ಬಿಟ್ಟನು.
***** ****  ***   **    *    **   ***  **** *****
ನಾಡಿನಲ್ಲಿ ಸತ್ತ ಗೌಡನೂ, ಕಾಡಿನಲ್ಲಿ ಸತ್ತ ತಂದೆ ಮಗನೂ, ಹುಲಿರೂಪದ ತಾಯಿಯೂ ದೇವಲೋಕದ ಬಾಗಿಲಲ್ಲಿ ಮತ್ತೆ ಬೇಟಿಯಾದರು. ಗೌಡನು ಅದೇ ವಿನಯಪೂರ್ವಕವಾಗಿ ಸ್ವಾಮಿಗಳಿಬ್ಬರಿಗೆ ನಮಸ್ಕರಿಸಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ದೇವದೂತನೊಬ್ಬನು ಅವರನ್ನು ವಿಚಾರಣೆಗೆಂದು ಯಮಧರ್ಮನಲ್ಲಿಗೆ ಕೊಂಡೊಯ್ದನು. ನಾಲ್ವರ ಪೂರ್ವಾಪರಗಳನ್ನು ಪರಿಶೀಲಿಸಿದ ಧರ್ಮನು ಆ ಹೆಣ್ಣು ಹುಲಿಗೂ ಗೌಡನಿಗೂ ಸ್ವರ್ಗಕ್ಕೆ ಹೋಗಿರೆಂದು, ಸನ್ಯಾಸಿಗಳಿಬ್ಬರಿಗೂ ನರಕಕ್ಕೆ ಹೋಗಿರೆಂದು ಅಪ್ಪಣೆ ಮಾಡಿಬಿಟ್ಟನು!
ಗೌಡನೂ ಹುಲಿಯೂ ಸ್ವರ್ಗದ ಕಡೆಗೆ ಹೊರಡುತ್ತಿದ್ದಾಗ್ಯೂ ಅಲ್ಲಿಂದ ಕದಲದೆ ನಿಂತಿದ್ದ ಸನ್ಯಾಸಿಗಳಿಬ್ಬರನ್ನು ಏನು? ಎಂಬಂತೆ ನೋಡಿದ ಧರ್ಮನನ್ನು ಉದ್ದೇಶಿಸಿ ಹಿರಿಯ ಸ್ವಾಮಿಯು ‘ಯಮಧರ್ಮನೇ, ನನ್ನದೊಂದು ಮನವಿ. ಭಗವಂತನ ಸಾಕ್ಷಾತ್ಕಾರಕ್ಕಾಗಿಯೇ ರಾಜ್ಯಕೋಶಗಳನ್ನು ತೊರೆದು, ಕಾಡು ಮೇಡುಗಳನ್ನಲೆಯುತ್ತ, ಗೆಡ್ಡೆಗೆಣಸುಗಳನ್ನು ತಿನ್ನುತ್ತ ಭಗವಂತನನ್ನು ಭಕ್ತಿಯಿಂದ ಸೇವಿಸುತ್ತ ಸನಾತನ ಧರ್ಮಕ್ಕನುಸಾರವಾಗಿ ಸಾತ್ವಿಕ ಜೀವನವನ್ನು ನಡೆಸಿದವರು ನಾವು. ನಮಗೆ ನರಕಕ್ಕೆ ಹೋಗಿರೆಂದು ಅಪ್ಪಣೆ ಮಾಡಿದ್ದೀಯ. ಈ ಗೌಡನು ನನ್ನ ಧರ್ಮ ಬೋದನೆಯನ್ನು ಮನಸ್ಸಿಗೆ ಹಾಕಿಕೊಳ್ಳದೆ, ತಾತ್ಕಾಲಿಕ ಸುಖವನ್ನಪ್ಪಿ, ಮದ್ಯ-ಮಾಂಸಾದಿಗಳನ್ನು ಸೇವಿಸುತ್ತ ವ್ಯರ್ಥ ಜೀವನ ನಡೆಸಿದವನು. ಇನ್ನು ಈ ಹೆಣ್ಣು ಹುಲಿ ತಪೋನ್ಮುಖರಾದ ಪತಿಯನ್ನು ತಡೆದು, ತಪಸ್ಸಿಗೆ ಹೊರಟ ಗಂಡನನ್ನು ಹಿಂಬಾಲಿಸದೆ ಕ್ಷಣಿಕ ಜೀವನದ ಆಸೆಗೆ ನಿಂತುದಲ್ಲದೆ, ತಪಸ್ಸಿಗೆ ಹೊರಟ ಮಗನನ್ನು ತಡೆದ ಪಾಪಕರ್ಮಕ್ಕಾಗಿ ಸತ್ತು ಹೆಣ್ಣುಹುಲಿಯಾಗಿ ಹುಟ್ಟಿದ್ದವಳು. ಹುಲಿಯಾದ ಮೇಲಾದರೂ ಸಾತ್ವಿಕಳಾಗಿರದೆ ಭಯಂಕರ ನರಭಕ್ಷಕಳಾಗಿ, ಕೊನೆಗೆ ತಾನೆತ್ತ ಮಗನನ್ನೇ ಕೊಂದು ತಿಂದವಳು. ಇಂತವರಿಗೆ ಸ್ವರ್ಗಕ್ಕೆ ಹೋಗಲು ಅಪ್ಪಣೆ ಮಾಡಿದ್ದೀಯ. ಇದು ನ್ಯಾಯವೇ?’ ಎಂದನು.
ಸ್ವಲ್ಪ ಹೊತ್ತು ಏನನ್ನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಯಮಧರ್ಮನು ‘ಬಹಳ ದಿನಗಳ ನಂತರ ನನ್ನ ತೀರ್ಮಾನವನ್ನು ಹೀಗೆ ಪ್ರಶ್ನಿಸಿದವನು ನೀನು. ಈ ಹಿಂದೆಯೂ ಸಾವಿತ್ರಿ ಮೊದಲಾದವರು ನನ್ನ ತೀರ್ಮಾನಗಳನ್ನು ಪ್ರಶ್ನಿಸಿ, ನನಗೆ ಮಂಕು ಬೂದಿಯನ್ನು ಎರಚಿ, ನನ್ನನ್ನು ಕರ್ತವ್ಯ ಭ್ರಷ್ಟನನ್ನಾಗಿ ಮಾಡಿದ್ದರು. ಆದ್ದರಿಂದ ನಾನೀಗ ನಿನ್ನ ಪ್ರಶ್ನೆಗಳಿಗೆ ಉತ್ತರ ಕೊಡದೆ, ನಿನಗೇ ಕೆಲವು ಪ್ರಶ್ನೆಗಳನ್ನು ಹಾಕುತ್ತೇನೆ. ಅವುಗಳಿಗೆ ಸರಿಯಾದ ಸಮಾಧಾನಗಳನ್ನು ನೀನಿತ್ತುದೆಯಾದರೆ, ನನ್ನ ಈ ಮೊದಲಿನ ತೀರ್ಮಾನವನ್ನು ಮರುಪರಿಶೀಲಿಸುತ್ತೇನೆ. ಇಲ್ಲವಾದರೆ ನಿಮಗೆ ನರಕವೇ ಗತಿ. ಇದಕ್ಕೆ ಒಪ್ಪಿಗೆಯೇ?’ ಎಂದು ಕೇಳಿದನು.
ಯಮನ ಮಾತಿನಲ್ಲಿದ್ದ ನಿಷ್ಟುರತೆಯನ್ನು ಗಮನಿಸಿದ ಸನ್ಯಾಸಿಯು ಒಳಗೊಳಗೆ ನಡುಕವುಂಟಾದರೂ, ಯಮಧರ್ಮ ನನ್ನ ಸಾಧನೆಯನ್ನು ಪರಿಕ್ಷಿಸಲು ಹೀಗೆ ಹೇಳುತ್ತಿರಬಹುದು. ಸುಮಾರು ನೂರು ವರ್ಷಗಳ ಕಾಲ ತಾನು ನಡೆಯಿಸಿದ ತಪಸ್ಸು, ನ್ಯಾಯ ಧರ್ಮಶಾಸ್ತ್ರಗಳ ಅಧ್ಯಯನ ತನ್ನ ವಾದಕ್ಕೆ ಬಲ ಕೊಡುತ್ತದೆಂದು ಭಾವಿಸಿ, ‘ಆಗೆಯೇ ಆಗಲಿ ಪ್ರಭು. ನನಗೆ ತಿಳಿದ ಮಟ್ಟಿಗೆ ಧರ್ಮಶಾಸ್ತ್ರಗಳ ಬಲದಿಂದ ನಿನ್ನ ಅನುಮಾನಗಳನ್ನು ಪರಿಹರಿಸುತ್ತೇನೆ’ ಎಂದು ಧರ್ಮನ ಮಾತಿಗೆ ಜವಾಬನಿತ್ತನು.
‘ದೇವರನ್ನು ಸೇರಲು ತಪಸ್ಸಿಗೇ ಹೋಗಬೇಕೆಂದು ಹೇಳಿದವರು ಯಾರು? ಗೌಡನ ಮಗನ ಮೇಲಿನ ಪ್ರೀತಿಗಿಂತ ತಪಸ್ಸೇ ಹೆಚ್ಚೆಂದು ನೀನು ಹೇಗೆ ಭಾವಿಸಿದೆ? ಒಬ್ಬ ಮನುಷ್ಯನನ್ನು ಕರ್ತವ್ಯ ವಿಮುಖನನ್ನಾಗಿಸುವುದೂ ತಪ್ಪೆಂದು ನಿನಗೆ ತಿಳಿಯಲಿಲ್ಲವೇ? ನಿನ್ನನ್ನೇ ನಂಬಿ ಕೈಹಿಡಿದು ಮದುವೆಯಾಗಿದ್ದ ಹೆಂಡತಿಯರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದು ಸರಿಯೇ? ಹಾಗೆ ನೀನು ತಪಸ್ಸಿಗೆ ಹೋಗಬೇಕೆಂದಿದ್ದರೆ ನಿನ್ನ ಪತ್ನಿಯರ ಒಪ್ಪಿಗೆಯನ್ನು ನೀನೇಕೆ ಪಡೆಯಲಿಲ್ಲ? ಮಗನು ತಪಸ್ಸಿಗೆ ಹೊರಟಾಗ ಆತನ ಚಿಕ್ಕ ವಯಸ್ಸಿನ ಹೆಂಡತಿಯರ ಪಾಡನ್ನು ನೀನೇಕೆ ಚಿಂತಿಸಲಿಲ್ಲ? ಮಗನಿಗೇಕೆ ಬುದ್ದಿವಾದ ಹೇಳಲಿಲ್ಲ? ತಪೋನ್ಮುಖರಾದ ನಿನ್ನನ್ನು, ನಿನ್ನ ಮಗನನ್ನು ತಡೆದುದ್ದು ಆಕೆಯ ಅಪರಾಧವೆಂದು ಏಕೆ ಭಾವಿಸಬೇಕು? ಅದಕ್ಕಾಗಿಯೇ ಆಕೆ ಸತ್ತು ಹೆಣ್ಣು ಹುಲಿಯಾಗಿ ಹುಟ್ಟಿದಳೆಂದು ನಿನಗೆ ಹೇಳಿದವರಾರು? ನೀನೂ ನಿನ್ನ ಮಗನೂ ಪ್ರಜಾಪ್ರತಿನಿಧಿಗಳಾಗಿ ಇದ್ದವರು. ರಾಜ್ಯದ ಜನತೆಯ ಹಿತಚಿಂತನೆ ಮಾಡದೆ, ಕೇವಲ ನೀವಿಬ್ಬರು ಮಾತ್ರ ಸ್ವರ್ಗವನ್ನು ಪಡೆಯಲು ಅಫೇಕ್ಷಿಸಿದ್ದು ಸರಿಯೆ? ನೀವು ಕೈಬಿಟ್ಟ ರಾಜ್ಯವನ್ನು, ಜನತೆಯನ್ನು ಕೈಹಿಡಿದು ಮುನ್ನೆಡೆಸಿದ ರಾಣಿಯ ಚಾಣಕ್ಷತೆ ಅಧರ್ಮವೆ? ಗೌಡನಿಗಿದ್ದ ಜೀವನ ಪ್ರೀತಿಯನ್ನು, ಮಗನ ಮೇಲಿನ ಪ್ರೇಮವನ್ನು ಕ್ಷಣಿಕವೆಂದು ನಿಮಗಾರು ಹೇಳಿದರು? ಗೌಡನು ಮದ್ಯ-ಮಾಂಸಾದಿಗಳನ್ನು ಸೇವಿಸುತ್ತಾನೆ ಎಂದೆ. ಅದನ್ನು ತಪ್ಪೆಂದು ಹೇಳಲು ನೀನಾರು? ಹುಲಿಯು ನೈಸರ್ಗಿಕವಾಗಿ ಮಾಂಸಹಾರಿ. ಅದು ತನ್ನ ಅಹಾರವನ್ನು ಪಡೆಯುವಾಗ ಅದನ್ನು ಕೊಂದಿದ್ದು ನಿನ್ನ ತಪ್ಪಲ್ಲವೇ? ಮಾಂಸಹಾರ ಮಾಡಿದ ತಪ್ಪಿಗೆ ನರಕದ ಶಿಕ್ಷೆಯೇಕೆ ಕೊಡಬೇಕು? ನಿನ್ನ ನೂರು ವರ್ಷಗಳ ತಪಸ್ಸು, ಕೊನೆಗೂ ನಿನ್ನ ಮಗನ ಮೇಲಿನ ವ್ಯಾಮೋಹವನ್ನು ಕಳೆದಿಲ್ಲವೆಂದರೆ ಅದನ್ನು ತಪಸ್ಸೆಂದು ಹೇಗೆ ಹೇಳುತ್ತೀಯ? ನನಗೆ ಗೊತ್ತು. ನನ್ನೆಲ್ಲಾ ಪ್ರಶ್ನೆಗಳಿಗೆ ನೀನು ನಿನ್ನ ಪೂರ್ವಿಕರು ರಚಿಸಿ ಇಟ್ಟಿರುವ ಶಾಸ್ತ್ರಗ್ರಂಥಗಳನ್ನು ಉಲ್ಲೇಖಿಸಿ ಸಮರ್ಥನೆಯನ್ನೊದಗಿಸಬಲ್ಲೆ ಎಂದು. ಅದಕ್ಕೂ ಪ್ರಶ್ನೆಗಳಿವೆ. ನಿನ್ನ ಧರ್ಮಶಾಸ್ತ್ರಗ್ರಂಥಗಳೇ ಪೂರ್ಣಪ್ರಾಮಾಣಿಕವಾದವಗಳು, ಪರಮಸತ್ಯಗಳು ಎಂದು ಹೇಗೆ ಹೇಳುತ್ತೀಯ? ಅವುಗಳನ್ನು ನಾನಾಗಲೀ ಪರಮಾತ್ಮನಾಗಲಿ ನಿಮ್ಮ ಪೂರ್ವಿಕರಿಗೆ ಹೇಳಿ ಬರೆಯಿಸಿದ್ದೇವೆಯೆ? ಸಾವಿರಾರು ವರ್ಷಗಳ ಹಿಂದಿನ ವಿಚಾರಗಳನ್ನು ಎಲ್ಲ ಕಾಲಕ್ಕೂ ಅನ್ವಯಿಸುವುದು ತಪ್ಪಲ್ಲವೆ? ಕಾಲಧರ್ಮಕ್ಕನುಗುಣವಾಗಿ ಬಹುಜನಹಿತವಾದ ಶಾಸ್ತ್ರಧರ್ಮಗಳೇ ನಿಜವಾದ ಧರ್ಮವಲ್ಲವೆ? ನಿಮ್ಮ ನಿಮ್ಮ ಸಮಾಧಾನಕ್ಕೆ ತಕ್ಕಂತೆ ಧರ್ಮಶಾಸ್ತ್ರಗಳನ್ನು ರಚಿಸಿಕೊಂಡು ಅದನ್ನೇ ಪರಮಸತ್ಯವೆಂದು ನಂಬಿ ಎಂದು ನಾವು ಹೇಳಿದ್ದೇವೆಯೆ? ಅಷ್ಟಕ್ಕೂ ಧರ್ಮ ಎಂದರೇನು? ಸಾವಿರಾರು ವರ್ಷಗಳ ಹಿಂದಿನ ಯಮನ ನೀತಿಯನ್ನೇ ಈಗಲೂ ಅನುಸರಿಸಿ ಕರ್ಮಾಕರ್ಮಗಳನ್ನು ನಿರ್ಧರಿಸಲು ನಾನೇನು ನಿರ್ಜೀವ ಗೊಂಬೆಯೆ? ಆದಿಯಿಂದ ಯಾವ ಬದಲಾವಣೆಯೂ ನಿಮ್ಮಲ್ಲಿ ಅಗಿಲ್ಲವೆ? ಬದಲಾವಣೆಗಳು ಭೂಲೋಕಕ್ಕೆ ಮಾತ್ರ ಸೀಮಿತವೆ?’ ಹೀಗೆ ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಿದ್ದ ಯಮಧರ್ಮನ ಮುಖವನ್ನು ನೋಡಲಾಗದೆ ತಲೆ ತಗ್ಗಿಸಿದ ಸನ್ಯಾಸಿ ಯಾವ ಮಾತನ್ನೂ ಆಡದೇ ತನ್ನ ಮಗನನ್ನು ಹೊರಡಿಸಿಕೊಂಡು ನರಕದ ಕಡೆಗೆ ಹೊರಟುಬಿಟ್ಟನು! ಇತ್ತ ಗೌಡನೂ ಹುಲಿಯೂ ಸ್ವರ್ಗದ ಕಡೆಗೆ ನಡೆದರೆ, ಯಮಧರ್ಮ ವಿಜಯದ ನಗೆ ನಕ್ಕ.
***** ****  ***   **    *    **   ***  **** *****
ತಾತಯ್ಯನ ಕಥೆ ಮುಗಿಯುವ ಹೊತ್ತಿಗೆ ಮೂರ್ನಾಲ್ಕು ಮಕ್ಕಳು ಮಲಗಿದ್ದವು. ಕಥೆ ಕೇಳಿದ ಪಕ್ಕದ ಕಣದವನು ‘ಈ ಕಥೆಯನ್ನು ಒಂದತ್ತು ಸಾರಿಯಾದ್ರು ಕೇಳಿದಿನಪ್ಪ. ಆದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ’ ಎಂದು ಅಜ್ಜನ ಕಥೆಗೆ ಮೆಚ್ಚುಗೆ ಸೂಚಿಸಿದ. ನಾನೇನನ್ನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಈ ಕಥೆಯನ್ನು ಯಾರು ಯಾವಾಗ ಕಟ್ಟಿದರೋ ಗೊತ್ತಿಲ್ಲ. ಇದು ನಿಜವಾಗಿ ನಡೆಯದಿರಬಹುದು. ಕಥೆಕಟ್ಟಿದ ಕಥೆಗಾರನನ್ನು ಬಲ್ಮೆಯನ್ನು ನಾನು ಯೊಚಿಸುತ್ತಿದ್ದೆ. ಅಜ್ಜ ‘ನಿನ್ನ ಪ್ರಶ್ನೆಗೆ ಉತ್ರ ಸಿಕ್ತೊ ಇಲ್ಲವೋ? ಇನ್ನು ಮಲ್ಗುವ ಕಣಪ್ಪ. ನಾಳೆ ಹೊತ್ತಿಗ್ಮುಂಚೆ ಎದ್ದು ಹುಲ್ಲಾಕ್ಬೇಕು. ರಾಗಿ ತೂರೋದು ಬ್ಯಾರೆ ಇನ್ನು ಐತೆ’ ಎಂದು ಏನನ್ನೋ ಹೇಳುತ್ತ ಮಲಗುವ ಸಿದ್ಧತೆ ಮಾಡುತ್ತಿದ್ದ. ನಾನು ಕಥೆಯ ಬಗ್ಗೆ ಯೋಚಿಸುತ್ತಿದ್ದರೆ, ತಾತಯ್ಯ ನಾಳೆಯ ಬಗ್ಗೆ ಮಾತನಾಡುತ್ತಿದ್ದ!
***** ****  ***   **    *    **   ***  **** *****

No comments: