ರಾಮನ ಕಿರೀಟದಾ ರನ್ನವಣಿಯೋಲೆ ರಮ್ಯಂ,ಕವಿಕ್ರತು ದರ್ಶನದಲ್ಲಿ ತನ್ನ ಕಾವ್ಯದ ಉದ್ದೇಶ, ಮಾರ್ಗ, ದರ್ಶನವನ್ನು ಕುರಿತು ಹೇಳುವಾಗ ಕವಿ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಇದು ಸರ್ವೋದಯ ಪರಿಕಲ್ಪನೆ. ಎಲ್ಲರೂ ಎಲ್ಲವೂ ಒಂದೆ ಎಂಬ ಸಮಭಾವ ಕವಿಗೆ ಇದೆ. ರಾಮನ ಕಿರೀಟದ ಮಣಿಯೂ ಒಂದೆ; ಹನಿ ಇಬ್ಬನಿಯೂ ಒಂದೆ ಕವಿಗೆ.
ಪಂಚವಟಿಯೊಳ್ ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.
ಹಾಡಲು ಹೊರಟಿರುವುದು ಮಹಾಕಾವ್ಯವೇ ಆದರೂ, ಇಲ್ಲಿ ಯಾವುದೂ ಅಮುಖ್ಯವಲ್ಲ. ರಾವಣನ ಅಂತ್ಯಕ್ಕಿರುವಷ್ಟೇ ಪ್ರಾಮುಖ್ಯತೆ ಒಂದು ದಿನದ ಒಂದು ಕ್ಷಣದ ಘಟನೆಗೆ ಇದೆ. ಮಹಿಮೆ ತಾಂ ಮಾಳ್ಪುದನಿತುಂ ಮಹತ್ ಕಲೆಯಲ್ತೆ?’ ಎಂಬ ಸಾಲಿನಂತೆ ರಾಮ ಸೀತೆಯರ ಜೀವನದ, ಚಿತ್ರಕೂಟದ ಬದುಕಿನ ಒಂದು ದಿನದ ಒಂದೆರಡು ಘಟನೆಗಳು ಮಹತ್ತಾಗಿವೆ. ’ಕುಣಿದುಳುರಿಯ ಊರ್ವಶಿ’ ಎಂಬ ಸಂಚಿಕೆಯಲ್ಲಿ ಆ ಘಟನೆಗಳಿವೆ. ದೈನಂದಿನ ಬದುಕಿನಲ್ಲಿ ನಡೆಯುವ ಸಣ್ಣ ಘಟನೆಗಳು ಸಹ ನಮ್ಮ ಇಡೀ ಬದುಕನ್ನು, ನಮ್ಮ ಒಟ್ಟು ವ್ಯಕ್ತಿತ್ವವನ್ನು ನಿರೂಪಿಸುತ್ತಿರುತ್ತವೆ.
ಈ ಘಟನೆಗಳಿಗೆ ದಾಟುವ ಮೊದಲೆ ಕವಿಗೆ ’ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ ದೀನರಿಗೆ?’ ಎಂಬ ಅನುಮಾನವೂ ಕಾಡಿದೆ. ಅದಕ್ಕೆ ಅವರು ’ನನ್ನ ಈ ಕೃತಿಯನೋದುವ ಆತ್ಮರ ಆ ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ, ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ!’ ಎಂದು ಹಾಡಿದ್ದಾರೆ. ಅತ್ಯಲ್ಪದಲ್ಲೂ ಅತ್ಯುನ್ನತವಾದುದನ್ನು ದರ್ಶಿಸಬೇಕೆಂಬುದು ಕವಿಯ ಆಶಯ.
೨
’ಅರಸುತನಂ ಎದೆಯೊಳಿರೆ ಕಾಡು ಅರಮನೆಗೆ ಕೀಳೆ?’ ಎನ್ನುವಂತೆ ರಾಮ ಸೀತೆ ಲಕ್ಷ್ಮಣರು ಚಿತ್ರಕೂಟದಲ್ಲಿ ಎಲೆಮನೆಯನ್ನು ನಿರ್ಮಿಸಿಕೊಂಡು ನೆಲೆಸಿದ್ದಾರೆ. ’ಎಲೆವನೆಯೆ ಕಲೆಯ ಮನೆ’ಯಾಗಿತ್ತಂತೆ ಅವರಿಗೆ! ಅಲ್ಲಿದ್ದ ಅಲ್ಪತನದ ವಸ್ತುಗಳೆಲ್ಲಾ ಈಗ ಅವರಿಗೆ ಚಿರಪರಿಚಿತವಾಗಿವೆ. ಕಲ್ಲು, ಮರ, ಬಳ್ಳಿಗಳೆಲ್ಲಾ ಅವರ ಸ್ಮೃತಿಕೋಶದಲ್ಲಿ ಸೇರಿಹೋಗಿವೆ. ಅವುಗಳಲ್ಲಿ ಅವರ ಎಲೆಮನೆಯ ಮುಂದೆ, ತುಸುವೇ ದೂರದಲ್ಲಿದ್ದ ಒಂದು ಕಲ್ಲು, ಯುಗಯುಗಗಳಿಂದಲೂ ಅಲ್ಲಿಯೇ ಬಿದ್ದಿದ್ದ ಕಲ್ಲು ಸೀತೆಯ ಕಣ್ಣಿಗೆ ಬೀಳುವವರೆಗೂ ಅದು ಕಲ್ಲು ಮಾತ್ರವಾಗಿತ್ತು. ಆದರೆ ಈಗ...
ಒಂದು ದಿನ ಸೀತೆ ರಾಮನೊಂದಿಗೆ ಮಾತನಾಡುತ್ತಾ ಎಲೆಮನೆಯ ಮುಂದಿದ್ದ ಕುಳಿತಿದ್ದಳು. ಸೀತೆ ನೋಡುತ್ತ ನೋಡುತ್ತ ಇದ್ದ ಹಾಗೆ ಆ ಕಲ್ಲಿಗೆ ಒಂದು ರೂಪವೇ ಬಂದಂತಾಗಿಬಿಡುತ್ತದೆ. ಅದು ಅವಳಿಗೆ ಸೋಜಿಗ, ಕೌತುಕವನ್ನುಂಟು ಮಾಡುತ್ತದೆ. ಅದು ಅವಳಿಗೆ ನಿಶ್ಚಲನಾಗಿ ಕುಳಿತ ಒಬ್ಬ ತಪಸ್ವಿಯ ಹಾಗೆ ಕಾಣುತ್ತದೆ. ಅಂದಿನಿಂದ, ಅದಕ್ಕೆ ಸೀತೆ ’ಕಲ್ದವಸಿ’ ಎಂದು ಹೆಸರಿಟ್ಟು ಕರೆಯತೊಡಗುತ್ತಾಳೆ. ರಾಮ-ಲಕ್ಷ್ಮಣರಿಗೂ ಅದು ಕಲ್ದವಸಿಯಾಗಿ ಬಿಡುತ್ತದೆ. ಯುಗಯುಗಾಂತರದಿಂದ ಕಲ್ಲು ಮಾತ್ರವಾಗಿದ್ದ ಆ ಕಲ್ಲು ಅವರೆರ್ದೆ ಬಾಳಿನಲ್ಲಿ ನಿತ್ಯತೆಯನ್ನು ಪಡೆದುಕೊಳ್ಳುತ್ತದೆ.
ಒಂದು ದಿನ, ಸಂಜೆ ಮಬ್ಬುಗತ್ತಲಿನ ಸಮಯ. ರಾಮ ಸೊಡರಿನ ಬೆಳಕಿನಲ್ಲಿ, ರಾಮ ಏನನ್ನೊ ಓದುತ್ತ ಕುಳಿತಿದ್ದ. ಸೀತೆ ಅವನನ್ನು ಕರೆದು ’ಕಲ್ದವಸಿ’ಯನ್ನು ತೋರುತ್ತಾಳೆ. ಕಲ್ದವಸಿಯ ಮೇಲೆ ಇನ್ನೊರ್ವ ತಪಸ್ವಿ ನಿಶ್ಚಲವಾಗಿ ಕುಳಿತಿರುವ ದೃಶ್ಯ ರಾಮ ಸೀತೆಯರ ಕಣ್ಣಿಗೆ ಕಟ್ಟುತ್ತದೆ. ಸೀತೆ ಕೌತುಕ ಪಡುತ್ತಿದ್ದರೆ, ರಾಮ ನಿಟ್ಟುಸಿರು ಬಿಡುತ್ತಾನೆ. ಕಲ್ದವಸಿಯ ಮೇಲೆ ಕುಳಿತವನು ಲಕ್ಷ್ಮಣ ಎಂಬುದು ರಾಮನಿಗೆ ಅರಿವಾಗುತ್ತದೆ; ಕೊನೆಗೆ ಸೀತೆಗೂ.
ಸೌದೆಯನ್ನು ಹೊತ್ತು ತಂದ ಲಕ್ಷ್ಮಣ ಸುಮ್ಮನೆ ಅದರ ಮೇಲೆ ಕುಳಿತಿರುತ್ತಾನೆ. ಅದು ರಾಮನಿಗೆ ’ಊರ್ಮಿಳೆಯ ನೆನಪಿನಲ್ಲಿ ಬೇಯುತ್ತಿರುವ ಲಕ್ಷ್ಮಣ, ದೇವರಲ್ಲಿ ಬೇಡುತ್ತಿರುವಂತೆ’ ಕಾಣುತ್ತದೆ. ಕಾಡಿಗೆ ಬಂದಂದಿನಿಂದ, ಲಕ್ಷ್ಮಣನು ಸಲ್ಲಿಸುತ್ತಿರುವ ನಿಷ್ಕಾಮವಾದ ಸೇವೆಯನ್ನು ನೆನೆದು ರಾಮ ಸೀತೆಯರಿಬ್ಬರೂ ನಿಟ್ಟುಸಿರು ಬಿಡುತ್ತಾರೆ. ಸೀತೆಗೆ ಮಾತೇ ಹೊರಡುವುದಿಲ್ಲ. ರಾಮ ಮುಂದುವರೆದು ತಮ್ಮನನ್ನು ಮಾತನಾಡಿಸಲು ಹೋಗುತ್ತಾನೆ. ಅಂದಿನಿಂದ ಆ ಕಲ್ದವಸಿ ಊರ್ಮಿಳೆಗೆ ಹಾಗೂ ಅವಳ ಸಂಯಮಕ್ಕೆ ಪ್ರತಿಮೆಯಾಗಿ ಕಾಣುತ್ತದೆ, ರಾಮ ಸೀತೆಯರಿಗೆ.
ಅಂದು ರಾಮ ಸೀತಾ ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟಂದಿನಿಂದ, ಸರಯೂ ನದಿಯ ತೀರದಲ್ಲಿ ಪರ್ಣಕುಟಿಯನ್ನು ಕಟ್ಟಿಕೊಂಡು, ಚಿರತಪಸ್ವಿನಿಯಾಗಿ, ಸೀತೆ ರಾಮರಿಗೆ, ತನ್ನಿನಿಯನಿಗೆ ಚಿತ್ತಪೋಮಂಗಳದ ರಕ್ಷೆಯನ್ನು ಕಟ್ಟಿ, ತಪಂಗೈಯುತ್ತಿರುವ ಊರ್ಮಿಳೆಯ ತ್ಯಾಗ, ಸಂಯಮಗಳು ಕಲ್ದವಸಿಯಷ್ಟೆ ಕಠಿಣ, ಕಾಲಾತೀತ ಹಾಗೂ ಮಂಗಳಕರವಾದವುಗಳು. ಆ ಕಲ್ದವಸಿ ತನ್ನ ಸುತ್ತಮುತ್ತಲಿನ, ತನ್ನ ಜಗದ ಆಗುಹೋಗುಗಳಿಗೆ ಹೇಗೆ ಸಾಕ್ಷಿರೂಪವಾದುದೊ ಹಾಗೆಯೇ ಊರ್ಮಿಳೆಯ ತಪ್ಪಸ್ಸು ರಾಮ ಸೀತೆ ಲಕ್ಷ್ಮಣರ ಮಂಗಳಕ್ಕೆ ರಕ್ಷೆಯಾದುದು. ಕಲ್ದವಸಿಗೆ ಹೇಗೆ ಪ್ರತಿಫಲಾಪೇಕ್ಷೆಯಿಲ್ಲವು ಹಾಗೆ ಊರ್ಮಿಳೆಯ ತಪ್ಪಸ್ಸಿಗೂ ಪ್ರತಿಫಲಾಪೇಕ್ಷೆಯಿಲ್ಲ!
೩
ಕಲ್ದವಸಿ ತಾಣ ಆ ವನವಾಸಿಗಳಿಗೆ ಕುಳಿತು ಮಾತನಾಡುವ, ಮುಂಜಾನೆ ಸಂಜೆಗಳನ್ನು ಕಳೆಯುವ ಸುಂದರ ತಾವು. ಮೂವರಿಗೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು, ಆ ದಿನದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ತಾಣ.
ಋಷ್ಯಾಶ್ರಮವೊಂದರಲ್ಲಿ ಶಶಿಮೌಳಿ ಎಂಬ ಹೆಸರಿನ ಇಪ್ಪತ್ತೈದು ವರ್ಷ ವಯಸ್ಸಿನ ಋಷಿಕುಮಾರನಿದ್ದ. ವಿನೋದಶೀಲನೂ ಸ್ನೇಹಶೀಲನೂ ಆದ ಆತ ಆಗಾಗ ಇವರ ಎಲೆಮನೆಗೂ ಬರುತ್ತಿದ್ದ. ಒಂದು ದಿನ ಆತ ಗೋವನ್ನು ಅಟ್ಟುತ್ತ ಸೀತೆಯಿದ್ದಲ್ಲಿಗೆ ಬರುತ್ತಾನೆ. ಕುಳಿತು ಹರಟುತ್ತಾನೆ. ಹೊತ್ತು ಹೋದುದೇ ತಿಳಿಯುವುದಿಲ್ಲ. ಸೀತೆ ಅವನಿಗೆ ಒಂದಷ್ಟು ತಿನಿಸನ್ನೂ ನೀಡುತ್ತಾಳೆ. ಅದನ್ನೆಲ್ಲವನ್ನು ತಿಂದು, ಸೀತೆ ಬೇಡ ಬೇಡ ಎಂದರೂ ಅಡುಗೆಗೆ ಬಳಸಿದ್ದ ಮುಸುರೆ ಪಾತ್ರೆಗಳನ್ನು ತೊಳೆದುಕೊಡುತ್ತಾನೆ. ಹಾಗೆ ತೊಳೆದು ಕೊಡುವಾಗ, ಆತನ ಕೈ ಮುಖ ಎಲ್ಲವೂ ಮಸಿಯಾಗಿ ಹೋಗಿದ್ದನ್ನು, ಆಗ ಆ ಋಷಿಕುಮಾರ ಪಟ್ಟ ಪಾಡನ್ನು ಸೀತೆ ರಸವತ್ತಾಗಿ ಭಾವವಶಳಾಗಿ ವರ್ಣಿಸುತ್ತಿದ್ದಾಳೆ. ನೋಡುವವರಿಗೆ ಅಲ್ಪತನವೆಂದು ಕಾಣುವ ಆ ಕಥೆಯನ್ನು ಮತಿಭೂಮನಾದ ಶ್ರೀರಾಮನೂ, ವೀರನಾದ ಲಕ್ಷ್ಮಣನೂ ಅಳ್ಳೆ ಬಿರಿಯುವಂತೆ ನಗುತ್ತಾ ಮಹೋಲ್ಲಾಸದಿಂದ ಕೇಳುತ್ತಿದ್ದರಂತೆ! ವನವಾಸಿಗಳಾದವರಿಗೆ, ಅಥವಾ ಏಕಾಂಗಿಯಾದವರಿಗೆ ಅಂತಹ ಸಣ್ಣಪುಟ್ಟ ಘಟನೆಗಳೂ, ವಸ್ತುಗಳೂ ಅತ್ಯಂತ ಮುಖ್ಯವಾಗಿ, ಮಹತ್ತಾದವುಗಳಾಗಿ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ! ಈ ಕಥೆಯನ್ನು ಕೇಳಿ ಮುಗಿಯುತ್ತಲೇ, ಆ ಮೂವರು ಪರ್ವತದ ತುದಿಯಲ್ಲಿ ಎದ್ದ ಕಾಳ್ಗಿಚ್ಚನ್ನು ನೋಡುತ್ತಾರೆ; ’ಎಳಮಕ್ಕಳೋಲಂತೆ, ಬಾಯ್ದೆರೆದ ಬೆಳ್ಳಚ್ಚರಿಗೆ ಮನಂ ಮಾರ್ವೋದವೋಲ್!’
೪
ಇನ್ನೊಂದು ದಿನ ಸೀತೆ ಅಡುಗೆಗೆ ತೊಡಗಿದ್ದಾಳೆ. ಹಸಿಸೌದೆಯ ದೆಸೆಯಿಂದ ಒಲೆ ಉರಿಯುತ್ತಿಲ್ಲ. ಪಾಪ! ಸೀತೆ ಒಲೆಯನ್ನು ತಿವಿದು, ಊದಿ ಏನೆಲ್ಲಾ ಮಾಡಿದರೂ ಒಲೆ ಹತ್ತಿಕೊಳ್ಳುತ್ತಿಲ್ಲ. ಅವಳ ಕೈ ಮೈ ಮೂತಿಯೆಲ್ಲಾ ಮಸಿಯಾಗಿಬಿಟ್ಟಿದೆ! ಮೂಗು ಕಣ್ಣನಿಂದ ನೀರು ಸುರಿಯುತ್ತಿದೆ. ಋಷಿಯಾಶ್ರಮಕ್ಕೆ ಅಧ್ಯಯನಕ್ಕೆಂದು ಹೋಗಿದ್ದ ರಾಮ ಹಿಂತಿರುಗಿ ಬಂದು ನೋಡುತ್ತಾನೆ, ಎಲೆಮನೆಯೆಲ್ಲಾ ಹೊಗೆಯಿಂದ ಆವೃತ್ತವಾಗಿಬಿಟ್ಟಿದೆ. ರಾಮ ಸೀತೆಯನ್ನು ಕೂಗುತ್ತಾನೆ. ಹೊಗೆಯ ಹೊಟ್ಟೆಯಲ್ಲಿ ಅಡಗಿದ್ದ ಸೀತೆ ರಾಮನ ಕೂಗಿಗೆ ಓಗೊಡುತ್ತಾಳೆ. ’ಹಸಿವಾಗುತ್ತಿದೆ, ನನಗೆ ಊಟ ನೀಡು’ ಎಂದ ರಾಮನಿಗೆ ಸೀತೆ, ’ಹಸಿ ಸೌದೆಯಿಂದ ಅಡುಗೆ ಆಗುವುದಾದರು ಹೇಗೆ? ಹೊಗೆಯನ್ನೇ ಊಟ ಮಾಡಿ’ ಎಂದು ಸವಾಲೆಸೆಯುತ್ತಾಳೆ. ಅವಳ ಧ್ವನಿಯನ್ನು ಅನುಸರಿಸಿ ಅವಳ ಬಳಿ ಸಾರಿದ ರಾಮ, ಮಸಿಯಿಡಿದ ಅವಳ ಮುಖವನ್ನು ನೋಡಿ ನಗಲಾರಂಭಿಸುತ್ತಾನೆ. ಅಳ್ಳೆ ಹಿಡಿದು ಜೋರಾಗಿ ನಗುತ್ತಾ ಹೊರಗೆ ಬರುತ್ತಾನೆ. ಆಗಷ್ಟೇ ಅಲ್ಲಿಗೆ ಬಂದ ಲಕ್ಷ್ಮಣ ಅಣ್ಣನ ಆ ಪರಿ ನಗುವಿಗೆ ಬೆರಗಾಗುತ್ತಾನೆ. ಆಗ ರಾಮ. ಲಕ್ಷ್ಮಣನಿಗೆ, ’ನೋಡು, ಒಳಗೆ ಹೋಗಿ ನೋಡು. ಅಲ್ಲಿ ನಿನ್ನ ಅತ್ತಿಗೆಯ ಬದಲು ಒಬ್ಬಳು ವಾನರಿಯಿದ್ದಾಳೆ’ ಎಂದು ಗಹಗಹಿಸಿ ನಗುತ್ತಾನೆ.
ರಾಮನ ಮಾತಿನಂತೆ ಲಕ್ಷ್ಮಣ ಒಳಗೆ ಹೋಗಿ ನೋಡುತ್ತಾನೆ. ರಾಮನಂತೆ ಆತ ನಗಲಿಲ್ಲ. ಅಲ್ಲಿನ ಧೂಮದೃಶ್ಯ ನಗೆಗೆ ಮೀರ್ದುದು! ’ಕ್ಷಮಿಸಿಮೆನ್ನಂ, ಪಸಿಯ ಸೌದೆಯ ತಂದೆನ್ ಅಪರಾಧಿಯಂ’ ಎಂದು ಹೊರಗೆ ಓಡಿದ ಲಕ್ಷ್ಮಣ ಒಣಗಿದ ಸೌದೆಯನ್ನು ತಂದು ಒಲೆಗೆ ಹಾಕಿ, ತಾನೇ ಒಲೆಯನ್ನು ಊದುತ್ತಾನೆ. ಧೂಮದಿಂದ ಬೆಂಕಿಯ ಬುಗ್ಗೆ ಉಕ್ಕುತ್ತದೆ. ಚಿಂತಾಮ್ಲಾನ ಮೈಥೀಲಿಯ ಮುಖಪದ್ಮದಿಂದ ಸಂತೋಷಕಾಂತಿ ಚಿಮ್ಮುತ್ತದೆ.
೫
ಇನ್ನೊಮ್ಮೆ ರಾಮನು ಚಿತ್ರಕೂಟದ ಚೆಲುವನ್ನು ದರ್ಶಿಸಿ ಮಗುತ್ವವನ್ನು ಪಡೆಯುತ್ತಾನೆ.
ತಾನೆ ಹೊಳೆಯಾದಂತೆ,ಎನ್ನುತ್ತಾರೆ ಕವಿ. ಇಂತಹ ಬಿಡಿ ಬಿಡಿ ದೃಶ್ಯಗಳನ್ನು ಈ ಸಂಚಿಕೆಯಲ್ಲಿ ಹೆಣೆದಿರುವ ಕವಿ, ಅದರ ಹಿಂದಿನ ಆಶಯವನ್ನೂ ಸ್ಪಷ್ಟಪಡಿಸಿದ್ದಾರೆ. ಕವಿಯ ಮಾತುಗಳಲ್ಲಿಯೇ ಹೇಳುವುದಾದರೆ,
ತಾನೆ ಅಡವಿಯಾದಂತೆ,
ತಾನೆ ಗಿರಿಯಾದಂತೆ,
ತಾನೆ ಬಾನಾದಂತೆ,
ತಾನೆಲ್ಲಮಾದಂತೆ
ಮೇಣ್ ಎಲ್ಲಮುಂ ತನ್ನೊಳಧ್ಯಾತ್ಮಮಾದಂತೆ
ಭೂಮಾನುಭೂತಿಯಿಂ ಮೈಮರೆದನ್
ಕೊಂದ ಕತದಿಂದೇಂ ಪೆರ್ಮನಾದನೆ ರಾಮನ್ರಾಮ ನಮಗೆ ಮುಖ್ಯವಾಗಬೇಕಾದುದು ರಾವಣನನ್ನು ಕೊಂದ ಎಂಬ ಕಾರಣಕ್ಕೆ ಅಲ್ಲ; ಆತ ಒಬ್ಬ ಪರಮಪುರುಷೋತ್ತಮ, ಮಾನವೀಯ ವ್ಯಕ್ತಿ ಎಂಬ ಕಾರಣಕ್ಕೆ. ರಾವಣ ಸಂಹಾರಿಯ ವೇಷದಲ್ಲೇ ರಾಮನನ್ನು ಕಾಣುವ ಮನಸ್ಥಿತಿಯ ಬಗ್ಗೆಯೇ ಕವಿಗೆ ವಿರೋಧವಿದೆ. ರಣದ ರುಚಿಗೆ ಮರುಳಾದ ಮಾನವರು ಹಾಗೆ ಮಾಡುತ್ತಾರೆ. ಆದರೆ ಕವಿಗೆ ಆ ಭ್ರಾಂತಿ ಇಲ್ಲ!
ಆ ಮಾತನುಳಿ: ಪಗೆಯೆ? ತೆಗೆತೆಗೆ!
ಪೆರ್ಮೆಗೆ ಒಲ್ಮೆಯೆ ಚಿಹ್ನೆ.
ಮಹತ್ತಿಗೇಂ ಬೆಲೆಯೆ ಪೇಳ್ ಕೊಲೆ?
ಕೋಲಾಹಲದ ರುಚಿಯ ಮೋಹಕ್ಕೆ ಮರುಳಾದ ಮಾನವರ್
ರಾವಣನ ಕೊಲೆಗಾಗಿ ರಾಮನಂ ಕೊಂಡಾಡಿದೊಡೆ
ಕವಿಗುಂ ಆ ಭ್ರಾಂತಿ ತಾನೇಕೆ?
ಮಣಿಯುವೆನು ರಾಮನಡಿದಾವರೆಗೆ:
ದಶಶಿರನ ವಧೆಗಾಗಿಯಲ್ತು. ದೈತ್ಯನಂ ಗೆಲಿದ ಕಾರಣಕಲ್ತು,
ತನ್ನ ದಯಿತೆಯನೊಲಿದ ಕಾರಣಕೆ,
ಗುರು ಕಣಾ ರಾಮಚಂದ್ರಂ.
No comments:
Post a Comment