Friday, May 09, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 4

ಭಾಗ - 4 : ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ! 
ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು ನಂಟಿಗೆ ಕಾರಣವೇನು? ಇಂತಹುದೊಂದು ಪ್ರಶ್ನೆಗೆ ಉತ್ತರ ಸಿಗುವುದು, ಕುಂಭಕರ್ಣನ ವಧೆಯಾದ ಮೇಲೆ! ತನ್ನ ಕಿರಿದೊಡ್ಡಯ್ಯನನ್ನು ನೆನೆದು ಅನಲೆ ದುಃಖಿಸುತ್ತಾ ಸೀತೆಗೆ ಆತನ ಬಗ್ಗೆ ಹೇಳಿದಾಗ. ಅಲ್ಲಿ ನಮಗೆ ಅನಲೆಯ ಬಾಲ್ಯದ ಜೀವನದ ಎಳೆಗಳೂ ಸಿಗುತ್ತವೆ. ಕೂಡುಕುಟುಂಬವೊಂದರಲ್ಲಿ ಬೆಳೆಯುವ ಮುದ್ದುಮಗುವಿನ ಚಿತ್ರಣವೂ ದೊರೆಯುತ್ತದೆ. ಹೌದು. ರಾವಣನ ಸೈನ್ಯಕ್ಕೆ ಹಿನ್ನಡೆಯಾಗಿ, ಆತನ ಪ್ರಮುಖ ದಳಪತಿಗಳೆಲ್ಲಾ ನಿರ್ನಾಮವಾದಾಗ ರಾವಣ ತನ್ನ ಸಹೋದರ ಕುಂಭಕರ್ಣನನ್ನು ಎಬ್ಬಿಸಿ, ಯುದ್ಧಕ್ಕೆ ಕಳುಹಿಸುತ್ತಾನೆ. ಗಮನಿಸಬೇಕು, ಕುಂಭಕರ್ಣನೂ ಸಹ ರಾವಣನ ಅಕೃತ್ಯವನ್ನು ಒಪ್ಪುವುದಿಲ್ಲ. ಆದರೆ, ತನ್ನ ಅಣ್ಣನಿಗೋಸ್ಕರ, ಲಂಕೆಗೋಸ್ಕರ ಯುದ್ಧ ಮಾಡಲು ಒಪ್ಪುತ್ತಾನೆ. ಯುದ್ಧದಲ್ಲಿ ಹೋರಾಡಿ ಮಡಿಯುತ್ತಾನೆ. ಅಂದು ಉಂಟಾದ ಅಲ್ಲೋಲಕಲ್ಲೋಲದಿಂದ ರಣಭೂಮಿಯಲ್ಲಿ ಬೆಂಕಿಯೆದ್ದು ಹೊಗೆ ಭೂಮಿ ಆಕಾಶವನ್ನು ಒಂದು ಮಾಡಿರುತ್ತದೆ. ಇತ್ತ ಅಶೋಕವನದಲ್ಲಿದ್ದ ಸೀತೆ ಕಳವಳಿಸುತ್ತಿದ್ದಾಳೆ. "ತಳುವಿಹಳ್ ಅನಲೆಯುಂ; ನಿಚ್ಚಮುಂ ಪೊಗಸು ಸೊಗಯಿಸುವ ಮುನ್ನಮೇ ಬರುತಿರ್ದವಳ್, ದಿನದಿನದ ರಣವಾರ್ತೆಯಂ ತರುತಿರ್ದವಳ್?" ಎಂದು ಅನಲೆಯನ್ನು ನೆನಪು ಮಾಡಿಕೊಂಡು ಶೋಕಿಸುತ್ತಾಳೆ. ಸೀತೆಗೆ ಯುದ್ಧಭೂಮಿಯ ವರದಿ ತಲಪುತ್ತಿದ್ದುದೇ ಅನಲೆಯಿಂದ. ಅನಲೆ ಬಂದರೆ ಸೀತೆಗೆ ಸಮಾಧಾನ. ಇತ್ತ ಸೀತೆ ತ್ರಿಜಟೆಯೊಂದಿಗೆ ಅನಲೆ ಬರದಿರುವುದಕ್ಕೆ ಪರಿತಪಿಸುತ್ತಾ, ತ್ರಿಜಟೆಯ ಭಯವನ್ನು ಹೋಗಲಾಡಿಸಿತ್ತಾ ಇದ್ದರೆ, ಅತ್ತ ಅನಲೆ ಕುಂಭಕರ್ಣನ ಸಾವಿನಿಂದ, ’ರೋದನದಲ್ಲಿ ಯುದ್ಧಭೂಮಿಯನ್ನೇ ಮೀರಿಸುತ್ತಿದ್ದ’ ರಾವಣನ ಅರಮನೆಯಲ್ಲಿದ್ದಾಳೆ. ಅಲ್ಲಿಂದ, ಮನಶ್ಯಾಂತಿಯನ್ನು ಆರಿಸಿ ಬರುವವಳಂತೆ, ’ಶೋಕವನವಾಗಿದ್ದ ಅರಮನೆಯಿಂದ ಅಶೋಕವನಕ್ಕೆ’ ಬರುತ್ತಾಳೆ. ಬಂದವಳೇ ಸೀತೆಯ ಪಾದಗಳಿಗೆ ಅಡ್ಡಬೀಳುತ್ತಾಳೆ. ’ಅಶ್ರುಮಯ ಲೋಚನೆಯ, ಗದ್ಗದಧ್ವನಿಯ, ಶೋಕಾಕುಲೆಯ ಸುಮಕೋಮಲಾಂಗಮಂ ಕನಿಕರದಿನೆತ್ತಿದ’ ಸೀತೆ ಆಕೆಗೆ ಸಮಾಧಾನ ಮಾಡುತ್ತಾಳೆ; ತಾಯಿ ಮಗಳನ್ನು ಸಂತೈಸುವಂತೆ.
ತಳ್ಕೈಸಿದಳು ಸೀತೆ,
ತಾಯ್ ಮಗಳನೆಂತಂತೆವೋಲ್.
ಕಂಬನಿಯೊರೆಸಿದಳು;
ಮೊಗವ ಮುಂಡಾಡಿದಳು;
ಕುವರಿಯೊಡಲಂ ತನ್ನ ಮೆಯ್ಗೆ ತಳ್ತಪ್ಪುತ್ತೆ
ಕಣ್ಮುಚ್ಚಿ ಮೌನಿಯಾದಳ್.
ತನ್ನ ಹೃದಯದ ನಿಗೂಢತಮ ಶಾಂತಿಯಂ
ಯೌಗಿಕ ವಿಧಾನದಿಂ ಅನಲೆಯಾತ್ಮಕೆ
ದಾನಗೈವಂದದಿಂದಿರ್ದು,
ನುಡಿಸಿದಳು ತುಸುವೊಳ್ತನಂತರಂ:
ಎಂತು ನಾನ್ ಸಂತೈಪೆನೌ ನಿನ್ನನ್ ಅನಲೆ?
ಬಾಯ್ ಬರದು ಎನಗೆ
ನಿನ್ನನ್ ಅಳವೇಡ ಎನಲ್, ತಾಯಿ
ಭೂಮಿಜಾತೆ ಸೀತೆ ಇಲ್ಲಿ ನಿಜದ ತಾಯಿಯಾಗಿಬಿಟ್ಟಿದ್ದಾಳೆ. ಅವಳ ಸಂತೈಕೆಗೆ ಅನಲೆಯ ದುಃಖದ ಕಡಲು ಬತ್ತಲಾರಂಭಿಸಿದೆ. ತನ್ನ ತಲೆಗೂದಲನ್ನು ನೇವರಿಸುತ್ತಾ ಮಾತನಾಡುತ್ತಿದ್ದ ಸೀತೆಯನ್ನು, ಮಗು ತಾಯಿಯನ್ನು ನೋಡುವಂತೆಯೇ ನೋಡುತ್ತಾಳೆ. ಸೀತೆಯ ಕಣ್ಣಗಳೂ ಹನಿಯಿಂದ ಕೂಡಿವೆ. ತಕ್ಷಣ ಅನಲೆ ಎಚ್ಚೆತ್ತುಕೊಳ್ಳುತ್ತಾಳೆ. ತನ್ನ ಬೆರಳುಗಳಿಂದ ಸೀತೆಯ ಕಣ್ಣೀರನೊರೆಸಿ, ಸಮಾಧಾನಿಸುವ ನೆಪದಲ್ಲಿ, ಕುಂಭಕರ್ಣನ ಬಗ್ಗೆ ತನಗಿದ್ದ ಒಲವನ್ನು ತೆರೆದಿಡುತ್ತಾಳೆ. ಅದರ ಮೂಲಕ ಅವಳೂ ಸಮಾಧಾನ ಹೊಂದುತ್ತಾ ಸಾಗುತ್ತಾಳೆ. ಅನಲೆಯ ನುಡಿಗಳಿವು:
ನಿನ್ನಳಲನ್ ಅಳ್ತು ಮುಗಿಸಲ್
ನಿನಗೆ ಸಾಲದಾಗಿರೆ ನಿನ್ನ ಕಣ್ಣೀರ್,
ನನ್ನಳಲ್ಗೇಕೆ ತವಿಸುವೆ, ದೇವಿ,
ಬರಿದೆ ನಿನ್ನ ಈ ನೇತ್ರ ತೀರ್ಥಾಂಬುವಂ.
ನಿನ್ನ ನಯನದಿಂದ ಉರುಳುವ ಒಂದೊಂದು ಅಶ್ರುಬಿಂದುವುಂ
ಪೆರ್ಚಿಪುದು ನಮ್ಮ ಲಂಕೆಯ ಶೋಕಜೀವನದ ಸಿಂಧುವಂ.
ನೀನಳ್ತೆ: ಆ ಹನಿಗಳೊಂದೊಂದುವುಂ ಬಡಬಾಗ್ನಿ ಕಡಲಾಗಿ
ಕುಡಿದುವವ್ ಲಂಕೆಯ ಮಹಾಸುರ ಸಹಸ್ರಾಸು ವಾಹಿನಿಗಳಂ.
ಇದು ಅನಲೆ ಸೀತೆಗೆ ಹೇಳುವ ಸಮಾಧಾನದ ನುಡಿಗಳು. ಇಲ್ಲಿ ಯಾರು ಯಾರಿಗೆ ತಾಯಿ? ಸೀತೆಯ ದುಃಖ ದೊಡ್ಡದು, ಅದರಿಂದ ಆಕೆಯ ಕಣ್ಣಿರಿನ ಒಂದೊಂದು ಹನಿಗೂ, ಅದಕ್ಕೆ ಕಾರಣವಾಗಿರುವ ರಾವಣೇಶ್ವರನ ಲಂಕೆ ತೆರಬೇಕಾದ ಬೆಲೆ ದೊಡ್ಡದು, ಅದಕ್ಕಾದರೂ ಸೀತೆ ಕಣ್ಣೀರು ಹಾಕಬಾರದು, ಆಗುವುದು ಆಗಿಯೇ ತೀರುತ್ತದೆ ಎನ್ನುವಂತಿವೆ ಅವಳ ಮಾತು. ಮುಂದೆ ಆಕೆ ಕುಂಭಕರ್ಣನನ್ನು ನೆನೆಯುತ್ತಾಳೆ.
ಸರ್ವಲೋಕ ಭೀಕರನೆಂದು ಯುದ್ಧಭೈರವನೆಂದು
ಪೆಸರಾಂತ ಕಿರಿಯ ದೊಡ್ಡಯ್ಯನಂತಪ್ಪನಂ,
ನೇರ್ ನಡೆಯ ಸವಿನುಡಿಯ ಪೆರ್ಮೆಬಾಳ್ ಬಾಳ್ದನಂ,
ನಿನ್ನೆ ನುಂಗಿದುದಮ್ಮ ನಿನ್ನ ಕಣ್ ಪನಿಗಡಲ ಬಡಬವಾಯ್!
(ಸೀತೆಯ ದುಃಖದ, ಹನಿ ಕಣ್ಣೀರಿನ ಪರಿಣಾಮವನ್ನು ಅನಲೆ ಮನಗಂಡಿದ್ದಾಳೆ)
ಆ ಅಯ್ಯನೆಮ್ಮೊಡನೆ ಎನಿತೊ ಸೂಳ್
ಕುಳಿತು ಸರಸವನಾಡುತಿರ್ದನ್!
ಹಾಸ್ಯಮಂ ನುಡಿದು ಅಣಕಿಸುತ್ತ ಎಮ್ಮನ್
ಎಂತು ಅಳ್ಳೆ ಬಿರಿವಂತೆ ನಗಿಸುತಿರ್ದನ್!
ಕಳ್ಳರಾಟದಲ್ಲಿ ನಾವಟ್ಟಿ, ಅವನೋಡಿ,
ನಾನ್ ಪಿಡಿಯಲ್ ಆರದಿರೆ,
ಕೊನೆಕೊನೆಗೆ ನಗೆ ತಡೆಯಲಾರದೆಯೆ
ಸೋಲ್ತು ನಿಲುತಿರ್ದನಂ ನಾನ್ ಮುಟ್ಟೆ,
ನನ್ನನ್ ಅಂಬರಕೆತ್ತಿ ಮೇಲೆಸೆದು ಪಿಡಿದು
’ನೀನೊಂದು ಪೂವಿನ ಚೆಂಡು’
ಎನುತೆನ್ನ ಮುದ್ದಾಡುತಿರ್ದನ್
’ಚೆಂಡುವೂ! ಚೆಂಡುವೂ! ’
ಎಂದು ಅಟ್ಟಾಹಸಂ ಮೊಳಗಲದ್ಭುತಂ ನಗುತೆ! -
ಅನಲೆಯ ಈ ಮಾತುಗಳು ಒಂದು ಸುಂದರ ಚಿತ್ರಣವನ್ನು ಓದುಗನ ಕಣ್ಣಮುಂದೆ ನಿಲ್ಲಿಸುತ್ತವೆ. ಕೂಡುಕುಟುಂಬವೊಂದರಲ್ಲಿ, ಮುದ್ದುಮಗುವನ್ನು ಮನೆಯ ದೊಡ್ಡವರು, ಚಿಕ್ಕವರು ಹೇಗೆ ಆಟವಾಡಿಸುತ್ತಾರೆ. ಅದರಲ್ಲೂ, ದೈತ್ಯದೇಹಿಯಾದರೂ. ದೈತ್ಯನಾದರೂ ಮಗುವಿನಂತಹ ಮನಸ್ಸುಳ್ಳ ಕುಂಭಕರ್ಣ, ಮನೆಗೊಬ್ಬಳೇ ಮಗಳಾದ ಅನಲೆಯನ್ನು ಆಟವಾಡಿಸುವ ರೀತಿ ಹೃದಯಂಗಮವಾಗಿದೆ. ಮುಂದೆ, ಇದನ್ನೆಲ್ಲವನ್ನು ನೆನೆದು ಅನಲೆ ದುಃಖಿಸುತ್ತಾಳೆ. ಕುಂಭಕರ್ಣನ ಅಂತ್ಯಸಂಸ್ಕಾರದ ಚಿತ್ರಣವನ್ನು, ಆಕೆಯ ದುಃಖಿತ ನುಡಿಗಳಲ್ಲೇ ಕವಿ ನಮಗೆ ನೀಡುತ್ತಾರೆ.
ಅಯ್ಯೊ ಆ ಅಯ್ಯನನ್,
ಇಂದು ಕಡಲೆಡೆ, ಮಳಲ ತೀರದಲಿ,
ಗಂಧಚಿತೆಯಲಿ ಬೇಳ್ದು, ಬೂದಿಯಂ
ತಂದನೂರಿಗೆ ನನ್ನ ಬದುಕಿರ್ಪ ದೊಡ್ಡಯ್ಯನ್, ಅಸುರೇಶ್ವರಂ!
ಅದನ್ ಇಟ್ಟ ರತ್ನಮಂಜೂಷೆಯಂ ಬಿಗಿದಪ್ಪಿ
’ತಮ್ಮ ತಮ್ಮ’ ಎಂದೊರಲುತಿರ್ದನಂ ನೆನೆಯಲಮ್ಮೆನ್, ದೇವಿ.
ನಿನಗೆ ಅಹಿತನಾದಡೇನ್?
ನೀನುಮ್ ಮರುಗಿ ಕರಗುತಿರ್ದೆ ಆ ನೋಟಮನ್ ಕಂಡು!
ಅನಲೆಯ ಮಾತುಗಳು ನೂರಕ್ಕೆ ನೂರು ಸತ್ಯವಲ್ಲವೆ? ಸಾವು ಎಂತಹ ಕಠಿಣಹೃದಯಿಯನ್ನೂ ಕರಗಿಸಿಬಿಡುತ್ತದೆ. ರಾವಣನೇ ಕರಗಿಹೋಗಿದ್ದಾನೆ! ಇನ್ನು, ಮಾತೃಹೃದಯದ ರೂಪವನಾಂತಿರುವ ಸೀತೆಯನ್ನು ಅಲುಗಿಸುವುದಿಲ್ಲವೆ? ಕುಂಭಕರ್ಣನ ಬಗ್ಗೆ ರಾವಣನಿಟ್ಟಿದ್ದ ಪ್ರೀತಿ ಅನಲೆಯ ಮಾತುಗಳಲ್ಲಿ ಅಭಿವ್ಯಕ್ತಗೊಂಡಿದೆ. ಅನಲೆ ಬಸವಳಿದಿದ್ದಾಳೆ. ಅದನ್ನು ತಾಯಿಯಾದ ಸೀತೆ ಅರಿಯಳೆ?
ಗದ್ಗದೆಯಾಗಿ, ಜಾನಕಿಯೆದೆಗೆ ಮೊಗಮೊತ್ತಿ,
ಮಗಳವೋಲ್ ಅಳುತಿರ್ದಳಂ ಅನಲೆಯಂ ನೋಡಿ,
ಆವಿರ್ಭವಿಸಿದುದೊ ತನಗೆ ನಿಜಸ್ವರೂಪಮೆನೆ,
ಬೇರೆತನಮಂ ತೊರೆದು ಸೀತೆ,
ಲೋಕಕೆ ಮಾತೆ ತಾನಾದಳೆಂಬವೋಲ್,
ತನ್ನೆರಡು ತೋಳ್ಗಳಿಂ ತಳ್ಕಯ್ಸುತ ಅನಲೆಯಂ,
ತ್ರಿಜಟೆಗೆಂದಳ್:
ಬಾಲೆ ಉಪವಾಸಮಿರ್ಪಳ್, ತ್ರಿಜಟೆ;
ಶೋಕಭಾರಮಂ ತಡೆಯಲಾರಳ್; ತತ್ತರಿಸುವಳ್:
ಇವಳ್ಗಂ ಈ ಅಳಲೆ ಈ ಎಳಹರಯದೊಳ್?
ಪೋಗು, ಪಣ್ಗಳಂ ತಿಳಿನೀರ್ಗಳಂ ಬೇಗದಿಂ ತಾ
ಸೀತೆ ಲೋಕಕ್ಕೇ ತಾಯಿಯಾಗಿದ್ದು ಹೀಗೆ! ಅನಲೆಯ ದುಃಖ, ಅದಕ್ಕಿಂತ ಹೆಚ್ಚಾಗಿ, ಅವಳ ಮಾತುಗಳು ಸೀತೆಯನ್ನೇ ಬದಲಾಯಿಸಿಬಿಟ್ಟಿವೆ. ’ಈ ಎಳಹರೆಯದೊಳ್ ಈ ಅಳಲೆ’ ಎಂದು ಸೀತೆಯೆ ಉದ್ಗರಿಸುತ್ತಾಳೆ, ಅನಲೆಯ ದುಃಖದ ತೀವ್ರತೆಗೆ. ತಾಯಿ ಮಗಳನ್ನು ಸಂತೈಸುವಂತೆ ಸಂತೈಸುತ್ತಾಳೆ, ಕೆಳಗಿನಂತೆ.
ಅನಲೆಯ ತಲೆಗೆ ತನ್ನ ತೊಡೆಯ ತಲೆದಿಂಬೆಸಗಿ
ತನ್ನುಡೆಯ ಮಲಿನ ವಸ್ತ್ರಾಂಚಲದಿ
ಕೃಶಗಾತ್ರೆ ಬೀಸಿದಳ್ ತಂಗಾಳಿಯಂ:
ಏನ್ ಬೇಸಗೆಯೊ? ಬೇಗೆ ಧಗಿಸುತಿದೆ ಲೋಕಮಂ!
ತನ್ನೊಳಗೆ ಎನುತೆ ಸುಯ್ದು ನೋಡಿದಳು
ಮುಂದೆ ಹಬ್ಬಿರ್ದ ಜಲಧಿಯ ನೀಲವಿಸ್ತಾರಮಂ,
ನೀಲಿಯಾಗಸದ ನಿಸ್ಸೀಮತಾ ವಿಸ್ತಾರಮಂ,
ಮುಗಿಲ್ ಮುಗಿಲಾಗಿ ಮೇಲೇರ್ದ ಸತ್ ಕ್ರಿಯಾನಲಧೂಮ ವಿಸ್ತಾರಮಂ.
ಕಣ್ಗೆ ಪನಿ ತುಳ್ಕಿ ಬಿಳ್ದುವು ಅನಲೆಯ ಮೆಯ್ಗೆ!
ಸುಂದರ ವರ್ಣಚಿತ್ರವನ್ನು ಕಟೆದು ಸಹೃದಯನ ಮುಂದೆ ನಿಲ್ಲಿಸುತ್ತದೆ ಈ ಭಾಗ! ಅನಲೆ ಯಾರೊ? ಸೀತೆ ಯಾರೊ? ಸೀತೆಯ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದವನ ಮನೆಯ ಮಗಳು ಅವಳು. ಅವಳಿಗೆ ಇವಳು ತಾಯಿ; ಇವಳಿಗೆ ಅವಳು ಮಗಳು! ತಾಯ್ತನಕೆ, ಮಾತೃಭಾವಕೆ ಕಾಲ, ದೇಶ, ಎಲ್ಲೆ, ಕುಲಗಳ ಮಿತಿಯುಂಟೆ? ಮುಂದೆ ತ್ರಿಜಟೆ ತಣ್ಣನೆಯ ನೀರನ್ನು ತರುತ್ತಾಳೆ. ಸ್ವತಃ ಸೀತೆ ಅನಲೆಯ ಮುಖವನ್ನು ತೊಳೆಯುತ್ತಾಳೆ. ಹಣ್ಣುಗಳನ್ನು ತಿನ್ನಿಸುತ್ತಾಳೆ. ನೀರು ಕುಡಿಸುತ್ತಾಳೆ. ಅಲ್ಲಿಯವರೆಗೂ ಮಾತನಾಡದೆ ಸುಮ್ಮನಿದ್ದ ’ದಶಶಿರಾನುಜ ತನುಜೆ ಮುಂ ಪೇಳ್ದಳಿಂತು ಆ ಸ್ಥಿರಾತ್ಮಜೆಗೆ’. ಅಲ್ಲಿ ಅನಲೆಯ ಜಾಣ್ಮೆ, ವಿವೇಕ ಎಲ್ಲವೂ ವ್ಯಕ್ತವಾಗಿವೆ. ’ಅಲ್ಲಿಯವರೆಗೆ ಆದದ್ದು ಆಯಿತು. ಮುಂದೊಳಿತಾಗಬೇಕು’ ಎಂಬ ಹಂಬಲವಿದೆ. ಮುಂದೆ ಇಂದ್ರಜಿತು ಯುದ್ಧಕ್ಕಿಳಿಯುವುದು, ಅದರ ಪರಿಣಾಮ, ಅದಕ್ಕೆ ಮಾಡಬೇಕಿರುವುದು, ತಾವು ಮಾಡಬಹುದಾದುದು ಎಲ್ಲವನ್ನೂ ವಿಷದಪಡಿಸುತ್ತಾಳೆ. ಕುಂಭಕರ್ಣನ ಸಾವಿನ ನಂತರ ರಾವಣನಿಗೆ ಸಮಾಧಾನ ಮಾಡುವ, ನಿಕುಂಬಿಲಾಯಾಗಪ್ರತಿಜ್ಞೆ ಮಾಡುವ ಇಂದ್ರಜಿತುವಿನ ಚಿತ್ರಣವನ್ನು ಸಹೃದಯ ಕೇಳುವುದು ನೇರವಾಗಿಯಲ್ಲ, ಅನಲೆಯ ಬಾಯಿಂದ, ಸೀತೆಯೊಟ್ಟಿಗೆ! ಅದೊಂದು ರೀತಿಯಲ್ಲಿ ದೀರ್ಘಭಾಷಣದಂತೆ; ರಣತಂತ್ರವನ್ನು ಸಹದ್ಯೋಗಿಗಳಿಗೆ ವಿವರಿಸುವ ಸೇನಾನಾಯಕಿಯಂತೆ ಅನಲೆ ಭಾಸವಾಗುತ್ತಾಳೆ. ವ್ಯತ್ಯಾಸವಿಷ್ಟೆ; ಅಲ್ಲಿ ಕೊಲೆಯ ಸಂಚಿರುತ್ತದೆ, ಇಲ್ಲಿ ಆತ್ಮೋದ್ಧಾರದ ಹಂಬಲವಿದೆ. ಇಲ್ಲಿ ಅನಲೆ ಕೇವಲ ಒಂದು ಪಾತ್ರವಾಗಿ ಮಾತ್ರವಲ್ಲ, ಕಾವ್ಯದ ಮುನ್ನೆಡೆಗೆ ಕಾರ್ಯಕಾರಣ ಸಂಬಂಧವನ್ನು ಬೆಸೆಯುವ ಕವಿಯ ಪ್ರತಿನಿಧಿಯಂತೆ ಭಾಸವಾಗುತ್ತಾಳೆ. ಆ ಭಾಗವನ್ನು ಇಡಿಯಾಗಿ ಓದಿಯೇ ಸವಿಯಬೇಕು.
ಆದುದಾದುದು, ದೇವಿ,
ಆದುದಕೆ ನೂರ್ಮಡಿಯ ಘೋರಮಂ ಇನ್ನು ಆಗಲುರ್ಕುಮ್.
ಅದನ್, ನೀನಿಚ್ಛಿಸಲ್, ನಿಲಿಸಲ್ ಅಸದಳಮಲ್ತು.
ಕೇಳ್, ತಾಯಿ, ಮುನ್ನಡೆದುದು ಪೇಳ್ವೆನ್ ಅರಮನೆಯ ಕಥನಮಂ.
ತಮ್ಮನ ಕಳೇಬರಕೆ ಕೊನೆಯ ಸಂಸ್ಕಾರಮಂ
ಕಡಲ ತೀರದೊಳೆಸಗಿ, ಭಸ್ಮಾವಶೇಷಮಂ
ರತ್ನಪಾತ್ರೆಯೊಳಿಟ್ಟು ತಂದು ಗೋಳಿಡುತಿರ್ದ
ದೊಡ್ಡಯ್ಯನಂ ಕಂಡು ನನ್ನಣ್ಣನ್ ಇಂದ್ರಜಿತು, ಮೇಘನಾದಂ,
ಮಹಾ ರುದ್ರ ರೋಷವನಾಂತು ಸಂತಯ್ಸಿದನು ತನ್ನ ತಂದೆಯಂ;
ಪೂಣ್ದನ್ ಭಯಂಕರ ಪ್ರತಿಜ್ಞೆಯಂ:?
ತ್ಯಜಿಸು ಸಂತಾಪಮಂ, ದೈತ್ಯಕುಲ ಚಕ್ರೇಶ;
ಚಿಕ್ಕಯ್ಯನಸುವಿಂಗೆ ನೂರ್ಮಡಿ ಉಸಿರ್ಗಳಂ
ಬಲಿಗೊಳ್ವೆನ್ ಎನ್ನೀ ಪ್ರತಾಪ ಭೂತಕ್ಕೆ.
ರಿಪುಬಲವನ್ ಅಂತಕನೂರ್ಗೆ ಬಿರ್ದ್ದೆಸಗುವೆನ್; ತಪ್ಪೆನ್
ಎನ್ನಾಣೆ, ನಿನ್ನಾಣೆ, ತೀರ್ದಯ್ಯನಾಣೆ,
ಪೆತ್ತಬ್ಬೆ ಮೇಣ್ ಕುಲದೈವ ಆ ಶಿವನಾಣೆ!
ಕೈಕೊಳ್ವೆನೀಗಳೆ ನಿಕುಂಭಿಲಾ ಯಾಗಮಂ,
ಮೃತ್ಯುಗರ್ಭಂ ತರತರನೆ ನಡುಗೆ
ಮಾರಣ ಮಹಾಶಕ್ತಿಗಳನೊಡನೆ ಸೃಜಿಸುವೆನ್.
ನರ ವಾನರರ ಸೇನೆ ನಿರ್ನಾಮಮಪ್ಪಂತೆ ಗೆಯ್ದು
ಅವರ ನೆತ್ತರಿಂ ತಣಿಯೆರೆವೆನ್
ಆ ಪೂಜ್ಯ ಕುಂಭಕರ್ಣ ಪ್ರೇತಂ
ಎಮ್ಮ ಪಿತೃಲೋಕದೊಳ್ ಸಂಪ್ರೀತಮಪ್ಪವೋಲ್!
ಇಂತತಿ ಕಠೋರಮಂ ಸೂರುಳಂ ತೊಟ್ಟು,
ನಡೆದನ್ ನಿಕುಂಭಿಲೆವೆಸರ ನ್ಯಗ್ರೋಧಮೂಲದಾ
ಯಾಗಶಾಲೆಯ ಮಹಾ ಮಂತ್ರಕರ್ಮದ ತಂತ್ರಮಂಟಪಕೆ.
ಆ ನನ್ನ ಅಣ್ಣನ್ ಅತಿ ಶಕ್ತನ್;
ಇಂದ್ರನ ಗೆಲ್ದು, ಬ್ರಹ್ಮನಿಂ ನಾನಾ ವರಂಗಳು ಪಡೆದು,
ಮಾಯಾಬಲದಿ ದೇವದಾನವ ಭಯಂಕರನಾಗಿಹನು, ದೇವಿ.
ನಿರ್ವಿಘ್ನಮ್ ಆ ಯಾಗಮಂ ಮುಗಿಸಿದಾತನಂ
ಸೋಲಿಸುವರೊಳರೆ ಭುವನತ್ರಯದ ವೀರರಲಿ?
ವಿಘ್ನಮಿಲ್ಲದೆ ಯಾಗಮದು ಸಿದ್ಧಿಯಾಗಲ್,
ಅಜೇಯನಾತನ್; ಅವಾರ್ಯವೀರ್ಯನ್;
ಸುರಾಸುರರ್ ನೆರೆಯಲ್, ತೃಣೀಕರಿಸುವನ್!
ಕಪಿಧ್ವಜರೊಂದು ಪಾಡೆ?
ಆ ಬಳಿಕಲಾಂ ನೆನೆಯಲಮ್ಮೆನ್, ತಾಯಿ,
ಇರ್ಕೆಲದೊಳಪ್ಪ ಹರಣದ ಹತ್ಯೆಯಂ?
ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು,
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?
ಮಹೀಯಸೀ, ನೀನೊಪ್ಪೆ ನೆರಮಪ್ಪೆನಾಂ ನಿನಗೆ.
ನೆರಮಪ್ಪಳಾಂ ಬಲ್ಲೆನ್, ದೊಡ್ಡಮ್ಮನಾ ಮಂಡೋದರೀ ದೇವಿ,
ತಾರಾಕ್ಷಿ, ಮೇಘನಾದನ ಪತ್ನಿ, ನನ್ನತ್ತಿಗೆಯುಮಂತೆ ನೆರಮಪ್ಪಳೆಮಗೆ.
ಕೇಳ್, ನಿನ್ನನಿಲ್ಲಿಗೆ ತರಲ್ ಸಂಚು ಹೂಡಿದ
ಚಂದ್ರನಖಿಯುಮೀಗಳ್ ಬೇರೆ ಬಗೆಯಾಗಿಹಳ್.
ಮೇಣ್, ದಶಗ್ರೀವನಾತ್ಮಮುಂ, ತನ್ನ ಕಸುಗಾಯ್ತನದೊಗರ್ ಕಳೆದು,
ಪಣ್ತನಕೆ ತಿರುಗುತಿರ್ಪೊಂದು ಸೂಚನೆ ತೋರುತಿಹುದೆನಗೆ.
ಅದೊಡೆ ಮಹಾಸತ್ತ್ವನ್ ಆತನ್ ಅತ್ಯಭಿಮಾನಿ; ಪಿಂಜರಿವನಲ್ತು.
ತಾನೆಯೆ ಮುಂಬರಿವನಲ್ತು ತಡೆಯಲೀ ಕಾಳೆಗದ ಕೊಲೆಯಂ.
ಅಮರ್ಷಿ ತಾಂ ಕ್ಷಾತ್ರತೇಜಕೆ ಭಂಗ ಬರ್ಪಂದದಿಂದೆಂದುಂ ನಡೆವನಲ್ತು.
ಅನಲೆಯ ಈ ದೀರ್ಘ ಮಾತುಗಳಲ್ಲಿ, ತನ್ನವರ ಇತಿಮಿತಿಗಳನ್ನು ವಿವರಿಸಿದ್ದಾಳೆ. ತಮಗೆ ನೆರವಾಗುವವರ ಬಗ್ಗೆ ಮಾತನಾಡಿದ್ದಾಳೆ. ಕೊಲೆಗೆ ಹೇಸಿದ್ದಾಳೆ. ಅವಳು ’ಪೆಣ್ ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು, ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು ಪಣೆಪೆಣೆದು ನಿಲ್ಲಲ್?’ ಎಂದು, ಹೆಣ್ಣು ಅಸಹಾಕಯಕಳಾಗಿ, ಯುದ್ಧೋನ್ಮತ್ತರಾದ ಗಂಡಸರು ನಡೆಸುವ ಕೊಲೆಗೆ ತಟಸ್ಥ ಸಾಕ್ಷಿಮಾತ್ರವಾಗಿರಬೇಕಾಗಿಲ್ಲ ಎಂದು ವೀರೋಚಿತ ಮಾತುಗಳನ್ನು ಆಡುತ್ತಾಳೆ. ರಾವಣನ ಮನಃಪರಿವರ್ತನದ ಸುಳಿವನ್ನು ಅವಳು ಅರಿತಿದ್ದಾಳೆ. ಅವಳದು ಬಾಲಭಾಷೆಯಲ್ಲ; ಏಕೆಂದರೆ, ಇಲ್ಲಿ ಆಕೆ, ಕವಿಯಕರ್ಮವನ್ನಾಂತಿದ್ದಾಳೆ. ಅವಳ ಮಾತು, ದೃಢನಿಲುವು ಓದುಗನನ್ನು ಮಾತ್ರವಲ್ಲ, ಅದಕ್ಕೆ ಸಾಕ್ಷಿಯಾಗಿರುವ ಸೀತೆಯನ್ನೂ ಅಚ್ಚರಿಯ ಕಡಲೊಳಗೆ ತಳ್ಳಿಬಿಟ್ಟಿವೆ ಎಂಬುದು ಮುಂದೆ ಸೀತೆಯಾಡುವ ಮಾತುಗಳಲ್ಲಿ ವ್ಯಕ್ತವಾಗುತ್ತದೆ.
ಪುಟ್ಟ ಹೃದಯದೊಳೆಂತು, ಇಂತಪ್ಪ ದಿಟ್ಟತನವಿರಿಸಿರ್ಪೆ?
ಪೇಳನಲೆ.
ಪದಿನಾರ್ ಬಸಂತಗಳ ಮುದ್ರೆಯಂ ತಳೆದಿರ್ಪ
ನಿನ್ನ ಮೆಯ್ ಪಿರಿಯುಸಿರ್ ಬೀಡು,
ಪೆರ್ಬಗೆಯ ಪೆರ್ಮೆಗೆ ತವರ್ ನಾಡು!.....
ನಾನಸ್ವತಂತ್ರಳ್, ಕುವರಿ,
ನಿನ್ನವರ್ ಮೇಣ್ ನೀನ್ ಸ್ವತಂತ್ರರ್,
ತಪೋದ್ಯೋಗಮೊಂದುಳಿಯೆ
ಮತ್ತಾವುದುಜ್ಜುಗಂ ತಗದೆನಗೆ.....
ಪರಸುವೆನ್ ನಿನ್ನನ್;
ಅದೆ ನಿನ್ನುದ್ಯಮಕೆ ನಾನೀವ ನೆರಂ.
ನಿನ್ನಾಸೆ ನಲ್ಲದು. ವಿಭೀಷಣ ಕುಮಾರಿ, ಅದು ಸಲ್ಗೆ!
ಅನಲೆಯ ಮಾತಿಗೆ ಅಚ್ಚರಿಪಟ್ಟ ಸೀತೆ, ತನ್ನ ಮಿತಿಯನ್ನೂ ಆಕೆಗೆ ಹೇಳುತ್ತಾಳೆ. ’ಹರಕೆಯೊಂದೇ ನಾನು ನೀಡಬಹುದಾದುದು ನಿನ್ನ ಉದ್ಯಮಕೆ’ ಎಂದು ಮನದುಂಬಿ ಆಶಿರ್ವದಿಸುತ್ತಾಳೆ. ಸೀತೆಯ ಮಾತಿನಲ್ಲಿ ಇಣುಕುತ್ತಿದ್ದ ನಿರಾಶೆಯನ್ನು ಅನಲೆ ಗುರುತಿಸಿ ಹೀಗೆ ಹೇಳುತ್ತಾಳೆ:
ತೊರೆ ನಿರಾಶೆಯಂ, ದೇವಿ.
ವಾರ್ತೆಯನ್ ಎನ್ನ ತಂದೆಗೆ
ಹಿರಣ್ಯಕೇಶಿಯ ಕೈಲಿ ಕಳುಹಿದೆನ್,
ಇಂದ್ರಜಿತು ಕೈಕೊಳ್ವ ಕ್ರತು ಮುಗಿವ ಮುನ್ನಮೆಯೆ,
ವಿಘ್ನಮಂ ತಂದೊಡ್ಡುವರ್ ದಿಟಂ,
ವಾನರ ಮಹಾ ಪ್ರಾಜ್ಞ ಸೇನಾನಿಗಳ್.
(ಆಗ ಸೀತೆ ಮುಗುಳ್ನಗುತ್ತಾ ಆ ಧೈರ್ಯಮ್ ಎನಗಿರ್ಕುಮ್ ಎನ್ನುತ್ತಾಳೆ.)
ನೀನ್, ದೊಡ್ಡಯ್ಯನ್ ಇಂದು ಇಲ್ಲಿಗೈತರಲ್,
ನಮ್ಮಿದಿರ್ ತಾಯಾಗಿ ತೋರ್ಪವೊಲ್ ತೋರಿ,
ಕಂದಂಗೆಂತೊ ಅಂತೆ, ಹಿತವನೊರೆ ಸದ್ಬುದ್ಧಿಯಂ.
ನಿಚ್ಚಮುಂ ನಿನ್ನನೆಯೆ ನೆನೆದಾತನಾತ್ಮಕ್ಕೆ ನಿನ್ನೊಂದು ಪೊಳೆಯತೊಡಗಿದೆ ಮಹಿಮೆ.
ಮರುಗುವಂದದಿ ಮನಂ ಕರಗುವಂದದಿ ಹೃದಯ ಅವನಂತರಾತ್ಮಮಂ ಮಿಡಿದು ನುಡಿ,
ದೇವಿ, ಬೀರದ ಪೆರ್ಮೆ ಕನಿಕರಕೆ ಶರಣಪ್ಪವೋಲ್!
ಬಲ್ಲೆನ್ ಎನ್ನ ದೊಡ್ಡಯ್ಯನಂ ನಾನ್,
ದರ್ಪಕಾರಣಕೆ ಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದಲತೆ ಇರ್ಪುದವನೆರ್ದೆಯ ಕರ್ಬುನಕೆ.
ಇನ್ನೆಗಂ ನಿನ್ನರೊಲ್ ಪೇರುಸಿರ ಪೆಣ್ಗಳಂ ಸಂಧಿಸಿದನ್ ಇಲ್ಲ
ಅದುವೆ ಕಾರಣವಾಯ್ತು ಲಂಕೇಶ್ವರನ ದುರ್ಗತಿಗೆ.
ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!
ಅದ್ಭುತವಾದ ತಂತ್ರಗಾರಿಕೆಯನ್ನು ಅನಲೆ ಇಲ್ಲಿ ಮೆರೆದಿದ್ದಾಳೆ. ಅತ್ತ ಇಂದ್ರಜಿತುವಿನ ಯಾಗ ಅಪೂರ್ಣವಾಗುವಂತೆ ನೋಡಿಕೊಳ್ಳುವುದು, ಇತ್ತ ರಾವಣನು ಸೀತೆಯನ್ನು ನೋಡಲು ಬಂದಾಗ ಸೀತೆಯಿಂದ ಆತನ ಮನಃಪರಿವರ್ತನೆಗೆ ಯತ್ನಿಸುವುದು! ನಮ್ಮನ್ನು ತಾಯಿಯಾಗಿ ಪೊರೆದಂತೆ, ರಾವಣನನ್ನೂ ತಾಯಿಯಾಗಿ ಪೊರೆಯಬೇಕು, ಸೀತೆ. (ಮುಂದೆ ರಾವಣ ಕಂಡ ಕನಸ್ಸಿನಲ್ಲಿ, ಮಕ್ಕಳಾಗಿ ರೂಪಾಂತರಗೊಂಡ ರಾವಣ ಕುಂಭಕರ್ಣರಿಗೆ, ಸೀತೆ ತಾಯಾಗಿ ಬಂದು ಸಂತೈಸಿ ಹಾಲುಣಿಸುವ ಚಿತ್ರ ಬರುತ್ತದೆ. ಅನಲೆಯ ಅಭೀಪ್ಸೆ ಬೇರೊಂದು ರೀತಿಯಲ್ಲಿ ಕೈಗೂಡುತ್ತದೆ) ಅವನ ಅಂತರಾತ್ಮವನ್ನೇ ಮಿಡಿದು ನುಡಿಯಬೇಕಿದೆ ಸೀತೆ. ಇದು ಅನಲೆಯ ಆಸೆ; ಆದರೆ ದುರಾಸೆಯಲ್ಲ. ರಾವಣನ ಗುಣ ಆಕೆಗೆ ಗೊತ್ತು. ದರ್ಪದ ಕಾರಣದಿಂದ ಕಾಠಿಣ್ಯವನ್ನೇ ಹೊತ್ತವನಂತೆ ಕಾಣುವ ಆತನ ಹೃದಯವೂ ಮೃದಲತೆಯಂತೆ ಇದೆ. ಇದುವರೆಗೂ ಸೀತೆಯಂತಹ ಮಹಿಮಳನ್ನು ಆತ ಸಂಧಿಸದಿದ್ದುದೇ ಆತನ ಅವನತಿಗೆ ಕಾರಣವಾಗಿತ್ತು; ಆದರೆ ಇಂದು ಸೀತೆ ಹತ್ತಿರವೇ ಇದ್ದಾಳೆ. ಅದಕ್ಕೇ ಆತನಿಗೆ ಸುಗತಿ ದೂರವಿಲ್ಲ! ಇತ್ತ ಸೀತೆಗೆ ಹೇಗಾಗಿರಬೇಡ? ಆದರೆ ಸೀತೆ ಈಗ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲ ತಪವನ್ನೇ ಹೊತ್ತವಳಾಗಿದ್ದಾಳೆ ಎಂಬುದಕ್ಕೆ ಮುಂದಿನ ಅವಳ ಮಾತೇ ಸಾಕ್ಷಿ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವಿಷಯದಲ್ಲಿ ಸೀತೆ ಕಠಿಣಳಾಗಲಾರಳು ಎಂಬುದೂ ಸತ್ಯ.
ಉಕುತಿಯ ದನಿಯ ನನ್ನಿಯ ದುರಂತಮಂ ಬಗೆಯದೆ ಆಡಿದ
ಮುಗುದೆಯನಲೆಯ ಮುಡಿಯ ನೇವರಿಸಿ,
ಪೆಗಲಿಂ ಜಗಳುತ ಇರ್ಕ್ಕೆಲದಿ
ಷೋಡಶ ವಸಂತ ವಕ್ಷವ ಸಿಂಗರಿಸಿ
ನೀಳ್ದ ನುಣ್ಪಿನ ಕರ್ಜಡೆಗಳಂ ಕರಾಗ್ರದಿಂದೆಳವಿ,
ರಾವಣಂ ಬಂದಾಗಳ್ ಎಂತು ತನ್ನಾತ್ಮಂ ಪ್ರಚೋದಿಪುದೊ
ಅಂತೆ ನಡೆವಂತೆ ಭಾಷೆಯನಿತ್ತು ಸಂತಯ್ಸಿದಳು ದೇವಿ.
ದೈತ್ಯಕುಲ ಕನ್ಯೆಯಂ ಪೆತ್ತಳೋಲೋವಿ.
ರಾಮ-ರಾವಣರ ಯುದ್ಧ ಅವರಿಬ್ಬರ ನಡುವೆ ಮಾತ್ರವೆ ನೆಡೆಯಿತು ಎಂಬುದು ಎಷ್ಟು ಸುಳ್ಳು! ಸೀತೆ, ಅನಲೆ, ತ್ರಿಜಟೆ, ಚಂದ್ರನಖಿ, ವಿಭೀಷಣ, ಮಂಡೋದರಿ, ತಾರಾಕ್ಷಿ - ಅವರೆಲ್ಲರ ಎದೆಯಲ್ಲಿ ನಡೆದದ್ದು ಯುದ್ಧವಲ್ಲದೆ ಮತ್ತೇನು?

[ನಾಳೆ : ನೀನೊಲಿದ ವರನೆ ದೊರೆಯಲಿ ನಿನಗೆ!]

1 comment:

Badarinath Palavalli said...

’ಪಣ್ತನಕೆ ತಿರುಗುತಿರ್ಪೊಂದು ಸೂಚನೆ ತೋರುತಿಹುದೆನಗೆ’ ಅಲ್ಲವೇ ಮತ್ತೆ.